ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀ ನಡೆದ ಹಾದಿಯ..

-ನಭಾ

ನೀಲ ನಭ

ಕುದಿಕುದಿದು ಬಿಸಿಲು ಅರಗಿ
ಚುರುಗುಟ್ಟುವ ಉರಿ, ಏಪ್ರಿಲ್‌
ಧಿಕ್ಕನೆ ಅರಳುತ್ತವೆ ಹಾದಿಬೀದಿಯ ಅಂಚು
ಕಾಡ ನಡುನೆತ್ತಿ, ಮರಮರವೇ ಪರಿಮಳಿಸಿ
ಬಣ್ಣದ ಗುಲಾಲು, ಬಾಬಾ
ಒಂದೊಂದೂ ತೂಗುತ್ತಿವೆ ಗೊಂಚಲು
ನೀ ನಡೆದ ಹಾದಿಯ ಚಹರೆ ಸೂಸಿ

ಅಡ್ಡ ಮಳೆ ಹೊಯ್ದು, ದೇಟು ಕಿತ್ತುರುಳಿದರೂ
ಉಳಿದಿರುತ್ತದೆ ಅಲ್ಲೇ ಏಪ್ರಿಲ್ ನ ಪದರು
ಮಿಡಿಗಟ್ಟಿದ ಸೋನೆ, ನಿನ್ನ ಜ್ಞಾನದ
ಒಂದೊಂದು ಎಸಳೂ ತೂಗಿ ತೂಗಿ
ಬಾಬಾ, ಅಸಲು ಕಸುವ ಕಾಡಿ
ಬೆವರಿಳಿಯುತ್ತಿದೆ, ನೀನೆಂಬ ಅಚ್ಚರಿಯೆ

ಬಿಸಿಲು ಬಿರಿದಷ್ಟೂ ಬಿರಿದರಳುತ್ತಿದೆ ಮಲ್ಲಿಗೆ
ಬಿಸಿಲೇ ಪರಿಮಳಿಸಿ ತಂಪಿಡುವ ಏಪ್ರಿಲ್‌
ಸದರವೇ? ಹೊತ್ತುರಿವ ಸುತ್ತಲಲಿ
ಸ್ನಿಗ್ಧ ಗಂಧದಂತರಳುವುದು? ಬಾಬಾ
ನೀನೆಂಬ ಭಿತ್ತಿ ಎಷ್ಟುಂಡರೂ ಮುಗಿಯದ ಬುತ್ತಿ

ಸೋತೆನೆಂದಾಗ, ಕಣ್ಣಂಚಿನ ಹನಿ ಹಿಡಿದು
ದದ್ದರಿಸಿದ ಆತ್ಮಕೆ ಎಳೆಗಾಳಿಸುಳಿಯ ಏಪ್ರಿಲ್‌
ಮರುಹುಟ್ಟಿನ ಜೀವಸುಳಿಯೇ
ಮಧ್ಯರಾತ್ರಿಯ ಒಂಟಿ ದೀಪವೇ
ಬಾಬಾ, ಲೋಕಹಿತದ ತಾಯಿಯೇ
ದಿಕ್ಕು ತೋರುತ್ತಿದೆ ನಿನ್ನ ತೋರುಬೆರಳು.
ತುದಿಯ ಅಂಚಿನಿಂದ ಈಚೆಯನೂ
ಕಾಣುವುದ ಕಲಿಸಿದವನು ನೀನು.

ಕುಡಿವ ನೀರಿಗೆ, ಉಣುವ ತುತ್ತಿಗೆ
ಇರುವ ಸೂರಿಗೆ ನೆಲೆಗೆಟ್ಟರೂ ಕೆಡದ
ಬಿರುಗಾಳಿ ಮಳೆಗಳ ಏಪ್ರಿಲ್‌ ಮರವೇ
ಬೆಂಕಿ ಕುಂಡದಲಿ ನಿಂತೂ
ಜುಮುರು ಮಳೆ ಕನಸ ಬಿತ್ತಿದವನೇ
ಬಾಬಾ, ಕತ್ತಲ ಕಾಳಗಪ್ಪಿನ ಕಾರುಣ್ಯದ ಬೆಳಕೇ

ಶರಣು ಬಂದೆ ತಂದೆ
ಶರಣಂ ಗಚ್ಛಾಮಿ, ಶರಣಂ ಗಚ್ಚಾಮಿ
ನಡೆಗೆಡದ ನಡೆಗಲಿಸು
ನೀಲ ನಭವೇ

‍ಲೇಖಕರು Admin

14 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading