ಸಂತೋಷ್ ರಾವ್ ಪೆರ್ಮುಡ ಓದಿದ ‘ನನ್ನ ಬದುಕಿನ ಹಾಡು’

ಸಂತೋಷ್ ರಾವ್ ಪೆರ್ಮುಡ

ಸಂಗೀತ ಸಾಹಿತ್ಯ ಅಭಿಯಾನ ಮೂಲಕ ಸಂಗೀತ ಸಾಮ್ರಾಜ್ಙಿ ಡಾ. ಗಂಗೂಬಾಯಿ ಹಾನಗಲ್‌ ಇವರನ್ನು ಪರಿಚಯಿಸುವ ಸೌಭಾಗ್ಯ ನನ್ನದು. ಇವರು ತನ್ನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದರೂ ಹಿಂದೂಸ್ತಾನಿ ಸಂಗೀತವನ್ನು ರಕ್ತದಲ್ಲೇ ಕರಗತ ಮಾಡಿಕೊಂಡು ಯಶಸ್ಸಿನ ಉತ್ತುಂಗಕ್ಕೆ ಏರಿದ ಧೀರ ಹೆಣ್ಣು ಮಗಳು. ಇವರು 1913ರ ಮಾರ್ಚ್ 5 ರಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಹುಟ್ಟಿದರೂ ಇವರು ಬೆಳೆದಿದ್ದು ಧಾರವಾಡದಲ್ಲಿ. ಇವರ ತಂದೆ ಚಿಕ್ಕೂರಾವ್ ನಾಡಗೀರ, ತಾಯಿ ಅಂಬಾಬಾಯಿ. ನರಗುಂದದಲ್ಲಿ ವಾಸವಾಗಿದ್ದ ಇವರ ಅಜ್ಜಿಯ ಅಜ್ಜ, ನರಗುಂದ ಬಾಬಾಸಾಹೇಬರ ಆಳ್ವಿಕೆಯಲ್ಲಿ ಕೋರ್ಟಿನ ಮುನ್ಸೀಪ್ ಆಗಿದ್ದರು. ಬ್ರಿಟಿಷರ ವಿರುದ್ಧ ಬಾಬಾಸಾಹೇಬ್ ಅವರು ಯುದ್ಧವನ್ನು ಸಾರಿದಾಗ ಇವರ ಅಜ್ಜಿಯ ಅಜ್ಜಿ ಬ್ರಿಟಿಷ್ ಸೈನಿಕರ ಕೈಸೆರೆಯಿಂದ ತಪ್ಪಿಸಿಕೊಂಡು, ಬಂದು ಹಾನಗಲ್ಲಲ್ಲಿ ನೆಲೆಸಿದ್ದರಿಂದ ಇವರ ಮನೆಯ ಹೆಸರು ಹಾನಗಲ್ ಆಯಿತು.

ಇವರು ತಮ್ಮ ಬದುಕಿನಲ್ಲಿ ಎರಡು ಬಾರಿ ಹೆಸರನ್ನು ಬದಲಾಯಿಸಿಕೊಂಡರು. ಮೂಲ ಹೆಸರು, ‘ಗಾಂಧಾರಿ ಹಾನಗಲ್,’ ಎಂದಾಗಿದ್ದು, ಸಂಗೀತವಲಯದಲ್ಲಿ ಪ್ರಸಿದ್ಧರಾದಂತೆ, ಅವರ ಪರಿಚಯ ‘ಗಂಗೂಬಾಯಿ ಹುಬ್ಳೀಕರ,’ ಎಂದಾಯಿತು. 1926ರಲ್ಲಿ ಅವರ ಸಂಗೀತ ಜೀವನದಲ್ಲಿ ಅತ್ಯಮೂಲ್ಯವಾದ ಸಮಯವಾಗಿದ್ದು ಅವರನ್ನು ಕೀರ್ತಿ ಶಿಖರಕ್ಕೇರಿತ್ತು. ಅದೇ ವರ್ಷದಲ್ಲಿ ‘ಮಿಯಾ ಕೀ ಮಲ್ಹಾರ್,’ ರಾಗವನ್ನು ಹಾಡಿದಾಗ, ಆಕಾಶವಾಣಿಯಲ್ಲಿ ಅದನ್ನು ಪ್ರಸಾರಮಾಡುವ ಸಮಯದಲ್ಲಿ ಬಾಯಿಯವರ ಸೋದರಮಾವ ಕೃಷ್ಣಪ್ಪನವರ ಇಚ್ಛೆಯಂತೆ, ‘ಗಂಗೂಬಾಯಿ ಹಾನಗಲ್,’ ಎಂದು ಘೋಶಿಸಲಾಯಿತು. ‘ಹಾನಗಲ್’ ಎನ್ನುವುದು ಬಾಯಿಯವರ ಪೂರ್ವಜರ ಊರು, ಅದನ್ನು ಖ್ಯಾತಿಗೊಳಿಸುವ ಸದಭಿಲಾಷೆಯಿಂದ ತಮ್ಮ ಸಮ್ಮತಿಯನ್ನು ನೀಡಿದರು.

ಹಾನಗಲ್ ಅವರು ದೇಶ- ವಿದೇಶಗಳಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇವರ ಜೀವನ ಚರಿತ್ರೆ ‘ನನ್ನ ಬದುಕಿನ ಹಾಡು’ ಎಂಬ ಪುಸ್ತಕವಾಗಿ ಹೊರಬಂದಿದೆ. ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್‌.ಭೈರಪ್ಪ ಸೆಪ್ಟೆಂಬರ್‌ 19ರಂದು ಈ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಪುಸ್ತಕದಲ್ಲಿ ಹಾನಗಲ್‌ ಅವರ ಜೀವನಕ್ಕೆ ಸಂಬಂಧಿಸಿದ ಹಲವಾರು ಅಪರೂಪದ ಫೋಟೋಗಳ ಸಂಗ್ರಹದ ಆಲ್ಬಂ ಸಹಿತ ಇದ್ದು, ಇದೊಂದು ರೀತಿಯ ಜೀವನದ ವಿವಿಧ ಘಟ್ಟಗಳ ಫೋಟೋ ಮತ್ತು ವಿಷಯಗಳ ಸಂಗ್ರಹ ಎಂದರೂ ತಪ್ಪಾಗದು. ಹಿರಿಯ ಸಾಹಿತಿ ಎನ್.ಕೆ ಅವರು ತಮ್ಮ ವಿಭಿನ್ನ ನಿರೂಪಣೆಯ ಮೂಲಕ ಗಂಗೂಬಾಯಿ ಅವರ ಜೀವನ ಪುಟಗಳಿಗೆ ಜೀವವನ್ನು ತುಂಬಿದ್ದಾರೆ.

ಧಾರವಾಡದ ಶುಕ್ರವಾರ ಪೇಟೆಯಲ್ಲಿ ನನ್ನ ಮನೆ. ಅಲ್ಲಿ ಮಗುವಿನ ತೊಟ್ಟಿಲು ತೂಗುತ್ತಾ ನನ್ನ ಅಮ್ಮ ಅಂಬಾಬಾಯಿ ಹಾಡ್ತುತಿದ್ದ ಜೋಗುಳದ ಕುರಿತು ಹೇಳುವ ಮೂಲಕ ಹಾನಗಲ್‌ ಅವರ ಜೀವನ ತೆರೆದಿಡಲು ಶುರುವಿಡುವ ಪುಸ್ತಕ ಒಟ್ಟು 75 ಪುಟಗಳಲ್ಲಿ ಅವರ ಜೀವನದ ಚಿತ್ರಣವನ್ನು ನೀಡುತ್ತದೆ. ಇವರ ದಾಂಪತ್ಯ ವಿಚಿತ್ರ, ಮತ್ತು ಅನನ್ಯವಾಗಿದ್ದು, ಸಾಧನೆಗೆ ಅದೂ ಒಂದು ಕಾರಣ. ತನ್ನ ಯಶಸ್ಸಿಗೆ ನನ್ನ ದಾಂಪತ್ಯವೂ ಕಾರಣ ಎನ್ನುವ ಕುರಿತು ಪುಸ್ತಕದಲ್ಲಿ ಗಂಗೂಬಾಯಿ ಹೀಗೆ ಹೇಳಿದ್ದಾರೆ.

ನಾನು ಅದೇ ಆಗ ಶಾಲೆಗೆ ಸೇರಿದ್ದೆ, ಆಗ ನನಗೆ 7 ವರ್ಷ. ನನ್ನ ತಂದೆ ಹೆಸರು ಚಿಕ್ಕೂರಾವ್‌ ನಾಡಗೀರ. ಅವರ ಊರು ರಾಣೆಬೆನ್ನೂರಿನಲ್ಲೇ ನೆಲೆಸಿದರು. ಅವರಿಗೆ ಪತ್ನಿಯೂ ಇದ್ದರು, ನನಗೆ ದೊಡ್ಡವ್ವನ ರೀತಿ. 1929ರಲ್ಲಿ ಹುಬ್ಬಳ್ಳಿಯ ಗುರುನಾಥ ಕೌಲಗಿ ಎಂಬ ಸುಸಂಸ್ಕೃತ, ಸುಶಿಕ್ಷಿತ, ಸಜ್ಜನ ವಕೀಲರು ನನ್ನನ್ನು ವಿವಾಹ ಮಾಡಿಕೊಂಡರು. ಆಗ ನಾನು ಹದಿನಾರು ವರ್ಷದವಳಾಗಿದ್ದೆ. ಆ ಮೊದಲೇ ಅವರಿಗೆ ಮದುವೆಯಾಗಿ ಹೆಂಡತಿ ತೀರಿ ಹೋಗಿದ್ದರು. ನನ್ನ ಹಾಡುಗಾರಿಕೆಗೆ ಮೆಚ್ಚಿ ಮನಸೋತು ಪದ್ಧತಿ ಪ್ರಕಾರ ನನ್ನನ್ನು ಸ್ವೀಕರಿಸಿದರು. ನನ್ನ ಸಂಗೀತ ಗುರಿ ಸಾಧನೆಗಾಗಿ ತಾಯಿಯ ಬಳಿ ಇರಲು ಒಪ್ಪಿಕೊಂಡರು. ಸಹಜವಾಗೇ ಅವರ ತಂದೆ- ತಾಯಿಯರಿಂದ ಅವರ ಬಳಗದಲ್ಲಿಯೇ ಮದುವೆಯಾಗುವಂತೆ ಒತ್ತಾಯ ಬಂತು. ಆಗ ನಾನೇ, ತಂದೆತಾಯಿಯರ ಮನಸ್ಸು ನೋಯಿಸದೇ ಆ ಮದುವೆಗೂ ಒಪ್ಪಿಕೊಳ್ಳಿ ಎಂದಾಗ ಅವರ ಅಕ್ಕನ ಮಗಳನ್ನು ಮದುವೆ ಮಾಡಿಕೊಂಡರು. ಹೀಗಾಗಿ ಯಜಮಾನರ ತಂದೆ-ತಾಯಿಯರಿಗೆ ಕೂಡ ನನ್ನ ಮೇಲೆ ಪ್ರೀತಿ ಬೆಳೆದು ಆಗಾಗ ತಮ್ಮ ಮನೆಗೆ ಕರೆಸಿಕೊಳ್ಳತೊಡಗಿದರು.

ನನ್ನ ಯಜಮಾನರು ಬೇರೆ ಬೇರೆ ವ್ಯವಹಾರಕ್ಕೆ ಕೈ ಹಾಕಿ ಅದರಲ್ಲಿ ನಷ್ಟವಾಗಿ ಕೈ ಸುಟ್ಟುಕೊಂಡರು. ಆದರೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ 12 ಸಾವಿರ ಖರ್ಚು ಮಾಡಿ ನನಗೊಂದು ನೆಲೆ, ನೆರಳು ಮಾಡಿಕೊಟ್ಟಿದ್ದರು. ಆ ಮನೆಗಾಗಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ಕಾಲಕಾಲಕ್ಕೆ ಬಡ್ಡಿ, ಕಂತಿನ ಅಸಲು ತೀರಿಸಬೇಕಾಗುತ್ತಿತ್ತು. ಮನೆಯ ಸಾಲವನ್ನು ತೀರಿಸುವ ಕಷ್ಟದಲ್ಲಿ ಮನೆ ನಮಗೆ ಆಸರೆಯಾಗಿತ್ತು ಎಂಬ ಧನಾತ್ಮಕ ವಿಚಾರವೇ ಮರೆತು ಹೋಗುತ್ತಿತ್ತು.

ನನ್ನ ಬದುಕಿನ ಹಾಡಿನಲ್ಲಿ ಜೋಗಿಯಾ, ತೋಡಿ ಮತ್ತು ಬಸಂತ ಬಲಹಾರವೂ ಇದೆ. ಭೈರವಿ ಅಂತೂ ಇದ್ದದ್ದೆ. ಜೋಡುರಾಗದ ಬೆಡಗುಗಳಿಗಿಂತ ಸಾದಾ ರಾಗದ ಸೊಗಸು ಇಷ್ಟ. ತಮಗೆ ಸಂಗೀತ ಕಲಿಸಲು ತಾಯಿ ಪಟ್ಟ ಕಷ್ಟ, ತಮ್ಮ ಚಿಕ್ಕ ಸೋದರಮಾವ ತಾಯಿಯಂತೆ ನೋಡಿಕೊಂಡದ್ದು, ತಮ್ಮ ಗುರು ಸವಾಲೀ ಗಂಧರ್ವರು ಸಂಗೀತ ಕಲಿಸಿದ್ದನ್ನು ಗಂಗೂಬಾಯಿ ಸ್ಮರಿಸಿದ್ದಾರೆ. ನನ್ನ ಮೊದಲನೆಯ ಸಂಗೀತ ಕಚೇರಿ. ಗುರು ಸಮ್ಮುಖದಲ್ಲಿ ತಂಬೂರಿ ಹಿಡಿದು ಸಾ… ಹಚ್ಚುತ್ತಲೇ ಸೋತು ಹೋಗಿದ್ದೆ. ಆಗ ಆತ್ಮವಿಶ್ವಾಸವೇ ಹೊರಟುಹೋಗಿತ್ತು. ಗುರುಗಳೇ ನನಗೆ ಈ ಆತ್ಮವಿಶ್ವಾಸವನ್ನು ಕುದುರಿಸಿದರು. ಈ ಹೊತ್ತು ನಾನೇನಾಗಿದ್ದೇನೋ ಅದು ನನ್ನ ಗುರುವಿನ ಕೃಪೆ, ತಾಯ ಹಾರೈಕೆಗಳು, ಸೋದರಮಾವನ ಸದಿಚ್ಛಾ- ಸತತ ಸಹಾಯ, ಸಹಕಾರಗಳು ಎಂದು ನೆನೆಯುತ್ತಾರೆ.

ಇಂದಿನ ಕಾಲದಲ್ಲಿ ಒಳ್ಳೆಯ ಶಿಷ್ಯರು ಸಿಗುವುದು ದುರ್ಲಭವೇ ಆಗಿದೆ. ರೆಡಿಯೋ ಸ್ಟಾರ್‌ ಆಗಬೇಕು, ಟಿವಿ ಆರ್ಟಿಸ್ಟ್‌ ಆಗಬೇಕು, ಸಿನಿಮಾ ಪ್ಲೇ ಬ್ಯಾಕ್‌ ಹಾಡಬೇಕು ಎಂಬೆಲ್ಲಾ ಹಂಬಲಗಳಲ್ಲಿ ಶಾಸ್ತ್ರೀಯ ಸಾಧನೆ ಮೂಲೆಗೆ ಕೂಡುತ್ತದೆ. ನಮಗೆಲ್ಲಾ ಯೋಗ್ಯ ಗುರುಗಳು ಸಿಗಬೇಕಾದರೆ ಹಿರಿಯರ ಪುಣ್ಯ ಎಲ್ಲಾ ಖರ್ಚಾಯಿತು. ಆದರೆ ಈಗಿನ ಸಂಗೀತ ಹವ್ಯಾಸಿಗಳಿಗೆ ಮೊದಲು ಟಿವಿ, ರೇಡಿಯೋದಲ್ಲಿ ಪ್ರಸಾರ ಪಡೆದು ಪ್ರಸಿದ್ಧಿ ಗಿಟ್ಟಿಸುವ ಆಸೆ ಎಂಬ ವಾಕ್ಯಗಳು ಈಕೆಯ ಬದುಕಿನ ಹಾಡಿನ ಉದ್ದೇಶವನ್ನು ಸಾರುತ್ತವೆ.

ಎನ್.ಎಯವರು ನಿರೂಪಿಸಿದ ಗಂಗೂಬಾಯಿ ಹಾನಗಲ್ ಅವರ ಬದುಕಿನ ಕಥೆಗಳು ಮೊದಲಿಗೆ ತರಂಗ ವಾರಪತ್ರಿಕೆಯಲ್ಲಿ ಬರುತ್ತಿತ್ತು. ಅದರಲ್ಲಿ ಗಂಗೂಬಾಯಿಯವರಿಗೆ ಟಾನ್ಸಿಲ್ ಸಮಸ್ಯೆ ಇತ್ತು. ಒಂದು ತಂತಿ ತೆಗೆದುಕೊಂಡು ಆ ದುರ್ಮಾಂಸವನ್ನು ಸುಟ್ಟು ಬಿಟ್ಟರು. ಅದರಿಂದ ಅವರಿಗೆ ಗಂಡಸಿನ ಧ್ವನಿ ಬಂತೆಂದು ಓದಿದ ನೆನಪು. ಈ ಅಚ್ಚರಿಯ ವಿಚಾರಗಳು ಅಚ್ಚಳಿಯದಂತೆ ಇಲ್ಲಿ ನಿರೂಪಣೆಗೊಂಡಿದೆ. ಇಡೀ ಕಥಾನಕ ಸಣ್ಣದಾದರೂ ಒಂದು ರೀತಿ ಅಜ್ಜಿಯೊಬ್ಬಳು ಕುಳಿತು ಮಾತಾಡಿದ ಆಪ್ತ ಬಗೆಯಂತೆ ಎನ್.ಕೆ ಅವರ ನಿರೂಪಣೆಯೂ ಮೂಡಿ ಬಂದಿದೆ.

ಹಾನಗಲ್ ಅವರಿಗೆ ತನ್ನ ತಾಯಿಯೇ ಸಂಗೀತದ ಪ್ರೇರಕ ಶಕ್ತಿ ಮತ್ತು ಪ್ರಥಮ ಗುರು. ಇವರು ಕಲಿತಿದ್ದು ಕರ್ನಾಟಕ ಸಂಗೀತವಾದರೂ ಇವರಿಗೆ ಒಲಿದದ್ದು ಹಿಂದೂಸ್ತಾನಿ ಸಂಗೀತ, ಕೃಷ್ಣಾಚಾರ್ಯ ಹುಲಗೂರು, ಸವಾಯಿ ಗಂಧರ್ವ,ಕುಂದಗೋಳದ ಪಂಡಿತ ರಾಮಬಾಹು ಕುಂದಗೋಳ್ಕರ್ ರವರ ಶಿಷ್ಯೆಯಾಗಿ ಇವರು ಕಲಿತದ್ದು ಸಾಗರದಷ್ಟು.

1920ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಗಾಯಕಿಯಾಗಿ ಇವರು ಹಾಡಿದಾಗ ಗಾಂಧೀಜಿಯವರ ಮತ್ತು ಸಭಿಕರ ಮೆಚ್ಚುಗೆ ಗಳಿಸಿದರು. 1952 ರಲ್ಲಿ ಆಕಾಶವಾಣಿಯಲ್ಲಿ ಪ್ರಥಮ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಖ್ಯಾತ ಸಂಗೀತ ವಿದೂಷಿ ಕೃಷ್ಣಾ ಹಾನಗಲ್ ಹಾಗೂ ಸಹೋದರ ಖ್ಯಾತ ತಬಲಾವಾದಕ ಶೇಷಗಿರಿ ಹಾನಗಲ್ ಅವರ ಜೊತೆಗೂಡಿ ಗಂಗೂಬಾಯಿಯವರು ನೀಡಿದ ಕಾರ್ಯಕ್ರಮಗಳು ಅಸಂಖ್ಯ. ಈ ಜೋಡಿಗಳ ಕಾರ್ಯಕ್ರಮ, ದೇಶ – ವಿದೇಶದ ಸಂಗೀತ ಪ್ರೇಮಿಗಳ ಪಾಲಿಗೆ ರಸದೌತಣ. ಆಕಾಶವಾಣಿ, ದೂರದರ್ಶನಗಳಲ್ಲೂ ಇವರ ಕಾರ್ಯಕ್ರಮಗಳು ಪ್ರಸಾರವಾಗಿ ಜನಮನ ಸೂರೆಗೊಂಡಿವೆ. ಗಂಗೂಬಾಯಿಯವರು ಸ್ವಾತಂತ್ರ್ಯಪೂರ್ವದ ಲಾಹೋರ್ ಮತ್ತು ಪೆಷಾವರ್ ಕೇಂದ್ರಗಳಲ್ಲದೇ ದೆಹಲಿ, ಕಲ್ಕತ್ತ, ಲಖೌನೌ, ಬರೋಡಾ, ಹೈದರಾಬಾದ್, ಮೊದಲಾದ ಪ್ರಸಾರ ಕೇಂದ್ರಗಳಿಂದಲೂ ಹಾಡಿದ್ದಾರೆ. ನಾಡು ನುಡಿಯ ಬಗ್ಗೆ ಅಪಾರ ಕಾಳಜಿ, ಗೋಕಾಕ್ ಚಳವಳಿ ಸಮಯದಲ್ಲಿ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇವರು ತಮ್ಮ ಗುರುಗಳಾದ ಸವಾಯ ಗಂಧರ್ವರ ಸ್ಮರಾಣಾರ್ಥ ಕುಂದಗೋಳದಲ್ಲಿ ಪ್ರತಿವರ್ಷ ಸಂಗೀತ ಸಮ್ಮೇಳನವನ್ನು ನಡೆಸುತ್ತಿದ್ದರು. ಇವರು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ, ವಿಧಾನಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ದಿಲ್ಲಿ ಆಗ್ರಾ, ಲಖನೋ, ಬರೋಡ, ಹೈದರಾಬಾದ್, ಗ್ವಾಲಿಯರ್, ಪ್ರಯಾಗ, ಅಮೃತಸರ, ಕರಾಚಿ, ಗಯಾ, ಸಾಗರದಾಚೆಯೂ ಹಾಡಿ ವಿದೇಶಿಯರನ್ನು ರಂಜಿಸಿದ ಖ್ಯಾತಿ. ಇವರು ೨೧, ಜುಲೈ, ೨೦೦೯ ರಲ್ಲಿ ‘ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆ’ಯಲ್ಲಿ ಅವರ ಪರಿವಾರದವರನ್ನೂ ಹಾಗೂ ಅಪಾರ ಸಂಗೀತಪ್ರೇಮಿಗಳನ್ನೂ ಅಗಲಿದರು. ಇವರಿಗೆ

1971ರಲ್ಲಿ ದೇಶದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ, 2002ರಲ್ಲಿ ಪದ್ಮವಿಭೂಷಣ 1973ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮಧ್ಯಪ್ರದೇಶ ಸರಕಾರದಿಂದ ತಾನಸೇನ್ ಪ್ರಶಸ್ತಿ, ಕರ್ನಾಟಕ ಸರಕಾರದಿಂದ ಕನಕ-ಪುರಂದರ ಪ್ರಶಸ್ತಿ, ಅಸ್ಸಾಮ ಸರಕಾರದಿಂದ ಶ್ರೀಮಂತ ಶಂಕರದೇವ ಪ್ರಶಸ್ತಿ, ಗಾನಯೋಗಿ ಪಂಚಾಕ್ಷರಿ ಪ್ರಶಸ್ತಿ, 1976ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, 1995ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ದೆಹಲಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಗಂಧರ್ವ ಮಹಾವಿದ್ಯಾಲಯದ ಮಹಾಮಹೋಪಾಧ್ಯಾಯ ಪದವಿ, ಕೇಂದ್ರ ಸರಕಾರದ ಸಂಗೀತ ನಾಟಕ ಅಕಾಡೆಮಿ ಫೆಲೊಶಿಪ್, ಬನಾರಸಿನಲ್ಲಿ ಭಾರತೀಕಂಠ ಪ್ರಶಸ್ತಿ, ಪ್ರಯಾಗದಲ್ಲಿ ಸ್ವರಶಿರೋಮಣಿ ಪ್ರಶಸ್ತಿ, ಗಾಯನ ಸಮಾಜ, ಬೆಂಗಳೂರು ಸಂಗೀತ ಕಲಾರತ್ನ ಮುಂತಾದ ಪ್ರಶಸ್ತಿಗಳು ಈ ಸ್ವರ ಸಾಮ್ರಾಜ್ಞಿಗೆ ಸಂದಿವೆ. ಇವರು ಕರ್ನಾಟಕ ವಿಧಾನ ಪರಿಷತ್ತಿಗೆ ನಾಮನಿರ್ದೇಶಿತ ಸದಸ್ಯೆಯಾಗಿದ್ದರು. ಗಂಗೂಬಾಯಿ ಹಾನಗಲ್ ಅವರ ಧಾರವಾಡದ ನಿವಾಸವನ್ನು ರಾಜ್ಯ ಸರ್ಕಾರ 25 ಲಕ್ಷ ರುಪಾಯಿ ವೆಚ್ಚದಲ್ಲಿ ನವೀಕರಿಸಿ ವಸ್ತು ಸಂಗ್ರಹಾಲಯನ್ನಾಗಿಸಿದೆ.

ಒಟ್ಟಾರೆಯಾಗಿ ಸಂಗೀತ ಲೋಕದ ಅದ್ಭುತ ಅಥವಾ ಸ್ವರ ಸಾಮ್ರಾಜ್ಞಿಯೆಂದು ಕರೆಯಿಸಿಕೊಂಡ ಗಂಗೂಬಾಯಿ ಹಾನಗಲ್ ಅವರ ಜೀವನ ಚರಿತ್ರೆಯು ಇವರ ಜೀವನ ಮತ್ತು ಸಂಗೀತ ಕ್ಷೇತ್ರದ ಸಾಧನೆ ಮತ್ತು ಎದುರಿಸಿದ ಸವಾಲುಗಳು ಮತ್ತು ಅವುಗಳನ್ನು ಮಟ್ಟಿ ನಿಂತ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ. ಎಲ್ಲರ ಗ್ರಂಥಾಲಯದಲ್ಲೂ ಇರಬೇಕಾದ ಪುಸ್ತಕ.

‍ಲೇಖಕರು Admin

October 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: