ನಾರಿಹಳ್ಳದ ದಂಡೆಯಲ್ಲಿ

ಇತ್ತೀಚೆಗೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಹಳೆಯ ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿ ಒಂದಕ್ಕೆ ಹೋಗಿದ್ದೆ. ಆ ಅಂಗಡಿಯ ಮಾಲೀಕರು ನಮ್ಮ ಹತ್ತಿರ ತುಂಬಾ ಕಾದಂಬರಿ, ಕತೆ ಪುಸ್ತಕಗಳಿವೆ ಎಂದು ಒಂದು ಚಿಕ್ಕ ಹಳೆಯ ರೂಮಿನೊಳಗೆ ಕರೆದುಕೊಂಡು ಹೋದರು. ಅಲ್ಲಿ ಹಳೆಯ ಪುಸ್ತಕಗಳ ರಾಶಿಯಲ್ಲಿ ಒಂದೊಂದೇ ಪುಸ್ತಕಗಳನ್ನು ಹುಡುಕುತ್ತ ಹೋಗುತ್ತಿದ್ದ ಹಾಗೆ ನನಗೆ ಒಳ್ಳೊಳ್ಳೆಯ ನಾನು ಮೆಚ್ಚುವ ಕನ್ನಡದ ಮತ್ತು ಆಂಗ್ಲ ಭಾಷೆಯ ಹಲವು ಲೇಖಕರ ಪುಸ್ತಕಗಳು ಸಿಕ್ಕವು.

ಆ ರಾಶಿ ಮಧ್ಯದಲ್ಲಿ ನನಗೆ ವಿಶೇಷ ಎಂಬತ್ತಿದ್ದ ಒಂದು ಕಥಾಸಂಕಲನ ಸಿಕ್ಕಿತು. ಮೊದಲಿಗೆ ಆ ಕಥಾಸಂಕಲನದ ಹೆಸರೇ ನನ್ನನ್ನು ತುಂಬಾ ಆಕರ್ಷಿಸಿತು. ಆ ಕಥಾಸಂಕಲನದ ಲೇಖಕರು ಯಾರೆಂದು ನೋಡಿದೆ. ಅದನ್ನು ನೋಡಿ ಇನ್ನು ಅಚ್ಚರಿಯಾಯಿತು. ಆ ಕಥಾಸಂಕಲನದ ಹೆಸರೇ “ನಾರಿಹಳ್ಳದ ದಂಡೆಯಲ್ಲಿ”. ಈ ನಾರಿಹಳ್ಳ ನನ್ನನ್ನು ಬಹಳ ಆಕರ್ಷಿಸಲು ಮತ್ತು ಕಾಡಲು ಹಲವು ಕಾರಣಗಳಿವೆ. ಈ ನಾರಿಹಳ್ಳದ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ ಅಂದುಕೊಂಡಿದ್ದೇನೆ. ಹಲವರಿಗೆ ಈ ಹಳ್ಳದ ಬಗ್ಗೆ ಗೊತ್ತಿರಲೂಬಹುದು. ಅದರಲ್ಲೂ ಬಳ್ಳಾರಿ ಜಿಲ್ಲೆಯ ಸಂಡೂರು, ತೋರಣಗಲ್ಲುಗಳ ಆಸುಪಾಸಿನವರಿಗೆ ಖಂಡಿತ ಈ ಹಳ್ಳದ ಬಗ್ಗೆ ಗೊತ್ತಿರುತ್ತದೆ. ವಸುಧೇಂದ್ರ ಕೆಲವು ಕತೆಗಳಲ್ಲೂ ಈ ಹಳ್ಳದ ಪ್ರಸ್ತಾಪ ಬಂದಿದೆ ಎಂದು ನೆನಪು. ಅವರ ಕೆಂಪುಗಿಳಿ ಕತೆ ನಡೆಯುವುದೇ ಈ ನಾರಿಹಳ್ಳದ ತೀರದಲ್ಲಿ.

ಸುಮಾರು ಮೂವತ್ತನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಯಶವಂತಪುರದ ಗೋಪಾಲ್ ಅಥವಾ ಗೋವರ್ಧನ್ ಸಿನಿಮಾ ಮಂದಿರದಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪ್ರಣಯರಾಜ ಶ್ರೀನಾಥರ ಸಿನಿಮಾ ಬದುಕಿನ ಮಹತ್ತರವಾದ “ಮಾನಸ ಸರೋವರ” ಚಲನಚಿತ್ರವನ್ನು ಪ್ರದರ್ಶಿಸುತ್ತಿದ್ದರು. ಯಶವಂತಪುರದ ಪಕ್ಕದ ಮತ್ತೀಕೆರೆಯಲ್ಲಿ ವಾಸವಿರುವ ನನ್ನ ಸೋದರತ್ತೆಯೊಬ್ಬರು ನನ್ನನ್ನು ಮತ್ತು ನನ್ನ ಅಜ್ಜಿಯನ್ನು ಆ ಸಿನಿಮಾ ನೋಡಲು ಕರೆದುಕೊಂಡು ಹೋಗಿದ್ದರು. ಆ ಸಿನಿಮಾದಲ್ಲಿ ವಿಜಯನಾರಸಿಂಹ ಅವರು ಬರೆದಿರುವ ಅತ್ಯಂತ ಪ್ರಖ್ಯಾತ ಮತ್ತು ಜನಪ್ರಿಯ ಹಾಡು

ನೀನೇ ಸಾಕಿದ ಗಿಣಿ
ನಿನ್ನಾ ಮುದ್ದಿನಾ ಗಿಣಿ
ಹದ್ದಾಗಿ ಕುಕ್ಕಿತಲ್ಲೋ
ನಿನ್ನ ಹದ್ದಾಗಿ ಕುಕ್ಕಿತಲ್ಲೋ 

ಬಾಲಕನಾಗಿದ್ದ ನನಗೆ ತುಂಬಾ ಇಷ್ಟವಾಗಿತ್ತು. ಆ ಹಾಡಿನ ಕೊನೆಗೆ ಬರುವ ಆ ಹಳ್ಳವೇ ನಾರಿಹಳ್ಳ. ಆ ಹಾಡು ಅದೆಷ್ಟೋ ಭಗ್ನಪ್ರೇಮಿ ಯುವಕರ ವಿರಹದ ಪ್ರಣಯ ಗೀತೆಯಾಗಿ ಇಂದಿಗೂ ಅಷ್ಟೇ ಜನಪ್ರಿಯವಾಗಿದೆ. ಆ ಸಿನಿಮಾ ನೋಡಿ ಬಂದ ಮೇಲೆ ಆ ನಾರಿಹಳ್ಳ ಎಲ್ಲಿದೆ? ಎಂದು ಬಹಳ ದಿನ ಹುಡುಕುತ್ತಿದ್ದೆ ಮತ್ತು ಅದರಲ್ಲಿ ಬರುವ ಯಶವಂತ ನಗರ ನಾನು ಸಿನಿಮಾ ನೋಡಿದ ಯಶವಂತಪುರದ ಒಂದು ಭಾಗವೇ ಅಂದುಕೊಂಡಿದ್ದೆ. ಆ ನಂತರ ಆ ಚಲನಚಿತ್ರದ ಸಂಪೂರ್ಣ ಭಾಗವನ್ನು ಪುಟ್ಟಣ್ಣನವರು ಆ ನಾರಿಹಳ್ಳ, ಯಶವಂತ ನಗರ, ಸಂಡೂರು ಸುತ್ತ ಮುತ್ತಲ ಭಾಗಗಳಲ್ಲಿಯೇ ಚಿತ್ರೀಕರಿಸಿದ್ದರು ಎಂದು ತಿಳಿಯಿತು.

ಜಾಗತೀಕರಣವಾಗಿ ಗಣಿಗಾರಿಕೆ ಹೆಚ್ಚಾದ ಮೇಲೆ ಸಂಡೂರಿನ ಮತ್ತು ನಾರಿಹಳ್ಳದ ಸ್ವರೂಪ ಇನ್ನಷ್ಟೂ ಬದಲಾಗಿರುವುದಂತೂ ಸತ್ಯ. ಈಗ ನಾರಿಹಳ್ಳ ಎಲ್ಲಿದೆ ಎಂದು ನನಗೆ ಗೊತ್ತು. ಅದನ್ನು ಒಮ್ಮೆಯಾದರೂ ನೋಡಬೇಕೆಂಬ ಆಸೆ ಇನ್ನು ಹಾಗೆ ಇದೆ ಎಂದು ಕೂಡ ಗೊತ್ತು. ಇಂತಹ ಸಮಯದಲ್ಲಿ ನಾರಿಹಳ್ಳದ ದಂಡೆಯಲ್ಲಿ ಎಂಬ ಈ ಕಥಾಸಂಕಲನ ಸಿಕ್ಕಿತು. ಲೇಖಕರ ಹೆಸರನ್ನು ನೋಡಿದೆ ಇನ್ನು ಅಚ್ಚರಿಯಾಯಿತು. ತಕ್ಷಣವೇ ಪುಸ್ತಕವನ್ನು ಕೊಂಡುಕೊಂಡೆ. ಇದರ ಲೇಖಕರು ಸಮಾಜ ಮುಖಿ ಪತ್ರಿಕೆಯ ಸಂಪಾದಕರಾದ ಚಂದ್ರಕಾಂತ ವಡ್ಡು ಅವರು.

ಚಂದ್ರಕಾಂತ ವಡ್ಡು ಅವರನ್ನು ನಾನು ಐದಾರು ವರ್ಷಗಳಿಂದ ಫೇಸ್ಬುಕ್ ಮೂಲಕ ಬಲ್ಲೆ. ಸಮಾಜಮುಖಿ ಆರಂಭಿಸುವ ಮುನ್ನ ಅವರು ಒಬ್ಬ ಪತ್ರಕರ್ತರಾಗಿದ್ದರು ಎಂದು ಗೊತ್ತಿತ್ತು ಆದರೆ ಅವರೊಬ್ಬ ಅದ್ಭುತ ಕತೆಗಾರ ಎಂದು ಗೊತ್ತಿರಲಿಲ್ಲ. ಅಮ್ಮನ ನೆನಪು – ಭಾಗ – 1 ಹಾಗೂ ಅಮ್ಮನ ನೆನಪು – ಭಾಗ – 2, ಅಂತಃಕರಣದ ಗಣಿ ಸೇರಿದಂತೆ ಇನ್ನು ಕೆಲವು ಕೃತಿಗಳನ್ನು ಇವರು ಬರೆದಿದ್ದಾರೆ ಎಂದು ಈಗ ತಿಳಿಯಿತು. ಚಂದ್ರಕಾಂತ ವಡ್ಡು ಅವರ ಊರು ವಡ್ಡು ಕೂಡ ಈ ನಾರಿಹಳ್ಳದ ದಂಡೆಯಲ್ಲಿಯೇ ಇರುವುದು.

ಈ ನಾರಿಹಳ್ಳದ ದಂಡೆಯಲ್ಲಿನ ಕತೆಗಳನ್ನು ಓದಿ ಅಚ್ಚರಿಗೊಂಡಿದ್ದೇನೆ. ಇಲ್ಲಿನ ಹಲವು ಕತೆಗಳು ಲಂಕೇಶ್ ಪತ್ರಿಕೆ, ಮಯೂರ, ತುಷಾರ, ಪ್ರಜಾವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಒಂದು ಕತೆ ಆಕಾಶವಾಣಿಯಲ್ಲಿಯೂ ಪ್ರಸಾರವಾಗಿದೆ.

ಇಲ್ಲಿ ಒಟ್ಟು ಹತ್ತು ಕತೆಗಳಿವೆ. ಆ ಕತೆಗಳನ್ನು ಕೆಳಗೆ ಕೊಟ್ಟಿದ್ದೇನೆ.

೧. ಪ್ರೀತಿ ನೆಲದಡಿಯ ನದಿಯಂತೆ

ಇಲ್ಲಿ ಯುವತಿಯೊಬ್ಬಳು ತನ್ನನ್ನು ತಿರಸ್ಕರಿಸಿ ಬೇರೆ ಯುವತಿಗೆ ಮದುವೆಯಾಗಿರುವ ತನ್ನ ಹಳೆಯ ಗೆಳೆಯನ ಕುರಿತು ಚಿಂತಿಸುವ ಕತೆಯ ಹಾಗೆ ಕಾಣುತ್ತದೆ. ಅವಳು ನನಗೆ ಪ್ರೀತಿಸಲು ಬಾರದೆಂದು ಜರೆದ ಹೇಮಂತನಿಗೆ ಬರೆಯಬೇಕೆನ್ನಿಸುತ್ತದೆ ಎಂದು ಹೇಳುತ್ತಾಳೆ. ನನಗೆ ಪ್ರೀತಿಯನ್ನು ಪ್ರಕಟಿಸಲು ಬಾರದಷ್ಟೆ. ಎಷ್ಟೋ ಸಲ ಪ್ರಕಟಗೊಳ್ಳದ ಪ್ರೀತಿ ನೆಲದೊಳಗೆ ಹರಿವ ನದಿಯಂತೆ. ಅದರೊಳಗೆ ಬೊಗಸೆ ಮುಳುಗಿಸಿ ತುಂಬಿ ಕೊಳ್ಳಲಿ ಹೇಗೆ? ಎಂಬ ಪ್ರಶ್ನೆಯನ್ನು ಅವಳೇ ಹಾಕಿಕೊಳ್ಳುತ್ತಾಳೆ. ಅದೇ ಪ್ರಶ್ನೆಯನ್ನು ಓದುಗರ ಮುಂದೆಯೂ ನೀಡುತ್ತಾಳೆ.

೨. ಉಪಟಳ

ಈ ಕತೆಯೂ ಈ ಕಥಾಸಂಕಲನದ ಅತ್ಯುತ್ತಮ ಕತೆಗಳಲ್ಲಿ ಒಂದು ಎಂದು ಹೇಳಬಹುದು. ಉಪಟಳ ಕತೆಯಲ್ಲಿ ಫ್ರಾಂಜ್ ಕಾಫ್ಕಾನ ಪ್ರಭಾವ ಎದ್ದು ಕಾಣುತ್ತದೆ. ಇಲ್ಲಿ ತೇಜಸ್ವಿಯವರ ತಬರನ ಕತೆಯೂ ಜ್ಞಾಪಕಕ್ಕೆ ಬರಬಹುದು. ಆಂಗ್ಲ ಸಾಹಿತ್ಯದಲ್ಲಿ Kafkaesque ಎಂಬ ಸಾಹಿತ್ಯ ಪ್ರಕಾರ ಇದೆ. ಅದರ ಪ್ರಕಾರ ಪಾತ್ರಗಳು ಕಾಫ್ಕಾನ ಸಾಹಿತ್ಯದಲ್ಲಿ ಬರುವಂತೆ ತುಳಿತ ಕೊಳಗಾಗಿಯೋ ಅಥವಾ ದುಃಸ್ವಪ್ನದಿಂದ ನರಳುವುದೋ ಅಥವಾ ತಾವು ಏನು ಮಾಡಿದರೂ ಕೈಹತ್ತುವುದಿಲ್ಲ ಎಂದು ಮರುಗುವುದೋ ಕಾಣಬಹುದು. ಈ ಕತೆ ಕಾಫ್ಕಾನ ನ್ಯಾಯದ ಬಾಗಿಲಲ್ಲಿ ಕತೆಯ ರೀತಿ ಬರುತ್ತದೆ. ಇಲ್ಲಿನ ಮುಖ್ಯ ಪಾತ್ರ ಯಲ್ಲೋಜಿಯದು. ಅವನು ತನ್ನ ಬದುಕಿನಲ್ಲಿ ಏನು ಮಾಡಿದರೂ ಸಮಾಜದಲ್ಲಿರುವ ಭ್ರಷ್ಟಚಾರದ ಮುಂದೆ ಸೋಲುತ್ತಾನೆ. ಕೊನೆಗೆ ಕೃಷಿ ಮಾಡಲು ಹೋದರೂ ಅಲ್ಲಿಯೂ ಒಂದಲ್ಲ ಒಂದು ಅನಾಹುತವಾಗುತ್ತದೆ.

೩. ಗಲಭೆ

ಗಲಭೆ ಕತೆ ವಯ್ಯಸ್ಸಾದ ಮುಸ್ಲಿಂ ಮಾಸ್ತರೊಬ್ಬರ ಕತೆ. ಭಾರತದಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೆ ಕೋಮು ಗಲಭೆಗಳು ನಡೆಯುತ್ತವೆ. ಆದರೆ ಈ ಕತೆಯಲ್ಲಿ ಮಾನವೀಯತೆಯೇ ಮುಖ್ಯ ಎಂದು ಬದುಕ್ಕಿದ್ದ ಮಾಸ್ತರೊಬ್ಬರು ವೃತ್ತ ಪತ್ರಿಕೆಯಲ್ಲಿ ಬರುವ ಒಂದು ಚಿಕ್ಕ ಕೋಮು ಗಲಭೆಯ ಸುದ್ದಿಯನ್ನು ಓದಿ ತಮ್ಮ ಬದುಕಿನ ನೆನಪಿನಾಳಕ್ಕೆ ಹೋಗುತ್ತಾರೆ. ಮಾಸ್ತರರ ನೆನಪಿನ ಮೂಲಕ ಅವರ ಬದುಕಿನ ಚಿತ್ರಣ ತೆರೆದುಕೊಳ್ಳುತ್ತದೆ. ಕತೆಯ ಕೊನೆಗೆ ಓದುಗನಿಗೆ ಸತ್ಯ ತಿಳಿದಾಗ ಅಚ್ಚರಿ ಮೂಡುತ್ತದೆ. ಈ ಕತೆಯನ್ನು ಲೇಖಕರ ಹೆಸರು ಇಲ್ಲದೆ ಯಾರಿಗಾದರೂ ಓದಿಸಿದರೆ ಇದನ್ನು ಸಾದತ್ ಹಸನ್ ಮಂಟೋ, ಖುಷವಂತ್ ಸಿಂಗ್ ಅಥವಾ ಅಮೃತಾ ಪ್ರೀತಮ್ ಬರೆದಿರಬಹುದು ಎಂದು ಅಂದುಕೊಂಡರೂ ಅಚ್ಚರಿಯಿಲ್ಲ. ಕತೆ ಅಷ್ಟು ಚೆನ್ನಾಗಿ ಮೂಡಿಬಂದಿದೆ. 

೪. ನಿಶಾನೆಗಳ ನಡುವೆ

ಇಲ್ಲಿ ಕೂಡ, ಆಸ್ಪತ್ರೆ, ಹೆಣಗಳು, ಅಪ್ಪನ ಸಾವು, ಹಳ್ಳದಲ್ಲಿ ತೇಲಿ ಬಂದ ಹೆಣ, ಪ್ರೇಮ ಎಲ್ಲವೂ ಬರುತ್ತವೆ. ಇಲ್ಲಿ ಡಾಕ್ಟರ್ ಒಬ್ಬರು  ತಮ್ಮ  ತಂದೆಯ ಸಾವಿನ ಘಟನೆಯ ಮೂಲಕ ತಮ್ಮ ಬದುಕನ್ನು ಹಿಂತಿರುಗಿ ಆತ್ಮಾವಲೋಕನ ಮಾಡಿಕೊಳ್ಳುವ ಹಾಗೆ ಈ ಕತೆ ಮೂಡಿ ಬಂದಿದೆ.

೫. ಆಕಾರವಿಲ್ಲದ ಆಕಾಶ

ಈ ಕತೆಯಲ್ಲಿನ ಪಾತ್ರವೊಂದು ಗೆಳೆಯನಾಗಿ ಬಂದು ನಿರೂಪಕನ ಜೊತೆ ಸಂಭಾಷಿಸುವ ರೀತಿ ಮೂಡಿಬಂದಿದೆ. ಇಲ್ಲಿ ಮಧ್ಯಮ ವರ್ಗದ ಯುವಕರ ತಳಮಳವನ್ನು ಕಾಣಬಹುದು. ಇಲ್ಲಿನ ಮುಖ್ಯ ಪಾತ್ರ ಮದುವೆ, ಮಕ್ಕಳು, ಆಹಾರ, ಮೈಥುನಗಳನ್ನು ಬರ್ಮುಡಾ ಟ್ರಯಾಂಗಲ್ ನಷ್ಟೇ ನಿಗೂಢ ಎಂದು ತಿಳಿದು ಬದುಕಿನಲ್ಲಿ ಸೋತಿರುತ್ತದೆ.

೬. ಹೂಳು

ಈ ಹೂಳು ಕತೆಯ ಶೀರ್ಷಿಕೆ ಬೇರೆ ಬೇರೆ ಅರ್ಥವನ್ನು ಕೊಡುತ್ತದೆ. ಇಲ್ಲಿ ಕಥಾನಾಯಕ ನಿದ್ರೆ ಮಾತ್ರೆಗಳನ್ನು ನುಂಗಿ ಸತ್ತು ಹೋಗಿರಬಹುದು. ಅಥವಾ ಯಾವುದೋ ಕೆಸರಿನ ಹೊಂಡದ ಹೂಳಿನಲ್ಲಿ ಅವನ ಬದುಕು ಸಿಲುಕಿ ಅಲ್ಲಿಂದ ಹೊರಬರಲಾಗದೆ ಅವನು ಒದ್ದಾಡುತ್ತಿರಬಹುದು. ಇಲ್ಲಿ ಬದುಕಿನಲ್ಲಿ ಸೋತ ಯುವಕನೊಬ್ಬ ಅಣ್ಣ ಅತ್ತಿಗೆ, ಬಂಧುಗಳು ಮತ್ತು ಸಮಾಜದ ಕುಹಕದ ಮಾತುಗಳ ಮುಂದೆ ಬದುಕಲು ಸಾಧ್ಯವಾಗದೆ ಸಾವಿನೆಡೆಗೆ ಮುಖಮಾಡಿರುವದನ್ನು ಕಾಣಬಹುದು.

೭. ನಾರಿಹಳ್ಳದ ದಂಡೆಯಲ್ಲಿ

ಇದೊಂದು ತುಂಬಾ ಅದ್ಭುತ ಕತೆಯೆಂದು ಹೇಳಬಹುದು. ಈ ಕಥಾಸಂಕಲನದ ಶೀರ್ಷಿಕೆಯ ಈ ಕತೆಯಲ್ಲಿ ಕಥಾನಾಯಕ (ಪರಶುರಾಮ) ಎಷ್ಟೋ ವರ್ಷಗಳ ನಂತರ ತನ್ನ ಹಳ್ಳಿಗೆ ಹಿಂತಿರುಗಿ ಬರುತ್ತಾನೆ. ತನ್ನ ತಾಯಿಯನ್ನು ಮರಣಶಯ್ಯೆಯಲ್ಲಿ ಕಾಣುತ್ತಾನೆ. ಅವಳ ಇಂದಿನ ಸ್ಥಿತಿಗೆ ತಾನೇ ಕಾರಣ ಎಂದು ಮರಗುತ್ತಾನೆ. ತಾಯಿಗೆ ಮಗ ಬಂದ ಎಂದು ಒಂದು ಕಡೆ ಸಂತೋಷ. ಕಥಾನಾಯಕನಿಗೆ ಸ್ಥಿತ್ಯಂತರವಾಗಿರುವ ತನ್ನ ಹಳ್ಳಿಯ ಚಿತ್ರಣವೇ ತುಂಬಾ ವಿಚಿತ್ರವಾಗಿ ಕಾಣುತ್ತದೆ.

ಕಥಾನಾಯಕ ಆ ಊರನ್ನು ಬಿಟ್ಟು ಹೋಗಲು ಕಾರಣ ಅವನಿಗೆ ನಿಶ್ಚಯವಾಗಿದ್ದ ಅವನ ಮದುವೆ ಮುರಿದು ಬಿದ್ದದ್ದು ಮತ್ತು ಅವನ ಅಹಂಗೆ ಪೆಟ್ಟು ಬಿದ್ದದ್ದು ಎಂದು ಹೇಳಬಹುದು. ಆ ಮದುವೆ ಮುರಿದು ಬೀಳಲು ಕಾರಣ ಅವನು ಬಿಟ್ಟಿದ್ದ ಉದ್ದನೆಯ ಗಡ್ಡ. ಮದುವೆಯ ಹೆಣ್ಣು ಆ ಗಡ್ಡ ಬೋಳಿಸಿದರೆ ಮಾತ್ರ ನಿನ್ನನ್ನು ಮದುವೆಯಾಗುವುದು ಎಂದು ಹಸೆಮಣೆಯ ಮೇಲೆ ಕೂರುವ ಸಮಯದಲ್ಲಿ ಹೇಳುತ್ತಾಳೆ.

ಅವನು ಅವಳು ಏಕಾಂತದಲ್ಲಿ ನೀನು ಗಡ್ಡ ಬೋಳಿಸಿದರೆ ಚೆನ್ನಾಗಿ ಕಾಣುತ್ತಿಯ ಎಂದು ಹೇಳಿದ್ದರೆ ಅವನು ಗಡ್ಡವನ್ನು ಸುಲಭವಾಗಿ ತೆಗೆದು ಬಿಡುತ್ತಿದ್ದ. ಆದರೆ, ಮದುವೆಗೆ ಬಂದಿದ್ದ ಎಲ್ಲರ ಮುಂದೆ ಅವಳು ಖಡಾಖಂಡಿತವಾಗಿ ಆಜ್ಞೆ ಮಾಡಿದಾಗ ಅವನ ಅಹಂಗೆ ಪೆಟ್ಟು ಬೀಳುತ್ತದೆ. ಮದುವೆಗೆ ಮುಂಚೆಯೇ ಇವಳು ಈ ರೀತಿ ಹಾರಾಡುತ್ತಾಳೆ ಇನ್ನು ಮದುವೆಯ ನಂತರ ಹೇಗೆ ಎಂದು ಯೋಚಿಸಿ ಅವನು ಮದುವೆ ಬೇಡ ಎಂದು ಹೇಳಿ ಹಸೆಮಣೆಯಿಂದ ಮೇಲೇಳುತ್ತಾನೆ. ಮದುವೆ ಮುರಿದು ಬೀಳುತ್ತದೆ. ಅದೇ ಸಮಯಕ್ಕೆ ಕಥಾನಾಯಕ ಪರಶುರಾಮನ ಊರಿನವನೇ ಆಗಿದ್ದ ಶಂಕ್ರ ಮದುವೆ ಹೆಣ್ಣು ಜಲಜಾಕ್ಷಿಯನ್ನು ಅದೇ ಮಹೂರ್ತದಲ್ಲಿ ಅದೇ ಹಸೆಮಣೆಯ ಮೇಲೆ ಮದುವೆಯಾಗುತ್ತಾನೆ.

ಆ ಮದುವೆಯ ದಿನ ಊರುಬಿಟ್ಟ ಪರಶುರಾಮ ತುಂಬಾ ವರ್ಷಗಳ ನಂತರ ಊರಿಗೆ ಬಂದಾಗ ಆ ಜಲಜಾಕ್ಷಿಯನ್ನು ಮದುವೆಯಾಗಿದ್ದ ಗಂಡ ಶಂಕ್ರ ಎಂದೋ ಸತ್ತು ಹೋಗಿರುತ್ತಾನೆ. ಅದು ಈಗ ಪರಶುರಾಮನಿಗೆ ಗೊತ್ತಾಗುತ್ತದೆ. ಈಗ ಪರಶುರಾಮ ಮುಂಚಿನ ಹಠ, ದ್ವೇಷಕ್ಕೆ ಏನು ಅರ್ಥವಿಲ್ಲ ಎಂದು ಭಾವಿಸುತ್ತಾನೆ. ಕಾಲ ಎಲ್ಲವನ್ನು ಸೆಳೆದೊಯ್ದಿದೆ. ನಾರಿಹಳ್ಳದಲ್ಲಿ ಬಹಳಷ್ಟು ನೀರು ಹರಿದಿತ್ತು. ಈಗ ಆ ಕುರಿತು ಸಂತೃಪ್ತಿ, ವಿಷಾದ, ದುಃಖದಂತಹ ಯಾವ ಭಾವನೆಯೂ ಅವನಲ್ಲಿ ಉಳಿದಿರಲಿಲ್ಲ.

ಮರುದಿನ ತಕ್ಷಣವೇ ಹಜಾಮರ ಅಳ್ಗನನ್ನ ಕರೆದು ಎಷ್ಟೋ ವರ್ಷದ ತನ್ನ ಗಡ್ಡವನ್ನು ಬೋಳಿಸಲು ಹೇಳುತ್ತಾನೆ. ಅವನು ಸ್ನಾನ ಮುಗಿಸಿ ಮನೆಯಿಂದ ಹೊರಬೀಳುತ್ತಾನೆ. ಈಗ ಎಷ್ಟೋ ವರ್ಷದ ಯಾವುದೋ ವ್ಯಾಮೋಹ ಅವನನ್ನು ಹೊಕ್ಕ ಅನುಭವವಾಗುತ್ತದೆ. ಅವನ ಮನಸಿನಲ್ಲಿ ಗಡ್ಡವಿಲ್ಲದ ಗಲ್ಲದ ಮೇಲೆ ಯಾವುದೋ ನಿಶ್ಚಿತ ಛಾಯೆ ಮೂಡುತ್ತದೆ. ಅವನು ಜಲಜಾಕ್ಷಿಯನ್ನು ನೋಡಲು ಹೋದನೋ ಅಥವಾ ಅವಳು ತನ್ನ ಅಹಂನಿಂದ ಸೋತಳು. ನಾನು ಗೆದ್ದೇ ಎಂಬ ಭಾವವೋ ತಿಳಿಯದು. ಈಗ ಗಡ್ಡವಿಲ್ಲದ ಇವನ ಕೆನ್ನೆಯನ್ನು ಅವಳು ನೋಡಿದರೆ ಏನಾಗಬಹುದು ಎಂಬುದು ಓದುಗನಿಗೆ ಬಿಟ್ಟದ್ದು. ಇಂದಿನ ಯುವತಿಯರು ಗಡ್ಡ ಬಿಡುತ್ತಿರುವ ಯುವಕರನ್ನು ಇಷ್ಟಪಡುತ್ತಿರುವ ಹಾಗೆ ಅವಳು ಬದುಕಿನ ಹೊಡೆತದಿಂದ ಬದಲಾಗಿ ನಿನ್ನ ಗಡ್ಡವೇ ನಿನಗೆ ಭೂಷಣ ಎಂದು ಹೇಳಿ ಬಿಟ್ಟರೆ ಏನಾಗಬಹುದು?   

೮. ನೇಪಥ್ಯದ ನೋವು

ಈ ಕತೆಯ ನಾಯಕಿ ಅಳ್ಳಕ್ಕ ಎಂಬುವವವಳು. ಇವಳು ಕೂಲಿ ಮಾಡಿ ತನ್ನ ನಾಲಾಯಕ್ ಗಂಡನನ್ನು ಸಾಕುವುದರ ಜೊತೆಗೆ ಬದುಕನ್ನು ಸವೆಸುತ್ತಿರುತ್ತಾಳೆ. ಅವಳಿಗೆ ಮಕ್ಕಳಿರುವುದಿಲ್ಲ. ಅವಳು ಬಂಜೆಯಾಗಿರುವುದಲ್ಲದೇ ತನ್ನ ಬದುಕು ಹಾಗೆ ಎಂದು ಭಾವಿಸಿ ನರಳುವುದನ್ನು ಈ ಕತೆಯಲ್ಲಿ ಕಾಣಬಹುದು.

೯. ಬೆಳಕಿನ ರಾತ್ರಿ

ಬೆಳಕಿನ ರಾತ್ರಿ ಎಂಬ ಈ ಕತೆ ವಾಸ್ತವ ಮತ್ತು ಅವಾಸ್ತವ ಸಂಗತಿಗಳಿಂದ ಕೂಡಿದೆ. ಹಳ್ಳಿಯಲ್ಲಿ ಹಾರುವ ತಟ್ಟೆಯೊಂದು ಬೆಳಕನ್ನು ಚೆಲ್ಲುತ್ತದೆ. ಆ ಹಾರುವ ತಟ್ಟೆ. ಕತ್ತಲಾಗಿದ್ದ ಆ ಊರಿನ ಗೌಡನ ನಾಲ್ಕನೇ ಹೆಂಡತಿ ತಾಯಕ್ಕಳ ಬದುಕಿಗೆ ಬೆಳಕಂತೆ ಮೂಡಿಬಂದರೆ ಗೌಡನಿಗೆ ತನ್ನ ಸಾವಿನ ಮುನ್ಸೂಚನೆಯಂತೆ ಕಾಣುತ್ತದೆ. ಕೊನೆಗೆ ಗೌಡ ವಿಷ ಕುಡಿದು ಸಾಯುತ್ತಾನೆ. ಕಾರಣ ಕತೆಯ ಕೊನೆಯಲ್ಲಿ ತಿಳಿಯುತ್ತದೆ.

೧೦. ನಿಜರೂಪಿ

ನಿಜರೂಪಿ ಕತೆಯಲ್ಲಿ ನಿದ್ರೆಯಲ್ಲಿ ಒಬ್ಬ ಭಗ್ನಪ್ರೇಮಿ ಸತ್ತಂತೆ ಮಲಗಿರುವ ದುಃಸ್ವಪ್ನ ಕಾಣುವ ಹಾಗೆ ಇದೆ. ಇಲ್ಲಿ ಅವನ ರಕ್ತವೆಲ್ಲ ಆವಿಯಾಗಿ ಆ ಜಾಗದಲ್ಲಿ ಕೀವಿನಂತಹ ಎಂತದೋ ದ್ರವ ಸೇರಿಕೊಂಡು ಅಲ್ಲಿ ಹುಳುಗಳು ಸೇರಿಕೊಂಡಿರುತ್ತವೆ. ಅವನು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಆಗಿದೆ. ಅಲ್ಲಿಂದ ಸ್ಮಶಾನ ತುಂಬಾ ಹತ್ತಿರ. ಅವನಿಗೆ ಸಾವಿನ ಭಯ ಕಾಡುತಿದೆ. ಆದರೆ ತನ್ನ ಕಾಲೇಜು ದಿನಗಳ ಜ್ಞಾಪಕ ಬರುತಿದೆ. ಅಲ್ಲಿ ಒಬ್ಬ ಹುಡುಗಿಯನ್ನು ಕಥಾನಾಯಕ ಪ್ರೀತಿಸಿದ್ದ ಎಂದು ತಿಳಿಯುತ್ತದೆ. ಆ ಕಾರಣದಿಂದ ಈ ಕತೆ ಕನಸು, ಭ್ರಮೆ ಮತ್ತು ವಾಸ್ತವಗಳ ಮಧ್ಯೆ ಸಂಭವಿಸುತ್ತದೆ.

ಚಂದ್ರಕಾಂತ ವಡ್ಡು ಅವರ ನಿರೂಪಣೆ ಮತ್ತೇ ಕತೆಗಳ ಗುಣಮಟ್ಟ ತುಂಬಾ ಚೆನ್ನಾಗಿದೆ ಎಂದು ಹೇಳಬಹುದು. ಇಲ್ಲಿನ ಕತೆಗಳು ಮೇಲ್ನೋಟಕ್ಕೆ ವ್ಯಕ್ತಿ ಕೇಂದ್ರಿತ ಕತೆಗಳ ರೀತಿ ಕಂಡರೂ ಇವು ಅಲ್ಲಿನ ಗ್ರಾಮ ಪರಿಸರವನ್ನು ಚೆನ್ನಾಗಿ ಚಿತ್ರಿಸಿವೆ. ಈ ಕಥಾ ಸಂಕಲನಕ್ಕೆ ಪಾ ವೆಂ ಆಚಾರ್ಯರು ಮುನ್ನುಡಿ ಬರೆಯಬೇಕಿತ್ತು. ಅಷ್ಟರಲ್ಲಿ ಅವರು ತೀರಿ ಹೋದ ಕಾರಣ ಪಾ ವೆಂ ಬರೆಯದ ಮುನ್ನುಡಿ ಹಾಗೆ ಇದೆ. ಇದರ ಬೆನ್ನುಡಿಯನ್ನು ಖ್ಯಾತ ಲೇಖಕ ಕೇಶವ ಮಳಗಿಯವರು ಬರೆದಿದ್ದಾರೆ. 

ಇದನ್ನು ಪ್ರಕಟಿಸಿರುವವರು ಬಳ್ಳಾರಿಯ ಲೋಹಿಯಾ ಪ್ರಕಾಶನದವರು. ಇಂತಹ ಒಳ್ಳೆಯ ಕಥಾಸಂಕಲನ ಬರೆದು ಯಾಕೋ ಚಂದ್ರಕಾಂತ ವಡ್ಡು ಅವರು ಕತೆ ಕಾದಂಬರಿಗಳಿಂದ ವಿಮುಖರಾಗಿರುವಂತೆ ಕಾಣುತ್ತದೆ. ಅವರು ಮತ್ತೇ ಕತೆ ಕಾದಂಬರಿ ಬರೆಯಲು ಪ್ರಯತ್ನಿಸುವುದು ಒಳ್ಳೆಯದೆಂದು ನನ್ನ ಆಶಾಭಾವನೆಯನ್ನು ವ್ಯಕ್ತ ಪಡಿಸುತ್ತಿದ್ದೇನೆ.

December 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: