ಹಿಂದೆ ತಿರಗಿ ನೋಡ್ತಾರೆ ಎದೆ ಧಸ್ಸಕ್ಕೆಂತು..

ನಾಯಿಸಳ

ಹೆಚ್.ಆರ್. ಸುಜಾತಾ

ನಮ್ಮೂರು ಹೊಯ್ಸಳ ನಾಡು. ಇಂತಿಪ್ಪ ಹೊಯ್ಸಳ ನಾಡಲ್ಲಿ ಒಬ್ಬರು ಹೆಸರಾಂತ ಪತ್ರಿಕೋದ್ಯಮಿ. ಅವ್ರು ಒಂದಿನ ಮಂತ್ರಿಗಳ ಮನೆಗೆ ಮಾತಿಗೆ ಅಂತ ಹೋದರು. ಗೇಟ್ ತೆಗದ್ರು, ನಡ್ಕೊಂಡು ಬಂದು ಬಾಗಿಲು ಮುಂದೆ ನಿಂತ್ರು. ಕಾಲಿಂಗ್ ಬೆಲ್ ಒತ್ಹಿದ್ರು. ಹಿಂದಿಂದ ಭುಜದ ಮೇಲೆ ಭಾರ ಬಿತ್ತು. ಹಿಂದೆ ತಿರಗಿ ನೋಡ್ತಾರೆ ಎದೆ ಧಸ್ಸಕ್ಕೆಂತು. ಅಲ್ಲಿವರೆಗೂ ಯಾವದೇ ಅಂಜಿಕೆ ಇಲ್ದೆ, ಪತ್ರಿಕೋದ್ಯಮದ ಗರಿ ತಲೆಗೆ ಸಿಕಿಸ್ಕೊಂಡು ಎಲ್ಲಿ ಬೇಕಾದರೂ ನಿರ್ಭಯದಿಂದ ಓಡಾಡತ್ತಿದ್ದ ಅವ್ರು, ಅಂದು ಕಂಗಾಲಾಗಿ ಹೋದರು.

Nammuru-1ಹುಲಿ ಅಂತ ನಾಯಿ ಹಿಂದಿಂದ ಭುಜಕ್ಕೆ ಕಾಲು ಹಾಕಿ ನಿಂತಿತ್ತು. ಹೊರಗೆ ಯಾರೂ ಕಾಣ್ಸ್ತಿಲ್ಲ. ನಾಯಿ ಮೈಯಿ ತೊಳೆದಿದ್ರೆನೋ? ಒಣಗಲೆಂದು ಅದನ್ನು ಚೈನ್ ಇಲ್ದೆ ಬಿಟ್ ಬಿಟ್ಟಿದಾರೆ. ಇವರು, ಮೈ ಕೊಡವಿದಷ್ಟು ನಾಯಿ ಮೈಮೇಲೆ ಬಂತು. ಎರಡು ಬಾರಿ, ಮೂರೂ ಬಾರಿ. ಅಷ್ಟೊತ್ತಿಗೆ, ಅದರ ಉಗುರಿಗೆ ಸಿಕ್ಕಿ ಬಟ್ಟೆ ಹರಿದುಹೋಯಿತು. ಕೈ ಮೈಯಲ್ಲಿ ರಕ್ತ ಚಿಮ್ಮಿತು. ಆಗ ಅವರ ಜೀವ ಝಲ್ ಎಂತು. ಇದು ನನ್ನನ್ನ ಮುಗಿಸೋದೆ ಅಂತ ಅನ್ಸಿಬಿಡ್ತು.

ಇವರಿಗೆ ಆ ಕ್ಷಣದಲ್ಲಿ, ಸಳನಂತೆ ರೋಷಾವೇಶ ಮೈಮೇಲೆ ಬಂತು. “ಹೊಯ್ ಸಳ” ಅವರ ಮನಸೆ ಗುರುವಿನಂತೆ ಆಜ್ಞೆ ನೀಡಿತು. ಎದೆಯುದ್ದ ನಿಂತಿದ್ದ ನಾಯಿಗೆ ಮುಷ್ಠಿ ಬಿಗಿದು ಎತ್ತಿದ್ದೆ, ಬುರುಡೆಗೆ ಗುದ್ದಿದರು. ನಾಯಿ ಒಂದು ಸುತ್ತು ತಿರುಗಿ ಕುಂಯ್ಯೋ ಅಂತು. ಮತ್ತೆರಡು ಬಿಗಿದರು. ಕುಂಯ್ಯೋಯ್ಯೋ, ಕುಂಯ್ಯಯ್ಯೋ ಅನ್ನೋ ಶಬ್ಧಕ್ಕೆ ಒಳಗಿಂದ ಕೆಲಸದವರು, ಮನೆವರು ಓಡಿ ಬಂದ್ರು. ಮಂತ್ರಿಗಳು ಕಿರಚಾಟ ನೋಡಿ ಎದ್ದು ಹೊರಗೆ ಬಂದ್ರು.

ಪಾಪ! ಪತ್ರಕರ್ತರ ಸಂಕಷ್ಟ ನೋಡಿ ಕೆಲಸದವರಿಗೆ ಬಯದ್ರು. “ನಾಯಿ ಕಟ್ ಹಾಕೋಕೆ ಏನ್ ದಾಡಿನೊ ನಿಮಗೆ”. ಎಷ್ಟೇ ಜೋರಾಗಿ ಬಯದ್ರು ಅವರ ಮುದ್ದಿನ ಹುಲಿಯ ಕುಂಯ್ಯೋ ಅನ್ನೋದು ನೋಡಿ, ಅವರ ಹೊಟ್ಟೆ ಉರ್ಧೋಯ್ತು . ಪಾಪ ಅದು ಮೂಲೆ ಸೇರಿ ಬಾಲ ಮುದುರಿ, ಮುಲುಗುಡುತಾ, ತನ್ನ ಮೈ ತಾನೇ ನೆಕ್ಕಿ ಕೊಳ್ಳುತಿತ್ತು. ಹತ್ತಿರ ಹೋಗಿ ಅದರ ಮೈ ಸವರಿ, “ನೋಡ್ರಪ್ಪ ಏನಾಗಿದೆ. ಡಾಕ್ಟರ ಹತ್ರ ಕರ್ಕೊಂಡು ಹೋಗಿ” ಅಂದವರೇ ಇತ್ತಾ ತಿರಗಿ “ಬನ್ನಿ ದಿವಾಕರ್, ಒಳಗೆ ಬನ್ನಿ” ಅಂತ ಒಳಗೆ ಕರೆದು ಉಪಚರಿಸಿದ್ರು. ತಿಂಡಿ, ಕಾಫಿ ಕೊಟ್ಟು ಸತ್ಕರಿಸಿದರು.

ಎಲ್ಲಾ ಮುಗಿದು ಆಚೆಗೆ ಬೀಳ್ಕೊಡಲು ಬಂದರು. “ನಮ್ಮಿಂದ ತಪ್ಪಾಗಿದೆ ಕ್ಷಮಿಸಿ” ಅಂದವರೇ ಹೊಗಳಿಕೆ ದನಿಯಲ್ಲಿ, “ಏನ್ರೀ ಪರಾಕ್ರಮ ನಿಮ್ಮದು. ನಮ್ಮದು ಹೊಯ್ಸಳ ನಾಡು ನೋಡಿ. ಚಿರುತೆ, ಹುಲಿ ಬಂದಿದ್ರೂ ಸೈತ ನೀವು ಹಿಂಗೆ ಹೋರಾಡ್ತಿದ್ರಿ” ಅಂತ ಹಾಲಿ ಪರಿಸ್ಥಿತಿಯನ್ನು ತಿಳಿಮಾಡಿ ಕಳಸಕೊಟ್ರು. ಅಲ್ಲೇ ನಿಂತಿದ್ದ ಅವರ ಮಕ್ಕಳು ಅವರು ಹೋದನಂತರ, ಕೀಟಲೆಗೆ “ಅಪ್ಪ, ಇವರನ್ನ ನಾಯಿಸಳ ಅಂತ ಕರಿಯೋಣವಾ?” ಅನ್ನೋದಾ….

ನಮ್ಮ ಮಲೆನಾಡಿನ ಹೊಯ್ಸಳ ನಾಡಲ್ಲಿ ಹುಲಿ, ಕೀರ, ಚಿರುತೆ ಹಾಗು ಆನೆದಾಳಿ ಸಾಮಾನ್ಯ. ಕಾಡು ಬಯಲಾಗಿರುದ್ರಿಂದ ಅವುಗಳ ರಕ್ತದ ನೆಪ್ಪಿನ ಜಾಗಾ ಹುಡುಕಿ ಇವು, ಆಗಾಗಾ, ರಸ್ತೆಲ್ಲಿ ಅಡ್ಡಾಡ್ತಿರ್ತವೆ. ನನ್ನ ಮಾವನ ಮಗನ ಹೆಸರು ದೊಡ್ಡ ಮಗ. ಒಂದು ದಿನ, ಒಬ್ಬಂಟಿ ಆಗಿ ಹೊಲದಲ್ಲಿ ಕೆಲಸ ಮಾಡ್ತಿದ್ದ. ಅವನ ಹಿಂದಿನಿಂದ ಚಿರುತೆ ಇದೆ ರೀತಿಯಲ್ಲಿ ದಾಳಿ ಮಾಡ್ತು. ಅವನು ಅದರ ಜೊತೆ ಹೊಡೆದಾಡಿ ಚಿರುತೆ ತಲೆಗೆ ಕಲ್ಲಲ್ಲಿ ಹೊಡದು, ಜಜ್ಜಿ ಸಾಯಿಸ್ಬಿಟ್ಟ. ಇವನಿಗೂ ಕೆನ್ನೆ ಹರಿದು ಹೋಗಿತ್ತು, ಎದೆ ಬಗೆದು ಹೋಗಿತ್ತು. ನಂತರ ಆಸ್ಪತ್ರೆಯಲ್ಲಿ ಅವನು ಆರು ತಿಂಗಳು ಸುಧಾರಿಸಿಕೊಂಡು ಬಂದವನು, ಮೂವತ್ತು ವರುಷ ಬದುಕುಳಿದಿದ್ದ.

ಆದರೆ ಪ್ರಾಣಿ ಹಾಗು ಮನಷ್ಯನ ನಡುವಿನ ಅಸ್ತಿತ್ವದ ಹೋರಾಟದಲ್ಲಿ, ಅವನ ಎದೆ ಜಾಗದಲ್ಲಿ, ಎಲ್ಲ ಜೀವಿಗಳ ಸಹಚರ್ಯದ ಕುರುಹಾಗಿ ,ದೀಪ ಹೊತ್ತಿಸುವಂಥ ಒಂದು ಗೂಡು ಸೃಷ್ಟಿ ಆಗಿ ಉಳಿದುಹೋಗಿತ್ತು.ಅದನ್ನು ನೋಡಿದಾಗ, ಈ ಪರಿಸರದಲ್ಲಿ ಬದುಕಿ ಉಳಿಯಲು ಹೋರಾಡುವ ನಮ್ಮ ಜೀವವೂ ಉರಿವ ಕೇವಲ ಒಂದು  ಬತ್ತಿ.

‍ಲೇಖಕರು admin

August 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: