ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರಿಗೆ ಬೇಜಾರು…

-ಎಚ್. ಗೋಪಾಲಕೃಷ್ಣ 

ಮನೆ ಹತ್ತಿರವೇ ದೇವಸ್ಥಾನ ಅದೂ ತಿರುಪತಿ ದೇವರದ್ದು. ಬೆಳಿಗ್ಗೆ ಸಂಜೆ ರಾತ್ರಿ ಪೂಜೆ. ಪೂಜೆಯ ಮಂತ್ರಗಳು ಸದಾ ಕಿವಿ ಮೇಲೆ. ಜತೆಗೆ ವರ್ಷದಲ್ಲಿ ಕೆಲವು ತಿಂಗಳು ಮಧ್ಯಾಹ್ನದ ಹೊತ್ತು ಸೀನಿಯರ್ ಸಿಟಿಜನ್ಸ್ ಸೇರಿ ನಡೆಸುವ ಪುರಾಣ ಪುಣ್ಯ ಕತೆಗಳ ಪ್ರವಚನ. ಎಲ್ಲವೂ ತಮಿಳಿನಲ್ಲಿ.

ತಮಿಳು ದೇವರು, ತಮಿಳು ಗುರುಗಳು, ತಮಿಳು ವಿಶೇಷ ದಿನಗಳು ತಮಿಳು ಕ್ಯಾಲೆಂಡರ್, ಗೋದಾ ಪೂಜೆ, ಆಳ್ವಾರ್ ಹುಟ್ಟಿದ ಹಬ್ಬ…..ಇವುಗಳ ಅರಿವು ಹೆಚ್ಚಿಸಿದ್ದು ಈ ದೇವಸ್ಥಾನ. ಒಟ್ಟಿಗೆ ಒಂದು ನೂರು ಜನ ಕೂತು ಮೈಕ್ ನಲ್ಲಿ ಒಂದೇ ಧ್ವನಿಯಲ್ಲಿ ಅದೇನೋ ಗೊಣ ಗೋಣ ಹಾಡಬೇಕಾದರೆ ಮೊನೊಟೋನಸ್ ಧ್ವನಿ ಕೇಳಿ ಮೊದಮೊದಲು ಯಾರಿಗೆ ಏನಾಯ್ತೋ ಅಂತ ಗಾಬರಿ ಬಿದ್ದು ಅಲ್ಲಿಗೆ ಓಡುತ್ತಾ ಇದ್ದೆ. ಎಪ್ಪತ್ತು ಎಂಬತ್ತರ ವಯಸ್ಸಿನ ಗಂಡಸರು ಹೆಂಗಸರು ಕೂತು ಕೈಲಿದಪ್ಪನೆ ಬೈಂಡ್ ಮಾಡಿದ ಒಂದೇ ತರಹದ ಪುಸ್ತಕ ಹಿಡಿದು ಒಂದೇ ತರಹದ ಗೊಗ್ಗರ ದ್ವನಿಯಲ್ಲಿ ಎದುರಿನ ಮೈಕ್ ಗೆ ದ್ವನಿ ದಾನ ಮಾಡುತ್ತಿದ್ದದ್ದು ನೋಡಿ ಸದ್ಯ ಯಾರಿಗೂ ಏನೂ ಆಗಿಲ್ಲ, ದೇವರು ಎಲ್ಲರನ್ನೂ ಸರಿಯಾಗಿ ಇಟ್ಟಿದೆ, ಪ್ರಪಂಚ ಸರಿಯಾಗಿ ಸುಖವಾಗಿದೆ ಎಂದು ಮನಸು ಹಗುರ ಮಾಡಿಕೊಂಡು ರೂಮು ಸೇರಿ ಹಾಯ್ ಅಂತ ಮಂಚದ ಮೇಲೆ ಮೈ ಚೆಲ್ಲುತ್ತಿದ್ದೆ.

ಒಂದು ಸಂಜೆ ದೇವಸ್ಥಾನದ ಮುಂದೆ ಈ ಪ್ರವಚನದ ಸಮಯದಲ್ಲಿ ಹಾಯ್ದು ಹೋಗಬೇಕಿತ್ತು. ನಾವು ವಾಕಿಂಗಿಸುವ ಪಾರ್ಕ್ ನ ಒಂದು ಬಾಗಿಲು ದೇವಸ್ಥಾನದ ಪಕ್ಕ ಇರುವುದು. ಹಾಗೇ ಕಣ್ಣು ಅತ್ತ ಹಾಯಿತು. ರೇಷ್ಮೆ ಸೀರೆ ಉಟ್ಟು ತುರುಬು ಕಟ್ಟಿದ, ಬೆಳ್ಳಿ,ಚಿನ್ನದ ಫ್ರೇಮಿನ ಕನ್ನಡಕ ಧರಿಸಿದ ಕಚ್ಚೆ ಸೀರೆ ಉಟ್ಟ ಎಪ್ಪತ್ತು ಪ್ಲಸ್ ಹೆಂಗಸರು ಬಲ ಭಾಗದಲ್ಲಿ ಏಳೆಂಟು ಸಾಲಿನಲ್ಲಿ ಕೂತಿದ್ದಾರೆ. ಕೆಲವರು ಎಣ್ಣೆ ನೀರು ಹಾಕಿಕೊಂಡು ಶುಚಿರ್ಭೂತ ರಾಗಿದ್ದಾರೆ.ಕೆಲವರು ಆಗತಾನೇ ಬ್ಯೂಟಿ ಪಾರ್ಲರ್ ನಿಂದ ಬಂದಹಾಗಿದ್ದಾರೆ.ಪ್ರತಿಯೊಬ್ಬರ ಕೈಲೂ ಅರೆ ತೆರೆದ ದಪ್ಪನೆ ಬೈಂಡ್ ಮಾಡಿದ ಒಂದೇ ರೀತಿಯ ಪುಸ್ತಕ. ಇಷ್ಟೂ ಜನರ ಮುಂದೆ ಮೊದಲ ಸಾಲಿನಲ್ಲಿ ಒಂದು ಮೈಕು. ಅವರ ಎದುರು ಇವರಿಗೆ ಮುಖ ಮಾಡಿ ಸಾಲಿನಲ್ಲಿ ಕೂತ ಸೆವೆಂಟಿ ಪ್ಲಸ್ ನ ಗಂಡಸರು, ಅವರೂ ಐದಾರು ಸಾಲು.ಮೇಲುಕೋಟೆ ಕಚ್ಚೆ ಪಂಚೆ ಅಥವಾ ದಟ್ಟಿ ಉಟ್ಟಿ ದ್ದಾರೆ. ಮೇಲೆ ಅಂಚಿರುವ ಉತ್ತರೀಯ ಹೊದ್ದಿದ್ದಾರೆ ,ಬೆಳ್ಳಿ,ಚಿನ್ನದ ಫ್ರೇಮಿನ ಕನ್ನಡಕ ಧರಿಸಿದ್ದಾರೆ.ಹಣೆ ತುಂಬಾ ವೆಂಕಟೇಶ್ವರ ದೇವರ ನಾಮದ ನಕಲು ಇದೆ.ಅವರೆದುರು ಸಹ ಮೊದಲನೇ ಸಾಲಿನಲ್ಲಿ ಒಂದು ಮೈಕು. ಹೆಂಗಸರು ಗಂಡಸರು ಒಂದೇ ಏಕ ತಾನದಲ್ಲಿ ಅದೇನೋ ಗುಯ್ ಗುಡುತ್ತಾ ಇದ್ದಾರೆ.ಅಸ್ಪಷ್ಟ ವಾದ ಗೊಗ್ಗರು ಧ್ವನಿ ಮೈಕಿನಲ್ಲಿ ಕೇಳಿಸುತ್ತಿದೆ. ಎಪ್ಪತ್ತು ಪ್ಲಸ್ ವಯಸ್ಸಿನವರು ಕೋರಸ್ ನಲ್ಲಿ ಹಾಡಿದರೆ ಹೆಂಗಿರುತ್ತೆ ಎಂದು ತಿಳಿಯಲು ಅಲ್ಲಿಗೆ ಹೋಗಲೇಬೇಕು 

ಮೊದಲಿನಿಂದಲೂ ಪುರಾಣ ಪ್ರವಚನಕ್ಕೆ ಹೋಗಿ ಅಭ್ಯಾಸವೇ ಇಲ್ಲದ ನನಗೆ ಪಾಪ ವಯಸ್ಸಾದ ಇಷ್ಟು ಜನ ಅಜ್ಜ ಅಜ್ಜಿ ಯಂದಿರು ಮನೇಲಿ ಇರುವ ಮೊಮ್ಮಕ್ಕಳನ್ನು ಆಡಿಸುವುದು ಬಿಟ್ಟು ಅದೂ ಇಲ್ಲ ಅಂದರೆ ಮಧ್ಯಾಹ್ನ ಆರಾಮವಾಗಿ ಮಂಚದ ಮೇಲೆ ಹಾಯ್ ಅಂತ ಒರಗಿ ಒಂದು ನಿದ್ದೆ ತೆಗೆಯುವುದು ಬಿಟ್ಟು ಇಲ್ಲಿ ಎಲ್ಲರೂ ಪರಮಾತ್ಮನನ್ನು ಬೇಗ ಕರೆದುಕೊ ಎಂದು ಗೋಗರೆಯುತ್ತಾ ಇದ್ದಾರೆ ಅನಿಸಿ ಬಿಡ ಬೇಕೇ…?ಅವರ ಮಕ್ಕಳು ಮೊಮ್ಮಕ್ಕಳು ಫಾರಿನ್ ನಲ್ಲಿ ಇದಾರೇನೋ ಪಾಪ. ಇವರು ಇಲ್ಲಿ ಪ್ರೇತಜೀವನ ನಡೆಸುತ್ತಾ ಇದಾರೇನೋ…

ಇವರಿಬ್ಬರ ಸಾಲುಗಳ ನಡುವೆ ಇಬ್ಬರು ಅಕ್ಕ ಪಕ್ಕ ಹಾದು ಹೋಗಬಹುದಾದಷ್ಟು ಪ್ಯಾಸೇಜ್. ಇದರ ಮೂಲಕ ನೇರ ಗರ್ಭ ಗುಡಿಗೆ ಪ್ರವೇಶ. ಗರ್ಭ ಗುಡಿಗೆ ಅಂಟಿದ ಹಾಗೆ ಬಾಗಿಲು ಒರಗಿ ದೇವಸ್ಥಾನದ ಪೂಜಾರರು , (ಅವರಿಗೆ ವಾಧ್ಯಾರ್ರು ಎಂದೂ ಸಹ ಕರೆಯುತ್ತಾರೆ ಇವರು ಇಲ್ಲಿ ಪ್ರಾರ್ಥನಾ ನಿರತರು) ನಿಂತಿದ್ದರು. ಅವರ ಹಣೆಯ ಮೇಲೆ ಮೂರು ನಾಮ ತುಂಬಾ ಢಾಳಾಗಿ ಹಾಕಿದ್ದರು, ಕಿವಿಗೆ ಹತ್ತ ಕಡಕ, ಕಚ್ಚೆ ಹಾಕಿದ ಮೇಲುಕೋಟೆ ಪಂಚೆ ಮತ್ತು ಎದ್ದು ಕಾಣುತ್ತಿದ್ದ ಒಂಬತ್ತು ಎಳೆ ಜನಿವಾರ. ಈಚೆಗೆ ಸುಮಾರು ಆಸ್ತಿಕರು ಒಂಬತ್ತು ಎಳೆ ಯ ಜನಿವಾರವನ್ನು. ಹಾಕುತ್ತಾರಂತೆ, ಅದು ಯಾಕೆ ಹಾಕುತ್ತಾರೆ ಎನ್ನುವುದಕ್ಕೆ ನಮ್ಮ ಮಠದ ಆಚಾರ್ರು ವಿವರಣೆ ನೀಡಿದ್ದರೂ, ಅದು ನನಗೆ ಮರೆತಿದೆ. ಊಟದ ಸಮಯದಲ್ಲಿ ಅವರು ವಿವರಣೆ ನೀಡುತ್ತಾ ಇದ್ದದ್ದು, ನನ್ನ ಗಮನವೆಲ್ಲಾ ಹುಳಿಗೆ ಏನೇನು ತರಕಾರಿ ಹಾಕಿದ್ದಾರೆ , ಗೋರಿ ಕಾಯಿ ಹಾಕಿದ್ದಾರೋ ಇಲ್ಲವೋ, ಸುವರ್ಣ ಗೆಡ್ಡೆ ಹಾಕಿದ್ದಾರೋ ಇಲ್ಲವೋ, ನವಿಲು ಕೋಸು ಹಾಕಿದ್ದಾರೋ ಇಲ್ಲವೋ… ಎನ್ನುವುದರ ಸುತ್ತ ಇತ್ತು. ಹೇಳಿಕೇಳಿ ನಾನೇನೂ ಅಷ್ಟಾವಧಾನ ಮಾಡುವವನಲ್ಲ. ಅದರಿಂದ ನನ್ನ ಗಮನ ಮತ್ತು ಕಾನ್ಸಂಟ್ರೇಷನ್ ಒಂದು ಸಮಯದಲ್ಲಿ ಒಂದು ವಸ್ತುವಿನ ಕಡೆಗೆ ಮಾತ್ರ. ನಾನೂ ಮಠದ ಅಂಗಡಿಯಲ್ಲಿ ಜನಿವಾರ ಕೊಂಡಿದ್ದೆ. ಅದೂ ಒಂಬತ್ತು ಎಳೆದು. ಆರು ಎಳೆ ಮಾಮೂಲಾಗಿ ಮಾರುತ್ತಾ ಇದ್ದದ್ದು. ಇದೇನು ಒಂಬತ್ತು ಎಳೆ ಇದ್ದಹಾಗಿದೆ ಅಂತ ಕೇಳಿದ್ದೆ. ಈಗ ಹಾಗೇ ಸಾರ್ ಬರ್ತಿರೋದು ಅಂತ ಉತ್ತರ ಬಂದಿತ್ತು. ಮಾಮೂಲಾಗಿ ಆರು ಎಳೆ ಇರೋದು ಒಂಬತ್ತಕ್ಕೆ ಪ್ರಮೋಷನ್ ಆದರೆ ಪ್ರೊಡಕ್ಷನ್ ಜಾಸ್ತಿ ಆಗಿದೆ, ಅದರಿಂದ ಸ್ಟಾಕ್ ಕ್ಲಿಯರೆನ್ಸ್ ಆಗ್ತಾ ಇದೆ ಅಂತ ಅಂದುಕೋ ಬಹುದು ತಾನೇ.. ಆರು ಎಳೆ ಅಂದರೆ ಸಿಂಗಲ್ ಹೆಂಡತಿ ಇರೋರಿಗೆ, ಒಂಬತ್ತು ಎಳೆ ಅಂದರೆ ಮೋರ್ ದ್ಯಾನ್ ಒನ್ ಹೆಂಡತಿ ಇರೋರಿಗೆ ಅಂತ ನಮ್ಮಜ್ಜಿ ಒಂದು ನೂರುವರುಷದ ಹಿಂದೆ ಹೇಳಿದ ಅಸ್ಪಷ್ಟ ನೆನಪು.. ತಲೆ ಕೊಡವಿ ಮತ್ತೆ ಗಂಡಸರ ಕಡೆ ದೃಷ್ಟಿ ಹಾಯಿಸಿದೆ.ಪ್ರತಿಯೊಬ್ಬರೂ ಒಂಬತ್ತು ಎಳೆ ಜನಿವಾರ ಧರಿಸಿರಬೇಕೇ..?

ಗುಂಪಿನಲ್ಲಿ ನನಗೆ ಗೊತ್ತಿದ್ದ ಸುಮಾರು ಮುದುಕರು ಒಂದು ಮದುವೆ ಆಗಿ ಅಷ್ಟಕ್ಕೇ ಸುಸ್ತು ಹೊಡೆದಿದ್ದರು. ಪಾರ್ಕಿನಲ್ಲಿ ಹೆಂಡತಿ ಮುಂದೆ ಮುಂದೆ ನಡೆದರೆ ಇವರು ಎರಡು ಮಾರು ಹಿಂದೆ ಜಗತ್ತಿನ ಭಾರವೆಲ್ಲವೂ ಇವರು ಹೊತ್ತ ಹಾಗೆ ಬಾಗಿ ನಡೆಯುತ್ತಿದ್ದರು.ಇವರಿಗೂ ಒಂಬತ್ತು ಎಳೆ ಅಂದರೆ.. ತಲೆಯಲ್ಲಿ ಈ ಘೋರವಾದ ಯುದ್ಧ ನಡೆಯುತ್ತಾ ಇತ್ತಾ…

ನನ್ನನು ನೋಡಿದ ವಾಧ್ಯಾರು ಸಾಮಿ ಗರ್ಭ ಗುಡಿಯಿಂದ ಮುಂದಕ್ಕೆ ಬಂದರು. ಪ್ಯಾಸೇಜ್ ಮೂಲಕ ಹಾದು 

 “ಬನ್ನಿ ಸಾರ್ ಒಳಗೆ, ಇನ್ನೇನು ಪ್ರವಚನ ಮುಗೀತಾ ಬಂತು. ಪ್ರಸಾದ ತಗೊಂಡು ಹೋಗಿರಂತೆ…..”ಅಂದರು.

ಪ್ರಸಾದ ಅಂದರೆ ನನಗೆ ತುಂಬಾ ಇಷ್ಟದ್ದು. ಪ್ರಸಾದ ಸಿಗುತ್ತೆ ಅಂದರೆ ಮೇಲುಕೋಟೆ,ಚಾಮುಂಡಿ ಬೆಟ್ಟ,ಹಿಮದ ಗೋಪಾಲಸ್ವಾಮಿ ಬೆಟ್ಟ,ಹೊನ್ನಾಲಿ ಮಠ,ದೇವರಾಯನ ದುರ್ಗ… ಇಲ್ಲಿಗೆಲ್ಲಾ ಹೋಗೋನು. ಇನ್ನು ಮನೆ ಪಕ್ಕದ್ದು ಅಂದರೆ…

“ಆಮೇಲೆ ಬರ್ತೀನಿ ಇವ್ರೇ. ಕಾಲಲ್ಲಿ ಶೂ ಇದೆ. ಬಗ್ಗಿ ಬಿಚ್ಚೋದು, ಮತ್ತೆ ಹಾಕೋದು ಕಷ್ಟ. ಮನೆಗೆ ಹೋಗಿ ಚಪ್ಪಲಿ ಹಾಕ್ಕೊಂಡು ಬಂದೆ….”ಅಂತ ಬಂದೆ. ಸೀದಾ ಪಾರ್ಕ್ ಗೆ ವಾಕಿಂಗ್ ಹೋದೆ. ಫ್ರೆಂಡ್ಸು ಸಿಕ್ಕಿದರಾ, ಪ್ರಸಾದ ಮರೆತೇ ಹೋಯಿತು. ಮನೆಗೆ ಬಂದೆ. ಉಣ್ಣ ಬೇಕಾದರೆ “ಹೀಗೆ ದೇವಸ್ಥಾನದ ವಾದ್ಯಾರು ಪ್ರಸಾದ ಕೊಡ್ತೀನಿ ಇರಿ ಸಾರ್ ಅಂತ ತುಂಬಾ ಪ್ರೀತಿಯಿಂದ ಹೇಳಿದರು. ಶೂ ಹಾಕ್ಕೊಂಡಿದ್ದೀನಿ, ಆಮೇಲೆ ಬರ್ತೀನಿ ಅಂತ ಬಂದೆ ಪ್ರಸಾದ ಮರ್ತೆ ಹೋಯ್ತು….”ಅಂದೆ.

“ಅದೇ ಎಲ್ಲರೂ ದೊಡ್ಡ ದೊಡ್ಡ ಅಡಿಕೆ ಪಟ್ಟೆ ತಟ್ಟೆ ಎರಡೂ ಕೈಲಿ ಹಿಡಕೊಂಡು ದೇವಸ್ಥಾನದಿಂದ ಆಚೆ ಬಂದರು. ಕದಂಬ ಇತ್ತು, ಪುಳಿಯೋಗರೆ, ಪೋಂಗಲ್ಲೂ, ಬಾದುಷಾ ,ಮೈಸೂರು ಪಾಕು, ಲಾಡು…. ಹೀಗೆ ಅದೇನೇನೋ ಕಾಣಿಸ್ತಾ ಇತ್ತು ತಟ್ಟೆ ಲೀ… ನೀವೊಬ್ಬರು ಕರೆದು ಕೊಟ್ಟರೆ ಬೇಡಾಂತ ಬರೋದೇ….”ಅಂತ ಪೂಜೆ ಮಾಡಿದಳು.

ಹೆಂಡತಿ ಮಾಡಿದ ಪೂಜೆಗೆ ಬೇಸರ ಆಗಲಿಲ್ಲ, ಬದಲಿಗೆ ಕದಂಬ,ಪುಳಿಯೋಗರೆ, ಪೋಂಗಲ್ಲೂ,ಹಯಗ್ರೀವಾ ಹೋಯಿತಲ್ಲಾ ಅಂತ ನೋವು ಆಗಿದ್ದು. ಮೈಸೂರು ಪಾಕು ಲಾಡು ಬಾದುಷಾ ಅಂದರೆ ಅದು ಹೊರಗಡೆ ಸಿಗುತ್ತೆ . ಕ್ವಾಲಿಟಿ ದೇವಸ್ಥಾನ ಮಟ್ಟ ಬರೋಲ್ಲ, ಆದರೂ ನಿಯರರ್ ಅದಕ್ಕೆ.ದೇವಸ್ಥಾನದವರು ಮಾಡಿಸಿದ್ದು ಅಂದರೆ ತುಂಬಾ ಅಲ್ಟಿಮೇಟ್ ಒಳ್ಳೇ ಟೇಸ್ಟ್ ದು ಸಿಗುತ್ತೆ.ಆದರೆ ಕದಂಬ ,ಪುಳಿಯೋಗರೆ, ಪೋಂಗಲ್ಲೂ…..?ಹಯಗ್ರೀವ ಬೇರೆ ಎಲ್ಲಿ ಸಿಗುತ್ತೆ?

ಕದಂಬ ಅಂದರೆ ಹೇಗಿರುತ್ತೆ ಅಂತ ಹೇಳಿಬಿಡ್ತಿನಿ.. ದಪ್ಪ ದಪ್ಪನೆ ಹೋಳು, ಗಟ್ಟಿ ಬೇಳೆ ಹುಳಿ ಅದಕ್ಕೆ ಸೇರಿಸಿರೋ ಅನ್ನ, ಹಿತ ಮಿತ ರುಚಿ.. ಒಂದು ಹೋಳು ತಿಂದರೆ ಬಾಯಿ ತುಂಬಾ ಅದೇ ತುಂಬಿರುತ್ತೆ.ಇನ್ನು ರುಚಿಯೋ ಅದನ್ನು ವರ್ಣಿಸಲು ಆದಿಶೇಷನಿಗೂ ಆಗದು ಎಂದು ಹೇಳುತ್ತಾರೆ…ಹಯಗ್ರೀವದ ರುಚಿ ತಿಂದೇ ನೋಡಬೇಕು, ವರ್ಣಿಸಲು ಆ ಆದಿಶೇಷನಿಗೂ ಅಸಾಧ್ಯ. ಅದು ಎಲ್ಲೂ ಮಾರುಲ್ಲ ಬೇರೆ…

“ಒಂದೇ ಒಂದು ಸಲ ನೀನಾಗಿ ನೀನೇ ನನ್ನ ನೋಡಕ್ಕೆ ಬೆಟ್ಟ ಹತ್ತಿ ಬಂದಿದ್ದೀಯಾ….”

“ಇಲ್ಲ ಸಾರ್. ಬೆಟ್ಟ ಹತ್ತಬೇಕು ಅಂತ ಅನಿಸೆ ಇಲ್ಲ ಸಾರ್…”

” ಯಾವುದಾದರೂ ದೇವಸ್ಥಾನಕ್ಕೆ ಯಾವತ್ತಾದರೂ ನೀನಾಗಿ ನೀನೇ ಹೋಗಿದ್ದಿಯಾ..”

“ಇಲ್ಲ ಸಾರ್. ಯಾರಾದರೂ ಕೂಗಿದಾಗ ಅವರ ಜತೆ ಬಲವಂತವಾಗಿ ಹೋಗಿರೋದು..”

“ಯಾವತ್ತಾದರೂ ಆಲ್ಲಿ ಅಂದರೆ ದೇವಸ್ಥಾನದಲ್ಲಿ ನೀನಾಗಿ ನೀನೇ ಪ್ರಸಾದಕ್ಕೆ ಕ್ಯೂ ನಿಂತಿದ್ದಿಯಾ….”

“ಇಲ್ಲ ಸಾರ್. ಪ್ರಸಾದ ಕೊಡ್ತಾರೆ ಬನ್ನಿ ಅಂತ ಹೆಂಡತಿ ದಬ್ಬಿ ಕೊಂಡು ಕರಕೊಂಡು ಹೋಗುತ್ತಾಳೆ, ಅವಳು ಎಳಕೊಂಡು ಹೋದಳು ಅಂತ ನಾನು ಅವಳ ಹಿಂದೆ…..”

“ನನ್ನ ನೋಡೋಕ್ಕೆ ಎಷ್ಟು ಸಲ ನೀನಾಗಿ ನೀನೇ ಬಂದಿದ್ದೀಯಾ….”

“ಇಲ್ಲ ಸಾರ್. ಇದುವರೆಗೆ ಯಾರಾದರೂ ಬಲವಂತ ಮಾಡಿ ಎಳಕೊಂಡು ಹೋದರೆ ಅವರ ಹಿಂದೆ….”

“ಅಲ್ಲ ನಿನಗೆ ಅನುಕೂಲ ಆಗಲಿ ಅಂತ ಮನೆ ಹತ್ತಿರವೇ ಬಂದಿದ್ದೀನಿ. ನಿನಗೆ ಬರೋಕ್ಕೆ ಅದೇನು ದಾಡಿ..?”

“……….,……………”

“ನಿನಗೆ ಅಂತ ವೆರೈಟಿ ವೆರೈಟಿ ಪ್ರಸಾದ ಮಾಡಿಸಿ ಇಟ್ಟರೆ ನಿನಗೇನು ಕೊಬ್ಬು ಬಂದು ಪ್ರಸಾದ ಇಸ್ಕೊಂಡು ತಿನ್ನೋಕೆ…”

“……….,……………”

“ಯಾರಿಗೋಸ್ಕರ ಪ್ರಸಾದ ಮಾಡೋದು…?”

“ತಪ್ಪಾಯ್ತು ಸಾರ್….”

“ಅಲ್ಲವೋ ಮುಠ್ಠಾಳ, ಸಾಯಂಕಾಲ ಅಷ್ಟು ಚೆನ್ನಾಗಿರೋ ಪ್ರಸಾದ ಇತ್ತು. ಬಾರಯ್ಯ ತಿಂದುಕೊಂಡು ಹೋಗು ಅಂತ ಪ್ರೀತಿಯಿಂದ ಕರೆದರೆ ಹಾಗೇ ಪೃಷ್ಠ ತಿರುಗಿಸಿಕೊಂಡು ಹೋಗ್ತಿಯಲ್ಲಾ….?”

“ತಪ್ಪಾಯ್ತು ಸಾರ್….”

“ನಿನಗೆ ಅನುಕೂಲ ಆಗಲಿ, ಬೇರೆ ಭಕ್ತರ ಹಾಗೆ ನೀನು ನನ್ನ ಹುಡುಕಿಕೊಂಡು ಅಲ್ಲೆಲ್ಲಾ ಬರೋಲ್ಲ ಅಂತ ನಿನ್ನ ಮನೆ ಬಾಗಿಲಿಗೆ ಬಂದರೆ ಇಷ್ಟೊಂದಾ ತಿಮಿರು, ಕೊಬ್ಬು ನಿನಗೆ……?”

“ಸಾರಿ ಸಾರ್, ತಪ್ಪಾಯ್ತು ಸಾರ್. ಇನ್ಮೇಲೆ ದಿನಾ ಬರ್ತೀನಿ ಸಾರ್ ಪ್ರಸಾದಕ್ಕೆ…..”ಅಂತ ಬೇಡ್ಕೋತಾ ಇದ್ದೆ. ಎದುರಿಗೆ ಗರ್ಭ ಗುಡಿಯಲ್ಲಿ ಮಸಕು ಮಸಕಾಗಿ ಸಂಜೆ ಕಂಡ ದೇವರು ಎದುರು ಬಂದು ನಿಂತಿತ್ತು. ನನ್ನನ್ನು ದುರುಗುಟ್ಟಿ ನೋಡುತ್ತಾ ಇತ್ತು.ಅದಕ್ಕೆ ಕೋಪ ಬಂದ ಹಾಗಿತ್ತು……

“ಎಂಟಾಯ್ತು, ಏಳಬಾರದೇ. ರಿಟೈರ್ ಆಗಿದ್ದೇ ಆಗಿದ್ದು. ಯಾವಾಗಲೂ ನಿದ್ದೇನೆ, ಅದು ಯಾವ ದೇವರ ವರವೋ ಕುಂಭಕರ್ಣ ಆಗಿದ್ದೇ ಅಂತ ಕಾಣುತ್ತೆ ಹಿಂದಿನ ಯಾವುದೋ ಜನ್ಮದಲ್ಲಿ…. ಅಂತ ಹೆಂಡತಿ ನನ್ನ ದೇಹವನ್ನು ಅತ್ತ ಇತ್ತ ಹೊರಳಿಸಿ ಎ ಬ್ಬಿಸಿದಳು….!

“ದೇವರು ಕನಸಲ್ಲಿ ಬಂದಿತ್ತು ಕಣ್ರೀ. ಪ್ರಸಾದ ಸ್ವೀಕಾರ ಮಾಡಿಲ್ಲ ಅಂತ ತುಂಬಾ ಬೇಜಾರು ಮಾಡಿಕೊಂಡಿತ್ತು ಪಾಪ…. “ಅಂದೆ 

“ಹಾಗೇ ಬಿದ್ದಿದ್ದರೆ ಹತ್ತಾಯ್ತು ಮಾರಾಯ ಇನ್ನೂ ಕಾಫಿ ಕುಡಿದಿಲ್ಲವಲ್ಲೋ…. ಅಂತಲೂ ಬೇಜಾರು ಮಾಡಿಕೊಂಡೀತು. ರಗ್ ಮಡಿಸಿಟ್ಟು ಹಾಸಿಗೆ ಸರಿಮಾಡಿ ಬನ್ನಿ….”ಅಂತ ಬಾಸು ಆಚೆ ಹೋಯ್ತಾ?

ಪಾಪ ದೇವರಿಗೆ ಬೇಜಾರು ಮಾಡಬಾರದಿತ್ತು ಅಂತ ನನಗೆ ಚುರ್ ಅಂದಿತು. 

ಎಷ್ಟು ಜನರ ಕನಸಲ್ಲಿ ದೇವರು ಬಂದು ತನ್ನ ಬೇಜಾರು ಹೇಳಿಕೊಳ್ಳುತ್ತೆ.. ಅಲ್ವಾ….. ಐ ಆಮ್ ಮೋರ್ ಪ್ರಿವಿಲೇಜ್ಡ್ ಅಂತ ಅನಿಸಿ ಬಿಡ್ತು ಇವರೇ….

ಕೃಪೆ :ಅಪರಂಜಿ 

‍ಲೇಖಕರು Admin

6 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading