ನಾ ಡಿಸೋಜಾ ಅವರ ‘ಹರಿವ ನದಿ’

ಕೆ ಆರ್ ಉಮಾದೇವಿ ಉರಾಳ

ಪ್ರಕೃತಿಯೊಂದಿಗೆ ಬೆರೆತು, ಅದಕ್ಕೆ ತಲೆಬಾಗಿ, ಅದನ್ನನುಸರಿಸಿ ಅದಕ್ಕೆ ಒಲಿದು ಬದುಕು ಸಾಗಿಸುತ್ತಿದ್ದ ಕಾಲದಲ್ಲಿ ನದಿಗಳು ಜನಜೀವನವನ್ನು ರೂಪಿಸಿದವು. ನದಿಯಾಧಾರಿತ ಬದುಕು ರೂಪಿಸಿದ್ದು ಸತ್ವಭರಿತ ಸಂಸ್ಕೃತಿಯನ್ನು. ಡಾ.ನಾ.ಡಿಸೋಜರವರು ಆಧುನಿಕತೆಗಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ನಿಸರ್ಗವನ್ನು ಅದು ಇದ್ದಂತೆಯೇ ಉಳಿಸಿಕೊಂಡು ಬರುವುದರಲ್ಲಿ ಮಾನವನ ಬದುಕಿನ ಹಿತ ಅಡಗಿದೆ ಎಂಬುದರ ಪರಿಜ್ಞಾನವಿಲ್ಲದೆ, ನಿಸರ್ಗದ ಮೇಲಿನ ಎಗ್ಗುಸಿಗ್ಗಿಲ್ಲದ ಅತಿಕ್ರಮಣವನ್ನು ಕೈಗೊಳ್ಳುವುದರಿಂದ ಮನುಷ್ಯ ತೆರಬೇಕಾದ ಬೆಲೆ ಏನು ಎಂಬುದರ ಚಿತ್ರಣವನ್ನು ತಮ್ಮ ಬಹುತೇಕ ಎಲ್ಲಾ ಕೃತಿಗಳಲ್ಲೂ ಕಟ್ಟಿಕೊಟ್ಟಿದ್ದಾರೆ. ಆಧುನಿಕತೆಯ ಅಭಿವೃದ್ಧಿ ಕಾರ್ಯಗಳಲ್ಲಿ ಪರಿಸರವನ್ನು ಕಡೆಗಣಿಸಿರುವುದರ ಕುರಿತ ವೇದನೆ, ಪರಿಣಾಮಗಳನ್ನು ಇವರ ಎಲ್ಲಾ ಕೃತಿಗಳೂ ಒಂದಲ್ಲಾ ಒಂದು ವಿಧದಲ್ಲಿ ನಿರೂಪಿಸುತ್ತವೆ.

ಡಿಸೋಜರ ‘ಹರಿವ ನದಿ’ ಕಾದಂಬರಿ ಶರಾವತಿ ನದಿ ತನ್ನ ಸಹಜ ಸ್ವರೂಪದಿಂದ ಸ್ವತಂತ್ರವಾಗಿ ಹರಿಯುತ್ತಿದ್ದಾಗಿನ ವರ್ಣನೆಯೊಂದಿಗೆ ಪ್ರಾರಂಭವಾಗುತ್ತದೆ. ಶರಾವತಿಯ ಹುಟ್ಟು, ಹರಿವು ಸಾಗರ ಸಂಗಮದವರೆಗೂ ಹರಿವ ಈ ನದಿ ಹಾಗೂ ಅದರೊಂದಿಗೇ ಹಾಸುಹೊಕ್ಕಾಗಿ ಸಾಗಿ ಬರುವ ಜನಜೀವನವೊಂದರ ಚಿತ್ರಣವನ್ನು ಕಟ್ಟಿಕೊಡುತ್ತಾ ನದಿಯ ಏಳುಬೀಳುಗಳೊಂದಿಗೇ ಸಾಗಿಬರುವ ಜನಜೀವನದ ಏಳುಬೀಳುಗಳನ್ನೂ ಹೃದಯಂಗಮವಾಗಿ ಕಟ್ಟಿಕೊಡುತ್ತದೆ.

ಮೂಲ ಸ್ವರೂಪದ ಶರಾವತಿಯ ವರ್ಣನೆ ಮನಸೂರೆಗಳ್ಳುತ್ತದೆ. ತಡಸಲ ಭೋರ್ಗರೆತ. ಕಣಿವೆ, ಮೋಡಗಳು. ಘಟ್ಟ ಹತ್ತಿ ಬಂದು ಅದನ್ನು ಕಣ್ಣಾರೆ ಕಂಡವನು ಕಾದಂಬರಿಯ ಕೇಂದ್ರಬಿಂದು ಶೆಟ್ಲಿಮನೆ ಸಣ್ಣುವಿನ ಅಜ್ಜ ಮಾನಿ. ಅವನ ವಂಶಜರಿಗೆ ಶರಾವತಿಯೇ ದೇವರು. ‘ಇದು ಶ್ರೀರಾಮರ ಶರದಿಂದ ಹುಟ್ಟಿದ ನದಿ ಅಂಬ್ರು… ನಮ್ಮ ನಸೀಬು ಅಲ್ದಾ ಇದು’ ಎಂದು ಮಾನಿ ಮಕ್ಕಳಿಗೆ ನದಿಯ ಹುಟ್ಟಿಗೆ ಕಾರಣವಾದ ಕತೆಯನ್ನು ಹೇಳುತ್ತಿದ್ದುದನ್ನು ಕೇಳುತ್ತಾ ಆ ಸೀಮೆಯ ಜನ ಬದುಕಿದ್ದರು. ಮಾನಿ ಗೇರಸೊಪ್ಪೆಯಿಂದ ತಾಳಗುಪ್ಪೆಗೆ ಹೋಗುವ ಘಟ್ಟದ ರಸ್ತೆಯಲ್ಲಿ ಸಾಗಿ ಮಾವಿನ ಗುಂಡಿಯಲ್ಲಿನ ಈ ತಡಸಲನ್ನು ಕಣ್ಣಾರೆ ಕಂಡವನು.

ಹೊನ್ನಾವರದಲ್ಲಿ ಸಮುದ್ರ ಸೇರುವ ತನಕ ಶಾಂತವಾಗಿ ಹರಿವ ಈ ನದಿಯು ಅಬ್ಬರದಿಂದ ಬೊಬ್ಬಿಡುತ್ತಾ ಧುಮುಕುವ ಜಲಪಾತದ ಚಿತ್ರೋಪಮ ವರ್ಣನೆಯೇ ಈ ನದಿಯ ಸಮೃದ್ಧ ಕ್ರಿಯಾಶೀಲತೆಯನ್ನು ಬಿಂಬಿಸುತ್ತದೆ. ಇಂತಹ ಶರಾವತಿಯೇ ತಮ್ಮ ದೇವರೆಂದು ಸಣ್ಣಿಯ ಪೂರ್ವಿಕರಲ್ಲದೆ ಮೊಗೇರರು, ದೀವರು, ದಾಲ್ಚಿಗಳು, ಕಿರಿಸ್ತಾನರು, ಕೊಂಕಣಿಗರು, ಸೊನಗಾರರು ಎಂದು ಸಮಸ್ತ ಜನ ಯಾವುದೇ ಆತಂಕವಿಲ್ಲದೆ ಪರಸ್ಪರ ಸ್ನೇಹ ಸಹಕಾರ ವಿಶ್ವಾಸದಿಂದ ಪ್ರಶಾಂತವಾಗಿ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾಗಿನ ಓದು ತಂಪು ಹೊಳೆಯಂತೆ ಮನಕೆ ತಂಪೆರೆಯುತ್ತದೆ.

ದೋಣಿಯನ್ನು ನದಿಗಿಳಿಸುವಾಗ ಮೊದಲು ಅದಕ್ಕೆ ಕೈಮುಗಿದೇ ಸಣ್ಣಿಯ ಮೀನುಗಾರಿಕೆ ಆರಂಭ. ವಿಧವಿಧದ ತರಹೇವಾರಿ ಮೀನುಗಳು. ಆ ಮೀನುಗಳ ಮಾರಾಟ. ಇವನ ತಂದೆ ದುಗ್ಗ ಕೇಳಿದವರಿಗೆ ಕೈಗಡ ಕೊಟ್ಟು ಕೈಸುಟ್ಟುಕೊಂಡವನು. ಅದರಿಂದಾಗಿ ಸಣ್ಣಿ ವ್ಯಾಪಾರದಲ್ಲಿ ಖಡಕ್. ಆದರೆ ಅವನಿಗೆ ದುರಾಸೆ ಎನ್ನುವುದು ಇನಿತೂ ಇಲ್ಲ. ತಾನು ವಿತರಿಸುವ ಮೀನುಗಳೊಂದಿಗೆ ಆಯಾ ಕುಟುಂಬಗಳ ಹಿತಚಿಂತನೆ ಮಾಡುತ್ತಾನೆ. ಪಕ್ಕದ ಮನೆಯ ಕಾಂತುನಾಯಕನ ಮಗಳು ಕೆಂಪಿ ಇವನ ಮನೆಯ ಮಗಳೂ ಹೌದು.

ದಾಲ್ಚಿಕಾಕಾ ಹಾಗೂ ತಿಪ್ಪನ ಮಗಳು ಸಾವಿ ಪರಸ್ಪರರಲ್ಲಿ ಅನುರಕ್ತರಾಗಿದ್ದರೂ ಮದುವೆಯಲ್ಲಿ ಒಂದಾಗಲಾರದ ಕುರಿತು ಸಣ್ಣಿ ಮರುಕಪಡುತ್ತಾನೆ. ಬೂತಾಯಿ ಮೀನಿನ ಪಲ್ಯದ ಮೇಲಿನ ಪ್ರೀತಿಯಿಂದಾಗಿ ‘ಬೂತಾಯಿ ಸುಕ್ಕ’ ಎನಿಸಿಕೊಂಡವನು ಬೂತಾಯಿ ಮೀನನ್ನು ಕದಿಯುವುದನ್ನೂ ಕಂಡ ಸಣ್ಣಿ ಅವನಿಗೆ ಮೀನುಗಾರಿಕೆ ಕಲಿಸಿಕೊಡುತ್ತಾನೆ. ದುಡಿದು ತಿನ್ನುವುದರ ಮಹತ್ವ ತಿಳಿಸುತ್ತಾನೆ. ಮರಾನ್ ಬೀಡಿನ ಹೆಗಡೆಯವರಿಗೆ ಹಾವು ಕಡಿದಾಗ ಸಣ್ಣಿ ತನ್ನ ದೋಣಿಯಲ್ಲೇ ಅವರನ್ನು ಪಂಡಿತರಿದ್ದಲ್ಲಿಗೆ ರಾತ್ರಿಯ ಕಗ್ಗತ್ತಲಲ್ಲೂ ಸಾಗಿಸಿ ಅವರನ್ನು ಬದುಕುಳಿಸಿದವನು.

ಹಸಿದವರಿಗೆ ಅನ್ನ ನೀಡುವ ಉದ್ದೇಶದಿಂದಲೇ ಉಡುಪರು ಊಟದ ಹೋಟೆಲ್ ತೆರೆದಾಗ ಮೀನು ಕೊಳ್ಳಲು ಬಂದವರು ತಂದು ಕೊಡುತ್ತಿದ್ದ ತರ್ಕಾರಿಗಳನ್ನು ಉಡುಪರಿಗೆ ಒಯ್ದುಕೊಟ್ಟು ಒಂದು ಚಾ ಕುಡಿದು ಅವರೊಂದಿಗೆ ಕಷ್ಟಸುಖ ಹಂಚಿಕೊಳ್ಳುತ್ತಿದ್ದವನು. ಮಗ ಅಣ್ಣುವಿನ ಹೆಂಡತಿ ಚಂದ್ರಿಯ ತಾಯಿ ಒಬ್ಬಳೇ ಇರಬೇಕಾಗುತ್ತದೆಂದು ತಮ್ಮೊಂದಿಗೇ ಬಂದು ಇರಿ ಎಂದ ಸಹೃದಯಿ. ಘಟ್ಟದ ಒಡ್ಡಿನಿಂದ ನೀರು ಬಿಡುವಾಗ ತಮ್ಮಟೆ ಸಾರಿಸುವ ಕ್ರಮ. ಅವರು ತಮ್ಮಟೆ ಸಾರುವಷ್ಟರಲ್ಲಿ ಘಟ್ಟದ ಮೇಲೆ ಸುರಿದ ನೀರು ಇಲ್ಲಿನ ಹಿತ್ತಿಲುಗಳಿಗೆ ನುಗ್ಗಿರುತ್ತಿತ್ತು.

ಹೀಗಾಗಿ ಸಣ್ಣಿ ಮರೋಳಿ ಗೇರಸೊಪ್ಪೆ ಮತ್ತಿತರ ಹಳ್ಳಿಗಳಿಗೆ ತಾನೇ ಹಾಳೆ ಟೊಪ್ಪಿ ಹಾಕಿಕೊಂಡು ಹೋಗಿ ಎಚ್ಚರದಿಂದಿರಿ ಎಂದು ಹೇಳಿಬರುವವ. ಹೆಂಡತಿ ಪರೋತಿಯೊಂದಿಗೆ ಪ್ರೀತಿಯ ಸಹಬಾಳ್ವೆ. ಆಕೆಯಾದರೂ ಚಣ ವಿರಮಿಸದ ಕ್ರಿಯಾಶೀಲೆ. ಎಲ್ಲರ ಅನುವು ಆಪತ್ತಿಗೊಳಗಾಗುವವಳು. ಪತಿಯ ವಿವಾಹಪೂರ್ವ ಪ್ರಣಯ ಪ್ರಸಂಗವನ್ನೂ ವಿನೋದವಾಗಿ ನೋಡಬಲ್ಲ ಇಂಗಿತಜ್ಞತೆ ಗಂಡಹೆAಡಿರಲ್ಲಿ.

ಆದರೆ ನದಿಗೆ ಒಡ್ಡುಗಳಾದಾಗ ನದಿಯ ಹರಿವು ತಗ್ಗಿತು. ಮಳೆಗಾಲದಲ್ಲಿ ಇತಿಮಿತಿ ಮೀರಿ ನೀರು ಮುನ್ನುಗ್ಗಿ ವಿಪತ್ಕಾರಿಯಾಯಿತು. ಮುಗ್ವಾದಲ್ಲಿ ಕವಲು ಚಾಚಿ ದ್ವೀಪ ಮಾಡಿ ಅಲ್ಲಿದ್ದ ರಾಮದೇವರ ಗುಡಿಗೊಂದು ಚೆಲುವು ತಂದುಕೊಟ್ಟಿದ್ದ ಶರಾವತಿ ಈಗ ಗುಡಿಯ ಸುತ್ತ ನೀರಿಂಗಿಸಿಕೊAಡು ಹಾಳು ಬಳ್ಳಿಗಳು ಬೆಳೆದಿವೆ. ಬೇಡ್ಕಣಿಯ ಸಂತನ ಇಗರ್ಜಿ ಹೊಳೆಯಿಂದ ಬರುವ ಜನರಿಲ್ಲದೆ ದಾರಿ ಬದಿಯಲ್ಲಿ ಪುನರ್ ಪ್ರತಿಷ್ಠಾಪಿತಗೊಳ್ಳುವ ಸನ್ನಾಹದಿಂದ ಹಳೆ-ಹೊಸ ಇಗರ್ಜಿಗಳ ನಡುವೆ ಪರ-ವಿರೋಧದ ಸಂಘರ್ಷವೆದ್ದಿದೆ. ದಾರಿ ನಿರ್ಮಾಣವಾಗಿ ಬಸ್ಸುಗಳು ಟೆಂಪೋ ಓಡಿಯಾಡುತ್ತವೆ.

ಈಗ ದೋಣಿ ಯಾರಿಗೂ ಬೇಡವಾಗಿದೆ. ಹಾಗೆಯೇ ರ‍್ಸಿನ್ ಬೋಟುಗಳಲ್ಲಿ ಸಮುದರದಲ್ಲಿ ದೂರ ಹೋಗಿ ಬೀಸುವ ಭಾರೀ ಬಲೆಗೆ ಬೇಕಾದ್ದು ಬೇಡಾದ್ದು ಎಲ್ಲ ಸೇರಿಕೊಳ್ಳುತ್ತಾ ಮೀನುಗಳನ್ನು ದೋಚಿಕೊಳ್ಳುತ್ತಾರೆ. ಮಳೆಗಾಲದಲ್ಲಿ ಮೀನುಗಳಿಗೆ ಮರಿಮಾಡಲು ಕೂಡ ಬಿಡದೆ ಗೋರಿಕೊಳ್ಳುವ ದುರಾಸೆ. ದೋಣಿಯಲ್ಲಿ ಮೀನು ಹಿಡಿಯುವುದು ಯಾರಿಗೂ ಬೇಡವಾಗಿದೆ. ಮೀನಂಗಡಿಗಳಾಗಿವೆ. ಸಣ್ಣಿಯ ಮೀನುಗಳಿಗೀಗ ಮೊದಲಿನ ಬೇಡಿಕೆಯಿಲ್ಲ.

ಹೊಸ ತಲೆಮಾರಿನ ಮುಖಗಳಿಗೂ ಸಣ್ಣಿ ಬುಡ ಲಡ್ಡಾದ ದೋಣಿಯಂತೆ ಕಾಣುತ್ತಾ ಬೇಡವಾಗಿದ್ದಾನೆ. ಆದರೆ ಸಣ್ಣಿ ಮೀನು ಹಿಡಿವ ತನ್ನ ಕಾಯಕ ಕೈಲಾಗುವವರೆಗೂ ಮಾಡಿದ್ದಾನೆ. ಪರೋತಿಯಂತೂ ತನ್ನ ಕೊನೆ ಉಸಿರಿರುವವರೆಗೂ ದುಡಿದಳು. ‘ಈ ಹೊಳಿ ಕಾಂಬ ಅದೆಷ್ಟು ವರ್ಷದಿಂದ ಇಲ್ಲಿ ಅದಿಯೋ ಅದು ಹರಿಯೋದು ಸಾಕು ಅಂತ ನಿಂತಿದೆಯಾ? ಮೈಯಾಗ ಬಲ ಇರೋ ತನಕ ಏನಾದರೊಂದು ಮಾಡಬೇಕು ಅಲ್ದಾ?’ ಎಂದು ಕೊನೆವರೆಗೂ ದುಡಿಯುತ್ತಲೇ ಕೊನೆಯುಸಿರೆಳೆದು ಎಲ್ಲರ ಮನ ಮೀಟಿದವಳು.

ಮೀನುಗಾರರ ಜೀವನದ ರೂಪಕ ಉಪಮೆ ಪ್ರತಿಮೆ ಗಾದೆಗಳು ಅಲ್ಲಲ್ಲಿ ಸೂಕ್ತವಾಗಿ ಬಳಕೆಯಾಗಿರುವುದು ಸನ್ನಿವೇಶದ ಚಿತ್ರಣಕ್ಕೆ ವಾಸ್ತವದ ಮೆರುಗು ನೀಡಿವೆ. ಉದಾಹರಣೆಗೆ ‘ಬೂತಾಯಿ ಮತ್ತೊಂದಿಷ್ಟು ಸಿಕ್ಕರೆ ತೆಂಗಿನ ಮರಕ್ಕೆ ಗೊಬ್ಬರ ಅಂತ ಹಾಕೋದು ಉಂಟಲ್ಲ ಹಂಗೆ ನಮ್ಮ ಬದುಕು.’ ಅಲೆಗಳೇ ಹೆಡೆ ಎತ್ತಿ ಕೆಳಗಿನ ನೀರನ್ನು ದೊಸಲ್ಲನೆ ಬಡಿದು ಹಾಕಿ ಬೊಬ್ಬೆ ಹೊಡೆದವು.’ ಅನಿರೀಕ್ಷಿತವಾಗಿ ಭಾರೀ ಮಳೆಯ ಚಿತ್ರಣದ ಶಬ್ದಚಿತ್ರ ಮಳೆಯನ್ನು ಕಣ್ಣಮುಂದೆ ತಂದುಕಟ್ಟಿ ನಿಲ್ಲಿಸುವಷ್ಟು ಸಶಕ್ತವಾಗಿದೆ.

ಹಾಗೆಯೇ ಮಳೆಗಾಲದ ಸಮುದ್ರದ ವರ್ಣನೆ ಮೀನುಗಾರರ ಕಣ್ಣಿನಿಂದ ನೋಡುವ ವಿಶಿಷ್ಟ ನೋಟದ ಚಿತ್ರಣವಿದೆ (ಪುಟ ೭೪-೭೫). ನದಿಗೆ ಒಡ್ಡು ಹಾಕಿದಾಗ ನದಿ ಕೆಳಗೆ ಇಳಿಯಿತೆಂದು ಬಡ್ತೇಲ ಅಲ್ಲಿ ಮನೆ ಕಟ್ಟಿದ್ದ. ಆದರೆ ಮಳೆಗಾಲದಲ್ಲಿ ಮಿತಿ ಮೀರಿದ ಮಳೆ ಅವನ ಮನೆಯಿದ್ದಲ್ಲೂ ವಿಸ್ತರಿಸಿತು. ಆಗ ಸಣ್ಣಿ ಹೇಳುತ್ತಾನೆ, ‘ಇದು ಹೊಳಿ ಜಾಗ ಅಲ್ದಾ… ನೀನು ಅಲ್ಲಿ ಮನೆ ಕಟ್ಟಿದ್ದು ತಪ್ಪು. ಮೊದಲು ಅದರ ಜಾಗ ಅದಕ್ಕೆ ಬಿಟ್ಟು ಕೊಡು ಕಾಂಬ.’ ಎಂತಹ ನಿಸರ್ಗಾರಾಧನೆಯ ಮನೋಭಾವ! ಮುಂದಿನ ವರ್ಷಗಳ ಕೇರಳ ಕೊಡಗು ಮಲೆನಾಡುಗಳ ಮಾರಿನೆರೆಗಳನ್ನು ನೋಡುವಾಗ ಈ ಮಾತುಗಳ ದಾರ್ಶನಿಕ ಶಕ್ತಿ ಮನಗಾಣುತ್ತದೆ.

ಇಲ್ಲಿನ ಮೀನುಗಾರರ ಬದುಕಿನ ಮತ್ಸ್ಯ ಸಂಬಂಧಿ ಘಮಲು ಸರೋಜಿನಿ ನಾಯ್ಡುರವರ ‘ಕೋರಮಂಡಲ್ ಫಿರ‍್ಸ್’ ಕವನದ ಕಾವ್ಯಾತ್ಮಕತೆ ಹೊಂದಿದ್ದರೆ, ಸಣ್ಣಿಯು ಅರ್ನೆಸ್ಟ್ ಹೆಮಿಂಗ್ವೇಯ ದ ಓಲ್ಡ್ ಮ್ಯಾನ್ ಅಂಡ್ ದ ಸೀ ಯ ನಾಯಕ ಸಾಂಟಿಯಾಗೋನ ಜೀವನ ಶ್ರದ್ಧೆಯ ಪ್ರತೀಕವಾಗಿದ್ದಾನೆ. ಹರಿವ ನದಿ’ಯ ಓದು ನದಿಯೊಂದರ ಹರಿಯುವಿಕೆಯ ಚೈತನ್ಯಶೀಲತೆಯ ಭಾವವನ್ನು ನಮ್ಮೆದೆಯಲ್ಲಿ ಬಿಂಬಿಸುತ್ತದೆ.

‍ಲೇಖಕರು Avadhi

May 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: