ಬದುಕಿನ ಬಿಡುಗಡೆಗೆ ಸಂಗೀತದ ನಂಟು

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆಹುಡುಕುತ್ತಿದ್ದಾರಂತೆಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ಅದೊಂದು ದಿನ ನಮ್ಮ ಮನೆಗೆ ಅಂಬಾಸಿಡರ್ ಕಾರೊಂದು ಬಂತು. ಅದರಲ್ಲಿ ಸುವರ್ಣಾ ದೀದಿಯಿದ್ದಳು. ತನ್ನ ಕೆಂಪಗಾದ ತುಟಿಗಳನ್ನು ಒರೆಸಿಕೊಳ್ಳುತ್ತಾ ನಮ್ಮ ಮನೆಯೊಳಗೆ ಬಂದಳು. ಮೈ ತುಂಬಾ ಒಡವೆ. ದೊಡ್ಡ ದೊಡ್ಡ ಓಲೆಗಳು. ದುಬಾರಿ ಸೀರೆ.. ಕೈಲಿದ್ದ ಬ್ಯಾಗುಗಳನ್ನು ಅವ್ವನ ಕೈಗಿತ್ತಳು. ಬಾಂಬೆಯಿಂದ ತಂದಿದ್ದ ಸಿಹಿತಿಂಡಿಗಳು, ಹಣ್ಣುಗಳು ಇದ್ದವು. ಅವ್ವ ಅವಳನ್ನು ತಬ್ಬಿ ಮಾತಾಡಿಸಿದಳು. ಕಳೆದ ಐದಾರು ವರ್ಷಗಳ ಹಿಂದೆ ಊರಿಗೆ ಬಂದಿದ್ದ ಗೆಳತಿ ಈಗ ಬಂದಿದ್ದಳು. ಅವ್ವನ ಸಂತೋಷಕ್ಕೆ ಪಾರವೇ ಇಲ್ಲ. 

ಅಣ್ಣನನ್ನು ಕರೆದ ದೀದಿ ಮಟನ್ ತರಲು ದೊಡ್ಡ ನೋಟನ್ನೇ ಕೈಗಿತ್ತಳು. ಹೊತ್ತೊತ್ತಿಗೂ ಹಸಿವು ಮುಚ್ಚಲು ಹೆಣಗಾಡುತ್ತಿದ್ದ ಕುಟುಂಬ ನಮ್ಮದು. ಇವಳ ಹತ್ತಿರ ಇರೋ ಹಣ, ಒಡವೆ, ದರ್ಬಾರಿನ ಜೀವನ ಕಣ್ಣು ಕೋರೈಸುತ್ತಿತ್ತು. 

ಅವ್ವ ಅಪ್ಪನ ಅಕಾಲಿಕ ಸಾವಿನ ಬಗ್ಗೆ ಹೇಳಿಕೊಂಡು ಗೊಳೋ ಅಂದಳು. ಮನೆಯ ಪರಿಸ್ಥಿತಿಯನ್ನು ಗೋಳುಗುಡುತ್ತಲೇ ತೆರೆದಿಟ್ಟಳು. ನನಗೆ ನಿನ್ನ ಗಂಡನ ಸಾವಿನ ವಿಚಾರ ತಿಳಿಯಿತು, ಅದಕ್ಕೆ ನಿನ್ನನ್ನು ನೋಡೋಣ ಅಂತ ಬಂದೆ ಅಂದಳು. ಅವ್ವನಿಗೆ ಅವಳು ತನ್ನನ್ನು ನೋಡಲು ಬಂದದ್ದೆ ಭಾಗ್ಯದ ಬಾಗಿಲು ತೆರೆದಂತಾಗಿತ್ತು. ಅಣ್ಣ, ಆಂಟಿ ಬಾಂಬೆಯಲ್ಲಿ ನೀವು ಏನು ಮಾಡುತ್ತಿದ್ದೀರಿ ಅಂದ. ಅವಳು ಕ್ಷಣವೂ ಯೋಚಿಸದೆ ‘ದೊಡ್ಡ ಸಂಗೀತದ ಸ್ಟುಡಿಯೋ ನಡೆಸುತ್ತಿದ್ದೇನೆ ಗುರು’ ಅಂದಳು. ಹಾಗಿದ್ರೆ ನಮ್ಮ ಗುರುವನಿಗೂ ಏನಾದರೂ ಕೆಲಸ ಕೊಟ್ಟು ನಮ್ಮ ಮನೆಯ ಬೆಳಗಿಸೇ ತಾಯಿ ಅಂತ ಅವ್ವ ಕೋರಿಕೆ ಮುಂದಿಟ್ಟಳು.

ಆಯ್ತವ್ವ, ಆದರೆ ನಿನ್ನ ಮಗನಿಗೆ ಅಲ್ಲಿ ಕೆಲಸ ಕೊಡೋಕ್ಕಾಗೋಲ್ಲ, ನಿನ್ನ ಮಗಳಿಗೆ ಕೆಲಸ ಕೊಡ್ತೀನಿ, ಅವಳನ್ನು ದೊಡ್ಡ ಮನುಷ್ಯಳಾಗಿ ತಯಾರುಮಾಡೋ ಹೊಣೆ ನಂದೇ ಐತಿ ಅಂದಳು. ಮಗಳು ಅಂದಾಗ ಸ್ವಲ್ಪ ಅಳುಕಿದ ಅವ್ವ ಮರುಕ್ಷಣವೇ ನಿರ್ಧರಿಸಿದಂತೆ, ಆಯ್ತು ಬಿಡು ಮಗ ಇಲ್ಲೇ ಹೊಲದ ಕೆಲಸ ಮಾಡುತ್ತಾನೆ. ಮಗಳಾದರೂ ಬಾಂಬೆ ಪೇಟೆಯಲ್ಲಿ ಉದ್ಯೋಗ ಮಾಡಲಿ, ನೀನಿರುವಾಗ ನಮಗೇನು ಭಯ ಅಂತ ಹೇಳಿ ಬಿಟ್ಟಳು. ಅಣ್ಣ ಮಾತ್ರ ಕೊಸರಾಡಿದ. ತಂಗೀನ ಯಾಕವ್ವ ಕಳಿಸ್ತೀ, ಅಷ್ಟು ದೊಡ್ಡ ಪೇಟೇಲಿ ಅವಳು ಹೆಂಗೆ ಹೊಂದ್ಕೊಳ್ತಾಳೆ? ಸಂಗೀತದ ಮೇಷ್ಟ್ರು ಅವಳನ್ನು ಚೆನ್ನಾಗಿ ಹಾಡೋ ಹಂಗೆ ಸಂಗೀತ ಕಲಿಸ್ತೀನಿ ಅಂತ ಹೇಳೌರೆ, ಅಂದ. 

ಅಷ್ಟೊತ್ತಿಗೆ ಪರಿಸ್ಥಿತಿ ಉಲ್ಟಾ ಆಗಿಬಿಡಬಹುದು ಅಂತ ದೀದಿ, ಕೂಡಲೇ ಅಣ್ಣನಿಗೆ ಆವಾಜ್  ಹಾಕಿದ್ಲು, ಏ ಮಗಾ, ಅವಳು ಚಂದ ಹಾಡ್ತಾಳೆ ಅಂತ ತಿಳಿದೇ ನಾನು ಬಂದಿರೋದು, ಅವಳಿಗೆ ಸಂಗೀತ ಕಲಿಸಿ ಸಿನಿಮಾಗಳಲ್ಲಿ ಹಾಡಿಸ್ತೀನಿ ಅಂತ ಅವನ ಬಾಯಿ ಮುಚ್ಚಿಸಿದಳು. ನಾನು ಮತ್ತೆ ಮತ್ತೆ ಬರಕಾಗಂಗಿಲ್ಲ, ಮಲ್ಲೀನ ಈಗಲೇ ಹೊರಡಿಸು ಕರ್ಕೊಂಡು ಹೋಗ್ತೀನಿ, ಆರು ತಿಂಗಳು ಕಳೆದು ನಾನೇ ಕರ್ಕೊಂಡು ಬರ್ತೀನಿ, ಆಗ ನೀನೂ ಬೇಕಾದರೆ ಬರೂವಿಂತೆ.. ಮನಸ್ಸಿಲ್ಲದ ಮನಸ್ಸಿನಿಂದ ಅವ್ವ ನೊಂದುಕೊಂಡು ನನ್ನ ಹರುಕು ಪರಕು ತೆಗೆದು ಉಳಿದ ಒಂದೆರಡು ಜೊತೆ ಬಟ್ಟೆ ಬ್ಯಾಗಿಗೆ ತುರುಕಿದಳು. ಅಣ್ಣನ ಮುಖವೂ ಬಾಡಿತ್ತು. 

ನನಗೆ ದಿಕ್ಕೇ ತೋಚಲಿಲ್ಲ, ಸುವರ್ಣ ದೀದಿ ಐಶ್ವರ್ಯ ನೋಡಿ ಮುಂದೊಂದು ದಿನ ನಾನು ಹೀಗೆ ಸಂಪಾದಿಸಿ ಅವ್ವ ಮತ್ತು ಅಣ್ಣನನ್ನು ಈ ಊರೇ ಆಶ್ಚರ್ಯಪಡುವಂತೆ ನೋಡ್ಕೋಬೇಕು. ಅದಕ್ಕೆ ಈ ನೋವು ನುಂಗಲೇ ಬೇಕು ಅಂತ ನಿರ್ಧರಿಸಿ ಅವಳೊಂದಿಗೆ ಹೊರಟೆ.

ಅವ್ವನನ್ನು, ಅಣ್ಣನನ್ನು ಬಿಗಿದಪ್ಪಿ ಅಂದು ಹೊರಟವಳು ಇನ್ನೆಂದೂ ಅವರ ಸ್ಪರ್ಶವನ್ನೇ ಮಾಡಲಿಲ್ಲ. ಆದರೂ ನನ್ನ ಕಣಕಣದಲ್ಲೂ ಅವರ ನೆನಪು ಹರಿಯುತ್ತಲೇ ಇತ್ತು.. ಕಣ್ಣೀರಾಗಿ!!!

ಮಾರನೇ ದಿನ ನನ್ನನ್ನು ನವವಧುವಿನಂತೆ ಶೃಂಗರಿಸಿದ್ದರು. ಸುವರ್ಣ ದೀದಿಯೂ ನನಗೆ ಅದೇನೇನೋ ಪಾಠ ಹೇಳುತ್ತಿದ್ದಳು. ನನಗೇನೂ ಅರ್ಥವಾಗುತ್ತಿರಲಿಲ್ಲ. ಊರಿಗೆ ಬಂದಾಗ ಅವ್ವನೊಂದಿಗೆ ಇವಳು ನಡೆದುಕೊಂಡಿದ್ದಕ್ಕೂ, ಈಗಿನ ಇವಳ ವರ್ತನೆಗೂ ತುಂಬಾ ವ್ಯತ್ಯಾಸಗಳಿದ್ದವು. ಕಣ್ಣುಗಳಲ್ಲಿ ಮಮತೆ ಇರಲಿಲ್ಲ. ಮಾತುಗಳು  ಮೆದುವಾಗಿರಲಿಲ್ಲ. ಜಡ್ಡುಗಟ್ಟಿದ ಮನಸ್ಸಿನಂತೆ ನನಗೆ ತೋರುತ್ತಿತ್ತು. ಊರಲ್ಲಿ ನನ್ನ ಹಾಡು ನೃತ್ಯದ ಬಗ್ಗೆ ಮಾತನಾಡುತ್ತಿದ್ದವಳು ಈಗ ಅದರ ಸೊಲ್ಲೇ ಇಲ್ಲ!

ಒಳಗೆ ಬಂದ ಅಪರಿಚಿತರಿಗೆ ದೀದಿ ನನ್ನನ್ನು ಪರಿಚಯಿಸಿದಳು. ಅವಳೊಂದಿಗೆ ಅವರು ಅದೇನೇನೋ ಮಾತಾಡುತ್ತಲೇ ಇದ್ದರು. ನಾನು ಒಳಗೆ ಅಂತರ್ಧಾನಿತಳಾದೆ.  ಯಾಕೋ ಎಲ್ಲವೂ ನಾನಂದು ಕೊಂಡಂತೆ ಆಗುತ್ತಿಲ್ಲ ಅನ್ನಿಸುತ್ತಿತ್ತು. ಒಳಗೆ ಬಂದ ದೀದಿ ನನ್ನನ್ನು ರಮಿಸುತ್ತಾ ಅವರ ಜೊತೆಯಲ್ಲಿ ಹೋಗಲು ತಿಳಿಸಿದಳು. ನಾನು ಪ್ರಶ್ನಾರ್ಥಕವಾಗಿ ನೋಡಿದೆ. ಅಯ್ಯೋ ನಿನ್ನ ಏಳ್ಗೆಗಾಗಿಯೇ ನನ್ನ ಪ್ರಯತ್ನ. ಅವರು ಬೇರೆ ಯಾರೂ ಅಲ್ಲ, ನನ್ನ ಅತ್ಯಂತ ಆತ್ಮೀಯರು ಅವರು ನಿನ್ನನ್ನು ಹೆಸರಾಂತ ಸಂಗೀತಗಾರರ ಹತ್ತಿರ ಕೊಂಡೊಯ್ಯುತ್ತಾರೆ. ಸಂಗೀತ ನಿನ್ನ ಉಸಿರಾಗಬೇಕು, ಹಾಗೆ ಅಭ್ಯಾಸ ಮಾಡು. ಹಾಡು ಸಂಗೀತ ಅಂತ ತುಂಬಾ ಹೊತ್ತು ಮಾತನಾಡಿದ್ಲು. 

ಮುಂದೆ ನಾನೊಬ್ಬ ಹಾಡುಗಾರ್ತಿಯಾಗಿ ಬೆಳೆಸುವ ಇಚ್ಛೆ ಈ ದೀದಿಗೆ ಇರೋ ಬಗ್ಗೆ ಹೆಮ್ಮೆಯೆನಿಸಿತು. ಮನಸ್ಸು ಕೂಡ ಅವಳ ಮಾತುಗಳನ್ನು ಒಪ್ಪಿತ್ತು. ಬೇರೆ ದಾರಿಯಾದರೂ ಏನಿತ್ತು?? ಸರಿ ಹೊರಟೆ. ಅವರಿಬ್ಬರೂ ಗಂಡ-ಹೆಂಡತಿಯರು ಇರಬಹುದೆಂದು ತಿಳಿದಿದ್ದೆ. ಹೆಚ್ಚು ಮಾತಿಲ್ಲ. ಸುಮಾರು 100-150 ಕಿಲೋಮೀಟರ್ ಪ್ರಯಾಣ. ಮನೆಯೊಂದರ ಮುಂದೆ ಕಾರು ನಿಂತಿತು. ಇಳಿದು ಅವರನ್ನು ಹಿಂಬಾಲಿಸಿದೆ. ಒಳ ಪ್ರವೇಶಿಸಿದಾಗ ಅಚ್ಚರಿಯಾಯಿತು.

ನಾನು ಅಷ್ಟೊಂದು ಕೊಠಡಿಗಳಿರುವ, ದೊಡ್ಡ ಹಜಾರದ ಮನೆಯನ್ನೇ ನೋಡಿರಲಿಲ್ಲ! ಒಳಹೋಗಿ ಹಜಾರದಲ್ಲಿ ಕುಳಿತೆವು. ಎಲ್ಲವೂ ಅಪರಿಚಿತ.. ಎಲ್ಲವೂ ವಿಸ್ಮಯ. ಇದ್ಯಾವುದೋ ದೊಡ್ಡ ಊರೆಂಬುದು ಕಾರು ಬಂದ ಹಾದಿಯಲ್ಲಿ ಗೊತ್ತಾಯ್ತು. ಆದರೆ ಇವರ್ಯಾರು? ಇಲ್ಲಿಗೆ ಯಾರ ಹತ್ತಿರ ಬಂದಿದ್ದೀನಿ? ನನ್ನ ಬಗ್ಗೆ ಇವರಿಗೆಲ್ಲ ಯಾಕೀ ಕಾಳಜಿ? ಅಯ್ಯೋ ನನ್ನ ತಲೆ ಸಿಡಿದು ಹೋಳಾಗ್ತಿದೆ ಅನ್ನಿಸ್ತಿತ್ತು.

ಸ್ವಲ್ಪ ಹೊತ್ತಾದಮೇಲೆ ಒಳಗಿನಿಂದ ಒಂದು ದಢೂತಿ ಹೆಂಗಸು ಬಂತು. ಆಯಮ್ಮನ ಗತ್ತು, ವೇಷಭೂಷಣ ಮತ್ತೆ ನನ್ನನ್ನು ಗಾಬರಿ ಹುಟ್ಟಿಸಿತ್ತು. ಅವಳ ಹಿಂದೆಯೇ ಒಬ್ಬ ಸಾಧಾರಣ ಹೆಂಗಸೂ ಬಂದಳು. ನನ್ನನ್ನು ಕೈಹಿಡಿದು ಒಳ ಕರೆದಳು. ಆದರೆ ನಾನು ಕೊಸರಾಡಿದೆ. ನೂರಾರು ಕಿಲೋಮೀಟರ್ ದೂರ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಬಂದಿದ್ದ ಅವರಿಬ್ಬರನ್ನು ಬಿಟ್ಟು ಹೋಗಲು ಮನಸ್ಸಾಗಲಿಲ್ಲ. ಅವರು ಕುಳಿತಲ್ಲೇ ಸಂಜ್ಞೆ ಮಾಡಿದರು, ನಾವೂ  ಬರುತ್ತೇವೆ ನೀನು ಒಳಹೋಗು ಅಂತ. ಆಗ ಸಮಾಧಾನ ಆಯ್ತು. ಅವಳ ಜೊತೆ ಒಳಹೋದೆ. ಊರಿಂದ ತಂದಿದ್ದ ನನ್ನ ಬ್ಯಾಗು ನನ್ನ ಜೊತೆಯಲ್ಲೇ ಇತ್ತು. ಒಳ ಹೋದವಳಿಗೆ ಚಹಾ ಮತ್ತು ತಿಂಡಿ ಕೊಟ್ಟರು. ಹಸಿವಾಗಿತ್ತು ತಿಂದೆ.  ಚಹಾ ಹಿತವಾಗಿತ್ತು. ಅವರೂ ಒಳ ಬರುವುದನ್ನು ಕಾಯುತ್ತಾ ಕುಳಿತೆ.

ಮುಸ್ಸಂಜೆಯಾಗಿತ್ತು.. ಅವರ ಸುಳಿವಿಲ್ಲ. ಗಾಬರಿಯಾಗಿ ಹೊರಬಂದು ನೋಡಿದೆ. ಹಜಾರ ಮೌನವಾಗಿತ್ತು. ಅಲ್ಲಿ ಯಾರ ಸುಳಿವೂ ಇರಲಿಲ್ಲ. ಹೃದಯ ಬಡಿತ ಜೋರಾಯಿತು. ಯಾವುದೋ ಅಪಾಯದ ಸುಳಿವು ನನಗೆ ಸಿಕ್ತಾ ಇತ್ತು. ಅವರೆಲ್ಲಿ? ಅಂತ ಜೋರಾಗಿ ಕಿರುಚಿಕೊಂಡೆ. ಮತ್ತೆ ಆ ಹೆಂಗಸು ಹೊರಗೆ ಬಂತು, ಆಶ್ಚರ್ಯ ಅಂದರೆ ಕನ್ನಡದಲ್ಲಿ ಮಾತಾಡಿದ್ದು! ನೀನು ಒಳಗೆ ಹೋಗು ಮಗಳೇ, ಅವರು ನಿನ್ನನ್ನು ನನ್ನ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ ಹೇಮಾ! ಅಂದಳು. ಹೇಮಾ ಇದು ನನ್ನ ಹೆಸರಲ್ಲ, ನನ್ನ ಹೆಸರು ಮಲ್ಲಿ.. ಮಲ್ಲವ್ವ ಎಂದೆ. ಅವರು ನಿನಗೆ ಹೇಮಾ ಎಂದು ಹೆಸರಿಟ್ಟಿದ್ದಾರೆ, ನಾನು ಹಾಗೆ ಕರೆಯುತ್ತೇನೆ ಎಂದಳು.

ನನಗೆ ಸಿಟ್ಟು ನೆತ್ತಿಗೇರಿತ್ತು. ನೀವು ಯಾಕೆ ನನ್ನನ್ನು ಕರೆಯಬೇಕು, ನಾನು ನನ್ನ ಊರಿಗೆ ಹೋಗ್ತೀನಿ, ದುಃಖದ ಕಟ್ಟೆ ಒಡೆಯಿತು.. ಈ ಅಪರಿಚಿತ ಮುಖಗಳ ನೋಡೋಕೆ ಸಾಧ್ಯವೇ ಇಲ್ಲ ಅನ್ನಿಸಿ ಜೋರಾಗಿ ಅಳೋಕೆ ಶುರು ಮಾಡಿದೆ. ಅವಳು ಕ್ಯಾರೇ ಎನ್ನಲಿಲ್ಲ. ಅತ್ತೂ ಅತ್ತು ಮನಸ್ಸು ದಣಿದಿತ್ತು. ತುಂಬಾ ಹೊತ್ತಾದ ಬಳಿಕ ಒಂದು ಕೋಣೆಯ ಬಾಗಿಲು ತೆರೆಯಿತು. ಒಳಗಿನಿಂದ ನನ್ನಷ್ಟೇ ಅಥವಾ ಸ್ವಲ್ಪ ಹೆಚ್ಚು ಕಮ್ಮಿ ಪ್ರಾಯದ ಇಬ್ಬರು ಹುಡುಗಿಯರು ಬಂದು ಪಕ್ಕದಲ್ಲಿ ಕುಳಿತರು. ಅದರಲ್ಲಿ ಒಬ್ಬಳು ಕನ್ನಡ  ಮಾತಾಡಿದ್ಲು. ಯಾಕೆ ಹೇಮಾ ಇಲ್ಲಿ ಕುಳಿತಿದ್ದೀಯ? ಅಂದ್ಲು. ನನಗೆ ರೇಗಿ ಹೋಯ್ತು. ಆ ಹೆಂಗಸು ನನ್ನ ಹೆಸರು ಹೇಮಾ ಅಂತ ಹೇಳಿ ಇವರನ್ನು ಕಳಿಸಿದ್ದಾರೆ ಅಂತ ಗೊತ್ತಾಯ್ತು. ಬಾ ನಮ್ಮ ರೂಮಿಗೆ ಹೋಗೋಣ, ನಾನು ಹಿಂಬಾಲಿಸಿದೆ. 

ಇವರ ಹತ್ತಿರ ಎಲ್ಲ ಹೇಳ್ಕೊಂಡು ಊರಿಗೆ ವಾಪಸ್ ಹೋಗಬೇಕು ಅಂತ ಮಾತು ಶುರು ಮಾಡಿದೆ. ನನ್ನ ಮಾತನ್ನು ಅರ್ಧದಲ್ಲಿಯೇ ತಡೆದ ಕನ್ನಡದ ಹುಡುಗಿ ಅವಳೇ ಮಾತಾಡೋಕೆ ಶುರು ಮಾಡಿದ್ಲು. ಹೇಮಾ ನಿನ್ನ ಹೆಸರೇನು? ಮಲ್ಲಿ ಎಂದೆ. ಅದಕ್ಕೆ ಅವಳು ಇನ್ನು ಮುಂದೆ ನಿನ್ನನ್ನು ಯಾರೂ ಮಲ್ಲಿ ಅಂತ ಕರೆಯೋಲ್ಲ, ಅಷ್ಟೇ ಅಲ್ಲ ನಿನ್ನ ಹೆಸರನ್ನು ನೀನೇ ಮರೆತು ಹೋಗ್ತೀಯ.. ನನ್ನಂತೆ ಅಂದಳು. 

ಸರಿಯಾಗಿ ಕೇಳಿಸಿಕೋ, ನೀನು ಯಾರ ಜೊತೆ ಬಂದೆಯೋ, ಏನಂತ ಕರ್ಕೊಂಡು ಬಂದರೋ ಅದ್ಯಾವುದು ಇಲ್ಲಿ ಕೆಲಸ ಮಾಡಲ್ಲ. ಇಲ್ಲಿಂದ ಊರಿಗೆ ಹೋಗಿ ಬಿಡಬೇಕು ಅಂತ ಯೋಚನೆ ಮಾಡಬೇಡ. ನಾವು ಕೂಡ ಇಲ್ಲಿಗೆ ಬಂದ ದಿನ ಹಾಗೆ ಯೋಚಿಸಿದ್ದೆವು. ಈ ಜೀವನದಲ್ಲಿ ಅದು ಸಾಧ್ಯವಿಲ್ಲ ಅಂದಳು. ನಾನು ಅವಳನ್ನು ಕೆಕ್ಕರಿಸುತ್ತಾ ಯಾಕೆ? ಎಂದೆ. ಯಾಕೆಂದರೆ ನೀನು ಈಗಾಗಲೇ ಮೂರು ನಾಲ್ಕು ಬಾರಿ ಮಾರಾಟ ಆಗಿದ್ದೀಯಾ. ಇಲ್ಲಿಗೆ ಬರೋ ಹೊತ್ತಿಗೆ ದಲ್ಲಾಳಿಗಳಿಂದ ನಿನ್ನ ರೇಟು ತುಂಬಾ ಆಗಿರುತ್ತೆ.  ನಿನ್ನನ್ನು ಕೊಂಡುಕೊಂಡಿರೋಳು, ಅಂದರೆ ಈ ಮನೆಯ ಒಡತಿ ಅಸಾಧ್ಯವಾದವಳು. ನೀನು ನೋಡಿದ್ಯಲ್ಲ ಯಾರೂ ಇಲ್ಲದ ಹಜಾರ.. ಅದು ಸುಳ್ಳು. ಅಲ್ಲಿ ಅಡಿಗಡಿಗೂ  ಕಾವಲು ಕಾಯುವ ದೈತ್ಯರಿದ್ದಾರೆ. ನಿನ್ನ ಸ್ವಾಗತಕ್ಕೆ ಒಂದೆರಡು ಗಂಟೆ ಹಾಗೆ ಸೆಟ್ ಮಾಡಿದ್ಲು ಅಷ್ಟೇ, ನಿನ್ನನ್ನು ಇಲ್ಲಿಗೆ  ಹೊಂದಿಕೊಳ್ಳುವಂತೆ ಮಾಡೋ ಕೆಲಸ ನನಗೆ ವಹಿಸಿದ್ದಾಳೆ.

ನನಗೆ ಕನ್ನಡ ಬರುತ್ತೆ ಅಂತ. ಇದು ಯಾವೂರು? ಕೇಳಿದೆ. ಪೂನಾ ಅಂದಳು. ತಲೆ ತಿರುಗಿತ್ತು. ಮೂರ್ಛೆ ಬಂದು ಬೀಳುವಂತಾಯ್ತು. ಹೃದಯ ಚೀರಿತ್ತು. ಅವ್ವಾ.. ಅಂತ ಚೀರಿದೆ. ಈ ಸಮಾಜ ಅಂದುಕೊಳ್ಳುತ್ತದೆ.. ಅಲ್ಲಿಗೆ ಹೋದವರು ಪಾರಾಗಿ ಬರುವ ಪ್ರಯತ್ನ ಮಾಡಬಹುದಿತ್ತು ಅಂತ. ಹೇಮಾ, ಆದರೆ ಇಲ್ಲಿಗೆ ಬಂದ ಪ್ರತಿಯೊಬ್ಬರೂ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡೇ ಮಾಡಿರ್ತಾರೆ. ಏಕೆಂದರೆ ಇಲ್ಲಿಗೆ ಬರೋವರ್ಗೂ ನಾವೆಲ್ಲಿಗೆ ಬಂದಿದ್ದೇವೆ ಅಂತ ಗೊತ್ತಾಗೋದೇ ಇಲ್ಲ. ನಾನೂ ಕರ್ನಾಟಕದ ಒಂದು ಬರದ ಊರಿನವಳೇ. ನಿನ್ನಂತದ್ದೇ ಕತೆ ನನ್ನದೂ ಕೂಡ. ಇಲ್ಲಿರುವ 22 ಹುಡುಗಿಯರ ಕಥೆಯೂ ಹೆಚ್ಚು-ಕಮ್ಮಿ ಒಂದೇ. 

ಇಲ್ಲಿಂದ ಪಾರಾಗಲು ಮಾಡಿದ ಪ್ರಯತ್ನದಿಂದಾಗಿ ಶಾಶ್ವತವಾದ ಈ ಶಿಕ್ಷೆ ಅನುಭವಿಸಿದ್ದೀನಿ ಅಂತ ತನ್ನ ಕಾಲು ಮಂಡಿ ಚಿಪ್ಪು ಕೆಳಸರಿದಿದ್ದನ್ನೂ, ಬೆನ್ನಿನ ಮೇಲಿನ ಕಲೆಯನ್ನೂ ತೋರಿಸಿದ್ಲು. ಹೆದರಿಸ್ತಿದ್ದೀಯಾ ಎಂದೆ. ಇಲ್ಲ ಇರೋ ವಿಷಯ ಹೇಳ್ತಿದ್ದೀನಿ, ಅನ್ಯಾಯವಾಗಿ ನೀನು ಇಂತಹ ಯಾವುದಾದರೂ ಶಿಕ್ಷೆ ಅನುಭವಿಸುವ ಬದಲು ಹೊಂದಿಕೊಂಡು ಬಿಡು ಅಂತ ಅಷ್ಟೇ. ಅಷ್ಟೊತ್ತಿಗೆ ಬಾಗಿಲು ಬಡಿದ ಶಬ್ದ. ಸಾಕು ಮಾತಾಡಿದ್ದು ತಲೆಗೆ ತುಂಬಾ ತುಂಬಿಸಬೇಕು, ಸರಿ ನಿಮಗೆ ಹೊತ್ತಾಯ್ತು ರೆಡಿಯಾಗಿ, ಅಂತ ಹೇಳಿ ಹೋದ್ರು ಅಂತ ಕನ್ನಡಕ್ಕೆ ಹೇಳಿದಳು ಆ ಹುಡುಗಿ.

ಅವರು ಒಳಗಡೆ ರೆಡಿಯಾಗ್ತಿದ್ರು. ನಾನು ಸುಮ್ಮನೆ ಕುಸಿದು ಕುಳಿತೆ. ಮನಸ್ಸು ಇಲ್ಲಿಂದ ಓಡಿ ಹೋಗೋದನ್ನೇ ಯೋಚನೆ ಮಾಡುತ್ತಿತ್ತು. ಹೋದ್ರೆ ಇವತ್ತೇ ಯಾಮಾರಿಸಿ ಓಡಿ ಬಿಡಬೇಕು ಅಂದುಕೊಂಡೆ. ಮನಸ್ಸು ಎಲ್ಲಾ ಲೆಕ್ಕಾಚಾರ ಹಾಕ್ತಿತ್ತು. ಮೆದುಳು ಐಡಿಯಾ ಕೊಡುತ್ತಿತ್ತು. ಬ್ಯಾಗನ್ನು ಅಲ್ಲೇ ಬಿಟ್ಟು ಮೆಲ್ಲನೆ ಎದ್ದು ಹೊರ ಬಂದೆ. ಯಾರೂ ಕಾಣಲಿಲ್ಲ. ಹೊಸ್ತಿಲ ಕಡೆ ಮುಖ ಮಾಡಬೇಕು, ಅಷ್ಟರಲ್ಲಿ ಒಬ್ಬ ದಢೂತಿ ಮುದುಕ ಏಯ್ ಎಂದ.  ಚಪ್ಪಲ್ ಎಂದೆ ಕಾಲುಗಳನ್ನು ತೋರಿಸುತ್ತಾ.. ನಾನು ಚಪ್ಪಲಿಯನ್ನು ಒಳಗೆ ಹಾಕಿಕೊಂಡು ಬರೋಕೆ ಹೋದೆ ಎಂದುಕೊಂಡ. ನಾನು ಬ್ಯಾಗನ್ನು ರೂಮಲ್ಲೇ ಬಿಟ್ಟಿದ್ದು ಅದೆಷ್ಟು ಒಳ್ಳೇದಾಯ್ತು ಅಂದ್ರೆ ಅವನಿಗೆ ಅನುಮಾನವೇ ಬರಲಿಲ್ಲ ಅಥವಾ ಯಾಮಾರಿದನೋ..

ಹೊರಗೆ ಎರಡೆಜ್ಜೆ ಪಾದವೂರಿದ್ದೇ ತಡ.. ಓಡಿದೆ.. ಓಡಿದೆ ಜೀವನಕ್ಕಾಗುವಷ್ಟು ಓಡಿದೆ!! ಸಂದಿ, ಗೊಂದಿ ದಾಟಿ ಅದೆಷ್ಟು ಓಡಿದೆನೋ.. ನನ್ನವ್ವ ಕೊಟ್ಟ ಬ್ಯಾಗು ನನ್ನನ್ನು ಕಾಪಾಡಿತ್ತು.. ಪಾಪ ತಾನು ಬಲಿಯಾಗಿ, ಸುಮಾರು ಐದಾರು ಕಿಲೋಮೀಟರ್ ಗಿಂತಲೂ ದೂರ ಬಂದಿದ್ದೆ. ನನ್ನನ್ನು ಕೊಂಡುಕೊಂಡವಳು, ನನಗೆ ನಕಲಿ ಹೆಸರಿಟ್ಟವಳು ಅದೇನಾದ್ರೋ.. ಓಣಿ ಓಣಿ ತಿರುಗಿ ಬಂದ ನನ್ನನ್ನಂತೂ ಬಿಟ್ಟುಬಿಟ್ಟರು!! 

ದಣಿವಾಗಿತ್ತು. ಇನ್ನು ಹೆಜ್ಜೆ ಇಡಲಾರೆ ಅಂತ ಕಾಲುಗಳು ಪಟ್ಟು ಹಿಡಿದಿದ್ವು. ಅಲ್ಲೊಂದು ಚಹಾ ಅಂಗಡಿ ಮುಂದೆ ಕುಳಿತೆ. ಆಸೆಗಣ್ಣುಗಳಿಂದ ನೋಡಿದೆ. ಅದೇನನ್ನಿಸಿತೋ ಒಂದು ಕಪ್ ಚಹಾ ಕೊಟ್ಟ. ಏನೋ ಕೇಳಿದ, ಕನ್ನಡ ಅಂದೆ. ತಲೆ ಅಲ್ಲಾಡಿಸಿದ‌‌. ಮರಾಠಿ ಅಂದೆ. ಹೂಂ ಅಂದ. ನನ್ನ ಅರುಕು ಮುರುಕು ಬೆಳಗಾವಿ ಮರಾಠಿ ಕೆಲಸಕ್ಕೆ ಬಂತು ಅಂದ್ಕೊಂಡೆ. ಚಹಾ ಕೊಟ್ಟ ಋಣಕ್ಕೆ ಒಳ್ಳೆಯವನಂತೆ ಕಂಡ ಅವನಿಗೆ ನನ್ನ ಕಥೆಯನ್ನೆಲ್ಲಾ ಹೇಳ್ಕೊಂಡೆ. 

ಭಯದಲ್ಲೇ ಇದ್ದೀನಿ ನನ್ನ ಊರಿಗೆ ಕಳುಹಿಸಿಕೊಡು ನಿನ್ನ ಕಾಲಿಗೆ ಬೀಳ್ತೀನಿ ಅಂದೆ. ಅವನು ಒಪ್ಪಿದಂತೆ ಕತ್ತಾಡಿಸಿದ. ನಾನು ನಿರಾಳವಾಗಿ ಉಸಿರುಬಿಟ್ಟೆ. ಸದ್ಯ ಇನ್ನೊಂದು ಜನ್ಮ ಬಂದಂತಾಯಿತು ಅಂದುಕೊಂಡೆ. ಅವನು ಅಂಗಡಿ ಮುಚ್ಚಿ ನನ್ನನ್ನು ಕರೆದುಕೊಂಡು ಹೊರಟ. ನಾಳೆ ಊರಿಗೆ ಹೊರಡಲು ವ್ಯವಸ್ಥೆ ಮಾಡ್ತೀನಿ ಅಂತ ಹೇಳಿದ.  ಆಟೋವೊಂದರಲ್ಲಿ ಕುಳಿತವನು ಸುಮಾರು ಹತ್ತು-ಹನ್ನೆರಡು ಕಿಲೋಮೀಟರ್ ಕರ್ಕೊಂಡು ಹೋದ. ನನಗೆ ಮತ್ತೆ ಭಯ ಶುರುವಾಯಿತು. ನನ್ನ ಅಂದಾಜು ಸರಿಯಿತ್ತು.  ಮನೆಯೊಂದರ ಮುಂದೆ ನನ್ನನ್ನು ಇಳಿಸಿದ.

ಅವನೂ ಒಳಗೆ ಬಂದು ನನ್ನನ್ನು ಪರಿಚಯಿಸಿದ. ಇವಳು ಮಾಲಾ ಅಂತ, ಕನ್ನಡದವಳು ಅಂದ. ನಾನು ಮಾಲಾ ಅಲ್ಲ ಅಂತ ಕಿರುಚ್ಕೊಂಡೆ. ಬಾಯಿ ಮುಚ್ಚು ಅಂದ. ಅವನು ಕೊಟ್ಟ ಒಂದು ಟೀ ಬನ್ನಿಗೆ ಯಾಮಾರಿ ಬಿಟ್ಟೆನಲ್ಲ ಅಂತ ನನ್ನ ಬುದ್ಧಿಗೆ ಶಾಪ ಹಾಕಿದೆ. ಈ ಜಗತ್ತು ಎಲ್ಲವೂ ಮಾರಾಟಕ್ಕೆ ಇದೆಯಾ!! ಅನ್ನಿಸಿತು. ಅದೇನೇನೋ ಮಾತಾಡಿ ನನಗೂ ಹೇಳದೆಯೇ ಹೊರಟುಹೋದ. ಕೊಸರಾಡಲು ಅವಕಾಶವೇ ಇರಲಿಲ್ಲ. ಈಗ ಬಂದಿದ್ದು ಮಾತ್ರ ಭದ್ರಕೋಟೆಯೇ ಸರಿ. ಇಲ್ಲಿ ಇದ್ದವರೆಲ್ಲರೂ ಘರ್ವಾಲಿಗಳ ಥರಾನೇ ಇದ್ರು. ನನ್ನನ್ನು ಒಂದು ಕೋಣೆಗೆ ಹೋಗು ಅಂದ್ರು. 

ಇಡೀ ಜೀವನವೇ ಮುಗಿದಂತೆ, ಸ್ಮಶಾನಕ್ಕೆ ಹೊರಟ ಹೆಣದಂತೆ ಹೊರಟೆ. ಪ್ರತಿ ರಾತ್ರಿಯೂ ಅಲಂಕರಿಸಿಕೊಂಡು ಎಲ್ಲಾ ಹುಡುಗಿಯರೊಂದಿಗೆ ಸಣ್ಣ ಸ್ಕರ್ಟು, ಕೆಂಪು ಲಿಫ್ಟಿಕ್ ಹಾಕಿ ಬೀದಿಯಲ್ಲಿ ಸಾಲು ಮಾಡಿ ನಿಲ್ಲುವುದನ್ನು ಕಲಿತೆ. ನನ್ನ ದೇಹವೂ ದಿನಕಳೆದಂತೆ ಒಗ್ಗಿಹೋಗಿತ್ತು. ನನ್ನ ಕನಸಿನ ಪ್ರಪಂಚ ಮಾತ್ರ ಚೂರುಚೂರಾಗಿ ತನ್ನನ್ನೇ ಕೊಂದುಕೊಂಡು ಬಿಟ್ಟಿತ್ತು. ಎಷ್ಟೋ ಬಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಆದರೂ ಆ ಧಾಂಡಿಗರು ನನ್ನ ಕೂದಲೆಳೆದು ಹೆಡೆಮುಡಿ ಕಟ್ಟಿದ್ದರು. ಲೆದರ್ ಬೆಲ್ಟಿನಿಂದ  ಹೊಡೆದ ನೋವು ಶಾಶ್ವತವಾಗಿ ಹೆಪ್ಪುಗಟ್ಟಿಬಿಡ್ತು. 

ಪ್ರತಿದಿನವೂ ಹತ್ತು-ಹನ್ನೆರಡು ಗಂಡಸರಿಂದ ಅತ್ಯಾಚಾರಕ್ಕೊಳಗಾಗ್ತಿದ್ದೆ. ಯಾಕೆಂದರೆ ನಾವು ಈ ಗಂಡಸರು ಖರೀದಿಸುವ ಮಾಂಸದಂತಿದ್ದೇವೆಯೇ ಹೊರತು ನಮಗೆ ಅಸ್ತಿತ್ವವೇ ಇಲ್ಲ. ನನ್ನ ದೇಹದ ಮೇಲಾಗುವ ಯಾವ ಆಕ್ರಮಣವೂ ಅವರನ್ನು ವಿಚಲಿತರನ್ನಾಗಿಸುವುದೇ ಇಲ್ಲ. ಆದರೆ ಇಲ್ಲಿಂದ ತಪ್ಪಿಸಿಕೊಳ್ಳಲಾಗದಂತೆ ಕಣ್ಗಾವಲಿತ್ತು. ನನ್ನ ಮೇಲೆ ಸ್ವಲ್ಪ ಹೆಚ್ಚೇ ಇತ್ತು. ಆ ಟೀ ವಾಲಾ  ಕೊನೆಗೂ ನನ್ನಿಂದ ದುಡ್ಡು ಮಾಡಿಕೊಂಡ, ನನ್ನ ಬಗ್ಗೆ ಹುಷಾರಾಗಿರಲೂ ಅವರಿಗೆ  ಹೇಳಿಯೂ ಹೋಗಿದ್ದ. ಇಲ್ಲಿದ್ದ ಎಲ್ಲ ಹುಡುಗಿಯರದೂ ಇದೇ ಸ್ಥಿತಿ. ಆದಷ್ಟು ಈ ಘರ್ವಾಲಿ ನಮ್ಮನ್ನು ಪ್ರತ್ಯೇಕವಾಗಿಯೇ ಇಡುತ್ತಿದ್ದಳು. ಪರಸ್ಪರ ಯಾರೂ ಮಾತಾಡುವಂತಿಲ್ಲ. ನಾವು ಗುಂಪುಕಟ್ಟಿ ಕೊಳ್ಳಬಹುದು ಅಥವಾ ಸ್ನೇಹಿತರಾಗಿಬಿಡಬಹುದೆಂಬ ಹೆದರಿಕೆ ಅವಳಿಗೆ. 

ಈ ಎಲ್ಲಾ ಹೋರಾಟದ ನಡುವೆ ಒಬ್ಬ ಮಗಳು ಹುಟ್ಟಿದಳು. ಅವಳೇ ನನ್ನ ಜೀವಿತದ ನಿಧಿಯಾದಳು. ನನ್ನ ಬದುಕಿನ ಹಾದಿಯಾಗಬಹುದಾದ ಸಂಗೀತ ನನಗೆ ಒಲಿಯಲಿಲ್ಲ.. ನನ್ನ ಮಗಳಿಗೆ ಸಂಗೀತ ಅಂತ ಹೆಸರಿಟ್ಟೆ. ಅವಳನ್ನು ಬೆಳೆಸಿದ್ದು, ಅವಳನ್ನು ಸಂಭಾಳಿಸಿದ್ದೇ ಒಂದು ದುಸ್ಸಾಹಸ. ಘರ್ವಾಲಿ ನಮಗೆ ಮಕ್ಕಳಾಗುತ್ತಿದ್ದಂತೆ ಮೆಲ್ಲನೆ ಆಚೆ ಹೋಗಲೂ ಅನುಮತಿಸುತ್ತಿದ್ದಳು. ನಮಗಿಂತಲೂ ಹೊಸ ಹೊಸ ಮಾಲುಗಳಿಗೆ ಅವಕಾಶ ನೀಡಬೇಕಿತ್ತು. 

ಕೊನೆಗೂ ಪಿಂಪ್ ಒಬ್ಬನ ಸಹಾಯ ಪಡೆದು ಘರ್ವಾಲಿಯನ್ನು ಒಪ್ಪಿಸಿ ನಾನೂ ಒಂದು ಚಿಕ್ಕ ಕೋಣೆ ಮಾಡಿಕೊಂಡೆ. ಮಗುವನ್ನು ಅಲ್ಲಿ ಬಿಟ್ಟು ಲಾಡ್ಜ್ ಗಳಲ್ಲಿ ಅಥವಾ ವೇಶ್ಯಾಗೃಹಗಳಲ್ಲಿ ಬಾಡಿಗೆಯಾಧಾರಿತ ವೃತ್ತಿ ಮಾಡಲು ಶುರು ಮಾಡಿದೆ. ನಾನು ಬದುಕುವುದಾದರೆ ನನ್ನ ಮಗಳಿಗೆ ಹೊಸ ಬದುಕು ರೂಪಿಸಲು ಮಾತ್ರ ಬದುಕುತ್ತೇನೆ ಎಂದು ಶಪಥ ಮಾಡಿದೆ. ಹಗಲೂ-ರಾತ್ರಿಯೆನ್ನದೆ ಗಿರಾಕಿಗಳಿಗೆ ಮೈಯ್ಯೊಡ್ಡಿದೆ. ಎಲ್ಲಾ ಚಟಗಳಿಂದ ದೂರವಾಗುತ್ತಿದ್ದೆ. ಮಗಳು ಬೆಳೆದಂತೆಲ್ಲಾ ನನ್ನ ಲೋಕದಿಂದ ಮೆಲ್ಲಗೆ ಮರೆಮಾಚುತ್ತಲೇ ಬಂದೆ. ನನ್ನ ಮಗಳಿಗೆ ನಾನು ಲೈಂಗಿಕವೃತ್ತಿ ಮಾಡುವೆನೆಂದು ತಿಳಿದಿತ್ತು. ಅವಳ ಸಂಕಟ ಸವಾಲಾಗಿ ಪರಿವರ್ತನೆಯಾಗಿತ್ತು.

ಆ ದಿನ ನನ್ನ ಬದುಕಿಗೂ ಸೂರ್ಯೋದಯವಾಗಿತ್ತು. ವಸಂತ ಋತುವಿನ ಚಿಗುರಿನ ಘಮಲು ಬಡಿದಿತ್ತು. ನನ್ನ ಮಗಳು 10ನೇ ತರಗತಿ ತೇರ್ಗಡೆಯಾಗಿದ್ದಳು. ಅವಳ ಆ ರಿಸಲ್ಟ್ ನಮ್ಮಿಬ್ಬರ ಬದುಕಿನ ದೌರ್ಜನ್ಯಕ್ಕೆ ಸೆಡ್ಡು ಹೊಡೆದ ಗೆಲುವಾಗಿತ್ತು. ಮನಸ್ಸು ಆಕಾಶದೆತ್ತರಕ್ಕೆ ಹಾರಿತ್ತು. ನನ್ನ ಬದುಕಿಗೂ ಅರ್ಥವಿದೆ ಎನಿಸಿತ್ತು. ಆದರೂ ಸುದ್ದಿ ಮಾಡಲೇ ಇಲ್ಲ, ಯಾಕೆಂದರೆ ನನ್ನ ಮಗಳು ಇದ್ದಾಳೆ ಎಂದರೆ ಹದ್ದುಗಳು ಹಾರಾಡಿ ಬಿಡುವ ಭಯದಿಂದ ಮಗಳನ್ನು ಕತ್ತಲಲ್ಲೇ ಬೆಳೆಸಿದೆ. ಮಗಳು ನನ್ನ ನೋವುಗಳ ಅಡಿಪಾಯದ ಮೇಲೆ ಬೆಳೆದಿದ್ದಳು. ಸದೃಢವಾಗಿದ್ದಳು. ಮನೋಬಲದ ಧೀಮಂತೆಯಾಗಿದ್ದಳು. ಎಲ್ಲಾ ತಾಕಲಾಟ, ತಳಮಳಗಳ ಸೌಧವನ್ನು ಒಳಗೇ ಕಟ್ಟಿಕೊಂಡೇ ಈ ಸಮಾಜಕ್ಕೆ ಛಾಟಿ ಏಟು ನೀಡಿದ್ದಳು. 

ಅಪ್ಪನ ಕಾಲಂ ನಲ್ಲಿ ಮೃತ ಅಂತ ತುಂಬಿಸುತ್ತಲೇ ವಿದ್ಯಾಭ್ಯಾಸ ಮುಗಿಸಿದಳು. ಮತ್ತೊಂದು ದಿನ ನನಗೆ.. ಸೂರ್ಯೋದಯವಾಗಿತ್ತು. ಮಗಳು ಕೆಲಸದ ಆರ್ಡರ್ ಹಿಡಿದು ಬಂದಿದ್ದಳು. ಸರ್ಕಾರದ ಡ್ರಗ್ ಹೌಸ್ ನಲ್ಲಿ ಮೇಲ್ವಿಚಾರಕಿಯಾಗಿ ಆಯ್ಕೆಯಾಗಿದ್ದಳು. ಕೀವುಗಟ್ಟಿದ ಕತ್ತಲ ಕೋಣೆಯಂತಿದ್ದ ನನ್ನ ಮನೆಯನ್ನು ಬಿಟ್ಟು, ಹೊಸ ಬೀದಿಯಲ್ಲಿ ಹೊಸದಾದ ಪುಟ್ಟಮನೆ ಮಾಡಿದಳು. ಏನು ಮಾತನಾಡದೆಯೂ  ನನ್ನನ್ನು ನಿಧಾನ..ವಾಗಿ ಜೀತ ಮುಕ್ತಳನ್ನಾಗಿಸುತ್ತಿದೆ ಎನ್ನುವ ಭಾವವೇ ನನಗೊಂದು ಬದುಕನ್ನು ತೆರೆದಿಟ್ಟಿತ್ತು.

ಮಗದೊಂದು ದಿನ ನನ್ನ ಕನಸಿನ ತೆರೆಗಳು ಅಪ್ಪಳಿದ ತೊಡಗಿದವು. ಮಗಳು ನನ್ನ ಕೈಗೊಂದು ಗುರುತಿನ ಚೀಟಿಯಿಟ್ಟಳು. ಚಕಿತಳಾಗಿ ನೋಡಿದೆ. ನನ್ನನ್ನು ಸಂಗೀತ ಶಾಲೆಗೆ ಸೇರಿಸಿದ್ದಳು. ತನ್ನ ಹೆಸರಿನ ಜಾಗದಲ್ಲಿ *ಮಲ್ಲಿ …..ಮಲ್ಲವ್ವ ಮಾದರ್* ಎಂದಿತ್ತು. ನಾನು ಮಗುವಾದೆ. ಮಗಳ ಮಡಿಲಲ್ಲಿ ತಲೆಯಿಟ್ಟು ಜೀವನವಿಡೀ ಕಟ್ಟಿಕೊಂಡ ದುಃಖದ ಕೋಡಿ ಹರಿಸಿದ್ದೆ.

‍ಲೇಖಕರು ಲೀಲಾ ಸಂಪಿಗೆ

December 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: