ಮತ್ತೆ ಬಂದರು ‘ಸ್ವಾಮಿ ಮತ್ತು ಸ್ನೇಹಿತರು’

 ಗೊರೂರು ಶಿವೇಶ್

ಒಂದು ಸಾಹಿತ್ಯಕೃತಿ ಅಥವಾ ಒಂದು ಸಿನಿಮಾ ಯಶಸ್ವಿಯಾಗುವುದು ಆಕೃತಿ ಓದುಗ ಅಥವಾ ನೋಡುಗನ ಅನುಭವ ಸ್ಪರ್ಶಿಯಾದಾಗ. ಅದಕ್ಕೆ ಬಹುತೇಕ ಕತೆ-ಕಾದಂಬರಿಗಳ, ಸಿನಿಮಾಗಳ ದ್ರವ್ಯ ಹದಿಹರೆಯದ ಪ್ರೇಮ ,ತಾಯಿಯ ಮಮತೆ ಸುತ್ತ ಗಿರಕಿ ಹೊಡೆಯುವುದು. ಇದರ ಜೊತೆ ಬಾಲ್ಯದ ನೆನಪುಗಳನ್ನು ಸಮೀಕರಿಸುವ ಕೆಲವು ಕಥೆ, ಕಾದಂಬರಿಗಳು, ಸಿನಿಮಾಗಳು ಕಾಡುವುದುಂಟು. ಆರ್ ಕೆ ನಾರಾಯಣರ ಸ್ವಾಮಿ ಮತ್ತು ಅವನ ಸ್ನೇಹಿತರು ಅಂತಹದ್ದೊಂದು ಕಾಡುವ ಕೃತಿ. ಇದು ಅವರ ಆರಂಭದ ಕೃತಿ. ಜೊತೆಗೆ ಅವರು ಬರೆದ ಭಾಗಶಃ ಆತ್ಮಕಥನದ ತ್ರಿವಳಿಗಳಲ್ಲಿ ಒಂದು.

ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು ಇಂಗ್ಲಿಷ್ ಟೀಚರ್ ಗಳನ್ನು ಉಳಿದೆರಡು ಕೃತಿಗಳೆಂದು ಗುರುತಿಸಲಾಗುತ್ತದೆ. ಸ್ವಾಮಿ ಮತ್ತು ಅವನ ಸ್ನೇಹಿತರು ಹಿನ್ನೆಲೆಯಲ್ಲಿ ಭಾರತದ ಸ್ವಾತಂತ್ರ ಹೋರಾಟದ ಉಚ್ಛ್ರಾಯದ ದಿನಗಳ ಚಿತ್ರಣವಿದೆ. ಬಾಲ್ಯದ ಆಟ, ಹುಡುಗಾಟ, ನೋವು-ನಲಿವು, ಸ್ನೇಹ ದ್ವೇಷ, ಆಸೆ, ನಿರಾಸೆ, ಆತಂಕ, ಉದ್ವೇಗ, ಸ್ನೇಹದ ಹಪಾಹಪಿ, ಪೋಷಕರ ನಿರೀಕ್ಷೆ… ಎಲ್ಲವನ್ನೂ ಸಹಜ ಸುಂದರವಾಗಿ ಚಿತ್ರಿಸಿರುವ ಕಾರಣಕ್ಕೆ ಇದೊಂದು ಕ್ಲಾಸಿಕ್ ಕಾದಂಬರಿಯಾಗಿ ಹೆಸರಾಗಿದೆ.

ಸ್ವಾಮಿ ಎಂಬ ಪ್ರೀತಿಯ ಹೆಸರಿನ ಸ್ವಾಮಿನಾಥನ್, ಅವನ ಸ್ನೇಹಿತರಾದ ಮಣಿ, ರಾಜಂ, ಬಟಾಣಿ, ಶಂಕರ್… ಕೆಲವರು ತಡವಾಗಿ ಶಾಲೆಯನ್ನು ಸೇರಿದರೆ, ಇನ್ನು ಕೆಲವರು ಅನುತ್ತೀರ್ಣರಾಗಿ ಸ್ವಾಮಿ ಜೊತೆಯಲ್ಲಿ ಓದುತ್ತಿದ್ದಾರೆ. ಹೀಗಾಗಿ ಮಣಿ ಎಂಬ ಟೊಣಪ ಸದಾ ಗದೆ ಹೊತ್ತು ತಿರುಗುವವನೊಡನೆ ಇವನ ಅಧಿಕ ಸ್ನೇಹ ಮತ್ತು ಅವನ ಹಿಂಬಾಲಕ ಕೂಡ ಹೌದು. ಅವನು ಓದುತ್ತಿದ್ದ ಶಾಲೆಗೆ ಎಸಿಪಿ ಮಗ ವರ್ಗಾವಣೆಯಾಗಿ ಬರಲು ಅವನೊಡನೆ ಸ್ನೇಹಕ್ಕಾಗಿ ಸ್ವಾಮಿ ಹಾತೊರೆಯುತ್ತಾನೆ. ಇದು ಮಣಿಗೆ ಅಸಹನೀಯವಾಗಿ ಸ್ವಾಮಿಯನ್ನು ನಿಂದಿಸುವುದರ ಜೊತೆಗೆ ಉಳಿದ ಇತರ ಸ್ನೇಹಿತರು ಅವನನ್ನು ರಾಜಮ್ ನ ಬಾಲ ಎಂದು ಕಿಚಾಯಿಸಲು ಸ್ವಾಮಿ ಅವರೊಂದಿಗೆ ಹೊಡೆದಾಟಕ್ಕೂ ಇಳಿಯುತ್ತಾನೆ.

ಮುಂದೆ ರಾಜ ಮತ್ತು  ಮಣಿಯೊಂದಿಗೆ ಸ್ನೇಹ ಏರ್ಪಟ್ಟು ರಾಜಂ, ಅವನ ಶ್ರೀಮಂತಿಕೆ, ಅವನಲ್ಲಿದ್ದ ಆಟದ ಸಾಮಾನುಗಳು, ಅವನು ತೊಡುವ ಉಡುಪು, ಹಾಕುವ ಟೋಪಿ ಎಲ್ಲವೂ ಸ್ವಾಮಿ ಮತ್ತವನ ಸ್ನೇಹಿತರನ್ನು ಅಯಸ್ಕಾಂತದಂತೆ ಸೆಳೆದು ಎಲ್ಲರೂ ಅವನ ಸುತ್ತಲೇ ಗಿರಿಕಿ ಹೊಡೆಯಲು ಆರಂಭಿಸುತ್ತಾರೆ. ಆಗ ಜನಪ್ರಿಯ ಆಟವಾಗಿ ಬ್ರಿಟಿಷರು ಪರಿಚಯಿಸಿದ ಕ್ರಿಕೆಟ್ ಕಡೆಗೆ ಈ ಮಕ್ಕಳ ಗಮನ ಸೆಳೆದು ಮಾಲ್ಗುಡಿ ಕ್ರಿಕೆಟ್ ಕ್ಲಬ್ ಆರಂಭವಾಗುತ್ತದೆ. ತಂಡದಲ್ಲಿ ಮಣಿ ಮತ್ತು ರಾಜಣ್ಣ ಅಂತ ಒಳ್ಳೆ ಬ್ಯಾಟ್ಸ್ಮನ್ ಗಳಿದ್ದರೂ ವಿಕೆಟ್ ತೆಗೆಯುವ ಖಚಿತ ಬೌಲರ್ ಎಂದರೆ ಅದು ಸ್ವಾಮಿ ಮಾತ್ರ.


ಆದರೆ ಶಾಲೆಯಲ್ಲಿ ನಡೆಯುವ ಕೆಲವು ಘಟನೆಗಳಿಂದಾಗಿ ಸ್ವಾಮಿ ಶಾಲೆಯನ್ನು ಬಿಟ್ಟು ಮತ್ತೊಂದು ಶಾಲೆಯನ್ನು ಸೇರಬೇಕಾದ ಅನಿವಾರ್ಯತೆ ಮೂಡುತ್ತದೆ. ಇದೇ ಸಮಯದಲ್ಲಿ ಮಾಲ್ಗುಡಿಯ ಪ್ರತಿಷ್ಠಿತ ತಂಡದೊಂದಿಗೆ ಇವರ ಕ್ರಿಕೆಟ್ ಪಂದ್ಯ ನಿಗದಿಯಾಗುತ್ತದೆ. ಎರಡು ಶಾಲೆಗಳ ನಡುವಿನ ಶಾಲಾ ಅವಧಿಯ ವ್ಯತ್ಯಾಸದಿಂದಾಗಿ ಕ್ರಿಕೆಟ್ ಅಭ್ಯಾಸಕ್ಕೆ ಬರಲು ಸ್ವಾಮಿಗೆ ಸಾಧ್ಯವಾಗುವುದಿಲ್ಲ. ಕ್ರಿಕೆಟ್ ಅಭ್ಯಾಸಕ್ಕೆ ಬರಲು ಸ್ವಾಮಿ ಮಾಡುವ ಉಪಾಯಗಳು ಫಲಿಸದೆ ಆತ ಎದುರಿಸುವ ತೊಂದರೆಗಳು, ರಾಜನ್ ಅವನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಲು ಸ್ವಾಮಿ ತೆಗೆದುಕೊಳ್ಳುವ ರಿಸ್ಕುಗಳು, ಹೊಸ ಸಂಕಷ್ಟಗಳಿಗೆ ಸ್ವಾಮಿಯನ್ನು ದೂಡುತ್ತದೆ. ಆ ಕಷ್ಟಗಳೇನು?ಸಂಕಷ್ಟಗಳಿಂದ ಹೊರ ಬಂದ ಸ್ವಾಮಿ ತನ್ನ ತಂಡವನ್ನು ಗೆಲ್ಲಿಸಿ ಕೊಡುವನೆ? ರಾಜಮ್ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವನೆ? ಎಂಬುದು ಮುಂದಿನ ಕಥಾಹಂದರ ಕುತೂಹಲಕರವಾಗಿ ಮುಂದೆ ಸಾಗುವ ಕಥೆಯ ಅಂತ್ಯ ಮನೋಜ್ಞವಾಗಿದೆ.

ಜೊತೆಗೆ ಓದುಗನಲ್ಲಿ ವಿಷಾದ ಭಾವವನ್ನು ಮೂಡಿಸುತ್ತದೆ. ಒಂದೇ ಸರ್ಕಾರಿ ಶಾಲೆಯಲ್ಲಿ ವಿವಿಧ ವಯೋಮಾನದ, ಜಾತಿ-ಧರ್ಮದ, ಬಡತನ, ಸಿರಿತನ ವ್ಯತ್ಯಾಸವಿಲ್ಲದ ವಿದ್ಯಾರ್ಥಿಗಳ ಒಡನಾಟ, ಅವರ ಕಾಲಕಾಲಕ್ಕೆ ಅವರು ಸ್ಪಂದಿಸುವ, ನೀಡುವ ಪ್ರತಿಕ್ರಿಯೆಗಳು ಸಹಜವಾಗಿ ಮೂಡಿ ಬಂದಿರುವುದರ ಜೊತೆಗೆ ಅಲ್ಲಿನ ಅನೇಕ ಘಟನೆಗಳು ನಮ್ಮನ್ನು ಬಾಲ್ಯಕಾಲಕ್ಕೆ ಒಯ್ಯುತ್ತದೆ. ಇಂತಹ ವಿಶಾಲ ಹಂದರದ ಕಾದಂಬರಿಯನ್ನು ಎಂಟು ಕಂತುಗಳಲ್ಲಿ ಕನ್ನಡದ ಅಭಿಜಾತ ಪ್ರತಿಭೆ ಶಂಕರ್ ನಾಗ್ ಸುಮಾರು ಮೂವತ್ತೈದು ವರ್ಷಗಳ ಹಿಂದೆ ದೂರದರ್ಶನಕ್ಕಾಗಿ ನಿರ್ದೇಶಿಸಿದ್ದು ಅದು ಈಗ ಕನ್ನಡದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

ಒಟ್ಟಾರೆ ಎರಡೂವರೆ ಗಂಟೆಗಳ ಈ ಧಾರಾವಾಹಿಗಳನ್ನು ಅಮೆಜಾನ್ ಪ್ರೈಮ್ ನಲ್ಲೂ ವೀಕ್ಷಿಸಬಹುದು. ಗಿರೀಶ್ ಕಾರ್ನಾಡ್, ಮಾಸ್ಟರ್ ಮಂಜುನಾಥ್ ಸೇರಿ ಅನೇಕ ಹಿರಿಯ ಕಿರಿಯ ಕಲಾವಿದರು ಈ ಧಾರಾವಾಹಿಗಳಲ್ಲಿ ಅಭಿನಯಿಸಿದ್ದು, ಒಂದು ಸುಂದರ ಅನುಭವ ನೀಡುತ್ತದೆ. ಕಥೆ ನಡೆಯುವ ಮಾಲ್ಗುಡಿ ಮೈಸೂರು ಮತ್ತು ನಂಜನಗೂಡಿನ ಮಿಶ್ರಣವೆಂದು ಕೆಲವರು ಹೇಳಿದರೆ ಮತ್ತೆ ಕೆಲವರು ಇದು ಬೆಂಗಳೂರಿನ ಮಲ್ಲೇಶ್ವರ ಮತ್ತು ಬಸವನಗುಡಿಯ ಸಂಯೋಗ ಎಂದು ಹೇಳುತ್ತಾರೆ. ಎಂದರೆ ಮಾಲ್ಗುಡಿ ತಾಲೂಕು ಕೇಂದ್ರಕಿಂತಲೂ ಒಂದು ದೊಡ್ಡದಾಗಿರಬಹುದಾದ ಊರು. ಆಗುಂಬೆ ಸುತ್ತ ಇದನ್ನು ಚಿತ್ರೀಕರಿಸಲಾಗಿದ್ದು ಅಲ್ಲಿನ ಪರಿಸರ ಚಿತ್ರಕ್ಕೆ ಪೂರಕವಾಗಿ ಇರುವುದಲ್ಲದೆ ಸ್ವತಂತ್ರ ಪೂರ್ವದ ಕಾಲಘಟ್ಟವನ್ನು ನಮ್ಮ ಕಣ್ಣ ಮುಂದೆ ತಂದಿಡುವ ಪ್ರಯತ್ನದಲ್ಲಿ ಶಂಕರ್ ನಾಗ್ ಯಶಸ್ವಿಯಾಗಿದ್ದಾರೆ. ಕಾದಂಬರಿಯ ಕೊನೆಯ ಕಂತು ಭಾವಸ್ಪರ್ಶಿಯಾಗಿದ್ದು ಈ ಧಾರವಾಹಿ ಲಾಕ್ಡೌನ್ ಸಮಯದಲ್ಲಿ ಅನಿರೀಕ್ಷಿತವಾಗಿ ವೀಕ್ಷಕರಿಗೆ ಒದಗಿದ ಭಾಗ್ಯವಾಗಿದೆ. ವೃದ್ಧಾಪ್ಯದಲ್ಲಿರುವವರಿಗೆ ಬಾಲ್ಯಕಾಲಕ್ಕೆ ಮರಳಲು, ಯುವಕರಿಗೆ ಶಾಲಾ ದಿನಗಳಿಗೆ, ಮಕ್ಕಳಿಗೆ ತಮ್ಮ ಕ್ರಿಕೆಟ್ ದಿನಗಳನ್ನು ನೆನೆದು ಸವಿಯಲು ಇದೊಂದು ಸುವರ್ಣ ಅವಕಾಶ. ಒಂದು ಕ್ಲಾಸಿಕ್ ಕೃತಿಗೆ ಕ್ಲಾಸಿಕ್ ರೂಪವನ್ನು ಕೊಟ್ಟ ಶ್ರೇಯ ಶಂಕರ್ ನಾಗ್ ಅವರದು. ಇದಕ್ಕಾಗಿ ಆರ್.ಕೆ.ನಾರಾಯಣ್ ಮತ್ತು ಶಂಕರ್ ನಾಗ್ ಇಬ್ಬರಿಗೂ ಧನ್ಯವಾದ ಮತ್ತು ಕೃತಜ್ಞತೆ.

‍ಲೇಖಕರು nalike

May 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: