ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರು ಕೊಟ್ಟದ್ದು, ಕೊಡದ್ದು…

–ಎಚ್. ಗೋಪಾಲಕೃಷ್ಣ 

ಇದು ಹೇಗಾಯಿತು ಅಂದರೆ ನಿಮಗೊಂದು ಪುಟ್ಟ ಪುರಾಣ ಹೇಳಬೇಕು. ಅದನ್ನು ಹಿನ್ನೆಲೆ ಅಂತ ಇಟ್ಟುಕೊಳ್ಳಿ. ಹಿನ್ನೆಲೆ ವಿವರಣೆ ನಂತರ ರಂಗದ ಮೇಲೆ ಜಿಗಿಯೋಣ, ಸರಿ ತಾನೇ..

ಈಗ ಹಿನ್ನೆಲೆಗೆ ಮೊನ್ನೆ ಬ್ಲಡ್ ಟೆಸ್ಟ್ ಗೆ ಅಂತ ಹೋಗಿದ್ದೆ ತಾನೇ? ಅದಕ್ಕೆ ಮೊದಲು ಎಂಟೂವರೆ ಸಾವಿರ ಸ್ಟೆಪ್ಸ್ ಹಾಕಿದ್ದೆ. ಮನೆಗೆ ಬಂದು ವಾಕಿಂಗ್ ಶೂ ಬಿಚ್ಚಿಟ್ಟು ಚಪ್ಪಲಿ ತೊಟ್ಟು ರಕ್ತದಾನಕ್ಕೆ ಹೋಗಿದ್ದೆ. ಶೂ ಸವೆದಿದೆ ಅದಕ್ಕೊಂದು ಆರಸಾವಿರ ಎತ್ತಿ ಇಡಬೇಕು. ಯಾವುದರ ಖರ್ಚು ಕಡಿಮೆ ಮಾಡಬಹುದು ಅಂತ ಯೋಚಿಸುತ್ತಾ ಚಪ್ಪಲಿ ಮೆಟ್ಟಿದ್ದೆ. ಶೂ ಚಪ್ಪಲಿಗಳ ಒಳಗೆ ಹಾವು ಸೇರಿಕೊಂಡಿರುತ್ತೆ ಜ್ವಾಪಾನ ಎನ್ನುವ ವಾಟ್ಸಾಪ್ ಕತೆಗಳನ್ನು, ಯು ಟ್ಯೂಬ್ ಗಳ ತುಣುಕುಗಳನ್ನು ಸುಮಾರು ಸಲ ಓದಿದ್ದೆ. ಅದರಿಂದ ಚಪ್ಪಲಿ ಶೂ ತೊಡಬೇಕಾದರೆ ಹತ್ತು ನಿಮಿಷ ಕೊಡವಿ ಹಾವು ಚೇಳು ಇಲ್ಲ ಅಂತ ಕನ್ಫರ್ಮಿಸಿ ಕೊಂಡು ಅವನ್ನ ತೊಡುವುದು. ಇವತ್ತೂ ಹಂಗೇ ಮಾಡಿದ್ನಾ? ಚಪ್ಪಲಿನ ಹಿಂದೆ ಮುಂದೆ ತಿರುಗಿಸಿ ಕೊಡವಿ ಹಾಕಿಕೊಂಡಿದ್ದು. ಚಪ್ಪಲಿ ಅಟ್ಟೆ ಪೂರ್ತಿ ಸವೆದು ಬೋ ಟಿಬ್ಸ್ ಶೂ ತರಹ ಆಗಿತ್ತು. ನಿಮಗೆ ಇವಾಗ ಬೋ ಟಿಬ್ಸ್ ಯಾರು ಅಂತ ಹೇಳಬೇಕು..

 “ಬೋ ಟಿಬ್ಸ್” (Beau Tibbs) ಹೆಸರು ಇಂಗ್ಲಿಷ್ ಸಾಹಿತ್ಯದಲ್ಲಿ ಹೆಚ್ಚು ಪ್ರಚಲಿತವಾಗಿದೆ.

ಬೋ ಟಿಬ್ಸ್ ಎಂಬುದು ಆಲಿವರ್ ಗೋಲ್ಡ್‌ಸ್ಮಿತ್ ರಚಿಸಿದ ಒಂದು ಪ್ರಸಿದ್ಧ ವ್ಯಂಗ್ಯಾತ್ಮಕ ಪ್ರಬಂಧದಲ್ಲಿನ ಪ್ರಮುಖ ಪಾತ್ರ. ಈ ಪ್ರಬಂಧವು “The Citizen of the World” ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ.

ಬೋ ಟಿಬ್ಸ್ ಪಾತ್ರದ ಪ್ರಮುಖ ಗುಣಲಕ್ಷಣಗಳು. ಈತ ಆಡಂಬರ ಪ್ರಿಯ: ಬೋ ಟಿಬ್ಸ್ ಬಡವನಾಗಿದ್ದರೂ, ತನ್ನನ್ನು ತಾನು ಶ್ರೀಮಂತನೆಂದು ತೋರಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಾನೆ. ಅವನು ಅಗ್ಗದ, ಆದರೆ ಆಡಂಬರದ ಬಟ್ಟೆಗಳನ್ನು ಧರಿಸುತ್ತಾನೆ ಮತ್ತು ಶ್ರೀಮಂತ ಸ್ನೇಹಿತರ ಬಗ್ಗೆ ಸುಳ್ಳು ಹೇಳುತ್ತಾ ತಿರುಗುತ್ತಾನೆ.

ಬಡತನವನ್ನು ಮರೆಮಾಚುವವನು: ಅವನು ಹೊರಗಡೆ ಗಂಭೀರವಾದ ಮತ್ತು ಗಣ್ಯ ವ್ಯಕ್ತಿ ಎಂದು ನಟಿಸುತ್ತಾನೆ. ಆದರೆ ಅವನ ನಿಜವಾದ ಬಡತನವು ಅವನು ವಾಸಿಸುವ ಬಡ ಪ್ರದೇಶದ ಮನೆಯಲ್ಲಿ ಬಹಿರಂಗಗೊಳ್ಳುತ್ತದೆ.

ಸಮಾಜದ ಟೀಕೆ: ಈ ಪಾತ್ರದ ಮೂಲಕ, ಗೋಲ್ಡ್‌ಸ್ಮಿತ್ , 18ನೇ ಶತಮಾನದ ಇಂಗ್ಲಿಷ್ ಸಮಾಜದ ಬೂಟಾಟಿಕೆ ಮತ್ತು ಕೃತಕತೆಯನ್ನು ಟೀಕಿಸಿದ್ದಾನೆ. ಜನ ತಮ್ಮ ನಿಜವಾದ ಸ್ಥಿತಿಯನ್ನು ಮರೆಮಾಚಿ, ಕೇವಲ ಬಾಹ್ಯ ಗಾಂಭೀರ್ಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ಈ ಪಾತ್ರದ ಮೂಲಕ ವಿವರಿಸಿದ್ದಾನೆ.

ಪಿಯುಸಿಯಲ್ಲಿ ಬೋ ಟಿಬ್ಸ್ ಪಾಠ ಮಾಡಬೇಕಾದರೆ ಅವನ ಶೂ ಬಗ್ಗೆ ನಮ್ಮ ಎಸ್ಸೆಸ್ಸಾರ್ ಮೇಷ್ಟ್ರು ವರ್ಣಿಸಿದ್ದು ಇನ್ನೂ ಈಗ ಕೇಳಿದ ಹಾಗಿದೆ. ಅವನ ಹ್ಯಾಟ್ ಗೆ ಟಾಪ್ ಇರ್ತಾ ಇರ್ಲಿಲ್ಲ, ಅವನ ಶೂ ಗೆ ಅಟ್ಟೆ ಇರ್ತಾ ಇರಲಿಲ್ಲ, ಅವನು ಕೋಟು ಧರಿಸಿದರೆ ಒಳಗಡೆ ಅಂಗಿ ಇರ್ತಾ ಇರಲಿಲ್ಲ… ಹೀಗೆ ಅರವತ್ತು ವರ್ಷದ ಹಿಂದಿನ ಪಾಠ ತಲೆಯಲ್ಲಿ ಪಟ್ಟಾಗಿ ಕೂತಿದೆ ಮತ್ತು ಆಗಾಗ ನನ್ನನ್ನು ಅವನಿಗೆ ಹೋಲಿಸಿಕೊಳ್ಳುವ ಪ್ರಸಂಗಗಳು ಹೇರಳವಾಗಿ ಉದ್ಭವ ಆಗುತ್ತದೆ!

ನನ್ನ ಚಪ್ಪಲಿ ಬೋ ಟಿಬ್ಸ್ ಶೂ ತರಹ ಆಗಿತ್ತು ಅಂದೆ ತಾನೇ? ಪೂರ್ತಿ ಅಟ್ಟೆ ಸವೆದಿತ್ತು, ಹೆಬ್ಬೆರಳು ಮತ್ತು ಕಾಲಿನ ಹಿಂಭಾಗ ಇನ್ನೊಂದೆರಡು ದಿವಸದಲ್ಲಿ ತೂತು ಬಿದ್ದು ಕಾಲಿಗೆ ಭೂ ಸ್ಪರ್ಶದ ಸುಖ ಕೊಡುವ ಹಂತ ತಲುಪಿತ್ತು.

ಸದ್ಯ ಹೊಸಾ ಚಪ್ಪಲಿ ಕೊಂಡು ಕೊಳ್ಳದೇ ಇದ್ದದ್ದು ಚಲೋ ಆಯ್ತು. ರಕ್ತದಾನಕ್ಕೆ ಅದನ್ನೇ ತೊಟ್ಟು ಹೋಗೋದು ಅನಿಸಿತು. ಸರಿ ಅದನ್ನೇ ತೊಟ್ಟೆ. ಮನೆಯಿಂದ ಮೂರೂವರೆ ಕಿಮೀ ಈ ರಕ್ತ ಪರೀಕ್ಷೆ ಲ್ಯಾಬ್. ಬಸ್ಸಿಗೆ ಹತ್ತು ರೂಪಾಯಿ ಆಗುತ್ತೇನೋ ನಡೆದೇ ಬಿಡೋಣ ಹತ್ತು ಮಿಗುತ್ತೆ ಅನಿಸಿತಾ? ಬಸ್ಸಿನ ಲೆಕ್ಕ ಬೇಡಾ ಆಟೋ ಲೆಕ್ಕ ಹಾಕು ಅಂತ ಆತ್ಮ ಐಡಿಯಾ ಕೊಡ್ತು. ಆಟೋ ಬೇಡ ಟ್ಯಾಕ್ಸಿ ಲೆಕ್ಕ ಹಾಕು. ಮುಗಿಸಿದ ಕಾಸು ಹೆಚ್ಚಾಗುತ್ತೆ ಅಂತಾ ಆತ್ಮ ಅದರ ಇನ್ಪುಟ್ ರಿವೈಸ್ ಮಾಡಿತು. ಸರಿ ಅಂತ ಉಬರ್ ನಲ್ಲಿ ಚೆಕ್ ಮಾಡಿದೆನಾ? ಆಟೋಗೆ ಎಪ್ಪತ್ತು ಟ್ಯಾಕ್ಸಿಗೆ ನೂರಾ ನಲವತ್ತು ತೋರಿಸ್ತಾ? ಟ್ಯಾಕ್ಸಿ ಚೋಸ್ ಮಾಡಿದೆ, ಅಂದರೆ ನೂರಾ ನಲವತ್ತು ಸೇವಿಂಗ್ಸ್!

ಅವಾಗವಾಗ ಈ ರೀತಿ ಸೇವಿಂಗ್ಸ್ ಮಾಡಿ ಮಾಡಿ ಈಗ ನನ್ನ ಬ್ಯಾಂಕ್ ಬ್ಯಾಲೆನ್ಸ್ ಎರಡು ಕೋಟಿಗೂ ಹೆಚ್ಚು, ಆದರೆ ಅದನ್ನು ತೆಗೆಯೋಹಾಗಿಲ್ಲ, ಬೇರೆಯವರಿಗೆ ಕೊಡೋಹಾಗಿಲ್ಲ.. ಆದರೆ ಮನಸಿಗೆ ಎಂತಹ ಖುಷಿ ಕೊಡುತ್ತೆ ಅಂತೀರಿ. ಇಂತಹ ಖುಷಿ ಬೇಕು ಅಂದರೆ ನೀವೂ ಸಹ ನನ್ನ ತರಹ ಸೇವಿಂಗ್ಸ್ ಪ್ಲಾನ್ ಮಾಡಿ!

ಆಯ್ತಾ ಚಪ್ಪಲಿ ತೊಟ್ಟೆ. ಬರ್ತೀನಿ ಅಂತ ಮನೆ ಒಳಗೆ ಎಲ್ಲೋ ಸೇರಿಕೊಂಡಿದ್ದ ಒಡತಿಗೆ ಹೇಳಿ ಹೊರಟೆ. ಮೂರು ಕಿಮೀ ಉದ್ದದ ದಾರಿ ಉದ್ದಕ್ಕೂ ಹಗಲು ಕನಸು ಕಂಡೆ, ಕಂಡೆ ಮತ್ತು ಕಂಡೆ. ರೋಲ್ಸ್ ರಾಯ್ಸ್, ಚೆವಾರ್ಲೆ, ಹೈಕಿ ಮುಂತಾದ ಕಾರು ನನ್ನ ಗೆರೆಜಿಗೆ ಬಂದು ಬಿದ್ದವು. ಮೂರು ಹೆಲಿಕಾಪ್ಟರು ನನ್ನ ಸಾವಿರ ಎಕರೆಯ ಫಾರ್ಮ್ ನಲ್ಲಿ ಮೂಲೆಯ ಜಾಗ ಹಿಡಿದವು. ಆಕಾಶದಲ್ಲಿ ಒಂದು ಟೆಂಪರರಿ ಸ್ಟೇಷನ್ ನಿರ್ಮಿಸಿ ಅಲ್ಲಿ ಸೂಪರ್ ಸೋನಿಕ್,ಬೋ ಯಿ o ಗೂ…. ಹೀಗೆ ಮತ್ತೂ ಹಲವು ಹೆಸರು ಕೇಳಿರದ ಏರೋ ಪ್ಲೇನ್ ಗಳು ನನ್ನ ಫಾರ್ಮ್ ಹೌಸ್ ನಲ್ಲಿ ನೆಲೆ ನಿಂತವು. ಬರೀ ಹೆಲಿಕಾಪ್ಟರು ಏರೋಪ್ಲೇನ್ ಆದರೆ ಹೇಗೆ? ಪಾಪ ಬಡವರಿಗೂ ಏನಾದರೂ ಬೇಕು ಅಲ್ವಾ ಸಾಮಾಜಿಕ ನ್ಯಾಯ ಬೇಡವೇ ಅಂತ ಆತ್ಮ ಕೋಶ್ಚನ್ ಎಸೆಯಿತು. ಹೌದಲ್ವಾ ಎಂತ ತಪ್ಪು ಆಗಿಬಿಡ್ತಾ ಇತ್ತು ಅನಿಸಿತು. ಆತ್ಮಕ್ಕೆ ಮನಸಿನಲ್ಲೇ ಥ್ಯಾಂಕ್ಸ್ ಹೇಳಿದೆ.ಕೂಡಲೇ ಒಂದು ಹತ್ತು ವೋಲ್ವೋ, ಮೂರು ಎಲೆಕ್ಟ್ರಿಕ್, ಆರು ಡೀಸೆಲ್ ಬಸ್ಸು ನಮ್ಮ ಫಾರ್ಮ್ ಹೌಸ್ ಗೆ ಸೇರಿಸಿದೆ. ಫಾರ್ಮ್ ಹೌಸ್ ಏರಿಯಾ ವನ್ನು ಸಾವಿರ ಎಕರೆ ಬದಲು ಎರಡು ಸಾವಿರಕ್ಕೆ ಹಿಗ್ಗಿಸಿದೆ..

ನಿಧಾನಕ್ಕೆ ನನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಾ ಲ್ಯಾಬ್ ಗೆ ಬಂದೆ. ಲ್ಯಾಬ್ ಒಳಗೆ ಮಬ್ಬು ಮಬ್ಬು, ಬಿಸಿಲಿನಲ್ಲಿ ಬಂದಿದ್ದೆ ನೋಡಿ ಅದಕ್ಕಿರಬೇಕು. ಚಪ್ಪಲಿ ಬಿಟ್ಟು ಒಳಕ್ಕೆ ಹೋದೆ. ರಕ್ತದಾನ ಆಯಿತಾ? ಫೀಸ್ ಕೊಟ್ಟೆನಾ…

ಆಚೆ ಬಂದೆ ತಾನೇ? ಮಬ್ಬು ಇನ್ನೂ ಹೆಚ್ಚಾಗಿತ್ತು. ಮೋಡ ಮುಸುಕಿತ್ತು. ಮಳೆ ಬರಬಹುದು, ಛತ್ರಿ ತಂದಿಲ್ಲವೇ ಅಂತ ಅವಲತ್ತುಕೊಳ್ಳುತ್ತಾ ಬರ್ತಾ ಇದ್ನಾ? ಸೀ ಹುಗ್ಗಿ (ಅಂದರೆ ಪೊಂಗಲ್) ವಾಸನೆ ಘಂ ಅಂತ ಮೂಗಿಗೆ ಹೊಡೆಯಬೇಕೇ? ಹುಗ್ಗಿ ವಾಸನೆ, ಮಸಾಲೆ ದೋಸೆ ವಾಸನೆ, ಉದ್ದಿನ ವಡೆ ವಾಸನೆ…ಇವುಗಳು ಅಂದರೆ ಇಂತಹ ವಾಸನೆಗಳು ಮನುಷ್ಯಪ್ರಾಣಿಯನ್ನು ಹೆಚ್ಚೆಚ್ಚು ವರ್ಷ ಬದುಕಿರಲು ಪ್ರೇರೇಪಿಸುತ್ತದೆ ಎನ್ನುವ ಸ್ಕೂಲ್ ಆಫ್ ಫಿಲಾಸಫಿ ನನ್ನದು. ವಾಸನೆ ಬಂದ ಎಡೆ ಗೆ ಹೆಜ್ಜೆ ಹಾಕಿದೆ. ನಮ್ಮ ಗಣೇಶನ ದೇವಸ್ಥಾನದಿಂದ ವಾಸನೆ.ಚಪ್ಪಲಿಯನ್ನು ಪಕ್ಕದಲ್ಲಿ ಬಿಟ್ಟು ಕ್ಯೂ ಅಂಚಿಗೆ ಸೇರಿದೆ. ನನ್ನ ಚಾನ್ಸ್ ಬರುವ ತನಕ ಅಲ್ಲಿ ಹುಗ್ಗಿ ಇರುತ್ತಾ ಮುಗಿದು ಹೋಗುತ್ತಾ ಅನ್ನುವ ಘನ ಚಿಂತೆಯಲ್ಲಿ ಪ್ರಸಾದದ ಹತ್ತಿರ ಬಂದೆ. ದೇವರ ದಯೆ ಒಂದು ದೊನ್ನೇ ಯಲ್ಲಿ ಅರ್ಧ ತುಂಬಿದ ಹುಗ್ಗಿ , ಸೀ ಹುಗ್ಗಿ ಕೈಗೆ ಬಂತಾ? ಅದನ್ನ ಕೈಲಿ ಹಿಡಿದು ಆಚೆ ಬಂದು ಚಪ್ಲಿ ತೊಟ್ಟು ಮನೆ ಸೇರಿದೆ. ದೇವರು ದೊಡ್ಡವನು ಅನಿಸಿತು, ಪ್ರಸಾದ ಸಿಕ್ತು ಅಂತ ಸಂತೋಷ ಆಯಿತು. ಹಿಂದಿನ ದಿವಸ ರಾತ್ರಿ ಕನಸಲ್ಲಿ ದೇವರಿಗೂ ನನಗೂ ನಡೆದ ಸಂಭಾಷಣೆ ನೆನಪಾಯಿತು.

ದೇವರೇ ಪೆನ್ಷನ್ ಅಂತ ಬರೀ ಸಾವಿರದ ನಾನೂರು ಬರುತ್ತೆ. ಚಪ್ಪಲಿ ಸವೆದಿದೆ ಅದು ತಗೊಳ್ಳೋಕ್ಕೆ ಕಾಸಿಲ್ಲ, ಶೂ ಹಳೆದಾಗಿದೆ ಅದು ಬದಲಾಯಿಸಬೇಕು, ಔಷಧಿಗೆ ಕಾಸು ಸಾಲದು…. ಅಂತ ನನ್ನ ಉದ್ದನೆ ಪಟ್ಟಿ ದೇವರ ಮುಂದೆ ಇಟ್ಟಿದ್ದೆ. ರಾತ್ರಿ ನಿದ್ದೆ ಬರೋದು ತಡ ಆದರೆ ನೀವೇನು ಮಾಡ್ತೀರಿ ಅಂತ ನನಗೆ ಗೊತ್ತಿಲ್ಲ. ನಾನಂತೂ ದೇವರನ್ನು ಎದುರಿಗೆ ಕೂಡಿಸಿಕೊಂಡು ನಾನು ಮಲಗಿಕೊಂಡು ಅವನಿಗೆ ನನಗೆ ಏನೇನು ಕೊರತೆ ಅಂತ ಗಂಟೆ ಗಟ್ಟಲೆ ಹೇಳುತ್ತೇನೆ. “ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ …”ದೇವರ ನಾಮ ನನ್ನ ಪೆಟ್. ಅದರಿಂದ ನಾನು ಮಲಗಿಯೇ ದೇವರನ್ನು ಬೇಕಾದ್ದು ಕೇಳುವ ಅಭ್ಯಾಸದವನು!

ಹೀಗೆ ಕೇಳುತ್ತಾ ಇದ್ದ ನನಗೆ ನಿದ್ದೆ ಯಾವಾಗಲೋ ಬಂತು. ದೇವರು ಕನಸಲ್ಲಿ ಬಂದ. ನಿನ್ನ ಪ್ರಾಬ್ಲೆಮ್ ಸರಿ ಮಾಡಿದ್ದೀನಿ, ನಿದ್ದೆ ಹೋಗು ಅಂದ. ದೇವರು ಹೇಳಿದ ಮೇಲೆ ಮುಗೀತು, ಗೊರಕೆ ನಿದ್ದೆ ಹೊಡೆದೆ….

ಪ್ರಸಾದ ಸಿಕ್ಕಿತ್ತು. ಮನೆಗೆ ತಂದೆ. ಹಂಚಿಕೊಂಡು ಒಂದೊಂದು ಚಮಚ ಸೀ ಹುಗ್ಗಿ ತಿಂದೆವು. ನಂತರ ರಾಗಿ ಮುದ್ದೆ, ಸೊಪ್ಪಿನ ಹುಳಿ, ಮೊಸರನ್ನ ಉಂಡೆ. ಮಲಗಿದೆ. ರೀ ಕಾಫಿ ಅಂದಾಗ ಎದ್ದು ಕಾಫಿ ಕುಡಿದೆ. ಹಾಲು ತಗಂಡು ಬಾ ಅಂದರು ಅಂತ ಆಚೆ ಬಂದರೆ ಯಾವುದೋ ಸುಮಾರು ಹೊಸಾ ಚಪ್ಪಲಿ, ಹನ್ನೊಂದು ಸೈಜು, ನನ್ನ ಸೈಜ್!

ಯಾರದು ಈ ಚಪ್ಪಲಿ ಅಂತ ನನ್ನಾಕೇನ ಕೇಳಿದೆ.

ಬೆಳಿಗ್ಗೆ ಹೋಗಿದ್ಯಲ್ಲಾ ಯಾರದ್ದೋ ಹಾಕ್ಕೊಂಡು ಬಂದಿದ್ದೀಯಾ ಕಣ್ಣು ಕಾಣೋಲ್ಲವಲ್ಲ…. ಅಂತ ಉತ್ತರ ಬಂತು. ಅದನ್ನ ಹಾಕಿಕೊಳ್ಳೋಕ್ಕೆ ಹೋದ ರೆ ಯಾರು ಯಾರದ್ದೋ ಚಪ್ಲಿ ಹಾಕ್ಕೊಬಾರದು ಅವರ ದರಿದ್ರ ನಮಗೆ ಅಂಟುತ್ತೆ….. ಅಂತ ಶರಾ ಬಂತಾ?

ಇನ್ಯಾವುದೋ ಹಳೇದು ಸಿಕ್ಕಿಸಿಕೊಂಡು ಹಾಲು ತಂದೆ. ಚಪ್ಪಲಿ ಎಲ್ಲೆಲ್ಲಿ ಬಿಟ್ಟಿದ್ದೆ ಅಂತ ಕ್ರಾಸ್ ಚೆಕ್ ಮಾಡಿದೆ. ಲ್ಯಾಬ್ ಮತ್ತು ದೇವಸ್ಥಾನ ಲಿಸ್ಟ್ ನಲ್ಲಿ ಬಂತಾ?

ದೇವಸ್ಥಾನ ಮುಂದೆ ನನ್ನ ಹಳೇ ಚಪ್ಪಲಿ ಹುಡುಕಿದೆ, ಸಿಗಲಿಲ್ಲ. ಮಾರನೇ ದಿವಸ ಲ್ಯಾಬ್ ಗೆ ಹೋದರೆ ಮೂಲೆಯಲ್ಲಿ ನನ್ನ ಹಳೇ ಚಪ್ಪಲಿ ವೋಯ್ ನಾನು ಇಲ್ಲಿದಿನೋ.. ಅನ್ನಬೇಕೇ…?

ಮೂರು ದಿವಸ ಲ್ಯಾಬ್ ಹತ್ತಿರ ಹೋಗಲಿಲ್ಲ. ದೇವರು ಪ್ರಾಬ್ಲೆಮ್ ಸಾಲ್ವ್ ಮಾಡಿದ್ದೀನಿ ಅಂತ ಹೇಳ್ತಲ್ಲಾ, ಅದೇ ಈ ಚಪ್ಪಲಿ ಕೊಡಿಸಿರೋದು. ದೇವರೇ ಕೊಟ್ಟಿದೆ ಅದರಿಂದ ಯಾವ ದರಿದ್ರವೂ ಬರೋಲ್ಲ,ಹಾಕಿಕೋ ಹಾಕಿಕೋ ಹಾಕಿಕೋ ಚಪ್ಪಲಿ ಹಾಕಿಕೋ ಅಂತ ಆತ್ಮ ಹುರಿದುಂಬಿಸಿತು. ಅಲ್ಲದೇ ಚಪ್ಪಲಿ ಕಳೆದು ಕೊಂಡವನು ದರಿದ್ರ ಹೋಯಿತು ಅಂದರೆ ಅದು ಸಿಕ್ಕಿದವನಿಗೆ ಲಕ್ ಹೊಡಿಬೇಕು ತಾನೇ? ಒಂದು ಹೋದರೆ ಒಂದು ಬರಬೇಕು ಇದೇ ತಾನೇ ನ್ಯಾಚುರಲ್ ಲಾ? ಒಬ್ಬರ ದರಿದ್ರ ಮತ್ತೊಬ್ಬರ ಲಕ್ಕು…. ಈ ಲಾಜಿಕ್ ಗೆದ್ದಿತಾ..

ಅದೇ ಚಪ್ಪಲಿ ಈಗ ನಾನು ಹಾಕಿಕೊಳ್ತಾ ಇರೋದು.. ಶೂ ಸಹ ಹೀಗೇ ದೇವರು ದಯಪಾಲಿಸುತ್ತಾ ಅಂತ ಕಾಯುತ್ತಿದ್ದೇನೆ…..! ಅದೂ ಸಹ ಬೇಗ ಸಿಗಲಿ . ಚಪ್ಪಲಿ ಸಿಕ್ಕಿದೆ ಶೂ ಸಿಗದೇ ಹೋದರೆ ಹೋಗಲಿ ಪೆನ್ಷನ್ ಆದರೂ ಬರಲಿ.. ದೇವರು ಕೂತು ಕೇಳಿದರೆ ನಾನು ಮಲಗಿ ಹೇಳುವ ಸನ್ನಿವೇಶಗಳು ಮತ್ತೆಮತ್ತೆ ಹುಟ್ಟಲಿ,at least ಪೆನ್ಷನ್ ಏರುವ ವರೆಗಾದರೂ…..!

ಕೃಪೆ :ಅಪರಂಜಿ 

‍ಲೇಖಕರು Admin

13 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading