-ಸುಧಾ ಹಡಿನಬಾಳ
ಕಿಚ್ಚು
ಹೊರಗೆ ಸುಡುವ ರವಿಯ ತಾಪ
ಇದಕ್ಕೂ ಮಿಗಿಲಾಗಿ ರಕ್ತ ಬೀಜಾಸುರರು
ದ್ವೇಷ ಬಿತ್ತಿ ಬೆಳೆದು ಸಿಡಿಸುವ
ಬಾಂಬ್, ಸಿಡಿತಲೆಗಳ ಕಿಚ್ಚು
ಇದು ಅಂತಿಂಥ ಕಿಚ್ಚಲ್ಲ
ಮನುಜ ಮಾತ್ರರ
ಒಡಲೊಳಗೇ ಸುಡುವ
ಒಡಲಾಳದ ಕಿಚ್ಚು
ಸುಖಾಸುಮ್ಮನೆ ದ್ವೇಷ
ದ್ವೇಷಕ್ಕೆ ಕಾರಣ ಬೇಕಿಲ್ಲ
ಅವಳು ಚೆನ್ನಾಗಿ ನಕ್ಕರೂ
ಇವಳೆದೆಯಲಿ ದಹಿಸುವ ಕಿಚ್ಚು
ಅವರು ನಾಲ್ಕು ಹೆಜ್ಜೆ
ಮುಂದಿಟ್ಟರೆ ತಳಮಳ
ಗೊಳ್ಳುವ ಇವರೆದೆಯ ಕಿಚ್ಚು
ಕಾರಣವೇನಿಲ್ಲ ಇವರಿಂದ
ಹೆಜ್ಜೆ ಕೀಳಲಾಗುತ್ತಿಲ್ಲ!
ಕಿಚ್ಚು ಇವರೆದೆಯ
ಮಾತ್ರವೇ ಸುಡದೆ
ಕೆಡಿಸೀತು ಮನೆಮಂದಿ ನೆಮ್ಮದಿ
ಕಿತ್ತುಕೊಂಡೀತು ಜೀವ ಜೋಕೆ!
ಭೂದೇವಿಯ ಒಡಲೊಳಗೂ
ಇದೆ ಆರ್ಭಟಿಸುವ ಮಹಾ ಕಿಚ್ಚು
ತಾಯಿ ಪೊರೆದಿದ್ದಾಳೆ ಉಸಿರೆತ್ತದ ಹಾಗೆ
ಎದೆಯ ದನಿಗೆ ಇಂಬು ಕೊಡದೆ
ಹೊರಚಿಮ್ಮಿದರೆ ಮಹಾ ಸ್ಫೋಟ
ಪರಿಣಾಮವೇನು ಕಡಿಮೆಯೇ?
ಆಕಾಶದೆತ್ತರಕೆ ಚಿಮ್ಮುವ ಅಗ್ನಿ ಜ್ವಾಲೆ
ಸದಾ ಅಗ್ನಿಮುಖಿ ಪ್ರಳಯ ಶಿಖಿ
ತಾಯಿಯೊಡಲಿಗೆ ಆರದ ರಣಗಾಯ
ಸುಡುವ ಕೆಂಡವ ಒಡಲೊಳಗೆ
ಬಚ್ಚಿಟ್ಟು ಸಾಧಿಸುವಿರೇನು?
ನೀವೂ ನಗಲಾರಿರಿ ನಗುವವರ
ನೋಡಿ ಸಹಿಸಲಾರಿರಿ
ನಕ್ಕುಬಿಡಿ ಮನಸಾರೆ
ಒಡಲಾಳದ ದಳ್ಳುರಿ
ಶಮನವಾಗುವ ಹಾಗೆ
ಸುಡುವ ಕಿಚ್ಚು ಬೆಳಗುವ
ತಿಳಿನೀಲ ನಕ್ಷತ್ರವಾಗುವ ಹಾಗೆ






0 Comments