ಆ ಕೊನೇ ಹಳ್ಳಿಯ ಚಹಾಮಸಾಲೆ ಮತ್ತು ಅಂತಿಮ್‌ ದುಕಾನ್

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಈ ʻಕೊನೆಯʼ ಹಾಗೂ ಮೊದಲ ಎನ್ನುವ ಎರಡು ಪದಗಳು ಯಾವತ್ತಿಗೂ ಮನುಷ್ಯನಿಗೆ ಹತ್ತಿರ. ಅದರಲ್ಲೂ ʻಕೊನೆಯʼ ಎಂಬ ಪದ ಸ್ವಲ್ಪ ಹೆಚ್ಚೇ ಸೆಂಟಿಮೆಂಟು. ಅಂತಿಮ ಉಸಿರಿನ ಕ್ಷಣಗಳಲ್ಲಿರುವ ಶತ್ರುವಿಗೂ ಸಹ  ನಿನ್ನ ಕೊನೆಯ ಆಸೆ ಏನು ಎಂದು ಕೇಳಿ ಅದನ್ನು ಈಡೇರಿಸಿದ ಕಥೆಗಳು ಬೇಕಾದಷ್ಟು ಕೇಳಿ ಗೊತ್ತು. ಇಂಥ ʻಕೊನೆಯʼ ಎಂಬ ಸೆಂಟಿಮೆಂಟು, ರೋಮಾಂಚನ ಎಲ್ಲವನ್ನೂ ನೀಡುವ ಗೂಡಂಗಡಿಯೊಂದಿದೆ.

ಒಂದಿಪ್ಪತ್ತು ಕಿಮೀ ದಾಟಿದರೆ ಟಿಬೆಟ್ಟು ಅಂತಿರುವ ಆದರೆ ದಾಟಲು ಖಂಡಿತವಾಗಿಯೂ ಸುಲಭವಿಲ್ಲದ, ಗೋಡೆಯಂತೆ ಅಡ್ಡಲಾಗಿ ಕೂತಿರುವ  ಭವ್ಯ ಹಿಮಚ್ಛಾದಿತ ಬೆಟ್ಟಗಳ ಬುಡದಲ್ಲೊಂದು ಪುಟ್ಟ ಊರು. ವರ್ಷದ ಐದಾರು ತಿಂಗಳು ಮಾತ್ರ ಉಸಿರಾಡುವ ಊರು. ಅದು ಭಾರತ ಟಿಬೆಟ್‌ ಗಡಿಯ ಕೊನೇ ಹಳ್ಳಿ. ಈ ಕೊನೆ ಹಳ್ಳಿಯಲ್ಲೊಂದು ಕೊನೇ ಚಹಾದಂಗಡಿ. ಆ ಚಹಾದಂಗಡಿಯಲ್ಲಿ ಉಣ್ಣೆ ಶಾಲು ಹೆಣೆಯುತ್ತಾ ಕೂರುವ, ಪ್ರವಾಸಿಗರು ಬಂದಾಗ ಹತ್ರುಪಾಯಿಗೆ ಚಹಾ ಮಾಡಿಕೊಡುವ ಭೂಪೀಂದರ್‌ ಸಿಂಗ್‌.

ಮೊನ್ನೆ ಚಹಾ ದಿನವೆಂದರು. ಫೇಸ್‌ ಬುಕ್ಕಿನಲ್ಲಿ ಚಹಾದಿನದ ಹೆಸರಿನಲ್ಲಿ ತೇಲಿಬಂದ ನೂರಾರು ಪೋಸ್ಟುಗಳು ನನ್ನನ್ನೂ ಕೂಡಾ ಈ ಕೊನೆಯ ಹಳ್ಳಿಯ ನೆನಪಿನಲ್ಲೊಮ್ಮೆ ಮತ್ತೆ ಕೂರಿಸಿತು. ನಾವು ದಕ್ಷಿಣ ಭಾರತೀಯರು ಕಾಫಿ ಪ್ರಿಯರು. ಚಹಾ ಕುಡಿಯುತ್ತಿದ್ದರೂ ಆಗಾಗ ಕಾಫಿ ಹೀರದಿದ್ದರೆ ನಮಗೆ ಅದೇನೋ ಫೀಲಿಂಗು. ಆ ಕಾಫಿ ಹೀಗೇ ಇರಬೇಕೆಂದಿಲ್ಲ. ಒಬ್ಬೊಬ್ಬರ ಮನೆಯ ಕಾಫಿಗೆ ಒಂದೊಂದು ಟೇಸ್ಟು. ಆದರೆ, ಪ್ರಯಾಣಕ್ಕೆ, ಹೊಸ ಊರಿಗೆ ಈ ಚಹಾದಷ್ಟು ಗಮ್ಮತ್ತು ಕೊಡುವ ಪೇಯ ಇನ್ನೊಂದಿಲ್ಲ.

ಭಾರತದುದ್ದಕ್ಕೂ ರಸ್ತೆಯಲ್ಲಿ ಓಡಾಡಿದರೆ, ಈ ಚಹಾದ ಕಥೆ ಬರೆದಷ್ಟೂ ಮುಗಿಯದು. ಒಂದೊಂದು ಊರೂ ಈ ಚಹಾದ ಜೊತೆ ತನ್ನ ಬೇರೆಯದ್ದೇ ಕಥೆ ತೆರೆದಿಡುತ್ತದೆ. ಹತ್ತುರುಪಾಯಿಗೂ ದಕ್ಕುವ ಚಹಾ ಎನ್ನುವ ಸೆಂಟಿಮೆಂಟಿಗೆ ʻಕೊನೆಯ ಅಂಗಡಿʼ ಎಂಬ ಇನ್ನೊಂದು ಸೆಂಟಿಮೆಂಟೂ ಸೇರಿದರೆ ಹೇಗಿದ್ದೀತು ಊಹಿಸಿ. ಅಂಥದ್ದೊಂದು ಎಲ್ಲೂ ಸಿಗದ ವಿಚಿತ್ರ ಅನುಭೂತಿ ಇಲ್ಲಿ ಸಿಕ್ಕುತ್ತದೆ.

ಈ ಪುಟಾಣಿ ಹಳ್ಳಿಯ ಹೆಸರು ಮಾಣಾ. ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಬದ್ರಿನಾಥದಿಂದ ಕೇವಲ ಮೂರು ಕಿಮೀ ದೂರದಲ್ಲಿರುವ ಮಾಣಾದಿಂದ ನಾಲ್ಕೂ ದಿಕ್ಕಿನಲ್ಲೂ ಎತ್ತರೆತ್ತರ ಹಿಮಚ್ಛಾದಿತ ಬೆಟ್ಟಗಳ ಕಣ್ಗಾವಲು. ಬೆಳ್ಳಂಬೆಳಗ್ಗೆ ಸೂರ್ಯನ ಹೊಂಬಣ್ಣದಲ್ಲಿ ಮಿರಮಿರ ಮಿಂಚುವ ನೀಲಕಂಠ ಪರ್ವತ ಬದ್ರಿನಾಥ ದೇವಾಲಯ ಬೆನ್ನಿಗಂಟಿಕೊಂಡಂತೆ ನಿಂತಿವೆ. ಇಲ್ಲಿ ಬದ್ರಿನಾಥವನ್ನು ಹೊರತುಪಡಿಸಿ ಬರುವ ಮಂದಿಗೆ ವಸುಧಾರಾ ಜಲಪಾತ, ಸಥೋಪಂತ್‌, ಸ್ವರ್ಗಾರೋಹಿಣಿಯ ಚಾರಣದ ಕನಸು. ಹೀಗಾಗಿ ಮಾಣಾ ಎಲ್ಲ ಬಗೆಯ ಮಂದಿಯನ್ನೂ ತನ್ನ ಮಡಿಲಿಗೆ ಹಾಕಿಕೊಳ್ಳುತ್ತದೆ.

ಚಳಿಯೆಂದರೆ ಚಳಿ. ರಸ್ತೆಯ ಇಕ್ಕೆಲಗಳಲ್ಲಿ ಹಿಮದ ರಾಶಿ. ಆ ಕೊನೆಯ ಹಳ್ಳಿಯೆಂಬ ಕೌತುಕದ ಜಗತ್ತು ಹೊರಜಗತ್ತಿನಿಂದ ಸಂಪರ್ಕ ಕಡಿದುಕೊಳ್ಳಲು ಇನ್ನೇನು ಬೆರಳೆಣಿಕೆಯ ದಿನಗಳಷ್ಟೆ! ಹಾಗಾಗಿ ಊರಿನ ಎಲ್ಲರೂ ತಮ್ಮ ವಸ್ತುಗಳು ಆದಷ್ಟೂ ಮಾರಾಟವಾಗಲಿ ಎಂಬ ಆಸೆಯಿಂದ ಕಡಿಮೆಗೂ ಮಾರಲು ತಯಾರಾಗಿ ನಿಂತಿದ್ದರು. ಆಗಲೇ ಕೆಲವೊಂದು ಅಂಗಡಿಗಳು ಮುಚ್ಚಿಬಿಟ್ಟಿದ್ದರೆ, ಬಹುತೇಕ ಮಂದಿ ಪ್ಯಾಕು ಮಾಡುವಲ್ಲಿ ನಿರತರಾಗಿದ್ದರು. ಇನ್ನೇನು ಬೆರಳೆಣಿಕೆಯ ದಿನಗಳಲ್ಲಿ ಇಡೀ ಹಳ್ಳಿಯೇ ಹಿಮದಿಂದ ಮುಚ್ಚಿ ಹೋಗುತ್ತವೆ. ಅವರೆಲ್ಲರ ಮನೆಗಳೂ ಕೂಡಾ.

ಪ್ರತಿ ವರ್ಷವೂ ಚಳಿಗಾಲದ ಐದಾರು ತಿಂಗಳುಗಳು ಮುಚ್ಚಿ ಹೋಗುವ ಈ ಹಳ್ಳಿ ಮತ್ತೆ ಚಿಗಿತುಕೊಳ್ಳುವುದು ಬದ್ರಿನಾಥ ಬಾಗಿಲು ತೆರೆದಾಗಲೇ. ಉಳಿದ ದಿನಗಳಲ್ಲಿ ಇವರೆಲ್ಲರೂ ಪರ್ವತದ ಕೆಳಗಿನ ಊರುಗಳಾದ ಚಮೋಲಿ, ಗೋಪೇಶ್ವರ, ಜೋಶಿಮಠಗಳಿಗೆ ತೆರಳುತ್ತಾರೆ. ಪ್ರಕೃತಿಯ ಬದಲಾಗುವ ಕಾಲಕ್ಕೆ ತಕ್ಕಂತೆ ಇವರ ಬದುಕೂ ಕೂಡಾ ಚಕ್ರದಂತೆ ಸುತ್ತುತ್ತಲೇ ಇರುತ್ತದೆ.

ಹಾಗಾಗಿ ಈ ಹಳ್ಳಿಯಲ್ಲಿ ಯುವಕರು, ಓದುವ ಹುಡುಗರು, ಮಕ್ಕಳು… ಯಾರೂ ಕಾಣಸಿಗುವುದಿಲ್ಲ. ಕೇವಲ ಹೊಟ್ಟೆ ಹೊರೆಯುವ ಉದ್ದೇಶವಷ್ಟೆ ಇವರೆಲ್ಲರನ್ನು ಇಲ್ಲಿಗೆ ಎಳೆದು ತಂದಿದೆ. ಇಲ್ಲಿ ವಾಸ ಮಾಡುವ ಜನರೆಲ್ಲರೂ ಮಧ್ಯವಯಸ್ಸು ದಾಟಿದವರು, ಮುದುಕರು ಹಾಗೂ ಶಾಲೆಗೆ ಹೋಗಲು ಶುರು ಮಾಡದ ಹಸುಗೂಸುಗಳು. ಅಂದಹಾಗೆ ಈ ಹಳ್ಳಿಯಲ್ಲಿ ಹಾಗಾಗಿಯೇ ಒಂದು ಶಾಲೆಯೂ ಇಲ್ಲ.

ಪುಟಾಣಿ ಓಣಿಯಂತಿರುವ ರಸ್ತೆಯುದ್ದಕ್ಕೂ ಪ್ರವಾಸಿಗರು ನಡೆದು ಸಾಗಿದರೆ ಪಾಂಡವರು ತಮ್ಮ ಕೊನೆಗಾಲದಲ್ಲಿ ಸ್ವರ್ಗಾರೋಹಣಕ್ಕೆ ಸಾಗಿದರೆಂದು ಹೇಳುವ ದಾರಿಯಿದೆ. ಹಿಮ ಪರ್ವತಗಳ ಕಡೆಯಿಂದ ಹರಿದುಬರುವ ಸರಸ್ವತಿ ನದಿ ಇದರ ಎಡೆಯಿಂದ ರಭಸವಾಗಿ ನುಗ್ಗಿ ಹರಿದು ಆಮೇಲೆ ಅದೃಶ್ಯಳಾದಂತೆ ಅಲಕನಂದೆಯಾಗಿಬಿಡುತ್ತಾಳೆ. ಈ ಸರಸ್ವತಿಯನ್ನು ದಾಟಲು ಪುಟ್ಟದೊಂದು ಸೇತುವೆ. ಸೇತುವೆಯ ಅಡಿಯಲ್ಲಿ ಒಂದರ ಮೇಲೊಂದು ಪೇರಿಸಿಟ್ಟಂತೆ ಇರುವ ಬಂಡೆಗಳು. ಈ ಬಂಡೆಯೆಂಬ ಸೇತುವೆಯನ್ನು ಸರಸ್ವತಿಗೆ ಅಡ್ಡಲಾಗಿ ಇಟ್ಟಿದ್ದು ಭೀಮನೇ ಎಂಬ ಕಥೆಯೂ ಇದೆ. ಆ ಕಡೆ, ʻಹಿಂದೂಸ್ತಾನ್‌ ಕಾ ಅಂತಿಮ್‌ ದುಕಾನ್‌ʼ ಎಂಬ ಬೋರ್ಡು ನಿಮ್ಮನ್ನು ಸ್ವಾಗತಿಸುತ್ತದೆ.

ಒಮ್ಮೆ ಒಂದು ಹೊಸ ಊರಿಗೆ ಹೋದರೆ ಅದೆಷ್ಟೇ ಇಷ್ಟವಾದರೂ, ನನ್ನ ಹುಟ್ಟಿದೂರು ಮೆಟ್ಟಿದೂರನ್ನು ಬಿಟ್ಟರೆ ಮತ್ತೆ ಹೋಗಿದ್ದು ನನ್ನ ಇತಿಹಾಸದಲ್ಲಿ ಇಲ್ಲ. ಇನ್ನೊಮ್ಮೆ ಇಲ್ಲಿ ಬರಬೇಕು ಅಂತ ಹಲವು ಊರುಗಳಲ್ಲಿ ಅನಿಸಿದರೂ ಮತ್ತೆ ಹೋಗಿದ್ದು ಕಡಿಮೆ. ಆದರೆ, ಈ ಮಾಣಾ ಎಂಬ ಕೊನೆಯ ಊರು ಮಾತ್ರ ನನ್ನನ್ನು ಮತ್ತೆ ಕರೆದದ್ದು ಒಂದು ಚಹಾ ಮಸಾಲೆಯ ಪ್ಯಾಕೆಟ್ಟಿಗೆ ಅಂದರೆ ನಂಬಲೇಬೇಕು.

ಅಂದಹಾಗೆ, ಇಲ್ಲಿ ಬರುವ ಎಲ್ಲರ ಹಾಗೇ ನಾನೂ ಕೂಡಾ ʻಅಂತಿಮ್‌ ದುಕಾನ್‌ʼ ಹುಡುಕಿಕೊಂಡೇ ಹೊರಟಿದ್ದು. ಹೊರಟ ದಾರಿಯುದ್ದಕ್ಕೂ ನನ್ನ ಕ್ಯಾಮರಾಕ್ಕೆ ಬಹಳ ಕೆಲಸವಿತ್ತು. ಆದರೂ ಎಲ್ಲ ಪ್ರವಾಸೀ ತಾಣಗಳಂತೆ ಕಿರುಗಣ್ಣಿನ ಕಾಯಕಯೋಗಿಗಳ ಭಾವವನ್ನು ಈ ಪುಟ್ಟ ಪೆಟ್ಟಿಗೆಯೊಳಗಿಳಿಸುವುದು ಸುಲಭದ ಕೆಲಸವೂ ಆಗಿರಲಿಲ್ಲ. ಆದರೂ ಛಲ ಬಿಡದೆ, ಕೆಲವೊಂದು ಮುಖಭಾವಗಳು ಒಳಕ್ಕಿಳಿದವು. ಅಂತಿಮವಾಗಿ, ಇದೆಲ್ಲ ಮುಗಿಸಿಕೊಂಡು ಅಂತಿಮ್‌ ದುಕಾನ್‌ ಕಡೆಗೆ ತಲುಪಿದಾಗ ನಮ್ಮನ್ನು ಸ್ವಾಗತಿಸಿದ್ದು ಮುಚ್ಚಿದ ಬಾಗಿಲು. ನಿರಾಸೆಯಾದರೂ, ಇದಕ್ಕಿಂತ ಹತ್ತು ಹೆಜ್ಜೆ ಹಿಂದಿದ್ದ ದುಕಾನಿನಲ್ಲಿ ಚಹಾ ಕುಡಿಯಲಾಯ್ತಾದರೂ, ಅದು ಅಂತಿಮ ಆಗಿರಲಿಲ್ಲ.

ಇಷ್ಟೆಲ್ಲ ಕಥೆ ಮುಗಿಸಿಕೊಂಡು, ಅರ್ಧಂಬರ್ಧ ಹಿಮ ಹಾಸಿದ್ದ ರಸ್ತೆಯಲ್ಲಿ ಜಾಗ್ರತೆಯಿಂದ ಜಾರದಂತೆ ಕಾಲೂರುತ್ತಾ ವಾಪಾಸು ಬರಬೇಕಿದ್ದರೆ ಕಣ್ಣಿಗೆ ಬಿದ್ದಿದ್ದು ಒಬ್ಬಾಕೆ ಹರವಿ ಕೂತಿದ್ದ ಒಂದು ಪುಟ್ಟ ಪ್ಲಾಸ್ಟಿಕ್‌ ಪ್ಯಾಕೆಟ್ಟು. ಹೆಸರೇನೂ ಇಲ್ಲದ, ಮನೆಯಲ್ಲೇ ಏನೋ ಸೊಪ್ಪು ಒಣಗಿಸಿ ತುಂಬಿ ಪ್ಯಾಕ್‌ ಮಾಡಿ ಇಟ್ಟ ಪುಟ್ಟ ಪುಟ್ಟ ಪ್ಯಾಕೆಟ್ಟುಗಳು. ʻಏನಿದು?ʼ ಎಂದೆ. ʻಚಹಾ ಮಸಾಲೆʼ ಎಂದಳಾಕೆ. ʻಅದ್ಭುತ ರುಚಿಯ ಚಹಾ ಇದು.

ಇಲ್ಲಿನ ಹಿಮಾಲಯದ ಪರ್ವತಗಳಿಂದ ಆರಿಸಿ ತಂದ ಗಿಡಮೂಲಿಕೆಗಳ ಎಲೆಗಳು. ಇದರ ಘಮ ಬಹಳ. ಒಮ್ಮೆ ಬಳಸಿದರೆ ನಿಮಗೆ ಸಾದಾ ಚಹಾದ ರುಚಿ ಹತ್ತುವುದೇ ಇಲ್ಲʼ ಎಂದು ವಿವರಣೆಯನ್ನೂ ಕೊಟ್ಟಳು. ಹೊಟ್ಟೆಪಾಡು ಇಂತಹ ವಿಶೇಷಣಗಳನ್ನು ಹೇಳಿಸುತ್ತದೆ ಎಂಬ ಸತ್ಯ ಗೊತ್ತಿದ್ದರೂ, ಹೊಸ ಜಾಗಕ್ಕೆ ಹೋದಾಗ ಕಾಣುವ ಆಹಾರ ವಸ್ತುಗಳು, ಅಲ್ಲಿನ ವಿಶೇಷ ವಸ್ತುಗಳು ಯಾವಾಗಲೂ ನನ್ನ ಕುತೂಹಲ ಕೆರಳಿಸುವುದರಿಂದ ಒಂದು ಟ್ರೈ ನೋಡುವ ಎಂದು ಒಂದು ಪ್ಯಾಕೆಟ್ಟು ಕೈಗೆತ್ತಿಕೊಂಡೆ. ಹತ್ತು ರುಪಾಯಿ ಎಂದಳು. ಸರಿ, ಹತ್ತೇ ತಾನೇ ಎಂದುಕೊಂಡು ನಾಲ್ಕೈದು ಪ್ಯಾಕೆಟ್ಟುಗಳನ್ನು ಖರೀದಿಸಿದೆ.

ಒಂದು ಪ್ಯಾಕೆಟ್ಟಿನಲ್ಲಿ ನಾಲ್ಕೈದು ಜನರು ಒಮ್ಮೆ ಕುಡಿಯಬಹುದಾದಷ್ಟು ಎಲೆ ತುಂಬಿಡಲಾಗಿತ್ತು. ಹೊರಡುವಾಗ ಸುಮ್ಮನೆ, ʻನೋಡಿ, ಇದೇನಾದ್ರೂ ಕೆಟ್ಟದಿರಬೇಕು, ಇಲ್ಲೇ ಬಂದು ನಿಮಗೇ ವಾಪಸ್ಸು ಮಾಡುವೆʼ ಎಂದು ನಕ್ಕೆ. ʻನೀವು ಈ ಪ್ಯಾಕೆಟ್ಟು ಹುಡುಕಿಕೊಂಡು ಮತ್ತೆ ಮಾಣಾಕ್ಕೆ ಬರದಿದ್ದರೆ ಕೇಳಿʼ ಎಂದು ಸವಾಲೂ ಹಾಕಿದಳು. ʻಕೆಟ್ಟದಾಗಿದ್ದರೂ ಐವತ್ತು ರೂಪಾಯಿಯ ಇದನ್ನು ವಾಪಾಸು ಮಾಡಲು ಇಲ್ಲಿಗೆ ಯಾರೂ ಬರೋದಿಲ್ಲ ಎಂದು ನಿಮಗೂ ಗೊತ್ತುʼ ಎಂದು ಇನ್ನೂ ನಕ್ಕೆ. ಆಕೆ ನಗಲಿಲ್ಲ. ʻನೀವು ಮತ್ತೆ ಇದು ಇನ್ನೂ ಬೇಕೆಂದು ಬಂದೇ ಬರ್ತೀರಿ ಎಂದಳು ಮತ್ತಷ್ಟು ಆತ್ಮವಿಶ್ವಾಸದಿಂದ!

ಆಕೆಯೇನೋ ಗ್ರೀನ್‌ ಟೀ ಮಾಡುವ ಥರದಲ್ಲೇ ಇದನ್ನೂ ಮಾಡೋದು ಎಂದು ಚಹಾ ಮಾಡುವ ವಿಧಾನ ವಿವರಿಸಿದ್ದಳು. ಈ ಗ್ರೀನ್‌ ಟೀ ಥರದ್ದನ್ನು ನಾನು ಕುಡಿದರೂ ಎಷ್ಟು ದಿನ ಕುಡಿದೇನು ಅಂತ ಅಂದುಕೊಳ್ಳುತ್ತಲೇ, ಮಾಮೂಲಿ ಚಹಾಕ್ಕೇ ಸ್ವಲ್ಪ ಈ ಮಸಾಲೆ ಎಲೆ ಉದುರಿಸಿ ನೋಡಿದೆ. ʻಆಹಾ! ಎಂಥಾ ಘಮ.. ಎಂಥಾ ಘಮ..ʼ ಅಂಥಾ ಚಹಾವನ್ನು ನಾನು ಈ ಮನುಷ್ಯ ಜನ್ಮದಲ್ಲಿ ಎಂದಿಗೂ ಕುಡಿದಿರಲಿಲ್ಲ. ಅದ್ಭುತ ರುಚಿಯ ಚಹಾ. ಒಮ್ಮೆ ಹೀರುವಾಗಲೇ, ʻಛೇ ನಾನ್ಯಾಕೆ ಐದೇ ಪ್ಯಾಕೆಟ್‌ ತಂದೆʼ ಎಂದು ಹಳಹಳಿಸಿದೆ.

ಇದೇ ಸ್ವಾದವೇ ಮತ್ತೆ ನನ್ನನ್ನು ಮಾಣಾಕ್ಕೆ ಎಳೆದು ತಂದಿತ್ತು ಎಂದರೆ ಖಂಡಿತ ಯಾರಾದರೂ ನಕ್ಕಾರು. ಆದರೆ ಇದು ನಿಜ. ಆಕೆಯ ಮಾತು ನಿಜವಾಗಿತ್ತು. ವರ್ಷವೊಂದು ಕಳೆದರೂ ನನಗೆ ಆ ಚಹದಾ ಮೋಹವಿನ್ನೂ ಆರಿರಲಿಲ್ಲ. ಹೂಕಣಿವೆಯ ಚಾರಣಕ್ಕೆಂದು ಹೋದವರು, ಜೋಶಿಮಠದಿಂದ ಮಾಣಾ ಒಂದೆರಡು ಗಂಟೆಯ ದಾರಿಯಷ್ಟೆ ಅಂತ ಅನಿಸಿದ್ದೇ, ಕಾರು ಅತ್ತ ಕಡೆ ತಿರುಗಿಸಿದ್ದೆವು. ಮತ್ತೆ ಹೋಗಿ ಆಕೆಯ ಎದುರು ನಿಂತಿದ್ದೆ. ವರ್ಷಂಪ್ರತಿ ಸಾವಿರಾರು ಮಂದಿ ಬಂದು ಹೋಗುವಾಗ ಆಕೆಗೆಲ್ಲಿ ನನ್ನ ನೆನಪಿರಬೇಕು! ಆದರೆ ನನಗೆ ಆಕೆಯ ಮುಖ, ಆಕೆ ತನ್ನ ಚಹಾಸೊಪ್ಪು ಹರವಿ ಕೂರುವ ಜಾಗ ಎಲ್ಲವೂ ಚೆನ್ನಾಗಿ ನೆನಪಿತ್ತು.

ಒಂದೈವತ್ತು ಪ್ಯಾಕೆಟ್ಟು ಆಕೆಯ ಬಳಿಯಿತ್ತು. ಎಲ್ಲರಿಗೂ ಹೇಳುವಂತೆ ಅದನ್ನು ವಿವರಿಸಲು ಹೊರಟಳು. ನನಗೆ ಗೊತ್ತಿದೆ ಎಂದಳು. ಎರಡನೇ ಬಾರಿಯಾ? ಎಷ್ಟು ಕೊಡಲಿ ಎಂಬಂತೆ ಪ್ಯಾಕೆಟ್‌ ಹಿಡಿಯುತ್ತಾ ಮುಖ ನೋಡಿದಳು. ಎಲ್ಲ ಕೊಡಿ. ಎಷ್ಟಿರಬಹುದು ಎಂದೆ. ಅವಳಿಗೆ ಫುಲ್ ಶಾಕು.

ಒಂದು ವರ್ಷಕ್ಕಾಗುವಷ್ಟು ಬೇಕು ನಂಗೆ. ಎಷ್ಟಿದೆಯೋ ಅಷ್ಟು ಕೊಡಿ ಎಂದೆ. ಪ್ಯಾಕೆಟ್ಟಿನಲ್ಲಿ ಹಾಕದೆ ಇಟ್ಟಿರೋದು ಇದ್ದರೆ ಹಾಗೆಯೇ ಕೊಡಿ ಎಂದೆ. ಅದು ಪ್ಯಾಕೆಟ್ಟಿನೊಳಗಿನ ಮಸಾಲೆಯಷ್ಟು ಒಣಗಿಲ್ಲ ಇನ್ನೂ. ಇದೇ ತೆಗೊಳ್ಳಿ ಎಂದಳು. ಆಕೆಯ ಮುಖದಲ್ಲಿ ಎಲ್ಲ ಪ್ಯಾಕೆಟ್ಟೂ ಒಂದೇ ಗುಕ್ಕಿಗೇ ಸೇಲಾದ ಸಂಭ್ರಮವೋ ಸಂಭ್ರಮ.

ಒಂದು ವರ್ಷಕ್ಕೆ ಸಾಕಾಗುತ್ತದೋ ಇಲ್ಲವೋ ಎಂದು ಡೌಟಾಗಿ ಇನ್ನೂ ಕೆಲವು ಅಂಗಡಿಗಳಿಂದ ಮತ್ತಷ್ಟು ಪ್ಯಾಕೆಟ್ಟುಗಳನ್ನು ಖರೀದಿಸಿಕೊಂಡು, ಅಂತಿಮ ದುಕಾನಿನ ಕಡೆ ನೋಡಿದರೆ ಅಂಗಡಿ ತೆರೆದೇ ಇತ್ತು. ಒಂದು ಫೋಟೋ ಹೊಡೆದುಕೊಂಡು, ಭೂಪೇಂದರ್‌ ಸಿಂಗ್‌ರನ್ನು ಹುಡುಕಿದರೆ ಆತ ಅಂಗಡಿ ತೆರೆದಿಟ್ಟು ಅದೆಲ್ಲೋ ಹೋಗಿದ್ದ. ಈ ಅಂತಿಮ ದುಕಾನಿನ ಭಾಗ್ಯ ಇಲ್ಲ ಎಂದು ಮರಳಿದೆ. ಆದರೆ ಈ ಬಾರಿಯೂ ಆ ಚಹಾ ಮಿಸ್ಸಾಗಿದ್ದಕ್ಕೆ ಬೇಸರ ಮಾತ್ರ ಆಗಲಿಲ್ಲ. ಬ್ಯಾಗು ತುಂಬ ತುಂಬಿಸಿಕೊಂಡಿದ್ದ ಚಹಾ ಮಸಾಲೆ ಬ್ಯಾಗನ್ನೂ ಘಮ್ಮೆನಿಸಿವಂತೆ ಮಾಡಿತ್ತು.

ಈಗ ಮಸಾಲೆ ಮುಗಿದು ವರ್ಷ ದಾಟಿದೆ. ಈ ಕೋವಿಡ್‌ ಮತ್ತೆ ನರ್ತನ ಶುರು ಮಾಡಿದೆ. ʻಛೇ, ನನ್ನ ಬುದ್ಧಿಗೇನಾಗಿತ್ತು ಆಗ! ನಾನಾಕೆಯ ನಂಬರ್‌ ಯಾಕೆ ತೆಗೆದುಕೊಂಡಿಲ್ಲʼ ಎಂದು ಈಗ ತಲೆಕೆಡಿಸಿಕೊಳ್ಳುತ್ತಿದ್ದೇನೆ. ಮತ್ತೊಮ್ಮೆ ಮಾಣಾ ಹೋಗದೆ ವಿಧಿಯಿಲ್ಲ!

‍ಲೇಖಕರು Avadhi

May 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Ravikumar S B

    ಸರಳ ಸುಂದರ ನಿರೂಪಣೆ ನಮ್ಮನ್ನು ಹಿಮಾಲಯದ ತಪ್ಪಲಲ್ಲಿ ಅಡ್ಡಾಡಿಸಿತು. ಅಂತಿಮ ದುಕಾನಿನ ಬಳಿ ಸಿಗುವ ಚಹಾ ಪುಡಿ ಹುಡುಕಿಕೊಂಡು ಹೋಗುವ ಆಸೆಯಾಗುತ್ತಿದೆ. ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: