ಜೋಗಿ ಅಂಕಣ ‘ನವ ಪಲ್ಲವ’ ಆರಂಭ

ಪರಂಪರೆಯ ಕೊಂಡಿ ಮತ್ತು ಹೊಸತನದ ಕಿಂಡಿ

ಬಿ ಎಂ ಗಿರಿರಾಜ ಬರೆದ ಕಥೆಗೆ ಸಾವಿಲ್ಲ ಓದುತ್ತಿದ್ದಂತೆ ಈ ಎಲ್ಲಾ ಪ್ರಶ್ನೆಗಳು ಗುದ್ದಿಕೊಂಡು ಬಂದವು

‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು.

ಜೋಗಿ ಬಗ್ಗೆ ಸವಿವರ ಬೇಕಾದರೆ ಈ ವಿಡಿಯೋ ನೋಡಿ

ಈಗ ಜೋಗಿ ಅವಧಿಯ ಮೇಲಿನ ಅಭಿಮಾನದಿಂದ ಪ್ರತೀ ಭಾನುವಾರ ಹೊಸ ತಲೆಮಾರಿನವರ ಬರಹವನ್ನೇ ಗಮನದಲ್ಲಿಟ್ಟುಕೊಂಡು ‘ನವ ಪಲ್ಲವ’ ಬರೆಯಲಿದ್ದಾರೆ.

ಒಂದು ವಾರದ ಕೆಳಗೆ ನಾವೆಲ್ಲ ಒಟ್ಟಾಗಿ ಕತೆ, ಕವಿತೆಗಳನ್ನೆಲ್ಲ ಚರ್ಚಿಸುವ ಒಂದು ಗುಂಪಿನಲ್ಲಿ, ಸುಮಾರು 30ರ ಆಸುಪಾಸಿನಲ್ಲಿರುವ ಒಬ್ಬರು ಒಂದು ಲೇಖನ ಬರೆದು ಹಾಕಿದರು. ಆ ಲೇಖನ ಅವರು ಓದಿರುವ ಇತ್ತೀಚೆಗೆ ಬಂದ ಇಂಗ್ಲಿಷ್ ಕೃತಿಯೊಂದನ್ನು ಆಧರಿಸಿದ್ದಾಗಿತ್ತು.

ಆ ಓದಿನ ಅನುಭವ ಮತ್ತು ತನ್ನ ಗ್ರಹಿಕೆಗಳನ್ನು ಒಗ್ಗೂಡಿಸಿ ಅವರು ಬರೆದಿದ್ದ ಆ ಲೇಖನವನ್ನು ಓದಿದವರೊಬ್ಬರು ಅದು ಎಎನ್ ಮೂರ್ತಿರಾಯರ ದೇವರು, ಶಿವರಾಮ ಕಾರಂತರ ಬಾಳ್ವೆಯೇ ಬೆಳಕು, ಡಿವಿಜಿಯವರ ಬಾಳಿಗೊಂದು ನಂಬಿಕೆ- ಮುಂತಾದ ಕೃತಿಗಳ ಜತೆಗೆ ಇದನ್ನಿಟ್ಟು ನೋಡಬೇಕು ಎಂದು ಟಿಪ್ಪಣಿ ಬರೆದಿದ್ದರು.

ಲೇಖನ ಬರೆದಿದ್ದವರು ಹೊಸಗಾಲಕ್ಕೆ ಸೇರಿದವರು. ಅವರು ಈ ಮೂರೂ ಪುಸ್ತಕಗಳನ್ನು ಓದಿರುವ ಯಾವ ಸಾಧ್ಯತೆಯೂ ಇರಲಿಲ್ಲ. ಟಿಪ್ಪಣಿ ಬರೆದವರು ಆಕೆ ಸೂಚಿಸಿರುವ ಪುಸ್ತಕವನ್ನೂ ಓದಿರಲಿಕ್ಕಿಲ್ಲ. ಆದರೆ ಈ ಕಾಲದ ಒಂದು ಬರಹದ ಜೊತೆಗೆ ಅನಾದಿಕಾಲದ ಒಂದು ಪುಸ್ತಕವನ್ನಿಟ್ಟು ಹೋಲಿಸುವುದು ವಿಮರ್ಶೆಯ ಚಾತುರ್ಯ ಎಂಬಂತೆ ನಮ್ಮಲ್ಲಿ ನಡೆದು ಬಂದಿದೆ.

ಈ ಕುರಿತು ನಮ್ಮ ವೇದಿಕೆಯಲ್ಲೇ ಅನೇಕ ಸಲ ಚರ್ಚೆಯೂ ಆಗಿದೆ. ಯಾರಾದರೂ ಒಂದು ಕತೆ ಬರೆದರೆ, ಕಾಫ್ಕಾನ ಟ್ರಯಲ್ ನೆನಪಾಯಿತು. ಜಿ ಎಸ್ ಸದಾಶಿವರ ಸಿಕ್ಕು ನೆನಪಾಯಿತು. ಕಮೂ ಬರೆದ ಮಿಥ್ ಆಫ್ ಸಿಸಿಫಸ್ ನೆನಪಾಯಿತು. ಅನಂತಮೂರ್ತಿಯ ಭಾರತೀಪುರ ನೆನಪಾಯಿತು- ಎಂದೆಲ್ಲ ಟಿಪ್ಪಣಿ ಹಾಕುವುದನ್ನು ತರುಣ ಬರಹಗಾರರು ಖಂಡಿಸಿದ್ದರು. ನಮ್ಮ ಕೃತಿ ಹೇಗಿದೆ ಅಂತ ಹೇಳಿ. ಮತ್ಯಾವುದೋ ಹಳೆಯ ಕಾಲದ ಕೃತಿ ನೆನಪಾಯಿತು ಅಂತ ಹೇಳಿದರೆ ಏನರ್ಥ? ನಾವಂತೂ ಆ ಕೃತಿಗಳನ್ನೆಲ್ಲ ಓದಿಲ್ಲ ಅಂತ ಹುಡುಗು ವಯಸ್ಸಿನ ಬರಹಗಾರರು ತಕರಾರು ತೆಗೆದಿದ್ದರು. ಅರೇ, ನಾನು ಓದುವಾಗ ನನಗೆ ಏನೇನೋ ನೆನಪಾಗುತ್ತದಪ್ಪ, ಅದನ್ನು ಕಂಟ್ರೋಲ್ ಮಾಡುವುದಕ್ಕೆ ನಿಮಗೇನು ಹಕ್ಕಿದೆ? ನಾನು ನನಗೆ ತೋಚಿದ್ದನ್ನು ಹೇಳುತ್ತೇನೆ ಅಂತ ಬೇರೆ ಕೃತಿಗಳನ್ನಿಟ್ಟುಕೊಂಡು ಮಾತಾಡುತ್ತಿದ್ದವರೆಲ್ಲ ಪ್ರತಿವಾದ ಹೂಡಿದರು. ಈ ಚರ್ಚೆ ಸಾಕಷ್ಟು ಭುಗಿಲೆದ್ದು ಕೊನೆಗೆ ಯಾವ ಇತ್ಯರ್ಥಕ್ಕೂ ಬರದೇ ಹೋಯಿತು.

ಇದು ಇವತ್ತಿನ ಪ್ರಶ್ನೆ ಮಾತ್ರವೇ ಅಲ್ಲ ಅಂತ ನನಗೆ ಅನ್ನಿಸುತ್ತಿರುತ್ತದೆ. ಒಂದು ಕೃತಿಯನ್ನು ನಿರ್ವಾತದಲ್ಲಿಟ್ಟು ನೋಡುವುದು ಸಾಧ್ಯವೇ? ಯಾವುದೇ ಕೃತಿಯ ನೆರಳಿಲ್ಲದೇ ಹೋದರೂ ಒಂದು ಕೃತಿಯನ್ನು ಸರ್ವಸ್ವತಂತ್ರ್ಯವಾಗಿ ನೋಡುವುದು ಹೇಗೆ? ಇಂದಿನ ಹಗಲು ನಿನ್ನೆ ಮತ್ತು ನಾಳೆಗಳನ್ನು ಮಡಿಲಲ್ಲಿ ಕಟ್ಟಿಕೊಂಡೇ ಇರುತ್ತದಲ್ಲವೇ? ಯಾವ ಹಂಗೂ ಇಲ್ಲದೇ, ಒಂದು ಕೃತಿಯನ್ನು ಆ ಕ್ಷಣದ ಭಂಗುರ ಮತ್ತು ಶಾಶ್ವತ ಎಂದು ಭಾವಿಸಲಿಕ್ಕೆ ಏನು ಮಾಡಬೇಕು? ಈ ಪ್ರಶ್ನೆಗಳು ಹೊಸಬರ ಕೃತಿಯನ್ನು ಓದುವಾಗೆಲ್ಲ ಹುಟ್ಟುತ್ತಲೇ ಇರುತ್ತದೆ.

ತರುಣ ಬರಹಗಾರರು ಹೇಳುವ ಕಷ್ಟಗಳನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ನಾವೇನು ಬರೆದರೂ ಅದು ಹಾಗಿದೆ, ಹೀಗಿದೆ, ಆ ಕೃತಿಯಂತಿದೆ, ಈ ಲೇಖಕರ ಬರಹದ ಹಾಗಿದೆ ಎಂದು ಹೇಳುತ್ತಾರೆಯೇ ಹೊರತು, ನಾವು ಬರೆದದ್ದು ಹೇಗಿದೆ ಅಂತ ಸ್ಪಷ್ಟವಾಗಿ ಹೇಳುವವರು ತುಂಬಾ ಕಡಿಮೆ. ನಾವು ಅದೆಷ್ಟು ಕತೆ ಬರೆದರೂ ಅದನ್ನು ಓದುವವರಿಗೆ ಅವರ ಅಗಾಧವಾದ ಓದಿನ ಪರಂಪರೆ ನೆನಪಾಗುತ್ತದೆ.

ಈ ಬಿಂದುವನ್ನೂ ಆ ಬಿಂದುವನ್ನೂ ಅವರು ಸೇರಿಸಲು ನೋಡುತ್ತಾರೆಯೇ ಹೊರತು, ಇದನ್ನೊಂದು ಪ್ರತ್ಯೇಕ ಕ್ಷಣವಾಗಿ ಗ್ರಹಿಸುವುದೇ ಇಲ್ಲ. ಇದರಿಂದ ನಾವು ಬರೆದದ್ದಕ್ಕೆ ಪ್ರತ್ಯೇಕವಾಗಿ ಯಾವ ಮಹತ್ವವೂ ಇಲ್ಲವೇನೋ ಅನ್ನಿಸಿಬಿಡುತ್ತದೆ. ಇದೊಂಥರ ಹೆಂಡತಿ ಎಷ್ಟೇ ಚೆನ್ನಾಗಿ ಕಾಫಿ ಮಾಡಿದರೂ, ನಮ್ಮಮ್ಮ ಮಾಡಿದ ಕಾಫಿ ಥರ ಇದೆ ಅಂತ ಮೆಚ್ಚುವ ಗಂಡನ ಕತೆಯಂತೆ. ಆ ಉಲ್ಲೇಖ ಇಲ್ಲದೇ ಕಾಫಿ ಚೆನ್ನಾಗಿದೆ ಅಂತ ಹೇಳಲು ಯಾಕೆ ಸಾಧ್ಯವಾಗುವುದಿಲ್ಲ?

ಎಲಿಯಟ್ ಬರೆದ Tradition and Individual Talent ಪ್ರಬಂಧದಲ್ಲಿ ಒಂದು ಮಾತು ಬರುತ್ತದೆ: without the sense of tradition, an artist can never be a good artist. The individual talent is the capability of a poet to retouch and recolour the pastness of the past. No artist or no poet of any art has his real value alone. If we want to evaluate him, we must set him among the dead poets.

ಅಂದರೆ ಒಬ್ಬ ಲೇಖಕನ ಮೌಲ್ಯಮಾಪನ ಮಾಡಬೇಕಾದರೆ ಅವನನ್ನು ಅವನ ಪೂರ್ವಸೂರಿಗಳ ನಡುವೆ ಇಟ್ಟೇ ನೋಡಬೇಕು. ಏಕಾಂಗಿಯಾಗಿ ನೋಡಿದರೆ ಅವನಿಗೆ ಯಾವ ಬೆಲೆಯೂ ಇಲ್ಲ. ಅವನ ಪ್ರತಿಭೆಯನ್ನು ಹಾಗೆಲ್ಲ ಅಳೆಯಲಿಕ್ಕೆ ಆಗುವುದಿಲ್ಲ. ಅವನು ಎಷ್ಟೇ ಪ್ರತಿಭಾವಂತನಾದರೂ ತನಗಿಂತ ಮೊದಲು ಬರೆದವರ ಸರದಿಯ ಸಾಲಲ್ಲೇ ಅವನು ಬರುತ್ತಾನೆ. ಹೀಗಾಗಿ ಪರಂಪರೆ ಎಂಬುದು ಒಬ್ಬ ಲೇಖಕನ ಬೆನ್ನಿಗೆ ಅಂಟಿದ ಸಂಗತಿ. ಅದು ಶಾಪವೋ ವರವೋ ಬೆಂಬಿಡದ ಭೂತವೋ ಗೊತ್ತಿಲ್ಲ. ಆದರೆ ಪರಂಪರೆಯಿಂದ ಬಿಡಿಸಿಕೊಳ್ಳದೇ ಓದು ಮತ್ತು ಮೌಲ್ಯಮಾಪನ ಸಾಧ್ಯವಿಲ್ಲ. ಯಾರಾದರೂ ಬಹಿರಂಗವಾಗಿ ಒಂದು ಕೃತಿಯನ್ನು ಹಳೆಯ ಕಾಲದ ಕೃತಿಯೊಂದಕ್ಕೆ ಹೋಲಿಸದೇ ಹೋಗಬಹುದು. ಆದರೆ ಅಂತರಂಗದಲ್ಲಿ, ಮನಸ್ಸಿನಲ್ಲಿ ಆ ಮೌಲ್ಯಮಾಪನ, ತುಲನೆ ನಡೆಯುತ್ತಲೇ ಇರುತ್ತದೆ.

ಇದರಿಂದ ಪಾರಾಗುವುದು ಹೇಗೆ? ಇವತ್ತು ಕತೆ ಬರೆಯುತ್ತಿರುವ ತರುಣ ಕತೆಗಾರರ ಮೇಲೆ ಕನ್ನಡ ಕಥಾಪರಂಪರೆಯ ಪ್ರಭಾವ ಇರುತ್ತದೆಯೋ ಇಲ್ಲವೋ? ಒಂದು ವೇಳೆ ಅಂಥ ಪ್ರಭಾವ ಇದ್ದರೆ ನಾವು ಅದನ್ನು ಗುರುತಿಸಬೇಕೇ? ಹೀಗೆ ಪರಂಪರೆಯ ಜೊತೆಗಿಟ್ಟು ನೋಡುವುದು ಸಾಮಾನ್ಯ ಓದುಗರಿಗೂ ಮುಖ್ಯವೇ? ಅಥವಾ ಅದು ವಿಮರ್ಶಕರಿಗಷ್ಟೇ ಇರಬೇಕಾದ ಗುಣವೇ?

ಇಂಥ ಪ್ರಶ್ನೆಗಳನ್ನು ಮನಸ್ಸು ಕೇಳಿಕೊಳ್ಳುವ ಹೊತ್ತಿಗೇ, ನಾವು ಪರಭಾಷೆಯ ಕೃತಿಗಳನ್ನು ಓದಲು ಆರಂಭಿಸಿದ ಕ್ಷಣಗಳು ನೆನಪಾಗುತ್ತವೆ. ಅದೇ ಮೊದಲ ಸಲ ಫ್ರೆಂಚ್ ಕಾದಂಬರಿಯನ್ನೋ ರಷ್ಯನ್ ಕಾದಂಬರಿಯನ್ನೋ ಇಟಾಲಿಯನ್ ಕೃತಿಯನ್ನೋ ಓದಲು ಶುರುಮಾಡುವ ಯಾರಿಗೇ ಆದರೂ ಪರಂಪರೆಯ ಭಾರ ಕಾಡುವುದೇ ಇಲ್ಲ. ಅದನ್ನು ಅದೇ ಮೊದಲು ಆ ಭಾಷೆಯ ಕೃತಿಯೊಂದನ್ನು ಓದುವಷ್ಟೇ ಫ್ರೆಷ್ ಆಗಿ ಓದುವುದು ಸಾಧ್ಯವಾಗುತ್ತದೆ. ಮುರಕಾಮಿಯ ಎಷ್ಟೇ ಕತೆಗಳನ್ನು ಓದಿದರೂ ನಾವು ಅದನ್ನು ಕನ್ನಡ ಕಥಾಪರಂಪರೆಯ ಕತೆಗಳ ಜೊತೆಗಿಟ್ಟು ನೋಡಲಿಕ್ಕೇ ಹೋಗುವುದಿಲ್ಲ.

ಹೀಗೆ ಕನ್ನಡದ ಬರಹಗಳನ್ನೂ ಓದುವಾಗ ಪರಂಪರೆಯಿಂದ ಬಿಡಿಸಿಕೊಂಡು ಓದುವ ಮೂಲಕ ನಾವು ಹೊಸ ಲೇಖಕರಿಗೆ ನೆರವಾಗುತ್ತೇವೆಯೇ ಇಲ್ಲವೇ ಎಂಬ ಪ್ರಶ್ನೆ ನನ್ನ ಮುಂದಿದೆ. ಬಿ ಎಂ ಗಿರಿರಾಜ ಬರೆದ ಕಥೆಗೆ ಸಾವಿಲ್ಲ ಓದುತ್ತಿದ್ದಂತೆ ಈ ಎಲ್ಲಾ ಪ್ರಶ್ನೆಗಳು ಗುದ್ದಿಕೊಂಡು ಬಂದವು.

‍ಲೇಖಕರು Avadhi

May 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: