–ದೀಕ್ಷಿತ್ ನಾಯರ್
ಬಾಗು ಬೆನ್ನಿನ ನಿನ್ನಂಥವರು ಮತ್ತೆ ಹುಟ್ಟಬಾರದು ಗಾಂಧಿ
ನೀನು ಬಿತ್ತಿದ್ದು ಕರುಣೆಯ ಬೀಜ
ಈ ಹಾಳೂರಿನಲ್ಲಿ ಈಗ ಬರೀ ಪಾಪಸ್ಕಳ್ಳಿ ಗಿಡ ಗೆಂಟೆಗಳು;
ಏನಿತ್ತು ನಿನ್ನ ಬಳಿ?
ಎಣಿಸಬಹುದಾದಷ್ಟು ಚಕ್ಕಳದ ಮೂಳೆಗಳು
ಮಾರುದ್ದದ ಊರುಗೋಲು
ಫಕೀರನೊಬ್ಬನ ಖಾದಿಬಟ್ಟೆ
ಬಿರುಕು ಕನ್ನಡಕ
ಈಶ್ವರ, ಅಲ್ಲಾ ನಾಮಜಪ;
ಇಷ್ಟೆಲ್ಲದರ ನಡುವೆಯೂ ಇತ್ತು ನಿನ್ನಲ್ಲಿ ಕಡಲಿನಾಳದ ಮನಸ್ಸು
ಒಳಗೆ ಬೆಂದು ತಾನೇ ನೊಂದು
ಎದೆಯ ನೋವನ್ನು ಹಾಡಾಗಿಸುವ ನಿನ್ನಂಥವರು ಎಂದಿಗೂ ಹುಟ್ಟಬಾರದು ಗಾಂಧಿ ; ನಿನ್ನದೇ ಎಲುಬಿನ ಬೆಂಕಿಯಿಂದ ಹಣತೆ ಹಚ್ಚಿಟ್ಟವನು ನೀನು-
ತೆರೆದ ಬಯಲಲ್ಲಿ ನಮ್ಮ ಜತೆಗೇ ಕೂತು ಬಯಲಲ್ಲಿ ಬಯಲಾಗಿ ಹೋದವನು
ಮುದುಕ ಅದೆಷ್ಟು ಬಾರಿ ಬಿದ್ದಿಲ್ಲ ನೀನು?
ಧೂಳು ಕೊಡವಿ ಮತ್ತೆ ಮೇಲೇಳುವುದು ನಿನಗೆ ಎಂದೂ ಹೊಸತಲ್ಲ!
ನಿನ್ನನ್ನು ಅರಿಯದೆ ನಿನ್ನನ್ನೇ ಅರಿಯೆಂದೆಣಿಸಿ ಗುಂಡಿಕ್ಕಿ ಕೊಂದ ನೆಲದಲ್ಲಿ ನೀನು ಹುಟ್ಟಲೇಬಾರದು ಗಾಂಧಿ ;
ಈಗಲೂ ಈ ದೇಶದ ನೆತ್ತಿ ಕಾಯುತ್ತಿರುವವನು ನೀನು!
ಹೊಡಿಬಡಿ- ನುಗ್ಗು ;ತಿವಿ,ಕೊಚ್ಚು ಕೊಲ್ಲು ಹಿಂಸೆಗೆ ಇಲ್ಲಿ ಜೈಕಾರ
ಇಲ್ಲಿ ನಿನ್ನದೇ ಹತ್ತು ಹಲವು ಸ್ಮಾರಕ ಭವನಗಳು
ಬೀದಿಬೀದಿಯಲ್ಲಿ ನಿನ್ನ ಪುತ್ಥಳಿ
ನೀನೀಗ ಕಿಮ್ಮತ್ತಿಲ್ಲದ ಕಲ್ಲು
ಕಲ್ಲಿನೊಳಗಿಂದಲೂ ಸತ್ಯ ಎಂದು ಒರಲಿದೆಯೋ ಹುಷಾರ್! ಮತ್ಯಾರೋ ನಿನ್ನ ಗುಬ್ಬಿ ದೇಹವನ್ನು ಸಿಡಿಸುತ್ತಾರೆ ;
ಒಂದಿಡೀ ಗುಂಪು ಹಾಲು ಪಾಯಸ ಕುಡಿದು ಸಂಭ್ರಮಿಸುತ್ತದೆ






0 Comments