ಊರಿನೊಳಗೊಂದು ಊರು…

ಮಣ್ಣಪಳ್ಳಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ಮಣ್ಣಪಳ್ಳದ ಮೂಕಿಚಿತ್ರದಲ್ಲಿ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಒಂದು ಕಡೆ ಬಿರುಸಿನಲ್ಲಿ ಕಾಲು ಹಾಕುತ್ತ, ಹೆಗಲ ಮೇಲಿನ ಶಾಲನ್ನು ಅದೇ ಬಿರುಸಲ್ಲಿ ಜಾಡಿಸಿ ಬಸ್ ಸ್ಟ್ಯಾಂಡಿನ ಕಡೆಗೆ ನಡೆಯುತ್ತಿರುವ ಗುಂಪು, ಇನ್ನೊಂದು ಕಡೆಗೆ ಆ ಇಡೀ ಪ್ರದೇಶವನ್ನು ಮಧ್ಯೆ ಮಧ್ಯೆ ಸೀಳಿರುವ ರಸ್ತೆಗಳಲ್ಲಿ ಹಂಚಿ ಹೋಗುತ್ತಿರುವ ಅಲ್ಲಿಯದ್ದೇ ದುಡಿಮೆಗಾರರು. ಇನ್ನೆಲ್ಲಿದಂದಲೋ ಇಲ್ಲಿಗೆ ಬಂದಿಳಿಯುವ ಜನ. ಇವುಗಳ ಎಡೆಯಲ್ಲಿ ಇವರೆಲ್ಲರ ಸರಳ ಬದುಕನ್ನೇ ಬಂಡವಾಳವಾಗಿಸಿಕೊಂಡು ಅಲ್ಲಲ್ಲಿ ಬಾಗಿಲು ತೆರೆಯುತ್ತಿರುವ ಅಂಗಡಿಗಳು. ಇದು ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬೆಳಗಾಗುವ ಸಾಮಾನ್ಯ ದೃಶ್ಯ.

ಇನ್ನು ಈ ದಿನ ಶಾಲೆಗೋ ಕೆಲಸಕ್ಕೋ ಎಂಬ ಗೋಜಿನಲ್ಲಿಯೇ ಕಣ್ಣು ಬಿಡುತ್ತಿರುವ ಬಾಲರು, ಜೊತೆಗೆ ತಮ್ಮ ದಿನವನ್ನು ಶುರು ಮಾಡಲಿಕ್ಕೆ ತಯಾರಾಗುತ್ತಿರುವ ದುಡಿಮೆಗಾರರೆಲ್ಲರೂ ಇಲ್ಲಿ ಒಂದೇ ಕಣ್ಣೋಟಕ್ಕೆ ದಕ್ಕಿ ಬಿಡುತ್ತಾರೆ. ಹೊರ ಮಣಿಪಾಲದ ಬಣ್ಣ ಬೆರಗಿನಲ್ಲಿ ಬೆರತವರು ಯಾರೂ ಮಾರು ದೂರದಲ್ಲೇ ಅದಕ್ಕೆ ತದ್ವಿರುದ್ಧವಾಗಿ ಬೆಳೆದ ಈ ಏರಿಯಾದ ಯೋಚನೆ ಮಾಡಿರುವುದೇ ಇಲ್ಲ. 

ಬೆಳೆಯುತ್ತಿರುವ ಪಟ್ಟಣದ ಒಳಗೇ ಇದ್ದು ಅದರಿಂದ ಬೇರ್ಪಟ್ಟಿರುವ ಪ್ರದೇಶ ಇದು. ಹೊರಗಿನ ವೈಭೋಗಕ್ಕೆ ಇದು ನಿಲುಕದ ಜಗತ್ತಾದರೂ, ಅವರ ಎಷ್ಟೋ ಬಳಕೆಯ ಉತ್ಪನ್ನಗಳ ಹುಟ್ಟು ಇಲ್ಲೇ. ಸಣ್ಣ-ದೊಡ್ಡ ಕಾರ್ಖಾನೆಗಳನ್ನು ಹೊಂದಿಯೇ ಇದು ‘ಇಂಡಸ್ಟ್ರಿಯಲ್ ಏರಿಯಾ’ ಅಂತ ಪರಿಚಿತವಾದದ್ದು. ಇಷ್ಟೆಲ್ಲಾ ಆದಾಗಿಯೂ ಮಹಲಿನ ಒಳಗೆ ಅತೀ ಅವಶ್ಯಕವಾಗಿಯೂ, ನಿರ್ಲಕ್ಷ್ಯಕ್ಕೆ ಒಳಪಡುವ ಸ್ಟೋರ್ ರೂಮ್ ನ ಪಾಡು ಇದರದ್ದು.

ಈ ಎರಡು ಬದುಕಿನ ಮಧ್ಯೆ ಒಂದು ಉತ್ಪಾದನೆಯ ಜಗತ್ತು  ಮತ್ತು ಮತ್ತೊಂದು ಬಳಕೆದಾರರ ಜಗತ್ತು ಎನ್ನುವವರಿಗಿಂತಲೂ ಹೆಚ್ಚಿನ ವ್ಯತ್ಯಾಸಗಳಿವೆ. ಇಲ್ಲಿನ ಜನಜೀವನ ಮಣಿಪಾಲದ ಮೇಲ್ಬಾಗದಲ್ಲಿ ಬದುಕುವವರಿಗಿಂತ ನೂರು ಪಾಲು ಬೇರೆಯದೇ. ಅಲ್ಲಿನ ಅಲಂಕೃತ ರೆಸ್ಟೋರೆಂಟ್ ಗಳು, ಮಾಲ್ ಗಳು, ಬ್ರಾಂಡೆಡ್ ಬಟ್ಟೆ ಅಂಗಡಿಗಳಿಗೆಲ್ಲ ಇಲ್ಲಿ ಜಾಗವೇ ಇಲ್ಲ. ಇಲ್ಲಿನ ದುಡಿಯುವ ವರ್ಗದವರ ಅನುಕೂಲಕ್ಕೆ ತಕ್ಕಂತೆಯೇ ಗಾಡಿ ಅಂಗಡಿಗಳು, ಸಣ್ಣ ಪುಟ್ಟ ಹೋಟೆಲ್ ಗಳು, ಸಾಮಾನು, ಬಟ್ಟೆ, ಚಪ್ಪಲಿ ಅಂಗಡಿಗಳಷ್ಟೇ. ಇಲ್ಲಿನವರಿಗೂ ಮೀಟರುಗಳ ದೂರದಲ್ಲೇ ಇರುವ ಹೊರ ಮಣಿಪಾಲ ತಮ್ಮ ಬದುಕಿಗೆ ಅಲ್ಲದ ಪಟ್ಟಣವಷ್ಟೇ.

ನನ್ನ ವಿದ್ಯಾರ್ಥಿ ಸ್ನೇಹಿತನೊಬ್ಬ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಾಡಿಗೆ ಮನೆ ಮಾಡಿದ ನೆಪಕ್ಕೆ ನನ್ನ ಓಡಾಟವು ಆ ಕಡೆ ಜಾಸ್ತಿ ಆಗಿದೆ. ಅದೆಷ್ಟೋ ಬಾರಿ ಈ ಮೂಲಕವೇ ಹಾದು ಹೋಗಿದ್ದರೂ, ಅಲ್ಲೇ ಕೆಲ ಹೊತ್ತು ನಿಂತು ಜನ ಜೀವನವನ್ನು ಗಮನಿಸುವ ಕಾಲ ಒದಗಿ ಬಂದದ್ದು ಇತ್ತೀಚೆಗೆ ಮಾತ್ರ. ಹಿಟ್ಟಿನ ಗಿರಣಿಯಿಂದ ಹಿಡಿದು, ಬೃಹತ್ ಇಂಡಸ್ಟ್ರಿಗಳೂ ಇಲ್ಲಿ ಎದ್ದು ನಿಂತಿವೆ. ಈ ಕೈಗಾರೀಕರಣವನ್ನು ಆಧರಿಸಿಯೇ ಊರಿನವರು, ಬೇರೆ ಊರಿನವರೆನ್ನದೆ ದುಡಿಯುವ ವರ್ಗವೊಂದು ಇಲ್ಲಿ ನೆಲೆಯೂರಿದೆ.

ಒಂದಿಷ್ಟು ಸ್ವಂತ, ಮತ್ತೊಂದಿಷ್ಟು ಬಾಡಿಗೆ ಮನೆಗಳು, ಕಾಲ ಕಾಲಕ್ಕೆ ಹತ್ತಿರದಲ್ಲೇ ದೊರಕಲಾರಂಭಿಸಿದ ದಿನಬಳಕೆಯ ವಸ್ತುಗಳು, ಅಷ್ಟೇನೂ ದೂರವಲ್ಲ ಅನ್ನಿಸುವಂತಿರುವ ಒಂದೆರಡು ಶಾಲೆಗಳು, ಈ ಮೂಲಭೂತ ಅವಶ್ಯಕತೆಗಳನ್ನು ಮೀರಿ ಇನ್ನೇನಾದರೂ ಬೇಕೆಂದರೆ ಹತ್ತಿರವೇ ಬೆಳೆದು ನಿಂತಿರುವ ಬೃಹತ್ ಮಣಿಪಾಲ. ಈ ಎಲ್ಲವೂ ಸೇರಿ ‘ಇಂಡಸ್ಟ್ರಿಯಲ್ ಏರಿಯಾ’ವೇ ಒಂದು ಊರು.

ಇಲ್ಲಿಯೇ ದುಡಿಯುವ ವರ್ಗಕ್ಕಾಗಿ ಹುಟ್ಟಿಕೊಂಡ ಊರು, ಈಗ ಹೊರ ಪಟ್ಟಣದ ಅಧಿಕ ಖರ್ಚಿಗೆ ಕುಗ್ಗಿದವರಿಗೂ ಮನೆಯಾಗಿದೆ. “ಪಟ್ಟಣದ ಖರ್ಚು ನಿಭಾಯಿಸೋದು ಆಗುವುದೇ ಇಲ್ಲ. ಇಲ್ಲಿ ಬಾಡಿಗೆ, ದಿನಸಿ, ಊಟ ಎಲ್ಲ ಕಡಿಮೆ ಖರ್ಚಿಗೆ ಆಗಿ ಬಿಡುತ್ತದೆ. ದುಡಿಯುವುದು ದೂರ ಆದರೂ ಇಲ್ಲೇ ಉಳಿಯುವುದು ಉಳಿತಾಯ” ಅಂತ ನನಗೆ ಹೇಳಿದವರು ಬಹಳಷ್ಟು ಮಂದಿ ಇದ್ದಾರೆ. ನನಗೂ ಅವರ ಮಾತಿನ ಬಗ್ಗೆ ಎರಡನೇ ಆಲೋಚನೆಯೇ ಬರಲಿಲ್ಲ. ಮಣಿಪಾಲದ ಕೇಂದ್ರದಲ್ಲಿ ಉಳ್ಳವರ ಧಾರಾಳ ಬದುಕು, ಲೆಕ್ಕವಿಟ್ಟು ಖರ್ಚು ಮಾಡುವ ಇವರಿಗೆ ದಿಗ್ಬ್ರಾಂತಿ ಉಂಟು ಮಾಡಿಯೇ ಮಾಡುತ್ತದೆ.

ನಾನು ಹೊರಗಷ್ಟೇ ಕಂಡಿದ್ದ ಈ ಜಗತ್ತಿಗೆ ನನ್ನ ಪ್ರವೇಶ ಆಗುವುದಕ್ಕೆ ನನ್ನ ಸ್ನೇಹಿತರ ಮನೆ ನೆಪವಾಯಿತು. ಹಾಗೆ ಹೊರಟ ದಾರಿಯಲ್ಲಿ, ಒಂದು ಸಂಜೆ ಗಾಡಿ ನಿಲ್ಲಿಸಿಕೊಂಡು ನಿಂತು, ಸುತ್ತಲೂ ನೋಡಿದೆ. ಎಲ್ಲರ ದಿನಚರಿ ಮುಗಿಯುವುದರಲ್ಲಿತ್ತು. ಮೀನು ಕುಕ್ಕಿಗಳು, ತರಕಾರಿ ಚೀಲ ಎಲ್ಲವೂ ಹೊರಡಲಿಕ್ಕೆ ಮೇಲೇಳುತ್ತಿತ್ತು. ತೆರೆದಿದ್ದ ಕೆಲ ಅಂಗಡಿಗಳಲ್ಲಷ್ಟೇ ಬಲ್ಬ್ ಉರಿಯುತ್ತಿತ್ತು. ಅವುಗಳಲ್ಲಿ ಬಡವರು ಶ್ರೀಮಂತರೆನ್ನದೆ ಎಲ್ಲರ ನಾಲಿಗೆಗೂ ಅತೀ ರುಚಿಸುವ ‘ಫಾಸ್ಟ್ ಫುಡ್’ ನ ಗಾಡಿಗಳೂ ಸೇರಿದ್ದವು.

ಮಾರು ಮಾರು ದೂರದಲ್ಲಿ ಸುಮಾರು ಗಾತ್ರದ ಹೆಸರಿನ ಬೋರ್ಡ್ ತಗಲಿಸಿಕೊಂಡು, ಅದರ ಕೆಳಗಿನ ಮಬ್ಬು ಬಲ್ಬ್ ನ ಕೆಳಗೆ, ಅವರ ಜೀವಕ್ಕಿಂತ ದೊಡ್ಡ ಕಬ್ಬಿಣದ ಪಾತ್ರೆಯಲ್ಲಿ, ಹುರಿದಿಟ್ಟ ಕ್ಯಾಬೇಜ್ ತುಂಡಿಗೆ ವಿಧದ ಸಾಸ್ ಗಳನ್ನೂ ಬೆರೆಸಿ ಆಚಿಂದೀಚೆ ಮಾಡುತ್ತಿದ್ದರೆ, ಎದುರು ನಿಂತಿರುವ ಗ್ರಾಹಕರೆಲ್ಲರ ಕಣ್ಣು ಕೂಡ ಅವುಗಳ ಜೋಡಿಯೇ ಓಡಾಡುತ್ತಿತ್ತು. ಮಕ್ಕಳು, ಹುಡುಗರು, ಹೆಂಗಸರೆನ್ನದೆ ಎಲ್ಲರೂ ಇದೇ ಗಾಡಿಗಳ ಮುಂದೆ ಒಂದಿನಿತೂ ಅಂತರವಿಲ್ಲದೆ ನೆರೆದಿದ್ದರು. 

ಗೋಬಿ ಮಂಚೂರಿ, ನೂಡಲ್, ಫ್ರೈಡ್ ರೈಸ್ ಅಂತೆಲ್ಲ ಅವರವರ ಆಯ್ಕೆಯ ಖಾದ್ಯ ಕೈಸೇರುತ್ತಲೇ ಎಲ್ಲರ ಮುಖದಲ್ಲೂ ಖುಷಿಯ ಗೆರೆ ಬಂದು ಹೋಗುತ್ತಿತ್ತು. ಬಹಳ ಹಿಂದೆಯೇ ಗಾಡಿ ಅಂಗಡಿಗಳಲ್ಲಿ ತಿನ್ನುವುದನ್ನು ನಿಲ್ಲಿಸಿದ್ದ ನಾನು, ಆ ಕಡಾಯಿಯಿಂದ ಏಳುತ್ತಿದ್ದ ಘಮಕ್ಕೆ ತಡೆಯಲಾಗದೆ, ಗೋಬಿ ಎಂದೆ. ಪಕ್ಕದಲ್ಲಿ ನಿಂತಿದ್ದ ಎಲ್ಲರು ತಿನ್ನುವುದರಲ್ಲಿ ಮುಳುಗಿರುವ ಹೊತ್ತಿಗೆ, ಅಂಗಡಿಯವ ಬಿಸಿಪಾತ್ರೆಯಿಂದ ಮೊಗುಚಿ, ಪೇಪರ್ ಪ್ಲೇಟ್ ಮೇಲೆ ಒಂದು ಸೌಟು ಮಂಚೂರಿಯನ್ನು ಇಟ್ಟು ಒಂದಿಷ್ಟು ಕೊತ್ತಂಬರಿ ಸೊಪ್ಪು ಉದುರಿಸಿ ಕೊಟ್ಟ. 

ಆ ಖಾದ್ಯದ ಶಾಸ್ತ್ರ, ತಯ್ಯಾರಿ, ಶುಚಿ, ರುಚಿ ಎಲ್ಲ ಬದಿಗಿಡಿ. ಅಲಂಕೃತ ರೆಸ್ಟೋರೆಂಟ್ ಗಳಲ್ಲಿ ಕಾದಿರಿಸಿದ ಟೇಬಲ್ ಗಳ ಮೇಲೆ, ಹೊಳೆಯುವ ಪಿಂಗಾಣಿ ಪಾತ್ರೆಗಳ ಮುಂದೆ ಗಂಟೆಗಟ್ಟಲೆ ಕೂತು ಹೊಟ್ಟೆಗೆ ಹೋಗುವ ಊಟಕ್ಕಿಂತ, ಅಲ್ಲಿದ್ದ ಅತೀ ಸಾಮಾನ್ಯರ ಹಸಿದ ಹೊಟ್ಟೆ ಮತ್ತು ನಾಲಿಗೆಗೆ ಆ ಖಾದ್ಯ ಹೆಚ್ಚು ನ್ಯಾಯ ಒದಗಿಸುತ್ತಿತ್ತು. ಜಾಗ ಮತ್ತು ಹೊತ್ತು ಯಾವುದೇ ಆದರೂ ಆ ಗಳಿಗೆಗೆ ಪಾತ್ರೆಯಲ್ಲಿ ಅರಳುವ ಅನ್ನ, ಹಸಿದವನ ಹೊಟ್ಟೆ ಮತ್ತು ಮನಸ್ಸು ತಲುಪುದಷ್ಟೇ ಮುಖ್ಯ ಎನ್ನಿಸಿತು.

ಅಲ್ಲಿ ದುಡಿಯುವ ಕೈ ಮತ್ತು ಹಸಿದ ಹೊಟ್ಟೆ ಒಟ್ಟಿಗೆ ತಾಳ ಹಾಕುತ್ತಿತ್ತಷ್ಟೇ. ಅಲ್ಲಿದ್ದ ಮೂರು ಹೆಣ್ಣು ಮಕ್ಕಳ ಗುಂಪು ‘ಫಾಸ್ಟ್ ಫುಡ್’ ಸವಿಯುತ್ತ ತಮ್ಮ ಗೇರು ಬೀಜದ ಫ್ಯಾಕ್ಟರಿಯಲ್ಲಿ ಇವತ್ತು ಏನೇನಾಯ್ತು ಎಂಬ ಮಾತಲ್ಲಿ ಮುಳುಗಿದ್ದರೆ, ಇಬ್ಬರು ಮಕ್ಕಳು ತಮ್ಮ ಕಳೆದುಹೋದ ಗೋಲಿಗಳ ವಿಚಾರದಲ್ಲಿದ್ದರು. ನಾನು ಇವರೆಲ್ಲರನ್ನು ನೋಡುವುದರಲ್ಲಿದ್ದೆ. ಹೀಗೆ ನೂರು ವಿಚಾರಗಳು ಪಕ್ಕದಲ್ಲೇ ಹರಿದು ಹೋಗುತ್ತಿದ್ದರೂ, ಅಂಗಡಿಯವ ಮಾತ್ರ ಗ್ರಾಹಕರು ಕೇಳಿದ ಖಾದ್ಯಗಳ ತಯಾರಿಯನ್ನು ಮುಂದುವರಿಸಿಯೇ ಇದ್ದ. ಅವುಗಳ ಮಧ್ಯದಲ್ಲಿ ಅವನ ಸುತ್ತಲೇ ಸುತ್ತುತ್ತಾ, ಬಾಯಿ ಅಗಲ ಮಾಡಿ ಎಂಜಲು ಸುರಿಸುತ್ತಿದ್ದ ನಾಯಿಗಳ ಗುಂಪಿನತ್ತ ಒಂದೊಂದು ತುಂಡನ್ನು ಎಸೆಯುತ್ತಲೂ ಇದ್ದ.

ಊರೊಳಗಿನ ಈ ಊರಲ್ಲಿ ನಾನು ಬೇರೆ ಊರವಳಂತೆಯೇ ಭಾಸವಾದೆ. ಸುಮಾರು ದಿನದ ಮೇಲೆ ಹೊರಗಡೆ ತಿಂದದ್ದಕ್ಕೋ ಏನೋ ಅಲ್ಲಿನ ವಾತಾವರಣದ ಜೊತೆಗೆ ಫಾಸ್ಟ್ ಫುಡ್ ಕೂಡ ರುಚಿಸಿತು. ಮುನ್ನೂರರ ಕೆಳಗೆ ಹೋಟೆಲ್ ಇಂದ ಹೊರಗೆ ಬರದವಳು, ಮೂವತ್ತು ರೂಪಾಯಿ ಕೊಟ್ಟು ಸಮಾಧಾನ ಚಿತ್ತದಿಂದ ಹೊರಗೆ ಬಂದೆ.

December 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: