ಕೆರೆಯಂ ಕಟ್ಟಿ ಬದುಕನ್ನೇ ಕೆರೆಗೆ ಹಾರಮಾಡಿದವರು…

ಹೇಮಾ ಹೆಬ್ಬಗೋಡಿ

ʼಊರ ಜನಕ್ಕೆ ಒಳ್ಳೆಯದಾಗಲಿ ಅಂತ ಕೈಲಾದಷ್ಟು ದಿನ ಓಡಾಡಿ ನಮ್ಮೂರ ನಾಲೆಗೆ ನೀರು ಹರಿದು ಬರೋ ಹಾಗೆ ಮಾಡಿದರು. ಕೆರೆ ಅಭಿವೃದ್ಧಿ ಮಾಡಿದರು. ಇವತ್ತು ಕೆರೆ ತುಂಬಿ ನಾಕೂರ ಜನಕ್ಕೆ ಕುಡಿಯಲು, ಬೆಳೆಯಲು ನೀರು ಸಿಗುತ್ತಿದೆ. ಆ ಕೆರೆಯ ಅಂಚಿನಲ್ಲೊಂದು ಅರಳಿ ಸಸಿಯನ್ನು ಅವರ ಹರೆಯದಲ್ಲಿ ನೆಟ್ಟಿದ್ದು. ಈಗ ಬೆಳೆದು ಹೆಮ್ಮರವಾಗಿದೆ. ನಾನೀಗ ಅದೇ ಕಟ್ಟೆಯ ಮೇಲೆ ಕೂತು ಮಾತಾಡ್ತಿದಿನಿ. ಕಟ್ಟೆ ಸ್ವಲ್ಪ ಹಾಳಾಗಿದೆ ಆದಷ್ಟು ಬೇಗ ರಿಪೇರಿ ಮಾಡಿಸಬೇಕುʼ ಅಂತ ಇತ್ತೀಚೆಗಷ್ಟೇ ತೀರಿಕೊಂಡ ತನ್ನ ತಂದೆಯನ್ನು ನೆನಪಿಸಿಕೊಂಡು ಗೆಳೆಯನೊಬ್ಬ ಹೇಳಿದ.

ʼಮರ ನೆಡಬೇಕು. ಹಣ್ಣು, ನೆರಳು ಕೊಡೋಂತಹ ಮರಗಳೇ ಮುಂದಿನ ಪೀಳಿಗೆಗೆ ಕೊಡಬಹುದಾದ ಆಸ್ತಿʼ ಅಂತ ನನ್ನಪ್ಪ ಯಾವಾಗಲೂ ಹೇಳುತ್ತಿರುತ್ತಾರೆ.

ʼಕೆರೆಯಂ ಕಟ್ಟಿಸು ಬಾಯಂ ಸವೆಸು ದೇವಾಗರಂ ಮಾಡಿಸು..ʼ ಎನ್ನುವ ಹಿರಿಯರ ತಿಳಿವಳಿಕೆ ನಮಗಿಂದು ದಾರಿದೀಪವಾಗಬೇಕಾಗಿದೆ. ನದಿ, ಕೆರೆಗಳ ಜಾಗವನ್ನು ಒತ್ತುವರಿ ಮಾಡಿಕೊಂಡು ಬಿಲ್ಡಿಂಗುಗಳನ್ನು ಪೇರಿಸುತ್ತಿರುವ ನಮ್ಮ ನಡುವೆಯೇ ಅಪವಾದವೆಂಬಂತೆ ಕೆರೆ ಕಾಮೇಗೌಡರಂತಹವರು ಬಾಳಿದ್ದರು ಎನ್ನುವುದು ಇನ್ನು ಮುಂದೆ ಕತೆಯಷ್ಟೇ.

ಕೈಲಾದಷ್ಟು ದಿನವೂ ಕುಂದೂರು ಬೆಟ್ಟವನ್ನು ಕೆರೆಗಳ ನೆಲೆವೀಡನ್ನಾಗಿ ಮಾಡಿದ ಕಾಮೇಗೌಡರ ಬದುಕಿನ ಕತೆ ಕರ್ಮಯೋಗಿಯೊಬ್ಬನ ಕತೆಯಂತೆ. ಕುರಿಮೇಯಿಸುತ್ತಿದ್ದ ಸಾಮಾನ್ಯ ವ್ಯಕ್ತಿಯೊಬ್ಬ ಬೆಟ್ಟದ ಮೇಲೆಲ್ಲೂ ಕುಡಿಯಲು ನೀರು ಸಿಗದೆ ಪರದಾಡುವಂತಾದಾಗ ಮನುಷ್ಯನಾದ ತನಗೆ ಇಷ್ಟು ಕಷ್ಟ ಅಂದ್ರೆ ಮೂಕಜೀವಿಗಳಾದ ಪ್ರಾಣಿಗಳ ಕತೆಯೇನು ಎಂದು ಯೋಚಿಸಿದನಂತೆ. ಇನ್ನು ಮುಂದೆ ಅಲ್ಲಿ ನೀರಿಗಾಗಿ ಪ್ರಾಣಿ, ಪಕ್ಷಿಗಳು ಪರದಾಡಬಾರದು ಎಂದುಕೊಂಡು ಕೆರೆ ತೋಡಲು ಆರಂಭಿಸಿದರಂತೆ. ಒಂದು ಕೆರೆಯಿಂದ ಶುರುವಾದ ಕೆಲಸ ಅಲ್ಲಿಗೆ ನಿಲ್ಲದೆ ಹದಿನಾರು ಕೆರೆಗಳಾದವಂತೆ. ಮೊದಮೊದಲು ಯಾರ ಸಹಾಯವೂ ಇಲ್ಲದೆ ಕೋಲಿನಿಂದ ತಮ್ಮಷ್ಟಕ್ಕೆ ಕೆರೆ ತೋಡುತ್ತಾ ಸಾಗಿದರಂತೆ. ತಾವು ಸಾಕುತ್ತಿದ್ದ ಕುರಿಗಳನ್ನೇ ಮಾರಿ ಕೆರೆತೋಡಲು ಸಲಕರಣೆಗಳನ್ನು ಕೊಂಡರಂತೆ. ಕೆರೆಯ ಸುತ್ತ ಗಿಡಗಳನ್ನು ನೆಡುತ್ತಾ ಸದ್ದಿಲ್ಲದೆ ಹಸಿರು ಬೆಳೆಸಿದರಂತೆ. ಸದ್ದಿಲ್ಲದ ಈ ಕಾಯಕ ಜಗತ್ತಿನ ಕಣ್ಣಿಗೆ ಬಿದ್ದು ಸಂದ ಸನ್ಮಾನದ ಹಣವನ್ನು ಇನ್ನಷ್ಟು ಕೆರೆ ಕಟ್ಟಿಸಲು ಬಳಸಿದರಂತೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ.

ತಾವು ಕಟ್ಟಿದ ಕೆರೆಗಳಿಗೆ ತಮ್ಮ ಮಕ್ಕಳು, ಮೊಮ್ಮಕ್ಕಳ ಹೆಸರನ್ನಿಟ್ಟು ಚಂದದ ಉಡುಗೊರೆಯನ್ನು ಅವರ ಕೈಗಿತ್ತು ಸಾಗಿದ್ದಾರೆ. ಯಾವುದೋ ಕಿನ್ನರ ಕತೆಯಂತೆ ಕೇಳಿಸುವ ಈ ಕತೆಯ ನಾಯಕ ಕೆರೆಗಳನ್ನು ಕಟ್ಟಿ ಹಾರವಾಗಿದ್ದಾರೆ.

‍ಲೇಖಕರು Admin

October 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: