ದಿವ್ಯಶ್ರೀ ಹೆಗಡೆ
**
ಬುದ್ಧನಾಗಬೇಕು ನಾನು
ರಾಜನಾಗಿ ಮೆರೆಯಲು,
ಐಶ್ವರ್ಯಗಳ ಒಡೆಯನಾಗಲು,
ವೈಭೋಗಗಳನ್ನು ಸುಖಿಸಲು,
ಬಂಗಾರದರಮನೆಯಲಿ ಬದುಕಲು,
ಬುದ್ಧ, ಬುದ್ಧನಾಗುವ ಮೊದಲು ಇರುವಂತೆ
ಇದಾವುದು ಅಲ್ಲವೇ ಅಲ್ಲವಲ್ಲಾ.
ಬುದ್ಧನಾಗಲು.
ಬಡ ಮುದುಕನ ಕಂಡಾಗ
ಈ ಯೌವ್ವನ ಕ್ಷಣಿಕ ಎಂದೆನಿಸಲು.
ರೋಗಿ ಕಂಡಾಗ,
ಅರಮನೆಯ ವೈಭವದಿಂದ
ವೈರಾಗ್ಯ ಬರಲು.
ಸತ್ತ ಹೆಣ ಕಂಡಾಗ,
ಜೀವನದ ಆತ್ಮ ಪರಮಾತ್ಮ ಸಮ್ಮಿಲನಗಳ
ಧನ್ಯತೆಯ ನೆನೆಯಲು.
ಬುದ್ಧನಾಗಬೇಕು?
ಬುದ್ಧನೆ ಆಗಬೇಕೆಂದಿಲ್ಲ
ವೈರಾಗ್ಯ, ಮುಕ್ತಿಗೆ.
ಆದರೆ ಅವನಂತೆ
ಬದ್ಧನಾಗಿರಬೇಕು.
ಅಂಗುಲಿಮಾಲನoತ ರಕ್ಕಸ
ಕಂಡಾಗಲೂ,
ಅದೇ ಮಂದಸ್ಮಿತವದನನಾಗಿ.

ರಾಜ ವೈಭೋಗ ಕಣ್ಮುಂದಿದ್ದರೂ
ಕಿಂಚಿತ್ ಆಶೆ ಎಂಬುದಿಲ್ಲದೆ.
ಹೆಂಡಿರು ಮಕ್ಕಳು ಎದುರಿದ್ದರೂ
ಮೋಹದ ಪಾಶವಿಲ್ಲದೆ.
ನಿಶ್ಚಲನಾಗಿ, ನಿಶ್ಚಿಂತನಾಗಿ
ದೃಡಚಿತ್ತನಾಗಿರಬೇಕು
ಬುದ್ಧನಾಗಲು.
ಕಾಯ ಕಲ್ಪಗಳಿಗೆ
ಬದ್ಧನಾಗಿರಬೇಕು
ಬದುಕ ಕಲಿಯಬೇಕು
ಬುದ್ಧನಂತಹ ಬಾಳ ಬದುಕಲು
ಬದ್ಧನಾಗಿರಬೇಕು
ಆದರೂ ಬುದ್ಧನಂತಿರಬೇಕು
ಬುದ್ದಿ ಹೇಳಲು.
ಹಾ! ನಾನು ಬುದ್ಧನಾಗಲು ಬುದ್ಧನಾಗುವ
ಆಸೆ ಮೊದಲು ಬಿಡಬೇಕು.






0 Comments