ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೇಮದ ಒಳದನಿ..

– ಪ್ರಶಾಂತ್ ಬೆಳತೂರು 

ನೀವು..ಮತ್ತೂ… ಈ..ಪ್ರೇಮ”

ಈ ಪ್ರೇಮವೆಂಬುದು
ಮಹಾಕವಿಯೊಬ್ಬ ಬರೆದ
ಅನವಶ್ಯಕ
ವಿವರಣೆಗಳನ್ನೊಳಗೊಂಡ ಮಹಾಕಾದಂಬರಿಯಂತೆ ರಸಹೀನವಾದುದಲ್ಲ..!

ಅದು..!
ಎಲ್ಲೋ..ದೂರದಲ್ಲಿ..!
ಅಜ್ಞಾತವಾಗಿ ಕೂತ
ಅನಾಮಿಕನೊಬ್ಬನ ಎದೆಯಲ್ಲಿ
ತಣ್ಣಗೆ ಹುಟ್ಟಿಕೊಂಡ
ಬಲು ಸೂಕ್ಷ್ಮ ಮತ್ತು ತೀವ್ರ ಮೊನಚುಳ್ಳ
ಆತ್ಮಸಂವೇದನೆಯ
ಗಂಭೀರ ದನಿಯ ಹಿನ್ನೆಲೆಯಲ್ಲಿ
ಹೃದಯದಲ್ಲೊಂದು
ಸಣ್ಣಗೆ ಕಂಪನ ಉಂಟು ಮಾಡಬಲ್ಲ
ಎರಡೇ ಎರಡು ಸಾಲಿನ
ಬಂಡಾಯದ ಬೆಂಕಿಯಂತಹ
ಕಾವ್ಯ ರೂಪಕ..!

ಒಮ್ಮೆಲೇ ಸುಡುವುದಿಲ್ಲ
ನಿಮ್ಮನ್ನು ಅದು
ನಿಧಾನವಾಗಿ ಹೆಜ್ಜೆಯೂರುತ್ತದೆ
ಸಮ್ಮೋಹನಗೊಳಿಸುತ್ತದೆ..!
ಎಷ್ಟೇ ಎಚ್ಚರಿಕೆ ವಹಿಸಿದರೂ
ಕ್ಷಣಾರ್ಧದಲ್ಲಿ ಕಣ್ಮುಂದಿನ
ಹಾದಿಯನ್ನು ಮರೆಸಿ ಬಿಡುತ್ತದೆ..!

ಸರಿಯಾದ
ಒಂದೇ ಒಂದು ವಿಳಾಸವಿಲ್ಲ
ಅದರ ತೆಕ್ಕೆಯೊಳಗೆ
ಗೂಡು ಮರೆತ ಹಕ್ಕಿಯಂತೆ
ಬಯಲ ತುಂಬಾ
ಎಲ್ಲೆಲ್ಲೂ ಹಾರಿ ವಿಹರಿಸುತ್ತಾ
ಆನಂದದಲ್ಲಿ
ತೇಲಿಸುತ್ತದೆ
ನೀವು ಕಾಣದಿರುವ
ಹೊಸ ಭ್ರಮಾ ಲೋಕಗಳಲ್ಲಿ
ಮಿಂಚಿನ ಸಂಚಲನ ಸೃಷ್ಟಿಸಿ
ಕಣ್ಣನ್ನು ಕುರುಡಾಗಿಸುತ್ತದೆ..!

ಅಚ್ಚರಿಯೇನಿಸುವುದಿಲ್ಲ
ಯಾರೊಬ್ಬರಿಗೂ
ಎದೆಗೂಡಿನಲ್ಲಿ
ನೂರಾರು ಕನಸುಗಳಿಗೆ
ಮೊಟ್ಟೆಯಿಟ್ಟು ಮರಿ ಮಾಡುವಾಗ
ಆದರೆ
ಎಷ್ಟು ಕಾಲ
ಹೀಗೆ ಕನಸಿನಲ್ಲಿ ಹಾರುವಿರಿ?
ಹಾರುವ ರೆಕ್ಕೆಗಂಟಿಕೊಂಡೇ
ಬೆನ್ನೇರಿರುತ್ತದೆ
ಒಂದು ಸಣ್ಣ ಆತಂಕ
ಅಥವಾ
ಬಿರುಕು ಮೂಡಿಸುವ
ನಿಮ್ಮದೇ ನೆರಳುಗಳ ಛಾಯೆ..!

ತತ್ ಕ್ಷಣ
ಪ್ರೇಮದ ಕನಸುಗಳಿಂದ
ನಿಜಕ್ಕೂ ಎಚ್ಚರವಾಗುತ್ತೀರಿ..!
ಆರಂಭದಲ್ಲಿ
ಕಣ್ಣೀರು ಹಾಕುತ್ತಾ
ಕೂಗಾಡುತ್ತೀರಿ
ವಾಗ್ವಾದಗಳಲ್ಲಿ
ಗುದ್ದಾಡುತ್ತಾ ಜಿದ್ದಿಗೆ ಬಿದ್ದಂತೆ
ವರ್ತಿಸುತ್ತೀರಿ
ದನಿಯೆತ್ತುವುದನ್ನು ಕಲಿಯುತ್ತೀರಿ
ಪ್ರತಿಭಟಿಸುತ್ತೀರಿ..!

ಆದರೆ ವಿಪರ್ಯಾಸ..!
ಕಾಲ ಸರಿದಂತೆಲ್ಲಾ
ತಣ್ಣಾಗುಗುತ್ತೀರಿ
ತುಂಬಾ ಆಳದಲ್ಲಿ ಬಿದ್ದಿರುತ್ತೀರಿ
ಮೌನವಾಗುತ್ತೀರಿ
ಕೊನೆಗೊಮ್ಮೆ
ಗಂಭೀರವಾಗಿ
ಏಕಾಂತದ ಸಂಜೆಗಳಲ್ಲಿ
ಸುಖಾಸುಮ್ಮನೆ
ತಾವೊಬ್ಬರೇ ತಮ್ಮಷ್ಟಕ್ಕೆ ತಾವೇ
ಕಳೆದು ಹೋಗುತ್ತೀರಿ…!

ಧಾವಂತವಿಲ್ಲ
ನಿಮಗೆ ಬದುಕಿನಲ್ಲಿ
ಗುನುಗುತ್ತದೆ ಕಿವಿಗಳಿಗೆ
ಶೋಕದಲ್ಲೂ ನೆಮ್ಮದಿ ತರಬಲ್ಲ
ಮಹಮ್ಮದ್ ರಫಿ
ಕಿಶೋರ್ ಕುಮಾರ್ , ಮುಖೇಶ್ ಮನ್ನಾಡೇಯ
ಯಾವೊದಾದರೊಂದು
ಹಳೆಯ ಹಾಡು..!

ಕೂತುಬಿಡುತ್ತೀರಿ
ಪ್ರೇಮದ ಹರಿವಿನಲ್ಲಿ
ಮುಗುಳ್ನಗುವ ಬುಧ್ಧನಂತೆ
ಆಗ ನಿಜಕ್ಕೂ ಕೇಳಿಸುತ್ತದೆ
ಪ್ರೇಮದ ಒಳದನಿ
ಪಿಸುಗುಡುತ್ತೀರಿ
ನೀವು ಕೂಡ ಅದರೊಟ್ಟಿಗೆ
ಬೆಂಕಿಯನ್ನು ಬೆಳಕಾಗಿಸಿಕೊಂಡ
ಕಲಾತ್ಮಕ
ಕವಿತೆಯೊಂದರ ಹಾಗೆ…!

‍ಲೇಖಕರು Admin

15 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading