ನನ್ನ ಮೇಲೊಂದು ಹಲ್ಲೆ

ಅದು 1990ರ ಆಜುಬಾಜು. ಹಂಪಸಾಗರದಲ್ಲಿದ್ದೆ. ಆಸ್ಪತ್ರೆಗೂ ನಾನಿದ್ದ ಬಾಡಿಗೆ ಮನೆಗೂ ನೂರು ಮೀಟರ್ ಸಹ ಇದ್ದಿಲ್ಲ. ಹೆಂಡತಿ ಮಗುವಿನೊಂದಿಗೆ ತವರಿಗೆ ಹೋಗಿದ್ದುದರಿಂದ ಒಬ್ಬನೇ ಇದ್ದೆ. ದಿನವೂ ಖಾನಾವಳಿ ಊಟ ಮಾಡುತ್ತಿದ್ದವನು ಅಂದು ಖಾನಾವಳಿ ಊಟ ಬೇಡವೆನಿಸಿ ಮನೆಯಲ್ಲಿಯೇ ಅಡುಗೆ ಮಾಡಬೇಕೆಂದುಕೊಂಡಿದ್ದೆ. ಆಗ ಮನೆಯಲ್ಲಿ ಸೀಮೆಎಣ್ಣೆ ಸ್ಟೌ ನಲ್ಲಿ ಅಡುಗೆಯಾಗುತ್ತಿತ್ತು.

ಸಾಯಂಕಾಲ ಮನೆಗೆ ಬಂದವನೇ ಅಕ್ಕಿ ತೊಳೆದು ಅಂದಾಜು ಲೆಕ್ಕದಲ್ಲಿ ನೀರು, ಉಪ್ಪು ಹಾಕಿ ಸ್ಟೌ ಮೇಲಿಟ್ಟೆ. ಒಂದಷ್ಟು ಹೊತ್ತಾದ ಮೇಲೆ ಅನ್ನ ಕುದಿಯುವ ಶಬ್ದ ಕೇಳತೊಡಗಿತು. ಪರೀಕ್ಷಿಸಿ ನೋಡಿದರೆ ಅಕ್ಕಿ ಬೆಂದು ಅನ್ನ ಆಗಿದೆ. ಆದರೆ ನೀರು ಹೆಚ್ಚಿಗೆ ಇದ್ದುದರಿಂದ ಬಸಿಯಬೇಕಾಗಿತ್ತು. ಬಸಿಯಲು ತಟ್ಟೆ, ಬಟ್ಟೆ ಇನ್ನೊಂದು ಪಾತ್ರೆ ಜೋಡಿಸಿಕೊಳ್ಳುವಷ್ಟರಲ್ಲಿ ಮನೆ ಬಾಗಿಲು ಬಡಿದಂತಾಯಿತು. ಹೊರಬಂದೆ. ಬಾಗಿಲು ಬಡಿಯುತ್ತಾ ನಿಂತ ಯುವಕ ಅದೇ ಊರಿನ ನನ್ನ ಪರಿಚಯದವರೇ ಆದ ಬಸಣ್ಣರ ಮಗ ಗೋವಿಂದ.

ಅವರ ಜರ್ಸಿ ಹಸುವಿಗೆ ಏಕ್ದಂ ಹುಷಾರು ತಪ್ಪಿದೆ ಎಂದೂ, ಕೂಡಲೇ ಬರಬೇಕೆಂದೂ ತಿಳಿಸಿದ. ಆಗಲಿ ಎಂದು ನಾನು ಅಡುಗೆ ಮನೆಗೋಗಿ ಸ್ಟೌವ್ ಆರಿಸತೊಡಗಿದೆ. ಎಷ್ಟು ಸಲ “ಉಫ್” ಎಂದರೂ ಅದು ಆರಲಿಲ್ಲ. ಕೊನೆಗೆ ಕೈಯಲ್ಲಿ ಒಂದಷ್ಟು ನೀರು ತೆಗೆದುಕೊಂಡು ಛೂ ಮಂತ್ರ ಕಾಳಿ ಎನ್ನುತ್ತ ಸ್ಟೌವ್ ಮೇಲೆ ಚಿಮುಕಿಸಿ ಆರಿಸಿದೆ.

ಅನ್ನದ ಪಾತ್ರೆಯಲ್ಲಿದ್ದ ಹೆಚ್ಚಿಗೆ ನೀರನ್ನು ಬಸಿದೆ. ಪಾತ್ರೆ ತೆಗೆದಿಟ್ಟು ಔಷಧ ಬ್ಯಾಗನ್ನು ಕೈಗೆತ್ತಿಕೊಂಡು ಮನೆ ಬಾಗಿಲಿಗೆ ಬೀಗ ಹಾಕಿ ಬಸಣ್ಣರ ಮನೆ ಕಡೆ ಹೆಜ್ಜೆ ಹಾಕಿದೆ. ಬಸಣ್ಣರ ಮನೆ ಹಿತ್ತಲು ನಮ್ಮನೆಗೆ ಕಾಣುತ್ತಿತ್ತು. ಗೋವಿಂದ ಆಗಲೇ ಮನೆ ಕಡೆ ಓಡಿದ್ದ. ಇದೆಲ್ಲಾ ಆಗುವಷ್ಟರಲ್ಲಿ ಐದಾರು ನಿಮಿಷಗಳಾಗಿರಬಹುದಷ್ಟೆ.

ನಾನು ಬಸಣ್ಣರ ಹಿತ್ತಲು ಮುಟ್ಟಿದೆ. ಕೂಡಲೇ ಒಬ್ಬ ಎಗರಿ ಬಂದವನೇ “ಯಾಕೋ ಈಗ ಬಂದೆ? ಹಸು ಸತ್ತೋದ ಮೇಲೆ ಬಂದಿದಿಯಲ್ಲಲೇ? ಅರ್ಜೆಂಟು ಅಂತ ಹೇಳಿ ಕಳಿಸಿ ಅರ್ಧ ಗಂಟೆಯಾಯ್ತಲ್ಲ ಲೋಫರ್” ಇತ್ಯಾದಿ ಬಯ್ಯುತ್ತಾ ಕೈ ಎತ್ತುತ್ತಾ ಇಳಿಸುತ್ತಾ, ಶರ್ಟಿನ ತೋಳು ಏರಿಸುವುದು, ಮಡಿಸುವುದು ಮಾಡುತ್ತಾ, ಪಂಚೆ ಎತ್ತಿ ಕಟ್ಟುವುದು, ಕೆಳಗೆ ಇಳಿಸುವುದು ಮಾಡುತ್ತಾ, ನನ್ನ ಸುತ್ತ ಸುತ್ತತೊಡಗಿದ.

ಮತ್ತೊಬ್ಬ ಮನೆಯೊಳಗಿಂದ ಬಾಣದಂತೆ ಹೊರಬಂದು “ಡಾಕ್ಟರಂದ್ರೆ ಇಪ್ಪತ್ನಾಲ್ಕು ಗಂಟೆ ರೆಡಿ ಇರಬೇಕಲೇ” ಎಂದು ಕೂಗು ಹಾಕಿದ. ಇನ್ನೂ ಇಬ್ಬರು ಸೇರಿಕೊಂಡ್ರು. ನನ್ನನ್ನು ಮನಸ್ಸಿಗೆ ಬಂದಂತೆ ತಳ್ಳಾಡತೊಡಗಿದರು. ನನಗೆಷ್ಟು ಭಯ, ಗಾಬರಿ, ಅವಮಾನವಾಯಿತೆಂದು ಹೇಳಲಾಗುವುದಿಲ್ಲ. ಇದ್ದಕ್ಕಿದ್ದಂತೆ ಹತ್ತಿಪ್ಪತ್ತು ಜನರ ಗುಂಪು ಜಮಾವಣೆಯಾಯಿತು. ಇಡೀ ಹಿತ್ತಲು ಕೂಗಾಡುವ ಜನರ ದೊಂಬಿ, ಕೂಗಾಟ.

ಅಲ್ಲಿದ್ದ ಯಾವುದೋ ಒಬ್ಬ ಅಜ್ಜ ಮಾತ್ರ “ಈಗೊಂದು ಗಂಟೆಯಿಂದ ನಾಟಿ ಔಷಧ ಮಾಡಿ ನೀವೇ ಟೈಮ್ ವೇಸ್ಟ್ ಮಾಡಿದ್ರಲ್ಲಲೇ! ಈಗ ಡಾಕ್ಟ್ರು ಮೇಲೆ ಜಗಳಕ್ಕೋಗಿದಿರಾ?” ಇತ್ಯಾದಿ ಕೂಗುತ್ತಾ “ಡಾಕ್ಟ್ರ ಮೈ ಮುಟ್ಟಿದರೆ ಜೈಲ್‍ ಪಾಲಾಗ್ತೀರ ಹುಷಾರು!” ಎಂದ. ಮತ್ತೊಬ್ಬರಾರೋ “ಡಾಕ್ಟ್ರೇ, ನೀವು ಮನೆ ಕಡೆ ನಡೀರಿ” ಎಂದು ಹೇಳಿದ.

ನನ್ನನ್ನು ದಬ್ಬುತ್ತಿದ್ದವನೊಬ್ಬ “ನೀನು ತಿಂತಿರೋ ಸಂಬಳ ನಮ್ದು ಕಣಲೇ, ನಿಯತ್ತು ಕಲಿಯಲೇ” ಎಂದು ಕೂಗುತ್ತಿದ್ದ. ಅವನು ಕೂಗಾಡುವಾಗ ಮಾತ್ರ ಕಣ್ಣು ಮುಚ್ಚಿಕೊಳ್ಳುತ್ತಿದ್ದ. ಹೊಡೆಯುವವನಂತೆ ಕೈ ಬೀಸುತ್ತಿದ್ದನೇ ಹೊರತು ಹೊಡೆಯುತ್ತಿರಲಿಲ್ಲ.

ಈ ರೀತಿಯ ಅತಿ ತುರ್ತು ಪ್ರಕರಣಗಳಲ್ಲಿ ನಾವು ಚಿಕಿತ್ಸೆ ಪ್ರಾರಂಭಿಸುವುದಕ್ಕಿನ್ನ ಮುಂಚೆ ಪ್ರಾಣಿ ಸತ್ತು ಹೋದರೂ ಕಷ್ಟ, ನಾವು ಒಂದೋ ಎರಡೋ ಇಂಜೆಕ್ಷನ್ ಕೊಟ್ಟು ಹೋದ ಮೇಲೆ ಸತ್ತು ಹೋದರೆ ಆಗಲೂ ಕಷ್ಟ. “ನೋಡು ಹಸು ಚೆನ್ನಾಗೇ ಇತ್ತು. ಡಾಕ್ಟ್ರು ಬಂದವನೇ ಇಂಜೆಕ್ಷನ್ ಕೊಟ್ಟ. ಕೂಡ್ಲೇ ಸತ್ತೋತು” ಎಂಬ ಮಾತು ಬರ್ತದೆ.

ನನ್ನೆದುರು ಸತ್ತು ಬಿದ್ದಿದ್ದ ಹಸು ಅಸಾಧಾರಣವಾಗಿ ಹೊಟ್ಟೆ ಉಬ್ಬರಿಸಿಕೊಂಡಿತ್ತು. ಕೇವಲ ಅರ್ಧ ಗಂಟೆ ಮುಂಚೆ ಅವರು ನನ್ನ ಬಳಿ ಬಂದಿದ್ದರೆ ರೂಮೆನ್ (ಹೊಟ್ಟೆಯ ಮೊದಲ ಕೋಣೆ) ಪಂಕ್ಚರ್ ಮಾಡಿ ತುಂಬಿಕೊಂಡಿದ್ದ ಗಾಳಿಯನ್ನು ಖಾಲಿ ಮಾಡಿ ಹಸು ಬದುಕಿಸುವ ಅವಕಾಶವಿತ್ತು.

ಹಸು ಬದುಕುತ್ತಿತ್ತೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಪ್ರಾಮಾಣಿಕ ಯತ್ನವನ್ನು ಮಾಡಬಹುದಿತ್ತು. ಹಸು ಖಂಡಿತ ಉಳಿಯುತ್ತಿತ್ತು ಎಂದು ನನ್ನ ಅಂತರಾತ್ಮ ಪಿಸುಗುಡುತ್ತಿತ್ತು. ಯಾಕೆಂದರೆ ಇಂಥ ಪ್ರಕರಣದ ನೂರಾರು ದನ ಎಮ್ಮೆಗಳನ್ನು ಬದುಕಿಸಿದ್ದೆ.

ನಾನು ನಿಧಾನಕ್ಕೆ ಮನೆಯ ಕಡೆ ಹೆಜ್ಜೆ ಹಾಕಿದೆ. ಗುಂಪು ನಿಧಾನಕ್ಕೆ ಚದುರಿ ಹೋಯಿತು. ನನ್ನನ್ನು ದಬ್ಬಿಕೊಂಡು ಬಂದವನು ಬಸಣ್ಣನ ಮತ್ತೊಬ್ಬನ ಮಗನೆಂದು ಆಮೇಲೆ ತಿಳಿಯಿತು. ಅವನು ಯಾವುದೋ ಸರ್ಕಾರಿ ನೌಕರಿಯಲ್ಲಿದ್ದನಂತೆ.

ಸುದ್ದಿ ತಿಳಿದದ್ದೇ ಸಿಬ್ಬಂದಿಯವರೆಲ್ಲ ನನ್ನ ಬಳಿ ಬಂದರರು. ಅವರಿಗೆಲ್ಲ ಬೇಸರವಾಗಿತ್ತು. ಉಳ್ಳಾಗಡ್ಡಿ ಬಸವರಾಜು, ಲಕ್ಷ್ಮಣ ಕುಂಬಾರ್, ಅಬ್ದುಲ್ ಸಾಹೇಬ್, ಇವರು ವೈಯಕ್ತಿಕವಾಗಿ ತಮ್ಮ ಮೇಲೇ ಆದ ಹಲ್ಲೆ ಎಂದು ಭಾವಿಸಿದರು. ನಾನೇನೂ ಅದನ್ನು ಬಹಳ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಆದರೆ ಸಿಬ್ಬಂದಿಯವರು ಮಾತ್ರ ವಾರಗಟ್ಟಲೆ ಶೋಕಾಚರಣೆಯಲ್ಲಿದ್ದಂತೆ ಇದ್ದರು.

ನಂತರ ಬಸಣ್ಣನವರ ಮನೆಯ ಯಾವ ದನ ಎಮ್ಮೆಗಳು ಆಸ್ಪತ್ರೆಗೆ ಬಂದರೂ ಎಚ್ಚರಿಕೆಯಿಂದ, ಕಾಳಜಿಯಿಂದ ನೋಡುತ್ತಿದ್ದೆವು. ಅದು ಹೆದರಿಕೆಯಿಂದಲ್ಲ. ಅವರು ನನ್ನ ಮೇಲೆ ಏರಿ ಬಂದದ್ದು ತಪ್ಪು ಎಂಬುದನ್ನು ಅವರಿಗೇ ಶ್ರುತಪಡಿಸಲು. ಇದಕ್ಕೆ ಮಾತಿಗಿಂತ ಕ್ರಿಯೆಯೇ ಮೇಲು.

ನಮ್ಮ ಬದುಕಲ್ಲಿ ಕೆಲವು ಸಲ ಸನ್ನಿವೇಶಗಳು ನಂಬಲು ಸಾಧ್ಯವಿಲ್ಲದಂತೆ ಸಂಯೋಜನೆಗೊಂಡಿರುತ್ತವೆ. ಹಲ್ಲೆ ಪ್ರಕರಣ ಆದ ಸುಮಾರು ಆರು ತಿಂಗಳ ನಂತರ ನಾನು ಬಸಣ್ಣರ ಮನೆಗೆ ಹೋಗಬೇಕಾಯಿತು. ಅವರದ್ದೊಂದು ಜರ್ಸಿ ಹೆಣ್ಣು ಕರುವಿಗೆ ಹುಷಾರು ತಪ್ಪಿತ್ತು. ಈ ಸಲ ಆಸ್ಪತ್ರೆಗೆ ನನ್ನ ಕರೆಯಲು ಬಸಣ್ಣ ಮಕ್ಕಳ ಬದಲು ತಾನೇ ಬಂದಿದ್ದ. ನಾನು ಹೋದಾಗ ಮನೆಯ ಹಿತ್ತಲಿನಲ್ಲಿ ಕರು ಮಲಗಿಸಿದ್ದರು. ಮೈಯೆಲ್ಲ ತಣ್ಣಗಾಗಿತ್ತು. ಕಣ್ಣುಗಳನ್ನು ಸಹ ತೆರೆಯುತ್ತಿರಲಿಲ್ಲ. ಎದ್ದು ನಿಲ್ಲುವುದಿರಲಿ ಕುಳಿತುಕೊಳ್ಳುವುದಕ್ಕೂ ಸಹ ಅದಕ್ಕೆ ಶಕ್ತಿಯಿರಲಿಲ್ಲ. ಉಸಿರಾಟ, ನಾಡಿ ದುರ್ಬಲವಾಗಿದ್ದವು. ಕೂಡಲೇ ರಕ್ತನಾಳಕ್ಕೆ ಗ್ಲೂಕೋಸ್ ಬಾಟಲಿಯನ್ನು ಏರಿಸಿದೆ. ಸೂಜಿ ಚುಚ್ಚಿದಾಗಲೂ ಕರು ಮಿಸುಕಾಡಲಿಲ್ಲ. ಹನಿ ಹನಿಯಾಗಿ ಔಷಧ ಇಳಿಯತೊಡಗಿತು.

ಕೇಂದ್ರ ನರಮಂಡಲದ ಉತ್ತೇಜಕ (CNS Stimulant) ಮತ್ತು ಕಾರ್ಟಿಜೋನ್ ಔಷಧಗಳನ್ನು ರಕ್ತಕ್ಕೆ ಕೊಟ್ಟೆ. ಕೊಡಬೇಕಾದಷ್ಟು ಪ್ರಮಾಣದ ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಕ್ಯಾಲ್ಸಿಯಂ ಇಂಜೆಕ್ಷನ್ ಸಹ ಕೊಟ್ಟೆ. ಇಷ್ಟೆಲ್ಲಾ ಮಾಡುವಷ್ಟರಲ್ಲಿ ಒಂದೆರಡು ಗಂಟೆಗಳೇ ಆದವು. ಕರು ಸಕಾರಾತ್ಮಕವಾಗಿ ಸ್ಪಂದಿಸದೇ ಹಾಗೆಯೇ ಮಲಗಿತ್ತಷ್ಟೇ ಅಲ್ಲದೆ ಅದರ ಸ್ಥಿತಿ ಇನ್ನಷ್ಟು ಹದಗೆಡುತ್ತಾ ಕೊನೆಗೆ ನನ್ನ ತೊಡೆಯ ಮೇಲೆಯೇ ಪ್ರಾಣ ಬಿಟ್ಟಿತು.

ಯಾರೂ ಒಂದು ಶಬ್ಧ ಮಾತಾಡಲಿಲ್ಲ. ಎಲ್ಲರೂ ಮಾತು ಕಳೆದುಕೊಂಡಿದ್ದೆವು. ನಾನು ಔಷಧದ ಬ್ಯಾಗನ್ನು ಜೋಡಿಸಿಕೊಳ್ಳತೊಡಗಿದೆ. ಹಿಂದೆ ಹಲ್ಲೆ ಮಾಡಿದ್ದ ಮಕ್ಕಳಿಬ್ಬರೂ ಅಷ್ಟು ಹೊತ್ತು ಅಲ್ಲೇ ಇದ್ದರು. ಒಬ್ಬನೂ ಮುಖಕ್ಕೆ ಮುಖ ಕೊಟ್ಟು ನೋಡಲಿಲ್ಲ, ಮಾತಾಡಲಿಲ್ಲ.

ನನಗೆ ಎಂದಿನಂತೆ ಕರು ಬದುಕಿದ್ದರೆ ಒಳ್ಳೆಯದಿತು ಎಂದೆನಿಸುತ್ತಲೇ ಇತ್ತು. ಒಂದು ಜೀವವನ್ನು ಉಳಿಸಿದಂತಾಗುತ್ತಿತ್ತು. ಹಲ್ಲೆ ಮಾಡಿ ಅವಮಾನ ಮಾಡಿದರೂ ಕರು ಉಳಿಸಿಕೊಟ್ಟ ಶ್ರೇಯ ನನ್ನದಾಗುತ್ತಿತ್ತು. ನನ್ನ ಗೆಲುವು ಸಂಪೂರ್ಣವಾಗುತ್ತಿತ್ತು. ಇದರಿಂದ ನಾನು ಅಹಂಕಾರದಿಂದ ಕೊಬ್ಬುತ್ತಿದ್ದೆನೋ ಏನೋ? ಆದರೆ ಕರು ಸತ್ತು ಹೋಗಿತ್ತು. ಆ ಸಾವು ನನ್ನ ಸೋಲಾಗಿತ್ತು. ಸೋಲು ನನ್ನನ್ನು ತಹಬಂದಿಗೆ ತಂದಿತ್ತು.

ನನ್ನ ಮಿತಿಯನ್ನು ತೋರಿಸಿತ್ತು. ಹಾಗಾದರೆ ಕರುವಿನ ಸಾವು ನನ್ನ ವ್ಯಕ್ತಿತ್ವಕ್ಕೆ ಒಳಿತು ಮಾಡಿತೇ? ನಾನು ಸುಧಾರಿಸಲು ಕರು ಸಾಯಬೇಕಿತ್ತೇ? ಅಥವಾ ಕರು ಸಾವಿನಿಂದ ನನ್ನನ್ನು ಅವಮಾನಿಸಿದವರಿಗೆ ತಕ್ಕ ಶಾಸ್ತಿಯಾಯಿತು ಎಂದು ಭಾವಿಸಲೇ? ನಿರಾಯಾಸವಾಗಿ ಸೇಡು ತೀರಿದಂತಾಯಿತು ಎಂದು ತೃಪ್ತಿ ಪಟ್ಟುಕೊಳ್ಳಲೇ? ಛೇ! ಸಾವಿನಲ್ಲಿ ಸೇಡು! ಎಂಥ ದುಷ್ಟ ಯೋಚನೆ!

ಆದರೆ ನಿಜಕ್ಕೂ ಜೀವವೆಂಬುದು, ಸಾವೆಂಬುದು ವೈದ್ಯನ ಕೈಯಲ್ಲಿದೆಯೇ? ಇಡೀ ಜಗತ್ತಿನಲ್ಲಿ ತಾನು ಚಿಕಿತ್ಸೆ ಮಾಡಿದ ಎಲ್ಲ ಜೀವಿಗಳನ್ನೂ ಬದುಕಿಸಿರುವ ಒಬ್ಬ ವೈದ್ಯನನ್ನು ತೋರಿಸಿ ನೋಡೋಣ!!

‍ಲೇಖಕರು Avadhi

December 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Sudhakara

    Exceptional insight and silence filled while reading this story ❤️
    The purpose of literature is to turn blood into ink

    ಪ್ರತಿಕ್ರಿಯೆ
  2. ಮಧು ಬಿ.ಎನ್.

    ನಮ್ಮ ಕೆಲಸದ ಮಿತಿ, ಮನುಷ್ಯನ ಮಿತಿ ‌‌‌ಹಾಗೂ ವಿನಮ್ರತೆಯ ಬೆಲೆ ಎಲ್ಲವನ್ನೂ ಮನದಟ್ಟು ಮಾಡಿಸುವ ಬರಹ

    ಪ್ರತಿಕ್ರಿಯೆ
  3. Dr.Devaraj MB.

    Some incidents do happen beyond our expectations. Just we have to witnesses. Thanks Dr.Basheer.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: