ಕರ್ಟನ್ ಕಾಲ್ ಗೆ ಬರಲೇ ಇಲ್ಲ ಎಂ ಸಿ ಆನಂದ್

ಆನಂದ್ ರವರ ಕೊನೆಯ ಕ್ಷಣಗಳಲ್ಲಿ…

ಕೆ ಆರ್ ಗಣೇಶ್ ಶಣೈ

ಎಂ ಸಿ ಆನಂದ್ ರವರನ್ನು ರಂಗದ ಮೇಲೇ ನೋಡಿದ್ದು, ನಾನು ಹೈಸ್ಕೂಲ್ ನಲ್ಲಿದ್ದಾಗ. ಆಗಲೇ ‘ಎಂಸಿ’ ಯವರು ‘ನಟ’ ಎಂದು ಖ್ಯಾತರಾಗಿದ್ದರು. ಮುಂದೆ ನಮ್ಮ ತಂಡ ‘ಸಂಚಯ’ ಶುರುವಾದಾಗ ಎಂಸಿ ಸರ್ ದೆಹಲಿ ಸೇರಿಬಿಟ್ಟಿದ್ದರು. ಪುನಃ ಅವರನ್ನು ರಂಗದ ಮೇಲೆ ನೋಡಿದ್ದು ೨೦೦೨/೩ ರಲ್ಲಿ. ಆನಗಳ್ಳಿ ನಿರ್ದೇಶಿಸಿದ ನಾಟಕದಲ್ಲಿ ಪಾದರಸದಂತೆ ಅಭಿನಯಿಸಿದ್ದರು. ನಾಟಕದ ಹೆಸರು ನೆನಪಿಲ್ಲ ಆದರೆ ಆ ನಾಟಕಕ್ಕೆ ಗೆಳೆಯ ರಾಜು ಅನಂತಸ್ವಾಮಿಯ ರಂಗಸಂಗೀತವಿತ್ತು.

2004 ರಲ್ಲಿ ನಮ್ಮ ತಂಡಕ್ಕೆ ಆರ್ ನಾಗೇಶ್ ರವರು ‘ಚೂರಿಕಟ್ಟೆ’ ನಾಟಕ ನಿರ್ದೇಶನ ಮಾಡುವ ಸಂದರ್ಭದಲ್ಲಿ ರಂಗ ವಿನ್ಯಾಸಕ್ಕಾಗಿ ಎಂಸಿ ಯವರನ್ನು ಕರೆತಂದರು. ಆ ನಾಟಕಕ್ಕೆ ಹೆಚ್ಚು ಖರ್ಚಿಲ್ಲದ, ಆದರೆ ಪರಿಣಾಮಕಾರಿಯಾದ ರಂಗ ಸಜ್ಜಿಕೆಯನ್ನು ವಿನ್ಯಾಸಗೊಳಿಸಿದ್ದರು. ಈ ನಾಟಕದಿಂದ ನನ್ನ ಅವರ ಒನ್ ಟು ಒನ್ ಒಡನಾಟ ಶುರುವಾಯಿತು. ಅವರ ಮನೆ ಆಗ ಕನಕಪುರ ರಸ್ತೆಗೆ ಅಂಟಿಕೊಂಡಂತ್ತಿದ್ದ. ಜೆಪಿನಗರದಲ್ಲಿತ್ತು.

ನಾನು ಜಯನಗರದ ಅಮ್ಮನ ಮನೆಗೆ ಇವರ ಮನೆಯ ಮುಂದೆಯೇ ಹೋಗುತ್ತಿದ್ದೆ. ಅಂತಹದ್ದೆ ಒಂದು ದಿನ ಎಂಸಿ ನನ್ನನ್ನು ಮನೆಯ ಮುಂದೆಯೇ ಹಿಡಿದು ಹಾಕಿದರು. ಅವರ ಜೊತೆಗೆ ಆರ್ ನಾಗೇಶ್ ಕೂಡಾ ಇದ್ದರು. ಆನಂತರ ನಮ್ಮ ಭೇಟಿ ಸುಮಾರು ಹದಿನೈದು ವರ್ಷಗಳು ನಿರಂತರವಾಗಿ ನಡೆಯಿತು. ಊಟ, ತಿಂಡಿ ಕಾಫಿ, ಟೀ ಯ ತಳಹದಿಯಲ್ಲಿ ನಮ್ಮ ಹರಟೆ, ಎಲ್ಲಾ ವಿಷಯದಲ್ಲೂ ಮುಖ್ಯವಾಗಿ ರಂಗಭೂಮಿಯ ಬಗ್ಗೆಯೇ ಇರುತ್ತಿತ್ತು. ಅದರಲ್ಲೂ ಸಣ್ಣಕತೆ, ಪತ್ರಿಕೆಯಲ್ಲಿ ಬರುವ ಕೆಲವು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಾಟಕ ರಚನೆ, ಆದನ್ನು ಹೇಗೆ ರಂಗದ ಮೇಲೆ ಹೆಚ್ಚು ಖರ್ಚಿಲ್ಲದೇ ತರುವುದು, ರಂಗ ಪರಿಕರಗಳನ್ನು symbolic ಆಗಿ ಉಪಯೋಗಿಸುವುದು, no loss no profit ನಲ್ಲಿ ರಂಗಪ್ರಯೋಗಗಳ ಬಗ್ಗೆ ನಮ್ಮ ಹರಟೆ ನಡೆಯುತ್ತಿತ್ತು. ಆಗಲೇ ಆನಂದ್ ರವರು ತಮ್ಮ ಕೆಳಮಹಡಿಯ ಜಾಗವನ್ನು ‘ಸಿಂಚನ’ ಆಪ್ತ ಮಂದಿರವನ್ನಾಗಿ ವಿನ್ಯಾಸಗೊಳಿಸಿದರು, ಅದಕ್ಕೆ ಅವರ ಇಂಜಿನಿಯರಿಂಗ್ ಕೌಶಲ್ಯವೂ ನೆರವಿಗೆ ಬಂತು.

ಮಾರ್ಗದರ್ಶಕರಾಗಿ ಆರ್ ನಾಗೇಶ್, ಎಲ್ ಕೃಷ್ಣಪ್ಪ ಅವರ ಜೊತೆಗಿದ್ದರು. ಈ ಸಮಯದಲ್ಲಿ ನಾವು ಸುಮಾರು ಮೂವತ್ತು ಕತೆಗಳನ್ನು ರಂಗನಾಟಕವಾಗಿಸಿದೆವು. ಈ ಪ್ರಯತ್ನದಲ್ಲಿ ಅಭಿರುಚಿ ಚಂದ್ರು, ಆನಂದ್ ಸಭಾಪತಿ, ಗುಣಕೀಮಠ್ ರವರೂ ಕೂಡಾ ಸಹ ಪಾಲುದಾರರು. ನಾವು ಯಾರು ಎಂಸಿ ಮನೆಗೆ ಬರೀ ಕೈಯಲ್ಲಿ ಬರುತ್ತಿರಲಿಲ್ಲ, ಜೊತೆಗೆ ಕತೆಯೋ ಪೇಪರ್ ಕಟ್ಟಿಂಗ್ ಅಥವಾ ಸಿಡಿ ನಮ್ಮೊಂದಿಗೆ ಇರುತ್ತಿತ್ತು. ಸಿಂಚನದಲ್ಲಿ ಹಲವಾರು ಕಿರು ನಾಟಕೋತ್ಸವಗಳು, ಗೀತ ಕಾರ್ಯಕ್ರಮಗಳು ಸಂವಾದಗಳು ಸೇರಿದಂತೆ, ಪ್ರತಿನಿತ್ಯ ಯಾವುದಾದರೂ ನಾಟಕದ ತಾಲೀಮು ನಡೆಯುತ್ತಿತ್ತು.

ನಮ್ಮ ಕಾರ್ಯಕ್ರಮಗಳಿಗೆ ಸುತ್ತಮುತ್ತಲಿನ ನಿವಾಸಿಗಳೇ ಪ್ರೇಕ್ಷಕರು!! ಸುಮಾರು ಏಳೆಂಟು ವರುಷಗಳ ಸಾಂಸ್ಕೃತಿಕ ಸಂಭ್ರಮದ ಕೇಂದ್ರ ಭಿಂದು ನಮ್ಮ ಆನಂದ್ ವರಾಗಿದ್ದರು.. ಅದನ್ನು ಬಹಳ ಶ್ರಧ್ಧೆಯಿಂದ ಸಂತೋಷದಿಂದ ಮಾಡುತ್ತಿದ್ದರು. ನಮ್ಮ ಹರಟೆಯ ಚಾವಡಿಗೆ ಅಸರ್ ನಾಗೇಶ, ಸಭಾಪತಿ, ಚಂದ್ರು ಮೋಹನ್ ಕುಮಾರ, ಮನೋಹರ ಕುಲ್ಕರ್ಣಿ ಖಾಯಂ ಸದಸ್ಯರು.. ನಡುನಡುವೆ ಎಂ ಎಸ್ ಸತ್ಯುರಂತಹ ಘಟಾನುಘಟಿಗಳು ಬರುತ್ತಿದ್ದರು. ಇವರಲ್ಲಿ ಅತ್ಯಂತ ಕಿರಿಯ ಸದಸ್ಯ ನಾನೇ!! ಈ ಮಹನೀಯರಿಂದ ಹಲವಾರು ವಿಷಯಗಳನ್ನು ನಾನು ಕಲಿತೆ.

ಆ ಸಮಯದಲ್ಲಿ ಹುಟ್ಟಿದ್ದೆ, ನಾಟಕ ‘ಸುದ್ದಿ ಇದು ಸುದ್ದಿ’. ಎಂಎಸ್ ಶ್ರೀ ರಾಮ್ ರವರ ಸಣ್ಣಕತೆಯನ್ನು ಮೊದಲು ನಾಟಕವನ್ನಾಗಿಸುವ ಕೆಲಸ ಶುರುಮಾಡಿದ್ದು, ಸಭಾಪತಿ, ಆನಂದ್, ಅಭಿರುಚಿ ಚಂದ್ರು ಮತ್ತು ಎಂಸಿ (ಈ ಮೂವರನ್ನು ‘ಅಆಆ’ ಎಂದು ಕರೆಯುತ್ತಿದ್ದೆ.) ಈ ರಂಗರೂಪದಲ್ಲಿ ಮೂವತ್ತೆಂಟು ದೃಶ್ಯಗಳು ಮುಖ್ಯವಾಗಿ ಸ್ವಗತಗಳೇ ಹೆಚ್ಚಿದ್ದವು. ಪ್ರದರ್ಶನಕ್ಕೆ ಕ್ಲಿಷ್ಟವಾಗಬಹುದೆಂದು ಎಂಸಿ ‘ನೋಡಿ, ಸಾರ್ ನೀವೇನಾದರೂ ಕರಾಮತ್ ಮಾಡ್ತೀರಾ ಎಂದು ಸವಾಲೆಸೆದರು. ನಾನು ಹನ್ನೆರಡು ದೃಶ್ಯಗಳಿಗೆ ಇಳಿಸಿ ನಾಟಕ ರಂಗದ ಮೇಲೆ ಭಂಡ ಧೈರ್ಯದಿಂದ ತಂದುಬಿಟ್ಟೆ. ಯಶಸ್ವಿಯೂ ಆಯಿತು. ಆ ಯಶಸ್ಸು ನಿಜವಾಗಿ, ಅಆಆ, ಶ್ರೀ ರಾಮ್ ಮತ್ತು VASP ತಂಡಕ್ಕೆ ಸೇರಬೇಕು.

ಎಂಸಿಯವರು ಚೆಕಾವ್ ರವರ ಅನೇಕ ಕತೆಗಳನ್ನು ನಾಟಕಕ್ಕೆ ರೂಪಾಂತರಿಸಿದರು, ನಾನು ಅಭಿರುಚಿ ಚಂದ್ರುರವರ ಆಜ್ಞೆಯಂತೆ ಮಾಸ್ತಿಯವರ ನಾಕು ಕತೆಗಳನ್ನು ನಾಟಕಕ್ಕೆ ಅಳವಡಿಸಿದೆ.. ಎಂಸಿ ಆನಂದರವರು, ಅಭಿನಯ, ನಾಟಕ ರಚನೆ, ನಿರ್ದೇಶನ, ವಿನ್ಯಾಸ, ಪರಿಕರ, ಮತ್ತು ಪೋಸ್ಟರ್ ರಚನೆಯಲ್ಲಿ ಇನಿಲ್ಲದ ಉತ್ಸಾಹ, ಹುರುಪಿನಿಂದ ತೊಡಗಿಸಿಕೊಂಡಿದ್ದರು. ಅದು ಯುವಕರನ್ನೂ ನಾಚಿಸುವಂತಿತ್ತು. ನಿಜವಾದ ಅರ್ಥದ ‘ರಂಗಕರ್ಮಿ’ಯಾಗಿದ್ದರು. ಇವರು ರಚಿಸಿ ನಿರ್ದೇಶಿಸಿದ ‘ಮಂದಿಗಾಗದಿರು ಬಲಿ’ ನಾಟಕದಲ್ಲಿ ಹಿರಿಯರಾದ ಶಿವರಾಮ್, ಭಾರ್ಗವಿ ನಾರಾಯಣ್ ಅಭಿನಯಿಸಿದ್ದು ವಿಶೇಷವಾಗಿತ್ತು.

ಆ ಸಂದರ್ಭದಲ್ಲಿ ಅಭಿರುಚಿ ಚಂದ್ರು ಮತ್ತು ಆನಂದ್ ನಡುವೆ ನಡೆಯುತ್ತಿದ್ದ ವಾಗ್ವಾದಗಳು, ಮಾತಿನ ಭರಾಟೆ ಮಜವಾಗಿರುತ್ತಿತ್ತು ಯಾರೂ ಸೋಲುತ್ತಿರಲಿಲ್ಲ ಗೆಲ್ಲುತ್ತಲೂ ಇರಲಿಲ್ಲ. ಅಲ್ಲಿ ಗೆಲ್ಲುತ್ತಿದ್ದುದು ರಂಗಭೂಮಿ!!!. ನಾನು ಎಂಸಿ ಯವರನ್ನು ‘ನೀವು ಬಿಡಿ ಸಾರ್ ಹೃಷಿಕೇಶ್ ಮುಖರ್ಜಿ ಆಫ್ ಕನ್ನಡ ರಂಗಭೂಮಿ’ ಅಂತ ತಮಾಶೆ ಮಾಡುತ್ತಿದ್ದರೂ ಅದು ಅಕ್ಷರಶಃ ನಿಜ.

ಯಾವುದೇ ಗಂಭೀರ ಘಟನೆಗೆ ತಿಳಿ ಹಾಸ್ಯ ಬೆರಸಿ, ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸುವ ಚಾಕಚಕ್ಯತೆ ಅವರಿಗೆ ಕರಗತವಾಗಿತ್ತು. ಆನಂದ್ ರವರ ಎಲ್ಲಾ ಕಾರ್ಯಚಟುವಟಿಕೆಗೆ ಸ್ಪೂರ್ತಿಯಾಗಿದ್ದವರು, ಅವರ ಪತ್ನಿ ಪದ್ಮ ಮಾಲಿನಿ. ಎಂಸಿ ಆನಂದ್ ರವರೇ ಆಗಾಗ ಹೇಳುತಿದ್ದ ಲೈನು… ‘ಅವಳೇ ಸಾರ್ ನನ್ನ ಲೈಫ್ ಲೈನ್’. ಆನಂದ್ ರವರ ಕೊನೆಯ ಕ್ಷಣಗಳಲ್ಲಿ ನಾನು ಫೋನ್ ಮಾಡಿದ್ದಾಗಲೂ ಅವರು ಹೇಳಿದ್ದು ಈ ಸಾಲು!! ಪದ್ಮಾ ರವರು ಆರೋಗ್ಯವಾಗಿ ಆಸ್ಪತ್ರೆಯಿಂದ ಮನೆಗೆ ಬಂದರು… ಆನಂದ್ ಮಾತ್ರ ಹಠಾತ್ತನೆ ನಿರ್ಗಮಿಸಿ ಬಿಟ್ಟರು‌.. ಕರ್ಟನ್ ಕಾಲ್ ಗೆ ಬರಲೇ ಇಲ್ಲ!!! ಅವರಿಗೆ ರಂಗ ನಮಸ್ಕಾರ…

‍ಲೇಖಕರು Avadhi

May 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: