ಭುವನೇಶ್ವರಿ ಅಂಗಡಿ ಅವರ ಮಕ್ಕಳ ಕಥಾಸಂಕಲನ ‘ಕಿಚನ್ ಲ್ಯಾಬೋರೆಟರಿ’
ಅವ್ವ ಪುಸ್ತಕಾಲಯ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಗಂಗಾ ಚಕ್ರಸಾಲಿ ಅವರ ಬರಹ ಇಲ್ಲಿದೆ.
-ಗಂಗಾ ಚಕ್ರಸಾಲಿ
ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ವಲಯವು ತನ್ನದೇ ಜನಪ್ರೀಯತೆಯನ್ನು ಕಾಪಿಟ್ಟುಕೊಳ್ಳುತ್ತಿದೆ. ಕವನಗಳು, ಕಥೆಗಳು ಮಕ್ಕಳ ಮನಸ್ಸುಗಳನ್ನು ಅರಳಿಸುತ್ತಿವೆ, ಈ ದಿಸೆಯಲ್ಲಿ ಬಹುಮುಖ ಪ್ರತಿಭೆಯ ಯುವ ಬರಹಗಾರ್ತಿ ಭುವನೇಶ್ವರಿ ಅಂಗಡಿಯವರ ಕಿಚನ್ ಲ್ಯಾಬೋರೇಟರಿ ಪುಸ್ತಕವು ಮಹತ್ವದ್ದಾಗಿದೆ. ʼ ಪ್ರತಿಯೊಂದು ಮನೆಯ ಹೃದಯಭಾಗವೆಂದರೆ ಅದು ಅಡುಗೆಮನೆ. ಅದು ಕೇವಲ ಊಟ ತಯಾರಿಸುವ ಕೋಣೆ ಮಾತ್ರ ಆಗಿರದೇ , ಅದೊಂದು ಪುಟ್ಟ ಪ್ರಯೋಗಾಲಯವಾಗಿದೆ. ಪ್ರತಿದಿನ ಮಾಡುವ ಅಡುಗೆಗಳಲ್ಲಿ ವೈಜ್ಞಾನಿಕ ಸಂಗತಿಗಳಿದ್ದು, ಅವುಗಳನ್ನು ಅರಿಯುವ ಪ್ರಯತ್ನವೇ ಈ ಕಿಚನ್ ಲ್ಯಾಬೋರೇಟರಿ ಪುಸ್ತಕವಾಗಿದೆ ಎಂಬುದನ್ನು ಶ್ರೀ ರಾಜು ಭೂಶೆಟ್ಟಿಯವರು ತಮ್ಮ ಮುನ್ನುಡಿಯಲ್ಲಿ ತಿಳಿಸಿದ್ದಾರೆ. ನಿಜ ನಾವೆಲ್ಲರೂ ಅಡುಗೆಯನ್ನು ಮಾಡಿಯೋ ಅಥವಾ ತಿನ್ನುತ್ತಲೋ ಅದರ ಘಮವನ್ನು ಆಸ್ವಾದಿಸಿರುತ್ತೇವೆ. ಆದರೆ ಆ ಅಡುಗೆಯ ಪರಿಕರಗಳಲ್ಲಿರುವ ಗುಣಾವಗುಣಗಳನ್ನು ನಾವು ಗಮನಿಸಿರುವುದಿಲ್ಲ. ಈ ದಿಸೆಯಲ್ಲಿ ಈ ಪುಸ್ತಕ ಮಕ್ಕಳಿಗೆ ಮಾತ್ರವಲ್ಲದೇ ಸಾಮಾನ್ಯ ಓದುಗರಿಗೂ ವೈಜ್ಞಾನಿಕ ಸಂಗತಿಗಳನ್ನು ಮನದಟ್ಟು ಮಾಡಿಸುತ್ತದೆ. ವೈಜ್ಞಾನಿಕ ಕಠಿಣವಾದ ಸಂಗತಿಗಳನ್ನು ಮಕ್ಕಳಿಗೆ ನೇರವಾಗಿ ಹೇಳಿದರೆ ಅರ್ಥವಾಗದು. ಅವುಗಳಿಗೆ ಕಥೆಯ ರೂಪದ ಉಡುಪನ್ನು ತೊಡಿಸಿದರೆ, ಆ ಕಠಿಣ ಸಂಗತಿಗಳು ಸಹಿತ ಸುಲಭವಾಗಿ ಅರ್ಥವಾಗಬಲ್ಲವು ಎಂಬುದನ್ನು ಲೇಖಕಿಯರು ಇಲ್ಲಿ ತೋರ್ಪಡಿಸಿದ್ದಾರೆ. ಮೂಲತಃ ಶಿಕ್ಷಕಿಯಾಗಿರುವ ಅವರು ಮಕ್ಕಳ ಮನಸ್ಸುಗಳಿಗೆ ಸುಲಭವಾಗಿ ವೈಜ್ಞಾನಿಕ ಸಂಗತಿಗಳನ್ನು ಈ ರೀತಿಯಾಗಿ ದಾಟಿಸಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ಮುಖಪುಟದಲ್ಲಿಯೇ ಒಳಗಿನ ಕಥೆಗಳ ಬಗ್ಗೆ ಬೆರಗು ಮೂಡಿಸುವ ಕಿಚನ್ ಲ್ಯಾಬೋರೆಟರಿ ಪುಸ್ತಕವು ಒಟ್ಟು ೨೫ ಪುಟ್ಟ ಪುಟ್ಟ ಕಥೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಕಥೆಯ ಪ್ರಾರಂಭದಲ್ಲಿ ಬಳಸಲಾದ ಚಿತ್ರಗಳು ಮಕ್ಕಳ ಮನಸ್ಸನ್ನು ಹಿಡಿದಿಡುತ್ತವೆ. ಅದಲ್ಲದೇ ಪ್ರತಿ ಕಥೆಗಳಿಗೂ ನೀಡಲಾದ ಶೀರ್ಷಿಕೆಗಳು ಸಹಿತ ಕಥೆ ಓದುಲು ಉತ್ಸುಕರನ್ನಾಗಿ ಮಾಡುತ್ತವೆ. ಸಕ್ಕರೆಯನ್ನು ಕಿಡ್ನ್ಯಾಪ್ ಮಾಡಿದವರಾರು, ಬೆಲ್ಲ ಸಕ್ಕರೆಗಳ ಮಧ್ಯೆ ಯಾಕೆ ಈ ಫರ್ಸ್ಟ್ ಲಾಸ್ಟ್ ತಾರತಮ್ಯ? , ಬೆಲ್ಲದ ಮುಖಕ್ಕೆ ಕಪ್ಪು ಮಸಿ ಬಳಿದವರು ಯಾರು?, ಡುಮ್ಮ ಡುಮ್ಮ ದ್ರಾಕ್ಷಿ…ಘಮಘಮ ಪಾಯಸ…, ಬಣ್ಣ ಬದಲಾಯಿಸಿದವರು ಯಾರು?, ಎಲ್ಲರ ಮನೆ ದೋಸೆಗೂ ತೂತು ಹಾಕೋರು ಯಾರು? ಹೀಗೆ ಹಲವು ಕಥೆಗಳ ಶೀರ್ಷಿಕೆಗಳೇ ಓದುಗರನ್ನು ಸೆಳೆಯುತ್ತವೆ. ಮನೆ ಮಕ್ಕಳು, ಅಮ್ಮ, ಅಪ್ಪ ಸಂಬಂಧಿಕರು ಹೀಗೆ ಪರಿಚಿತವಾದ ಪಾತ್ರಗಳ ಮೂಲಕವೇ ಮಕ್ಕಳಿಗೆ ಕಥೆಗಳನ್ನು ಹೇಳುತ್ತಾರೆ. ಈ ಸಂಗತಿಯೂ ಕೂಡಾ ಮಕ್ಕಳು ಈ ಕಥೆಗಳ ಪಾತ್ರಧಾರಿಗಳಾಗುವಂತೆ ಭಾವ ಮೂಡಿಸುತ್ತದೆ. ಮಕ್ಕಳ ಕಥಾಸಾಹಿತ್ಯದಲ್ಲಿ ಈ ರೀತಿಯ ವೈಜ್ಞಾನಿಕ ಕಥಾಪ್ರಯೋಗವನ್ನು ಮಾಡಿರುವ ಲೇಖಕರ ಸೃಜನಾತ್ಮಕತೆಗೆ ಈ ಸಂಕಲನವು ಸಾಕ್ಷಿಯಾಗಿದೆ.
ಮಕ್ಕಳಲ್ಲಿ ಪ್ರಶ್ನಿಸುವ ಕೌಶಲ, ಜೊತೆಗೆ ಅದಕ್ಕೆ ಉತ್ತರ ಪಡೆಯುವ ರೀತಿ ಮಾತ್ರವಲ್ಲದೇ ವೈಜ್ಞಾನಿಕ ಸಂಗತಿಗಳು ದಿನನಿತ್ಯ ಮನೆಗಳಲ್ಲಿ ಜರುಗುತ್ತಿದ್ದರೂ ಕೂಡಾ ನಾವೇಕೆ ಗಮನಿಸಲಿಲ್ಲ? ಇತ್ಯಾದಿ ತರ್ಕಗಳನ್ನು ಈ ಪುಸ್ತಕವು ನಮಗೆ ತಿಳಿಸಿಕೊಡುತ್ತದೆ. ಮನೆಯಲ್ಲಿನ ವಿಜ್ಞಾನ ತಿಳಿದುಕೊಂಡವರಿಗೆ ಶಾಲೆಯಲ್ಲಿನ ವಿಜ್ಞಾನ ಕಷ್ಟವಾಗದು ಎಂಬ ಸಂದೇಶವನ್ನು ಈ ಪುಸ್ತಕ ನೀಡುತ್ತದೆ. ʼ ಅಡುಗೆ ಮಾಡುವ ಅಮ್ಮ, ಅರಿವು ತುಂಬುವ ವಿಜ್ಞಾನಿಯಾಗಿ ಈ ಪುಸ್ತಕದ ಕಥೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಮ್ಮ ಕೇವಲ ಮನೆಯ ಅಡುಗೆ ಮಾಡುವವಳು ಮಾತ್ರವಲ್ಲ; ಅವಳು ಕುಟುಂಬದ ಆರೋಗ್ಯ ಕಾಪಾಡುವ ವಿಜ್ಞಾನಿ, ಪೋಷಕಾಂಶಗಳ ಅರಿವು ನೀಡುವ ಶಿಕ್ಷಕಿ ಮತ್ತು ಪ್ರೀತಿಯಿಂದ ಊಟಬಡಿಸುವ ಉತ್ತಮ ಕಲಾವಿದೆಯಾಗಿ ಬಹಳಷ್ಟು ಕಥೆಗಳಲ್ಲಿ ಕಾಣಸಿಗುತ್ತಾರೆ. ಇಲ್ಲಿಯ ಪ್ರತಿಯೊಂದು ಕಥೆಯೂ ಮಕ್ಕಳ ಮನಸ್ಸನ್ನು ಅರಳಿಸುವದರ ಜೊತೆಗೆ ಜ್ಞಾನವನ್ನು ಉಣಬಡಿಸುವುದರಿಂದ, ಈ ಕಥಾಸಂಕಲನವು ಪ್ರತಿಯೊಂದು ಶಾಲೆಯ ಲೈಬ್ರರಿಯನ್ನು ಸೇರಿದರೆ ಉತ್ತಮ ಎಂಬುದು ನನ್ನ ಭಾವನೆ. ಹಲವು ಕವನ ಸಂಕಲನ, ಲೇಖನಗಳು, ಮಕ್ಕಳ ಕವನಗಳು ಮತ್ತು ಮಕ್ಕಳ ಪದ್ಯಗಳ ಪುಸ್ತಕಗಳನ್ನು ಹೊರತಂದಿರುವ ಭುವನೇಶ್ವರಿ ಅವರು ಮಕ್ಕಳ ಸಾಹಿತ್ಯದಲ್ಲಿ ಮತ್ತಷ್ಟು ಮತ್ತಷ್ಟು ಸಾಹಿತ್ಯವನ್ನು ರಚಿಸಿ ಮಕ್ಕಳ ಮನಸ್ಸುಗಳನ್ನು ಸೆರೆಹಿಡಿಯಲಿ ಎಂದು ಆಶಿಸುತ್ತೇನೆ.
ಕಿಚನ್ ಲ್ಯಾಬೋರೇಟರಿ
ಅವ್ವ ಪುಸ್ತಕಾಲಯ
೧೩೦ ರೂ
8548948660
ಗಂಗಾ ಚಕ್ರಸಾಲಿ






0 Comments