ಒಂದು ಹದಿನೈದು ವರ್ಷಗಳ ಹಿಂದೆ…

ವಸಂತ ಶೆಟ್ಟಿ

ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಿ ಹಣ ಮಾಡಲು ಇದ್ದ ಆಯ್ಕೆಗಳು ಎರಡು
1. ಕರ್ನಾಟಕದಲ್ಲಿದ್ದ ಒಂದು ಐನೂರು ಚಿತ್ರ ಮಂದಿರಗಳು
2. ಟಿವಿಯವರು ಸ್ಯಾಟ್ ಲೈಟ್ ರೈಟ್ಸ್ ತೆಗೆದುಕೊಂಡರೆ ಅದರಲ್ಲೊಂದಿಷ್ಟು ಹಣ.
ಇವೆರಡೇ ಆಯ್ಕೆ ಇದ್ದಾಗ ಒಂದು ಸಿನೆಮಾ ಅಬ್ಬಬ್ಬ ಅಂದರೆ ಮೂವತ್ತು ಕೋಟಿ ಸಂಪಾದಿಸಿದರೆ ಅದೇ ದೊಡ್ಡ ಸೂಪರ್ ಹಿಟ್ ಅಂತೆಲ್ಲ ಅನ್ನಿಸಿಕೊಳ್ಳುತ್ತಿತ್ತು.

ಜೊತೆಯಲ್ಲಿ ಡಬ್ಬಿಂಗ್ ಬಿಡಲ್ಲ ಅಂತ ಕೂತಿದ್ದ ಮೂರ್ಖತನದಿಂದ ಕನ್ನಡದ ಒಳ್ಳೊಳ್ಳೆ ಸಿನೆಮಾಗಳು ಚೆನ್ನಾಗಿ ಡಬ್ ಆಗಿ ಬೇರೆ ಭಾಷೆಗೆ ಹೋಗಿ ಅಲ್ಲಿಂದ ಹಣ ಸಂಪಾದಿಸುವ ದಾರಿಯೂ ಅಷ್ಟಾಗಿ ತೆರೆದಿರಲಿಲ್ಲ. ಎಲ್ಲೋ ಒಂದೋ ಎರಡೋ ಉಪೇಂದ್ರ ಸಿನೆಮಾಗಳು ತೆಲುಗಿಗೆ ಹೋಗಿರಬಹುದು. ಇನ್ನೊಂದು ಕಡೆ ಹೊಸ ಪ್ರತಿಭೆಗಳು ಕರ್ನಾಟಕದ ಮೂಲೆ ಮೂಲೆಯಿಂದ ಬೆಂಗಳೂರಿಗೆ ಬಂದು ಎಷ್ಟು ಸೈಕಲ್ ಹೊಡೆದರೂ ಇಲ್ಲಿನ ಮೂರು ಮುಕ್ಕಾಲು ಜನರ ಕೋಟೆಯೊಳಗೆ ಪ್ರವೇಶ ಪಡೆಯಲು ಸಾಧ್ಯವಾಗದೆ ಒದ್ದಾಡುತ್ತಲೇ ಇದ್ದರು.

ಆನಂತರದ ಹದಿನೈದು ವರ್ಷಗಳಲ್ಲಿ ಕೆಲವು ಬದಲಾವಣೆಗಳಾದವು. ಮೊದಲನೆಯದ್ದು ಯುಟ್ಯೂಬ್, ಫೇಸ್ ಬುಕ್, ಟ್ವಿಟರ್ ತರದ ವೇದಿಕೆಗಳು ಹುಟ್ಟಿದ್ದು. ಇವು ಕೂಡಲೇ ಪ್ರತಿಭೆ ಇರುವ ಹೊಸಬರಿಗೆ ತಮ್ಮ ಕೆಲಸವನ್ನು ಒಂದು ಶಾರ್ಟ್ ಫಿಲ್ಮ್ ಮೂಲಕವಾದರೂ ತೋರಿಸಿಕೊಳ್ಳುವ, ಜನರ ನಡುವೆ ಸಣ್ಣದಾಗಿ ಮನ್ನಣೆ ಪಡೆಯುವ ಅವಕಾಶ ಕಲ್ಪಿಸಿದವು.

ಇನ್ನೊಂದೆಡೆ ನೇರವಾಗಿ ಸೋಶಿಯಲ್ ಮಿಡಿಯಾದ ಮೂಲಕ ಜನರೊಡನೆ ಬೆರೆಯುವ ಅವಕಾಶ ಕಲ್ಪಿಸಿದವು. ಇವೆರಡರ ಜೊತೆಯಲ್ಲಿ ಮಲ್ಟಿಪ್ಲೆಕ್ಸ್ ಅನ್ನುವ ಟೆಕ್ನಾಲಜಿ ಅವಲಂಬಿಸಿರುವ, ಚಿತ್ರಮಂದಿರಗಳನ್ನು ಲೀಸಿಗೆ ಹಾಕಿಕೊಂಡು ನಿಯಂತ್ರಿಸುತ್ತಿದ್ದ coterieಯ ಆಚೆಗಿನ ಇನ್ನೊಂದು ವ್ಯವಸ್ಥೆಯೊಂದು ಬಂತು. ಇವುಗಳು ನಿಧಾನಕ್ಕೆ ಹೊಸಬರಿಗೆ ಒಂದು ಸಣ್ಣ ದಾರಿಯನ್ನು ತೆರೆದವು. ಆಗ ಕನ್ನಡದಲ್ಲಿ ಅನೇಕ ಹೊಸಬರು ಚಿತ್ರಗಳನ್ನು ಮಾಡಿ, ಅವು ತಕ್ಕ ಮಟ್ಟಿಗೆ ಹಣ, ಹೆಸರು ಎರಡೂ ಸಂಪಾದಿಸುವ ಬೆಳವಣಿಗೆ ಆಯಿತು.

ಇದೇ ಹೊತ್ತಲ್ಲಿ ಕನ್ನಡದಲ್ಲಿ ಡಬ್ಬಿಂಗ್ ಮೇಲಿನ ನಿಷೇಧ ತೆಗೆಯಲೇಬೇಕು ಎಂದು ಪಣತೊಟ್ಟು ಕೆಲಸ ಮಾಡಿದ ಕನ್ನಡ ಗ್ರಾಹಕರ ಕೂಟದ ತರದ ಸಂಸ್ಥೆಯ ನಿರಂತರ ಪ್ರಯತ್ನಗಳಿಂದ ಕನ್ನಡದಲ್ಲಿದ್ದ ಡಬ್ಬಿಂಗ್ ಬ್ಯಾನ್ ಬಿದ್ದು ಹೋಯಿತು. ಅದು ಒಮ್ಮೆಲೆ ನಮ್ಮ ಚಿತ್ರರಂಗದವರಿಗೂ ತಮ್ಮ ಸಿನೆಮಾಗಳನ್ನು ಡಬ್ಬಿಂಗ್ ಮೂಲಕ ಹೊರಗಡೆಗೆ ಒಯ್ಯಬಹುದು, ಇನ್ನಷ್ಟು ಸಂಪಾದಿಸಬಹುದು ಅನ್ನುವ ನಂಬಿಕೆ ತರತೊಡಗಿತು. ಈ ಬಗ್ಗೆ ಧೈರ್ಯವಾಗಿ ಮಾತನಾಡುವ ಧೈರ್ಯವನ್ನು ಕೊಟ್ಟಿತು. ಕೊನೆಯಲ್ಲಿ ಒಟಿಟಿ ವೇದಿಕೆಗಳು ಜನಪ್ರಿಯಗೊಳ್ಳುತ್ತ, ಕೋವಿಡ್ ಕಾಲದಲ್ಲಿ ಜನರು ಹೆಚ್ಚೆಚ್ಚು ಒಟಿಟಿ ಮೂಲಕ ಕಂಟೆಂಟ್ ನೋಡುವ ಬದಲಾವಣೆ ಆಗುತ್ತ, ಡಬ್ಬಿಂಗ್ ಬ್ಯಾನ್ ಹೋಗಿದ್ದರಿಂದ ದಂಡಿಯಾಗಿ ಒಟಿಟಿಯಲ್ಲಿ ಡಬ್ ಆದ ಕನ್ನಡ ಕಂಟೆಂಟ್ ದೊರೆಯಲು ಆರಂಭಿಸಿದ್ದು, ಹೀಗೆ ಎಲ್ಲವೂ ಸೇರಿ ಒಟಿಟಿ ವೇದಿಕೆಗಳಲ್ಲೂ ಕನ್ನಡದ ಮಾರುಕಟ್ಟೆ ಹಿಗ್ಗತೊಡಗಿತು.

ಇವೆಲ್ಲವೂ ದೊಡ್ಡ ಕ್ಯಾನ್ವಾಸ್ ಅಲ್ಲಿ ಕನಸು ಕಾಣುವ, ದೊಡ್ಡದಾಗಿ ಸಿನೆಮಾ ಮಾಡಬೇಕು ಅನ್ನುವ ಮಹತ್ವಾಕಾಂಕ್ಷೆ ಇದ್ದ ನಟರಿಗೆ ಅವಕಾಶದ ಬಾಗಿಲು ತೆರೆದವು. ಇದರ ಬೆನ್ನಲ್ಲೇ ಕೆ.ಜಿ.ಎಫ್ ಸಂಭವಿಸಿತು. ಅದು ಥಿಯೇಟರ್, ಟಿವಿ ರೈಟ್ಸ್, ಯುಟ್ಯೂಬ್ ಆಡ್ಸ್, ಒಟಿಟಿ ರೈಟ್, ಡಬ್ಬಿಂಗ್ ಟಿವಿ ರೈಟ್ಸ್, ಡಬ್ಬಿಂಗ್ ಆಗಿ ಪರಭಾಷೆಯಲ್ಲಿ ಥಿಯೇಟರ್ ಕಲೆಕ್ಷನ್ ಹೀಗೆ ಎರಡರ ಜಾಗದಲ್ಲಿ ಆರು ಆದಾಯ ಮೂಲಗಳಿಂದ ಕನ್ನಡ ಚಿತ್ರವೊಂದು ಸಂಪಾದಿಸಬಹುದು ಎಂದು ತೋರಿಸಿತು. ಅದು ಮಾಡಿ ಕೊಟ್ಟ ದಾರಿಯನ್ನು ಬಳಸಿ ಚಾರ್ಲಿ, ವಿಕ್ರಾಂತ್ ರೋಣ, ಈಗ ಕಾಂತಾರ ಎಲ್ಲವೂ ನಮ್ಮ ಗಡಿಯ ದಾಟಿ ನುಗ್ಗುತ್ತ ಕನ್ನಡ ಮಾರುಕಟ್ಟೆಯನ್ನು, ಕನ್ನಡ ಚಿತ್ರಗಳ ಬಗೆಗಿನ ಭಾರತದ ಎಲ್ಲೆಡೆಯ perception ಅನ್ನು ದೊಡ್ಡ ಮಟ್ಟದಲ್ಲಿ ಬದಲಾಯಿಸಿದೆ. ಕನ್ನಡದ ನಿರ್ಮಾಣ ಸಂಸ್ಥೆಗಳ ಕೈಯಲ್ಲೂ ನೂರಾರು ಕೋಟಿ ಓಡಾಡುವ ದಿನಗಳು ಬಂದಿವೆ. ಇದರಿಂದ ಕನ್ನಡದಲ್ಲಿ ಕಂಟೆಂಟ್ ಗುಣಮಟ್ಟ ಇನ್ನಷ್ಟು ಎತ್ತರಕ್ಕೆ ಏರುವುದರಲ್ಲಿ ಯಾವ ಅನುಮಾನವೂ ಇಲ್ಲ.

Technology is a leveller ಎಂದು ಅದಕ್ಕೆ ಹೇಳೋದು. ಜೊತೆಯಲ್ಲಿ ಡಬ್ಬಿಂಗ್ ಬ್ಯಾನ್ ಹೋದರೆ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದೇ ಆಗುತ್ತೆ ಅನ್ನುವ ಮಾತುಗಳು ಈಗ ನಿಜವಾಗುತ್ತಿದೆ.

ಸಿನೆಮಾಗಿರುವ ಸಾಫ್ಟ್ ಪವರ್ ಬಳಸಿಕೊಂಡು ಕನ್ನಡಕ್ಕೊಂದು ಸಾಫ್ಟ್ ಪವರ್ ಕೊಡಿಸುವ ಕೆಲಸ ಇನ್ನಷ್ಟು ಚೆನ್ನಾಗಿ ಆಗಲಿ.

‍ಲೇಖಕರು Admin

October 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: