ಉರಿಬಿಸಿಲ ತಿರುಗೇಟು

ನಾನಾಗ ದಂಡಿನಶಿವರದ ಪಶುಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಕೆಲಸ ಮಾಡಿದ ಇನ್ನಿತರ ಸ್ಥಳಗಳಿಗೆ ಹೋಲಿಸಿದರೆ ದಂಡಿನಶಿವರದಲ್ಲಿ ಕೆಲಸ ಸ್ವಲ್ಪ ಕಡಿಮೆಯೆಂದೇ ಹೇಳಬೇಕು. ನಾನು ಕೆಲಸ ಮಾಡುತ್ತಿದ್ದ ಎಲ್ಲಾ ಆಸ್ಪತ್ರೆಗಳಿಗೂ ಪಶುವೈದ್ಯಕೀಯ ಪುಸ್ತಕಗಳ ಜೊತೆಗೆ ಕತೆ, ಕಾದಂಬರಿ, ನಾಟಕದ ಪುಸ್ತಕಗಳನ್ನು ಒಯ್ಯುತ್ತಿದ್ದೆ. ಆಸ್ಪತ್ರೆಯಲ್ಲಿ ಬಿಡುವು ಸಿಕ್ಕ ಕೂಡಲೆ ಎಷ್ಟಾಗುತ್ತದೆಯೋ ಅಷ್ಟು ಓದುತ್ತಿದ್ದೆ. ದಂಡಿನಶಿವರದಲ್ಲಿ ಪುಸ್ತಕಗಳ ಓದಲು ಸ್ವಲ್ಪ ಜಾಸ್ತಿ ಸಮಯ ಸಿಗುತ್ತಿತ್ತು.

ಆಸ್ಪತ್ರೆಯಲ್ಲಿ ಒಮ್ಮೊಮ್ಮೆ ಕೆಲಸ ಕಡಿಮೆ ಎನಿಸುತ್ತಿದ್ದಾಗಲೇ ಹತ್ತಾರು ದನಕರುಗಳು ಆಸ್ಪತ್ರೆಗೆ ಬಂದು ನನ್ನನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದುದೂ ಉಂಟು! ಡಾಕ್ಟರ ಹಣೆಬರಹವೇ ಅಷ್ಟು. ಆಸ್ಪತ್ರೆ ಕೆಲಸಕ್ಕೆ ನಿಗದಿತ ಸಮಯವಿದೆ. ಆದರೆ ಕಾಯಿಲೆಗಳಿಗೆ ಸಮಯವಿದೆಯೇ? ಮನುಷ್ಯರ ಡಾಕ್ಟ್ರು ಇರಬಹುದು, ದನೀನ ಡಾಕ್ಟ್ರು ಇರಬಹುದು! ಮನುಷ್ಯ ಡಾಕ್ಟರರ ಕಷ್ಟ ಕಾರ್ಪಣ್ಯಗಳು ಸಾರ್ವಜನಿಕರಿಗೆ ಬಹುಬೇಗ ಗೊತ್ತಾಗುತ್ತದೆ. ದನೀನ ಡಾಕ್ಟ್ರ ಕೆಲಸ ಕಾರ್ಯ, ಕಷ್ಟಗಳು ಯಾರ ಗಮನಕ್ಕೂ ಬಾರದೆ ಹೋಗುತ್ತವೆ. ನಮ್ಮಲ್ಲಿ ದನೀನ ಡಾಕ್ಟ್ರಿಗೆ ಕಿಮ್ಮತ್ತು ಕಡಿಮೆಯೇ! ಸರ್ಕಾರ ಕೊಡಮಾಡುವ ಸಂಬಳ, ಸಾರಿಗೆ, ವಸತಿ ಮತ್ತಿತರೆ ಎಲ್ಲ ಅನುಕೂಲಗಳೂ ಮನುಷ್ಯರ ಡಾಕ್ಟ್ರಿಗೇ ಹೆಚ್ಚು.

ಎಷ್ಟೋ ಕಡೆ ಅತ್ಯಂತ ನಿಕೃಷ್ಟವಾದ ಕಟ್ಟಡದಲ್ಲಿ ದನೀನ ಆಸ್ಪತ್ರೆ ನಡೆಯುತ್ತಿರುತ್ತದೆ. ದನಕರುಗಳ ಆಪರೇಷನ್ ಮಾಡಲೂ ಸಹ ಅನುಕೂಲವಾದ ಜಾಗವಿರುವುದಿಲ್ಲ. ನಾನಂತೂ ರಸ್ತೆಗಳಲ್ಲಿ, ರೈತರ ಮನೆ ಹಿತ್ತಲಲ್ಲಿ, ಶಾಲೆಗಳ ಆವರಣದಲ್ಲಿ, ತಿಪ್ಪೆಗಳ ಆಜುಬಾಜಿನಲ್ಲಿ ಗುರುತರವಾದ ಆಪರೇಷನ್‍ಗಳನ್ನು ಮಾಡಿದ್ದೇನೆ.

ಇಲಾಖೆಯ ವೈದ್ಯರಿಗಾಗಲೀ ಅಥವಾ ಇತರೆ ಸಿಬ್ಬಂದಿಗಾಗಲೀ ವಾಸಿಸಲು ಕ್ವಾರ್ಟರ್ಸ್ ಇರುವುದಿಲ್ಲ. ಇಡೀ ಕರ್ನಾಟಕದ ಬೆರಳೆಣಿಕೆಯಷ್ಟು ಸ್ಥಳಗಳಲ್ಲಿ ಮಾತ್ರ ವೆಟರಿನರಿ ಕ್ವಾರ್ಟರ್ಸ್ ಇರಬಹುದೋ ಏನೋ? ಇದು ಹಾಗಿರಲಿ, ಪಶುವೈದ್ಯ ಇಲಾಖೆಯು ಪೊಲೀಸ್ ಅಥವಾ ಆರೋಗ್ಯ ಇಲಾಖೆಗಳಂತೆ ತುರ್ತು ಸೇವಾ ಇಲಾಖೆಯೂ ಅಲ್ಲ. ಸಾರ್ವಜನಿಕರು, ರೈತರು ಮಾತ್ರ ಈ ಇಲಾಖೆಯನ್ನು ತುರ್ತು ಸೇವಾ ಇಲಾಖೆಯೆಂದು ತಪ್ಪಾಗಿ ಭಾವಿಸಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳಿಗಾಗಲೀ, ಮಂತ್ರಿಮಹೋದಯರಿಗಾಗಲೀ ಈ ವಿಷಯ ಬೇಕಾಗೇ ಇಲ್ಲ. ಈ ತಪ್ಪು ಗ್ರಹಿಕೆಯ ಬಲಿಪಶುಗಳು ಮಾತ್ರ ಆಸ್ಪತ್ರೆಯಲ್ಲಿ ನಿಯತ್ತಾಗಿ ಕೆಲಸ ನಿರ್ವಹಿಸುವ ದನೀನ ಡಾಕ್ಟ್ರು.

ಭಾನುವಾರ, ಎರಡನೇ ಶನಿವಾರ ಮತ್ತು ಸಾರ್ವಜನಿಕ ರಜಾ ದಿನಗಳಲ್ಲಿಯೂ ಕೆಲಸ ನಿರ್ವಹಿಸುತ್ತಿರುತ್ತಾರೆ. ನಾನಂತೂ ಇಂದಿರಾ ಗಾಂಧಿಯವರ ಹತ್ಯೆಯಾದ ದಿನವೂ ಬೆಳಗ್ಗೆಯಿಂದ ಸಂಜೆ 6 ರವರೆಗೆ ಆಸ್ಪತ್ರೆಯಲ್ಲಿ ರೋಗಿಗಳ ದೇಖರೇಖಿಯಲ್ಲಿ ಮುಳುಗಿದ್ದೆ. ಇತ್ತೀಚೆಗೆ ರಜೆಯ ದಿನ ಮಧ್ಯಾಹ್ನದ ಮೇಲೆ ಬಾಗಿಲು ಮುಚ್ಚಬಹುದು ಎಂಬ ಆದೇಶವಾಗಿದೆ. ದನೀನಾಸ್ಪತ್ರೆಯ ಕೆಲಸದ ವೇಳೆಯನ್ನು ಸರಿಪಡಿಸಲು ಹಿರಿಯ ಅಧಿಕಾರಿಗಳಿಗೆ ಹಲವು ದಶಕಗಳೇ ಹಿಡಿದವು.

ನಮ್ಮಲ್ಲಿ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಕೋಳಿ, ವನ್ಯಜೀವಿಗಳು ಎಲ್ಲವಕ್ಕೂ ನಾವು ವೈದ್ಯರು! ಮನುಷ್ಯ ಡಾಕ್ಟರರು ಕೇವಲ ಮನುಷ್ಯರಿಗೆ ಮಾತ್ರ ಡಾಕ್ಟ್ರು. ಮನುಷ್ಯರಲ್ಲಿ ಹೃದಯ ತಜ್ಞ, ನೇತ್ರ ತಜ್ಞ, ಕೀಲು ಮೂಳೆ ತಜ್ಞ, ಮೂಗು ಕಿವಿ ಗಂಟಲು ತಜ್ಞ, ಚರ್ಮ ತಜ್ಞ, ಮಕ್ಕಳ ತಜ್ಞ, ಪ್ರಸೂತಿ ತಜ್ಞ, ಕ್ಯಾನ್ಸರ್ ತಜ್ಞ, ಡಯಾಬಿಟೀಸ್ ತಜ್ಞ ಇತ್ಯಾದಿ ಇತ್ಯಾದಿ ನೂರಾರು ತಜ್ಞರು. ತನ್ನ ಕ್ಷೇತ್ರದಲ್ಲಿ ಪಶುವೈದ್ಯನೇ ಸರ್ವಜ್ಞ. ಆಗುವ ಸಂಶೋಧನೆಗಳೆಲ್ಲ ಬಹುಪಾಲು ಮನುಷ್ಯ ಆರೋಗ್ಯ ಭಾಗ್ಯಗಳಿಗೆ ಸಂಬಂಧಿಸಿರುತ್ತವೆ.

ಇತ್ತೀಚೆಗೆ ಜಿಲ್ಲೆಗೊಂದು ವಿಶೇಷ ಪಾಲಿ ಕ್ಲಿನಿಕ್, ತಾಲ್ಲೂಕು ಸ್ಥಳದಲ್ಲಿ ಸ್ನಾತಕೋತ್ತರ ಪದವಿ ಆಗಿರುವ ಪಶುವೈದ್ಯರನ್ನು ನೇಮಿಸುವುದು ಮುಂತಾದ ಬದಲಾವಣೆಗಳು ಆಗುತ್ತಿವೆ. ಅದಕ್ಕೂ ನೂರಾರು ಕಂಟಕಗಳು. ಸಮಯವಷ್ಟೇ ಇವುಗಳನ್ನು ಸರಿಪಡಿಸಬಹುದು.

ಮನುಷ್ಯನ ಸುಖ ಸಂಪತ್ತೇ ಪರಮೋಚ್ಛ ಗುರಿಯೆಂಬ ಭಾವನೆಯಿಂದ ಈ ಅಸಮಾನತೆ ಇದೆ. ಮಾನವನ ತಿಳುವಳಿಕೆ ಮತ್ತು ಪ್ರಗತಿ Egocentric (ಮನುಷ್ಯ ಕೇಂದ್ರಿತ) ಆಗಿದೆ. ಅದು Ecocentric (ಪರಿಸರ ಕೇಂದ್ರಿತ) ಆಗುವವರೆಗೂ ಈ ತಾರತಮ್ಯ ಹೋಗುವುದಿಲ್ಲ. ಕೊನೆಯ ಪಕ್ಷ ಆಸ್ಪತ್ರೆಯ ಎಲ್ಲ ಹುದ್ದೆಗಳನ್ನೂ ಕಡ್ಡಾಯವಾಗಿ ಭರ್ತಿ ಮಾಡುವುದು, ಸಾಕಷ್ಟು ಗುಣಮಟ್ಟದ ಔಷಧಿಗಳನ್ನು ಸರಬರಾಜು ಮಾಡಿದರೆ ಆಸ್ಪತ್ರೆಗಳ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆಂಬುದು ನನ್ನ ನಮ್ರ ನಂಬಿಕೆ.

ಎಲ್ಲಿಂದೆಲ್ಲಿಗೂ ಹೋಗುತ್ತಿದೆ ಎಂದು ಭಾವಿಸಬೇಡಿ. ವಿಷಯಕ್ಕೆ ಬರುತ್ತೇನೆ. ಅದು 2000ನೇ ಇಸವಿಯ ಬೇಸಿಗೆಯ ಒಂದು ದಿನ. ಅಂದು ಆಸ್ಪತ್ರೆಯಲ್ಲಿ ಕೆಲಸ ಹೆಚ್ಚಿತ್ತು. ಒಂದೆರಡು ಹಳ್ಳಿಗಳ ಭೇಟಿ ಸಹ ಇತ್ತು. ಅದೆಲ್ಲಾ ಮುಗಿಸಿಕೊಂಡು ಮನೆಗೆ ಬಂದಾಗ ಮಧ್ಯಾಹ್ನ 1 ಗಂಟೆ. ಮನೆ ಬಾಗಿಲಲ್ಲಿ ಪಕ್ಕದ ಹಳ್ಳಿಯ ಬಸವಲಿಂಗಪ್ಪ ನನಗಾಗಿ ಕಾಯುತ್ತಿದ್ದ. ನನಗೆ ಆತನ ಪರಿಚಯವಿತ್ತು. ಎಲ್ಲಿ ಸಿಕ್ಕರೂ ಮಾತನಾಡಿಸುತ್ತಿದ್ದ. ಯಾವಾಗಲೂ ಸ್ವಚ್ಛವಾದ ಬಟ್ಟೆ ಹಾಕಿಕೊಂಡು ಬೈಕಲ್ಲಿ ಅಡ್ಡಾಡುತ್ತಿದ್ದ. ಒಂದು ರೀತಿಯ ದೊಡ್ಡಸ್ತಿಕೆ ಅವನ ನಡೆ ನುಡಿಗಳಲ್ಲಿತ್ತು. ಆದರದು ನನಗೆ ಇರುಸುಮುರುಸಾಗುತ್ತಿರಲಿಲ್ಲ. ಯಾಕೆಂದರೆ ಅವನು ಕುತೂಹಲಭರಿತನಂತೆಯೂ, ಸಮಾಧಾನಚಿತ್ತನಂತೆಯೂ ಕಾಣುತ್ತಿದ್ದ. ಬೇರೆಯವರ ಮಾತುಗಳನ್ನೂ ಸಹ ತಾಳ್ಮೆಯಿಂದ ಕೇಳುತ್ತಿದ್ದ. ಹಲವಾರು ಸಲ ಆಸ್ಪತ್ರೆಗೆ ಬಂದಿದ್ದ ಆತ ವಯಸ್ಸಿನಲ್ಲಿ ನನಗಿಂತ ಸಣ್ಣವನಿದ್ದ. ಅರ್ಧಂಬರ್ಧ ಬಕ್ಕ ತಲೆಯವನಾಗಿದ್ದ.

“ಸಾರ್, ನಮ್ಮ ಹಸುವೊಂದು ಕರು ಹಾಕಿದೆ. ನಾಟಿ ಹಸು. ಹತ್ತು ಗಂಟೆಗೆ ಕರು ಹಾಕಿತು. ಅದಾದ ನಂತರ ತಿಣುಕಿ ತಿಣುಕಿ ಮೈ ಹೊರಡಿಸಿಕೊಂಡಿದೆ. ಹೊರಟಿರುವ ಮಾಸದಲ್ಲಿ ಹಲಸಿನ ತೊಳೆ ಗಾತ್ರದ ಅನೇಕ ಗಂಟುಗಳಿವೆ. ಕೆಲವು ಗಂಟುಗಳಿಂದ ರಕ್ತ ಒಸರುತ್ತಿದೆ. ಕಣ್ಣಲ್ಲಿ ನೋಡಾಕಾಗ್ತಾ ಇಲ್ಲ. ಕೂಡ್ಲೇ ಬನ್ನಿ ಸಾರ್” ಎಂದ.

ನಾನು ಮನೆಯೊಳ ಹೊಕ್ಕು ಸ್ವಲ್ಪ ಊಟ ಮಾಡಿ ಹೋಗಬಹುದಿತ್ತು. ಆದರೆ ಬಸವಲಿಂಗಪ್ಪನ ಅವಸರಕ್ಕೆ ಹಾಗೆಯೇ ಹೊರಟುಬಿಟ್ಟೆ. ಕೆಂಡದಂಥ ಬಿಸಿಲಿತ್ತು. ಬೆವರು ಧಾರಾಕಾರ ಸುರಿಯುತ್ತಿತ್ತು. ಹೆಲ್ಮೆಟ್ ಒಳಗಿನಿಂದ ಬೆವರ ಹನಿಗಳು ತೊಟ್ಟಿಕ್ಕುತ್ತಿದ್ದವು. ಊಟ ಮಾಡದೆ ಹೊರಟದ್ದು ಮನೆಯಲ್ಲಿ ಹೊಸ ವಿಷಯವೇನಾಗಿರಲಿಲ್ಲ. ಅದು ಮಾಮೂಲಾಗಿತ್ತು. ಮೊದಲು ಆಸ್ಪತ್ರೆಗೆ ಹೋಗಿ ಬೇಕಾದ ಔಷಧ ಮತ್ತು ಸಲಕರಣೆಗಳನ್ನು ತೆಗೆದುಕೊಂಡೆ. ಇಂತಹ ಪ್ರಕರಣಗಳಲ್ಲಿ ಪಶುವೈದ್ಯನು ಶಕ್ತಿವಂತನೂ, ಬಹಳ ಹೊತ್ತು ಶಕ್ತಿಯನ್ನು ಉಳಿಸಿಕೊಳ್ಳುವಂತಹವನೂ ಆಗಿರಬೇಕು. ಬೇಗನೇ ಭಯ ಗಾಬರಿ ದಿಗಿಲು ಬೀಳದಂತಹವನಾಗಿರಬೇಕು. ಶಾಂತ ಸ್ವಭಾವದವನಾಗಿದ್ದರೆ ಉತ್ತಮ. ಒಬ್ಬ ಸಹಾಯಕನು ಜೊತೆಗಿದ್ದರೆ ಕ್ಷೇಮ. ಆದರೆ ಸಮಯ ಮಧ್ಯಾಹ್ನ 1 ಗಂಟೆಯ ಮೇಲಾಗಿದ್ದುದರಿಂದ ಆಸ್ಪತ್ರೆಯಲ್ಲಿ ಸಿಬ್ಬಂದಿ ಯಾರೂ ಇರಲಿಲ್ಲ. ಊಟದ ಬಿಡುವಿನಲ್ಲಿ ಮನೆಗಳಿಗೆ ಹೋಗಿದ್ದರು. ಆದ್ದರಿಂದ ಚಿಕಿತ್ಸೆಗೆ ನಾನೊಬ್ಬನೇ ಹೋಗಬೇಕಾಗಿತ್ತು.

ಹಸು ಅಥವಾ ಎಮ್ಮೆಗಳಲ್ಲಿ ಸಾಮಾನ್ಯವಾಗಿ ಹೆರಿಗೆಯಾದ ನಂತರ ಕಸ (placenta) ಬಿದ್ದು ಹೋಗುತ್ತದೆ. ಹೆರಿಗೆಯ ನಂತರ ಯೋನಿ ನಾಳ (vagina), ಸರ್ವಿಕ್ಸ್ (ಗರ್ಭಚೀಲದ ಬಾಯಿ) (cervix) ಅಥವಾ ಗರ್ಭಚೀಲ (uterus) ಇವುಗಳು ಯೋನಿ ದ್ವಾರದಿಂದ ಹೊರಬರುವುದಕ್ಕೆ “ಮೈ ಹೊರಡೋದು ಅಥವಾ ಮಾಸ ಹೊರಡೋದು ಅಥವಾ ನೆನೆ ಹೊರಡೋದು” ಎನ್ನುತ್ತಾರೆ.

ಯೋನಿ ನಾಳ (vagina) ಮಾತ್ರ ಯೋನಿ ತುಟಿಗಳ (Vulval lips) ದಾಟಿ ಹೊರಬರುವುದಕ್ಕೆ (vaginal prolapse) ಎನ್ನುತ್ತಾರೆ. ಯೋನಿ ನಾಳ ಮತ್ತು ಸರ್ವಿಕ್ಸ್ ಎರಡೂ ಹೊರಬಂದರೆ ಅದಕ್ಕೆ Cervico vaginal prolapse ಎನ್ನುತ್ತಾರೆ. ಗರ್ಭಚೀಲ ಹೊರಬಂದರೆ ಅದಕ್ಕೆ Eversion of Uterus ಎನ್ನುತ್ತಾರೆ. ಗರ್ಭಚೀಲವು ಹೊರಬಂದರೆ ತಿರುವು ಮುರುವಾಗಿ ಹೊರಬರುತ್ತದೆ. ಗರ್ಭಚೀಲದ ಒಳ ಮೈಯಲ್ಲಿರುವ ಕರಂಕಲ್ಲುಗಳು (caruncles) ದೃಗ್ಗೋಚರವಾಗುತ್ತವೆ. ಅವು ಹಲಸಿನ ತೊಳೆಯ ಗಾತ್ರಕ್ಕಿದ್ದು ನೋಡಲು ಅಳ್ಳೆದೆಯವರಿಗೆ ಭಯ ಹುಟ್ಟಿಸುತ್ತವೆ. ಅವಕ್ಕೆ ಸ್ವಲ್ಪ ಏಟಾದರೂ ರಕ್ತ ಸೋರತೊಡಗುತ್ತದೆ. ಈ ಕರಂಕಲ್ಲುಗಳಿಗೆ ಸತ್ತೆ (ಪ್ಲಾಸೆಂಟ) ಮೆತ್ತಿಕೊಂಡಿರುತ್ತದೆ.

ಹಸು, ಎಮ್ಮೆ ಸಾಕಿರುವ ಎಲ್ಲ ರೈತರೂ ಇದನ್ನು ನೋಡಿರುತ್ತಾರೆ. ಈ ಪ್ರಕರಣಗಳು ತೀರಾ ಅಪರೂಪವೇನಲ್ಲ. ಅಲ್ಲೊಂದು ಇಲ್ಲೊಂದು ಪ್ರಕರಣಗಳು ಆಗಾಗ ಜರುಗುತ್ತಲೇ ಇರುತ್ತವೆ. ಹೊರ ಹೊರಟ ಭಾಗವು ಗಾತ್ರದಲ್ಲಿ ದೊಡ್ಡದೂ, ಬಣ್ಣದಲ್ಲಿ ಕೆಂಪಗೂ ಇದ್ದು, ರಕ್ತ ತೊಟ್ಟಿಕ್ಕುತ್ತಿರುತ್ತದೆ. ನೋಡುಗರಿಗಿದು ಭಯಾನಕವಾಗಿ ಕಾಣುತ್ತದೆ ಮತ್ತು ಕಣ್ಣು ಮಿಟುಕಿಸುವುದರೊಳಗೆ ಊರಿಗೂರೇ ಸುದ್ದಿಯಾಗುತ್ತದೆ. ಕೊಟ್ಟಿಗೆ ಸುತ್ತ ಹತ್ತಿಪ್ಪತ್ತು ಕುತೂಹಲಭರಿತ ಜನರ ಮುತ್ತಿಗೆ ಶುರುವಾದಂತೆಯೇ!

ಈ ರಾಸುಗಳು ಸಿಕ್ಕಾಪಟ್ಟೆ ಮುಲುಕುತ್ತಿರುತ್ತವೆ. ವಿಪರೀತ ನೋವಿನಿಂದ ನರಳುತ್ತಿರುತ್ತವೆ. ಮಲಗುವುದು, ಏಳುವುದು, ಉರುಳಾಡುವುದು, ಕಾಲು ಚಿಮ್ಮುವುದು ಮಾಡುವುದರಿಂದ ಕರಂಕಲ್ಲುಗಳಿಗೆ ಏಟಾಗಿ ರಕ್ತಸ್ರಾವವಿರುತ್ತದೆ. ಕೊಟ್ಟಿಗೆಯ ನೆಲವು ಒರಟಾಗಿದ್ದರೆ ಅಥವಾ ಗುಂಡಿ ಗೊಟ್ರಗಳಿದ್ದರೆ ಅಧಿಕ ರಕ್ತಸ್ರಾವವಾಗುತ್ತದೆ. ಅಲ್ಲದೆ ಸಗಣಿ, ಹುಲ್ಲುಕಡ್ಡಿ ತುಂಡುಗಳೆಲ್ಲ ಗರ್ಭಚೀಲಕ್ಕೆ ಮೆತ್ತಿಕೊಂಡು ನೊಣಗಳ ಝೇಂಕಾರ ದೂರಕ್ಕೆ ಕೇಳುತ್ತಿರುತ್ತದೆ. ಒಮ್ಮೊಮ್ಮೆ ಮೈ ಹೊರಟು ಒಂದು ದಿನದ ಮೇಲಾಗಿದ್ದರೆ ಗರ್ಭಚೀಲಕ್ಕೆ ಮೆತ್ತಿಕೊಂಡಿರುವ ಸತ್ತೆ ಕೊಳೆತು ನಾರುತ್ತಿರುತ್ತದೆ. ಅಂತಹ ಕೊಟ್ಟಿಗೆಗಳ ಪ್ರವೇಶಿಸುವುದೆಂದರೆ ಸಾಕ್ಷಾತ್ ನರಕ ಪ್ರವೇಶಿಸಿದಂತೆಯೇ ಆಗುತ್ತದೆ!

ಅಂತಹ ಜಾಗದಲ್ಲಿ ಗಂಟೆಗಟ್ಟಲೆ ಕೂತು, ಬಗ್ಗಿ, ಮಲಗಿ, ಉರುಳಿ ಹೊರ ಹೊರಟಿರುವ ಸರಿಸುಮಾರು ಒಂದು ಬಿಂದಿಗೆಯಷ್ಟಿರುವ ಗರ್ಭಚೀಲವನ್ನು ಕಿರಿದಾದ ಯೋನಿ ದ್ವಾರದ ಮೂಲಕ ಒಳಗೆ ತಳ್ಳಬೇಕು. ಅದಾದ ನಂತರ ಯೋನಿ ತುಟಿಗಳ ಹಿಡಿದು ಬಿಗಿಯಾಗಿ ಹೊಲಿಗೆ ಹಾಕಬೇಕು. ಅಷ್ಟಕ್ಕೆ ನಮ್ಮ ಹೆಣ ಬಿದ್ದು ಹೋಗಿರುತ್ತದೆ. ನಮಗೇ ಹೀಗಾದರೆ ಹಸು/ಎಮ್ಮೆಗಳ ಕಷ್ಟ ಎಂತಹುದಿರಬಹುದು? ಅವುಗಳ ಕಷ್ಟ, ನೋವನ್ನು ಅಳೆಯಲು ಮನುಷ್ಯ ಭಾಷೆಯಲ್ಲಿ ಮಾಪನಗಳು ಇಲ್ಲವೆಂದು ಕಾಣುತ್ತದೆ!

ಇರಲಿ. ಬಸವಲಿಂಗಪ್ಪನು ತಕ್ಕಮಟ್ಟಿಗಿನ ಅನುಕೂಲಸ್ಥನಾಗಿದ್ದ. ವಿಶಾಲವಾದ ಮನೆ ಊರ ಅಂಚಿಗಿತ್ತು. ಮನೆ ಪಕ್ಕದಲ್ಲಿಯೇ ಒಂದು ಮರ ನೆರಳು ಚೆಲ್ಲಿಕೊಂಡು ಉರಿಬಿಸಿಲಲ್ಲಿ ನಿಂತಿತ್ತು. ಅದರ ಕೆಳಗೆ ಹಸು ಬಿದ್ಕಂಡಿತ್ತು. ನಾಲ್ಕು ಕಾಲು ಉದ್ದಕ್ಕೆ ಚಾಚಿಕೊಂಡು ಮುಲುಕುತ್ತಿತ್ತು. ಹಿಂದೆ ಮಡ್ಲಿಂದ (ಯೋನಿಯಿಂದ) ಗರ್ಭಚೀಲ ಸಂಪೂರ್ಣವಾಗಿ ಹೊರಗೆ ಬಂದಿತ್ತು. ಚೆಲ್ಲಿಕೊಂಡಿದ್ದ ಗರ್ಭಚೀಲದ ಕೆಳಗೆ ಒಂದು ಶುದ್ಧವಾದ ಗೋಣಿಚೀಲವನ್ನು ಹಾಸಲು ತಿಳಿಸಿದೆ. ಇನ್ನೊಂದು ಹಳೇ ಲುಂಗಿ ಪಂಚೆ ತರಿಸಿ ನೀರಿನಲ್ಲದ್ದಿ ತೇವ ಮಾಡಿ ಗರ್ಭಚೀಲದ ಮೇಲೆ ಹೊದಿಸಿದೆ.

ಹಸು ಉರುಳಾಡಿದಾಗ ಗರ್ಭಚೀಲವೂ ಅತ್ತಿತ್ತ ಚಲಿಸಿ ಮಣ್ಣು ಮೆತ್ತಿಕೊಂಡಿತ್ತು. ಅಲ್ಲಲ್ಲಿ ರಕ್ತಸ್ರಾವವೂ ಆಗುತ್ತಿತ್ತು. ನೊಣದ ಝೇಂಕಾರ ಇದ್ದೇ ಇತ್ತು. ಒಂದು ಎಲೆ ಅಲ್ಲಾಡದಂತೆ ಗಾಳಿ ತಟಸ್ಥವಾಗಿತ್ತು. ಕೂಡಲೇ ಅವಸರಿಸಿ ಒಂದೆರಡು ಬಕೆಟ್ ತಣ್ಣೀರು ತರಿಸಿ ಪೊಟ್ಯಾಸಿಯಂ ಪರಮಾಂಗನೇಟ್ ಪುಡಿ ಹಾಕಿ ಕದಡಿ ಗರ್ಭಚೀಲವನ್ನೆಲ್ಲ ಸ್ವಚ್ಛ ಮಾಡಿದೆ. ಹಸುಗೆ ಒಂದು ಬಕೆಟ್ ನೀರು ಕುಡಿಸಲು ಹೇಳಿದೆ. ಅವರು ಹಸುಗೆ ನೀರು ಕುಡಿಸಿಯೇ ಇರಲಿಲ್ಲ. ಕುಡಿಸಿದರೆ ಮತ್ತಷ್ಟು ಮೈ ಹೊರಡುತ್ತದೆ ಎಂದು ಯಾರೋ ಹೇಳಿದ್ದು ಅದಕ್ಕೆ ಕಾರಣವಾಗಿತ್ತು.

ನಾನು ಶರ್ಟ್ ಬಿಚ್ಚಿಟ್ಟು ಬನೀನು ಪ್ಯಾಂಟಿನಲ್ಲಿ ಕಾರ್ಯಾಚರಣೆಗೆ ಇಳಿದೆ. ಅಲ್ಲಲ್ಲಿ ನಾಲ್ಕಾರು ಕರಂಕಲ್ಲುಗಳು ತುಂಡಾಗಿ ರಕ್ತ ಒಸರುತ್ತಿತ್ತು. ಈ ರಕ್ತ ಸುರಿಯುವುದನ್ನು ನಿಲ್ಲಿಸಲು ಸಾಧ್ಯವಿರಲಿಲ್ಲ. ಏಕೆಂದರೆ ಕರಂಕಲ್ಲುಗಳನ್ನು ಹೊಲಿಯಲು ಸಾಧ್ಯವಿಲ್ಲ. ರಕ್ತ ಸುರಿಯುವುದನ್ನು ನಿಲ್ಲಿಸಲು ಉಪಯೋಗಿಸುವ ಟಿಂಚರ್ ಬೆಂಜೋಯಿನ್ ಹಚ್ಚಲಾಗುವುದಿಲ್ಲ. ಏಕೆಂದರೆ ಅದು ಸಿಕ್ಕಾಪಟ್ಟೆ ಉರಿಯುತ್ತದೆ. ಅದನ್ನು ಗರ್ಭಚೀಲದಂತಹ ಸೂಕ್ಷ್ಮ ಅಂಗಕ್ಕೆ ಹಾಕುವಂತಿಲ್ಲ. ರಕ್ತಸ್ರಾವವನ್ನು ನಿಲ್ಲಿಸುವ  (Anti haemorrhagic) ಇಂಜೆಕ್ಷನ್ ಕೊಡಬೇಕಷ್ಟೆ. ಇಂಜೆಕ್ಷನ್ ಕೊಟ್ಟರೂ ಅದು ಕೆಲಸ ಮಾಡಲು ಸ್ವಲ್ಪ ಸಮಯಬೇಕು. ಅಷ್ಟರೊಳಗೆ ರಕ್ತ ಸುರಿಯುವಿಕೆ ತನ್ನಷ್ಟಕ್ಕೆ ತಾನೇ ನಿಂತುಬಿಡಬಹುದು. ಅಂದು ಹಸು ಮೈ ಹೊರಡಿಸಿಕೊಂಡ ಕೂಡಲೇ ಹಳ್ಳಿಯ ಒಂದಿಬ್ಬರು ಗರ್ಭಚೀಲವನ್ನು ಹಿಡಿದು ಒಳತಳ್ಳಲು ಪ್ರಯತ್ನಿಸಿದ್ದಾರೆ. ಒರಟೊರಟಾಗಿ ತಳ್ಳಿದ್ದರ ಪರಿಣಾಮ ರಕ್ತಸ್ರಾವವಾಗಿದೆ. ಇದನ್ನು ಬಸವಲಿಂಗಪ್ಪನೇ ನನಗೆ ಹೇಳಿದ.

ಹಸುವಿಗೆ ಅದು ಎರಡನೆಯ ಹೆರಿಗೆಯಾಗಿತ್ತು. ಹಸುವು ಚಿಕ್ಕ ವಯಸ್ಸಿನದಾಗಿದ್ದು, ಕಸುವಿನಿಂದ ಕೂಡಿತ್ತು. ಗರ್ಭದಲ್ಲಿ ಚೆನ್ನಾಗಿ ಸಾಕಿದ್ದರಿಂದ ಖಂಡವಾಗಿತ್ತು.

ಇಂತಹ ಪ್ರಕರಣಗಳಲ್ಲಿ ಯೋನಿಗೆ ಮಾಸವು ಅಡ್ಡವಾಗಿರುವುದರಿಂದ ಹಸುವು ಗಂಟೆಗಟ್ಟಲೆ ಉಚ್ಚೆ ಹೊಯ್ದಿರುವುದಿಲ್ಲ. ಮಲಗಿದ್ದ ಹಸುವಿನ ಹಿಂಭಾಗದಲ್ಲಿ ನಾನು ಕುಳಿತುಕೊಂಡು ಇನ್ನಿಬ್ಬರು ರೈತರ ಸಹಾಯದಿಂದ ಗರ್ಭಚೀಲವನ್ನು ಮೇಲಕ್ಕೆತ್ತಿದ ಕೂಡಲೇ ಹಸು ಒಂದು ಬಕೆಟಿನಷ್ಟು ಉಚ್ಚೆ ಹೊಯ್ದಿತು. ಹಸುಗೆ ಬಹಳ ಹಗುರಾಗಿರಬೇಕು. ಆನಂತರ ನಾನು ಗರ್ಭಚೀಲವನ್ನು ಮೆಲ್ಲನೆ ಯೋನಿ ತುಟಿಗಳ ಮೇಲಿಟ್ಟು ನಿಧಾನಕ್ಕೆ ಒಳತಳ್ಳತೊಡಗಿದೆ.

ನಾನು ಒಳತಳ್ಳತೊಡಗಿದ ಕೂಡಲೇ ಪ್ರತಿಕ್ರಿಯೆಯೋ ಎಂಬಂತೆ (Reflex) ಹಸು ಇನ್ನೂ ಜೋರಾಗಿ ಮುಲುಕತೊಡಗಿ ಗರ್ಭಚೀಲವನ್ನು ಹೊರತಳ್ಳತೊಡಗಿತು. ನಾನು ತಿಣುಕಾಡುತ್ತಾ ಗರ್ಭಚೀಲವನ್ನು ಒಳನೂಕಿದರೆ, ಹಸುವು ತಾನೂ ತಿಣುಕಿ ಗರ್ಭಚೀಲವನ್ನು ಹೊರತಳ್ಳುತ್ತಿತ್ತು. ಎರಡು ಮೂರು ನಿಮಿಷಕ್ಕೊಮ್ಮೆ ತನ್ನ ಶಕ್ತಿಯನ್ನೆಲ್ಲಾ ಬಳಸಿ ಹಸು ತಿಣುಕುತ್ತಿತ್ತು. ಹಸು ತಿಣುಕಬೇಕಾದರೆ ನಾನು ನೂಕುವುದನ್ನು ನಿಲ್ಲಿಸಿ, ಹಸು ತಿಣುಕುವುದನ್ನು ನಿಲ್ಲಿಸಿದ ಕೂಡಲೇ ಒಳ ನೂಕುತ್ತಿದ್ದೆ.

ಮೊದಲೇ ತಿಳಿಸಿದಂತೆ ಯೋನಿ ದ್ವಾರವು ಕಿರಿದಾಗಿರುತ್ತದೆ ಮತ್ತು ಗರ್ಭಚೀಲವು ಅದರ ಅನೇಕ ಪಟ್ಟು ದೊಡ್ಡದಿರುತ್ತದೆ. ಗರ್ಭಚೀಲವನ್ನು ಯೋನಿ ದ್ವಾರದ ಬಳಿ ಇಟ್ಟು ನಿಧಾನಕ್ಕೆ ಒಳತಳ್ಳಬೇಕು. ಅಡ್ಡ ಮಲಗಿದ ಹಸುವಿನ ಹಿಂದೆ ಕುಕ್ಕರಗಾಲಲ್ಲಿ ಕೂತು ಭಾರವಾದ ಗರ್ಭಚೀಲವನ್ನು ಎತ್ತಿ ಹಿಡಿದು (ಸರಾಸರಿ 15-20 ಕೆಜಿ ತೂಕ) ನೂಕಬೇಕು. ನಾನು ನಾಲ್ಕು ಇಂಚು ಒಳನೂಕಿದರೆ ಹಸು ತಾನು ತಿಣುಕಿ ಎಲ್ಲವನ್ನೂ ಹೊರನೂಕಿ ಹಾಳು ಮಾಡುತ್ತಿತ್ತು. ಯಾರೋ ಹಸು ತಿಣುಕದೇ ಇರಲೆಂದು ಅದರ ಬಾಯಲ್ಲಿ ದಂಟನ್ನು ಇಟ್ಟರು. ಮತ್ತೊಬ್ಬ ಕಬ್ಬಿಣದ ಅರವನ್ನು ಇಟ್ಟು ಕಡಿಸಿದರು. ಹಸು ಬಾಯಲ್ಲಿಟ್ಟ ದಂಟು ಅಥವಾ ಅರವನ್ನು ಕಡಿಯುತ್ತಾ ಮುಲುಕುವುದು ಕಡಿಮೆಯಾಗುತ್ತದೆ ಎಂಬುದು ಉದ್ದೇಶ. ಒಂದೆರಡು ನಿಮಿಷ ಸುಮ್ಮನಿದ್ದು ಹಸು ಮತ್ತೆ ತಿಣುಕಲು ಪ್ರಾರಂಭಿಸುತ್ತಿತ್ತು.

“ದೆವ್ವ ಹಿಡುದ್ದವೇನ್ಲಾ ಹಸಕ್ಕೆ?” ಯಾರೋ ಸಿಟ್ಟಿನಲ್ಲಿ ಕೂಗಿದ. ನಾನು ಒಳನೂಕುವುದು, ಹಸು ಹೊರನೂಕುವುದು ನಡೆದೇ ಇತ್ತು. ಮಧ್ಯಾಹ್ನದ ಉರಿಬಿಸಿಲು ಕ್ಷಣ ಕ್ಷಣಕ್ಕೆ ಪ್ರಖರತೆ ಹೆಚ್ಚಾಗುತ್ತಿತ್ತು. ನಾನಂತೂ ಹೆದರಿಕೆಯಾಗುವ ಥರ ಬೆವತಿದ್ದೆ. ಗಾಳಿಯೆಲ್ಲೋ ಅಡಗಿ ಕೂತಿತ್ತು. ಹೊತ್ತು ಹೋದಂತೆ ನೆರಳು ನಮ್ಮಿಂದ ನಿಧಾನಕ್ಕೆ ದೂರ ಸಾಗಿ ಬಿಸಿಲಿನ ಝಳ ಹೆಚ್ಚಾಗತೊಡಗಿತು. ನಿಷ್ಕರುಣಿ ಸೂರ್ಯ ಉರಿಯುತ್ತಲೇ ಇದ್ದ. ನೆರಳಿನ ಜೊತೆ ನಾವು ಚಲಿಸುವಂತಿರಲಿಲ್ಲ. ಯಾಕೆಂದರೆ ಹಸುವನ್ನು ನೆರಳಿನ ಕಡೆಗೆ ಎಳೆಯುವಂತಿರಲಿಲ್ಲ.

ಸುತ್ತ ರೈತರ ಗುಂಪು. ದೂರದಲ್ಲಿ ಹಸುವಿನ ಕರು ಕೂಗುತ್ತಿತ್ತು. ಹಸುವಿಗೆ ತನ್ನ ಸಂಕಟದ ಜೊತೆ ಕರುಳಿನ ಕೂಗು! ತಾಯಿ ಕರುಳು! ಕರುವಿಗೆ ಇನ್ನೂ ಹಾಲು ಕುಡಿಸಿಲ್ಲ. ಹಸುವಿನ ಕೆಚ್ಚಲು ಬಿಗಿಯುತ್ತಿದೆ. ಎದ್ದು ಹೋಗಿ ಹಾಲು ಕುಡಿಸಲು ಕೊಸರಾಡುತ್ತಿದೆ. ತಲೆಯೆತ್ತುತ್ತದೆ. ದಬ್ ಎಂದು ನೆಲಕ್ಕೆ ಬೀಳುತ್ತದೆ. ಮತ್ತೆ ತಿಣುಕು ಕಾಣಿಸಿಕೊಳ್ಳುತ್ತದೆ. ಈ ತಿಣುಕು ಅನೈಚ್ಛಿಕವಾದದ್ದು (involuntary).

ಈ ತಿಣುಕುಗಳು ಸಮುದ್ರದ ಅಲೆಗಳಂತೆ! ಒಂದರ ಹಿಂದೆ ಮತ್ತೊಂದು ಅಲೆ! ಇದು ಎಲ್ಲಕ್ಕಿನ್ನ ಬಲವಾದ ತಿಣುಕು! ಎಷ್ಟು ಬಿರುಸೆಂದರೆ ಎರಡೂ ಕೈಗಳನ್ನು ಮೊಣಕೈ ತನಕ ಒಳನೂಕಿದವನು ಹಿಂದಕ್ಕೆ ಬಿದ್ದುಬಿಟ್ಟೆ! ಸಂಪೂರ್ಣ ಒದ್ದೆಯಾಗಿ ಬೆವರು ತೊಟ್ಟಿಕ್ಕುತ್ತಿದ್ದ ಬನಿಯನ್ನು ರಕ್ತ ಸಗಣಿಯ ರಾಡಿಯಲ್ಲಿ ಅದ್ದಿಹೋಯಿತು. “ಹುಷಾರು ಸಾರ್, ನೀವು ಇಂಪಾರ್ಟೆಂಟು ನಮಿಗೆ!” “ಅಲ್ವೇ ಮತ್ತೆ. ಅದೇನೋ ಹೇಳ್ದಂಗೆ ಕಣಲೇ ಮಗಾ” “ಹೇಳ್ತೀರ” ಮುಂತಾದ ಉದ್ಗಾರಗಳು ಜನರಿಂದ. ಇಲ್ಲಿ ಬರೆದಾಗ ಅಷ್ಟೇನೂ ಅರ್ಥವಿರುವಂತೆ ಕಾಣದ ಈ ಶಬ್ದಗಳು ನಾವಿದ್ದ ಸನ್ನಿವೇಶದಲ್ಲಿ ಯಾವ ಮಹಾಕವಿಯ ಭಾಷಾ ಬಳಕೆಗಿನ್ನ ಮಿಗಿಲಾಗಿದ್ದವು.

ಮತ್ತೆ ಹೊಸದಾಗಿ ಕೆಲಸ ಪ್ರಾರಂಭಿಸಿದೆ. ಮತ್ತೆ ಗರ್ಭಚೀಲ ಎತ್ತಿದೆ. ಮತ್ತೆ ಯೋನಿದ್ವಾರದ ಬಳಿ ಇಟ್ಟೆ. ಮತ್ತೆ ಮೆಲ್ಲಮೆಲ್ಲಗೆ ಕರಂಕಲ್ಲುಗಳಿಗೆ ಏಟಾಗದಂತೆ ಇಂಚಿಂಚಾಗಿ ಒಳತಳ್ಳತೊಡಗಿದೆ. ಹಸು ತಿಣುಕುವಾಗ ಸುಮ್ಮನಿದ್ದು ತಿಣುಕುವುದನ್ನು ನಿಲ್ಲಿಸಿದ ಕೂಡಲೇ ಒಳಗೆ ತಳ್ಳತೊಡಗಿದೆ.

“ಇದೇನಿದು ಬಿಸಿಲು ಹೀಗೆ ಹೆಚ್ಚುತ್ತಿದೆ? ಸೂರ್ಯ ಕಡಿದುಕೊಂಡು ಊರ ಮೇಲೆ ಬಿದ್ದನೇ? ಈಗ ಬಿಸಿಲು ಹತ್ತಿರಕ್ಕೆ ಬಂದಿದೆ. ಝಳ ಹೊಡೆಯುತ್ತಿದೆ. ನೆರಳು ನಮ್ಮಿಂದ ದೂರ ಸಾಗುತ್ತಿದೆ.”

“ಓಹ್! ಏನಿದು, ನನ್ನ ತಲೆ ಗಿರ್ ಎಂದಿತೇ? ಇಲ್ಲ ಇಲ್ಲ. ನನ್ನ ಭ್ರಮೆ ಇರಬೇಕು.”

“ಓಹೋಹೋ! ನಮ್ಮ ಡಾಕ್ಟ್ರು ಸಕ್ಸಸ್ ಆಗೇ ಬಿಟ್ರು ಕಣ್ಲ.”

“ಒಳಗೆ ತಳ್ಳೇಬಿಟ್ರು” ಬಸವಲಿಂಗಪ್ಪ ಕೂಗಿದ.

“ಮಾಸ ಎಲ್ಲ ಒಳಗೋಯ್ತ ಸಾರ್?” ಬಸವಲಿಂಗಪ್ಪರ ಅಪ್ಪ 80 ರ ಶಂಕರಪ್ಪ ಕಟ್ಟೆ ಮೇಲಿಂದ ಕುಳಿತು ಕೇಳಿದರು.

ಕುಡಿಯಲು ನೀರು ಕೇಳಬೇಕು ಎಂದುಕೊಂಡೆ. ಅರೆ ಕೇಳಲು ಆಗುತ್ತಿಲ್ಲ. ಬೆಳಗ್ಗೆ ತಿಂದ ತಿಂಡಿ ಕರಗಿ ಎಷ್ಟೋ ಗಂಟೆಗಳಾಗಿದ್ದವು! ಮನೆಯಲ್ಲಿ ಏನಾದರೂ ತಿಂದು ಬರಬೇಕಿತ್ತು!

“ಹೌದು ಅಜ್ಜಾರೆ! ಮಾಸ ಒಳಗೋಯ್ತು. ಹೊಲಿಗೆ ಹಾಕ್ಬೇಕು. ಅಷ್ಟೇ ಬಾಕಿಯಿರೋದು” ಇಷ್ಟು ಹೇಳಿದ್ದೇ ಕೊನೆ. ಮುಂದೆ ನನಗೆ ಮಾತಾಡಲಾಗಲಿಲ್ಲ. ಕಣ್ಣೆಲ್ಲ ಬೆಳ್ಳಗಾದವು. ತಲೆ ಗಿರ್ ಎಂದಿತು. ಕುಕ್ಕರುಗಾಲಲ್ಲಿ ಕುಳಿತಿದ್ದೆ. ಕಾಲಿನ ಶಕ್ತಿಯೆಲ್ಲಾ ಇಂಗಿದಂತಾಯಿತು. ಗರ್ಭಚೀಲವನ್ನು ಒಳಗೆ ತಳ್ಳಿ ಎರಡೂ ಕೈಗಳನ್ನು ಭುಜದ ತನಕ ಒಳಗಿಟ್ಟು ಗರ್ಭಚೀಲವನ್ನು ಹಸುವಿನ ದೇಹದೊಳಗೆ ಅದರ ಸಹಜ ಜಾಗದಲ್ಲಿರಿಸುತ್ತಿದ್ದೆ. ನಾನು ಸಿದ್ಧ ಮಾಡಿಟ್ಟಿದ್ದ ದಾರ ಸೂಜಿ ತರಲು ಬಸವಲಿಂಗಪ್ಪನಿಗೆ ಹೇಳಬೇಕೆಂಬುವಷ್ಟರಲ್ಲಿ ಕೂತಿದ್ದವನು ಹಾಗೆಯೇ ನೆಲಕ್ಕೊರಗಿದೆ. ಏನೂ ಕಾಣದಂತಾಯಿತು. ನಾನು ಪ್ರಜ್ಞೆ ತಪ್ಪಿ ಹಸುವಿನ ಮೇಲೆ ಒರಗಿದ್ದೆ.

ಅದು 2000 ನೆಯ ವರ್ಷ. ನನಗಾಗ 43 ವರ್ಷ ವಯಸ್ಸು. ನನಗೆ ಸಕ್ಕರೆ ರೋಗ, ರಕ್ತದೊತ್ತಡ ಮುಂತಾದ ಯಾವ ಕಾಯಿಲೆಯೂ ಇರಲಿಲ್ಲ. ಮಧ್ಯಾಹ್ನ 3 ಗಂಟೆಯಾದರೂ ಊಟ ಮಾಡದೇ ಇದ್ದುದು, ಗಂಟೆಗಟ್ಟಲೆ ತೀವ್ರತರವಾದ ಒತ್ತಡದಲ್ಲಿ ಕೆಲಸ ಮಾಡಿದ್ದು ಮತ್ತು ಎಲ್ಲಕ್ಕಿನ್ನ ಹೆಚ್ಚಾಗಿ ಉರಿಬಿಸಿಲ ಝಳಕ್ಕೆ ಸಿಕ್ಕಿ ಹಾಕಿಕೊಂಡಿದ್ದು, ಈ ಎಲ್ಲ ಕಾರಣಗಳು ನನ್ನನ್ನು ಬೇಟೆಯಾಡಿದ್ದವು. ಬಸವಲಿಂಗಪ್ಪ ನಾಲ್ಕು ಎಳನೀರು ತರಿಸಿದ್ದರು. ಕೆಲಸ ಮುಗಿದ ಮೇಲೆ ಕೈ ಕಾಲು ಮುಖ ತೊಳೆದು ಕುಡಿಯೋಣವೆಂದು ನಾನು ಕುಡಿದಿರಲಿಲ್ಲ.

ನನಗೆ ಕಾಲು ಗಂಟೆಯಲ್ಲಿ ಎಚ್ಚರವಾಯಿತು. ಅಲ್ಲೇ ನೆರಳಲ್ಲಿ ಮನೆಯ ಕಟ್ಟೆಯ ಮೇಲೆ ಮಲಗಿಸಿದ್ದರು. ಎಚ್ಚರವಾದರೂ ಏಳಲಾಗಲಿಲ್ಲ. ನಾನು ನಿತ್ರಾಣನಾಗಿ ನಿಷ್ಪ್ರಯೋಜಕನಾಗಿದ್ದೆ. ಬಸವಲಿಂಗಪ್ಪ ದಂಡಿನಶಿವರಕ್ಕೆ ಯಾರನ್ನೋ ಕಳಿಸಿ ನಮ್ಮಾಸ್ಪತ್ರೆಯ ಸಿಬ್ಬಂದಿಯೊಬ್ಬರನ್ನು ಕರೆಸಿದ್ದರು. ನಾನು ಪ್ರಜ್ಞೆ ತಪ್ಪಿದ ಕೂಡಲೇ ಹಸು ಮತ್ತೆ ತಿಣುಕಿ ಮೈಯನ್ನು ಸಂಪೂರ್ಣ ಹೊರ ಹೊರಡಿಸಿಕೊಂಡಿತ್ತು. ನಾನು ಮಲಗಿದಲ್ಲಿಂದಲೇ ನೋಡತೊಡಗಿದೆ. ಗ್ಲೂಕೋಸ್ ಮತ್ತು ಕ್ಯಾಲ್ಸಿಯಂ ಬಾಟಲುಗಳನ್ನು ಹಸುಗೆ ಹಾಕಲು ಸಂಜ್ಞೆ ಮಾಡಿದೆ.

ನನಗೆಚ್ಚರವಾದದ್ದು ನೋಡಿ ಬಸವಲಿಂಗಪ್ಪ ಮತ್ತು ಅವರ ತಂದೆ ಇಬ್ಬರೂ ಬಂದು ನನ್ನ ಪಕ್ಕ ಕೂತು “ಸದ್ಯ ಎದ್ರಲ್ಲ ಸಾರ್. ನಾವು ಥಂಡಾ ಹೊಡೆದುಬಿಟ್ಟಿದ್ವಿ. ಏನಾದ್ರೂ ಹೆಚ್ಚು ಕಡಿಮೆ ಆಗಿದ್ರೆ ಕೋರ್ಟು, ಪೋಲೀಸು ಅಂತ ಅಲೀಬೇಕಾಗಿತ್ತಲ್ಲ ಸಾರ್” ಎಂದು ತಮಗಾದ ಭಯವನ್ನು ಹೇಳಿಕೊಂಡರು. ಕಾಂಪೌಂಡರ್ ಎಷ್ಟು ಪ್ರಯತ್ನಿಸಿದರೂ ಗರ್ಭಚೀಲವನ್ನು ಒಳಗೆ ನೂಕಲಾಗಲಿಲ್ಲ. ಪ್ರಯತ್ನ ಸಾಗಿದ್ದಾಗಲೇ ಹಸು ಪ್ರಾಣ ಬಿಟ್ಟಿತು.

ಆಗ ಸಮಯ ನಾಲ್ಕು ಗಂಟೆಯಾಗಿತ್ತು. ನಾನು ಅವರ ಮನೆಯ ಬಾಗಿಲಲ್ಲಿ ಎಚ್ಚರ ತಪ್ಪಿ ಬಿದ್ದಿದ್ದು ಆ ಮನೆಯವರಿಗೆ ಎಂಥ ಭಯ ಮೂಡಿಸಿತ್ತೆಂದರೆ ಹಸುವಿನ ಸಾವು ಅವರಿಗೆ ಅಷ್ಟು ದುಃಖ ತರಲಿಲ್ಲ. ನನ್ನ ದೀರ್ಘ ಸೇವೆಯಲ್ಲಿ ಎಂದೂ ಆ ಥರ ಆಗಿರಲಿಲ್ಲ. ಅಂದು ನನ್ನ ಪ್ರಜ್ಞೆ ತಪ್ಪಲಾಗಿ ಒಂದು ಹಸು ಸತ್ತು ಹೋಯಿತು. ಕೇವಲ ಐದಾರು ನಿಮಿಷದ ನಂತರ ನಾನು ಪ್ರಜ್ಞೆ ತಪ್ಪಿದ್ದರೆ ಹೊಲಿಗೆ ಹಾಕಿ ಹಸುವನ್ನು ಬದುಕಿಸಿಬಿಟ್ಟಿರುತ್ತಿದ್ದೆ. ನಾಲ್ಕೇ ನಾಲ್ಕು ಹೊಲಿಗೆ. ನಾಲ್ಕೇ ನಾಲ್ಕು ನಿಮಿಷ. ಆದರೆ ಹಾಗಾಗಲಿಲ್ಲ. ಇದು ನನ್ನ ಜೀವನಪರ್ಯಂತ ಕಾಡುವ ಚಿಟುಗು ಮುಳ್ಳಾಗಿ ಉಳಿದುಬಿಟ್ಟಿತು.

ಯಾವುದೇ ಕೇಸಿರಲಿ ಗೂಳಿಯಂತೆ ಮುನ್ನುಗ್ಗುತ್ತಿದ್ದ ನನಗೆ ಅಳುಕು ಪ್ರಾರಂಭವಾಯಿತು. ಅಲ್ಲಿಂದ ಹೆರಿಗೆ, ಮೈ ಹೊರಟ ಪ್ರಕರಣಗಳಿದ್ದರೆ ಯಾರನ್ನಾದರೂ ಒಬ್ಬರನ್ನು ಕಡ್ಡಾಯವಾಗಿ ಸಹಾಯಕ್ಕೆ ಕರೆದುಕೊಂಡು ಹೋಗಲು ಶುರು ಮಾಡಿದೆ. ಅಕಸ್ಮಾತ್ ಒಬ್ಬನೇ ಅಂತಹ ಪ್ರಕರಣ ನಿರ್ವಹಿಸುವಾಗ ತೊಂದರೆಯಾದರೆ ಕೂಡಲೇ ಲಭ್ಯವಿರುವ ಯಾರಾದರೊಬ್ಬ ಪಶುವೈದ್ಯರ ಅಥವಾ ಸಿಬ್ಬಂದಿವರ್ಗದವರ ಕರೆಸಿಕೊಂಡು ಪರಿಸ್ಥಿತಿಯನ್ನು ನಿಭಾಯಿಸತೊಡಗಿದೆ. ಆದರೆ ವಿಚಿತ್ರವೆಂದರೆ ಎಲ್ಲ ನನ್ನ ಎಚ್ಚರಗಳನ್ನೂ ಮೀರಿ ಅನೇಕ ಸಲ ಈ ತರಹದ ಪ್ರಕರಣಗಳಲ್ಲಿ ಒಬ್ಬನೇ ಸಿಲುಕಿ ಆಗುಹೋಗುಗಳನ್ನು ಎದುರಿಸಬೇಕಾಗಿ ಬಂದಿದೆ. ದನೀನ ಡಾಕ್ಟರ ಹಣೆಬರಹ!

‍ಲೇಖಕರು Avadhi

December 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sudhakara

    ಉರಿಬಿಸಿಲ ತಿರುಗೇಟು❤️
    ಆಸ್ಪತ್ರೆ ಕೆಲಸಕ್ಕೆ ನಿಗದಿತ ಸಮಯವಿದೆ. ಆದರೆ ಕಾಯಿಲೆಗಳಿಗೆ ಸಮಯವಿದೆಯೇ? ❤️
    Great story born from the rubbles of pain

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: