ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆಲದ ಗುರುತು ಹಚ್ಚಲು

~ಮಂಜುನಾಥ ಬಾದಾಮಿ

ಗುರುತು

ನೆಲದ ಗುರುತು ಹಚ್ಚಲು
ಹಗಲು ರಾತ್ರಿಗಳ ಸ್ಪರ್ಧೆ
ಕಳ್ಳರಗುಂಪು ತಿಂದು ತೇಗಿ
ಇಡಲಿಲ್ಲ ಹಸಿವಿನ ಲೆಕ್ಕ
ಹೊಟ್ಟೆಗೆ ಕಿವಿಗಳಿಲ್ಲ
ಕಣ್ಣಿನ ಬೆಂಕಿ ಕಣ್ಣಿಗೆ ಹಾರುವುದೆಂದು
ತೊಟ್ಟಿದ್ದಾರೆ ಬಣ್ಣದ ಕನ್ನಡಕ;
ಧೂಳು ನೆಪಮಾತ್ರ

ನಮ್ಮ ಕೈ ಕೆಸರಾಯಿತು
ಕೈಯಿಗೂ ಬಾಯಿಗೂ ಇರುವ ಅಂತರ
ಆಕಾಶಕ್ಕೂ ಪಾತಾಳಕ್ಕೂ ಇರುವಷ್ಟು ದೂರ
ಬೊಗಳುತ್ತಲೇ ಇವೆ ಇನ್ನೂ
ಕೆಲವು ಆಶೆ ಬುರುಕ ನಾಯಿಗಳು
ನಾವು ಹೆಣವಾಗುವುದನ್ನು ಕಾಯ್ದು
ನಮ್ಮ ಮತಗಳ ಜಲರಾಶಿಗಳಿಂದೆದ್ದು
ಮೊಸಳೆಗಳು ತಿಮಿಂಗಿಲಗಳು
ಹೊಂಚು ಹಾಕುತ್ತವೆ ಲಂಚದ ಮಡುವಲ್ಲಿ
ಐಷಾರಾಮದ ಗುಡಿಯಲ್ಲಿ
ಕಟಕಟಿಸಿ ಮುರಿದ ನಮ್ಮ ಮೂಳೆ ಕಟ್ಟುತ್ತಾರೆ
ಗಂಟೆ ಜಾಗಟೆಗಳ ನಾಲಿಗೆಯನ್ನಾಗಿ

ನಿತ್ಯವೂ ಗಾಣದ ಎತ್ತು
ಕಡೆದು ನಿಲ್ಲಿಸಿದೆ ಭೂಮಿಯ; ಬೀಳದಂತೆ
ದುಡಿದು ಸತ್ತವರು
ಶತಮಾನಗಳ ಅವಶೇಷ; ಮೇಲೆದ್ದಿವೆ
ಗಗನಚುಂಬಿ ಕಟ್ಟಡ
ದ್ರಾವಿಡಾರ್ಯರಿಗೂ ಮೂಲ ನಾವು
ತೆರೆದು ನೋಡಿ ಒಳ ಪುಟಗಳನು
ನೀವು ನಡೆಯುವ ಬೀದಿಗಳಲಿ
ನಮ್ಮ ರಕ್ತದ ಹೂವುಗಳು ಚೆಲ್ಲಿವೆ
ಹಳ್ಳಿ ನಗರಗಳ ದಾರಿಗಳಲಿ
ಹೆಜ್ಜೆಗುರುತುಗಳಾಗಿ ಬಿದ್ದಿವೆ
ನಮ್ಮ ಕನಸುಗಳು
ದಿಕ್ಕನ್ನೇ ಬದಲಿಸುವ ಮನಸುಗಳು

ನಾಡ ನಡುವೆ ಚಿಗುರಿ ನಿಂತಿದ್ದೇವೆ
ಗಿಡಮರಗಳ ಮಹಾಕಾಡಾಗಿ
ಹಬ್ಬಿ ಹಿಡಿದಿದ್ದೇವೆ ಭೂಮಿಯ
ಅಂತರಾಳದ ಬೇರುಗಳಾಗಿ
ಕೈ ಬೆರಳುಗಳು ಈ ಕೊಂಬೆಗಳು
ಕಡಿವ ಕೊಡಲಿಗೂ ಕಾವುಗಳು
ಪಾಪ ಪುಣ್ಯದ ಕರುಳುಬಳ್ಳಿಗೆ
ಜಾತಿ ಬಾವಲಿ ಜೋತು ಬಿದ್ದಿವೆ
ನೆರಳಿಗೆ ನಿಂತ ನಿಮ್ಮ ಆಟ ಕಂಡು
ನಮ್ಮನ್ನು ಹಡೆದ ನೆಲ ನಗುತ್ತಿದೆ

ಶಾಂತಿ ಕಾಂತಿಯ
ಮೆಕ್ಕಲು ಮಣ್ಣಲ್ಲಿ ಉತ್ತಿ ಬಿತ್ತಿದ
ನನ್ನ ಜನ
ಯಂತ್ರ ತಂತ್ರ ಹುಟ್ಟಿಸಿದರು
ಜ್ಞಾನ ವಿಜ್ಞಾನದ ಸೂಜಿಗೆ ನೂಲಾದರು
ದುಡಿದುಡಿದು ಮನುಜತೆಯ
ಕಟ್ಟಡಕ್ಕೆ ಇಟ್ಟಿಗೆಯಾದರು
ಕಾವ್ಯ ಪುರಾಣಗಳ ಕಥೆಯಾದರು
ಅವರ ಕೈಗಳು ಇನ್ನು ಚಪ್ಪಾಳೆ ತಟ್ಟವು
ಮುಷ್ಠಿ ಕಟ್ಟಿ ಮೇಲೆದ್ದು ನಿಂತು
ದನಿಗೂಡಿ ಕೂಗುವರು
ಕಣ್ಣೆದುರೇ ಬಿಕ್ಕುತ್ತಿದೆ
ಕುಲ ನೆಲಗಳ ತರತಮ
ಅನ್ನ ನೀರು ಗಾಳಿ
ಬೇಕು ಎಲ್ಲರಿಗೂ ಸಮ ಸಮ

‍ಲೇಖಕರು Admin

13 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading