ಶರತ್ ಕಲ್ಕೋಡ್ ಅವರ ಹೊಸ ಕಾದಂಬರಿ ಆರಂಭ- ಐರಾವತವನ್ನೇರಿ

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು.

ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ ಶಕ್ತಿಯನ್ನೇ ನಂಬಿ ಪತ್ರಿಕೋದ್ಯಮಕ್ಕೆ ಎಂಟ್ರಿ ಕೊಟ್ಟವರು. ಸಂತೋಷ, ತರಂಗ, ಸುಧಾ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.

ಮಾಸ್ತಿ ಪ್ರಶಸ್ತಿ ವಿಜೇತ ಶರತ್ ಕಲ್ಕೋಡ್ ಅವರ ಹೊಸ ಕಾದಂಬರಿ ಇಂದಿನಿಂದ ಪ್ರತಿ ದಿನವೂ ಪ್ರಕಟವಾಗುತ್ತದೆ.

1

‘ಕೋವಿಮಂಜ’ ಎಂಬ ಬಿರುದಾಕಿಂತ!

ಯದ್ವಾತದ್ವ ಆಳೆತ್ತರ ಬೆಳೆದ ಹಳು ಸವರಲೆಂದು ವಾಸು, ಕಿಟ್ಟರನ್ನು ತೋಟಕ್ಕೆ ಕಳುಹಿಸಿದ್ದೆ. ಕಪ್ಪು, ಹೆಗ್ಗಪ್ಪು, ಪಟಗಳಲ್ಲಿ ಹುಲಸಾಗಿ ಬೆಳೆದ ಹುಲ್ಲು ಗಿಡಕಳೆ, ಅಡಕೆ ಸಸಿ, ಮರ ತಬ್ಬಿದ ಕಾಟುಬಳ್ಳಿ, ಒಣಗಿದ ಬಾಳೆ ಹಿಂಡ್ಲು, ಸರಬಲು, ಕಂದು, ಬೀಡುಬೀಸಾಗಿ ಬೆಳೆದ ಹೆಡಲು, ಹಳೇ ಅಡಿಕೆಮರ ಕಡಿಯುವುದು, ಬಿದ್ದ ಸೋಗೆ, ಧರೆ ಬದಿ ವತ್ತರಿಸಿ ಬೆಳೆದ ಮರಗಿಡ, ಕೊಂಬೆರೆಂಬೆ ಕತ್ತರಿಸುವುದು ಮಳೆಗಾಲ ಹಿಡಿಯುವ ಮುನ್ನ ಮಲೆನಾಡಿಗರು ಮಾಡಿ ಮುಗಿಸಲೇ ಬೇಕಾದ ಅಖೈರ್ ಕೃಷಿ ಕೆಲಸ.

ದಿನಾಳ ಸಂಬಳ ಐನೂರು. ಬರುವುದು ಹತ್ತಕ್ಕೆ, ಹೋಗುವುದು ಮೂರಕ್ಕೆ. ನಡುನಡುವೆ ಕಾಫಿ-ಟೀ, ಎಲೆ-ಅಡಿಕೆ, ಪಾನ್ಪರಾಗ್, ಬೀಡಿಯೆಳೆಯುವುದು, ಹರಟೆ ಕೊಚ್ಚುವುದು, ಒಟ್ಟಿನಲ್ಲಿ ಕಾಲ ಕಳೆಯುವುದು. ಹೇಳಿದ್ದೊಂದಾರೆ, ಅನುಕೂಲಕ್ಕೆ ತಕ್ಕಂತೆ ಮತ್ತೊಂದು ಮಾಡುವ ಘನಾಂದಾರಿಕೆ ಬೇರೆ! ಅನ್ನುವಂತಿಲ್ಲ, ಆಡುವಂತಿಲ್ಲ. ಬೈದರೆ ಮಾರನೇದಿನ ಕೆಲಸಕ್ಕೆ ಚಕ್ಕರ್. ನೂರಾರು ತರ‍್ಲೆ-ತಾಪತ್ರದ ಉಪದ್ರದವು, ಶುದ್ಧ ಸೋಂಬೇರಿಗಳು-ಕೆಲಸಕ್ಕೆ ಬಂದ, ಬಾರದಿರುವ ಆಳುಕಾಳು ಬಗ್ಗೆ ಕರೆದವರ ಥರಾವರಿ ಆರೋಪ. ಕೆಲಸಕ್ಕೆ ಬಂದವರ ಬೆನ್ನು ಬೀಳುವುದು ಅನಿವಾರ್ಯ. ಬೇತಾಳನಾಗಿ ತೋಟಕ್ಕೆ ಹೋದೆ.

‘ಯಾಕೋ ಆ ಕಂದಿನ ಹೆಡಲು, ಸರಬಲು ಹಾಗೇ ಬಿಟ್ಟಿದ್ದೀರಾ?’ ಸುತ್ತಮುತ್ತ ಎಲ್ಲಾ ಸವರಿ ನಡುವೆ ಬೆಳೆದಿದ್ದ ಬಾಳೆಹಿಂಡ್ಲನ್ನು ಹಾಗೇ ಉಳಿಸಿದ್ದನ್ನು ಕಂಡು ಕೇಳಿದೆ.

‘ಅದರಲ್ಲಿ ಎಲೆಕಡ್ಜಲುಕೊಟ್ಟೆ (ಗೂಡು) ಕಟ್ಟದೆ. ಸವರಕ್ಕೆ ಕತ್ತಿ ಆಡಿಸಿದಾಗ ಕಿಟ್ಟಗೆ ಎರಡು ಬಾರಿಸಿದವು. ಹುಳಗಳ ಪೊಗರಿಳಿದ ಮೇಲೆ ಕೊಟ್ಟೆ ಕಥೆ ಮುಗಿಸಿ, ಸವರಿ ಕೊಡ್ತೀವಿ. ಅವಸ್ರ ಮಾಡಬೇಡಿ. ಮಾಡಿದ್ರೆ ಏನಾತ್ತದೆ ಅಂಥ ಬೇಕಾದ್ರೆ ಕಿಟ್ಟನ ಮುಸುಡಿ ನೋಡಿ…’ ವಾಸು ಮುಸಿಮುಸಿ ನಕ್ಕ.

ಕಿಟ್ಟನ ಮುಖ ನೋಡಿದೆ, ಎಡಭಾಗದ ತುಟಿ, ಮೂಗು, ಕೆನ್ನೆ ಬಾತು, ಕಣ್ಣು ಹೂತು ಹೋಗಿತ್ತು.

‘ಕರೆದ್ರೀಂತಾ ನಿಮ್ಮ ಕೆಲ್ಸಕ್ಕೆ ಬಂದ್ರೆ, ಶನಿ ಹೇಗೆ ವಕ್ರಸಿತು ನೋಡಿ. ಬಾವು ಇಳಿಯಾಕೆ ಇನ್ನೆರಡು-ಮೂರು ದಿನ ಬೇಕು…’ ನೋವಿನಲ್ಲಿ ಆಲಾಪಿಸಿದ ಕಿಟ್ಟ.

‘ಏಯ್ ನಸಕ್ಲ, ಬೆಳ್ಳಂಬೆಳಗಾತ್ಲೆ ನರಳೋದು ಯಾತಕ್ಕೋ? ಕೆಲ್ಸ ಬಿಟ್ಹೋತ ಒಡೇರು ಹೆಚ್ಚಿಗೆ ಕಾಸು ಕೊಡ್ತಾರೆ, ತೇಲಪ್ಪನ ಸೂಪರ್ ಮಾರ್ಕೆಟಿಗೆ ಹೋಗಿ ಎರಡು ಕೊಟ್ಟೆ ಲಗಾಯಿಸಿದ್ರೆ ನೋವು, ಬಾವು ಎಲ್ಲಾ ಪದರಾಡ್! ಅದಕ್ಕಿಂತ ಬೇರೆ ದಿವ್ಯೌಷಧ ಇದೆಯಾ? ಆ ತೇಲಪ್ಪನ ಕೊಟ್ಟೆ ಪವರ್ ಅಂದ್ರೆ ಪವರೇ!’ ವಾಸು ವಕಾಲತ್ತಿನಲ್ಲಿ ಸ್ವಾರ್ಥದ ಲಾಲಸೆ ಘಂಘ ಮಾಡಿಸುತ್ತಿತ್ತು!

ಬಾಳೆಹಿಡ್ಲ ಹತ್ತಿರ ಹೋಗಿ ಬಗ್ಗಿ ಸರಬಲು ಸರಸಿ ಹಣಕಿದೆ. ಅಂಗೈಯಗಲ ಗಾತ್ರ, ಮರದಕಾಂಡ ಬಣ್ಣ, ತೆಳು ಸ್ಪಂಜ್ ಪದರು ಕೊಟ್ಟೆ ಮೇಲ್ಭಾಗ. ತಳ ಭಾಗ ತೆಳು ಜೇನುತಟ್ಟಿನ ಹಾಗೆ ಬೂದು ಬಣ್ಣದ ಅರೆಗಳಲ್ಲಿ ಮೊಟ್ಟೆಮರಿ. ಅದರ ಮೇಲೆ ಹರಿದಾಡುವ ಹೊನ್ನೊಣ ಹೋಲುವ, ಅವಕ್ಕಿಂತ ಸ್ವಲ್ಪ ಉದ್ದದ ಎಲೆಕಡ್ಜಲ. ಸರಬಲು ಅಲ್ಲಾಟಕ್ಕೆ ಕೆರಳಿ ಹುಳಗಳೆದ್ದು ತಲೆ ಸುತ್ತ ಗುಂಯಿಗುಟ್ಟ ತೊಡಗಿದವು. ಕೈಬೀಸಿ ಓಡಿಸಲೆತ್ನಿಸಿದೆ. ಎಡೆಯಲ್ಲಿ ಹಿಂಬದಿ ಕುತ್ತಿಗೆ, ಬೆನ್ನಿಗೆ ಬಾರಿಸಿದವು. ಭಯ, ಆತಂಕದಿಂದ ದಿಕ್ಕೆಟ್ಟು ಮನೆಕಡೆ ಓಟ ಕಿತ್ತ ನನ್ನನ್ನು ಕಂಡು ವಾಸು, ಕಿಟ್ಟ ನಗುತ್ತಿದ್ದರು.

ನೋವು, ನಂಜು ಪರಿಹಾರವೆಂದು ಹಳ್ಳಿಮದ್ದು ಜೀರಿಗೆ ಕಷಾಯ ಕುಡಿದದ್ದೂ ಆಯ್ತು. ಅರಿಶಿನಕೊಂಬು, ಎಳ್ಳೆಣ್ಣೆಯಲ್ಲಿ ಅರೆದು ಲೇಪಿಸಿದ್ದೂ ಆಯ್ತು. ನರಳುತ್ತಲೇ ರಾತ್ರಿ ಬೆಳಗು ಮಾಡಿದ್ದೂ ಆಯ್ತು.

ಬೆಳಗ್ಗೆ ಜಗುಲಿಯಲ್ಲಿ ಪೇಪರ್ ಓದುತ್ತಾ ಕೂತಿದ್ದೆ. ಹಾಡಿ ತುದಿ ಉಣಗೋಲು ಸರಿಸಿ ಗಿರಿ, ಕೋವಿ ಮಂಜರ ಆಗಮನವಾಗುತ್ತಿತ್ತು.

ಖಾಕಿ ಚಡ್ಡಿ, ಅರ್ಧ ತೋಳಿನ ಖಾಕಿ ಶರ್ಟ್, ಅದೇ ಬಣ್ಣದ ಮಂಕಿಕ್ಯಾಪ್ ಧರಿಸಿ, ಮಾಮೂಲಿನಂತೆ ನೆರೆತ ಗಡ್ಡಮೀಸೆ, ಕೇಪಿನ ಕೋವಿ ಹೆಗಲೇರಿಸಿ, ಭಾರದ ಹೆಜ್ಜೆ ಕಿತ್ತಿಡುತ್ತಾ ಬರುತ್ತಿದ್ದ ಕೋವಿಮಂಜನ್ನ ಕಂಡು, ಇವನಿಗೇನು ಬಡಿಯಿತಪ್ಪಾ ಧಾಡಿ ಪ್ರಶ್ನಿಸಿಕೊಂಡೆ.

ನಮ್ಮೂರಲ್ಲಿ ಕೋವಿಮಂಜ ‘ದುಳ್ಳಿದುಗ್ಗ’ನೆಂದೇ ಪ್ರಸಿದ್ಧ. ಅವನೇ ಹೇಳಿಕೊಳ್ಳುವಂತೆ ಕೋವಿ ಗುರಿಯಲ್ಲಿ ಅವನನ್ನು ಮೀರಿಸುವವರು ಲೋಕದಲ್ಲೇ ಯಾರೂ ಇಲ್ಲ! ಅವನ ಹತ್ತಿರ ತೋಟ ಹಾಗೂ ಕೇಪಿನ ಡಬ್ಬಲ್ ಬ್ಯಾರಲ್ ಲೈಸನ್ಸ್ ಇಲ್ಲದ ಕೋವಿಗಳಿವೆ. (ಕಳ್ಳಕೋವಿ ಎಕ್ಸ್ಪರ್ಟ್ ಗಾರ್ಡರಗದ್ದೆ ಮಂಜಚಾರಿ ಮನೆಗೆ ತಿಂಗಳಗಟ್ಟಲೆ ಅಲೆದು, ದಿನಗಟ್ಟಲೆ ಎದುರು ಕುಳಿತು, ರಗ್ಳೆ ಕೊಟ್ಟು ಸ್ಪೆಶಲ್ಲಾಗಿ ಮಾಡ್ಸಿದ ಕೋವಿಗಳೆಂಬುದು ಮಂಜನ ಅಗ್ಗಳಿಕೆ.) ಗುರಿಯಲ್ಲಿ ಮಾತ್ರವಲ್ಲ; ಈಡು. ಶಿಕಾರಿ ಸಾಹಸ, ಶೈಲಿ, ಚಾಕಚಕ್ಯತೆ, ಕುಶಲತೆ, ಎಡವಟ್ಟು ಕುರಿತು ಕೇಳುವವರಿದ್ದರೆ ಗಂಟೆಗಟ್ಟಲೆ ಕೊರೆಯಬಲ್ಲ ನಿಸ್ಸೀಮ! ಅದಕ್ಕೇ ‘ಕೋವಿಮಂಜ’ ಎಂಬ ಬಿರುದಾಕಿಂತ!

ಮೆಟ್ಟಲೇರಿ ಬರುತ್ತಿದ ಕೋವಿಮಂಜನ್ನ ಹತ್ತಿರದಿಂದ ನೋಡಿದೆ. ಮುಖಮೈ ಬಾತು ಅವಾಂತರ! ಏನೋ ಎಡವಟ್ಟಾಗಿರುವುದು ಗ್ಯಾರಂಟಿ!!

‘ಇದೇನೋ ಹನುಮಾವತಾರ?’

ಕುಯ್ಯೋರ‍್ರೋ ನರಳುತ್ತಾ, ನರಕುತ್ತಾ ನಿಟ್ಟುಸಿರುಗರೆಯುತ್ತಾ. ಬೆಕ್ಕಿನ ಕಣ್ಣು ಪಿಳಿಪಿಳಿ ಹೊಳೆಸುತ್ತಾ, ಹೆಗಲ ಮೇಲಿದ್ದ ಟವಲ್ಲಿನಿಂದ ಮುಖ ಒತ್ತಿ ಒತ್ತಿ ಒರೆಸಿಕೊಳ್ಳುತ್ತಿದ್ದನೇ ಹೊರತು ಸೊಲ್ಲೆತ್ತುವ ಸ್ಥಿತಿಯಲ್ಲಿರಲಿಲ್ಲ, ಗಿರಿಯೇ ಪರಿಸ್ಥಿತಿ ವಿವರಿಸಿದ:

‘ಅಮ್ತಿಗದ್ದೆಗೆ ಸುಡುಗರಿ ಕಟ್ಟಬೇಕಿತ್ತು, ಅಗಾಡಿ ಸಸಿ ಹಾಕಲು ಬೇಲಿ ಕಟ್ಟಕೆ ಬಿದಿರುಗಳನೂ ಬೇಕಲ್ವಾ? ಹಾಗಾಗಿ ದಿಡಗಿ ಹಳ ಸವರಲು ನಿನ್ನೆ ಬೆಳಗ್ಗೆ ನಾಲ್ಕಾಳು ಕಳುಹಿಸಿದರೆ, ಗದ್ದೆ ಬದುವಿನ ನವಿಲೇಬ್ಯಾಣದ ಬಿದರವುಡಿಲ್ಲಿದ್ದ ಹುಲಿಕಡ್ಜಲ ಕೊಟ್ಟೆ ನೋಡದೇ ಕತ್ತಿ ಆಡಿಸಿದ್ದಾರೆ. ಹುಳಗಳು ಹುಚ್ಚೆದ್ದು ಎಲ್ಲರಿಗೂ ಕಂಡಾಪಟ್ಟೆ ಹೊಡದವು.

ಕೆಲ್ಸಕ್ಕೆ ಬಂದವರೆಲ್ಲಾ ಬೆಳ್ ಬೆಳಗ್ಗೇನೇ ವಾಪಾಸ್. ಸುಮ್ನೆ ನಾಲ್ಕಾಳ ಸಂಬಳ ದಂಡ ಮಾರಾಯಾ. ಹೋಗಿ ನೋಡಿದರೆ ಆಳೆತ್ತರದ ಮೇಲೊಂದು, ಕೆಳಗೊಂದು ಎರಡೂ ಭಾರೀ ದೊಡ್ಡ ಕೊಟ್ಟೆ. ಸುಡದೇಯಿದ್ದರೆ ಸುಡಗರಿ ಕಟ್ಟೋದು, ಗೊಬ್ಬರ ಹಾಕೋದು, ಹೂಟೆ ಮಾಡಿ ಅಗೆ ಹಾಕಿ ಸಸಿ ನೆಟ್ಟಿ ಮಾಡೋದು, ಕಳೆ ತೆಗೆಯೋದು ಕಷ್ಟದ ಕೆಲಸ ಅಲ್ವಾಂತ ಈ ಪುಣ್ಯಾತ್ಮಗೆ ಹೇಳಿದೆ. ‘ಅದ್ಯಾವ ಮಹಾ ಕೆಲಸ? ಒಂದೇ ಒಂದು ಚಣದ್ದು. ಸೀಮೆಯೆಣ್ಣೆ ಸುರಿದು ದೊಂದಿ ಹೆಟ್ಟಿದರಾತು, ಕರಕ್ಲಾಗಿ ಬಿದ್ದರ‍್ತಾವೆ ಬಿಡಿ,’ ಅಂದ. ಮೊನ್ನೆ ಸಂಜೆ ಕತ್ತಲು ಕವುಚಿದ್ಮೇಲೆ ಹೋಗಿ, ಸೀಮೆಯೆಣ್ಣೆ ಸುರಿದು, ದೊಂದಿ ಚಾಚಿ, ಕೊಟ್ಟೆ ಸುಟ್ಟದ್ದು ಹೆಚ್ಚುಕಮ್ಮಿಯಾಗಿದ್ದೇ ಈ ಅವತಾರ ನೋಡು…’

ಕೋವಿಗಾಸರೆಯಾಗಿ ಕುಕ್ಕರಗಾಲಲ್ಲಿ ಕೂರುತ್ತಾ, ಮಾತಿಗೆ ಅಡ್ಡ ಬಾಯಿಹಾಕಿ ನರಳುತ್ತಲೇ ಕೋವಿಮಂಜ ತನ್ನ ಸಾಹಸ ಕಾರ್ಯಾಚರಣೆ ವರ್ಣನೆ ತೀಡಿ ತಿದ್ದ ತೊಡಗಿದ: ‘ಹೆತ್, ಎಂಥ ಹೇಳ್ತೀರಿ ನೀವು? ಸಾಕು ಸುಮ್ನಿರಿ. ಇದೇ ಮೊದ್ಲಾ ಕಡ್ಜಲ ಕೊಟ್ಟೆ ಸುಡೋದು? ಲೆಕ್ಕವಿಲ್ಲದಷ್ಟು ಸುಟ್ಟೀನಿ. ನನ್ನ ಪಿಲಾನ್ ಎಲ್ಲಾ ಬಹಳ ಕರೆಕ್ಟಾಗಿಯೇ ಇತ್ಕಣ್ರೀ.

ಕಂಬಳಿಕೊಪ್ಪೆ ಮುಚ್ಚಿಕೊಂಡು, ಕೊಟ್ಟೆಗೆ ಸೀಮೆಯೆಣ್ಣೆ ಸುರಿದು ಬೆಂಕಿ ಕಡ್ಡಿ ಕೀರಿ ಹಚ್ಚಿ ಧಗಧಗ ಉರಿಯುತ್ತಿದ್ದ ದೊಂದಿ, ಕೊಟ್ಟೆಗೆ ಹೆಟ್ಟಿದ್ದೆ ತಡ, ಭಗ್ಗನೆ ಹತ್ತಿಯುರಿಯಿತು, ಆದ್ರೆ ಎಡವಟ್ಟಾದ್ದು ಅಲ್ಲೇ! ಮೇಲೊಂದು, ಕೆಳಗೊಂದು ಕೊಟ್ಟೆ ಇರೋದು ಕತ್ತಲಲ್ಲಿ ನಾ ನೋಡೇಯಿರಲ್ಲಿಲ್ಲ! ಈ ಮಹಾಶಯರೂ ಹೇಳಿರಲಿಲ್ಲ. ಯಾವಾಗ ಕೆಳಗೆ ಬೆಂಕಿ ಹತ್ತಿತೋ, ಹೊಗೇಗೆ, ಉರಿ ಝಳಕ್ಕೆ ಮೇಲಿನ ಕೊಟ್ಟೆ ಹುಳಗಳೆದ್ದು ತಿಕಮುಖ ನೋಡದೆ ಬಾರಿಸಿದವು.

ದೂರ ನಿಂತಿದ್ದ ಇವರಿಗೂ ನಾಲ್ಕು ಹುಳ ಬಾರಿಸಿದ್ದೇ ತಡ ಗಿರೀಸಯ್ಯ ಯೆಲ್ಲಿ? ಕುಂಡೆಗೆ ಕಾಲಕೊಟ್ಟು ಮನೀಕಡೆ ಪುಡ್ಚೋ! ಓಡುವ ಬಾರಾಮೀಲ್ಲಿ ಮುಸುಕು ಕವಚಿದ್ದ ನನ್ನ ಕಂಬಳಿ ನವಿಲೇಬ್ಯಾಣದಲ್ಲಿ ಎಲ್ಲಿ ಬಿದ್ದೋಹೋಯಿತ್ತೋಯೇನೋ? ಅಮಾಸೆಕತ್ಲು ಬೇರೆ. ಅಡೆ ಹಳ್ಳಕ್ಕುರುಳಿ ಬಿದ್ದೆದ್ದು ಓಡೋಡಿ ಬಂದೆ. ಬಚಾವಾದದ್ದೇ ದೇವರದಯೆ. ಒಂದೆರಡು ದಿನ ಬಿಟ್ಟು ಕೊಟ್ಟೆ ಪೂರ್ತಿ ಸುಟ್ಟು ಕರಕಲು ಮಾಡಿ, ಕುಲನಾಶ್ನ ಮಾಡದಿದ್ರೆ, ನಾ ಯಾರೂಂತ ಕೇಳಿ? ಥತ್, ನನ್ಹೆಸರು ತೆಗೆದು ನಿಮ್ಮ ಕರಿಯನಿಗಿಡಿ…’ ನರಕುತ್ತಲೇ ವೀರಶಪಥಂಗೈದ ಉತ್ತರಕುಮಾರ!

| ಇನ್ನು ನಾಳೆಗೆ ।

‍ಲೇಖಕರು Avadhi

May 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: