ನೂರು ವರ್ಷದ ನಿಶ್ಯಬ್ದ – ಭಾಗ 1

ಮೂಲ : ಓಲ್ಗಾ

ಕನ್ನಡಕ್ಕೆ : ಎ ನಾಗಿಣಿ

ಓಲ್ಗಾ ಎಂಬುದು ಪೋಪೂರಿ ಲಲಿತ ಕುಮಾರಿ ಅವರ ಕಾವ್ಯನಾಮ. ತೆಲುಗು ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಯನ್ನು ಬೆಳೆಸಿದ ಪ್ರಮುಖರಲ್ಲೊಬ್ಬರು ಓಲ್ಗಾ. ತೆಲುಗು ಲೇಖಕರಾದ ಚಲಂ,ಕೊಡವಗಂಟಿ ಕುಟುಂಬರಾವ್‌ ಅವರ ಬರಹಗಳಿಂದ ಪ್ರಭಾವಿತರಾಗಿ ಸ್ತ್ರೀ ಚೈತನ್ಯವನ್ನೇ ತಮ್ಮ ಬರಹದ ಮುಖ್ಯ ಉದ್ದೇಶವಾಗಿಸಿಕೊಂಡ ಓಲ್ಗಾ, ಕಥೆ, ಕಾದಂಬರಿ, ಅನುವಾದ, ವಿಮರ್ಶೆ, ಅನುವಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

೧೯೫೦ ನವೆಂಬರ್‌ ೨೭ ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಯಡ್ಲಪಲ್ಲಿ ಗ್ರಾಮದಲ್ಲಿ ಓಲ್ಗಾ ಜನಿಸಿದರು. ಇವರ ತಂದೆ ಪೋಪೂರಿ ವೆಂಕಟಸುಬ್ಬಯ್ಯ,ತಾಯಿ ವೆಂಕಟಸುಬ್ಬಮ್ಮ. ಆಂಧ್ರ ವಿಶ್ವವಿದ್ಯಾಲಯದಿಂದ ತೆಲುಗು ಎಂ.ಎ ಪದವಿ ಪಡೆದ ನಂತರ ತೆನಾಲಿಯ ವಿ.ಎಸ್.ಆರ್.‌ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದರು;೧೯೯೧ ರಿಂದ ೧೯೯೭ ರವರೆಗೆ ಅಸ್ಮಿತ ಸೆಂಟರ್‌ ಫಾರ್‌ ವಿಮೆನ್‌ ಸಂಸ್ಥೆಯ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ; ತೆಲುಗು ಚಲನಚಿತ್ರ ರಂಗದ ʼಉಷಾಕಿರಣ್‌ʼ ಸಂಸ್ಥೆಗೆ ಕಥಾ ರಚನಕಾರ್ತಿಯಾಗಿ ಮೂರು ಚಿತ್ರಗಳನ್ನು ನಿರ್ಮಿಸಿ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಅಸ್ಮಿತ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿದ್ದಾರೆ.

ಸಹಜ, ಸ್ವೇಚ್ಛ, ಕನ್ನೀಟಿ ಕೆರಟಾಲ ವೆನ್ನೆಲ, ಆಕಾಶಂಲೋ ಸಗಂ, ಗುಲಾಬೀಲು, ಇವು ಓಲ್ಗಾ ಅವರ ಪ್ರಮುಖ ಕಾದಂಬರಿಗಳು. ʼಸಂತುಲಿತʼ ಅವರ ಪ್ರಮುಖ ವಿಮರ್ಶಾ ಕೃತಿ. ರಾಜಕೀಯ ಕಥಲು, ಭಿನ್ನ ಸಂದರ್ಭಾಲು, ಮೃಣ್ಮಯ ನಾದಂ, ವಿಮುಕ್ತ ಇವು ಕಥಾ ಸಂಕಲನಗಳು. ಅವರ ವಿಮುಕ್ತ ತೆಲುಗು ಕಥಾ ಸಂಕಲನಕ್ಕೆ ೨೦೧೫ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅವರ ಸ್ವೇಚ್ಛ ಬಹು ಚರ್ಚಿತ ಕಾದಂಬರಿಯಾಗಿದ್ದು, ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ.

ಈ ಕತೆಯು ಓಲ್ಗಾ ಅವರ ʼನೂರೇಳ್ಳ ನಿಶ್ಯಬ್ದಂʼ ಅನುವಾದ.

1

ಇಡೀ ಮನೆಯಲ್ಲಿ ನಿಶ್ಯಬ್ದ ಆವರಿಸಿದೆ. ಮನೆ ಮಂದಿ ಎಲ್ಲಾ ಓಡಾಡುತ್ತಿದ್ದರು. ಆದರೆ ಅವರಲ್ಲಿ ಜೀವದ ಸುಳಿವಿರಲಿಲ್ಲ. ಕಳೆದ ನಾಲ್ಕು ದಿನಗಳ ಹಿಂದೆ ಸಂಭ್ರಮ, ಕುಚೇಷ್ಟೆ, ನಗು, ಮಾತುಗಳಿಂದ ಬದುಕಿದ್ದ ಆ ಮನೆ ಈ ದಿನ ತಾನು ಸತ್ತಿಲ್ಲವೆಂದು ಸಾಬೀತುಮಾಡಲು ಇಡೀ ಮನೆಯಲ್ಲಿ ನಿಶ್ಯಬ್ದ ಆವರಿಸಿದೆ. ಮನೆ ಮಂದಿ ಎಲ್ಲಾ ಓಡಾಡುತ್ತಿದ್ದರು. ಆದರೆ ಅವರಲ್ಲಿ ಜೀವದ ಸುಳಿವಿರಲಿಲ್ಲ. ಕಳೆದ ನಾಲ್ಕು ದಿನಗಳ ಹಿಂದೆ ಸಂಭ್ರಮ, ಕುಚೇಷ್ಟೆ, ನಗು, ಮಾತುಗಳಿಂದ ಬದುಕಿದ್ದ ಆ ಮನೆ ಈ ದಿನ ತಾನು ಸತ್ತಿಲ್ಲವೆಂದು ಸಾಬೀತುಮಾಡಲು ಹೆಣಗುತ್ತಿತ್ತು.
ಮಧ್ಯಾಹ್ನ ಒಂದು ಗಂಟೆಯ ಸಮಯ.

ಆಕಾಶ ಕಳಚಿ ಬಿದ್ದರೂ ಅಡುಗೆ ಮನೆಯಲ್ಲಿ ಆಗಬೇಕಿರುವ ಕೆಲಸಗಳು ಮಾತ್ರ ನಿಲ್ಲುವುದಿಲ್ಲ. ಸಿಟ್ಟು ಕಂಟ್ರೋಲು ಮಾಡಬಹುದು. ದುಃಖ ಕಂಟ್ರೋಲು ಮಾಡಬಹುದು. ಹಸಿವು ಕಂಟ್ರೋಲು ಆಗಲ್ಲ. ದುಃಖ, ಕೋಪ, ನೋವುಗಳ ಪ್ರದರ್ಶನಕ್ಕೆ ಮತ್ತಷ್ಟು ಬಲ ಬರಬೇಕೆಂದರೆ ಹೊತ್ತಿಗಿಷ್ಟು ಹೊಟ್ಟೆಗೆ ಬೀಳಲೇಬೇಕು. ಈ ಪರಿಯ ನಿಶ್ಯಬ್ದದಲ್ಲೂ ಅಡುಗೆ ಮನೆ ತಾನು ಮಾಡಬೇಕಾದ ಶಬ್ದಗಳನ್ನು ಮಾಡುತ್ತಲೇ ಇತ್ತು.

ರಾಮಲಕ್ಷ್ಮಿ ಮಾಡಿದ ಅಡುಗೆ ವೆರೈಟಿಗಳನ್ನೆಲ್ಲಾ ತಂದು ಊಟದ ಮೇಜಿನ ಮೇಲೆ ಇಟ್ಟು ತನ್ನ ಕೆಲಸ ಮುಗಿಯಿತೆನ್ನುವಂತೆ ಕೂತಳು. ಚಲಪತಿರಾವ್ ಯಾವುದೋ ನೆಪಕ್ಕೆಂದು ಅತ್ತ ಬಂದು ತುಂಬಿದ್ದ ಮೇಜನ್ನು ನೋಡಿ ನಿಟ್ಟುಸಿರು ಬಿಟ್ಟು
‘ಅಮ್ಮ ಉಂಡಳಾ’? ಎಂದು ಕೇಳಿದ.
‘ಊಂ,’ ಎಂದಳು ರಾಮಲಕ್ಷ್ಮಿ.
ಅಷ್ಟರಲ್ಲಿ ಚಂದ್ರಂ, ಮೋಹನ್, ಲತ, ರೇಖಾ ಬಂದರು. ಎಲ್ಲರಿಗೂ ರಾಮಲಕ್ಷ್ಮಿ ಬಡಿಸಿದಳು.
‘ಹುಡುಗಿಯರೆಲ್ಲಿ?’ ಚಲಪತಿರಾವ್ ಕೇಳಿದ.
‘ಮೇಲೆ ಕೋಣೆಯಲ್ಲಿ ತಂಗಿಗೆ ಬುದ್ಧಿವಾದ ಹೇಳುತ್ತಿರಬಹುದು’.
ರಾಮಲಕ್ಷ್ಮಿ ಗೊಣಗಿದಳು.
ಅವಳಿಗೆ ಬುದ್ಧಿ ಹೇಳಿ ಏನು ಪ್ರಯೋಜನ! ಚಲಪತಿರಾವ್ ಮೊಸರು ಉಣ್ಣದೆಯೇ ಊಟ ಮುಗಿಸಿ ಕೈ ತೊಳೆದು ಬಿಟ್ಟ.

ಮಗ, ಸೊಸೆಯಂದಿರು ಊಟ ಮುಗಿಸಿ ಪಾತ್ರೆಗಳನ್ನು ಹೊಂದಿಸಿ ಅವರವರ ಕೋಣೆಗಳಿಗೆ ಹೋದರು.
ಹುಡುಗಿಯರು ಇಳಿದು ಬಂದರೆ ತಾನೂ ಒಂದಿಷ್ಟು ಉಂಡು ಒರಗಿಕೊಳ್ಳಲು ನೋಡುತ್ತಿದ್ದಳು ರಾಮಲಕ್ಷ್ಮಿ.
ನಾಲ್ಕಂದರೆ ನಾಲ್ಕೇ ದಿನಗಳ ಹಿಂದೆ ಎಷ್ಟೊಂದು ಸಡಗರ ಮನೆಯಲ್ಲಿ!
ಚಲಪತಿರಾವ್ ಮತ್ತು ರಾಮಲಕ್ಷ್ಮಿಯರ ಕೊನೆಯ ಮಗಳು ಮಾಧವಿಗೆ ಮದುವೆ ಗೊತ್ತಾಗಿತ್ತು.
ಬರೋಡಾದಿಂದ ಚಂದ್ರಂ, ಕಲ್ಕತ್ತಾದಿಂದ ಮೋಹನ್‌ ತಂಗಿಯ ಮದುವೆಗೆ ಕುಟುಂಬ ಸಮೇತರಾಗಿ ಒಂದು ತಿಂಗಳ ಮೊದಲೇ ಬಂದಿದ್ದರು.

ವರಂಗಲ್, ಬೆಂಗಳೂರಿನಿಂದ ಮಾಧವಿಯ ಅಕ್ಕಂದಿರು ಸುಮಿತ್ರ, ಕಲ್ಯಾಣಿ ಗಂಡ, ಮಕ್ಕಳೊಂದಿಗೆ ಬಂದಿದ್ದರು.
ಎಲ್ಲರಿಗಿಂತ ಕೊನೆಗೆ ಬಂದವಳೇ ಮದುವೆ ಹೆಣ್ಣು ಮಾಧವಿ.
ಮಾಧವಿ ಎಂ.ಎ ಎಕನಾಮಿಕ್ಸ್ ಪರೀಕ್ಷೆ ಬರೆದು ಗುಂಟೂರಿನಿಂದ ಬರುವಷ್ಟರಲ್ಲಿ ಚಲಪತಿರಾವ್ ಆಕೆಗೆ ಒಂದು ಸಂಬಂಧ ಗೊತ್ತು ಮಾಡಿದ. ಸಂಬಂಧ ಅಂದರೆ ಅಂತಿಂಥಾ ಸಂಬಂಧ ಅಲ್ಲ. ಆ ಹುಡುಗ ಅಮೇರಿಕಾದಲ್ಲಿ ಕಂಪ್ಯೂಟರ್ ಇಂಜನಿಯರ್. ಒಳ್ಳೆಯ ಮನೆತನ, ವರದಕ್ಷಿಣೆ ಸ್ವಲ್ಪ ಜಾಸ್ತಿ. ಆದರೇನಂತೆ ಚಲಪತಿರಾವ್ ಎದೆಗುಂದಲಿಲ್ಲ.

ರಾಮಲಕ್ಷ್ಮಿ ಕೂಡಾ ‘ಮಾಧವಿಯ ಮದುವೆ ಬಿಟ್ಟರೆ ನಮಗೆ ಬೇರೆ ಜವಾಬ್ದಾರಿ ಏನಿಲ್ಲ. ಹೇಗೋ ಇದೊಂದು ಸಲೀಸಾಗಿ ಮಾಡಿಬಿಟ್ಟರೆ ನಮಗೂ ತೃಪ್ತಿ. ಅವಳಿಗೆ ಕೊಡಬೇಕಾದ್ದುಕೊಟ್ಟು ಮುಗಿಸಿದರೆ ನಾವು ಇದ್ದರಲ್ಲೇ ಅಡ್ಜಸ್ಟಾಗೋಣ’ ಎಂದು ಬೆಂಬಲಿಸಿದಳು. ಚಲಪತಿರಾವ್‌ನ ಆರ್ಥಿಕ ಸ್ಥಿತಿಯೂ ಚೆನ್ನಾಗಿಯೇ ಇದೆ. ವ್ಯಾಪಾರದಲ್ಲಿ ಯಾವುದೇ ಏರುಪೇರಿಲ್ಲ. ಹತ್ತು ಲಕ್ಷ ಮಾಧವಿಗೆ ವರದಕ್ಷಿಣೆಯಾಗಿ ಕೊಟ್ಟರೆ ಇಬ್ಬರಿಗೂ ಊಟಕ್ಕಿಲ್ಲದೇ ಇದ್ದೀತೇ? ಗಂಡು ಮಕ್ಕಳಿಗೆ ಬಂದ ವರದಕ್ಷಿಣೆಯಲ್ಲಿ ಅರ್ಧಕ್ಕಿಂತ ಹೆಚ್ಚು ತಾನೇ ಉಳಿಸಿಕೊಂಡಿದ್ದ. ತೆಗೆದುಕೊಳ್ಳದೇ ವಿಧಿ ಇದ್ದಿಲ್ಲ. ಸುಮಿತ್ರ, ಕಲ್ಯಾಣಿಯರಿಗೆ ತಲಾ ಐದು ಲಕ್ಷ ವರದಕ್ಷಿಣೆ, ಮದುವೆ ಖರ್ಚು ಎಂದರೆ ಸಣ್ಣ ವಿಷಯ ಅಲ್ಲ. ಹುಡುಗರೂ ಸಂತೋಷದಿಂದ ಕೊಟ್ಟರು. ಸೊಸೆಯಂದಿರೂ ಈ ಕುರಿತು ಯಾವತ್ತೂ ಚಕಾರ ಎತ್ತಿದವರಲ್ಲ. ಮಕ್ಕಳೆಲ್ಲಾ ಯಾವ ಕೊರತೆಯೂ ಇಲ್ಲದೆ ಬದುಕಲ್ಲಿ ನೆಲೆ ನಿಂತಿರುವುದರಿಂದ ಚಲಪತಿರಾವ್‌ ದಂಪತಿ ತೃಪ್ತಿಯಾಗಿದ್ದರು.

ಚಲಪತಿರಾವ್ ಸ್ವಯಂ ಕೃಷಿಯಿಂದ ಬೆಳೆದವನು. ಅಂಥ ವ್ಯಕ್ತಿಗಳಿಗಿರುವ ಹಟ, ಸ್ವಲ್ಪ ಅಹಂ, ಗರ್ವ ಎಲ್ಲಾ ಇದ್ದವು.
ಇದುವರೆಗೆ ಯಾವತ್ತೂ ಅದಕ್ಕೆ ಭಂಗ ಬರುವ ಪ್ರಸಂಗವೇ ಬಂದಿಲ್ಲ.
ಹೆಂಡತಿ, ಮಕ್ಕಳು ಯಾವತ್ತೂ ಎದುರಾಡಿದವರಲ್ಲ.
ತಾಯಿ ವೆಂಕಾಯಮ್ಮ ಒಬ್ಬಳೇ ಆತನನ್ನು ಸ್ವಲ್ಪ ಸತಾಯಿಸುತ್ತಿದ್ದಳು.
ಸತಾಯಿಸುವುದೆಂದರೆ ಮಗನನ್ನು ಗದರುವುದೋ, ಮಾತು ಕೇಳದಿರುವುದೋ ಅಲ್ಲ. ಆಕೆ ಮಾತನಾಡುವುದೇ ಇಲ್ಲ.

ಅರವತ್ತೈದನೆಯ ವಯಸ್ಸಿನಲ್ಲಿ ಹಳ್ಳಿಯಿಂದ ಹೈದರಾಬಾದಿಗೆ ಬಂದ ವೆಂಕಾಯಮ್ಮ ನಿಶ್ಶಬ್ದವನ್ನು ಜೊತೆಗೆ ತಂದಿದ್ದಳು. ಬಂದು ಇಪ್ಪತ್ತೈದು ವರ್ಷಗಳ ಮೇಲಾಯಿತು. ತೊಂಬತ್ತು ವರ್ಷದ ಮುಪ್ಪಾನ ಮುದುಕಿ. ಆದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುವ ಶಕ್ತಿ ಇದೆ. ಈ ಶಕ್ತಿ ಕಾಪಾಡಿಕೊಳ್ಳುವುದು ಬಿಟ್ಟರೆ ಬೇರೆ ಕೆಲಸಗಳಿಗೆ ಆಕೆ ತಲೆ ಹಾಕುವುದಿಲ್ಲ. ಹೊತ್ತಿಗೆ ರಾಮಲಕ್ಷ್ಮಿ ನೀಡಿದ್ದು ಉಂಡು, ಮನೆಯ ಹಿತ್ತಲಿಗೆ ಸೇರುವಳು. ಗಿಡಗಳಿಗೆ ಬಳ್ಳಿಗಳನ್ನು ಕಟ್ಟುವುದು ಕಳೆ ಕೀಳುವುದು, ನೀರುಣಿಸುವುದು, ಹೂ, ಹಣ್ಣು, ತರಕಾರಿಗಳನ್ನು ನಿಧಾನವಾಗಿ ಕಿತ್ತು ತರುವುದು ಹೀಗೆ ಒಂದಲ್ಲಾ ಒಂದು ಕೆಲಸ ಬೆಳಿಗ್ಗೆ, ಸಂಜೆ ಮಾಡುತ್ತಿದ್ದಳು. ಹಿತ್ತಲನ್ನು ಮನೆಗಿಂತ ಚೊಕ್ಕವಾಗಿರಿಸುತ್ತಿದ್ದಳು. ಆ ಕೆಲಸ ಬಿಟ್ಟರೆ ಬೇರೆ ಯಾವುದರ ಬಗೆಗೂ ಆಕೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಮೊಮ್ಮಕ್ಕಳ ಜೊತೆಗೆ ಮಾತನಾಡುವುದೂ ಅಪರೂಪ.
ತೋಟದಲ್ಲಿ, ಮನೆಯಲ್ಲಿ ನಿಶ್ಶಬ್ದವಾಗಿ ಓಡಾಡಿಕೊಂಡಿರುತ್ತಿದ್ದ ವೆಂಕಾಯಮ್ಮಳಿಗೆ ಮನೆಮಂದಿಯೆಲ್ಲಾ ಹೊಂದಿಕೊಂಡಿದ್ದರು.
ಹೊಸತರಲ್ಲಿ ರಾಮಲಕ್ಷ್ಮಿಗೆ ಸ್ವಲ್ಪ ಕಿರಿಕಿರಿಯಾಗುತ್ತಿತ್ತು.
‘ಏನೀಕೆ? ಕಷ್ಟ, ಸುಖ ಅಂತ ಒಂದೂ ಬೇಕಿಲ್ಲ. ನಗುತ್ತಾ, ಮಾತನಾಡುತ್ತಾ ಇದ್ದರೆ ಏನು ಕೊಳ್ಳೆ ಹೋಗತ್ತೆ? ಕೋಟಿ ಕೋಟಿ ಕಳಕೊಂಡ ಸಾಹುಕಾರನ ಥರ ಮುಖ ಮಾಡಿಕೊಂಡಿರತಾಳೆ.ʼ ಎಂದು ಗೊಣಗುತ್ತಿದ್ದಳು.
ಕ್ರಮೇಣ ರಾಮಲಕ್ಷ್ಮಿಗೂ ರೂಢಿಯಾಯಿತು. ‘ನೆಮ್ಮದಿ ಅಂದರೆ ಇದೇ ಇರಬೇಕು. ಮಾತು ಬೆಳೆದು ಜಗಳವಾಗುವ ಗೊಡವೆ ಇಲ್ಲ. ಈ ಮನೆಯಲ್ಲಿ ನನ್ನ ಮಾತೇ ಕೊನೆ,’ ಅಂದುಕೊಂಡು ಸುಮ್ಮನಾದಳು. ಅಮ್ಮ ತನ್ನ ಏಳ್ಗೆಯನ್ನು ಮೆಚ್ಚಿ ಕೊಂಡಾಡಬಹುದಿತ್ತೆಂಬ ಆಸೆ ಬಿಟ್ಟರೆ ಅಮ್ಮನೆಂದರೆ ಮಗನಿಗೂ ವಿರೋಧವೇನಿಲ್ಲ! ತಂದೆ ಮಾಡಿದ್ದ ಅವಾಂತರಕ್ಕೆ ನಿಜಕ್ಕೂ ಚಲಪತಿ ಮಣ್ಣು ಮುಕ್ಕಬೇಕಿತ್ತು. ಹದಿನೈದು ವರ್ಷದ ಹೈದನಾಗಿದ್ದಾಲೇ ಹೈದರಾಬಾದಿಗೆ ಬಂದು ಏನೆಲ್ಲಾ ಸವಾಲುಗಳನ್ನು ಎದುರಿಸಿ ಲಕ್ಷಲಕ್ಷ ದುಡಿದ. ತಾಯಿ, ಹೆಂಡತಿ, ಮಕ್ಕಳಿಗೆ ಯಾವುದೇ ಕೊರತೆಯಾಗದ ಹಾಗೆ ನೋಡಿಕೊಂಡ.

ಅಂಥ ಮಗನನ್ನು ಕಂಡ ತಾಯಿಯ ಕಣ್ಣು ಸಂತೋಷದಿಂದ ಹೊಳೆಯಬಹುದಿತ್ತು. ಹೃದಯ ತುಂಬಿಬಂದು ಹೊಗಳಬಹುದಿತ್ತು. ನನ್ನಪ್ಪ ಎಷ್ಟೊಂದು ಬೆಳೆದುಬಿಟ್ಟ ಎಂದು ತಬ್ಬಿಬ್ಬಾಗಬಹುದಿತ್ತು.
ಆದರೆ ವೆಂಕಾಯಮ್ಮನ ಕಣ್ಣಿನಲ್ಲಿ ದಿಗಿಲು, ನಿರ್ಲಿಪ್ತತೆ, ಬಿಟ್ಟರೆ ಬೇರೆ ಯಾವ ಭಾವವೂ ಕಾಣುತ್ತಿರಲಿಲ್ಲ.
ಮಾಡುವುದಾದರೂ ಏನು? ಎಲ್ಲರೂ ಹೊಂದಿಕೊಂಡರು. ಆದರೆ ಈಗ ಎದುರಾಗಿದ್ದು ಕಿರಿಕಿರಿ ಅಲ್ಲ. ದೊಡ್ಡ ಗಂಡಾಂತರ. ಆಘಾತ. ಅದಕ್ಕೆ ಕಾರಣ ವೆಂಕಾಯಮ್ಮ ಅಲ್ಲ. ಆಕೆಗೆ ಅಂಥ ಶಕ್ತಿ ಇಲ್ಲ.

ಆಘಾತ ತಂದಿಟ್ಟವಳು ಮಾಧವಿ.

ಮಾಧವಿ ಚಲಪತಿರಾವ್‍ನ ಸಂತಾನದಲ್ಲಿ ಕೊನೆಯವಳು. ಎಲ್ಲರಿಗಿಂತ ಮುದ್ದಿನಿಂದ ಬೆಳೆದ ಹುಡುಗಿ. ಉಳಿದ ಮಕ್ಕಳಿಗಿಂತ ಬುದ್ಧಿವಂತಳೆಂದು ಅಪ್ಪ, ಅಮ್ಮನಿಗೆ ಹೆಮ್ಮೆ. ಚಲಪತಿರಾವನಿಗೆ ಮಾಧವಿಯನ್ನು ದೊಡ್ಡ ಡಾಕ್ಟರ್ ಮಾಡಬೇಕೆಂಬ ಆಸೆ ಇತ್ತು. ಮಾಧವಿ ಇದಕ್ಕೆ ಸಮರ್ಥಳೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಸರಿಯಾಗಿ ಪಿ.ಯು.ಸಿ ಪರೀಕ್ಷೆಗೆ ಮುಂಚೆ ಖಾಯಿಲೆ ಬಿದ್ದಳು. ಬರಬೇಕಾದ ಅಂಕಗಳು ಬಂದಿಲ್ಲ. ಮತ್ತೊಮ್ಮೆ ಪರೀಕ್ಷೆ ಬರೆಯಲು ಒಲ್ಲೆ ಅಂದಳು. ಬಿ.ಎ ಕೋರ್ಸಿನಲ್ಲಿ ಸೇರಿಕೊಂಡಳು. ಆಕೆ ಎಂ.ಎ ಜಾಯಿನ್ ಆದಾಗಿನಿಂದಲೂ ಚಲಪತಿರಾವ್ ಗಂಡು ಹುಡುಕುತ್ತಲೇ ಇದ್ದ. ಆದರೆ ಮಾಧವಿಗೆ ತಕ್ಕ ವರ ಸಿಗಲಿಲ್ಲ. ತುಂಬಾ ಅಪರೂಪದ ಸಂಬಂಧ ತರಬೇಕೆನ್ನುವ ಆಸೆ ಇತ್ತು ಎಲ್ಲರಿಗೂ.

ಮನೆಯಲ್ಲಿ ಇದೇ ಕೊನೆಯ ಮದುವೆ. ಮತ್ತೆ ಶುಭಕಾರ್ಯ ಅಂತ ಏನಾದರೂ ನಡೆಯಬೇಕಾದರೆ ಅದು ಹದಿನೈದು ವರ್ಷಗಳ ನಂತರವೇ. ಅಣ್ಣಂದಿರು, ಅಕ್ಕಂದಿರು ಮಾಧವಿಯ ಮದುವೆಯ ಸುತ್ತ ಏನೇನೋ ಕನಸು ಹೆಣೆದಿದ್ದರು. ಈಗೀಗ ಮದುವೆಯ ಶಾಸ್ತ್ರದ ಹೊಸ ಟ್ರೆಂಡ್ ಆದ ತರಹೇವಾರಿ ಪಾರ್ಟಿ,ಆಚರಣೆ ಅವರ ಕನಸನ್ನು ಈಸ್ಟ್‌ ಮನ್‌ ಕನಸಾಗಿ ಬದಲಾಯಿಸಿದವು. ನಾದಿನಿಯರು, ಅತ್ತಿಗೆಯರು, ಮೈದುನರು, ತಮಾಷೆ, ಸರಸ, ನೃತ್ಯ, ಹಾಡು-ಹಣವಿದ್ದರೆ ಏನು ಕೊರತೆ?

ಹೊಸದಾಗಿ ಧನಿಕವರ್ಗದಲ್ಲಿ ಸೇರಿದ ಚಲಪತಿರಾವ್‍ನಂಥ ಕುಟುಂಬಗಳಿಗೆ ಈ ದುಬಾರಿ ಆಚರಣೆಗಳು ಆದರ್ಶವಾಗಿ ಬಿಟ್ಟವು.

ಇಲ್ಲಿಯವರೆಗೂ ಆಚರಿಸದ ಹಬ್ಬ, ಆಚರಣೆ, ಸಂಭ್ರಮಗಳು ನಮ್ಮ ಮನೆಯ ಭಾಗವೂ ಆಗಬೇಕೆಂದು ಹಪಹಪಿಸುತ್ತಿದ್ದರು.

ತನ್ನ ಹೆಣ್ಣುಮಕ್ಕಳು ದೊಡ್ಡವರಾದಾಗ- ಯಾವುದೇ ಆಚರಣೆಯ ಗೊಡವೆಯೂ ಇಲ್ಲದೇ ಸ್ನಾನ ಮಾಡಿಸಿ ಒಳಗೆ ಕರೆಸಿಕೊಂಡ ರಾಮಲಕ್ಷ್ಮಿ, ಈಗ ಮೊಮ್ಮಗಳಿಗೆ ಹನ್ನೊಂದು ತುಂಬಿದರೆ ಸಾಕು, ಸೀರೆ ಉಡಿಸುವ ಸಂಭ್ರಮ ಅದ್ದೂರಿಯಾಗಿ ಮಾಡಬೇಕೆಂದು ಕಾಯುತ್ತಿದ್ದಾಳೆ.

ಹನ್ನೊಂದು ತುಂಬಿದರೂ ಚೆಡ್ಡಿ ಹಾಕದೆ ಬಟ್ಟೆ ಕಟ್ಟಿ ಓಡಾಡುತ್ತಿದ್ದ ಚಲಪತಿರಾವ್ ಮೊಮ್ಮಗನಿಗೆ ಪಂಚೆ ಉಡಿಸುವ ಸಂಭ್ರಮ ಮಾಡಲೆಂದು ಎದುರು ನೋಡುತ್ತಿದ್ದಾನೆ.

ಹಣವಿದ್ದರೆ ಏನು ಕೊರತೆ. ಬಡತನದಿಂದ ಸಿರಿವಂತಿಕೆಯ ಮೆಟ್ಟಿಲಿಗೆ ಹತ್ತಿದ ಮಂದಿ ತಮ್ಮ ಅಂತಸ್ತನ್ನು ತೋರಿಸಲು ತುದಿಗಾಲ ಮೇಲೆ ನಿಂತಿರುತ್ತಾರೆ. ಮದುವೆ,ಮುಂಜಿ ಇದಕ್ಕೆ ಹೇಳಿ ಮಾಡಿಸಿದ ಸಮಯ. ಚಲಪತಿರಾವ್‌ನ ಕುಟುಂಬಕ್ಕೆ ಮಾಧವಿಯ ಮದುವೆ ಅಂಥದೊಂದು ಒಳ್ಳೆಯ ಅವಕಾಶ. ಇತ್ತೀಚೆಗೆ ಕಲ್ಯಾಣಿ, ಸುಮಿತ್ರೆಯರ ನಡುವೆ ಓಡಾಡಿದ ಪತ್ರಗಳ ತುಂಬ ಮಾಧವಿಯ ಮದುವೆಯ ಕಥೆಗಳೇ. ಎಂಥ ಒಡವೆ? ಎಂಥ ಸೀರೆ? ಅಸಲಿಗೆ ಒಟ್ಟು ಮದುವೆಯ ಸಂಭ್ರಮ ಮುಗಿಯುವ ದಿನದವರೆಗೂ ಎಷ್ಟು ಹೊಸ ಸೀರೆಗಳು ಖರೀದಿಸಬೇಕು ಇಂಥ ಮಾತುಗಳೇ.

ನಿಶ್ಚಿತಾರ್ಥಕ್ಕೆ ಒಂದೊಳ್ಳೆ ರೇಷ್ಮೆ ಸೀರೆ ಬೇಕೇ ಬೇಕು. ಮದುವೆಗಿಂತಲೂ ನಿಶ್ಚಿತಾರ್ಥದ ಸಂಭ್ರಮವೇ ಈಗಿನ ಟ್ರೆಂಡ್. ತಾವೂ ಯಾರಿಗೂ ಕಡಿಮೆ ಆಗಬಾರದು. ಮದುಮಗಳ ದಿನ, ಗೌರಿ ಪೂಜೆ, ಹುಡುಗಿ ಗಂಡನ ಮನೆಗೆ ಹೋಗುವ ಘಳಿಗೆ ಹೀಗೆ ಮದುವೆ ಶಾಸ್ತ್ರಗಳನ್ನು ಹೊರತು ಪಡಿಸಿ ಹತ್ತು ಸಂದರ್ಭಗಳನ್ನು ಸೃಷ್ಟಿಸಿಕೊಂಡರು. ಇವೆಲ್ಲದರ ಬಗೆಗೆ ಪತ್ರಗಳಲ್ಲಿ ವಿವರವಾಗಿ ಚರ್ಚಿಸಿಕೊಂಡರು. ಫೋನಿನಲ್ಲಿ ಮಾತಾಡಿಕೊಂಡರು. ಅತ್ತಿಗೆಯರನ್ನೂ ಸಂಪರ್ಕಿಸಿದರು. ಇವೆಲ್ಲ ಮದುವೆ ಗೊತ್ತಾಗುವ ಮುನ್ನವೇ ನಡೆದ ಸಂಗತಿಗಳು.
ಮದುವೆ ನಿಶ್ಚಯವಾದ ಸಂಗತಿಯನ್ನು ಚಲಪತಿರಾವ್ ತಿಳಿಸಿದ್ದೇ ತಡ ಎಲ್ಲರೂ ಜಿಗಿದು ಕುಣಿದಾಡಿದರು. ಒಡವೆಗಳ ಡಿಸೈನ್, ಸೀರೆಯ ಬಣ್ಣ, ಗುಣಮಟ್ಟ ಇವೆಲ್ಲದರ ಬಗೆಗೆ ಪುಂಖಾನುಪುಂಖ ಮಾಹಿತಿಯನ್ನು ಕಲೆಹಾಕಿದರು.

ಮೋಹನ್ ಉಳಿದ ಸಂಗತಿಗಳು ಏನೇ ಇರಲಿ, ಮದುವೆಯ ಔತಣದಲ್ಲಿ ಒಬ್ಬೊಬ್ಬರಿಗೂ ಒಂದು ಮಿನರಲ್ ವಾಟರ್ ಬಾಟಲ್ ಕೊಡಲೇಬೇಕೆಂದ.

ಈ ಯೋಚನೆ ಚಲಪತಿರಾವನಿಗೆ ಮೊದಲೇ ಬಂದಿತ್ತು. ತನ್ನ ಹಳ್ಳಿಯ ಸುತ್ತ ಹೊಳೆಗಳಿದ್ದರೂ ತನ್ನ ಚಿಕ್ಕ ವಯಸ್ಸಿನಲ್ಲಿ ಮಳೆನೀರು ಹಿಡಿದು ಕುಡಿಯಬೇಕಾದ ದುಃಸ್ಥಿತಿ ಇತ್ತು. ಊರಿನ ಜನ ಇನ್ನೂ ಅದೇ ಕೊಳಚೆ ನೀರು, ಮಳೆ ನೀರು ಕುಡಿಯುತ್ತಿರುವ ಸಂಗತಿಯನ್ನು ಚಲಪತಿರಾವ್ ಎಂದೋ ಮರೆತಿದ್ದ. ಈಚಿನ ದಿನಗಳಲ್ಲಿ ಹಣವಂತರ ಮದುವೆಗಳಲ್ಲೆಲ್ಲಾ ಮಿನರಲ್ ವಾಟರ್ ಬಾಟಲ್ ಕೊಡುವ ಪದ್ಧತಿ ಆತನಿಗೆ ತುಂಬಾನೇ ಹಿಡಿಸಿತ್ತು. ಹಾಗಾಗಿ ಮಗಳ ಮದುವೆಯಲ್ಲಿ ಇದೇ ಪದ್ಧತಿ ಇರಬೇಕೆಂದು ಮಗ ಸೂಚಿಸಿದಾಗ ಹರುಷ ಉಕ್ಕಿ ಬಂತು. ಮಗನ ಕಂಡು ಹೆಮ್ಮೆ ಆಯಿತು. ನನ್ನ ರಕ್ತವೆಂದು ಉಬ್ಬಿಹೋದ. ಮಾಧವಿ ಪರೀಕ್ಷೆ ಮುಗಿಸಿ ಬಂದ ಎರಡು ದಿನಗಳ ವಿಶ್ರಾಂತಿಯ ನಂತರ ಮೂರನೆಯ ದಿವಸ ಹುಡುಗಿಯ ನೋಡುವ ಶಾಸ್ತ್ರವೆಂದು ನಿಶ್ಚಯಿಸಿದರು. ಮಾಧವಿಯ ಫೋಟೋ ನೋಡುತ್ತಲೇ ಗಂಡಿಗೆ ಇಷ್ಟವಾದಳು. ಹುಡುಗ ನಾಲ್ಕು ವರ್ಷದಿಂದ ಅಮೇರಿಕಾದಲ್ಲಿರುವ ಕಾರಣ, ಅವರಿಗೆ ಇತ್ತೀಚಿನ ಒಳ್ಳೆಯ ಫೋಟೋ ಲಭ್ಯವಾಗಲಿಲ್ಲ. ಹಳೆಯ ಫೋಟೋ ತೋರಿಸಿದ್ದರು. ಆ ಫೋಟೋದಲ್ಲಿನ ಹುಡುಗ ಕಮಲಹಾಸನ್‌ನ ತಮ್ಮನಂತಿದ್ದ. ಮೈಬಣ್ಣ ಬಿಳುಪು ಅಂದರು. ಹುಡುಗನ ತಂದೆ, ತಾಯಿ, ಇಬ್ಬರು ಅಕ್ಕಂದಿರು, ತಮ್ಮ ಎಲ್ಲರೂ ಬಂಗಾರದ ಬಣ್ಣದಿಂದ ಹೊಳೆಯುತ್ತಿರುವುದು ಕಾಣುತ್ತಲೇ ಇತ್ತು.
ಮತ್ತೇಕೆ ಯೋಚನೆ? ಮಾಧವಿ ಪರೀಕ್ಷೆ ಮುಗಿಸಿ ಬರುವುದನ್ನೇ ಎಲ್ಲರೂ ಕಾಯುತ್ತಿದ್ದರು. ಆ ಹುಡುಗ ಕೂಡ ಅದೇ ದಿನ ವಿಮಾನದಿಂದ ಇಳಿಯುವವನಿದ್ದ. ಆಗುವ ಮದುವೆಗೆ ಎಲ್ಲವೂ ಕೂಡಿಬರುತ್ತವೆ.
ಮಾಧವಿ ಬಂದೇ ಬಿಟ್ಟಳು.

ಪರೀಕ್ಷೆಗೆ ಓದಿದ ಹೈರಾಣ ಅವಳ ಮುಖದಲ್ಲಿ ಕಾಣುತ್ತಿತ್ತು.
‘ಹುಡುಗ ಬಂದಾಗ ಈ ಅವತಾರದಲ್ಲಿದ್ದರೆ ಹೇಗೆ? ಈ ಎರಡೂ ದಿನ ಚೆನ್ನಾಗಿ ಉಂಡು, ಹಾಯಾಗಿ ನಿದ್ದೆ ಮಾಡು’. ಮಾಧವಿಯ ಕಣ್ಣಿನ ಕೆಳಗಿದ್ದ ಕಪ್ಪನ್ನು ಸೂಕ್ಷ್ಮವಾಗಿ ನೋಡುತ್ತಾ ಸುಮಿತ್ರೆ ಹೇಳಿದಳು.

ಮಾಧವಿ ಮುಖ ಸಿಂಡರಿಸಿ ‘ಯಾವ ಹುಡುಗ?ಯಾಕೆ?’ ಅಂದಳು.
‘ಆಹಾ- ಹುಡುಗ ಯಾಕೋ ಗೊತ್ತಿಲ್ಲವಾ? ಇಲ್ಲಿಯತನಕ ಓದಿದ್ದರಲ್ಲಿ ಎಲ್ಲೂ ಆ ಪ್ರಸ್ತಾಪವೇ ಬಂದಿಲ್ಲವಾ ಹೇಗೆ?’ ಅಂದಳು ಲತಾ ರೇಗಿಸುತ್ತ.

ಅತ್ತಿಗೆಯ ಮಾತಿಗೆ ಮಾಧವಿಯ ಮುಖ ಮತ್ತಷ್ಟು ಸೀರಿಯಸ್ ಆಯ್ತು.
‘ಹುಚ್ಚು ಹುಡುಗಿ, ಹುಡುಗ ಬರತಾ ಇರೋದು ನಿನ್ನ ನೋಡೋದಕ್ಕೆ- ಆತ ಅಮೇರಿಕಾದಲ್ಲಿ ಕಂಪ್ಯೂಟರ್ ಇಂಜನಿಯರ್. ಇವತ್ತೇ ವಿಮಾನ ಇಳಿದದ್ದು. ನಿಮ್ಮ ಹನಿಮೂನು ಸ್ವಿಟ್ಜರ್ಲೆಂಡಲ್ಲಿ’ – ಒಂದೇ ಉಸಿರಿಗೆ ಎಲ್ಲಾ ವಿಷಯ ಹೇಳಿದ್ದಕ್ಕೆ ಕಲ್ಯಾಣಿ ಹಿಗ್ಗಿ ಆಯಾಸಪಟ್ಟಳು.
‘ನಿಶ್ಚಿತಾರ್ಥ ಒಂದು ವಾರದೊಳಗೆ ಮುಗಿಯಬೇಕೆಂದು ಹೇಳೇ!’ ಅಂದಳು ಸುಮಿತ್ರ ತಂಗಿಯೊಂದಿಗೆ ಸ್ಫರ್ದೆಗೆ ಇಳಿಯುತ್ತ.

ಮಾಧವಿಯ ಕಣ್ಣ ಕೆಳಗಿನ ಕಪ್ಪು ಮುಖವೆಲ್ಲಾ ಹರಡಿಕೊಂಡಿತು.
‘ಅರೆ! ನಾಚಿಕೆಯಿಂದ ಮುಖ ಕೆಂಪಾಗುತ್ತೆ ಅಂದುಕೊಂಡರೆ, ನನ್ನ ನಾದಿನಿಯ ಮುಖ ಕಪ್ಪಿಟ್ಟಿದೆಯಲ್ಲ! ಅಂದ ಕಲ್ಯಾಣಿಯ ಗಂಡ.

‘ವರದಕ್ಷಿಣೆ ಎಷ್ಟು?’ ಮಾಧವಿ ಗಂಭೀರವಾಗಿ ಕೇಳಿದಳು.
ಎಲ್ಲರ ಎದೆಯಲ್ಲಿ ಕಳವಳ ಹುಟ್ಟಿತು. ವರದಕ್ಷಿಣೆ ಕೇಳುವಾತ ಬೇಡ ಅನ್ನುವಳಾ? ಈ ಓದು, ಶಿಕ್ಷಣ ಹುಡುಗಿಯರನ್ನು ಇಂಥ ಮೂರ್ಖ ಯೋಚನೆಗಳಿಗೆ ದೂಡುವುದಿದೆ.
ಆದರೂ ಯಾಕೆ ಹುಟ್ಟಿತು ಇವಳ ತಲೆಯಲ್ಲಿ ಈ ಪ್ರಶ್ನೆ? ಉತ್ತರ ಹೇಳಬೇಕೋ ಬೇಡವೋ ಎಂದು ಒಬ್ಬರ ಮುಖ ಒಬ್ಬರು ನೋಡಿಕೊಂಡರು.

‘ಮೊದಲು ಹುಡುಗ ನಿನಗೆ ಇಷ್ಟವಾಗಬೇಕು ತಾನೇ- ವರದಕ್ಷಿಣೆಯ ಸಂಗತಿ ನಂತರದ್ದು- ಮೊದಲು ಹುಡುಗನನ್ನು ನೋಡುವ ಶಾಸ್ತ್ರ ಮುಗಿಯಲಿ’ ಅಂದ ಸಣ್ಣ ಬಾವ.
‘ನಿಮ್ಮೆಲ್ಲರಿಗೂ ಸಂಬಂಧ ಇಷ್ಟವಾಯಿತು ತಾನೇ?’
‘ಇಷ್ಟವಾಯಿತು’. ಕಲ್ಯಾಣಿ ಎಲ್ಲರ ಪರವಾಗಿ ಹೇಳಿಬಿಟ್ಟಳು.
‘ಹಾಗಾದರೆ ನನಗೂ ಇಷ್ಟವಾಗುತ್ತೆ’ ಮಾಧವಿ ನಕ್ಕಳು.
ಎಲ್ಲರೂ ಸ್ವಲ್ಪ ಸಮಾಧಾನಗೊಂಡರು.
‘ಆದರೆ ವರದಕ್ಷಿಣೆ ವಿಷಯ ಏನು? ನೀವಾದರೋ ದೊಡ್ಡ ಮೊತ್ತದ ವರದಕ್ಷಿಣೆಯಿಂದ ಮದುವೆ ಮಾಡಿಕೊಂಡಿರಿ. ಕೊನೆಯವಳೆಂದು ನನಗೆ ಅನ್ಯಾಯ ಮಾಡಲ್ಲ ತಾನೇ-ವರದಕ್ಷಿಣೆ ಇಲ್ಲದೆ ನನ್ನ ಕಳಿಸಿಬಿಡಬೇಕೆಂದು ಯೋಚಿಸುತ್ತಿಲ್ಲ ತಾನೇ’
ಮಾಧವಿಯ ಮಾತುಗಳಿಂದ ಎಲ್ಲರ ಮುಖ ಅರಳಿ ನಿರಾಳವಾದವು.

ಮಾಧವಿ ಬುದ್ಧಿವಂತಳೆಂದು ತಿಳಿದಿದ್ದರಾದರೂ ಇಷ್ಟು ಗಟ್ಟಿ ಹುಡುಗಿ ಎಂದು ಅವರಿಗೆ ಗೊತ್ತಿರಲಿಲ್ಲ ‘ಬರಿಗೈಯ್ಯಿಂದ ಗಂಡನ ಮನೆಗೆ ಕಳಿಸಿದರೆ ಸುಮ್ಮನಿರುವವಳಾ ನೀನು? ಹತ್ತು ಲಕ್ಷ ಕ್ಯಾಶ್ ನಿಶ್ಚಿತಾರ್ಥದ ದಿನವೇ ಹರಿವಾಣದಲ್ಲಿಡಬೇಕು. ಉಳಿದ ಎಲ್ಲಾ ಉಡುಗೊರೆ ಕೊಡಬೇಕು. ನಿನ್ನ ಅಕ್ಕಂದಿರಿಬ್ಬರ ಮದುವೆಯ ಖರ್ಚು, ವರದಕ್ಷಿಣೆ ಎರಡೂ ಸೇರಿಸಿದರೂ ನಿನ್ನ ಮದುವೆಯ ಖರ್ಚಿಗೆ ಸಾಕಾಗಲ್ಲ. ಸಮಾಧಾನಾನಾ?’ ದೊಡ್ಡ ಅತ್ತಿಗೆ ಲತ ಪ್ರೀತಿ, ನಿಷ್ಠುರತೆಯನ್ನು ಬೆರೆಸಿ ಹೇಳಿದಳು.

‘ಓಹೋ, ಸಾಕು,’ ಅನ್ನುತ್ತಾ ಮಾಧವಿ ನಕ್ಕಳು.
‘ಇನ್ನು ಸಾಕು ಮಾಡಿ-ಎರಡು ದಿನ ಒಳ್ಳೆಯ ನಿದ್ದೆ ಮಾಡು. ಆ ಕಣ್ಣ ಕೆಳಗೆಲ್ಲಾ ಕಪ್ಪಿದೆ. ನಾಳೆ ಬ್ಯೂಟಿ ಪಾರ್ಲರ್ ಗೆ ಹೋಗಿ ಫೇಷಿಯಲ್ ಮಾಡಿಸಿಕೋ, ನಿನ್ನ ಫೋಟೋ ಅವರಿಗೆಲ್ಲ ಇಷ್ಟವಾಯಿತು. ಆದರೆ ನೀನು ಫೋಟೋಗಿಂತ ಸುಂದರವಾಗಿದ್ದಿ ಅಂತ ಹೇಳಿದ್ದೇವೆ.ʼ ಅಲ್ಲಿಯವರೆಗೂ ಮಾತಾಡದೇ ಸುಮ್ಮನಿದ್ದ ರೇಖಾ ಮಾತು ಕೂಡಿಸಿದಳು.
ಮಾಧವಿ ಮುಗುಳು ನಗುತ್ತಾ ಸ್ನಾನಕ್ಕೆ ಹೋದಳು.
ಸ್ನಾನದ ನಂತರ ಅಪ್ಪನಿಗಾಗಿ ಕಾದು ಕೂತಳು. ಎಲ್ಲರೂ ಊಟಕ್ಕೆ ಕುಳಿತರೂ ‘ಅಪ್ಪನೊಂದಿಗೆ ಉಣ್ಣುವೆ’ನೆಂದು ಮಾಧವಿ ಹಾಗೇ ಕೂತಳು.
ಆ ದಿನ ಚಲಪತಿರಾವ್ ಊಟಕ್ಕೆ ಬರುವ ಹೊತ್ತಿಗೆ ಮಧ್ಯಾಹ್ನ ಎರಡು ಗಂಟೆ ದಾಟಿತು. ಎಲ್ಲರೂ ಮಧ್ಯಾಹ್ನದ ಸುಖ ನಿದ್ದೆಯಲ್ಲಿದ್ದರು. ರಾಮಲಕ್ಷ್ಮಿ ಊಟ ಬಡಿಸುವ ಕೆಲಸವನ್ನು ಮಗಳಿಗೆ ಒಪ್ಪಿಸಿ ಮಲಗಿದಳು.
ಮಾಧವಿ ತನಗೂ, ಅಪ್ಪನಿಗೂ ಬಡಿಸಿದಳು. ಕುಶಲ ಪ್ರಶ್ನೆಗಳ ಬಳಿಕ ಮೀನಿನ ಸಾರು ಸವಿಯುವ ಆನಂದದಲ್ಲಿದ್ದ ಅಪ್ಪನಿಗೆ ನಿಧಾನವಾಗಿ ಕೇಳಿದಳು.
‘ಅಪ್ಪಾ! ನನಗೆ ಹತ್ತು ಲಕ್ಷ ಹಣ ಬೇಕು.”
ಚಲಪತಿರಾವನಿಗೆ ಅರ್ಥವಾಗಲಿಲ್ಲ. ರಾಮಲಕ್ಷ್ಮಿಯೂ ನಿದ್ದೆ ಮುಗಿಸಿ ಆಗತಾನೇ ಬಂದಳು.
‘ಏನಮ್ಮಾ’ ಚಲಪತಿರಾವ್ ಬಾಯಿಗೆ ಸಿಕ್ಕಿದ ಮೀನಿನ ಮುಳ್ಳು ಹುಷಾರಾಗಿ ತೆಗೆಯುತ್ತಾ ಕೇಳಿದ.
‘ನನಗೆ ಹತ್ತು ಲಕ್ಷ ಬೇಕಿದೆಯಪ್ಪ’.
ಬೆರಗನ್ನು ತೋರಗೊಡದೆ ‘ಯಾಕಮ್ಮಾ’ ಎಂದು ಕೇಳಿದ.
‘ಜಮೀನು ಖರೀದಿಸಬೇಕು’ ಮಾಧವಿ ಆಗಲೇ ಮೊಸರಿಗೆ ಬಂದಾಗಿತ್ತು.
‘ಜಮೀನಾ?’
‘ಹೌದು – ವಿಜಯನಗರದ ಬಳಿ ಸಾಲೂರು ಅಂತ ಒಂದು ಊರಿದೆ…ಅಲ್ಲೇ ಹತ್ತಿರದಲ್ಲಿ ಇಪ್ಪತ್ತು ಎಕರೆ ಫಲವತ್ತಾದ ಭೂಮಿ ಮಾರಾಟಕ್ಕಿದೆ. ಖರೀದಿ ಮಾಡಬೇಕುʼ.
ಮಗಳಿಗೆ ಹುಚ್ಚು ಹಿಡಿಯಿತೋ ಅಥವಾ ತನಗೇ ಹುಚ್ಚು ಹಿಡಿಯಿತೋ ಚಲಪತಿರಾವ್‍ಗೆ ಅರ್ಥವಾಗಲಿಲ್ಲ. ರಾಮಲಕ್ಷ್ಮಿಗಂತೂ ಇನ್ನೂ ಗೊಂದಲ.
ಎರಡು ತಿಂಗಳಲ್ಲಿ ಅಮೇರಿಕಾಗೆ ಹೋಗುವ ನಿ‌ನಗೆ ಜಮೀನು ಯಾಕೆ?
‘ನಾನು ಹೋಗಲ್ಲ ಅಮೇರಿಕಾಗೆʼ. ಹಿಂಜರಿಕೆ, ಅದನ್ನು ತೋರಬಾರದೆಂಬ ಪ್ರಯತ್ನ ಮಾಧವಿಯ ದನಿಯಲ್ಲಿ ಕೇಳಿಸಿತು.

‘ಅಮೇರಿಕಾಗೆ ಹೋಗಲ್ಲ? ಮತ್ತೆ…??‘ ಚಲಪತಿರಾವನಿಗೆ ಸಿಟ್ಟು ಬರುತ್ತಿತ್ತು.

‘ಮತ್ತೆ ಇಲ್ಲ. ಎಂಥದೂ ಇಲ್ಲ. ನಾನು ಮದುವೆ ಆಗೋದಿಲ್ಲ. ಬೇಸಾಯ ಮಾಡ್ತೇನೆ. ಜಮೀನು ಖರೀದಿ ಮಾಡಿ ಬೇರೆ ಬೇರೆ ಸಂಶೋಧನೆ ಮಾಡ್ತೇನೆ. ಬೆಳೆ ಬೆಳಿತೇನೆ. ನನಗೆ ಈಗ ಮದುವೆಯಾಗುವ ಯೋಚನೆ ಇಲ್ಲ. ಬೇಸಾಯ ಮಾಡುವ ಆಸೆ.’ ಸಿಟ್ಟು ಮಾಡಿಕೊಳ್ಳಬೇಕೆಂದೂ ಚಲಪತಿರಾವ್‍ಗೆ ಸ್ವಲ್ಪ ಹೊತ್ತು ತಿಳಿಯಲಿಲ್ಲ.

ಆಕಾಶದಲ್ಲಿನ ಚಂದ್ರ ಬೇಕೆಂದು ಮಗು ಕೇಳಿದಾಗ ತಾಯಿ ಮಗುವನ್ನು ನೋಡುವ ಹಾಗೆ ಮಗಳ ಮುಖ ನೋಡಿದ. ಮಾಧವಿ ಆ ನೋಟವನ್ನು ಒರೆಸಿಬಿಟ್ಟಳು.

ತನ್ನ ನಿರ್ಧಾರವನ್ನು ಮತ್ತೆ ಮತ್ತೆ ಹೇಳಿದಳು. ಮದುವೆಗೆ ಕೊಡಬೇಕಾದ ಹತ್ತು ಲಕ್ಷ ವರದಕ್ಷಿಣೆಯ ಹಣವನ್ನು ಅವಳಿಗೇ ಕೊಡಬೇಕೆಂದಳು. ಆ ಹಣದಿಂದ ತಾನು ಮಾಡಬೇಕಿರುವ ಬೇಸಾಯದ ಕುರಿತು ಮತ್ತೆ ಮತ್ತೆ ಹೇಳಿದಳು.
ಆ ಮನೆಯ ಬುಡವೇ ಅಲುಗಾಡಿಬಿಟ್ಟಿತು.

ಮಾಧವಿಯವು ಮೂರ್ಖ ಯೋಚನೆಗಳೆಂದು ತಳ್ಳಿಹಾಕಲು ಮನೆಯವರೆಲ್ಲಾ ಸೇರಿ ಎಲ್ಲಾ ಥರದ ಪ್ರಯತ್ನಮಾಡಿದರು.

ಮಾಧವಿ ಒಂದೇ ಒಂದು ಪ್ರಯತ್ನವನ್ನೂ ನಡೆಯಗೊಡಲಿಲ್ಲ. ತಾನು ಈ ವಿಷಯದಲ್ಲಿ ಎಷ್ಟು ಸೀರಿಯಸ್ ಇದ್ದೇನೆಂದು ತಡಬಡಾಯಿಸದೇ, ಸಂಶಯವಿಲ್ಲದೇ ಸ್ಪಷ್ಟವಾಗಿ ಹೇಳಿದಳು.

‘ಹೋಗಲಿ ಮದುವೆಯಾದ ಬಳಿಕ ನಿನ್ನ ಗಂಡನನ್ನು ಒಪ್ಪಿಸಿ ನಿನ್ನಿಷ್ಟದಂತೆ ಮಾಡಿಕೋ’.

‘ಆತ ಯಾರೋ ಹೊಸ ವ್ಯಕ್ತಿ. ಅವನನ್ನು ನಾನು ಯಾಕೆ ಒಪ್ಪಿಸಬೇಕು? ಆತನ ಸಮ್ಮತಿಯ ಮೇಲೆ ನನ್ನ ಪ್ರೋಗ್ರಾಂ ನಿರ್ಧಾರವಾಗುವುದೇನು? ಅಮೇರಿಕಾದಲ್ಲಿ ಕಂಪ್ಯೂಟರ್ ಇಂಜನಿಯರ್ ಆದರೆ ನನ್ನನ್ನೂ ಅಮೇರಿಕಾಗೆ ಕರೆದುಕೊಂಡು ಹೋಗಿ ಕಂಪ್ಯೂಟರ್ ಟ್ರೈನಿಂಗ್ ಕೊಡಿಸುವನೇ ಹೊರತು ಇಲ್ಲೇ ಹಳ್ಳಿಯಲ್ಲಿದ್ದು ಬೇಸಾಯ ಮಾಡಲು ಒಪ್ಪುವನಾ? ನಿಮಗೇ ನಾನು ಅರ್ಥವಾಗಲಿಲ್ಲ. ಆತನಿಗೆ ಹೇಗೆ ಅರ್ಥವಾದೇನು? ಅಷ್ಟಕ್ಕೂ ಅಸಲಿ ವಿಷಯ ಏನಂದರೆ ಈಗ ನಾನು ಮದುವೆ ಆಗಲ್ಲ. ಮದುವೆಗಿಂತ ಮುಖ್ಯವಾಗಿ ನಾನು ಜೀವನದಲ್ಲಿ ಸಾಧಿಸಬೇಕಾದದ್ದು ತುಂಬಾ ಇದೆ.ʼ

‘ಏನು ನೀನು ಸಾಧಿಸುವುದು? ಕೈ ಕೆಸರು ಮಾಡಿಕೊಳ್ಳೋದು ಅಷ್ಟೇ ತಾನೇ?ʼ
ಕ್ಷಣ ಕ್ಷಣಕ್ಕೂ ಚಲಪತಿರಾವ್‍ನ ಕೋಪ ಹೆಚ್ಚುತ್ತಿತ್ತು.

ʼಹೌದು. ಕೈ ಕೆಸರಾದರೆ ಬಾಯಿ ಮೊಸರು. ಮಣ್ಣು ಅಂದರೆ ನನಗೆ ಇಷ್ಟ. ಆ ಮಣ್ಣಿನಿಂದ ಪವಾಡ ಮಾಡಬಹುದು ಅಂತ ಬಲವಾದ ನಂಬಿಕೆ ನನ್ನದು.ʼ

ಮಾಧವಿಯನ್ನು ಮದುವೆಗಲ್ಲ, ಹುಡುಗನನ್ನು ನೋಡುವ ಶಾಸ್ತ್ರಕ್ಕೂ ಒಪ್ಪಿಸಲು ಸಾಧ್ಯವಿಲ್ಲವೆಂದು ಎಲ್ಲರಿಗೂ ಅರ್ಥವಾಯಿತು.

ಮಾಧವಿಗೆ ಹುಷಾರಿಲ್ಲ, ಈಗ ಬೇಡ , ಮತ್ತೊಮ್ಮೆ ಹೇಳಿ ಕಳಿಸುವುದಾಗಿ ಹುಡುಗನ ಕಡೆಯವರಿಗೆ ತಿಳಿಸಿದರು.

। ಮುಂದುವರೆಯುವುದು ।

‍ಲೇಖಕರು Admin

October 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: