ನನ್ನದೇ ಹೆಜ್ಜೆ ಗುರುತುಗಳಿಲ್ಲ

ಮೌನದ ಸ್ವಗತ

 ಡಾ. ಜ್ಯೋತಿ, ತುಮಕೂರು

ಹೆಸರೇ ಮರೆತು ಹೋಗಿರುವ ಮೌನ ನಾನು,

ಮಗಳು, ಮಡದಿ, ಸೊಸೆ, ಅಮ್ಮ, ಅಜ್ಜಿ, ಇತ್ಯಾದಿ

ಎಲ್ಲರ ಅಗತ್ಯದ ಬುನಾದಿ ನಾನು,

ಆದರೆ, ತೆರೆಮರೆಯ ಕಾಣದ ಬದುಕು.

 

ಜಗದೆತ್ತರ ಮುಟ್ಟಲು ಹೋಗುವರು,

ನನ್ನ ಬೆನ್ನ ಆನಿಸಿ, ಭುಜವನೇರಿ.

ಕುಸಿದು ಹೋಗುತ್ತಲೇ ಇರುವೆನು ಭಾರಕ್ಕೆ,

ಇನ್ನೂ ಅರಿವಾದಂತಿಲ್ಲ ಮೇಲೆರೆದವರಿಗೆ.

 

ಸ್ವಅರಿವು ಜಾಗ್ರತಿ ಮೊದಲೇ ವಿವಾಹ ಬಂಧನ,

ನಿರ್ಧಾರ ಪರರದ್ದು, ದಿಗ್ಬಂಧನ ನನ್ನದ್ದು.

ತೌರ ನಂಟು ಕಡಿದು, ಹೊಸ ಬಂಧ ಬೆಸೆಯುವ,

ನನ್ನವರ ಹುಡುಕುವ, ಬದುಕ ಹೊಸೆಯುವ ಒತ್ತಾಸೆ.

ಮನವರಿಯುವ ಮೊದಲೇ ಕೈಹಿಡಿದವನಿಂದ,

ಕಂದಮ್ಮಗಳು ಒಂದರ ಮೇಲೆ ಇನ್ನೊಂದು.

ಮುದ್ದುಮುಖ, ಆಟಪಾಠದಲ್ಲಿ ಅವರ,

ಮತ್ತೆಲ್ಲ ಗೌಣ, ನನ್ನತನ ಸಂಪೂರ್ಣ ಲೀನ.

 

ಸಂಸಾರ ದಿನಚರಿಯ ಆರಂಭ,

ಹಾಗೆಯೇ, ಅಂತ್ಯವು ನನ್ನಿಂದಲೇ.

ಲೋಕದ ಕಣ್ಣಲಿ ನಾನು ಮಾತ್ರ,

ಹೊರ ಜಂಜಾಟವಿಲ್ಲದ ಸುಖಜೀವಿ.

 

ನನ್ನ ಕಾರ್ಯ ಪರಿಧಿಯಲ್ಲಿ, ಸ್ಪರ್ಧೆಗಳಿಲ್ಲ,

ಕೆಲಸಕ್ಕೆ ಸಂಚಕಾರವಿಲ್ಲ, ಅಸೂಯೆಯೂ ಇಲ್ಲ.

ಆದರೆ… ಸಂಬಳ, ರಜೆ, ನಿವೃತ್ತಿಯೂ ಇಲ್ಲ,

ರಾಜೀನಾಮೆಯೂ ಇಲ್ಲ, ಬಿಡಿಸಲಾಗದ ಬಂಧ.

 

ಅರ್ಥಹೀನತೆ, ನಿಟ್ಟುಸಿರು, ನಿತ್ಯ ಕಮರುವ ಕನಸು ಒಳಗೆ,

ನಗು, ಯಶಸ್ಸು, ಹಣ, ಮುಂಬಡ್ತಿ, ಪ್ರಶಸ್ತಿ ಹೊರಗೆ.

ನನ್ನವರ ಗೆಲುವಿಗೆ ಬೆಂಬಲಿಸಿದ ಹೆಮ್ಮೆ,

ನನ್ನ ಸೋಲುಗಳಿಗೆ ನಾನೊಬ್ಬಳೇ ಹೊಣೆ.

 

ಹೊರಗೆ ಓಡಾಡುವ ಲವಲವಿಕೆಯ, ಗರಿಗರಿ ಬಟ್ಟೆ ತೊಟ್ಟ,

ದುಡಿವ ಹೆಣ್ಮಕ್ಕಳ ನೋಡಿ ನನಗೂ ಹೊಸಿಲ ದಾಟುವ ಆಸೆ.

ಆದರೆ, ಸಿಕ್ಕಿಕೊಂಡಿರುವ ಬಂಧ ಕಳಚುವ ಭಯ,

ಅಲ್ಪವಿದ್ಯೆಯಿಂದ, ನಿಂತನೀರಾದ ಕೀಳರಿಮೆ.

 

ಗಂಡನ ತೀರದ ದಾಹ, ಆಸೆಯಿಂದ ಇನ್ನೂ ಹೊರನೋಟ,

ಈ ಚಂಚಲತೆಯ ಹಿಡಿದಿಡುವ ಒತ್ತಡ ನನಗೆ, ಒಳ ನೋಟ.

ಸಂಘರ್ಷದಲ್ಲಿ ನನ್ನ ಅತೃಪ್ತ ಬಯಕೆಗಳು ನಿರಂತರ ಸುಪ್ತ,

ಮನೆಯೊಳಗಿನ ಅತ್ಯಾಚಾರಗಳ ಹೇಳಿಕೊಂಡವರಾರು?

 

ಜಗ ಜಯಿಸಲು ನಿತ್ಯ ಓಡುವ ಪತಿ ಹಿಂದಿನ,

ಹೆಣ್ಣ ನಿಟ್ಟುಸಿರು, ಮೌನ, ತ್ಯಾಗ ಲೆಕ್ಕವಿಟ್ಟವರಾರು?

ಅಗತ್ಯ, ಬಯಕೆ ತೀರಿಸುವ ಗೊಂಬೆ ಮಾತ್ರವಲ್ಲ,

ಎಚ್ಚರವಾಗಬೇಕಾಗಿದೆ ನಾನು, ನಾನ್ಯಾರು ಎಂದು?

 

ತೋರಿಕೆಗೆ ಲೋಕದ ಶೃಂಗಾರ ‘ಆದರ್ಶ ಗೃಹಿಣಿ’,

ಆದರೆ ಹಿಂದೆ, ನನ್ನದೇ ಹೆಜ್ಜೆ ಗುರುತುಗಳಿಲ್ಲ, ಬರಿ ಮೌನ.

‍ಲೇಖಕರು nalike

May 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಣೆ

ಆಣೆ

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: