ʼಜೋಳ ಮುಗಿದಿದೆ, ಹಾಡು ಉಳಿದಿದೆʼ

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

‘ಪಲ್ಲವ ಪ್ರಕಾಶನ’ದಿಂದ ಎನ್ ಸಂಧ್ಯಾರಾಣಿಯವರ ‘ಯಾಕೆ ಕಾಡುತಿದೆ ಸುಮ್ಮನೆ ನನ್ನನು’ ಪುಸ್ತಕವನ್ನು ಮುದ್ರಣಕ್ಕೆ ನೀಡಿದ್ದರು. ಪ್ರತಿ ಪುಸ್ತಕದಲ್ಲೂ ಹೊಸತನವನ್ನು ರೂಪಿಸಿ ವಿನ್ಯಾಸದಲ್ಲೇ ಮೋಡಿ ಮಾಡುವ ಜಿ ಎನ್ ಮೋಹನ್ ಅವರ ಮೂಲಕ ಈ ಪುಸ್ತಕ ನಮ್ಮ ಕೈ ಸೇರಿತ್ತು. ಅಂತಿಮಗೊಳಿಸಿದ ಪುಸ್ತಕದ ಸಿಡಿಯನ್ನು ಕೈಗಿಟ್ಟು ಮಾರನೆಯ ದಿನ ಸಂಜೆ ನಾಲ್ಕರೊಳಗೆ ಪುಸ್ತಕ ಮುದ್ರಣ ಮಾಡಿಕೊಡಬಹುದಾ ನೋಡಿ ಎಂದು ವಿನಂತಿಸಿದರು.

ಲೇಖಕರಾದ ಸಂಧ್ಯಾರಾಣಿಯವರ ಮನೆಯಲ್ಲಿ ಕೌಟುಂಬಿಕ ಕಾರ್ಯಕ್ರಮವಿದ್ದುದರಿಂದಲೂ, ಇದು ಅವರ ಮೊದಲ ಪುಸ್ತಕವಾದದ್ದರಿಂದಲೂ ಅವರ ಕುಟುಂಬಸ್ತರ ನಡುವೆ ಔಪಚಾರಿಕವಾಗಿ ಬಿಡುಗಡೆ ಮಾಡಿದರೆ ಅವರಿಗೆ ಸಂತೋಷವಾದೀತು ಎಂಬುದು ಅವರ ಆಶಯ. ಈ ರೀತಿ ಅನೇಕ ಹಿರಿಯ ಕಿರಿಯ ಸ್ನೇಹಿತರ ನಡುವೆ ಅಚ್ಚರಿಗಳನ್ನು ಮೂಡಿಸುವಲ್ಲಿ ಮೋಹನ್ ಸಿದ್ಧಹಸ್ತರು.

ನಾವು ಮುಂಚಿತವಾಗಿ ಒಪ್ಪಿಕೊಂಡಿದ್ದ ಬೇರೆಬೇರೆ ಕೆಲಸಗಳ ಒತ್ತಡದಲ್ಲಿದ್ದುದರಿಂದ “ನಿಮ್ಮ ಪುಸ್ತಕವನ್ನು ನಾಳೆ ಸಂಜೆಯ ಒಳಗೆ ಮುದ್ರಿಸಿ ಕೊಡುವುದು ಕಷ್ಟದ ಕೆಲಸ” ಎಂದು ಹಿಂಜರಿದೆ. ಆದರೆ ನನಗೆ ಚೆನ್ನಾಗಿ ಗೊತ್ತಿತ್ತು ಅವರು ಯಾವ ಕಾರಣಕ್ಕೂ ಪಟ್ಟು ಬಿಡುವುದಿಲ್ಲ ಎಂದು. ಅವರ ತುಡಿತವನ್ನು ಮನಗಂಡು ಮುದ್ರಣ ಕಾರ್ಯವನ್ನು ಪ್ರಾರಂಭಿಸಿ ಮಾರನೆಯ ದಿನ ಸಂಜೆ ಐದಕ್ಕೆ ಸಿದ್ಧವಾದ ಪುಸ್ತಕದೊಂದಿಗೆ ಮೋಹನ್ ಅವರ ಮನೆಯ ಕದ ತಟ್ಟಿದೆವು. ಅಲ್ಲಿಂದ ಅದು ಲೇಖಕರನ್ನು ಮುಟ್ಟಿತು. ಸಂಧ್ಯಾರಾಣಿ ಅವರಿಗೆ ತಮ್ಮ ಮೊದಲ ಪುಸ್ತಕ ಅವರ ಕುಟುಂಬಸ್ತರ ಎದುರಿಗೆ ಬಿಡುಗಡೆಯಾಗುತ್ತದೆಯೆಂಬ ಕಲ್ಪನೆಯೇ ಇರಲಿಲ್ಲ. 

ಮುಂದೆ ಇದೇ ರೀತಿ ಮೋಹನ್‌ರವರು ಮೋಡಿ ಮಾಡುವಂತೆ ವಿನ್ಯಾಸ ಮಾಡಿಸಿದ ಅನೇಕ ಪುಸ್ತಕಗಳನ್ನು ಮುದ್ರಿಸುವ ಅವಕಾಶಗಳು ಪದೇಪದೇ ಒದಗಿ ಬಂದವು. ಅವುಗಳಲ್ಲಿ ವಿಶ್ವಕನ್ನಡ ಸಮ್ಮೇಳನದ ಸಂದರ್ಭ ಸಂಚಿಕೆ ‘ಪುನರಾವಲೋಕನ’ ಹಾಗೂ ಧರ್ಮಸ್ಥಳದ ಸುರೇಂದ್ರಕುಮಾರ್ ಅವರ ಅಭಿನಂದನಾ ಗ್ರಂಥ ‘ಸುರಚಾಪ’ ನಮ್ಮ ಮುದ್ರಣಾಲಯದತ್ತ ಅನೇಕ ಸಾಹಿತ್ಯಾಸಕ್ತರ ಕಣ್ಮನ ಸೆಳೆಯುವಂತೆ ಮಾಡಿದವು.

ಯುವಕರನ್ನು ಸದಾ ಬೆನ್ನುತಟ್ಟಿ, ಜೊತೆಗಿದ್ದು ಪ್ರೋತ್ಸಾಹಿಸುವ ಮೋಹನ್ ಅವರು ‘ಸಮಯ ನ್ಯೂಸ್’ ಸಂಪಾದಕರಾಗಿದ್ದಾಗ ಒಂದು ದಿನ ಕರೆ ಮಾಡಿ “ನಮ್ಮ ಚಾನಲ್‌ನಲ್ಲಿ ‘ಗುರಿ ಹೆಗ್ಗುರಿ’ ಎಂಬ ಕಾರ್ಯಕ್ರಮದ ಮುಂದಿನ ಸಂಚಿಕೆಗೆ ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದೇವೆ” ಎಂದಾಗ ನಾನು ಮುಜುಗರದಿಂದಾಗಿ ಒಪ್ಪಲೇ ಇಲ್ಲ. ಅದೂ ಅಲ್ಲದೆ “ನನಗೆ ಕ್ಯಾಮೆರಾ ಮುಂದೆ ನಿಂತರೆ ಕೈಕಾಲುಗಳು ಕಂಪಿಸುತ್ತವೆ” ಎಂದು ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಅವರು ಒಪ್ಪಲೇ ಇಲ್ಲ. “ನೀವು ಸುಮ್ಮನೇ ಯಂತ್ರಗಳ ನಡುವೆ ನಿಮ್ಮ ಕೆಲಸಗಳನ್ನು ಮಾಡುತ್ತಿರಿ. ಮಧ್ಯ ಮಧ್ಯದಲ್ಲಿ ನಮ್ಮ ಹುಡುಗರು ಕೇಳುವ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಿ” ಎಂದು ಒಪ್ಪಿಸಿ ಬಿಟ್ಟರು. 

ಮಾರನೇ ದಿನವೇ ಅವರ ತಂಡ ಕ್ಯಾಮೆರಾದೊಂದಿಗೆ ಬಂದು ನಮ್ಮ ಮುದ್ರಣಾಲಯದ ಕಾರ್ಯವೈಖರಿಯನ್ನು ಚಿತ್ರಿಸಿಕೊಂಡು, ಅದರೊಟ್ಟಿಗೆ ಅನೇಕ ಹಿರಿಯರ ಅಭಿಪ್ರಾಯಗಳನ್ನೂ ಚಿತ್ರಿಸಿ, ಒಂದು ಸಂಚಿಕೆಯನ್ನು ಅದ್ಭುತವಾಗಿ ಸಿದ್ಧಪಡಿಸಿ ಪ್ರಸಾರ ಮಾಡಿಯೇ ಬಿಟ್ಟರು. ಈ ಕಾರ್ಯಕ್ರಮ ಕರ್ನಾಟಕದ ಮೂಲೆಮೂಲೆಗಳಿಗೆ ‘ಸ್ವ್ಯಾನ್’‌ನ ಜನಪ್ರಿಯತೆಯನ್ನು ಪಸರಿಸಿತು.  

ಕೊರೊನಾ ಪಿಡುಗು ಜನರನ್ನು ಹಿಂಡುತ್ತಿದ್ದ ಸಂದರ್ಭದಲ್ಲಿ ಇಡೀ ಭಾರತ ಲಾಕ್‌ಡೌನ್ ಆಗಿ ಯಾವ ಜಂಜಾಟವೂ ಇಲ್ಲದೆ ಎಲ್ಲರಂತೆ ನಾನೂ ಮನೆಯ ನಾಲ್ಕು ಗೋಡೆಗಳ ನಡುವೆ ಸೇರಬೇಕಾಯಿತು. ಈ ಸಮಯವನ್ನು ಉಪಯೋಗಿಸಿಕೊಂಡು ಏನಾದರೂ ಮಾಡಲೇಬೇಕೆಂದು ಒಂದಿಷ್ಟು ಓದುವ ಬರೆಯುವ ಹವ್ಯಾಸವನ್ನು ಪ್ರಾರಂಭಿಸಿದೆ.

ಇಪ್ಪತ್ತೈದು ವರ್ಷಗಳ ಮುದ್ರಣ ಕ್ಷೇತ್ರದಲ್ಲಿ ನನಗಾದ ಅನುಭವವನ್ನು ಬರೆಯಬೇಕೆಂದುಕೊಂಡು ಪ್ರಾರಂಭಿಕವಾಗಿ ಅನುಭವವನ್ನು ಬರೆದು ಅದನ್ನು ವಾಟ್ಸಾಪ್ ಮುಖಾಂತರ ಕೆಲ ಹಿತೈಸಿಗಳಿಗೆ ಕಳುಹಿಸಿ ಸುಮ್ಮನಾದೆ. ಕಳುಹಿಸಿದ ಹದಿನೈದು ನಿಮಿಷಗಳ ಬಳಿಕ ಮೋಹನ್ ಅವರು ಕರೆಮಾಡಿ “ಚೆನ್ನಾಗಿ ಬರೆದಿದ್ದೀರಿ, ಈ ರೀತಿಯ ಅನುಭವಗಳು ಎಲ್ಲರಿಗೂ ಆಗಲು ಸಾಧ್ಯವಿಲ್ಲ. ಇದೇ ರೀತಿ ನಿಮ್ಮ ಅನುಭವಗಳನ್ನು ದಾಖಲಿಸುತ್ತಾ ಹೋಗಿ” ಎಂಬ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿದರು. 

ನಾನು ಅವರ ಮಾತುಗಳಿಂದ ಖುಷಿಯಲ್ಲಿ ಬೀಗುತ್ತಿದ್ದೆ. ಆದರೆ ಕೊನೆಯಲ್ಲಿ ಒಂದು ಶಾಕಿಂಗ್ ನ್ಯೂಸ್ ಕೊಟ್ಟರು. “ಮುಂದಿನ ಸೋಮವಾರದಿಂದ ‘ಅವಧಿ’ಯಲ್ಲಿ ಪ್ರತಿವಾರವೂ ಒಂದೊಂದು ನಿಮ್ಮ ಅನುಭವದ ಪ್ರಸಂಗಗಳನ್ನು ‘ಮುದ್ರಕನ ಡೈರಿ’ ಎಂಬ ಅಂಕಣದಡಿಯಲ್ಲಿ ಪ್ರಕಟಿಸುತ್ತಿದ್ದೇವೆ, ನೀವು ಬರೆಯಲು ಸಿದ್ಧರಾಗಿ” ಎಂದಾಗ ನಾನು ಗಾಬರಿಯಿಂದ “ಬೇಡ, ಮೊದಲು ಎಲ್ಲಾ ಬರೆದು ಬಿಡುತ್ತೇನೆ, ನಂತರ ಪ್ರಕಟಣೆ ಪ್ರಾರಂಭಿಸೋಣ” ಎಂದು ಮನವಿ ಮಾಡಿದರೂ ಕೇಳಲಿಲ್ಲ. “ಮೊದಲು ನೀವು ಬರೆಯಲು ಪ್ರಾರಂಭಿಸಿ” ಎಂದು ಪೋನ್ ಕಟ್ ಮಾಡಿದರು. 

ಇದಾದ ಅರ್ಧಗಂಟೆಯಲ್ಲಿ ನನ್ನ ವಾಟ್ಸಾಪ್‌ಗೆ ಅವರಿಂದ ಒಂದು ಪೋಸ್ಟರ್ ಬಂದು ಬಿತ್ತು. ಅದನ್ನು ತೆರೆದು ನೋಡಿದರೆ ನನ್ನದೊಂದು ಫೋಟೋ ಜೊತೆಗೆ, “ಮುಂದಿನ ವಾರದಿಂದ ‘ಅವಧಿ’ಯಲ್ಲಿ ಪ್ರತಿ ಸೋಮವಾರ ‘ಮುದ್ರಕನ ಡೈರಿ’ ಎಂಬ ‘ಅಂಕಣ’ ಪ್ರಾರಂಭ” ಎಂದಿತ್ತು. ಮೋಹನ್ ಸರ್‌ಗೆ “ಸ್ವಲ್ಪ ಸಮಯ ಕೊಡಿ, ನನಗೆ ಅಷ್ಟಾಗಿ ಬರೆಯಲು ಬರುವುದಿಲ್ಲ” ಎಂದು ಬೇಡಿಕೊಂಡರೂ ಅವರು ಒಪ್ಪಲಿಲ್ಲ. “ಯಾರೂ ಕೂಡ ಮುಂಚಿತವಾಗಿಯೇ ಅಂಕಣಗಳನ್ನು ಬರೆದಿಟ್ಟುಕೊಂಡಿರುವುದಿಲ್ಲ, ಒತ್ತಡದ ಸಮಯ ಬಂದಾಗಲೇ ಅಂಕಣ ಪ್ರಸವವಾಗುವುದು. ನಿಮಗೆ ಹೇಗೆ ಬರೆಯಲು ಸಾಧ್ಯವೋ ಹಾಗೆಯೇ ಬರೆಯಿರಿ” ಎಂದು ನನ್ನಲ್ಲಿ ಬರೆಯುವ ಧೈರ್ಯ ಮತ್ತು ವಿಶ್ವಾಸವನ್ನು ತುಂಬಿದರು. 

ನನ್ನ ಮೊದಲ ಅಂಕಣ ಬರಹ ಪ್ರಕಟವಾದಾಗ ಅನೇಕ ಹಿರಿಯರು, ಕಿರಿಯರು ಕರೆಮಾಡಿ ಮೆಚ್ಚುಗೆಯ ಮಾತುಗಳನ್ನು ಹೇಳಿ ಪ್ರೋತ್ಸಾಹಿಸುವುದನ್ನು ನೋಡಿ ವಿಸ್ಮಿತನಾದೆ. ಹೀಗೆ ವಾರಗಳ ಮೈಲುಗಲ್ಲು ದಾಟಿ ಮೂವತ್ತು ವಾರ ಕ್ರಮಿಸಿದಾಗ, ಇಷ್ಟೆಲ್ಲಾ ನಿಜಕ್ಕೂ ನಾನೇ ಬರೆದೆನೇ?! ಎಂದು ಅಚ್ಚರಿಯಾಗುತ್ತದೆ.

ನನ್ನಲ್ಲಿದ್ದ ಮುದ್ರಣ ಕ್ಷೇತ್ರದ ಹಲವು ವಿಶಿಷ್ಟ ಅನುಭವಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ ಜಿ ಎನ್ ಮೋಹನ್ ಅವರಿಗೂ ಮತ್ತು ‘ಅವಧಿ’ ತಂಡಕ್ಕೂ ‘ಮುದ್ರಕನ ಡೈರಿ’ ಓದಿ ನನ್ನನ್ನು ಪ್ರೇರೇಪಿಸಿದ ಅವಧಿಯ ಎಲ್ಲಾ ಓದುಗರಿಗೂ ಅನಂತಾನಂತ ಧನ್ಯವಾದಗಳು.

ಸಾಹಿತ್ಯದ ಅಡಿಗೆ ಸಿದ್ಧಪಡಿಸಿ ಉಣಬಡಿಸಲೆಂದು ಬೀಸಲು ಕೂತ ನನ್ನ ಬಳಿಯಿದ್ದ ‘ಜೋಳ ಮುಗಿದಿದೆ, ಹಾಡು ಉಳಿದಿದೆʼ ಎಂಬ ಜನಪದ ಕವಿಗಳ ಮಾತು ಈಗ ನೆನಪಿಗೆ ಬರುತ್ತಿದೆ. ಮತ್ತಷ್ಟು ಅನುಭವಗಳನ್ನು ಮುಂದಿನ ದಿನಗಳಲ್ಲಿ ಬೀಸಿ, ಅಚ್ಚುಕಟ್ಟಾದ ಅಡುಗೆ ಮಾಡಿ ನಿಮಗೆ ಉಣಬಡಿಸಲು ಮತ್ತೆ ಬರುವೆ. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು.

December 7, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sarayu

    Eshtu chennagi barediddiri Krishnamurthyyavare. Nimma baravanige ishtakke nilladirali,innashtu mattashtu bareyiri. Shubhavagli

    ಪ್ರತಿಕ್ರಿಯೆ
  2. Madhu B N

    ಪ್ರತಿ ವಾರ ಈ ಅಂಕಣಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೆ. ವಿವಿಧ ಕ್ಷೇತ್ರಗಳಲ್ಲಿನ ಮಹನೀಯರ ಜೊತೆ ಇವರ ಕೆಲಸ ಕಾರ್ಯಗಳ ವಿವರಗಳು ಆಸಕ್ತಿಕರವಾಗಿದ್ದವು.

    ಮಧು ಬಿ.ಎನ್.
    ಬೊಕಾರೋ
    ಜಾರ್ಖಂಡ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: