ಶಾಸನಗಳ ತಜ್ಞ ಪ್ರೊ ಕಲವೀರ ಮನ್ವಾಚಾರ್ ಇನ್ನಿಲ್ಲ

ಡಾ ಬಿ ಎ ವಿವೇಕ ರೈ

ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಶಾಸನಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಪ್ರೊ.ಕಲವೀರ ಮನ್ವಾಚಾರ್ ಅವರ ನಿಧನದ ಸುದ್ದಿ ತಿಳಿದು ಬಹಳ ದುಃಖವಾಯಿತು.ನಾನು ಅಲ್ಲಿ ಕುಲಪತಿ ಆಗಿದ್ದ ಅವಧಿಯಲ್ಲಿ (೨೦೦೪-೦೭) ಅವಧಿಯಲ್ಲಿ ಅವರ ಕಾರ್ಯದಕ್ಷತೆಯನ್ನು ಸ್ವತಃ ಕಂಡಿದ್ದೆ.

ಬಹಳ ಪ್ರಾಮಾಣಿಕ, ಶ್ರದ್ಧಾವಂತ, ಕಠಿಣ ಪರಿಶ್ರಮದ ವಿದ್ವಾಂಸ ಆಗಿದ್ದರು ಪ್ರೊ.ಮನ್ವಾಚಾರ್. ವಿವಿಯ ಶಾಸನಸಂಪುಟಗಳ ಸಿದ್ಧತೆಯಲ್ಲಿ‌ ಅವರ ಕೊಡುಗೆ ಅಪಾರ. ನಾನು ಅಲ್ಲಿಂದ ನಿವೃತ್ತನಾದ ಬಳಿಕವೂ ಶಾಸನ ಸಂಬಂಧಿಸಿದ ಸಮಸ್ಯೆಗಳಿಗೆ ಅವರನ್ನು ಸಂಪರ್ಕಿಸಿ ಸೂಕ್ತ ಪರಿಹಾರಗಳನ್ನು ಪಡೆಯುತ್ತಿದ್ದೆ. ವ್ಯಕ್ತಿಯಾಗಿ ಬಹಳ ಸಜ್ಜನ, ವಿನಯಶೀಲ ಸದ್ಗುಣದವರು ಆಗಿದ್ದರು ಪ್ರೊ.ಮನ್ವಾಚಾರ್. ಒಬ್ಬ ವಿದ್ವತ್ ಸಹೋದ್ಯೋಗಿಯನ್ನು ಕಳೆದುಕೊಂಡ ನೋವನ್ನು ಅನುಭವಿಸುತ್ತಿದ್ದೇನೆ.

 ಸ್ಮಿತಾ ರೆಡ್ಡಿ

ನನ್ನ ಪಿಎಚ್ ಡಿ ಮಾರ್ಗದರ್ಶಕರೂ, ಆತ್ಮೀಯ ಗುರುಗಳಾದ ಹಂಪಿ ವಿಶ್ವವಿದ್ಯಾಯಲಯದ ಶಾಸನ ಶಾಸ್ತ್ರ ವಿಭಾಗದ ಪ್ರೊಫೆಸರ್ ಕಲವೀರ ಮನ್ವಾಚಾರ್ ಅವರು ತೀವ್ರ ಅನಾರೋಗ್ಯದಿಂದ ಇಂದು ಮರಣಹೊಂದಿದ್ದಾರೆಂದು ತಿಳಿಸಲು ತುಂಬಾ ದುಃಖವಾಗುತ್ತಿದೆ. ಅಸೀಮ ಜ್ಞಾನಾಪೇಕ್ಷೆಯ ತುಡಿತ ಹೊಂದಿದ್ದ ಅವರು, ತಮ್ಮ ಸಾಧನೆಗೆ ಆರೋಗ್ಯ ಸಹಕರಿಸದಿದ್ದರೂ, ಅದನ್ನು ಮೆಟ್ಟಿನಿಂತು ಹಲವಾರು ಸಂಶೋಧನಾ ಚಟುವಟಿಕೆ ಹಾಗೂ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದರು.

ಕಾಪಾಲಿಕ- ಕಾಳಾಮುಖ ಪರಂಪರೆಯ ಬಗ್ಗೆ ಸಂಶೋಧನೆ ನಡೆಸಿ ಅದರೊಳಗಿನ ಹಲವಾರು ವಿಷಯಗಳ ಬಗ್ಗೆ ಗಹನವಾದ ಒಳನೋಟಗಳನ್ನು ಇಟ್ಟುಕೊಂಡಿದ್ದರು. ಪ್ರಾಚೀನ ಕರ್ನಾಟಕದ ಪ್ರಬಲ ಶಾಕ್ತ ಪರಂಪರೆಯಾದ ಲಜ್ಜಾಗೌರಿ ಆಚರಣೆ ಕುರಿತಂತೆ ವಿಸ್ತ್ರತವಾದ ಸಂಶೋಧನೆ ನಡೆಸಿ ಪುಸ್ತಕ ಪ್ರಕಟಿಸುವ ಸಿದ್ಧತೆಗಳನ್ನು ನಡೆಸಿದ್ದರು.

ನಿಸ್ಪೃಹ ಸ್ನೇಹಜೀವಿಯಾದ ಮನ್ವಾಚಾರ್ ಸರ್ ರವರ ಮರಣ, ಶಾಸನ ಸಂಶೋಧನಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಅಗಲಿಕೆಗೆ ನೋವಿನ ನಮನಗಳನ್ನು ಸಲ್ಲಿಸುತ್ತಾ, ಅವರ ಮನೆಯವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ.

ಎಫ್ ಟಿ ಹಳ್ಳಿಕೇರಿ

ಪ್ರಾಧ್ಯಾಪಕರಾದ ಡಾ.ಕಲವೀರ ಮನ್ವಾಚಾರ್ ಅವರು ಶಾಸನಶಾಸ್ರ್ತದಲ್ಲಿ ಪರಿಣಿತರು. ನಮ್ಮ ವಿಭಾಗದ ಜೊತೆ ನಿಕಟವಾಗಿದ್ದರು. ಪಿಎಚ್.ಡಿ.ಸಮಿತಿಯ ಆಂತರಿಕ ಸದಸ್ಯರಾಗಿದ್ದರು. ಅಲ್ಲದೇ ನಮ್ಮ ವಿಭಾಗದ ಅನೇಕ ಸಮ್ಮೇಳನ, ಹಸ್ತಪ್ರತಿ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡು ಸಂಪ್ರಬಂಧ, ಉಪನ್ಯಾಸ ನೀಡಿದ್ದರು. ಶಾಸನಗಳಿಗೆ ಸಂಬಂಧಿಸಿದ ಸಂದೇಹಗಳಿದ್ದರೆ ಅವರ ಸಹಾಯವನ್ನು ಪಡೆದುಕೊಳ್ಳುತ್ತಿದ್ದೆ.

5 ವರ್ಷಗಳ ಹಿಂದೆ ಮಹಾರಾಷ್ಟ್ರದ ಸೋಲಾಪುರ ಸಮೀಪದ ಹತ್ತೂರು ಗ್ರಾಮದ ಅಮೋಘಸಿದ್ಧ ಪರಂಪರೆಯ ಬನಸಿದ್ಧ ದೇವಾಲಯದಲ್ಲಿ ಒಂದು ಕನ್ನಡ ಶಿಲಾಶಾಸನ ಶೋಧ ಮಾಡಿದ್ದೆ. ಆ ಸಂದರ್ಭದಲ್ಲಿ ಒಂದು ರವಿವಾರ ಡಾ. ಮನ್ವಾಚಾರ್ ಅವರು ನನ್ನೊಂದಿಗೆ ಬಸ್ ಮೂಲಕ ಹೊಸಪೇಟೆಯಿಂದ ಬೆಳಿಗ್ಗೆ 5 ಕ್ಕೆ ಬಂದಿದ್ದರು. ಆ ಶಾಸನದ ಎಸ್ಟಾಂಫೇಜ (ಪ್ರತಿ) ತೆಗೆದುಕೊಟ್ಟಿದ್ದರು. ಆ ಶಾಸನ ಕುರಿತು ನಾನು ಕರ್ನಾಟಕ ಇತಿಹಾಸ ಅಕಾಡೆಮಿಯಲ್ಲಿ ಸಂಪ್ರಬಂಧ ಮಂಡಿಸಿದ್ದೆ. ಆ ಸಂಪ್ರಬಂಧ ಇತಿಹಾಸ‌ ದರ್ಶನ ೨೭ನೆಯ ಸಂಪುಟದಲ್ಲಿ ಪ್ರಕಟವಾಗಿದೆ.
ಡಾ.ಮನ್ವಾಚಾರ ಅವರ ಆ ಸಹಕಾರವನ್ನು ಮರೆಯುವಂತಿಲ್ಲ. ಇಂಥ ಅನೇಕ ಸಂದರ್ಭಗಳಲ್ಲಿ ನನಗೆ ಶಾಸನ ಬಗ್ಗೆ ಸಲಹೆ ನೀಡುತ್ತಿದ್ದರು.

ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಡಾ.ಮನ್ವಾಚಾರ್ ಅವರ ಆತ್ಮಕ್ಕೆ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಆಡಳಿತ ಸಿಬ್ಬಂಧಿಯವರ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ. ಅಗಲಿಕೆಯ ಈ ದುಃಖವನ್ನು ಸಹಿಸುವಂಥ ಶಕ್ತಿಯನ್ನು ಭಗವಂತ ಅವರ ಕುಟುಂಬ ಪರಿವಾರಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

‍ಲೇಖಕರು Avadhi

May 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: