-ಮಹಾದೇವ ಬಸರಕೋಡ
ಹೀಗೊಂದು ಮನವಿ
ಸೂರ್ಯ ಚಂದ್ರರೆ
ಹೊತ್ತು ತನ್ನಿ ಬೆಳಕನು
ದೀನ ದಲಿತರ ನೊಂದವರ
ಮುರಿದ ಗುಡಿಸಲೊಳು
ದೂರ ಸರಿಯಲಿ ಕತ್ತಲಿನ ಹುಡಿ
ಹೂ ನಗೆಯ ಚೆಲ್ಲಿ ತಾರೆಗಳೇ
ಬೆಂದು ಬಸವಳಿದು
ಬಾಡಿದ ಮೊಗದಳು
ನುಸುಳಲಿ ನಸುನಗೆಯು
ಮೆಲ್ಲನೆ ಬೀಸು ತುಸು ತಂಗಾಳಿಯೇ
ಬವಣೆ ಭಾವಗಳ ಸೆರೆಯು ಕಳಚಲಿ
ಚಿಂತೆ ಅಳಿದು ತುಂಬಲಿ ಚೇತನ
ಪಲ್ಲವಿಸಲಿ ಜೀವ ಪ್ರೀತಿ
ನೆರಳು ಹಾಸಿ ತಂಪು ಮರಗಳೇ
ದುಡಿದು ದಣಿದ ನೆತ್ತಿಗಳ ಮೇಲೆ
ಒಡಲುರಿಯ ತಣಿಸಿ ಅಮೃತ ಫಲಗಳೇ
ಸತ್ತು ಹೋಗಲಿ ಹಸಿವಿನ ಹೆಬ್ಬಾವು
ಸೊನೆಯಾಡುತ್ತಲೇ ಇರು ಮುಗಿಲೆ
ತುಂಬಿ ಹರಿಯಲಿ
ಹಳ್ಳಕೊಳ್ಳ ನದಿ ಜಲಪಾತ
ತಟ್ಟಿ ತಡವಿ ತೊಳೆಯಲಿ ಬೆವರಿನ ಮೈಗಳನು
ನಗೆಯ ಕಾಮನ ಬಿಲ್ಲು ಮೂಡಲಿ
ಕಪ್ಪಿಟ್ಟ ಎದೆಯ ಬಾಂದಳದಲ್ಲಿ
ಶತಮಾನದುದ್ದಕೂ
ಸಂಕಟಗಳಲ್ಲಿ ತಲ್ಲಣಿನಸಿದರು
ತತ್ತರಿಸಿದವರು, ತುಳಿಸಿಕೊಂಡವರು
ಎದ್ದು ನಿಲ್ಲಲಿ
ಮೌನ ಬಿಕ್ಕುಗಳು ಕೊನೆಯಾಗಲಿ
ಕೇಳಲಿ ಅವರ ಒಳಗಣ ದನಿಯು
ಜಗದಗಲ ಮಿಗಿಯಗಲಕು






0 Comments