-ದಿಲೀಪ್ ಎನ್ಕೆ
ಹೀಗೇ ಅನಿಕೇತನನೊಟ್ಟಿಗೆ
ಮಾತು ಮಾತ
ತುಪ್ಪಕ್ಕೆಟ್ಟಿ ಎಟ್ಟಿ ತೊಟ್ಟಿಕ್ಕಿಸುವವಗೆ
ನಿಜದ ತುಪ್ಪಕ್ಕಿಂತಲೂ
ಬೆಲೆ ನೋಡಾ
ತುಪ್ಪದಾಟಕೆ ಬೆಪ್ಪರಾದವರೆಷ್ಟೋ
ಬೆಪ್ಪರಾಗಿಸಿದವರ ಬೇಗೆ
ಬಗೆ ಬಗೆಯದು ಕಾಣಾ ಅನಿಕೇತನ
ಮನೆ ಮನಕೆ
ನುಸಿಯೇರಿಸಲು ಕಸಿಯೇ ಬೇಕಿಲ್ಲ
ಹಸಿ ಹಸಿ ಹುಸಿಯೊಂದೇ
ಬೇಕಾದಷ್ಟು
ಹಸಿದವರ ಹೊಸಿಲಲ್ಲಿ ಹುಸಿ
ಉಚ್ಚುವ ತತ್ತಿಗಳಿಗೆ
ಕಾವು ಕೊಡುವ ಕಾಯಗಳೆಷ್ಟೋ ಅನಿಕೇತನ
ಈ ತೊಡೆಯ
ಮೆತ್ತನೆಯ ಹಾಸಿಗೆ ಮೇಲೆ
ಸಾವಿರಕಾಲುಗಳ ಸರಿತ
ಹಿಡಿಯಲೆಂದರೆ ಹಿಂಸೆ
ಹೊಡೆಯಲೆಂದರೆ ಹೊರೆ
ಬಿಟ್ಟರೆ ಪೇಚಾಟ ಕಟ್ಟಿಟ್ಟಂತೆ
ತೊಡೆಯಲಾದೀತೇ ಬಂಧಗಳ ಅನಿಕೇತನ
ಮರನ ಮೆಡರಬಹುದು
ನೆರಳನ್ನಲ್ಲ
ಹೂವ ಕೊಯ್ಯಬಹುದು
ಕಂಪನ್ನಲ್ಲ
ಹಕ್ಕಿಯಿಂಚರವ ಹತ್ತಿಕ್ಕಬಹುದು
ಭಾವವನ್ನಲ್ಲ ನಮ್ಮೆದೆಗಳ
ತುಳಿಯಬಹುದು ಛಲವನ್ನಲ್ಲ ಅನಿಕೇತನ
ಹೂ ಕೆಂದಬೇಕೆಂದಿಲ್ಲ
ಕೆಂದ ಹೂ ಕಾಯಾಗಬೇಕೆಂದಿಲ್ಲ
ಕಾಯಿ ಹಣ್ಣಾಗಬೇಕೆಂದಿಲ್ಲ
ಕಾಲ ರೌದ್ರಾವತಾರಕೆ
ಇಲ್ಲಿ ಬಂಡೆಗೂ ಉಳಿಗಾಲವಿಲ್ಲ
ಗುಡಾಣದೊಳಗಣ ಜ್ಯೋತಿಯ ನಗೆಗೆ
ನಾ ನಗಬೇಡವೇ ಅನಿಕೇತನ
ಪ್ರೀತಿಸು
ಪ್ರೀತಿಸುವೆಯಂತೆ ಗೌರವಿಸು
ಗೌರವಿಸುವಿಯಂತೆ
ಕಟಕಟೆಯಲ್ಲಿ ನಿಲ್ಲಿಸು ನಿಲ್ಲಿಸುವಿಯಂತೆ
ಸರಿ ಮೋಹಿಸಿ ತಪ್ಪ ತಪ್ಪಿಸು
ಮೊದಲು ನಿನ್ನ ನೀ ಗೆಲ್ಲು
ಸೋತು ಸೋತು ಸೋತು ಅನಿಕೇತನ






0 Comments