ಡಾ. ಪ್ರೇಮಲತಾ ಬಿ ಅವರ ಕೃತಿ ‘ಒಡಲು ಮತ್ತು ಸೃಷ್ಟಿ’
ಈ ಕೃತಿಯನ್ನು ‘ಪರಿಚಯ ಪ್ರಕಾಶನ’ ಪ್ರಕಟಿಸಿದೆ.
ಈ ಕೃತಿಗೆ ವಸುಂಧರಾ ಭೂಪತಿ ಅವರು ಬರೆದ ಮುನ್ನುಡಿ ಇಲ್ಲಿದೆ.
–ಡಾ ವಸುಂಧರಾ ಭೂಪತಿ
ಬಸವಣ್ಣನವರು ‘ದೇಹವೇ ದೇಗುಲ’ ಎಂದರೆ ಮುಕ್ತಾಯಕ್ತ ‘ಕಾಯ (ದೇಹ)ವೇ ಕೈಲಾಸವೆಂದ ಮೇಲೆ, ಮತ್ತೆ ಕೈಲಾಸವುಂಟೆ? ‘ ಎಂದಿದ್ದಾರೆ. ಹನ್ನೆರಡನೇ ಶತಮಾನದಲ್ಲಿಯೇ ಕಾಯದ ಮಹತ್ವದ ಬಗ್ಗೆ ಅರಿವು ಮೂಡಿಸಿದ ದೇಶ ನಮ್ಮದು. ಆದರೆ ಮುಟ್ಟು, ಸಂತಾನೋತ್ಪತ್ತಿ, ಲೈಂಗಿಕತೆ ಕುರಿತು ಮುಕ್ತ ಮಾತುಕತೆಗೆ ಜಾಗತೀಕರಣದ ಈ ಯುಗದಲ್ಲಿಯೂ ಮಹಿಳೆಯರು ತೆರೆದುಕೊಂಡಿಲ್ಲವೆನ್ನುವುದು ಕಹಿ ಸತ್ಯ. ಇವೆಲ್ಲವುಗಳನ್ನು ಮಡಿವಂತಿಕೆಯ ಗಡಿಗಳಲ್ಲಿ ಬಂಧಿಸಲಾಗಿದೆ.
ಸರಾಸರಿ 70 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಮಹಿಳೆಯರು ಸರಿ ಸುಮಾರು ಅರ್ಥ ವಯಸ್ಸಿನಷ್ಟು ಕಾಲ ಮುಟ್ಟನ್ನು ಅನುಭವಿಸುತ್ತಾರೆ. ಮುಟ್ಟಿಗೆ ಸಂಬಂಧಿಸಿದ ಸಾಂಸ್ಕøತಿಕ, ಸಾಂಪ್ರದಾಯಿಕ ನಂಬಿಕೆಗಳ ಪರಿಣಾಮವಾಗಿ ಹೇರಲ್ಪಡುವ ನಿರ್ಬಂಧಗಳು/ನಿಷೇಧಗಳಿಂದಾಗಿ ಬಹುತೇಕ ಹುಡುಗಿಯರು ಮತ್ತು ಮಹಿಳೆಯರಲ್ಲಿ ʼಮುಟ್ಟುʼ ಒಂದು ಬೇಡದ ಪ್ರಕ್ರಿಯೆ ಎಂಬಷ್ಟರಮಟ್ಟಿಗೆ ಜಿಗುಪ್ಸೆ ಮೂಡಿಸಿದೆ. ವಿಭಿನ್ನ ಸಂಸ್ಕøತಿ, ಜಾತಿ, ಸಮುದಾಯಗಳು ವಿಭಿನ್ನ ಪ್ರದೇಶಗಳಲ್ಲಿ ಮುಟ್ಟನ್ನು ಭಿನ್ನ ಭಿನ್ನ ದೃಷ್ಟಿಕೋನಗಳಿಂದ ಪರಿಗಣಿಸುತ್ತವೆ. ವಿಜ್ಞಾನ – ತಂತ್ರಜ್ಞಾನಗಳು ಎಷ್ಟೇ ಮುಂದುವರಿದರೂ ಮುಟ್ಟಿನ ಸಮಸ್ಯೆಗಳಲ್ಲಿ ಮಾತ್ರ ಬದಲಾವಣೆಗಳು ಆಮೆಗತಿಯಲ್ಲಿ ಸಾಗಿವೆ.
ಮನುಷ್ಯ ಸಂತತಿಯನ್ನು ಬೆಳೆಸುವ ಸಲುವಾಗಿ ಮಹಿಳೆಯ ದೇಹದಲ್ಲಿ ಋರುಚಕ್ರ ನಡೆಯುತ್ತದೆ. ಈ ಜೈವಿಕ ಕ್ರಿಯೆಯನ್ನು ಅಪವಿತ್ರ, ಹೊಲೆ, ಮುಟ್ಟೆನು ಎಂದೆಲ್ಲ ದೂಷಿಸುವ ಮೌಡ್ಯ ಪರಂಪರೆಯನ್ನು ಇಂದಿಗೂ ಸಮಾಜ ಮುಂದುವರೆಸುತ್ತಿದೆ. ಇತ್ತಿಚೆಗೆ ತಮಿಳುನಾಡಿನ ಕೊಯಮತ್ತೂರಿನ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಮುಟ್ಟಾಗಿದ್ದಾಳೆಂದು ಅವಳನ್ನು ಪರೀಕ್ಷೆಯ ಹಾಲಿನಲ್ಲಿ ಕೂಡಿಸದೇ ಹೊರಗೆ ಮೆಟ್ಟಿಲ ಮೇಲೆ ಕುಳ್ಳಿರಿಸಿ ಪರೀಕ್ಷೆ ಬರೆಸಿರುವುದು ವರದಿಯಾಗಿದೆ. ಇದು ಇಂದಿನ ಸಾಮಾಜಿಕ ವ್ಯವಸ್ಥೆಯ ಸಂಕೀರ್ಣ ಆಯಾಮವನ್ನು ತೆರೆದಿಡುತ್ತದೆ. ಶಿಕ್ಷಣ ಮತ್ತು ವೈಚಾರಿಕ ಮನೋಧರ್ಮ ಒಂದಾಗಿ ಸಾಗುವುದು ಕಷ್ಟವಾಗುತ್ತಿರುವುದಕ್ಕೆ ಸಾಕ್ಷಿಯಿದು. ಜೀವಸೃಷ್ಠಿಯ ಚೈತನ್ಯವಾದ ಋತುಸ್ರಾವ ಅಪವಿತ್ರ ಎನಿಸಲು ಹೇಗೆ ಸಾಧ್ಯ?
ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಮುಟ್ಟು, ಹೆರಿಗೆಗಳ ಸಂದರ್ಭದಲ್ಲಿ ಪ್ರತ್ಯೇಕ ʼಗುಡ್ಲುʼ ಎಂದು ಕರೆಯಲಾಗುವ ಹಂದಿಗೂಡಿನಂತಹ ಸ್ಥಳದಲ್ಲಿ ಯಾತನೆಗೊಳಪಡಿಸುವ ಕ್ರೌರ್ಯ ನಡೆಯುತ್ತದೆ. ಇದು ನಾಗರಿಕ ಸಮಾಜದ ಘನತೆಯ ಕಾರ್ಯವೇ? ಸಮಾಜದ ಎಲ್ಲ ಸ್ತರಗಳಲ್ಲಿ ಆಳವಾಗಿ ಬೇರುಬಿಟ್ಟ ಹೆಣ್ಣನ್ನು ʼಹೊಲೆʼಯಾಗಿಸುವ ಮನಸ್ಥಿತಿ ಮೀರುವುದು ಬಹುತೇಕರಿಗೆ ಇಂದಿಗೂ ಸಾಧ್ಯವಾಗಿಲ್ಲ. ಬಾಹ್ಯ ಪ್ರಪಂಚದಲ್ಲಿ ಆತ್ಯಾಧುನಿಕರೆನಿಸಿಕೊಂಡ ಮಹಿಳೆಯರು, ವಿದ್ಯಾವಂತರೆನಿಸಿಕೊಂಡವರೂ, ಮುಟ್ಟಿನ ದಿನಗಳಲ್ಲಿ ತಮ್ಮ ಮನೆಯ ದೇವರ ಕೋಣೆಗಳಿಂದ ದೂರವಿರುವುದು, ಧಾರ್ಮಿಕ ಕಾರ್ಯಗಳನ್ನು ಮಾಡದಿರುವುದು, ದೇವಸ್ಥಾನಗಳಿಗೆ ಪ್ರವೇಶಿಸದಿರುವುದು ಅತ್ಯಂತ ಸಾಮಾನ್ಯ ನಡೆಗಳಾಗಿವೆ.
ಮುಟಚಟ್ಟಿನೊಳು ಬಂದು ಮುಟ್ಟಿ ತಟ್ಟಿ ಅನ್ನತೀದಿ
ಮುಟಚಟ್ಟು ಯಾವಲ್ಯದ ಹೇಳಣ್ಣಾ
— ಕಡಕೋಳ ಮಡಿವಾಳಪ್ಪ
ಹೀಗೆಂದು ನಿಷ್ಕರ್ಷೆಯ ವಿಚಾರವರ್ಗವನ್ನು ತೋರಿದರು, ವೈಚಾರಿಕತೆಯ ಬೀಜವನ್ನು ಬಿತ್ತುವ ಶಿಕ್ಷಣವಲಯವೇ ಮೌಢ್ಯದ ನೆಲೆಯಾಗುತ್ತಿರುವುದು ಆತಂಕ ಮೂಡಿಸಿದೆ. ಭಾರತೀಯ ಪರಂಪರೆ ಮುಟ್ಟನ್ನು ಮೈಲಿಗೆಯಾಗಿ ಮಾತ್ರ ನೋಡಿಲ್ಲ. ಹುಡುಗಿ ಮೈನೆರೆದಾಗ ನಡೆಸುವ ಆಚರಣೆ ಮತ್ತು ಉಪಚಾರಗಳಲ್ಲಿ ಮುಂದಿನ ಜೀವ ಸೃಷ್ಠಿಗೆ ಅಗತ್ಯವಾದ ಸಾಮರ್ಥ್ಯ ಉಂಟುಮಾಡುವ ವಿಚಾರಗಳಿವೆ. ಹೊಲದ ಬಿತ್ತನೆ, ಲಜ್ಜಾ ಗೌರಿಯ ಆರಾಧನೆ, ಅಸ್ಸಾಂನ ಗೌಹಾಟಿಯ ಕೌಮಾಕ್ಯ ದೇವಸ್ಥಾನದಲ್ಲಿ ಮುಟ್ಟಾದ ಹೆಣ್ಣನ್ನು ಪೂಜಿಸುವ ಆಚರಣೆ ಹೀಗೆ ಹಲವು ಉದಾಹರಣೆಗಳಿವೆ. ಆದರೆ ಬಹುತ್ವದ ಈ ಚಿಂತನೆಗಳನ್ನು ಹಿಂದಿಟ್ಟು ಮಹಿಳೆಯನ್ನು ಕೀಳುಗೆಳೆಯಲು ಬಳಸುವ ಅಸ್ತ್ರವಾಗಿ ʼಮುಟ್ಟುʼ ಬಳಕೆಯಾಗುತ್ತಿದೆ.

ʼಹೆಣ್ಣು ಎನ್ನುವ ಮಾತು, ತಾಯಿ ಎಂಬ ಮಾತು ಎರಡಲ್ಲ ಒಂದೇʼ ಎಂಬ ಬೇಂದ್ರೆಯವರ ಅಕ್ಕರೆಯ ಸಕ್ಕರೆಯ ನುಡಿಯಂತೆ ‘ಒಡಲು ಮತ್ತು ಸೃಷ್ಟಿ’ ಕೃತಿಯಲ್ಲಿ ದಂತವೈದ್ಯೆ, ಲೇಖಕಿ ಡಾ. ಪ್ರೇಮಲತಾ ಬಿ ಅವರು ಮಹಿಳೆಯ ದೈಹಿಕ, ಮಾನಸಿಕ ಆರೋಗ್ಯವನ್ನು ಸಮಗ್ರವಾಗಿ ಚಿತ್ರಿಸಿದ್ದಾರೆ. ಮಹಿಳೆಯ ದೇಹ ಮತ್ತು ಮನಸ್ಸು ಸಂಕೀರ್ಣ ಎಂಬ ಮಾತು ತಿಳಿದದ್ದೇ ಆದರೂ. ವೈಜ್ಞಾನಿಕವಾಗಿ ಅರ್ಥೈಸಿಕೊಂಡರೆ ಸರಳ ಮತ್ತು ಮನೋಹರ ಎಂಬುವುದನ್ನು ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ಒಂಭತ್ತು – ಹತ್ತು ವರ್ಷಗಳಲ್ಲಿ ಹುಡುಗಿಯವರು ಋತುಮತಿರಾಗುತ್ತಿರುವ ಇಂದಿನ ದಿನಗಳಲ್ಲಿ ಅಮ್ಮಂದಿರಿಗೆ ಸೂಕ್ತ ತಿಳುವಳಿಕೆ ನೀಡುವ ಕೈಪಿಡಿಯಾಗಿದೆ.
ಈಗಾಗಲೇ ಕಥಾಸಂಕಲನಗಳು, ಕವನ, ಅಂಕಣಗಳ ಮೂಲಕ ಕನ್ನಡದ ಓದುಗರಿಗೆ ಪರಿಚಿತರಾಗಿರುವ ಪ್ರೇಮಲತಾ, ಪೂರ್ವ ಮತ್ತು ಪಶ್ಚಿಮ ದೇಶಗಳ ಜನಜೀವನವನ್ನು ಕಣ್ಣಾರೆ ಕಂಡು ತುಲಾನಾತ್ಮಕ ದೃಷ್ಟಿಕೋನದಿಂದ ‘ಒಡಲು ಮತ್ತು ಸೃಷ್ಟಿ’ಎಂಬ ಈ ಕೃತಿಯನ್ನು ರಚಿಸಿದ್ದಾರೆ. ಮುಟ್ಟು ಮತ್ತು ಅದರ ಸುತ್ತಲೂ ಆವರಿಸಿರುವ ಮುಷ್ಠಿಗಳನ್ನು ಛಿಧ್ರಗೊಳಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಉದ್ಯೋಗ ಸ್ಥಳಗಳಲ್ಲಿ ಮುಟ್ಟಿನ ರಜೆ ನೀಡುವ ಕುರಿತು ವಿವಾದತ್ಮಕ ಚಿಂತನೆಗಳು ನಡೆಯುತ್ತಿವೆ. ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಸೇರಿದಂತೆ ಹಲವಾರು ದೇಶಗಳಲ್ಲಿ ಮುಟ್ಟಿನ ರಜೆ ಸೌಲಭ್ಯವನ್ನು ಅನುಷ್ಠಾನಗೊಳಿಸಿವೆ. ಮುಟ್ಟಿನ ರಜೆ ಅದೆಷ್ಟು ಅಗತ್ಯ ಎಂಬುದರ ಕುರಿತು ಲೇಖಕಿ ಚಿಂತನೆಗೆ ಹಚ್ಚಿದ್ದಾರೆ.
ಕಾಯವೆಂಬ ಕದಳಿಯ ಹೊಕ್ಕು ರಸ ರುಧಿರ ಮಾಂಸ ಮಜ್ಜೆ ಮಿದುಳು ಅಸ್ತಿ ಶುಕ್ಲ ಈ ಸಪ್ತಧಾತುಗಳ ಸಂಚವ ತಿಳಿದು ಮತ್ತೆ ಮನ ಪವನ ಬಿಂದುವನೊಡಗೂಡಿ ಉತ್ತರಕ್ಕೇರಿ ನೋಡಲು ಬಟ್ಟಬಯಲಾಯಿತ್ತು; ಆ ಬಯಲಲ್ಲಿ ನಿಂದು, ನಿರಾಳದೊಳಗಾಡಿ ಮಹಾಬೆಳಗನೆ ಕೂಡಿನಾ ನಿಜಮುಕ್ತಳಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
——– ಹಡಪದಪ್ಪಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅನಾಟಮಿ, ಫಿಸಿಯಾಲಜಿ ಗಂಧಗಾಳಿಯೂ ಇಲ್ಲದ ಕಾಲದಲ್ಲಿಯೇ ದೇಹದ ಧಾತುಗಳ ಬಗ್ಗೆ ಸ್ಪಷ್ಟ ತಿಳಿವಳಿಕೆಯನ್ನು ಲಿಂಗಮ್ಮನವರು ನೀಡಿದ್ದು ಅತ್ಯಾಶ್ಚರ್ಯಕರ ಸಂಗತಿ. ಇಂತಹ ಕಾಯದ ಬಗ್ಗೆ ದೇಹದ ರಸದೂತಗಳ ಲೀಲೆಯಿಂದಾಗಿ ಹದಿಹರೆಯದಲ್ಲಿ ಆಕರ್ಷಣೆ ಪ್ರೀತಿ ಸ್ವಾಭಾವಿಕ ವಿಚಾರಗಳು ಎಂಬುದನ್ನು ಲೇಖಕಿ ವಿವರಿಸಿದ್ದಾರೆ. ಹರೆಯದಲ್ಲಿ ರೂಪು, ಎತ್ತರ, ಬಣ್ಣ ಇವುಗಳ ಬಗೆಗಿನ ಕೀಳರಿಮೆ ಅದರಲ್ಲೂ ಸ್ತನಗಳ ಆಕಾರ, ಗಾತ್ರಗಳ ಬಗ್ಗೆ ಚಿಂತೆಗೀಡಾಗುವ ಹುಡುಗಿಯರಿಗೆ ಕಿವಿಮಾತು ಹೇಳಿ ಕೀಳಿರಿಮೆಯಿಂದ ಹೊರಬರುವ ದಾರಿಯನ್ನು ಸೂಚಿಸಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಮಹಿಳೆಯರಲ್ಲಿ ಹಸ್ತಮೈಥುನದ ಬಗ್ಗೆ ಚರ್ಚಿಸಿದ್ದಾರೆ. ಬಹುತೇಕ ಮಹಿಳೆಯರು ನಲವತ್ತು, ಐವತ್ತು ವರ್ಷಗಳ ದಾಂಪತ್ಯ ಜೀವನ ನಡೆಸಿಯೂ ಲೈಂಗಿಕ ತೃಪ್ತಿ ಅನುಭವಿಸಿರುವುದಿಲ್ಲ. ಹಸ್ತಮೈಥುನದ ಕುರಿತು ಹಲವು ಮೂಢನಂಬಿಕೆಗಳು ಸಮಾಜದಲ್ಲಿವೆ. ಅದೆಲ್ಲದಕ್ಕೂ ಬ್ರೇಕ್ ಹಾಕಿದಂತೆ ಈ ಕೃತಿಯಲ್ಲಿ ವಿಶ್ಲೇಷಣೆ ನೀಡಲಾಗಿದೆ.
ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಗರ್ಭಕಂಠದ ಕ್ಯಾನ್ಸರ್, ಸ್ತನಕ್ಯಾನ್ಸರ್‍ಗಳ ಬಗ್ಗೆಮಾಹಿತಿ ನೀಡುತ್ತಲೇ ಕ್ಯಾನ್ಸರ್ ತಡೆಗಟ್ಟುವ ಲಸಿಕೆಯ ಬಗ್ಗೆ ತಿಳಿಸಿದ್ದಾರೆ. ಲೈಗಿಂಕ ಕಾಯಿಲೆಗಳು ಬಾರದಂತೆ ತಡೆಗಟ್ಟುವ ಕ್ರಮಗಳು, ಜನನಾಂಗಗಳ ನೈರ್ಮಲ್ಯ ಪ್ರತಿ ಮಹಿಳೆಗಾಗಿ ಅದೆಷ್ಟು ಮುಖ್ಯ ಎಂಬುದನ್ನು ಲೇಖಕಿ ತಿಳಿಸಿದ್ದಾರೆ. ಋತುಬಂಧದ ಸಮಯದಲ್ಲಿ ಉಂಟಾಗುವ ಬದಲಾವಣೆಗಳು, ನಿರ್ವಹಿಸುವ ರೀತಿ-ನೀತಿಗಳ ಬಗ್ಗೆ ಸಲಹೆ ನೀಡಿದ್ದಾರೆ. ‘ಒಡಲು ಮತ್ತು ಸೃಷ್ಟಿ’ಯ ಕೊನೆಯ ಅಧ್ಯಾಯ ʼಮಹಿಳೆ ಮತ್ತು ವಿರಾಮʼ ಮುಕುಟಪ್ರಾಯವಾಗಿದೆ. ಮಹಿಳೆಗೆ ವಿರಾಮ ಸಿಗುವುದೇ ಹೆರಿಗೆ ಮತ್ತು ಸಾವಿನ ಸಂದರ್ಭದಲ್ಲಿ ಎಂಬ ಮಾತಿದೆ. ಆದರೆ ವಿರಾಮ ಎಂಬುದು ʼಕನಸಿನ ಗಂಟೇʼ ಆದರೂ ಅದರಿಂದ ಸಿಗುವ ಆರಾಮ ಮಹಿಳೆಯ ಚೈತನ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬುವುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ವಿರಾಮವೆಂದರೆ ವಿಶ್ರಾಂತಿ ಮಾತ್ರವಲ್ಲ, ವ್ಯಾಯಾಮ, ಹರಟೆ ಹೀಗೆ ಯಾವುದಾದರೂ ಇಷ್ಟವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೆಂಬುವುದನ್ನು ಒತ್ತಿ ಹೇಳಿದ್ದಾರೆ.
ಡಾ. ಪ್ರೇಮಲತಾ ಅವರ ‘ಒಡಲು ಮತ್ತು ಸೃಷ್ಟಿ’ ಕೃತಿ ಮಹಿಳೆಯ ಆರೋಗ್ಯದ ಕುರಿತಾಗಿ ಸಮಗ್ರವಾಗಿ ಮೂಡಿಬಂದಿದೆ. ಸಾಮಾಜಿಕ ಆರೋಗ್ಯದ ಕಾಳಜಿಯೊಂದಿಗೆ ದೇಹ, ಮನಸ್ಸುಗಳ ಆರೋಗ್ಯದ ಸಮಸ್ಥಿತಿ, ಸಮತೋಲನದಲ್ಲಿರಬೇಕೆಂಬುವುದನ್ನು ಸಾರಿ ಹೇಳುತ್ತದೆ. ಇದು ಪ್ರತಿ ಮನೆಯಲ್ಲಿರಬೇಕಾದ ಕೃತಿಯಾಗಿದ್ದು, ಅಮ್ಮನಂತೆ, ಅಕ್ಕನಂತೆ, ಗೆಳತಿಯಂತೆ ಸಮಾಧಾನ ಹೇಳುತ್ತದೆ. ಹೆಣ್ಣಿನ ದೇಹ, ಮನಸ್ಸಿನ ಸ್ಥಿತಿ-ಗತಿಗಳ ಬಗ್ಗೆ ಪುರುಷ ಅರ್ಥೈಸಿಕೊಂಡರೆ ಮಾತ್ರ ಸಾಮಾಜಿಕ ಬದಲಾವಣೆ ಮತ್ತು ಪ್ರಗತಿಗಳು ಸಾಧ್ಯವಾಗುತ್ತವೆ. ಈ ಕಾರಣ ‘ಒಡಲು ಮತ್ತು ಸೃಷ್ಟಿʼ ಮಹಿಳೆಯರು ಮಾತ್ರವಲ್ಲದೇ ಪ್ರತಿ ಪುರುಷನೂ ಓದಲೇಬೇಕಾದ ಕೃತಿಯಾಗಿದೆ.






0 Comments