ದೆಹಲಿ ದೇಶದ ರಾಜಧಾನಿಯಾಗಿದ್ದೇಕೆ ?

ಚೈತ್ರಿಕಾ ನಾಯ್ಕ ಹರ್ಗಿ

ಪುರಾಣದಲ್ಲಿ ಮಹಾಭಾರತದ ಇಂದ್ರಪ್ರಸ್ಥ, ಮಧ್ಯಯುಗೀನ ಭಾರತ ಇತಿಹಾಸದಲ್ಲಿ ಮೊಘಲ್ ಸಾಮ್ರಾಟ್ ಷಹಜಹಾನ್ ನ ರಾಜಧಾನಿ, ನಂತರ ಬ್ರಿಟಿಷ್ ರಾಜ್ ಕಾಲದಲ್ಲಿ ‘ ಲ್ಯೂಟಿಯಾನ್ಸ್ ನ ದೆಹಲಿ’ಯಾಗಿ ಭಾರತದ ರಾಜಕೀಯ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದು ಭಾರತದ ರಾಜಧಾನಿ ದೆಹಲಿ. ಇಂದು ದೇಶದ ರಾಜಕೀಯ ಚುಕ್ಕಾಣಿ, ಪ್ರಮುಖ ಸರ್ಕಾರಿ ಮೂಲ ಕಛೇರಿಗಳ ಕೇಂದ್ರ ಸ್ಥಾನವಾಗಿದೆ. ಹೀಗಿರುವ ದೆಹಲಿ ನಮಗೆ ದಕ್ಷಿಣದವರಿಗೆ ಬಲು ದೂರ ಅನಿಸುವುದಂತು ಸಹಜ.

‘’ಬೆಂಗಳೂರಿನಿಂದ ದೆಹಲಿ ತಲುಪೋಕೆ ವಿಮಾನದಲ್ಲಿ 2 ತಾಸು 50 ನಿಮಿಷ ಬೇಕಾ… ? ಅದಕ್ಕಿಂದ ಬೆಂಗಳೂರಿಂದ  ಶ್ರೀಲಂಕಾ ನಮಗೆ ಹತ್ತಿರ’’ ಎಂದು ಅನೇಕ ಸ್ನೇಹಿತರು ಹೇಳಿದ್ದಾರೆ. ಹೌದು, ರಾಜಕೀಯ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ನೋಡಿದರೆ ರಾಜಧಾನಿ ದೇಶದ ಮಧ್ಯ ಭಾಗದಲ್ಲಿರಬೇಕು. ಹೊಟ್ಟೆ ಭಾಗದಲ್ಲಿರಬೇಕಾದ ರಾಜಧಾನಿ ಹೃದಯ ಭಾಗದಲ್ಲೇಕಿದೆ ? ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು.

ದೇಶದ ರಾಜಧಾನಿಯಾಗುವಂತಹ ಗುಣಲಕ್ಷಣ ದೆಹಲಿಗೆ ಮಾತ್ರ ಇತ್ತೆ? ಅದಕ್ಕಿಂತ ಸ್ವಲ್ಪ ಕೆಳಭಾಗಕ್ಕೆ ಬಂದರೆ ಭೌಗೋಳಿಕವಾಗಿ ಮಹಾರಾಷ್ಟ್ರದ ನಾಗಪುರವನ್ನು ಭಾರತದ ‘ಜೀರೊ ಮೈಲ್ ಸೆಂಟರ್’ ಎನ್ನುತ್ತಾರೆ. ಭಾರತದ ಎಲ್ಲಾ ಭಾಗಕ್ಕೂ ಮಧ್ಯ ಸ್ಥಳ ಎಂದು ನಾಗಪುರವನ್ನು ಗುರುತಿಸಲಾಗಿದೆ. ಆದರೂ ದೆಹಲಿ ಏಕೆ ರಾಜಧಾನಿಯಾಯಿತು.. ಎಂಬುದಕ್ಕೆ ಇತಿಹಾಸ ಕಾರಣ ಮತ್ತು ಉತ್ತರ ಎರಡನ್ನು ನೀಡುತ್ತದೆ.

3 ರಿಂದ 6 ನೇ ಶತಮಾನದವರೆಗೆ ಗುಪ್ತರು, 6 ರಿಂದ 7 ನೆ ಶತಮಾನ ವರ್ಧನ ಮನೆತನ, ನಂತರ 731-1160ರ ವರೆಗೆ ತೋಮರ, ಆ ನಂತರ 1160-1206 ರ ತನಕ ಚಹಮಾನಸ, ಬರೋಬ್ಬರಿ 1206-1526 ಕಾಲದವರೆಗೆ ದೆಹಲಿ ಸುಲ್ತಾನರು, ಮುಂದುವರೆದು ಮಧ್ಯಯುಗೀನ ಕಾಲದಲ್ಲಿ 1526 -1757ರ ಅವಧಿಗೆ ಮೊಘಲರು, ಅಲ್ಪಕಾಲ ಮರಾಠಾ ಮತ್ತು ಖಾಲ್ಸಾ, ಕೊನೆಯಲ್ಲಿ ಸ್ವತಂತ್ರ್ಯ ಪೂರ್ವ 1803 ರಿಂದ 1947 ತನಕ ಬ್ರಿಟಿಷರು ದೆಹಲಿಯನ್ನು ಆಳಿದ್ದಾರೆ.

ದೆಹಲಿ ಸುಲ್ತಾನರಂತು ದಕ್ಷಿಣದ ನರ್ಮದೆಯವರೆಗೆ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು. ದಕ್ಷಿಣವನ್ನು ಗೆಲ್ಲುವ ಮಹಾತ್ವಾಕಾಂಕ್ಷೆ ಇದ್ದ ಮುಹಮ್ಮದ್ ಬಿನ್ ತುಘಲಕ್ ಅನೇಕ ಕಾರಣಗಳಿಂದ ರಾಜಧಾನಿಯನ್ನು ಮಹಾರಾಷ್ಟ್ರದ ಧೌಲತಾಬಾದ್ ಗೆ ಸ್ಥಳಾಂತರ ಮಾಡಲು ಹೋಗಿ ಉತ್ತರ ಭಾಗದ ಹಿಡಿತ ಕಳೆದುಕೊಂಡು ಮತ್ತೆ ದೆಹಲಿಗೆ ರಾಜಧಾನಿ ಸ್ಥಳಾಂತರಿಸುವ ನಿರ್ಧಾರಗಳಿಂದ  ಹುಚ್ಚು ದೊರೆ ಎನಿಸಕೊಂಡ.

ಹಾಗೇನಾದರೂ ಮಹಾರಾಷ್ಟ್ರ ದೀರ್ಘಕಾಲ ತುಘಲಕರಿಂದ ಆಳಲ್ಪಟ್ಟು ಸುಜಜ್ಜಿತ ನಗರ ನಿರ್ಮಾಣವೇನಾದರು ಇಲ್ಲಾಗಿದ್ದಲ್ಲಿ ಈ ಭಾಗ ಭಾರತದ ರಾಜಧಾನಿಯಾಗುತ್ತಿತ್ತೆ? ಗೊತ್ತಿಲ್ಲ. ಹೀಗೆ ಉತ್ತರ ಸಂಪೂರ್ಣ ಮತ್ತು ದಕ್ಷಿಣದ ಕೆಲವು ಭಾಗವನ್ನು ಬಹುಕಾಲ ಆಳಿದವರಿಗೆಲ್ಲ ರಾಜಧಾನಿಯಾಗಿದ್ದು ದೆಹಲಿ. ಅತ್ತಕಡೆ ಈಗಿನ ಪಾಕಿಸ್ತಾನ ಅಪಘಾನಿಸ್ತಾನದ ಭಾಗಗಳು ಉತ್ತರದ ಆಳ್ವಿಕೆಯ ಭಾಗವಾಗಿದ್ದು ಮತ್ತು ಈಗ ಭಾರತದ ದಕ್ಷಿಣ ಭಾಗದ ಕೆಲ ಪ್ರದೇಶ ಈ ಮನೆತನಗಳ ಹಿಡಿತದಲ್ಲಿದ್ದರಿಂದ ಆಗ ದೆಹಲಿ ಅವರಿಗೆ ಆಳ್ವಿಕೆಗೆ ಮಧ್ಯ ಸ್ಥಾನವಾಗಿತ್ತು.

1600 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ನಂತರ ವ್ಯಾಪಾರದ ಜೊತೆ ರಾಜಕೀಯ ಮತ್ತು ಸಾಮ್ರಾಜ್ಯಶಾಹಿ ಧೋರಣೆಯಿಂದ ಬ್ರಿಟಿಷರು ಭಾರತದ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳಲು ಯುದ್ಧದಲ್ಲಿ ತೊಡಗಲಾರಂಭಿಸಿದರು. ಹೀಗೆ 1803 ರಲ್ಲಿ ಬಿಟಿಷ್ ಈಸ್ಟ್ ಇಂಡಿಯಾ ಕಂಪನಿ ಎರಡನೆ ಆಂಗ್ಲೋ ಮರಾಠಾ ಯುದ್ಧದ ಸಮಯದಲ್ಲಿ ಮರಾಠಾ ಸೈನ್ಯವನ್ನು ದೆಹಲಿಯಲ್ಲಿ ಸೋಲಿಸುತ್ತದೆ. ಜೊತೆಗೆ 1857 ಸೈನಿಕರ ದಂಗೆಯಲ್ಲಿ ‘ದೆಹಲಿ ಸೀಜ್’ ಎಂದು ಭಾರತೀಯರ ಮಾರಣ ಹೋಮ ಮಾಡಿ ದೆಹಲಿಯನ್ನು ಬ್ರಿಟಿಷ್ ಸರ್ಕಾರ ತನ್ನ ಪಂಜಾಬ್ ಪ್ರಾಂತ್ಯಕ್ಕೆ ಸೇರಿಸಿಕೊಳ್ಳುತ್ತದೆ.

ತದನಂತರ 1912 ರವರೆಗೆ ಕಲ್ಕತ್ತಾವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಆಡಳಿತ ನಡೆಸುತ್ತಿದ್ದ ಬ್ರಿಟಿಷರ ಚಿತ್ತ ದೆಹಲಿಯ ಕಡೆ ಹರಿಯುತ್ತದೆ. ಕೋಲ್ಕತ್ತಾ ಭಾರತದ ಪೂರ್ವದ ತುದಿಗೆ ಇದ್ದ ಕಾರಣ ದೆಹಲಿಯನ್ನು ರಾಜಧಾನಿಯಾಗಿ ಮಾಡಿಕೊಳ್ಳಲು ಬ್ರಿಟಿಷರು ಮುಂದಾಗುತ್ತಾರೆ. ಐದನೇ ಜಾರ್ಜ್ ರಾಣಿ ಮೇರಿ ಜೊತೆ 1911 ರಲ್ಲಿ ರಾಜಧಾನಿ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡುತ್ತಾನೆ.

ಆಡಳಿತಕ್ಕೆ ಬೇಕಾದ ಕಟ್ಟಡ ನಿರ್ಮಾಣ ಮತ್ತು ನಗರದ ಸೌಂದರ್ಯವನ್ನು ಹೆಚ್ಚಿಸಲು ಬ್ರಿಟಿಷರು ಮುಂದಾದಾಗ ದೆಹಲಿ ವಾಸ್ತುಶಿಲ್ಪಿ ಎಡ್ವಿನ್ ಲ್ಯೂಟಿಯಾನ್ಸ್ ಕೈ ಚಳಕದಲ್ಲಿ ಹೊಸ ರೂಪ ಪಡೆಯುತ್ತದೆ. ಆಗ ವೈಸರಾಯ್ ಹೌಸ್ ಎಂದು ಕರೆಯಲ್ಪಡುತ್ತಿದ್ದ, 340 ಕೋಣೆಗಳು, 330 ಎಕರೆ ಪ್ರದೇಶವನ್ನು ಆವರಿಸಿದ ಬಂಗಲೆ ಇಂದಿನ ರಾಷ್ಟ್ರಪತಿ ಭವನ, ಹಾಗೆ  ಇಂಡಿಯಾ ಗೇಟ್, ರಾಷ್ಟ್ರಪತಿ ಭವನ ಆವರಣದ 4 ಬಂಗ್ಲೊ, ಹೈದರಾಬಾದ್ ಮತ್ತು ಬರೋಡಾ ಅರಮನೆ ಲ್ಯೂಟಿಯಾನ್ಸ್ ನ ಕೊಡುಗೆಗಳು.

ಆದ್ದರಿಂದ ದೆಹಲಿಗೆ ‘ಲ್ಯೂಟಿಯಾನ್ಸ್ ನ ದೆಹಲಿ’ ಎಂದು ಕೂಡ ಕರೆಯುತ್ತಾರೆ. ‘ಆದರೆ, ಲ್ಯೂಟಿಯಾನ್ಸ್ ನ ಕೊಡುಗೆಗಿಂತ, ಕನೌಟ್ ಪ್ಲೇಸ್, ಪೂರ್ವ ಮತ್ತು ಪಶ್ಚಿಮದಲ್ಲಿರುವ ಕೋರ್ಟ್, ತೀನ್ ಮೂರ್ತಿ ಹೌಸ್, ಸಪ್ಧರ್ ಜಂಗ್ ಏರ್ ಪೋರ್ಟ್, ನ್ಯಾಷನಲ್ ಸ್ಟೇಡಿಯಂ, 400 ಕ್ಕೂ ಹೆಚ್ಚು ಸರ್ಕಾರಿ ಮನೆಗಳನ್ನು ಕಟ್ಟಿದ ರಾಬರ್ಟ್ ಟಾರ್ ರಸೆಲ್, ಹಾಗೆಯೆ ಪಾರ್ಲಿಮೆಂಟ್, ನಾರ್ಥ್ ಬ್ಲಾಕ್ ಸೌಥ್ ಬ್ಲಾಕ್  ನ ಪ್ರಮುಖ ವಾಸ್ತುಶಿಲ್ಪಿ ಸರ್ ಹರ್ಬರ್ಟ್ ಬೇಕರ್ ಲ್ಯೂಟಿಯಾನ್ ನಷ್ಟೆ ಪ್ರಮುಖರಾಗಿದ್ದಾರೆ  ಆದ್ದರಿಂದ ಲ್ಯೂಟಿಯಾನ್ಸ್ ನ ದೆಹಲಿ ಎಂದು ಕರೆಯುವುದು ಸರಿಯಲ್ಲ’ ಎಂಬುದು ಅನೇಕರ ಅಭಿಪ್ರಾಯ.

ಹೀಗೆ ಮೊದಲನೆ ಮಹಾಯುದ್ಧದ ನಂತರ ದೆಹಲಿಯ ಉತ್ತರದಲ್ಲಿ ತಾತ್ಕಾಲಿಕ ಸೆಕ್ರೆಟರಿಯೇಟ್ ಮೂಲಕ ಆರಂಭವಾದ ನಿರ್ಮಾಣ ಕಾರ್ಯ 1931 ರಲ್ಲಿ ಈ ಎಲ್ಲಾ ಕಾರ್ಯಗಳು ಪೂರ್ಣಗೊಂಡು ಬ್ರಿಟಿಷರ ವೈಸರಾಯ್ ಲಾರ್ಡ್ ಇರ್ವಿನ್ ರಾಜಧಾನಿ ದೆಹಲಿಯನ್ನು ಉದ್ಘಾಟನೆ ಮಾಡುತ್ತಾನೆ. ಈ ರೀತಿಯಲ್ಲಿ ಸ್ವಾತಂತ್ರ್ಯಕ್ಕೂ ಮುಂಚೆ ದೆಹಲಿ ಸುಸಜ್ಜಿತವಾಗಿ ನಿರ್ಮಾಣವಾಗುತ್ತದೆ.

ಸ್ವಾತಂತ್ರ್ಯ ಹೋರಾಟದ ಪ್ರಮುಖ ಕೇಂದ್ರವು ಕೂಡ  ಆಗಿದ್ದ ದೆಹಲಿಯಲ್ಲಿ, ಸ್ವಾತಂತ್ರ್ಯಾನಂತರ ಭಾರತೀಯರಿಗೆ ಅಧಿಕಾರ ನಡೆಸಲು ಬೇಕಾದ ಎಲ್ಲಾ ಕಟ್ಟಡಗಳು ರೋಡುಗಳು ಸುಸಜ್ಜಿತ ರೀತಿಯಲ್ಲಿ ಈಗಾಗಲೆ ನಿರ್ಮಾಣವಾಗಿದ್ದರಿಂದ ದೆಹಲಿ ಭಾರತದ ರಾಜಧಾನಿಯಾಗಿ ಮುಂದುವರಿಯಿತು. 1956 ರಲ್ಲಿ ಕೇಂದ್ರಾಡಳಿತ ಪ್ರದೇಶ ಎಂದು ಆ ನಂತರ 1992 ರಲ್ಲಿ 69 ವಿಧಿಗೆ ತಿದ್ದುಪಡಿ ತರುವ ಮೂಲಕ ದೆಹಲಿಯನ್ನು ‘ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಎಂದು  ಘೋಷಿಸುವ ಮೂಲಕ ದೇಶದ ರಾಜಧಾನಿಗೆ ಸಂವಿಧಾನ ಮುದ್ರೆ ಬೀಳುತ್ತದೆ.

‍ಲೇಖಕರು avadhi

June 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: