ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮಾಜದ ಕನ್ನಡಿ ಮತ್ತು ಕಹಿಸತ್ಯಗಳು

ಎ.ಎಸ್.ಎನ್.ಹೆಬ್ಬಾರ್ ಅವರ ‘ಮಾಧ್ಯಮದ ಸುತ್ತಮುತ್ತ’

ವಿಕಾಸ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿ ಕುರಿತ ಡಾ.ಪಾರ್ವತಿ ಜಿ.ಐತಾಳ್ ಅವರ ಬರಹ ಇಲ್ಲಿದೆ.

-ಡಾ.ಪಾರ್ವತಿ ಜಿ.ಐತಾಳ್

ಎ.ಎಸ್.ಎನ್.ಹೆಬ್ಬಾರ್ ಅವರು ಬರೆದ ‘ಮಾಧ್ಯಮದ ಸುತ್ತಮುತ್ತ’  ಶೀರ್ಷಿಕೆಯೇ ಸೂಚಿಸುವಂತೆ ಮಾಧ್ಯಮದ ಕುರಿತಾದ ೫೨ ಲೇಖನಗಳ ಸಂಕಲನ.    ದೇಶ-ವಿದೇಶಗಳ ಕುತೂಹಲ ಕೆರಳಿಸುವ ಸುದ್ದಿಗಳು,  ಭ್ರಷ್ಟಾಚಾರ  ಪ್ರಕರಣಗಳು, ನ್ಯಾಯಕ್ಕಾಗಿ ನಡೆದ ಹೋರಾಟಗಳು,  ನ್ಯಾಯ ಸಿಗದೇ ತಣ್ಣಗಾದ ಪ್ರಕರಣಗಳು, ರಾಜಕೀಯದಲ್ಲಿ ತಮ್ಮನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಂಡ ಮತ್ತು ಅದಕ್ಕಾಗಿ ತಮ್ಮ ಪ್ರಾಣ ತೆತ್ತ ದಿಟ್ಟ ವ್ಯಕ್ತಿತ್ವಗಳು ಹೀಗೆ   ಇದು ವೈವಿಧ್ಯಮಯ ವಸ್ತುಗಳ ಕುರಿತಾದ ಆಸಕ್ತಿಕರ  ಲೇಖನಗಳಿಂದ ತುಂಬಿಕೊಂಡಿದೆ.

ಮೊದಲ ಲೇಖನದಲ್ಲೇ ಒಂದು ಆಘಾತಕಾರಿ ಸಂಗತಿ ಎದುರಾಗುತ್ತದೆ.  ‘ನ್ಯಾಯಾಧೀಶರಿಂದಲೇ ನೌಕರರ ಕ್ಷೇಮನಿಧಿ ಗುಳುಂ !’  ಎಂಬ ಶೀರ್ಷಿಕೆ ಹೊತ್ತ ಲೇಖನವದು. ಅನ್ಯಾಯವಾದಾಗ ನಾವು ನ್ಯಾಯಾಂಗದತ್ತ ನಿರೀಕ್ಷೆಯ ಕಣ್ಣುಗಳಿಂದ ನೋಡುತ್ತೇವೆ. ಆದರೆ ‘ಬೇಲಿಯೇ ಹೊಲ ಮೇದರೆ..?’ ಗಾಝಿಯಾಬಾದಿನಲ್ಲಿ ನಡೆದ ೪೯ ಕೋಟಿ ರೂ.ಹಗರಣವದು. ಅಲ್ಲಿನ ಒಂದು ಜಿಲ್ಲಾ ಕಾರಾಗೃಹದಲ್ಲಿ ಕೈದಿಯಾಗಿದ್ದ ಆಶುತೋಷ್‌ ಅಸ್ತಾನ  ವಿಷಪ್ರಾಶನದಿಂದಾಗಿ ಸಾವಿಗೀಡಾಗಿದ್ದಾನೆ. ನೌಕರರ ಕ್ಷೇಮನಿಧಿಯನ್ನು ನುಂಗಿದ ಪ್ರಕರಣದಲ್ಲಿ ಅವನೊಬ್ಬನೇ ಸಿಕ್ಕಿಬಿದ್ದು ಜೈಲಿನಲ್ಲಿದ್ದಾನೆ. ಆದರೂ ತನ್ನೊಂದಿಗೆ ಶಾಮೀಲಾಗಿರುವ ಇತರ ೩೬ ಮಂದಿ ನ್ಯಾಯಾಧೀಶರುಗಳ ಪಟ್ಟಿ ಅವನ ಕೈಯಲ್ಲಿದೆ. ಅವನು ಬಾಯಿ ಬಿಟ್ಟರೆ ಎಂಬ ಭಯದಿಂದ ಅದಿಕಾರಿಗಳೇ ಅವನನ್ನು ಕೊಲೆ ಮಾಡಿದ್ದಾರೆ. ಅಲ್ಲದೆ ನ್ಯಾಯಾಧೀಶರನ್ನು  ನೇರವಾಗಿ ವಿಚಾರಣೆಗೆ ತೆಗೆದುಕೊಳ್ಳುವುದು ಅವರ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತೆ ಎಂದು ಸಂವಿಧಾನದಲ್ಲೇ ಇದೆ. ಅದಕ್ಕೆ  ಕೆಲವು ವಿಧಿಗಳಿವೆ.  ಕೆಲವರ ಪೂರ್ವಾನುಮತಿ ಬೇಕು. ಈ  ಅಡ್ಡಿಯನ್ನು ಗಮನಕ್ಕೆ ತರುವುದು ಲೇಖನದ ಉದ್ದೇಶ.  ಅಂತೂ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗುತ್ತದೆ.‌ ನ್ಯಾಯಾಧೀಶರುಗಳಿಗಿರುವ ಸ್ಪೆಷಲ್ ಪ್ರಿವಿಲಿಜ್ ಬಗ್ಗೆ ಗಮನ ಸೆಳೆಯುವುದು ಈ ಲೇಖನದ ಉದ್ದೇಶ.

ಖ್ಯಾತ ಪತ್ರಕರ್ತೆ ಶಿವಾನಿ ಭಟ್ನಾಗರ್ ಮೇಲೆ  ಪೋಲಿಸ್ ಮಹಾನಿರ್ದೇಶಕನೊಬ್ಬ ನಡೆಸಿದ  ಅತ್ಯಾಚಾರ ಹಾಗೂ ಕೊಲೆಯ ಕಥೆ ಭಯಾನಕವಾದುದು. ಪಿ.ವಿ.ನರಸಿಂಹ ರಾಯರ ಸೈಂಟ್ ಕಿಟ್ಸ್ ಹಗರಣದ ಅನ್ವೇಷಣೆಯ ಜವಾಬ್ದಾರಿ ಅವಳ ಮೇಲಿತ್ತು. ಸುಂದರಿಯಾದ ಶಿವಾನಿಯ ಮೇಲೆ  ಐಜಿಪಿ  ರವಿಕಾಂತ ಶರ್ಮಾರ ಕಣ್ಣು ಬಿತ್ತು.‌. ಇಬ್ಬರ ನಡುವೆ ಪ್ರೀತಿ ಬೆಳೆಯಿತು. ಶರ್ಮಾ ಅವಳ ಕೆಲಸ ಸುಲಭವಾಗಲೆಂದು  ಪ್ರಕರಣಕ್ಕೆ ಸಂಬಂಧಿಸಿದ ಕೆಲವು ರಹಸ್ಯ ದಾಖಲೆಗಳನ್ನು ಅವಳಿಗೆ ಕೊಟ್ಟಿದ್ದ.‌ ಶಿವಾನಿ ತನ್ನನ್ನು ಮದುವೆಯಾಗು ಎಂದು ಶರ್ಮಾನನ್ನು ಒತ್ತಾಯಿಸಿದಳು. ಅದರೆ ವಿವಾಹಿತ ಶರ್ಮಾಗೆ ಮದುವೆ ಬೇಕಾಗಿರಲಿಲ್ಲ. ಅವಳು ತನಗೆ ನೀಡಿದ ದಾಖಲೆಗಳ ವಿಷಯ ಬಹಿರಂಗ ಪಡಿಸುತ್ತೇನೆಂದು ಬೆದರಿಕೆ ಹಾಕಿದಳು. ಪರಿಣಾಮವಾಗಿ ಶರ್ಮಾ ಸುಪಾರಿ ಕೊಟ್ಟು ಅವಳನ್ನು ಕೊಲ್ಲಿಸಿದ. ಅನಂತರ ಸುಳಿವು ಸಿಕ್ಕೀತೆಂದು ಹೆದರಿ ಓಡಿ ಹೋದ. ಅವನನ್ನು ಸೇವೆಯಿಂದ ವಜಾಗೊಳಿಸಲಾಯಿತು. ಕೊನೆಗೆ ಅವನು ಶರಣಾದ. ಅವನಿಗೆ ಜೈಲು ಶಿಕ್ಷೆಯಾಯಿತು. ಜೈಲಿನಲ್ಲಿದ್ದಾಗ ಮೇಲಧಿಕಾರಿಗಳನ್ನು ಏನೇನೋ ಮಾಡಿ ಮೆಚ್ಚಿಸಿ ಅವನು ಜೈಲಿನಿಂದ ಹೊರಬಂದ.

ಹಂಸಮುಖ ರಾಥೋಡ್ ಅನ್ನುವವನು ತಾನೊಬ್ಬ’,ಜ್ಯೋತಿಷಿ-ತಾಂತ್ರಿಕ’ನೆಂದು ಹೇಳಿ    ಕಿಶೋರ್ ಚೌಹಾನನಿಗೆ ಒಮ್ಮೆಲೇ ಸಂಪತ್ತು ಗಳಿಸುವ ವಿದ್ಯೆಯನ್ನು  ಹೇಳಿ ಕೊಡುವುದಾಗಿ ಹತ್ತಿರ ಬರುತ್ತಾನೆ. ಚೌಹಾನನ ಹೆಂಡತಿಯನ್ನು ವಶ ಪಡಿಸಿಕೊಂಡು ಸುಖಿಸುತ್ತಾನೆ. ಅನಂತರ ಅವರ ಇಬ್ಬರು ಹೆಣ್ಣುಮಕ್ಕಳ ಮೇಲೆಯೂ ಅತ್ಯಾಚಾರ ಮಾಡುತ್ತಾನೆ. ರಕ್ಷಿಸ ಬೇಕಾದ ಅಪ್ಪ-ಅಮ್ಮ  ದುಡ್ಡಿನಾಸೆಯಿಂದ  ಅದನ್ನು ನೋಡಿಯೂ ಸುಮ್ಮನಿರುತ್ತಾರೆ. ಮಕ್ಕಳು ಅಸಹಾಯಕರಾಗುತ್ತಾರೆ. ಪ್ರಕರಣದಲ್ಲಿ ಮೂವರೂ ಜೈಲಿಗೆ ಹೋಗುತ್ತಾರೆ.‌ಆದರೆ ಕೋರ್ಟಿಗೆ ಹೋಗಲು ಮಕ್ಕಳ ಕೈಯಲ್ಲಿ ಹಣವಿಲ್ಲ. ಪರಿಣಾಮವಾಗಿ ಮೂವರೂ ಜೈಲಿನಿಂದ ಹೊರಬರುತ್ತಾರೆ. ನ್ಯಾಯ ಮರೀಚಿಕೆಯಾಗುತ್ತದೆ.

ಕಣ್ಣಾನೂರಿನ ಸಂಜೆ ಪತ್ರಿಕೆ ‘ಸುದಿನಂ’  ಅಧಿಕಾರಿಗಳ ಹಗರಣಗಳನ್ನು ದಿಟ್ಟವಾಗಿ ಬಯಲು ಮಾಡುವ ಒಂದು ಪತ್ರಿಕೆ. ಒಮ್ಮೆ ಡಿ.ಸಿ ಹಾಗೂ ಎಸ್.ಪಿ.ನಡುವೆ ಯಾವುದೋ ವಿಷಯಕ್ಕೆ ಜಟಾಪಟಿ ನಡೆದಾಗ ಅದನ್ನು ರಂಗುರಂಗಾಗಿ   ‘ಸುದಿನಂ’ ವರದಿ ಮಾಡುತ್ತದೆ. ಎಸ್.ಪಿ.ಪ್ರೇಮಶಂಕರ್ ಇದರಿಂದ ರೊಚ್ಚಿಗೇಳುತ್ತಾನೆ.  ಹೊಂಚು ಹಾಕಿ ಇನ್ಯಾವುದೋ ಸಂದರ್ಭ ಹುಡುಕಿ ಸುದಿನಂ ಸಂಪಾದಕನನ್ನು ದಸ್ತಗಿರಿ ಮಾಡಿ ಮೈಮುರಿಯೆ ಥಳಿಸಿ ಹಿಂಸೆ ಕೊಡುತ್ತಾನೆ.  ಅದರೆ ಸಂಪಾದಕ ಕೊನೆಗೆ ಹೈಕೋರ್ಟಿನ ಮೆಟ್ಟಲು ಹತ್ತುತ್ತಾನೆ.‌ ಎಸ್.ಪಿ.ಮಾಡಿದ್ದು ಅಪರಾಧ ಹೌದೆಂದು ಕೋರ್ಟ್ ಅವನಿಗೆ ದಂಡ ವಿಧಿಸುತ್ತದೆ.ಆದರೆ  ದಂಡ ತೆತ್ತ ನಂತರ ಎಸ್.ಪಿ. ಯನ್ನು  ಸರಕಾರವು ನಾಗರಿಕ ಹಕ್ಕುಗಳ ಅಧಿಕಾರಿಯಾಗಿ ನೇಮಿಸುತ್ತದೆ.

ಅಪ್ರತಿಮ ದಿಟ್ಟ ಹೋರಾಟಗಾರ್ತಿ ಶೆಹಲಾ ಮಸೂದ್  ಪ್ರಕರಣ ಕರುಳು ಕರಗಿಸುವಂಥದ್ದು. ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದ ಅಣ್ಣಾ ಹಜಾರೆಯವರನ್ನು ಬೆಂಬಲಿಸುತ್ತೇನೆಂದು  ಮಾಹಿತಿ ಹಕ್ಕು ಹೋರಾಟಗಾರ್ತಿಯಾಗಿ ಕೆಲಸ ಮಾಡುತ್ತ  ರಾಜ್ಯದ ಮುಖ್ಯಮಂತ್ರಿ, ನ್ಯಾಯಾಧೀಶರು ‌ಮತ್ತು ಇನ್ನೂ ಹಲವು ಅಧಿಕಾರಿಗಳ ಮೂಲಕ್ಕೇ ಕೈಹಾಕಿದ ಆಕೆ ಹಾಡು ಹಗಲೇ ವಿರೋಧಿಗಳ ಗುಂಡಿಗೆ ಬಲಿಯಾಗುತ್ತಾಳೆ. ಪೋಲಿಸ್ ಅವಳ ಕೊಲೆ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡು ಮುಚ್ಚಿ ಹಾಕುತ್ತಾರೆ. ಆದರೆ ಮಾಧ್ಯಮದವರು ಅವಳನ್ನು ಬೆಂಬಲಿಸುತ್ತಾರೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗುತ್ತದೆ.  ಆದರೆ ಸಾಕ್ಷಿನಾಶದ ಕಾರಣದಿಂದ ಪ್ರಯತ್ನವೆಲ್ಲ ವ್ಯರ್ಥವಾಗುತ್ತದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಪ್ರಾಣ ತೆತ್ತ ಅವಳಿಗೆ ಹುತಾತ್ಮಳೆಂಬ ಬಿರುದಷ್ಟೇ ಸಿಗುತ್ತದೆ.

ಅಮೆರಿಕಾದ ಕೆಲಿಫೋರ್ನಿಯಾದ  ಟ್ರೈವ್ಯಾಲಿ ಯೂನಿವರ್ಸಿಟಿ ಎಂಬ ವಂಚನೆಯ ಜಾಲಕ್ಕೆ ಭಾರತದ ೧೫೫೫ ವಿದ್ಯಾರ್ಥಿಗಳು ಬಲಿಯಾಗುವುದು ಇನ್ನೊಂದು ದುಃಖದ ಸನ್ನಿವೇಶ. ಅವರೆಲ್ಲರಿಗೂ ವೀಸಾ ವ್ಯವಸ್ಥೆ ಮಾಡಿ ಅಲ್ಲಿಗೆ ಕರೆಸಿಕೊಳ್ಳುವ ಆ ಜಾಲವು ಸರಕಾರದ ಕೈಗೆ ಸಿಕ್ಕಿಬಿದ್ದಾಗ ಆ ವಿಶ್ವವಿದ್ಯಾಲಯ ಮುಚ್ಚಿ ಹೋಗುತ್ತದೆ ನಿಜ. ಆದರೆ ಅಲ್ಲಿಗೆ ಹೋದ ವಿದ್ಯಾರ್ಥಿಗಳದ್ದು ತ್ರಿಶಂಕು ಸ್ಥಿತಿಯಾಗುತ್ತದೆ. ಅವರಲ್ಲಿ ೧೮ ವಿದ್ಯಾರ್ಥಿಗಳಿಗೆ ಜಾಲದೊಂದಿಗೆ ಕೈಜೋಡಿಸಿದ್ದಾರೆಂದು ಕಾಲಿಗೆ ರೇಡಿಯೋ ಕಾಲರ್ ಹಾಕಲಾಗುತ್ತದೆ.  ಅಮೆರಿಕದ ಭಾರತಿಯ ಸಂಘಟನೆಗಳು ‘ಇದು ಮಾನವ ಹಕ್ಕುಗಳ ಉಲ್ಲಂಘನೆ’ಎಂದು ದನಿಯೆತ್ತಿ ಪ್ರತಿಭಟಿಸುತ್ತವೆ.  ಅದರೆ ಏನೂ ಪ್ರಯೋಜನವಾಗುವುದಿಲ್ಲ. ಕೊನೆಗೆ ಭಾರತ ಸರಕಾರವು ಯಾಚಿಸಿದ ನಂತರ ಅಸಹಾಯಕ ವಿದ್ಯಾರ್ಥಿಗಳಿಗೆ ಏನೋ ವ್ಯವಸ್ಥೆ ಮಾಡುವುದಾಗಿ ಅಮೆರಿಕದ ಸರಕಾರ ಭರವಸೆ ನೀಡುತ್ತದೆ.

ಕೇರಳದ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿಯ ದಿವಸ ರಾತ್ರಿ ಹೊತ್ತು ಬೆಟ್ಟದ ತುದಿಯಲ್ಲಿ ಕಾಣುವ ಮಕರವಿಳಕ್ಕು ದೈವೀಕವೆಂದು ಜನರು ಹಲವು ವರ್ಷಗಳಿಂದ ನಂಬಿದ್ದಾರೆ. ಆದರೆ ಎರಡು ಮೂರು ಬಾರಿ ದರ್ಶನದ ವೇಳೆ ಸಾವುಗಳು ಸಂಭವಿಸಿದಾಗ ಕಮ್ಯೂನಿಸ್ಟರು ಮತ್ತು ವಿಚಾರವಾದಿಗಳು ಸತ್ಯವೇನೆಂದು ಪರೀಕ್ಷಿಸಲು ಗುಟ್ಟಾಗಿ ಬೆಟ್ಟದ ತುದಿಗೆ ಹೋಗುತ್ತಾರೆ.‌ಆಗ ಅದು ಮಾನವನಿರ್ಮಿತ ಬೆಂಕಿಯ ಬೆಳಕೆಂದು ಅವರಿಗೆ ಗೊತ್ತಾಗುತ್ತದೆ.‌ಮಕರ ವಿಳಕ್ಕು ದರ್ಶನಕ್ಕೆ ಬರುವವರಿಂದ ಸರಕಾರದ ಮತ್ತು ದೇವಸ್ವಂ ಬೊಕ್ಕಸಕ್ಕೆ ಹಣದ ಹೊಳೆಯೇ ಹರಿಯುವುದರಿಂದ ಅವರು ಅಲ್ಲಿ ಬೆಂಕಿ ಮಾಡುವ ಉಪಾಯವನ್ನು ಮಾಡಿರುತ್ತಾರೆ ಅನ್ನುವುದು  ನಿಚ್ಚಳ. ಇದು ಒಂದು ತೆರೆದ  ರಹಸ್ಯವೇ ಆದರೂ ಇದರ ವಿರುದ್ಧ ಏನೂ ಮಾಡಲಿಕ್ಕಾಗುವುದಿಲ್ಲ ಅನ್ನುವುದು ದೊಡ್ಡ ವಿಪರ್ಯಾಸ.

ಇಟಲಿಯಲ್ಲಿ ಶ್ರೀಮಂತರು ಮತ್ತು ಅಧಿಕಾರಿಗಳು ತಮ್ಮ ವಿಲಾಸಿ ಜೀವನಕ್ಕೆ ಸುಂದರ ತರುಣಿಯರನ್ನು ಬಳಸಿಕೊಳ್ಳುವುದು ಸಾಮಾನ್ಯ. ಬಾರ್ಲುಸ್ಕೋನಿ ಎಂಬ ಪ್ರಧಾನಿ ಕಾಮಕೇಳಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ  ತರುಣಿಯರ ಜತೆಗೆ ‘ಬುಂಗಾ ಬುಂಗಾ’ ಎಂಬ ಒಂದು ರಾಸಲೀಲೆಯನ್ನು ಆರಂಭಿಸಿದ. ಒಂದು ಕಂಬದ ಸುತ್ತ ಹತ್ತು ಹದಿನಾಲ್ಕು ಕೆಲವೊಮ್ಮೆ ಇಪ್ಪತ್ತನಾಲ್ಕು ತರುಣಿಯರು ಕುಣಿಯುತ್ತಾರೆ. ನಿಧಾನವಾಗಿ ಅವರ ಬಟ್ಟೆಗಳು ಕಳಚಿಕೊಂಡು ಅವರು ಬತ್ತಲಾಗುತ್ತಾರೆ. ಪ್ರಧಾನಿ ಕೂಡಾ ಅವರ ಜತೆಗೆ ಕುಣಿದು ಕೊನೆಗೆ ಒಬ್ಬಳನ್ನು ತನ್ನ ಜತೆಗೆ ಮಲಗಲು ಕರೆದುಕೊಂಡು ಹೋಗುತ್ತಾನೆ.‌ ಎಷ್ಟೋ ಹೆಣ್ಣುಮಕ್ಕಳು ಅವನ ಬಲೆಗೆ ಬೀಳುತ್ತಾರೆ. ಅವರಿಗೆ ಬೇಕಾದದ್ದನ್ನೆಲ್ಲ ಅವನು ಕೊಡಿಸುತ್ತಾನೆ.  ಪತ್ರಿಕೆಗಳು ಅವನ  ಕಾಮಕೇಳಿಯ ಬಗ್ಗೆ  ಮನಸ್ಸಿಗೆ ಬಂದಂತೆ ಬರೆಯುತ್ತವೆ. ಕೊನೆಗೆ ಅವನ ಹೆಂಡತಿಯೇ ಅವನ ವಿರುದ್ಧ ತಿರುಗಿ ನಿಲ್ಲುತ್ತಾಳೆ. ಈ ಮಧ್ಯೆ ಬಾರ್ಲುಸ್ಕೋನಿ ಒಬ್ಬಳು ಅಪ್ರಾಪ್ತ ವಯಸ್ಸಿನ ಹುಡುಗಿಯ ಸಂಗ ಮಾಡಿ ಸಿಕ್ಕಿ ಬೀಳುತ್ತಾನೆ. ಈಗ ಜನರೇ ಅವನ ವಿರುದ್ಧ ತಿರುಗಿ ಬೀಳುತ್ತಾರೆ. ಆಗ ನಡೆಯುತ್ತಿದ್ದ ಈಜಿಪ್ಟ್‌ ಕ್ರಾಂತಿಯ ಪ್ರಭಾವದಿಂದ ವಿದ್ಯಾರ್ಥಿಗಳೂ ಪ್ರತಿಭಟಿಸುತ್ತಾರೆ.

ಈಜಿಪ್ಟ್ ಕ್ರಾಂತಿಯ ಪ್ರಭಾವದಿಂದ ಲಿಬಿಯಾದಲ್ಲೂ  ಸರ್ವಾಧಿಕಾರಿಯಾಗಿ ಜನರನ್ನು ಹಿಂಸಿಸುತ್ತಿದ್ದ  ಪ್ರಧಾನಿ ಮೂವಮ್ಮರ್ ಗಡ್ಡಾಫಿಯ ವಿರುದ್ಧ ವಿದ್ಯಾರ್ಥಿಗಳು ರಕ್ತರಹಿತ ಕ್ರಾಂತಿ ನಡೆಸುತ್ತಾರೆ.  ಗಡ್ಡಾಫಿ ತನ್ನ ವಿರುದ್ಧ ದನಿ ಎತ್ತಿದವರನ್ನೆಲ್ಲ ಕೊಲ್ಲಿಸುತ್ತಾನೆ. ಅವರ ಗಂಟಲು ಸೀಳಿಸುತ್ತಾನೆ. ವೈರಿಗಳನ್ನು ಕೊಲ್ಲಲು ಒಂದು ತಂಡವನ್ನೇ ರಚಿಸುತ್ತಾನೆ. ತನ್ನ ಹುಚ್ಚಾಟಗಳಿಂದ ಕುಪ್ರಸಿದ್ಧನಾಗುತ್ತಾನೆ. ಇದನ್ನೆಲ್ಲ ನೋಡಿದ ಇಡೀ ವಿಶ್ವ ಸಮುದಾಯವೇ  ಪ್ರತಿಭಟನಾಕಾರರ ಬೆಂಬಲಕ್ಕೆ ನಿಲ್ಲುತ್ತದೆ.

ಮಣಿಪುರದಲ್ಲಿ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಚಾನು ಶರ್ಮಿಳಾ  ತನ್ನ ರಾಜ್ಯದ ಹಿತ ಕಾಯಲು ಹನ್ನೊಂದು ವರ್ಷಗಳಷ್ಟು ದೀರ್ಘ ಕಾಲ   ಉಪವಾಸ ಮುಷ್ಕರ ಹೂಡುತ್ತಾಳೆ. ಅದಕ್ಕೆ ಕಾರಣ ಒಂದು ದಿನ ಅವಳು ಮಾಲೋಮ್ ಬಸ್ ನಿಲ್ದಾಣದಲ್ಲಿ ರಾಜ್ಯದ ಭದ್ರತಾ ಪಡೆಯ ಸೈನಿಕರು ಹತ್ತು ಮಂದಿ ನಾಗರಿಕರ ಕಗ್ಗೊಲೆ ನಡೆಸಿದ್ದನ್ನು ನೋಡುತ್ತಾಳೆ. ಅದರ ಹಿಂದಿನ ದಿವಸ ಉಗ್ರಗಾಮಿಗಳು ಭದ್ರತಾ ಪಡೆಯ ಸೈನಿಕರ ಮೇಲೆ ಆಕ್ರಮಣ ಮಾಡಿದ್ದರು. ಆದ್ದರಿಂದ ಉಗ್ರಗಾಮಿಗಳ ದಮನ ಮಾಡಲು ಸರಕಾರವು ಸೈನಿಕರಿಗೆ ವಿಶೇಷ ಅಧಿಕಾರ ಕೊಟ್ಟಿತ್ತು.‌ ಆದರೆ ಆ ಅಧಿಕಾರವನ್ನು ಸೇನಾಧಿಕಾರಿಗಳು ತಮಗೆ ಬೇಕಾದಂತೆ ಬಳಸುತ್ತಿದ್ದರು. ಸಿಕ್ಕ ಸಿಕ್ಕ ಹೆಣ್ಣುಮಕ್ಕಳನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡುತ್ತಿದ್ದರು. .ಈ ಅನ್ಯಾಯದ .  ವಿರುದ್ಧ  ಅವಳು ಉಪವಾಸ ಮುಷ್ಕರ ಮಾಡುತ್ತಾಳೆ. ಆದರೆ ಅದನ್ನು ಯಾರೂ ಗಮನಿಸುವುದಿಲ್ಲ. ‘ ದಿಲ್ಲಿಯಲ್ಲಿ ಅಣ್ಣಾ ಹಜಾರೆ ಕೆಲವೇ ದಿನ ಉಪವಾಸ ಮಾಡಿದರೂ ಇಡೀ ದೇಶದ ಗಮನ ಸೆಳೆದರು. ಅದರೆ ಶರ್ಮಿಳಾಳ ಮುಷ್ಕರಕ್ಕೆ ದೇಶ ಕಿವುಡಾಗಿದೆ ಏಕೆ? ‘ ಎಂದು ಮಣಿಪುರದ ಮಹಿಳೆಯರು ಪ್ರಶ್ನಿಸುತ್ತಾರೆ. ಶರ್ಮಿಳಾಳ ಉಪವಾಸವನ್ನು ನಿಲ್ಲಿಸಲು ಪೋಲಿಸರು ಎಲ್ಲ ಪ್ರಯತ್ನ ಮಾಡುತ್ತಾರೆ. ಕೊನೆಗೆ ಅವಳನ್ನು ಜೈಲಿಗೆ ಹಾಕಿ ಬಲಾತ್ಕಾರವಾಗಿ ತಿನ್ನಿಸುತ್ತಾರೆ.‌ಅದರೆ ಶರ್ಮಿಳಾ ಯಾವುದಕ್ಕೂ ಜಗ್ಗುವುದಿಲ್ಲ.  ಅವಳು ಮಣಿಪುರದವರಿಗೆ ಆದರ್ಶ ಮಹಿಳೆಯಾಗುತ್ತಾಳೆ. ಒಂದು ದಂತಕಥೆಯಾಗುತ್ತಾಳೆ.

ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ  ಮಾಧ್ಯಮ ದೊರೆ ರೂಪರ್ಟ್ ಮುರ್ಡೋಕ್   ಮೇಲೆ ಶೇವಿಂಗ್ ಕ್ರೀಮ್ ಎರಚಿದ ಜೋನಿ ಮಾರ್ಬಲ್ಸ್ ಎಂಬ ಸ್ವಯಂ ಘೋಷಿತ ಹಾಸ್ಯಗಾರನ ಕೆನ್ನೆಯ ಮೇಲೆ ‘ಟಪ್’ ಎಂದು ಕೈಯೆತ್ತಿ ಹೊಡೆದ ಮುರ್ಡೊಕನ ಚೀನಿ ಹೆಂಡತಿಯ ದಿಟ್ಟತನದ ಕಥೆ ಇಷ್ಟವಾಗುತ್ತದೆ. ಜ್ಯೋತಿ ಡೇ ಎಂಬ ಯುವ ಪತ್ರಕರ್ತರಿಗೆ ಗುರುವಿಂತಿದ್ದವನ  ಹಾಡುಹಗಲೇ ನಡೆದ ಕೊಲೆ ಪ್ರಕರಣದ ರಹಸ್ಯವನ್ನು ಭೇದಿಸುವ  ಪ್ರಕರಣ  ”ಖಲಾಸ್ ‘ಬರೆದ ಜ್ಯೋತಿ ಡೇ ಖಲಾಸ್ ಆದ ಕಥೆ’. ಮುರ್ಡೊಕ್ ಭೂಗತ ಮಾಫಿಯಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದುದರಿಂದ ಅವರೇ ಕೊಲೆ ನಡೆಸಿರಬಹುದು ಅನ್ನುವ   ಸಂದೇಹದ ಮೇಲೆ ಪೋಲಿಸರು ನಡೆಸಿದ ಅವಿರತ ಹುಡುಕಾಟದಿಂದ ಕೊಲೆಗಾರರು ಸಿಕ್ಕರೂ ಕೊಲೆ ಯಾಕಾಗಿ ಆಯಿತು ಅನ್ನುವ ವಿವರಗಳು ಸಿಗುವುದಿಲ್ಲ.

ಉತ್ತರ ಪ್ರದೇಶದಲ್ಲಿ   ಮಾಯಾವತಿ ಸರಕಾರ ಇದ್ದಂತೆಯೇ   ಅತ್ಯಾಚಾರ-ಕೊಲೆ ಹಗರಣಗಳು ಪ್ರತಿದಿನವೆಂಬಂತೆ ಅಲ್ಲಲ್ಲಿ ನಡೆಯುತ್ತಿದ್ದ ಕಾಲವದು. ವಿವಾಹಿತ ಮಂತ್ರಿಯೊಬ್ಬ ಮಧುಮಿತಾ ಶುಕ್ಲಾಳನ್ನು ಮೋಹಿಸಿ ಅವಳು ಗರ್ಭಿಣಿಯಾದಾಗ ಅವಳನ್ನೂ ತನ್ನ ಹೆಂಡತಿಯನ್ನೂ ಗುಂಡಿಕ್ಕಿ ಕೊಂದ. ಇನ್ನೊಬ್ಬ ಮಂತ್ರಿ ಔಧ್ ವಿ.ವಿ.ಯ ಕಾನೂನು ವಿದ್ಯಾರ್ಥಿನಿಯ ಮೇಲೆ ಕಣ್ಣು ಹಾಕಿ ಅವಳನ್ನು ಅಪಹರಿಸಿ  ಕೊಲೆ ಮಾಡಿದ. ಇನ್ನೊಬ್ಬ ಮಂತ್ರಿ ಸಂಶೋಧನಾ ವಿದ್ಯಾರ್ಥಿನಿಯೋರ್ವಳ   ಮಾನಭಂಗ ಮಾಡಿದ. ಇಂಥ ನೂರಾರು ದುರ್ಘಟನೆಗಳು ಉತ್ತರಪ್ರದೇಶಕ್ಕೆ ರೇಪ್ ಸ್ಟೇಟ್ ಅನ್ನುವ ಹೆಸರನ್ನಿತ್ತವು.

ಮಾಧ್ಯಮದ ಕುರಿತಾದ ಲೇಖನಗಳೊಂದಿಗೆ ಇಲ್ಲಿ ರಾಜಕೀಯ ಕ್ಷೇತ್ರದ ಕೆಲವು ಮಹತ್ವದ ವ್ಯಕ್ತಿಗಳ ವ್ಯಕ್ತಿಚಿತ್ರಣಗಳೂ ಇವೆ. ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರಿದ ಅಣ್ಣಾ ಹಜಾರೆ, ಕನ್ನಡ ಪತ್ರಿಕಾ ರಂಗದ ಆದ್ಯ ಪ್ರವರ್ತಕ ಹರ್ಮನ್ ಮೋಗ್ಲಿಂಗ್, ದೇಶದ ಸ್ವಾತಂತ್ರ್ಯಕ್ಕಾಗಿ ಗುಡ್ಡಗಾಡು ಜನಾಂಗದವರನ್ನು ಸಂಘಟಿಸಿ ಬ್ರಿಟಿಷ್ ಸರಕಾರದ ವಿರುದ್ಧ ಹೋರಾಡಿದ ಅಲ್ಲೂರಿ ಸೀತಾರಾಮರಾಜು, ಭಾರತದ ಕ್ರಿಕೆಟ್ ನಾಯಕ ಧೋನಿ, ಉದ್ಯಮಿ ಸುರೇಶ್ ಕಲ್ಮಾಡಿ ,ಜಗತ್ಪ್ರಸಿದ್ಧ ಕಲಾವಿದ ಎಂ.ಎಫ್.ಹುಸೇನ್   ಮೊದಲಾದವರ ಜೀವನದ ಸ್ಥೂಲ ನೋಟಗಳನ್ನು ಲೇಖಕರು ಇಲ್ಲಿ ಕೊಟ್ಟಿದ್ದಾರೆ.   ಕೃತಿಯಲ್ಲಿರುವ ಎಲ್ಲ ೫೨ ಲೇಖನಗಳೂ  ಒಂದಿಲ್ಲೊಂದು ದೃಷ್ಟಿಯಿಂದ   ಅತ್ಯಂತ ಆಸಕ್ತಿಕರ ವಿಷಯಗಳನ್ನು ಹೊಂದಿವೆ. ಸಂಕೀರ್ಣ ವಿಷಯಗಳನ್ನು ಅತ್ಯಂತ ಸರಳ ಶೈಲಿಯಲ್ಲಿ ಬರೆಯುವ ಹೆಬ್ಬಾರರ ಪ್ರತಿಭೆ ಈ ಕೃತಿಯಲ್ಲಿಯೂ ಮೆರೆದಿದೆ.‌ ಪ್ರತಿಯೊಂದು ಲೇಖನಕ್ಕೆ ಅವರು ಕೊಡುವ ಶೀರ್ಷಿಕೆಗಳು ಮತ್ತು ಲೇಖನವನ್ನು ಆರಂಭಿಸುವ ಪರಿ ಓದುಗನನ್ನು ಅಕರ್ಷಿಸುವಂತಿದೆ.‌ಅಲ್ಲಲ್ಲಿ ಬಳಸುವ ಲಘುಹಾಸ್ಯದ ಸ್ಪರ್ಶವು ಬರವಣಿಗೆಗೆ ಮೆರುಗು ನೀಡಿದೆ. ೩೫೨ ಪುಟಗಳ ಈ ಪುಸ್ತಕ ಮಾಧ್ಯಮದ ಮತ್ತು ನ್ಯಾಯಶಾಸ್ತ್ರದ ವಿದ್ಯಾರ್ಥಿಗಳು ಪರಾಮರ್ಶನ ಗ್ರಂಥವಾಗಿ ಅಧ್ಯಯನಕ್ಕೆ ಬಳಸಬಹುದಾದ ಒಂದು ಮಹತ್ವದ ಗ್ರಂಥ.

‍ಲೇಖಕರು Admin

5 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading