ವಿ ಆರ್ ಕಾರ್ಪೆಂಟರ್ ಅವರ ‘ಅಪ್ಪನ ಪ್ರೇಯಸಿ’

ಅಪ್ಪನ ಪ್ರೇಯಸಿ ವಿ ಆರ್ ಕಾರ್ಪೆಂಟರ್ ಅವರ ಮೊದಲ ಕಾದಂಬರಿ. ಹೊಸ ತಲೆಮಾರಿನ ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿ ಈಗಾಗಲೇ ಗುರುತಿಸಿಕೊಂಡಿರುವ ವಿ ಆರ್ ಕಾರ್ಪೆಂಟರ್ ಈಗಾಗಲೇ ಹಲವು ಕವನ ಸಂಕಲನಗಳನ್ನು, ಕಥಾ ಸಂಕಲನಗಳನ್ನು ಬರೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಟ್ರಾವೆಲ್ ಗ್ರಾಂಟ್ ಕೂಡ ಪಡೆದು ಉತ್ತರಾಖಂಡ ರಾಜ್ಯದ ಪ್ರವಾಸ ಕೂಡ ಕೈಗೊಂಡಿದ್ದರು.

ಅಪ್ಪನ ಪ್ರೇಯಸಿ ಕೊಳಚೆ ಪ್ರದೇಶದಂತಹ ಜಾಗದಲ್ಲಿ ನೆಲೆಸಿರುವ ಬಡಜನರ ಬದುಕಿನ ಕತೆಯೆಂದೂ ಹೇಳಬಹುದು. ಸಮಾಜದ ತೀರಾ ಕೆಳಸ್ತರದಲ್ಲಿರುವವರ ಸಂಬಂಧಗಳು ಮೇಲ್ದರ್ಜೆಯಲ್ಲಿ ನಿಂತು ನೋಡುವವರಿಗೆ ತೀರಾ ವಿಚಿತ್ರ ಎಂದು ಅನಿಸಬಹುದು. ಇದೇನು ಮಗನಿಗಿಂತ ತೀರಾ ಚಿಕ್ಕ ವಯಸ್ಸಿನ ಮಗನ ಪ್ರೇಯಸಿಯನ್ನೇ ಅಪ್ಪ ಮೋಡಿ ಮಾಡಿ ಅವಳ ಜೊತೆ ಓಡಿಹೋಗುವುದೂ ಎಲ್ಲಾದರೂ ಇದೆಯೇ ಎಂದು ಯೋಚಿಸಬಹುದು. ಮನುಷ್ಯನ ಪ್ರತಿನಿತ್ಯದ ಮನೋವ್ಯವಹಾರಗಳಲ್ಲಿ ಎಲ್ಲವೂ ಸಾಧ್ಯ. ಮನೋವ್ಯವಹಾರಗಳಿಗೆ ಬಡವ ಶ್ರೀಮಂತ ಎಂಬ ಭೇದಭಾವವಿಲ್ಲ.

ಮನೋವಿಶ್ಲೇಷಣಶಾಸ್ತ್ರದಲ್ಲಿ ಈಡಿಪಸ್ ಕಾಂಪ್ಲೆಕ್ಸ್ ಎಂಬ ಒಂದು ಪ್ರತಿಪಾದನೆ ಇದೆ. ಇದನ್ನು ಪ್ರತಿಪಾದಿಸಿದವನು ಜಗತ್ ಪ್ರಸಿದ್ದ ಮನೋವೈದ್ಯ ಸಿಗ್ಮಂಡ್ ಫ್ರಾಯ್ಡ್. ಇದು ಅವನ ಬಹುಮುಖ್ಯ ಪ್ರತಿಪಾದನೆಗಳಲ್ಲಿ ಒಂದು. ಇದರ ಪ್ರಕಾರ ಬಹಳಷ್ಟು ಮನುಷ್ಯರ ಸುಪ್ತಾವಸ್ಥೆಯಲ್ಲಿ ತಮ್ಮ ಪೋಷಕರ ಅದರಲ್ಲೂ ವಿರುದ್ಧ ಲಿಂಗಿ ಪೋಷಕರ ಮೇಲೆ ಪ್ರತಿಯೊಬ್ಬರಿಗೂ ಏನೋ ಒಂದು ಕುತೂಹಲವಿರುತ್ತದೆ. ಅಂದರೆ ಮಗನಿಗೆ ತನ್ನ ತಾಯಿಯ ಮೇಲೆ ಅಥವಾ ಮಗಳಿಗೆ ತನ್ನ ತಂದೆಯ ಮೇಲೆ ಕುತೂಹಲ ಸಾಮಾನ್ಯ.

ಸಿಗ್ಮಂಡ್ ಫ್ರಾಯ್ಡ್ ತನ್ನ ಪ್ರತಿಪಾದನೆಯನ್ನು ಜಗತ್ತಿಗೆ ತಿಳಿಸಲು ಆಯ್ಕೆ ಮಾಡಿಕೊಂಡ ಕತೆಯ ಆಧಾರದ ಮೇಲೆ ಈ ವಾದವನ್ನು ತಿಳಿಸಿದ್ದಾನೆ. ಅವನ ಪ್ರಕಾರ ಗ್ರೀಕ್ ಇತಿಹಾಸದಲ್ಲಿ ಬರುವ ದೊರೆ ಈಡಿಪಸ್ (Oedipus Rex, ಅಥವಾ Oedipus Tyrannus) ತನ್ನ ತಂದೆಯನ್ನು ಕೊಂದು, ತಾಯಿಯನ್ನು ಮದುವೆಯಾಗುವ ಅಪರೂಪದಲ್ಲಿ ಅಪರೂಪದ ಪ್ರಸಂಗದ ಮೂಲಕ ಆಕೆಯಲ್ಲಿ ಮಕ್ಕಳನ್ನು ಪಡೆಯುತ್ತಾನೆ. ಆ ಕಾಲಕ್ಕೂ ಈ ಕಾಲಕ್ಕೂ ಇದನ್ನು ಯಾವ ನಾಗರೀಕ ಪ್ರಪಂಚವೂ ಒಪ್ಪಿಲ್ಲ. ಜಗತ್ತಿನಾದ್ಯಂತ ಇಡೀ ಮನುಷ್ಯ ವರ್ಗ ಇದನ್ನು ಪಾಪದ ಕೆಲಸ ಎಂದು ಪರಿಗಣಿಸುತ್ತದೆ. ಆದರೆ, ಇದು ಪ್ರಾಣಿಗಳಲ್ಲಿ ಸರ್ವೇ ಸಾಮಾನ್ಯ ವಿಷಯ. ಇದನ್ನೇ ಸಿಗ್ಮಂಡ್ ಫ್ರಾಯ್ಡ್ ಈಡಿಪಸ್ ಕಾಂಪ್ಲೆಕ್ಸ್ ಎಂದು ಕರೆದಿದ್ದಾನೆ.

ಈಡಿಪಸ್ ತನಗೆ ತಿಳಿಯದೇ ಈ ಕೃತ್ಯವನ್ನು ಮಾಡಿರುತ್ತಾನೆ. ಸತ್ಯ ಗೊತ್ತಾದಾಗ ಕೊನೆಗೆ ಅದು ಮಹಾಪಾಪವೆಂದು ದುಃಖ ಮತ್ತು ಪಶ್ಚಾತ್ತಾಪಗಳಲ್ಲಿ ಮುಳುಗುತ್ತಾನೆ. ತಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತವೆಂದರೆ ತನ್ನ ಕಣ್ಣುಗಳನ್ನೇ ಕಳೆದುಕೊಳ್ಳಲು ಯೋಚಿಸುತ್ತಾನೆ. ಅದನ್ನೇ ಮಾಡುತ್ತಾನೆ. ಈ ರೀತಿ ಈಡಿಪಸ್ ತನ್ನ ತಾಯಿಯೊಡನೆ ಹೊಂದಿದ ಲೈಂಗಿಕ ಸಂಬಂಧ ಎಂಬುದು ಸಾಂಕೇತಿಕವಾಗಿ ಮನುಷ್ಯನ ಅಂತರಂಗದಲ್ಲಿ ಅಡಗಿರುವ ಸುಪ್ತಬಯಕೆಯನ್ನು ತೋರಿಸುತ್ತದೆ ಎಂಬುದು ಸಿಗ್ಮಂಡ್ ಫ್ರಾಯ್ಡ್ ನ ಮಹತ್ತರವಾದ ಅಭಿಮತ.

ಇದನ್ನೇ ಮನೋವೈದ್ಯರುಗಳು ಮುಂದೆ ತಾಯಿಯ ಜೊತೆ ಮಗ ಲೈಂಗಿಕ ಸಂಪರ್ಕ ಹೊಂದುವುದು ಅಥವಾ ಮಗಳು ತಂದೆಯ ಜೊತೆ ಸಂಬಂಧವೊಂದುವುದು ಅಥವಾ ಅಪ್ಪನ ಪ್ರೇಯಸಿಯ ಜೊತೆ ಮಗ ಸಂಬಂಧ ಹೊಂದುವುದು ಮಗನ ಪ್ರೇಯಸಿಯ ಅಥವಾ ಮಗಳ ಪ್ರೇಯಸಿಯ ಜೊತೆ ಪೋಷಕರು ಸಂಬಂಧ ಹೊಂದುವುದು ಎಲ್ಲವೂ ಈಡಿಪಸ್ ಕಾಂಪ್ಲೆಕ್ಸ್ ನ ಭಾಗವೇ ಆಗಿದೆ ಎಂದು ಹೇಳುತ್ತಾರೆ.

ಇದು ಮನೋಶಾಸ್ತ್ರದ ವ್ಯವಹಾರ. ಆದರೆ, ಮನುಷ್ಯನ ಪ್ರತಿನಿತ್ಯದ ವ್ಯವಹಾರಗಳಲ್ಲಿ ಇದು ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಎಲ್ಲರೂ ಮನೋಶಾಸ್ತ್ರವನ್ನು ಓದಿರುವುದು ಇಲ್ಲ. ಸಮಾಜದ ಕೆಳಸ್ತರದಲ್ಲಿ ಬದುಕುವವರಿಗೆ ಇದರ ಅವಶ್ಯಕತೆಯೂ ಇರುವುದಿಲ್ಲ. ಅವರ ಮೂಲಭೂತ ಆದ್ಯತೆ ಆ ದಿನದ ಊಟ. ಊಟ ಸಿಕ್ಕ ಮೇಲೆ ಉಳಿದವುಗಳ ಆದ್ಯತೆ. ಊಟ, ನಿದ್ರೆ ಮತ್ತು ಮೈಥುನಗಳು ಬದುಕಿನ ಆದ್ಯತೆ. ಇವು ಬಡವರಿಗೆ ಬೇರೆ ಶ್ರೀಮಂತರಿಗೆ ಬೇರೆಯಾಗಿರುವುದಿಲ್ಲ. ಶ್ರೀಮಂತರಲ್ಲಿ ಮಡಿವಂತಿಕೆ ಹೆಚ್ಚು ಇರಬಹುದು. ಬಡವರಲ್ಲಿ ಅದು ಇರುವುದಿಲ್ಲ ಎಂದು ಹೇಳಬಹುದು. 

ಈ ಕಾದಂಬರಿಯ ಆರಂಭದಲ್ಲಿ ವಿ ಆರ್ ಕಾರ್ಪೆಂಟರ್ ಅಮೆರಿಕಾದ ಕವಯತ್ರಿ ಸಿಲ್ವಿಯಾ ಪ್ಲಾತ್ ಳ ಪ್ರಖ್ಯಾತ ಕವಿತೆ “ಡ್ಯಾಡಿ” ಯ ಕೆಲವು ಸಾಲುಗಳನ್ನು ನೀಡಿದ್ದಾರೆ. ಇದನ್ನು ಅವರು ಉದ್ದೇಶ ಪೂರ್ವಕವಾಗಿ ನೀಡಿದ್ದಾರೋ ಅಥವಾ ತಮ್ಮ ಕಾದಂಬರಿಯ ಅಪ್ಪನನ್ನು ಬೈಯ್ಯುವ ಹಾಗೆ ಇದೆ ಎಂದೋ ಕೊಟ್ಟಿದ್ದಾರೋ ತಿಳಿಯುವುದಿಲ್ಲ.

There’s a stake in your fat black heart  
And the villagers never liked you.
They are dancing and stamping on you.  
They always knew it was you.
Daddy, daddy, you bastard, I’m through.

ಆದರೆ ಸಿಲ್ವಿಯಾ ಪ್ಲಾತ್ ಳ ಈ ಕವಿತೆ ಜಗತ್ತಿನ ಸಾಹಿತ್ಯದಲ್ಲಿ ಅಲ್ಲೊಲ್ಲ ಕಲ್ಲೋಲವೆಬ್ಬಿಸಿದ ಕವಿತೆ. ಕಾರಣ ಇದನ್ನು ಈಡಿಪಸ್ ಕಾಂಪ್ಲೆಕ್ಸ್ ನ ಸ್ತ್ರೀಲಿಂಗ ರೂಪವಾದ ಎಲೆಕ್ಟ್ರಾ ಕಾಂಪ್ಲೆಕ್ಸ್ ಬಗ್ಗೆ ತಿಳಿಸುತ್ತದೆ ಎಂದು ಹಲವಾರು ವಿಮರ್ಶಕರು ಹೇಳುತ್ತಾರೆ. ಕೆಲವರು ಕವಿತೆಯಲ್ಲಿ ಬರುವ ಹುಡುಗಿ ತನ್ನ ಪತಿಯಲ್ಲಿ ತನ್ನ ತಂದೆಯನ್ನು ಹುಡುಕುತ್ತಿದ್ದಾಳೆ ಎಂದು ಇನ್ನು ಕೆಲವರು ಇದು ಸ್ತ್ರೀವಾದದ ಪದ್ಯವೆಂದು ಹೇಳುತ್ತಾರೆ. ಇನ್ನು ಕೆಲವರು ಪುರುಷ ಸಮಾಜದ ದಬ್ಬಾಳಿಕೆಯನ್ನು ವಿರೋಧಿಸುವ ಕವಿತೆ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಸಿಲ್ವಿಯಾ ಪ್ಲಾತ್ ಳಿಗೆ ತಂದೆಯ ಮೇಲಿದ್ದ ಅತೀಯಾದ ಪ್ರೀತಿಯೇ ಅವನ ಮರಣ ನಂತರ ಅವಳ ಬದುಕಲ್ಲಿ ನಿರರ್ಥಕ ಭಾವವನ್ನು ಸೃಷ್ಟಿಸಿತು. ಆ ಕಾರಣದಿಂದ ನನ್ನನ್ನು ನಡುನೀರಿನಲ್ಲಿ ಬಿಟ್ಟು ಹೋದ ಎಂಬ ಭಾವವನ್ನು ಸೃಷ್ಟಿಸಿದ್ದರಿಂದ ಜೊತೆಗೆ ತಾನು ಅತೀಯಾಗಿ ನಂಬಿದ್ದ ಗಂಡ ಕೂಡ ಬೇರೊಂದು ಹೆಣ್ಣಿನ ಸಹವಾಸ ಮಾಡಿದ್ದರಿಂದ ಅವಳಿಗೆ ಈ ರೀತಿ ಕವಿತೆ ಬರೆಯುವಂತೆ ಪ್ರೇರಣೆಯಾಯಿತು ಎಂದು ಹೇಳುತ್ತಾರೆ. 

If I’ve killed one man, I’ve killed two
The vampire who said he was you  
And drank my blood for a year,
Seven years, if you want to know.
Daddy, you can lie back now.

ಕೊನೆಯ ಸಾಲುಗಳಲ್ಲಿ ಪ್ಲಾತ್ ತನ್ನ ವ್ಯಭಿಚಾರಿ ಗಂಡನನ್ನ ಮತ್ತು ತನ್ನ ತಂದೆಯನ್ನು ಮನುಷ್ಯತ್ವವಿಲ್ಲದ ರಕ್ತ ಪಿಶಾಚಿಗಳಾಗಿದ್ದರು ಅವರನ್ನು ಕೊಂದುಬಿಟ್ಟೆ ಎಂದು ಹೇಳುವ ಪ್ರಸಂಗ ಬರುತ್ತದೆ. ಆದರೆ ಪ್ಲಾತ್ ಳ ನಿಜ ಬದುಕಿನಲ್ಲಿ ಅವಳ ಗಂಡ ವ್ಯಭಿಚಾರಿಯಾದರೂ ತಂದೆ ಅವಳ ಅತೀಯಾದ ಪ್ರೀತಿಗೆ ಪಾತ್ರವಾಗಿರುತ್ತಾನೆ. ಅವಳ ತಂದೆ ಅವಳಿನ್ನು ಬಾಲಕಿಯಿರುವಾಗಲೇ ಸತ್ತು ಹೋಗಿರುತ್ತಾನೆ. ಅವನ ಅಗಲಿಕೆ ಅವಳ ಬಾಲ್ಯದ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ ವಿಪರ್ಯಾಸವೆಂಬಂತೆ ಕವಿತೆಯಲ್ಲಿ ಬರುವ ಅದೇ ತಂದೆಯನ್ನು bastard ಎಂದು ಕರೆಯುತ್ತಾಳೆ. ಆ ಪದ ಕನ್ನಡದಲ್ಲಿ ಸೂಳೆ ಮಗ ಎಂದು ಆಗುತ್ತದೆ.

ಪ್ಲಾತ್ ಳ ಕವಿತೆಯಾಧಾರದ ಮೇಲೆ ಈ ಕಾದಂಬರಿಯ ಬಗ್ಗೆ ಹೇಳುವುದಾದರೆ ತನ್ನ ಪ್ರೇಯಸಿಯನ್ನು ಅಪಹರಿಸಿದ ಅಪ್ಪನನ್ನು ಕಥಾನಾಯಕ ಸೂಳೆ ಮಗನೇ ಎಂದು ಕರೆಯುತ್ತಾನೆ ಎಂದು ಊಹಿಸಬಹುದು. ತನ್ನ ತಂದೆಯನ್ನೇ ಸೂಳೆಮಗ ಎಂದು ಕರೆದಾಗ ಮೂಡುವ ಅರ್ಥಗಳು ಏನೆಲ್ಲಾ ಆಗಬಹುದು?

ಪ್ರಪಂಚದಾದ್ಯಂತ ಬಹಳಷ್ಟು ಹುಡುಗಿಯರು ತನ್ನ ತಂದೆಯನ್ನು ಹೆಚ್ಚು ಪ್ರೀತಿಸುತ್ತಾರೆ. ತಮ್ಮ ತಂದೆಯನ್ನು ಒಬ್ಬ ಹೀರೊ ಎಂದು ಭಾವಿಸಿರುತ್ತಾರೆ. ಯಾವುದೋ ಕಾರಣಕ್ಕೆ ಅವಳ ತಂದೆ ತೀರಿ ಹೋದಾಗಲೋ ಅಥವಾ ದೂರವಿದ್ದಾಗಲೋ ಇನ್ನೊಬ್ಬ ತನ್ನ ತಂದೆಯ ವಯಸ್ಸಿನ ವ್ಯಕ್ತಿ ತನ್ನ ತಂದೆಯಷ್ಟೆ ಪ್ರೀತಿ ತೋರಿಸಿದರೆ ಅವರು ಅವನಲ್ಲಿ ಅನುರಕ್ತಳಾಗುವ ಸಂಭವವೂ ಹೆಚ್ಚು.

ಜಗತ್ಪ್ರಸಿದ್ದ ಲೇಖಕ ವ್ಲಾಡಿಮೀರ್ ನಬಕೋವ್ (Vladimir Nabokov) ತನ್ನ ಅತೀ ಪ್ರಖ್ಯಾತ ಮತ್ತು ಅಷ್ಟೇ ಕುಖ್ಯಾತ ಕಾದಂಬರಿ “ಲೋಲಿತ” ದಲ್ಲಿ ಇದನ್ನೇ ಬರೆದಿದ್ದಾನೆ. ಅಲ್ಲಿಯೂ ಅಪ್ರಾಪ್ತ ಬಾಲಕಿಯೊಬ್ಬಳು ನಡುವಯಸ್ಸಿನ ವ್ಯಕ್ತಿಯೊಬ್ಬನ ಜೊತೆ ದೈಹಿಕ ಸಂಬಂಧದಲ್ಲಿ ಮುಳುಗುವುದನ್ನು ಚಿತ್ರಿಸಿದ್ದಾನೆ.

ಈ ಕಾದಂಬರಿಯಲ್ಲಿ ಬೆಂಗಳೂರಿನ ಒಂದು ಹಳೆಯ ಮರಮುಟ್ಟುಗಳನ್ನು ಮಾರುವ ವ್ಯಾಪಾರಿಯೊಬ್ಬನ ಹತ್ತಿರ ಕೆಲಸ ಮಾಡುತ್ತಿದ್ದ ಮೂರ್ತಿಯ ಅಪ್ಪ ಇದ್ದಕ್ಕಿದ್ದಂತೆ ಕಾಣೆಯಾಗುತ್ತಾನೆ. ಅವನು ಎಲ್ಲಿಗೆ ಹೋದ ಏಕೆ ಹೋದ ಎಂಬುದೇ ಕಾದಂಬರಿಯ ವಸ್ತು. ಮೂರ್ತಿಗೆ ಒಬ್ಬಳು ಪ್ರೇಯಸಿ ಇರುತ್ತಾಳೆ. ಅದು ಮೂರ್ತಿಯ ಮನೆ ಹತ್ತಿರವೇ ಇರುವ ಪೀಟರ್ ಎಂಬುವನ ಮಗಳು ರೂಪ. ಆ ರೂಪ ಮೂರ್ತಿಯ ತಂಗಿಯರ ಜೊತೆ ಇವರ ಮನೆಯಲ್ಲಿಯೇ ಆಟವಾಡುತ್ತಿರುತ್ತಾಳೆ. ಇವನು ಅವಳಿಗೆ ಸೈಕಲ್ ಓಡಿಸುವುದನ್ನು ಕಲಿಸಿರುತ್ತಾನೆ. ಅವಳು ಒಂದು ರೀತಿ ಹುಬ್ಬಲ್ಲು ಸುಂದರಿ ಎಂದೇ ಹೇಳಬೇಕು. ಪೀಟರ್ ಅಪಘಾತವೊಂದರಲ್ಲಿ ಸತ್ತು ಹೋಗುತ್ತಾನೆ.

ಪೀಟರ್ ಸತ್ತ ಮೇಲೆ ರೂಪ ತನ್ನ ತಂದೆ ಪೀಟರ್ ನನ್ನ ತನ್ನ ಪ್ರಿಯಕರ ಮೂರ್ತಿಯ ತಂದೆಯಲ್ಲಿ ಕಾಣುತ್ತಾಳೆ. ಕೊನೆಗೆ ಮೂರ್ತಿಯ ಅಪ್ಪ ಆ ಹುಡುಗಿ ತನ್ನತ್ತ ಆಕರ್ಷಿತಳಾಗುತ್ತಿರುವುದನ್ನು ನೋಡಿ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಾನೆ. ಅಗತ್ಯ ವಸ್ತುಗಳಿಗೆ ಬೇಡಿಕೆ ಇಡುವ ಚಿಕ್ಕ ವಯ್ಯಸ್ಸಿನ ಹುಡುಗಿಯನ್ನು ದೈಹಿಕವಾಗಿ ಬಳಸಿಕೊಳ್ಳುತ್ತಾನೆ.

ಆ ಕಾರಣದಿಂದ ಮೂರ್ತಿಯ ಪ್ರೇಯಸಿಯಾಗಿದ್ದವಳು ಈಗ ಅವನ ಅಪ್ಪನ ಪ್ರೇಯಸಿಯಾಗುತ್ತಾಳೆ. ರೂಪ ಇಲ್ಲಿ ಚಂಚಲೆ ಹುಡುಗಿಯಾಗಿ ಮೂಡಿ ಬಂದಿದ್ದಾಳೆ. ಕೆಲವೊಮ್ಮೆ ಮೂರ್ತಿಯ ಕಣ್ಣಿಗೂ ಅದು ಗೊತ್ತಾಗುತ್ತದೆ. ತನ್ನ ತಂದೆಯೇ ತನ್ನ ಪ್ರೇಯಸಿಯನ್ನು ಅವನ ಪ್ರೇಯಸಿಯನ್ನಾಗಿ ಮಾಡಿಕೊಂಡರೆ ಹೇಗಾಗಬಹುದು?

ಮೂರ್ತಿಯ ತಾಯಿ, ಮೂರ್ತಿ ಎಲ್ಲರೂ ಕೂಡ ಸಾಮಾನ್ಯ ಕೂಲಿ ಕಾರ್ಮಿಕರುಗಳು. ಈ ಕಾದಂಬರಿ ನಡೆಯುವ ಸ್ಥಳ ಬ್ಯಾಟರಾಯನಪುರ, ಯಲಹಂಕ ಮತ್ತು ಸುತ್ತ ಮುತ್ತಲಿನ ಹಳ್ಳಿಗಳು. ತೊಂಬತ್ತರ ದಶಕದ ಬೆಂಗಳೂರು ಎಂದು ಹೇಳಬಹುದು.

ಮೂರ್ತಿಯ ತಂದೆ ಒಬ್ಬ ಸಾಮಾನ್ಯ ನಿರರ್ಥಕ ಗಂಡನಾಗಿರುತ್ತಾನೆ. ಸೋರುವ ಮನೆ. ಬಡತನ. ತಾಯಿಯ ಮತ್ತು ತಂದೆಯ ನಡುವೆ ಆಗಾಗ್ಗೆ ನಡೆಯುವ ಜಗಳಗಳು. ಇವು ಕೊಳಗೇರಿಯಲ್ಲಿ ನಡೆಯುವ ಸಾಮಾನ್ಯ ಘಟನೆಗಳು.

ಇದು ಕಥಾನಾಯಕ ಮೂರ್ತಿಯ ಆತ್ಮಕಥನದಂತೆ ಕಂಡರೂ ಭಾರತದ ಬಹುಪಾಲು ಕೂಲಿಕಾರ್ಮಿಕರ ಕಥಾನಕವೇ ಆಗಿದೆ. ಇಲ್ಲಿ ದಲಿತ ಚಳುವಳಿಗಳು. ಸಂಘ ಪರಿವಾರಗಳ ಬೆಳವಣಿಗೆ ಎಲ್ಲವೂ ಬರುತ್ತದೆ. ಇಲ್ಲಿ ಮೂರ್ತಿಯ ಅಜ್ಜಿ, ಮಾವ, ಅತ್ತೆ, ಪುಂಡ ಪೋಕರಿ ಗೆಳೆಯರು, ರೌಡಿಗಳು ಎಲ್ಲರೂ ಬರುತ್ತಾರೆ.

ಕಾದಂಬರಿಯ ಕೊನೆಗೆ ಮೂರ್ತಿ ತನ್ನ ಅಪ್ಪನ ಪ್ರೇಯಸಿಯನ್ನು ಮತ್ತೇ ತನ್ನ ಪ್ರೇಯಸಿ ಮಾಡಿಕೊಂಡನೇ ಅಥವಾ ಅವಳು ಏನಾದಳು ಎಂಬುದು ರಹಸ್ಯ. ಒಟ್ಟಿನಲ್ಲಿ ಈ ಕಾದಂಬರಿ ಸಾಮಾನ್ಯ ಆತ್ಮಕತೆ ರೀತಿ ಕಂಡರೂ ಮನುಷ್ಯನ ಮನೋವ್ಯವಹಾರಗಳನ್ನು ಚೆನ್ನಾಗಿ ಚಿತ್ರಿಸಿದೆ. ಇದೊಂದು ಉತ್ತಮ ಕಾದಂಬರಿ ಎಂದು ಖಂಡಿತ ಹೇಳಬಹುದು.

ಇತ್ತೀಚೆಗೆ ಕನ್ನಡಕ್ಕೆ ಬಂದ ‘ಕೆಂಪು ಮುಡಿಯ ಹೆಣ್ಣು’ (ಒರ್ಹಾನ್ ಪಮುಕ್ ಅನು: ಓ.ಎಲ್. ನಾಗಭೂಷಣಸ್ವಾಮಿ) ಮೊದಲು ಇಂಗ್ಲಿಷ್ ಅಥವಾ ಟರ್ಕಿ ಭಾಷೆಯಲ್ಲಿ ಪ್ರಕಟವಾಗಿದ್ದು ೨೦೧೭ರಲ್ಲಿ ಎಂದು ಹೇಳಬಹುದು. ‘ಕೆಂಪು ಮುಡಿಯ ಹೆಣ್ಣು’ ಕೂಡ ಈಡಿಪಸ್ ಕಾಂಪ್ಲೆಕ್ಸ್ ವಿಷಯವನ್ನು ಒಳಗೊಂಡಿದೆ. ನೊಬೆಲ್ ಪ್ರಶಸ್ತಿ ವಿಜೇತ ಲೇಖಕನ ‘ಕೆಂಪು ಮುಡಿಯ ಹೆಣ್ಣು’ ಕನ್ನಡಕ್ಕೆ ಬರುವ ಎಷ್ಟೋ ವರ್ಷಗಳ ಮುಂಚೆಯೇ  ಕನ್ನಡದ ಲೇಖಕರೊಬ್ಬರ ಅಪ್ಪನ ಪ್ರೇಯಸಿ ಕಾದಂಬರಿಯಲ್ಲಿ ಎಲೆಕ್ಟ್ರಾ ಕಾಂಪ್ಲೆಕ್ಸ್, ಈಡಿಪಸ್ ಕಾಂಪ್ಲೆಕ್ಸ್ ಕಾಣಬಹುದಾಗಿರುವುದರಿಂದ  ವಿ ಆರ್ ಕಾರ್ಪೆಂಟರ್ ಅವರ ಕಾದಂಬರಿ ಖಂಡಿತ ಉನ್ನತ ಮಟ್ಟದ್ದು ಎಂದು ಹೇಳಬಹುದು.

ವಿ ಆರ್ ಕಾರ್ಪೆಂಟರ್ ಅವರಿಂದ ಕನ್ನಡ ಸಾಹಿತ್ಯಕ್ಕೆ ಇನ್ನು ಹೆಚ್ಚು ಕೃತಿಗಳು ಬರಬೇಕಾಗಿದೆ. ಅವರಿಂದ ಇನ್ನು ಹೆಚ್ಚು ಕೃತಿಗಳು ಬರಲಿ ಎಂದು ಶುಭ ಹಾರೈಸುತ್ತಿದ್ದೇನೆ.

December 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: