'L' ಎಲ್ಲಾ ಓದುಗನ ಸ್ವಗತ..

ಎಲ್ ಕಾದಂಬರಿಯ ಓದಿನ ಮರುಟಿಪ್ಪಣಿ
ಛಂದಸ್ಸುಗಳಲ್ಲಿ ಬದುಕು ಕಾಣಿಸುವ “ L”
ಡಾ. ಪಲ್ಲವಿ ಹೆಗಡೆ
ಸುಗಮವಾಗಿ ಓದಿ ಮುಗಿಸಿದ ಪುಸ್ತಕವೊಂದು, ಸುರುಳಿ ಬಿಚ್ಚುತ್ತಾ ಮನಸ್ಸಿನಿಂದ ಮರೆಯಾಗದೆ ಕಾಡುವುದು ಅಪರೂಪ. ಎಲ್ ಓದಿ ಮೂರುದಿನಗಳಾದರೂ ‌ದಿನಕ್ಕೊಂದು ಹೊಸ‌ನೆನಪು ಮತ್ತು ಹೊಳಹು‌ ಕೊಡುತ್ತಿದೆ. ಯಾಕೆ ಹೀಗೆ ಕಥೆ-ಕಾದಂಬರಿಯೊಂದು ಬಹುಕಾಲ ನನ್ನೊಳಗೆ ಉಸಿರಾಡುತ್ತಿರುತ್ತದೆ? ಎಂಬ ಯೋಚನೆಗೆ ಅದು ನನ್ನದೇ ಬದುಕಿನ ಕಥನವಾಗಿದ್ದರೆ ಎಂಬ ಉತ್ತರವನ್ನು ಕಂಡುಕೊಂಡಿದ್ದೇನೆ.
ಕವಿತೆಯ ಧ್ಯಾನದೊಳಗೆ, ಕವಿಗೆ ಬಾಲ್ಯ, ಯೌವನ ಮತ್ತು ಪ್ರೌಢಾವಸ್ಥೆಗಳು ಚಿಂತನೆಯಲ್ಲಿ ತೆರೆದುಕೊಳ್ಳುವುದು‌ ಒಬ್ಬನ ನೆನಪಲ್ಲ ಅದು. ಒಬ್ಬ ಚಿತ್ರಕಾರ, ನಾಟಕಕಾರ, ಹಾಡುಗಾರ ಅಥವಾ ಕಲಾತ್ಮಕವಾಗಿ ಅಭಿವ್ಯಕ್ತಿಸುವುದನ್ನು ಜನ್ಮತಃ ಪಡೆದ, ಅಭ್ಯಾಸದಿಂದ ಮೈಗೂಡಿಸಿಕೊಂಡ ಪ್ರತಿಯೊಬ್ಬನ ಬದುಕು ಎಲ್ ಹೇಳುವ ಕಥೆಯಾಗಬಹುದು ಅನಿಸುತ್ತಿದೆ.
ಸಾಮಾನ್ಯವಾಗಿ ಬಾಲ್ಯವು ಅಮ್ಮ-ಅಪ್ಪ ಅಥವಾ ಮನೆಯ ಕೇಂದ್ರದಲ್ಲಿ‌ ಕಟ್ಟಿಕೊಂಡದ್ದು. ಅದು ಹೆಕ್ಕುವ ಹೂವು, ಹಾರುವ ಹಾತೆ, ಹಸಿದು ಮಲಗುವ ರಾತ್ರಿ ಮತ್ತು ಒದ್ದೆಕಣ್ಣಿನ ತೇವ ತರುವ ಹೃದಯಾರ್ದ್ರತೆಗಳಲ್ಲಿ ಮೂಡಿಸುವ ಚಿತ್ರಗಳಲ್ಲಿ ಒಬ್ಬ ಕವಿತೆ ಬರೆದರೆ ಇನ್ನೊಬ್ಬ ಹಾಡಬಹುದು ಮತ್ತೊಬ್ಬ ಬಣ್ಣ ಮತ್ತು ರೇಖೆಗಳೊಂದಿಗೆ ಹೇಳಿಕೊಳ್ಳಬಹುದು.
ಹೀಗೆ ತನ್ನನ್ನು ತೆರೆದುಕೊಳ್ಳುವ, ಸಮಯವನ್ನು ಕಳೆಯುವುದರ ಒಂದು ಮಾರ್ಗವಾಗಿಸಿಕೊಂಡ ಅಭಿವ್ಯಕ್ತಿಯು ಮುಂದೆ ಯೌವನದಲ್ಲಿ, ಸಂಗಾತಿಯ ಬಿಸಿಯಲ್ಲಿ ಪಾಕವಾಗುತ್ತಾ, ಮೆದುವಾಗುತ್ತಾ‌ ಚಟವಾಗುವ ಸಾಧ್ಯತೆಯನ್ನೆ ಪ್ರಪಂಚ ಗುರುತಿಸಬಹುದು. ಇವನು ಕವಿ, ಚಿತ್ರಕಾರ, ಹಾಡುಗಾರ, ನಟ‌ ಹೀಗೆಲ್ಲಾ.
ವಿಚಿತ್ರವೆಂದರೆ ಇವೆಲ್ಲಾ ಬಾಹ್ಯದ ಗುರುತೋ, ಆಂತರಿಕ ಸ್ವಭಾವವೋ ಎಂಬುದನ್ನು ಅರಿಯುತ್ತಾ ಹೋಗುವಾಗ ‘ನಾನು’ ಆವರಣದೊಳಗೆ ಬಂದಿರುತ್ತೇವೆ ಅನಿಸುತ್ತದೆ. ಈಗ ಕಾವ್ಯ, ಚಿತ್ರ, ಹಾಡು, ನಟನೆಯೆಲ್ಲಾ ಪ್ರೌಢಮನಸ್ಸಿನ ವ್ಯಕ್ತಿಯೋರ್ವನ ಸ್ವಗತಗಳಾಗುತ್ತವೆ ಅನಿಸುತ್ತದೆ.
ಎಲ್ ಕೂಡಾ ಹೀಗೆ ನನ್ನೊಳಗೆ ಮೂರು ವಯೋಮಾನದೊಳಗೆ ಕಾಣಿಸಿಕೊಳ್ಳುತ್ತಾನೆ. ಪ್ರಾಸ, ಯತಿ ಮತ್ತು‌ ಗಣಗಳಲ್ಲಿ ಬದುಕೆಂಬ ಕಾವ್ಯವನ್ನು ಮಿಡಿಯುತ್ತಿದ್ದಾನೆ. ಅವನ ಸ್ವಗತವನ್ನು ಓದಿ ಮುಗಿಸಿದ ಮೇಲೂ ಅವೆಲ್ಲಾ ನನ್ನ ಸ್ವಗತವಾಗುತ್ತಿರುವುದಕ್ಕೆ ಏನು ಹೇಳಲಿ!
ಬಹುಶಃ ಎಲ್ ಎಲ್ಲಾ ಓದುಗನ ಸ್ವಗತವಾಗುತ್ತಾನೆ ಮತ್ತು ಹೀಗೆ ಉಸಿರಾಡುತ್ತಲೇ ಇರುತ್ತಾನೆ.

‍ಲೇಖಕರು avadhi

June 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: