ನಿರ್ಮಲಾ ಬಟ್ಟಲ ಓದಿದ ‘ನೆಲದ ನಂಟು’

 ಡಾ ನಿರ್ಮಲಾ ಬಟ್ಟಲ

ಹವ್ಯಾಸಿ ಪತ್ರಕರ್ತೆ, ಲೇಖಕಿ ಮಾಲತಿ ಹೆಗಡೆಯವರು ಬರೆದಿರುವ ಲೇಖನ ಸಂಗ್ರಹ ನೆಲದನಂಟು ಕೃಷಿಕರ ಯಶೋಗಾಥೆಯನ್ನು ತಮ್ಮ ಲೇಖನಗಳ ಮೂಲಕ ನಾಡಿನಾದ್ಯಾಂತ ಓದುಗರಿಗೆ ತಲುಪಿಸಿದರು. ಕೃಷಿಯೆಂದರೆ ಮೂಗುಮುರಿಯುವ ಯುವ ಜನರಿಗೆ, ಕೃಷಿಯಲ್ಲಿಯೇ ಸಾಧನೆ ಮಾಡಿ ಎಲೆಮರೆಯ ಕಾಯಿಯಂತಿರುವ ರೈತರನ್ನು, ಮಾದರಿಯಾಗಿ ಯುವ ಜನತೆಗೆ ಪರಿಚಯಿಸಿದ್ದಾರೆ.

ತಮ್ಮ ನಿತ್ಯದ ಕೌಟುಂಬಿಕ ಕಾರ್ಯಚಟುವಟಿಕೆಗಳನ್ನು ಮುಗಿಸಿ ಇಂಥಯ ಕೃಷಿ ಸಾಧಕರನ್ನು ಹುಡುಕಿಕೊಂಡು ಹೊಲಗದ್ದೆಗಳಿಗೆ ಹೋಗಿ ಅವರ ಪರಿಶ್ರಮವನ್ನು ಕಣ್ಣಾರೆ ಕಂಡು ಲೇಖನವಾಗಿಸಿದ್ದಾರೆ. ಒಂದೊಂದು ಲೇಖನವು ಪ್ರೇರಣಾದಾಯಕ ಕಥೆಗಳಾಗಿವೆ. ಒಟ್ಟು ಲೇಖನಗಳನ್ನು ೨ ಭಾಗಗಳನ್ನಾಗಿ ಮಾಡಿದ್ದಾರೆ. ಭಾಗ-೧ ರಲ್ಲಿ ತೋಟಗಳು, ೨೧ ಲೇಖನಗಳನ್ನು ಮತ್ತು ಭಾಗ-೨ ರಲ್ಲಿ ಕೈತೋಟ ೧೪ ಲೇಖನಗಳನ್ನು ಒಳಗೊಂಡಿದೆ.

ಹೊಲಸು ಹಸನಾಗಿ ಹಸಿರಾಯ್ತು ಲೇಖನದಲ್ಲಿ ಕೃಷಿಕನ ಸಾಧನೆ ಭಿನ್ನವಾದುದು. ವಿಭಿನ್ನ ಆಲೋಚನೆಯಿಂದ ಹೊಸಕಾರ್ಯ ಯೋಜನೆಯನ್ನು ಜಾರಿಗೆ ತಂದು ಊರಿಗೆ ಮಾದರಿಯಾದ ದಯಾನಂದನ ಕಥೆ ನಿಜಕ್ಕೂ ಓದುಗರ ಹುಬ್ಬೆರುಸುವಂತೆ ಮಾಡುತ್ತದೆ. ಭತ್ತದ ಮೇಲೆ ಬತ್ತದ ಪ್ರೀತಿ ಲೇಖನವು ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದಾಗ ಕ್ರಷಿ ವಿಜ್ಞಾನಿಗಳಿಗೆ ಪ್ರಾತ್ಯಕ್ಷಿಕೆ ನೀಡಿ ನೈಸರ್ಗಿಕ ಕೃಷಿ ವಿಧಾನಕ್ಕೆ ಮಹತ್ವ ನೀಡಿದರೆ ಮಣ್ಣಿನ ರಕ್ಷಣೆಯನ್ನು ಮಾಡಬಹುದೆನ್ನುವ ಕಳಕಳಿಯ ಕೈಲಾಸಮೂರ್ತಿ ಕೃಷಿ ಸಾಧನೆಯ ಪರಿಚಯವಿದೆ. ಅವರ ಸಾಧನೆಯಲ್ಲಿ ಕ್ರಷಿ ಕ್ಷೇತ್ರಕ್ಕೆ ಒಂದು ಹೊಸ ಸಂದೇಶವಿದೆ.

ಊರಿಗೆ ಗುರುವಾಗಿ ಎಲೆಮರೆ ಕಾಯಾಗಿದ್ದ ಕಶಿ ಕುಶಪ್ಪನನ್ನು ನಾಡಿನ ಜನತೆಗೆ ಪರಿಚಯಿಸಿದ್ದಾರೆ. ರತ್ನಗಿರಿ ಮಾವಿನ ಗಿಡವನ್ನು ಬೆಳೆಯಲು ಇಚ್ಚಿಸಿದ ಕುಶಪ್ಪ ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಕಸಿ ಕೌಶಲ್ಯ ಪ್ರವೀಣನಾಗಿ ವರ್ಷಕ್ಕೆ ನಾಲ್ಕು ಲಕ್ಷ ಸಸಿಗಳನ್ನು ತಯಾರಿಸಿ ಆರ್ಥಿಕವಾಗಿ ಸಬಲರಾಗಿರುವುದಲ್ಲದೇ ಹಳ್ಳಿಯ ಹತ್ತಾರು ಕುಟುಂಬಗಳಿಗೆ ಕಸಿ ಕಟ್ಟುವುದನ್ನು ಕಲಿಸಿಕೊಟ್ಟಿದ್ದಾರೆ. ಅರಣ್ಯ ಇಲಾಖೆಯ ಪ್ರಶಸ್ತಿಗೆ ಭಾಜನರಾದ ಕುಶಪ್ಪನನ್ನು ಪರಿಚಯಿಸಿದ್ದಾರೆ. ಮರ ಆಧಾರಿತ ಕೃಷಿಯಲ್ಲಿ ಭೂಮಿಯನ್ನು ಫಲವತ್ತಾಗಿಸಿ ಸಾವಯವ ಕೃಷಿಯನ್ನು ಮಾಡುತ್ತ ಗ್ರಾಮಚೇತನ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ ಮಾದರಿಯಾದ ಬಸವನಗೌಡರನ್ನು ಪರಿಚಯಿಸಿದ್ದಾರೆ.

ಮಿಶ್ರ ಬೆಳೆಗಳನ್ನು ಬೆಳೆದು ಯಶಸ್ವಿ ಕೃಷಿಕನಾದ ಮಲ್ಲಿಕಾರ್ಜುನ ಕಥೆ ಮಳೆಯಾಧಾರಿತ ಕೃಷಿ ಭೂಮಿಯಲ್ಲಿ ಹಿಂಗಾರು ಮುಂಗಾರು ಬೆಳೆಗಳ ನಡುವೆ ಈರುಳ್ಳಿ, ಮೆಣಸಿನಕಾಯಿಗಳನ್ನು ಬೆಳೆಯುತ್ತಾರೆ. ದನಕರುಗಳನ್ನು ಕಟ್ಟಿಕೊಂಡು ಕೃಷಿ ಬದುಕಿನಲ್ಲಿ ಸಂತೃಪ್ತಿ ಕಂಡುಕೊಂಡ ಮಲ್ಲಿಕಾರ್ಜುನ ಅವರ ಕೃಷಿ ಜಾಣ್ಮೆಯಿಂದ ಕೂಡಿದೆ. ಬಯಲು ಸೀಮೆ ರೈತರದು ಒಂದು ಬಗೆಯ ಕಥೆಯಾದರೆ ಮಲೆನಾಡಿನ ಕೃಷಿಕರದು ಇನ್ನೊಂದು ಪಾಡು. ಕೃಷಿಯನ್ನೇ ಬದುಕಿನ ಶ್ರದ್ಧಾ ಕೇಂದ್ರವಾಗಿಸಿಕೊಂಡು ಆಹಾರ ಸ್ವಾವಲಂಬನೆಯನ್ನು ಸಾಧಿಸಿದ ಗಣಪತಿ ಹೆಗಡೆಯವರದೊಂದು ಪ್ರೇರಣಾತ್ಮಕ ಕಥೆ. ಗುಲಾಬಿ ಹೂಗಳನ್ನು ಬೆಳೆದು ನಿತ್ಯ ಆದಾಯ ಕಂಡುಕೊಂಡ ಉತ್ಸಾಹಿ ಕೃಷಿಕ ಮಂಜುನಾಥ ಕಲಕುಂಡಿಯವರ ಕೃಷಿ ಚಟುವಟಿಕೆಗಳನ್ನು ಪರಿಚಯಿಸಿದ್ದಾರೆ.

ಭಾರಿ ಹುಳಗಳು, ಭರ್ಜರಿ ಆದಾಯ ಎನ್ನುವ ಲೇಖನದಲ್ಲಿ ಸಹೋದರರಿಬ್ಬರು ರೇಷ್ಮೆ ಕೃಷಿ ಎರೆಹುಳ ಗೊಬ್ಬರ ತಯಾರಿಕೆಯಲ್ಲಿ ಮಾಡಿದ ಸಾಧನೆಯನ್ನು ಪರಿಚಯಿಸಿದ್ದಾರೆ.

ಬೆಳ್ಳಿಗಟ್ಟಿಯ ಮಾವಿಗೆ ಬೆಲ್ಲದ ಸವಿ ಎನ್ನುವ ಲೇಖನದಲ್ಲಿ ಕೃಷಿಯನ್ನು ಸತ್ಯಶುದ್ಧ ಕಾಯಕ ಎಂದು ನಂಬಿದ ರಾಜಕಾರಣಿ ಚಂದ್ರಕಾಂತ ಬೆಲ್ಲದ ಅವರ ಕೃಷಿ ಪ್ರೀತಿಯನ್ನು ಪರಿಚಯಿದ್ದಾರೆ.

ಭೂ ಸಂಪತ್ತು ಗೋಸಂಪತ್ತು ಎನ್ನುವ ಲೇಖನವು ಕಮಲಮ್ಮ ನಾಗಪ್ಪ ದಂಪತಿಗಳು ಹುಲ್ಲು ಬೆಳೆದು ಆದಾಯ ಗಳಿಸಿದ ಎರೆಗೊಬ್ಬರ ತಯಾರಿಸಿ ಆದಾಯ ಗಳಿಸುವುದರ ಜೊತೆಗೆ ಮಾದರಿ ತೋಟವನ್ನು ನಿರ್ಮಿಸಿದ್ದಾರೆ.

ಕಾನನ ತೋಟದ ರೂವಾರಿ ಎನ್ನುವ ಲೇಖನವು ಸ್ತ್ರೀರೋಗ ತಜ್ಞ ಡಾ. ಸಂಜೀವ ಮತ್ತವರ ಪತ್ನಿಯ ಕಾನನ ಪ್ರೀತಿಯು ತೋಟದಲ್ಲಿ ಹಸಿರಾಗಿದ್ದರ ವಿವರಣೆ ಇದೆ.

ʼನಡಕಟ್ಟಿ ಫಾರ್ಮʼ ಹಸಿರಿನ ಉದ್ಯಮ ಲೇಖನವು ದೇಶದಾದ್ಯಂತ ಸಿಗುವ ಹಲವು ತಳಿಗಳ ಗುಣಮಟ್ಟದ ಸಸ್ಯಗಳನ್ನು ಸ್ಥಳೀಯವಾಗಿ ಗ್ರಾಹಕರಿಗೆ ತಲುಪಿಸುವುದರ ಜೊತೆಗೆ ಇಪ್ಪತ್ತೊಂದು ಕುಟುಂಬಕ್ಕೆ ಬದುಕಿನ ಭರವಸೆಯಾದ ಸ್ವರ್ಣಲತಾ ಬಸವರಾಜ ನಡಕಟ್ಟಿಯವರ ಯಶೋಗಾಥೆಯಿದೆ.

ಹಣ್ಣಾದ ಜೀವನ ಮಣ್ಣಿನ ಮಾತು ಲೇಖನದಲ್ಲಿ ಸತತ ಪರೀಶ್ರಮದಿಂದ ಹೊಲವನ್ನು ತೋಟವನ್ನಾಗಿ ಮಾಡಿದ ಬಸವಣ್ಣೆಪ್ಪ ಅಂಗಡಿಯವರ ಕಥೆಯಿದೆ.

ಸಾವಿಲ್ಲದ ಸಾವಿ ಸೋಲಿಲ್ಲದ ರೈತ ಎನ್ನುವ ಲೇಖನದಲ್ಲಿ ಸಿರಿಧಾನ್ಯ ಸಾವಕ್ಕಿಯನ್ನು ಬೆಳೆದು ಯಶಸ್ವಿಯಾದ ರೈತ ಶಿವಲಿಂಗಯ್ಯ ಹಿರೇಮಠ ಅವರ ಕಥೆಯಿದೆ. ಹೋಳಿ ಹಬ್ಬಕ್ಕೆ ಪರಿಸರ ಸ್ನೇಹಿ ನೈಸರ್ಗಿಕ ಬಣ್ಣಗಳನ್ನು ತಯಾರಿಸುವ ಕುರಿತು ಮಾಹಿತಿ ಇದೆ.

ಕೈ ತೋಟದಲ್ಲಿ ಹೂ ಗಿಡಗಳನ್ನು ಬೆಳೆಸಿ ಆನಂದಿಸಿದವರು ಹಲವರಾದರೆ, ತರಕಾರಿಗಳನ್ನು ಬೆಳೆದು ಕೈ ತುಂಬಾ ಸಂಪಾದಿಸಿದವರು ಹಲವರು. ಔಷಧಿಯ ಸಸ್ಯಗಳನ್ನು ಮನೆಯಂಗಳದಲ್ಲಿ ಜತನ ಮಾಡಿದವರು ಕೆಲವರಿದ್ದಾರೆ. ಕೈ ತೋಟದ ಸೊಗಸು, ಆಸಕ್ತಿ, ಅಭಿರುಚಿ, ಆದಾಯದ ಮೂಲವಾಗಿ ಮನೋಲ್ಲಾಸದ ಮಾರ್ಗವಾಗಿ ಕಂಡುಕೊಂಡ ಹಲವರ ಪರಿಚಯದ ಲೇಖನಗಳು ಈ ಪುಸ್ತಕದಲ್ಲಿವೆ.

ಈ ಲೇಖನಗಳಿಗೆ ಮಾಹಿತಿಯನ್ನು ಸಂಗ್ರಹಿಸಲು ಮಾಲತಿಯವರು ಕ್ಷೇತ್ರಕಾರ್ಯವನ್ನು ಕೈಗೊಂಡು ವ್ಯಕ್ತಿ ಅಧ್ಯಯನಗಳನ್ನು ಮಾಡಿ ಕೃಷಿ ಸಾಧಕರನ್ನು ಓದುಗರಿಗೆ ಪರಿಚಯಿಸುವ ಮಹತ್ತರವಾದ ಕಾರ್ಯವನ್ನು ಮಾಡಿದ್ದಾರೆ.

ಕೃಷಿಯಲ್ಲಿ ತೊಡಗಿಕೊಂಡು ಪರೀಶ್ರಮ ಪಟ್ಟರೆ ಏನನ್ನಾದರೂ ಸಾಧಿಸಬಹುದು ಎನ್ನುವ ಪ್ರೇರಣೆಯನ್ನು ಪುಸ್ತಕ ನೀಡುತ್ತದೆ.

ನೆಲದ ನಂಟು ಪುಸ್ತಕಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನೀಡುವ ಈ ವರ್ಷದ ೨೦೨೨ರ ಕೃಷಿ ಪುಸ್ತಕ ಪ್ರಶಸ್ತಿ ಲಭಿಸಿದೆ.

‍ಲೇಖಕರು Admin

October 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: