ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.
ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.
ಭಾಗ – ೨೨
ಬೆಳಿಗ್ಗೆ ಎಂಟು ಗಂಟೆಗೆ ವಿನಯ್ ಈಶಾನ್ನ ಮನೆಗೆ ಬಂದಾಗ, ಅವನ ಕೈಯಲ್ಲಿ ಲ್ಯಾಪ್ಟಾಪ್ ಇರಲಿಲ್ಲ. ಬದಲಿಗೆ, ಕಂದು ಬಣ್ಣದ ಹಳೆಯ ಕಡತವೊಂದಿತ್ತು. ಅದರ ಅಂಚುಗಳು ಸವೆದಿದ್ದವು. ಮುಚ್ಚುವ ಭಾಗದಲ್ಲಿ ತುಕ್ಕು ಹಿಡಿದ ಸ್ಟೇಪ್ಲರ್ ಪಿನ್ಗಳ ಗುರುತುಗಳಿದ್ದವು. ಕಡತದ ಮೇಲ್ಭಾಗದಲ್ಲಿ ಮಸುಕಾದ ಅಕ್ಷರಗಳಲ್ಲಿ PRINT ARCHIVE-03 ಎ೦ದು ಬರೆಯಲಾಗಿತ್ತು.
“ನಿನ್ನೆ ರಾತ್ರಿ ಹೇಳಿದ ಹೆಸರನ್ನು ಕಂಡುಕೊ೦ಡೆಯಾ?” ಎಂದು ಈಶಾನ್ ಕೇಳಿದ.ವಿನಯ್ ತಕ್ಷಣ ಉತ್ತರಿಸಲಿಲ್ಲ. ಅವನು ಕಡತವನ್ನು ಮೇಜಿನ ಮೇಲಿಟ್ಟು, ಅದರೊಳಗಿಂದ ಎರಡು ಪುಟಗಳನ್ನು ಹೊರತೆಗೆದ. ಒಂದು ಪುಟದಲ್ಲಿ ಹಳೆಯ ಕಂಪ್ಯೂಟರ್ನಿ೦ದ ತೆಗೆದ ಮುದ್ರಣದ ದಾಖಲೆಗಳಿದ್ದವು. ಮತ್ತೊಂದರಲ್ಲಿ ಕೈಬರಹದ ಟಿಪ್ಪಣಿಗಳಿದ್ದವು.“ಹೆಸರು ಸಿಕ್ಕಿದೆ. ಆದರೆ ಅದಕ್ಕಿಂತ ಮುಖ್ಯವಾದ ಸಂಗತಿ ಈ ಮುದ್ರಣದ ದಾಖಲೆ,” ಎಂದನು.
ಈಶಾನ್ ಪುಟವನ್ನು ತನ್ನತ್ತ ಎಳೆದುಕೊಂಡ. ಅದರಲ್ಲಿ ದಿನಾಂಕ, ಸಮಯ, ಮುದ್ರಿತ ಪುಟಗಳ ಸಂಖ್ಯೆ ಮತ್ತು ಕಡತದ ಹೆಸರುಗಳನ್ನು ಕ್ರಮವಾಗಿ ದಾಖಲಿಸಲಾಗಿತ್ತು. ಕೆಲವು ಸಾಲುಗಳು ಸ್ಪಷ್ಟವಾಗಿದ್ದವು. ಕೆಲವು ಅಳಿಸಿಹಾಕಿದಂತೆ ಕಾಣುತ್ತಿದ್ದವು.ಅವನು ಮೊದಲಿಗೆ ಕಂಡ ಹೆಸರು DRAFT_FINAL_04.
ಅದರ ಎದುರು ಮುದ್ರಣದ ದಿನಾಂಕವಿತ್ತು. ಅದು ಅನಿರುದ್ಧ ಕಾಣೆಯಾಗುವುದಕ್ಕೆ ಕೆಲವೇ ದಿನಗಳ ಹಿಂದಿನದು ಎಂದು ಹಳೆಯ ದಾಖಲೆಗಳ ದಿನಾಂಕಗಳೊAದಿಗೆ ಹೋಲಿಸಿದಾಗ ತಿಳಿಯಿತು. ಮುದ್ರಿತ ಪುಟಗಳ ಸಂಖ್ಯೆ ಹದಿನಾಲ್ಕು ಎಂದು ನಮೂದಿಸಲಾಗಿತ್ತು.ಆದರೆ ಈಗ ಅವರ ಬಳಿ ಇದ್ದ ಅಂತಿಮ ಕರಡಿನಲ್ಲಿ ಆರು ಪುಟಗಳ ಭಾಗ ಮಾತ್ರ ಉಳಿದಿತ್ತು. ಐದನೆಯ ಪುಟ ಕಾಣೆಯಾಗಿತ್ತು. ಆರನೆಯ ಪುಟದ ಕೊನೆಯ ವಾಕ್ಯವೂ ಅಪೂರ್ಣವಾಗಿತ್ತು.
“ಹದಿನಾಲ್ಕು ಪುಟಗಳಿದ್ದರೆ, ಉಳಿದ ಪುಟಗಳು ಎಲ್ಲಿವೆ?” ಎಂದು ಈಶಾನ್ ಕೇಳಿದ.
“ಅದೇ ನಾವು ಕಂಡುಹಿಡಿಯಬೇಕಾದದ್ದು. ಈ ದಾಖಲೆ ನಿಜವಾದದ್ದಾಗಿದ್ದರೆ, ಕರಡು ಕಥೆಯ ಒಂದು ಸಂಪೂರ್ಣ ಮುದ್ರಿತ ಪ್ರತಿ ಯಾವುದೋ ಸಮಯದಲ್ಲಿ ಅಸ್ತಿತ್ವದಲ್ಲಿತ್ತು. ಆದರೆ ಈ ನೋಂದಣಿ ಪುಸ್ತಕ ಮಾತ್ರದಿಂದ ಆ ಪುಟಗಳು ಇನ್ನೂ ಉಳಿದಿವೆಯೇ ಎಂದು ಹೇಳಲಾಗುವುದಿಲ್ಲ.” ಎಂದ ವಿನಯ್.
ವಿನಯ್ ಎರಡನೆಯ ಪುಟವನ್ನು ತೋರಿಸಿದ.ಮುದ್ರಣದ ದಾಖಲೆಯ ಕೆಳಗೆ ಸಣ್ಣ ಕೈಬರಹವಿತ್ತು. “ಕೊನೆಯ ಪ್ರತಿಯನ್ನು ಸಾಮಾನ್ಯ ಕಡತದಲ್ಲಿ ಇಡಬೇಡಿ.” ಅದರ ಕೆಳಗೆ ಮತ್ತೊಂದು ಸಾಲು. “V.S.-ಪ್ರತಿ ನೀಡಬಾರದು.”
ಈಶಾನ್ನ ದೃಷ್ಟಿ ಆ ಎರಡು ಅಕ್ಷರಗಳ ಮೇಲೆ ನಿಂತಿತು.“ವಿಜಯ್ ಶೆಣೈ?”
“ಬಹುಶಃ. ಆದರೆ V.S.ಎಂದರೆ ಅದೇ ವ್ಯಕ್ತಿ ಎಂದು ಹೇಳಲು ಸಾಧ್ಯವಿಲ್ಲ. ಇತರ ದಾಖಲೆಗಳಲ್ಲಿಯೂ ಈ ಅಕ್ಷರಗಳು ಕಾಣುತ್ತವೆಯೇ ಎಂಬುದನ್ನು ಪರಿಶೀಲಿಸಬೇಕು.” ಎಂದ ವಿನಯ್.
ಈಶಾನ್ ತನ್ನ ನೋಟ್ಬುಕ್ ತೆಗೆದುಕೊಂಡ. “ದೃಢಪಟ್ಟ ಸಂಗತಿಗಳು” ಎಂಬ ವಿಭಾಗದ ಅಡಿಯಲ್ಲಿ ಬರೆದ. ಹಳೆಯ ಮುದ್ರಣದ ನೋಂದಣಿಯಲ್ಲಿ DRAFT_FINAL_04 ಎ೦ಬ ಕಡತಕ್ಕೆ ಹದಿನಾಲ್ಕು ಪುಟಗಳ ಮುದ್ರಣ ದಾಖಲಾಗಿದೆ. ಗಿ.S.ಎಂಬ ಗುರುತು ಇದೆ. ಗುರುತಿನ ಅರ್ಥ ಇನ್ನೂ ದೃಢಪಟ್ಟಿಲ್ಲ.
ಅವನು ಬರೆಯುವುದನ್ನು ಮುಗಿಸಿದಾಗ, ವಿನಯ್ ಅವನತ್ತ ಗಮನವಿಟ್ಟು ನೋಡುತ್ತಿದ್ದ.“ನೀನು ಬದಲಾಗುತ್ತಿದ್ದೀಯ,” ಎಂದನು.
“ಹೇಗೆ?” ಪ್ರಶ್ನಿಸಿದ ಈಶಾನ್.
“ಮೊದಲು ಪ್ರತಿಯೊಂದು ಸುಳಿವೂ ನಿನ್ನನ್ನು ಯಾವುದೋ ತೀರ್ಮಾನಕ್ಕೆ ಎಳೆಯುತ್ತಿತ್ತು. ಈಗ ನೀನು ಅದನ್ನು ತಕ್ಷಣ ಒಪ್ಪಿಕೊಳ್ಳುತ್ತಿಲ್ಲ.”ಈಶಾನ್ ಮಂದಹಾಸ ಮಾಡಿದ. “ನಾನು ಕಥೆ ಬರೆಯುವಾಗ ಖಾಲಿ ಜಾಗವನ್ನು ತುಂಬಲು ಅಭ್ಯಾಸ ಮಾಡಿಕೊಂಡಿದ್ದೆ. ಈಗ ಆ ಅಭ್ಯಾಸವೇ ನನ್ನನ್ನು ತಪ್ಪು ದಾರಿಗೆ ಕರೆದೊಯ್ಯಬಹುದೆಂದು ಅನಿಸುತ್ತಿದೆ.” ಎಂದ.
“ಅದು ಒಳ್ಳೆಯ ಬದಲಾವಣೆ. ಆದರೆ ಅನುಮಾನಪಡುವುದೇ ತನಿಖೆಯ ಅಂತ್ಯವಲ್ಲ. ಸರಿಯಾದ ಸಾಕ್ಷ್ಯವನ್ನು ಹುಡುಕಬೇಕು.” ವಿನಯ್ ಹೇಳಿದ.
ವಿನಯ್ ಹೇಳಿದ ಆ ಮಾತು ಈಶಾನ್ನ ಮನಸ್ಸಿನಲ್ಲಿ ಉಳಿಯಿತು. ಈಶಾನ್ನ ತಂದೆ ಕೆಲಸ ಮಾಡುತ್ತಿದ್ದ ಹಳೆಯ ಕಚೇರಿ ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿತ್ತು. ಕಟ್ಟಡವನ್ನು ನಂತರ ಬೇರೆ ಸಂಸ್ಥೆಯೊ೦ದಕ್ಕೆ ಬಾಡಿಗೆಗೆ ನೀಡಲಾಗಿತ್ತು. ಆದರೆ ಹಿಂಭಾಗದ ಕೊಠಡಿಯಲ್ಲಿದ್ದ ಕೆಲವು ಹಳೆಯ ವಸ್ತುಗಳನ್ನು ಕುಟುಂಬದವರು ಇನ್ನೂ ತೆಗೆದುಕೊಂಡಿರಲಿಲ್ಲ. ತಂದೆಯ ಮರಣದ ನಂತರ ಆ ಕೊಠಡಿಯನ್ನು ತೆರೆಯುವ ಸಂದರ್ಭ ಬಂದಿರಲಿಲ್ಲ.
ಈಶಾನ್ ಸಾರಾಳೊಂದಿಗೆ ಅಲ್ಲಿಗೆ ಹೋಗಲು ನಿರ್ಧರಿಸಿದ. ವಿನಯ್ ಕೂಡ ಅವರ ಜೊತೆ ಬಂದ.
ಕಟ್ಟಡದ ಮುಂಭಾಗದಲ್ಲಿ ಹೊಸ ಫಲಕವಿದ್ದರೂ, ಹಿಂಭಾಗದ ಮೆಟ್ಟಿಲುಗಳು ಹಳೆಯ ಕಾಲದ ಗುರುತುಗಳನ್ನು ಉಳಿಸಿಕೊಂಡಿದ್ದವು. ಗೋಡೆಯ ಬಣ್ಣ ಉದುರಿತ್ತು. ಕಿಟಕಿಯ ಕಬ್ಬಿಣದ ಸರಳುಗಳ ಮೇಲೆ ಧೂಳು ಮತ್ತು ತುಕ್ಕು ಹರಡಿಕೊಂಡಿದ್ದವು. ಕೊಠಡಿಯ ಬಾಗಿಲು ತೆರೆದಾಗ ಹಳೆಯ ಕಾಗದ, ಮರ ಮತ್ತು ಮುಚ್ಚಿದ ಜಾಗದಲ್ಲಿ ಬಹುಕಾಲ ಉಳಿದಿದ್ದ ತೇವದ ವಾಸನೆ ಅವರತ್ತ ಬಂತು.
ಒಳಗೆ ಒಂದು ಮೇಜು, ಎರಡು ಕಪಾಟುಗಳು, ಮುರಿದ ಕುರ್ಚಿ ಮತ್ತು ಗೋಡೆಯ ಪಕ್ಕದಲ್ಲಿ ಇಡಲಾಗಿದ್ದ ಹಳೆಯ ಲೋಹದ ಪೆಟ್ಟಿಗೆ ಇದ್ದವು. ಮೇಜಿನ ಮೇಲೆ ಧೂಳು ಮುಚ್ಚಿದ ಕಂಪ್ಯೂಟರ್ ಪರದೆ ಕಾಣಿಸಿತು. ಅದರ ಕೆಳಗೆ ಕೇಬಲ್ಗಳು ಸುತ್ತಿಕೊಂಡಿದ್ದವು. ಆದರೆ ಈಶಾನ್ನ ಗಮನವನ್ನು ಸೆಳೆದದ್ದು ಮೇಜಿನ ಪಕ್ಕದಲ್ಲಿದ್ದ ಹಳೆಯ ಮುದ್ರಕ.ಅದು ದೊಡ್ಡದಾಗಿರಲಿಲ್ಲ. ಕಪ್ಪು ಬಣ್ಣದ ಲೇಸರ್ ಪ್ರಿಂಟರ್. ಮುಂಭಾಗದ ಕವರ್ ಸ್ವಲ್ಪ ತೆರೆದಿತ್ತು. ಕಾಗದ ಹಾಕುವ ತಟ್ಟೆಯಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ಒಂದು ಹಾಳೆ ಸಿಲುಕಿಕೊಂಡಿತ್ತು.
“ಇದೇ ಆ ಕಾಲದ ಮುದ್ರಕವಾಗಿರಬಹುದೇ?” ಎಂದು ಸಾರಾ ಕೇಳಿದಳು.
ವಿನಯ್ ಅದರ ಹಿಂದಿನ ಲೇಬಲ್ ನೋಡಿದ. ಮಾದರಿ ಸಂಖ್ಯೆ ಮತ್ತು ತಯಾರಿಕಾ ವರ್ಷದ ಆಧಾರದ ಮೇಲೆ ಅದು ಆ ಅವಧಿಗೆ ಹೊಂದಿಕೆಯಾಗಬಹುದೆAದು ಕಂಡಿತು. ಆದರೆ ಅದೇ ಮುದ್ರಕವನ್ನು ಸಂಶೋಧನಾ ಪ್ರಯೋಗಕ್ಕೆ ಬಳಸಲಾಗಿತ್ತು ಎಂಬುದಕ್ಕೆ ಇನ್ನೂ ಸಾಕ್ಷ್ಯ ಬೇಕಿತ್ತು.
ಈಶಾನ್ ಹತ್ತಿರ ಹೋಗಿ ಅದರ ಮೇಲಿನ ಧೂಳನ್ನು ಬೆರಳಿನಿಂದ ಮುಟ್ಟಿದ. ಅವನಿಗೆ ಬಾಲ್ಯದ ಒಂದು ದೃಶ್ಯ ನೆನಪಾದಂತೆ ಆಯಿತು. ಕಂಪ್ಯೂಟರ್ಪರದೆಯಮೇಲೆ ಓಡಾಡುತ್ತಿದ್ದ ಅಕ್ಷರಗಳು, ಮುದ್ರಕದಸದ್ದು, ಕಾಗದಹೊರಬರುವುದನ್ನು ಕಾಯುತ್ತಿದ್ದ ಅನಿರುದ್ಧ.ಆ ನೆನಪು ಕೆಲವೇ ಕ್ಷಣಗಳಲ್ಲಿ ಮಸುಕಾಯಿತು.
ಅವನು ತಕ್ಷಣ ತನ್ನ ನೋಟ್ಬುಕ್ನಲ್ಲಿ ಬರೆದ: ಹಳೆಯ ಮುದ್ರಕವನ್ನು ನೋಡಿದಾಗ ಬಾಲ್ಯದ ದೃಶ್ಯ ನೆನಪಾಯಿತು. ದೃಶ್ಯದ ನಿಖರತೆ ಮತ್ತು ಅದರ ದಿನಾಂಕ ಖಚಿತವಲ್ಲ.
ಸಾರಾ ಅವನ ಬರಹವನ್ನು ಗಮನಿಸಿದಳು. ಏನನ್ನೂ ಹೇಳದೆ ಅವನ ಭುಜದ ಮೇಲೆ ಕೈ ಇಟ್ಟಳು.ವಿನಯ್ ಮುದ್ರಕದ ಬಳಿಯಿದ್ದ ಕಪಾಟನ್ನು ಪರಿಶೀಲಿಸಲು ಆರಂಭಿಸಿದ. ಅದರಲ್ಲಿ ಹಳೆಯ ಕಾಟ್ರಿಡ್ಜ್ಗಳ ಖಾಲಿ ಪೆಟ್ಟಿಗೆಗಳು, ಕಾಗದದ ಕಟ್ಟುಗಳು ಮತ್ತು ಕೆಲವು ತಾಂತ್ರಿಕ ಕೈಪಿಡಿಗಳಿದ್ದವು. ಕಪಾಟಿನ ಕೆಳಗಿನ ಡ್ರಾಯರ್ ಮಾತ್ರ ಬೀಗ ಹಾಕಲ್ಪಟ್ಟಿತ್ತು.
ಈಶಾನ್ಗೆ ಅದರ ಕೀಲಿಯು ತಂದೆಯ ಹಳೆಯ ಕೀಲಿಗಳ ಗುಚ್ಛದಲ್ಲಿ ಇರಬಹುದೆಂದು ನೆನಪಾಯಿತು. ಅವನು ತಂದೆಯ ವಸ್ತುಗಳೊಂದಿಗೆ ಉಳಿದಿದ್ದ ಸಣ್ಣ ಚೀಲವನ್ನು ತೆರೆದು ನೋಡಿದ. ಹಲವು ಕೀಲಿಗಳ ನಡುವೆ ಒಂದು ಸಣ್ಣ ಕಪ್ಪು ಕೀಲಿಯಿತ್ತು. ಅದು ಡ್ರಾಯರ್ಗೆ ಸರಿಹೊಂದಿತು.ಡ್ರಾಯರ್ ತೆರೆದಾಗ ಒಳಗೆ ಕೆಲವು ಹಳೆಯ ಮುದ್ರಣದ ಹಾಳೆಗಳು, ಲೆಕ್ಕಪತ್ರಗಳ ಪುಸ್ತಕ ಮತ್ತು ಸಣ್ಣ ಕಪ್ಪು ಲಕೋಟೆ ಕಂಡವು. ಲಕೋಟೆಯ ಮೇಲೆ ಯಾವುದೇ ಹೆಸರು ಇರಲಿಲ್ಲ.
ವಿನಯ್ ಮೊದಲು ಮುದ್ರಣದ ಹಾಳೆಗಳನ್ನು ಪರಿಶೀಲಿಸಿದ. ಕೆಲವು ಸಾಮಾನ್ಯ ಕಚೇರಿ ದಾಖಲೆಗಳಾಗಿದ್ದವು. ಆದರೆ ಕೆಳಗಿದ್ದ ಮೂರು ಪುಟಗಳ ಮೇಲೆ MEMORY TRIAL-NARRATIVE RESPONSE ಎಂಬ ಶೀರ್ಷಿಕೆಯಿತ್ತು.ಅವುಗಳಲ್ಲಿ ವ್ಯಕ್ತಿಗಳ ಹೆಸರಿನ ಬದಲು ಸಂಕೇತಗಳನ್ನು ಬಳಸಲಾಗಿತ್ತು. E.B., A.N., R.B. ಮತ್ತು U-04.
ಪ್ರತಿ ಸಂಕೇತದ ಎದುರು ದಿನಾಂಕ, ಕಡತದ ಸಂಖ್ಯೆ ಮತ್ತು ಮುದ್ರಿತ ಪುಟಗಳ ವಿವರಗಳಿದ್ದವು. U-೦೪ ಎಂಬ ದಾಖಲೆಯ ಎದುರು ಒಂದು ಟಿಪ್ಪಣಿ ಕಂಡಿತು:“FINAL COPY — PRINT ONLY. NO DIGITAL DUPLICATE.”ಅದರ ಕೆಳಗೆ ಈಶಾನ್ನ ತಂದೆಯ ಸಹಿಯಂತಿದ್ದ ಒಂದು ಸಹಿಯಿತ್ತು.ಈಶಾನ್ ಅದನ್ನು ಬಹಳ ಹೊತ್ತು ನೋಡಿದ.
“ಇದು ಅವರ ಸಹಿಯೇ?” ಎಂದು ಸಾರಾ ಕೇಳಿದಳು.
“ಹೋಲುತ್ತದೆ, ಆದರೆ ನಾನು ಖಚಿತವಾಗಿ ಹೇಳಲಾರೆ.”ಎಂದನು ಈಶಾನ್.ವಿನಯ್ ಆ ಪುಟದ ಚಿತ್ರ ತೆಗೆದುಕೊಂಡ. “ಸಹಿ ನಿಜವಾದದ್ದೇ ಆಗಿದ್ದರೂ, ಈ ದಾಖಲೆಯ ಅರ್ಥವನ್ನು ತಿಳಿಯಲು ಇನ್ನಷ್ಟು ಮಾಹಿತಿ ಬೇಕು. ‘ಡಿಜಿಟಲ್ ಪ್ರತಿ ಬೇಡ’ ಎಂಬ ಸೂಚನೆಗೆ ಹಲವು ಕಾರಣಗಳಿರಬಹುದು. ಗೌಪ್ಯತೆ, ಸಂಶೋಧನಾ ನಿಯಮಗಳು ಅಥವಾ ದಾಖಲೆಗಳನ್ನು ಮರೆಮಾಚುವ ಉದ್ದೇಶಯಾವುದು ಎಂಬುದು ಈಗಸ್ಪಷ್ಟವಿಲ್ಲ.”
ಈಶಾನ್ಗೆ ತನ್ನ ತಂದೆಯ ಪತ್ರ ನೆನಪಾಯಿತು. ಮಕ್ಕಳ ಬರವಣಿಗೆಯ ಮೂಲ ಪ್ರತಿಗಳನ್ನು ಹಿಂದಿರುಗಿಸಲು ಸಿದ್ಧನಿದ್ದೇನೆ ಎಂಬ ಸಾಲು. ದಾಖಲೆಗಳಲ್ಲಿ ಈಗಾಗಲೇ ಸೇರಿಸಿದ್ದ ಮಾಹಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಿಲ್ಲ ಎಂಬ ಮಾತು.ಬಹುಶಃ ಈ ಮುದ್ರಣದ ಹಾಳೆಗಳು ಆ ಪತ್ರಕ್ಕೆ ಸಂಬ೦ಧಿಸಿದ್ದವು.ಅಥವಾ ಇವೆಲ್ಲವೂ ಒಂದೇ ಸಂಶೋಧನಾ ಯೋಜನೆಯ ಬೇರೆ ಬೇರೆ ದಾಖಲೆಗಳಾಗಿರಬಹುದು.ಅವನು ಇನ್ನೂ ನಿರ್ಧಾರಕ್ಕೆ ಬರಲಿಲ್ಲ.
ಕಪ್ಪು ಲಕೋಟೆಯನ್ನು ತೆರೆದಾಗ ಅದರೊಳಗೆ ಒಂದು ಸಣ್ಣ ಕಾಗದದ ಚೀಟಿ ಮತ್ತು ಹಳೆಯ ಮುದ್ರಿತ ಪುಟದ ಅರ್ಧ ಭಾಗವಿತ್ತು. ಚೀಟಿಯ ಮೇಲೆ ಒಂದೇ ಸಾಲು:“ಮುದ್ರಿಸಿದ ಪ್ರತಿಯೇ ಮೂಲವಲ್ಲ. ಮೂಲವನ್ನು ಮುದ್ರಿಸಿದವನನ್ನು ಹುಡುಕಿ.”ಅದರ ಕೆಳಗೆ ದಿನಾಂಕವಿತ್ತು. ಅದು ಮುದ್ರಣದ ನೋಂದಣಿ ಪುಸ್ತಕದಲ್ಲಿದ್ದ ದಿನಾಂಕಕ್ಕೆ ಹತ್ತಿರವಾಗಿತ್ತು.
“ಮುದ್ರಿಸಿದ ಪ್ರತಿಯೇ ಮೂಲವಲ್ಲ,” ಎಂದು ಸಾರಾ ನಿಧಾನವಾಗಿ ಓದಿದಳು. “ಅಂದರೆ, ಮುದ್ರಕದಿಂದ ಹೊರಬಂದ ಪುಟವೂ ನಂತರ ಬದಲಾಯಿಸಲ್ಪಟ್ಟಿರಬಹುದು ಎಂಬ ಅರ್ಥವೇ?” “ಅಥವಾ ಕಂಪ್ಯೂಟರ್ನಲ್ಲಿದ್ದ ಮೂಲ ಪಠ್ಯವನ್ನು ಯಾರಾದರೂ ಬದಲಾಯಿಸಿದ್ದಿರಬಹುದು,” ಎಂದ ವಿನಯ್. “ಈ ವಾಕ್ಯ ನಮಗೆ ಒಂದು ಪ್ರಶ್ನೆಯನ್ನು ಕೊಡುತ್ತದೆ. ಉತ್ತರವನ್ನು ಅಲ್ಲ.”ಅರ್ಧ ಪುಟದಲ್ಲಿ ಎರಡು ಹುಡುಗರ ನಡುವಿನ ಸಂಭಾಷಣೆಯಿತ್ತು. ಅಕ್ಷರಗಳು ಮಸುಕಾಗಿದ್ದರೂ, ಕೆಲವು ವಾಕ್ಯಗಳನ್ನು ಓದಲು ಸಾಧ್ಯವಾಯಿತು.
“ನೀನು ಇದನ್ನು ನಿಜವಾಗಿಯೂ ನೆನಪಿಸಿಕೊಂಡೆಯಾ?”
“ಇಲ್ಲ. ನೀನು ಹೇಳಿದ್ದರಿಂದ ನನಗೆ ನೆನಪಾದಂತೆ ಆಯಿತು.”
“ಹಾಗಾದರೆ ನಿನಗೆ ನೆನಪಿರುವುದು ನಿನ್ನದೇನಾ?”ಮುಂದಿನ ಭಾಗ ಹರಿದುಹೋಗಿತ್ತು. ಈಶಾನ್ನ ಹೃದಯ ಬಡಿತ ವೇಗವಾಯಿತು. ಆ ವಾಕ್ಯಗಳು ತನ್ನ ಇತ್ತೀಚಿನ ಅನುಭವಕ್ಕೆ ತುಂಬ ಹತ್ತಿರವಾಗಿದ್ದವು. ಮ್ಯೂಸ್ ಸೃಷ್ಟಿಸಿದ ಕಥೆಗಳ ಮೂಲಕ ಅವನಿಗೆ ಕೆಲವು ಬಾಲ್ಯದ ದೃಶ್ಯಗಳು ನೆನಪಾಗಿದ್ದವು. ಆದರೆ ಅವು ನಿಜವಾದ ನೆನಪುಗಳೋ, ಕಥೆಯಿಂದ ಪ್ರಭಾವಿತವಾದ ಕಲ್ಪನೆಗಳೋ ಎಂಬುದನ್ನು ಅವನು ಇನ್ನೂ ನಿರ್ಧರಿಸಿರಲಿಲ್ಲ.
“ಈ ಸಂಭಾಷಣೆ ನಮ್ಮ ಬಾಲ್ಯದ ಕಥೆಯ ಭಾಗವಾಗಿರಬಹುದೇ?” ಎಂದು ಕೇಳಿದ ಈಶಾನ್.
ವಿನಯ್ ಪುಟವನ್ನು ಪರಿಶೀಲಿಸಿದ. “ಅದು ಸಾಧ್ಯ. ಆದರೆ ಇಂತಹ ಸಂಭಾಷಣೆಯನ್ನು ಯಾರಾದರೂ ನಂತರವೂ ಬರೆಯಬಹುದು. ಇದನ್ನು ಹಳೆಯ ಕರಡುಗಳೊಂದಿಗೆ ಹೋಲಿಸಬೇಕು. ಕಾಗದ ಮತ್ತು ಮುದ್ರಣದ ಲಕ್ಷಣಗಳನ್ನೂ ಪರಿಶೀಲಿಸಬಹುದು.” ಎಂದ.
ಈಶಾನ್ ಅರ್ಧ ಪುಟವನ್ನು ಎಚ್ಚರಿಕೆಯಿಂದ ಪಾರದರ್ಶಕ ಕಡತದೊಳಗೆ ಇಟ್ಟ.ಅವನಿಗೆ ಈಗ ಒಂದು ಸಂಗತಿ ಸ್ಪಷ್ಟವಾಗಿತ್ತು. ಯಾರೋ ಕಥೆಯ ಮೂಲವನ್ನು ಉಳಿಸಲು ಪ್ರಯತ್ನಿಸಿದ್ದರು. ಆದರೆ ಆ ಪ್ರಯತ್ನದ ಫಲವಾಗಿ ಉಳಿದಿದ್ದ ದಾಖಲೆಗಳೂ ಸಂಪೂರ್ಣವಾಗಿರಲಿಲ್ಲ.
ಅನಿರುದ್ಧನ ಪತ್ರದಲ್ಲಿ ಕಾಗದದ ಮೇಲೆ ಕಥೆಯನ್ನು ಮತ್ತೆ ಬರೆಯುವಂತೆ ಹೇಳಲಾಗಿತ್ತು. ಮುದ್ರಣದ ದಾಖಲೆಗಳಲ್ಲಿ ಕೊನೆಯ ಪ್ರತಿಯನ್ನು ಸಾಮಾನ್ಯ ಕಡತದಲ್ಲಿ ಇಡಬಾರದೆಂದು ಬರೆಯಲಾಗಿತ್ತು. ಈಗ ಸಿಕ್ಕ ಚೀಟಿಯಲ್ಲಿ ಮುದ್ರಿಸಿದ ಪ್ರತಿಯೇ ಮೂಲವಲ್ಲ ಎಂದು ಎಚ್ಚರಿಸಲಾಗಿತ್ತು.
ಈ ಮೂರು ಸುಳಿವುಗಳು ಒಂದೇ ದಿಕ್ಕಿಗೆ ತೋರಿಸುತ್ತಿದ್ದವು. ಆದರೆ ಅವುಗಳನ್ನು ಜೋಡಿಸಿದಾಗ ಯಾವ ನಿರ್ಣಯಕ್ಕೆ ಬರಬೇಕು ಎಂಬುದು ಇನ್ನೂ ಗೊತ್ತಿರಲಿಲ್ಲ.ವಿನಯ್ ಲೆಕ್ಕಪತ್ರದ ಪುಸ್ತಕವನ್ನು ತೆರೆದ. ಅದರ ಕೊನೆಯ ಕೆಲವು ಪುಟಗಳಲ್ಲಿ ಮುದ್ರಣದ ವೆಚ್ಚ ಮತ್ತು ಕಾಗದದ ಬಳಕೆಯ ವಿವರಗಳಿದ್ದವು. ಒಂದು ದಿನದ ದಾಖಲೆಯಲ್ಲಿ ಹದಿನಾಲ್ಕು ಪುಟಗಳ ಮುದ್ರಣದ ಉಲ್ಲೇಖವಿತ್ತು. ಅದೇ ದಿನದ ಎದುರು “ವಿಶೇಷ ಪ್ರತಿಯನ್ನು ಕೈಯಲ್ಲಿ ನೀಡಲಾಗಿದೆ” ಎಂಬ ಟಿಪ್ಪಣಿ ಕಾಣಿಸಿತು.
ಸ್ವೀಕರಿಸಿದವರ ಹೆಸರಿನ ಜಾಗದಲ್ಲಿ ಕೇವಲ ಒಂದು ಅಕ್ಷರ:“ಗಿ”
“ಇದು ವಿಜಯ್ ಶೆಣೈ ಆಗಿರಬಹುದೇ?” ಎಂದು ಈಶಾನ್ ಕೇಳಿದ.
“ಬಹುಶಃ. ಆದರೆ ಗಿ ಎಂಬ ಮೊದಲ ಅಕ್ಷರದಿಂದ ಮಾತ್ರ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಿಲ್ಲ.”
“ಹಾಗಾದರೆ ಈ ದಾಖಲೆಯನ್ನು ಯಾರಾದರೂ ಉದ್ದೇಶಪೂರ್ವಕವಾಗಿ ಅಪೂರ್ಣವಾಗಿ ಬಿಟ್ಟಿದ್ದಾರೆಯೇ?”
“ಅಥವಾ ಇದು ಸಾಮಾನ್ಯ ಕಚೇರಿ ದಾಖಲೆಯಾಗಿರಬಹುದು. ನಾವು ಈಗ ಪ್ರತಿಯೊಂದು ಅಪೂರ್ಣ ಮಾಹಿತಿಯಲ್ಲೂ ರಹಸ್ಯವನ್ನು ಹುಡುಕುತ್ತಿದ್ದೇವೆ. ಅದೂ ನಮ್ಮ ತನಿಖೆಯ ಒಂದು ಅಪಾಯ.” ಎಂದ ವಿನಯ್.
ವಿನಯ್ನ ಮಾತು ಈಶಾನ್ಗೆ ಇಷ್ಟವಾಗದಿದ್ದರೂ, ಅದರಲ್ಲಿದ್ದ ಸತ್ಯವನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ.ಅವನು ತನ್ನ ತಂದೆಯನ್ನು ತಪ್ಪಿತಸ್ಥನೆಂದು ಭಾವಿಸಲು ಆರಂಭಿಸಿದ್ದ. ನಂತರ ಅನಿರುದ್ಧನನ್ನು ಬಲಿಪಶುವೆಂದು ಊಹಿಸಿದ್ದ. ಈಗ ವಿಜಯ್ ಶೆಣೈ ಮೇಲೆ ಅನುಮಾನ ಮೂಡುತ್ತಿತ್ತು. ಆದರೆ ಪ್ರತಿಯೊಂದು ಹೊಸ ದಾಖಲೆ ಹಿಂದಿನ ಊಹೆಯನ್ನು ಬದಲಾಯಿಸುತ್ತಿತ್ತು.ಸತ್ಯವನ್ನು ಹುಡುಕುವ ಬದಲು, ತನ್ನ ಮನಸ್ಸು ಈಗಾಗಲೇ ಸೃಷ್ಟಿಸಿಕೊಂಡಿದ್ದ ಕಥೆಗೆ ಹೊಂದುವ ಸಾಕ್ಷ್ಯಗಳನ್ನು ಮಾತ್ರ ಆರಿಸಿಕೊಳ್ಳುವ ಅಪಾಯವಿತ್ತು.
ಅವನು ನೋಟ್ಬುಕ್ನಲ್ಲಿ ಹೊಸ ಸಾಲು ಬರೆದ:“ಯಾರಾದರೂ ತಪ್ಪಿತಸ್ಥರಾಗಿರಬೇಕು ಎಂಬ ನನ್ನ ನಿರೀಕ್ಷೆಯೇ ತನಿಖೆಯನ್ನು ತಪ್ಪು ದಾರಿಗೆ ಕರೆದೊಯ್ಯಬಹುದು.”
ಅವರು ಕಚೇರಿಯಿಂದ ಹೊರಡುವ ಮೊದಲು, ಸಾರಾ ಮುದ್ರಕದ ಕೆಳಗಿನ ತಟ್ಟೆಯನ್ನು ಮತ್ತೊಮ್ಮೆ ಪರಿಶೀಲಿಸಿದಳು. ಹಳದಿ ಬಣ್ಣಕ್ಕೆ ತಿರುಗಿದ್ದ ಕಾಗದದ ಹಾಳೆ ಅಲ್ಲಿ ಸಿಲುಕಿಕೊಂಡಿತ್ತು. ಅದನ್ನು ಎಳೆಯದೆ, ವಿನಯ್ ಮುದ್ರಕದ ಮುಂಭಾಗವನ್ನು ಎಚ್ಚರಿಕೆಯಿಂದ ತೆರೆಯಲು ಪ್ರಯತ್ನಿಸಿದ.
ಒಳಗೆ ಕಾಗದದ ತುಂಡು ಸಿಕ್ಕಿಕೊಂಡಿತ್ತು. ಅದು ಸಾಮಾನ್ಯ ಮುದ್ರಣದ ಹಾಳೆಯ ಭಾಗದಂತೆ ಕಾಣಿಸಿತು. ಆದರೆ ಅದರ ಮೇಲಿದ್ದ ಅಕ್ಷರಗಳು ತಲೆಕೆಳಗಾಗಿ ಕಾಣುತ್ತಿದ್ದವು. ಮುದ್ರಕದ ಒಳಭಾಗಕ್ಕೆ ಕಾಗದದ ಮೇಲ್ಮೈ ತಿರುಗಿ ಸಿಕ್ಕಿಕೊಂಡಿದ್ದರಿAದ, ಅಕ್ಷರಗಳು ಅಸ್ಪಷ್ಟವಾಗಿದ್ದವು.
ವಿನಯ್ ಅದನ್ನು ಹೊರತೆಗೆದು ಮೇಜಿನ ಮೇಲೆ ಇಟ್ಟ. ಪುಟದ ಅಂಚಿನಲ್ಲಿ ಒಂದು ಸಾಲಿನ ಅರ್ಧ ಭಾಗವಿತ್ತು: “ನಾಲ್ಕನೆಯವನಿಗೆ ಕಥೆಯ ಅಂತ್ಯ ತಿಳಿದಿರಲಿಲ್ಲ. ಆದರೆ ಅಂತ್ಯವನ್ನು ಬದಲಾಯಿಸುವ ಅಧಿಕಾರ ಅವನಿಗಿತ್ತು.”
ಈಶಾನ್ ಆ ಸಾಲನ್ನು ಓದಿ ನಿಶ್ಚಲವಾದ.ನಾಲ್ಕನೆಯವನು.U-೦೪.ಅಪರಿಚಿತ ಬಳಕೆದಾರ.ಮೂರನೆಯ ಹುಡುಗನ ಬಗ್ಗೆ ಇದ್ದ ಸುಳಿವುಗಳ ನಂತರ, ಈಗ ನಾಲ್ಕನೆಯ ವ್ಯಕ್ತಿಯ ಪಾತ್ರವೂ ಸ್ಪಷ್ಟವಾಗದ ರೀತಿಯಲ್ಲಿ ಮುಂದೆ ಬಂದಿತ್ತು.
“ಈ ಸಾಲು ಅಂತಿಮ ಕರಡಿನ ಭಾಗವಾಗಿರಬಹುದೇ?” ಎಂದು ಸಾರಾ ಕೇಳಿದಳು.
“ಆಗಿರಬಹುದು, ಆದರೆ ಈ ಹಾಳೆ ಯಾವಾಗ ಮುದ್ರಿಸಲ್ಪಟ್ಟಿತು, ಯಾವ ಕಡತದಿಂದ ಬಂದಿದೆ ಎಂಬುದನ್ನು ತಿಳಿಯಬೇಕು. ಮುದ್ರಕದಲ್ಲಿ ಸಿಕ್ಕಿತು ಎಂಬ ಕಾರಣಕ್ಕೆ ಇದು ಕೊನೆಯ ಕರಡಿನದ್ದೇ ಎಂದು ಹೇಳಲಾಗುವುದಿಲ್ಲ.”ಎಂದ ವಿನಯ್.
ಈಶಾನ್ ಕಾಗದವನ್ನು ನೋಡುತ್ತಲೇ ಇದ್ದ.ಆ ವಾಕ್ಯವು ಅವನಿಗೆ ತನ್ನ ಜೀವನದ ಬಗ್ಗೆ ಹೇಳಿದಂತೆ ಅನಿಸಿತು. ನಾಲ್ಕನೆಯ ವ್ಯಕ್ತಿಗೆ ಕಥೆಯ ಅಂತ್ಯ ತಿಳಿದಿರಲಿಲ್ಲ; ಆದರೆ ಅಂತ್ಯವನ್ನು ಬದಲಾಯಿಸುವ ಅಧಿಕಾರವಿತ್ತು. ಅದು ಕೇವಲ ಕಥೆಯ ಪಾತ್ರದ ವಿವರಣೆಯಾಗಿರಬಹುದೇ? ಅಥವಾ ಸಂಶೋಧನಾ ಯೋಜನೆಯಲ್ಲಿದ್ದ ಯಾರಾದರೂ ನಿಜವಾಗಿಯೂ ಕಥೆಯ ಅಂತ್ಯವನ್ನು ಬದಲಾಯಿಸಿದ್ದರೇ?ಅವನಿಗೆ ಉತ್ತರ ಗೊತ್ತಿರಲಿಲ್ಲ.
ಆದರೆ ಈಗ ಅವನು ಒಂದು ನಿರ್ಧಾರ ತೆಗೆದುಕೊಂಡಿದ್ದ. ಈ ಸಾಲನ್ನು ತನ್ನ ಹೊಸ ಕಥೆಯಲ್ಲಿ ಬಳಸುವುದಿಲ್ಲ. ಕನಿಷ್ಠ ಅದರ ಮೂಲ ತಿಳಿಯುವವರೆಗೆ ಅದನ್ನು ತನ್ನ ಕಲ್ಪನೆಯ ಭಾಗವಾಗಲು ಬಿಡುವುದಿಲ್ಲ.
ವಿನಯ್ ಕಾಗದದ ಚಿತ್ರ ತೆಗೆದುಕೊಂಡು, ಅದರ ಮೂಲವನ್ನು ಪತ್ತೆಹಚ್ಚಲು ಪ್ರಯತ್ನಿಸುವುದಾಗಿ ಹೇಳಿದ. ಅವರು ಮುದ್ರಣದ ದಾಖಲೆಗಳು, ಕಪ್ಪು ಲಕೋಟೆ ಮತ್ತು ಅರ್ಧ ಪುಟವನ್ನು ಸುರಕ್ಷಿತವಾಗಿ ಸಂಗ್ರಹಿಸಿದರು.ಕಚೇರಿಯಿAದ ಹೊರಡುವಾಗ ಈಶಾನ್ ಒಮ್ಮೆ ಹಿಂದಿರುಗಿ ಮುದ್ರಕವನ್ನು ನೋಡಿದ.ಅದು ವರ್ಷಗಳಿಂದ ಮೌನವಾಗಿತ್ತು. ಆದರೂ ಅದರೊಳಗೆ ಉಳಿದಿದ್ದ ಒಂದು ಕಾಗದದ ತುಂಡು, ಅವರು ಹುಡುಕುತ್ತಿದ್ದ ಕಥೆಯ ಬಗ್ಗೆ ಹೊಸ ಪ್ರಶ್ನೆಯನ್ನು ಎಬ್ಬಿಸಿತ್ತು.ಮುದ್ರಕವು ಕೇವಲ ಪದಗಳನ್ನು ಕಾಗದದ ಮೇಲೆ ಮೂಡಿಸಿರಲಿಲ್ಲ.ಬಹುಶಃ ಯಾರೋ ಅದನ್ನು ಸಾಕ್ಷಿಯಾಗಿ ಬಳಸಿದ್ದರು.ಅಥವಾ ಸಾಕ್ಷಿಯನ್ನು ಮರೆಮಾಚಲು.
ಸಂಜೆ ಮನೆಗೆ ಮರಳಿದಾಗ, ಈಶಾನ್ನ ಮೊಬೈಲ್ಗೆ ಅಪರಿಚಿತ ಸಂಖ್ಯೆಯಿ೦ದ ಸಂದೇಶವೊ೦ದು ಬಂದಿತು.“ನೀವು ಮುದ್ರಕವನ್ನು ತೆರೆದಿದ್ದೀರಿ. ಈಗ ಆ ಹಾಳೆಗಳನ್ನು ಯಾರಿಗೂ ತೋರಿಸಬೇಡಿ.”
ಈಶಾನ್ ಸಂದೇಶವನ್ನು ಸಾರಾಳಿಗೆ ತೋರಿಸಿದ. ನಂತರ ವಿನಯ್ಗೆ ಕಳುಹಿಸಿದ. ಸಂದೇಶ ಬಂದ ಸಂಖ್ಯೆಯ ವಿವರಗಳನ್ನು ದಾಖಲಿಸಿಕೊಂಡ.ಕೆಲವು ನಿಮಿಷಗಳ ಬಳಿಕ ಮತ್ತೊಂದು ಸಂದೇಶ ಬಂತು.“ನಿಮ್ಮ ತಂದೆ ಕೊನೆಯ ಪ್ರತಿಯನ್ನು ಉಳಿಸಲಿಲ್ಲ. ಅವರು ಅದನ್ನು ನಾಶಪಡಿಸಲೂ ಇಲ್ಲ. ಅವರು ಅದನ್ನು ಯಾರಿಗೆ ಕೊಟ್ಟರು ಎಂಬುದನ್ನು ಹುಡುಕಿ.”
ಅದನ್ನು ಓದಿ ಈಶಾನ್ನ ಕೈಗಳು ನಡುಗಿದವು.ತಂದೆಯೇ ಕೊನೆಯ ಪ್ರತಿಯನ್ನು ಯಾರಿಗಾದರೂ ನೀಡಿದ್ದರೆ, ಆ ವ್ಯಕ್ತಿ ಇನ್ನೂ ಅದನ್ನು ಹೊಂದಿರಬಹುದೇ? ಆ ಪ್ರತಿಯಲ್ಲಿ ಕಾಣೆಯಾದ ಐದನೆಯ ಪುಟ ಮತ್ತು ಆರನೆಯ ಪುಟದ ಉಳಿದ ಭಾಗವಿದೆಯೇ? ಅದರಲ್ಲಿ ನಾಲ್ಕನೆಯ ವ್ಯಕ್ತಿಯ ಗುರುತು ಬಹಿರಂಗವಾಗುತ್ತದೆಯೇ?
ಸಾರಾ ಸಂದೇಶವನ್ನು ಮತ್ತೊಮ್ಮೆ ಓದಿದಳು.“ಇದನ್ನು ಕಳುಹಿಸಿದವರಿಗೆ ನಿನ್ನ ತಂದೆಯ ದಾಖಲೆಗಳ ಬಗ್ಗೆ ಮಾಹಿತಿ ಇದೆ. ಆದರೆ ಅವರು ಹೇಳುತ್ತಿರುವುದು ಸತ್ಯವೇ ಎಂಬುದು ಬೇರೆ ಪ್ರಶ್ನೆ.”
ಈಶಾನ್ ಉತ್ತರಿಸಲಿಲ್ಲ. ಅವನು ತನ್ನ ತಂದೆಯ ಹಳೆಯ ಕಚೇರಿಯಿಂದ ತಂದಿದ್ದ ದಾಖಲೆಗಳನ್ನು ಮತ್ತೆ ಪರಿಶೀಲಿಸಿದ. ಮುದ್ರಣದ ನೋಂದಣಿ ಪುಸ್ತಕದಲ್ಲಿ ತಂದೆಯ ಸಹಿಯಂತಿದ್ದ ಗುರುತು. ವಿಶೇಷ ಪ್ರತಿಯನ್ನು ಕೈಯಲ್ಲಿ ನೀಡಿದ ಟಿಪ್ಪಣಿ. ಗಿ ಎಂಬ ಅಕ್ಷರ. ಮತ್ತು ಮುದ್ರಕದೊಳಗೆ ಸಿಕ್ಕಿದ್ದ ಅಪೂರ್ಣ ವಾಕ್ಯ.
ಅವನು ತನ್ನ ನೋಟ್ಬುಕ್ನ ಕೊನೆಯ ಪುಟದಲ್ಲಿ ಬರೆದ:“ಕೊನೆಯ ಪ್ರತಿಯು ಕಾಣೆಯಾಗಿದೆ ಎಂಬುದು ಖಚಿತವಲ್ಲ. ಅದು ನನ್ನ ಬಳಿ ಇಲ್ಲ ಎಂಬುದಷ್ಟೇ ಖಚಿತ.”ನಂತರ ಅವನು ಪುಸ್ತಕ ಮುಚ್ಚಿದ.
ಆ ರಾತ್ರಿ ಮ್ಯೂಸ್ನಿಂದ ಯಾವುದೇ ಅಧಿಸೂಚನೆ ಬರಲಿಲ್ಲ. ಯಾವುದೇ ಹೊಸ ಅಧ್ಯಾಯವೂ ಕಾಣಿಸಲಿಲ್ಲ. ಆದರೂ ಈಶಾನ್ಗೆ ತನ್ನ ಸುತ್ತಲಿನ ಮೌನವೇ ಹೆಚ್ಚು ಅಸಹಜವಾಗಿ ಕಂಡಿತು.
ಏಕೆAದರೆ ಈಗ ಅವನಿಗೆ ತಿಳಿದಿತ್ತು. ಏನೆಂದರೆ ಕಥೆಯ ಕೊನೆಯಪುಟಗಳು ಕಂಪ್ಯೂಟರ್ನಲ್ಲಷ್ಟೇ ಕಳೆದುಹೋಗಿರಲಿಲ್ಲ. ಅವುಗಳನ್ನು ಯಾರೋ ತಮ್ಮ ಕೈಯಲ್ಲಿಹಿಡಿದಿದ್ದರು ಎಂದು. ಹಾಗಾದರೆ ಆ ವ್ಯಕ್ತಿ ಯಾರು?ಅನಿರುದ್ಧನಾ?ವಿಜಯ್ ಶೆಣೈನಾ?ಅವನ ತಂದೆಯೇ?ಅಥವಾ ಈಶಾನ್ ಇನ್ನೂ ಹೆಸರಿಡಲಾಗದ ನಾಲ್ಕನೆಯ ವ್ಯಕ್ತಿಯೇ?ಅವನು ಯಾವುದೇ ಹೆಸರನ್ನು ಆಯ್ಕೆ ಮಾಡಲಿಲ್ಲ. ಆ ರಾತ್ರಿ ಅವನು ತನ್ನ ನೋಟುಕ್ನಲ್ಲಿ ಹೊಸ ವಿಭಾಗವೊಂದನ್ನು ತೆರೆದ:“ಕಾಣೆಯಾದ ಪ್ರತಿಯ ಬಗ್ಗೆ ದೃಢಪಡಿಸಬೇಕಾದ ಸಂಗತಿಗಳು.” ಅದರ ಮೊದಲ ಸಾಲಿನಲ್ಲಿ “ಪ್ರತಿಯನ್ನು ಕೊನೆಯದಾಗಿ ನೋಡಿದ ವ್ಯಕ್ತಿಯನ್ನು ಗುರುತಿಸುವ ಮೊದಲು, ಅದು ನಿಜವಾಗಿಯೂ ಮೂಲ ಪ್ರತಿಯೇ ಎಂಬುದನ್ನು ದೃಢಪಡಿಸಬೇಕು.” ಎಂದು ಬರೆದ.
ಆ ಸಾಲನ್ನು ಬರೆದ ನಂತರ ಅವನು ಪೆನ್ನನ್ನು ಕೆಳಗಿಟ್ಟ.ಆದರೆ ಮಲಗಲು ಹೋಗುವ ಮೊದಲು ಮೊಬೈಲ್ ಮತ್ತೊಮ್ಮೆ ಬೆಳಗಿತು.ಈ ಬಾರಿ ಒಂದು ಚಿತ್ರ ಮಾತ್ರ.ಹಳೆಯ ಕಾಗದದ ಮೇಲೆ ಕೈಬರಹದಲ್ಲಿ ಬರೆದಿದ್ದ ಅಕ್ಷರಗಳು:U-04ಅದರ ಕೆಳಗೆ ಒಂದು ವಾಕ್ಯ:“ನಾನು ಕಥೆಯ ಅಂತ್ಯವನ್ನು ಬದಲಾಯಿಸಲಿಲ್ಲ, ಈಶಾನ್. ನಾನು ಬದಲಾಯಿಸಿದ್ದುನಿನಗೆ ಯಾವ ಅಂತ್ಯನೆನಪಿರಬೇಕು ಎಂಬುದನ್ನು.”ಈಶಾನ್ ಚಿತ್ರವನ್ನು ಮತ್ತೆ ನೋಡಿದ.ಅದು ಯಾರ ಕೈಬರಹ? ಯಾವಾಗ ಬರೆಯಲ್ಪಟ್ಟಿತು? ನಿಜವಾಗಿಯೂ ನಾಲ್ಕನೆಯ ವ್ಯಕ್ತಿಯ ಸಂದೇಶವೇ? ಅಥವಾ ಅವನನ್ನು ಮತ್ತೆ ಅನುಮಾನಗಳೊಳಗೆ ಎಳೆಯಲು ರೂಪಿಸಿದ ಮತ್ತೊಂದು ಬಲೆಯೇ?ಅವನಿಗೆ ಉತ್ತರ ಇರಲಿಲ್ಲ.
ಆದರೆ ಈ ಬಾರಿ ಅವನು ಆ ವಾಕ್ಯವನ್ನು ತನ್ನ ನೆನಪಿನೊಳಗೆ ಸತ್ಯವಾಗಿ ಸೇರಿಸಿಕೊಳ್ಳಲಿಲ್ಲ.ಅದನ್ನು ಸಾಕ್ಷ್ಯವಾಗಿ ಉಳಿಸಿದ.






0 Comments