ಇದು ‘ಗೋರಿಯ ಮೇಲೆ ರಾಗಿಯ ಕೊನರು’

ಸಂವರ್ತ ‘ಸಾಹಿಲ್’ ಹೊಸ ಪುಸ್ತಕದೊಂದಿಗೆ ಓದುಗರ ಮುಂದೆ ಬಂದಿದ್ದಾರೆ.

ಜಸಿಂತ ಕಾರ್ಕೆಟ್ಟ ಅವರ ಕವಿತೆಗಳ ಗುಚ್ಛವನ್ನು ಸಂವರ್ತ ‘ಗೋರಿಯ ಮೇಲೆ ರಾಗಿಯ ಕೊನರು’ ಆಗಿ ಅನುವಾದಿಸಿದ್ದಾರೆ

‘ಅಹರ್ನಿಶಿ ಪ್ರಕಾಶನ’ ಇದನ್ನು ಪ್ರಕಟಿಸಿದೆ.

ಇದೆ 6 ರಂದು ಬೆಂಗಳೂರಿನ ಬುಕ್ ವರ್ಮ್ ಮಳಿಗೆಯಲ್ಲಿ ಈ ಕೃತಿಯ ಬಿಡುಗಡೆ ಹಾಗೂ ಲೇಖಕರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿದೆ.

ಈ ಸಂದರ್ಭದಲ್ಲಿ ಈ ಕೃತಿಗೆ ಅನುವಾದಕ ಸಂವರ್ತ ‘ಸಾಹಿಲ್’ ಬರೆದ ಮಾತು ಇಲ್ಲಿದೆ-

**

ಅದೊಂದು ಪುಟ್ಟ ಹಳ್ಳಿ. ಅಲ್ಲೊಂದು ಶಾಲೆ. ಟೀಚರ್ ಹಲವು ಬಣ್ಣಗಳ ಒಂದು ಚಾರ್ಟ್ ಅನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದಾರೆ.  ಕುಳಿತಲ್ಲೇ ಕೈಯೆತ್ತಿದ್ದಾರೆ ತರಗತಿಯಲ್ಲಿ ಕೆಲವು ವಿದ್ಯಾರ್ಥಿಗಳು. ಇನ್ನೂ ಕೆಲವರು ವರ್ಣರಂಜಿತ ಚಾರ್ಟ್ ಅನ್ನೇ ನೋಡುತ್ತಾ ಆಲೋಚಿಸುವಂತೆ ನಟಿಸುತ್ತಿದ್ದಾರೆ. ಇವರೆಲ್ಲರ ನಡುವೆ ಒಬ್ಬ ಹುಡುಗ ನೆಲವನ್ನೇ ದಿಟ್ಟಿಸುತ್ತಾ ನಿಂತಿದ್ದಾನೆ. ಟೀಚರ್ ಅವನನ್ನು ಮತ್ತೊಮ್ಮೆ ‘ವೈಟ್’ ತೋರಿಸಲು ಹೇಳುತ್ತಾರೆ. ಆತನ ಕಡೆಯಿಂದ ಯಾವುದೇ ಉತ್ತರ ಬರುತ್ತಿಲ್ಲ. ಟೀಚರ್ ಭಾಷೆ ಬದಲಿಸಿ ‘ಸಫೇದ್’ ತೋರಿಸುವಂತೆ ಹೇಳುತ್ತಾರೆ. ಹುಡುಗ ತಲೆಯೆತ್ತುತ್ತಿಲ್ಲ. ಮಗದೊಮ್ಮೆ ಟೀಚರ್ ‘ಸಫೇದ್’ ತೋರಿಸುವಂತೆ ಹೇಳುತ್ತಾರೆ. ಹುಡುಗನ ಕಡೆಯಿಂದ ಮತ್ತೆ ನಿರುತ್ತರ. ಟೀಚರ್ ಸಿಟ್ಟಾಗುತ್ತಾರೆ. ‘ನಿನ್ನ ತಲೆಯಲ್ಲಿ ಸೆಗಣಿ ಇದೆಯಾ? ಶಾಲೆಗೇ ಬೆಂಚ್ ಬಿಸಿ ಮಾಡಲಿಕ್ಕೆ ಬರುವುದಾ?’ ಎಂದೆಲ್ಲ ಬಯ್ಯುತ್ತಾರೆ.

ಸಮಗ್ರ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ನನ್ನ ಮುಂದೆ ಹೇಳುವಾಗ, ಆ ಹುಡುಗ ಬೆಳೆದು ನಿಂತಿದ್ದ. ಆತನ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಎಷ್ಟೋ ವರ್ಷಗಳ ಹಿಂದಿನ ಪ್ರಸಂಗವನ್ನು ನೆನಪಿಸಿಕೊಂಡ ಅವನು ಹೇಳಿದ್ದು: “ಅಂದು ಟೀಚರ್ ಆ ಚಾರ್ಟಿನಲ್ಲಿ ‘ಚರ್ಕ’ ತೋರಿಸಲು ಹೇಳಿದ್ದರೆ, ನಾನು ತಕ್ಷಣ ತೋರಿಸುತ್ತಿದ್ದೆ.”

ಮುಂಡಾರಿ ಆದಿವಾಸಿ ಭಾಷೆಯಲ್ಲಿ ‘ಚರ್ಕ’ ಎಂದರೆ ಬಿಳಿ ಬಣ್ಣ! ಟೀಚರ್ ಪೇಟೆಯವರಾಗಿದ್ದು, ಅವರಿಗೆ ಆದಿವಾಸಿ ಭಾಷೆ ಬರುತ್ತಿರಲಿಲ್ಲ. ಆದಿವಾಸಿ ಜನರೇ ಹೆಚ್ಚಿದ ಆ ಪ್ರದೇಶದಲ್ಲಿಯೂ ಶಾಲೆಯಲ್ಲಿ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಪಾಠ ಮಾಡಲಾಗುತಿತ್ತು. ತಮ್ಮದಲ್ಲದ ಭಾಷೆಯಲ್ಲಿ ತಮ್ಮ ಬದುಕಿಗೆ ನೇರ ಸಂಬಂಧ ಇಲ್ಲದ ಪಠ್ಯವನ್ನು ಆದಿವಾಸಿ ಮಕ್ಕಳು ಅಭ್ಯಾಸ ಮಾಡಬೇಕಿತ್ತು.

“ಅಂದು ಬಹಳ ಅವಮಾನ ಆಯಿತು ಅನ್ನುವುದಕ್ಕಿಂತ ಹೆಚ್ಚು, ಓದು ಬರಹ ನನ್ನ ಕೈಯಲ್ಲಾಗುವುದಲ್ಲವೇನೋ ಅಂತ ಅನ್ನಿಸಿತು. ಹಾಗಾಗಿ ಮಾರನೇ ದಿನದಿಂದ ನಾನು ಶಾಲೆಗೆ ಹೋಗಲೇ ಇಲ್ಲ. ನನ್ನ ಶಿಕ್ಷಣ ಅಲ್ಲಿಗೆ ಮುಗಿಯಿತು.”

ಹೇಗೋ ಕಷ್ಟ ಪಟ್ಟು ಕಲಿತು ಒಂದು ನೌಕರಿ ಗಿಟ್ಟಿಸಿಕೊಂಡಿದ್ದ ಆದಿವಾಸಿ ವ್ಯಕ್ತಿಯೊಬ್ಬರು ತಮ್ಮ ಶಾಲಾ ಕಾಲೇಜಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೇಳಿದರು, “ವಿಜ್ಞಾನ, ಸಮಾಜಶಾಸ್ತ್ರ, ಲೆಕ್ಕ ಇವೆಲ್ಲ ಕಲಿಯುವದು ಎರಡನೇ ಹಂತ. ಮೊದಲು ಅದನ್ನು ವಿವರಿಸಲಾಗುತ್ತಿದ್ದ ಭಾಷೆಯನ್ನು ಕಲಿಯಬೇಕಿತ್ತು. ನಮ್ಮ ಹೆಚ್ಚಿನ ಶಕ್ತಿ ಆ ಭಾಷೆಯನ್ನು ಕಲಿಯುವುದರಲ್ಲೇ ಸೋರಿಹೋಗುತಿತ್ತು. ಪರೀಕ್ಷೆಯಲ್ಲಿ ಸರಿಯಾದ ಉತ್ತರ ಗೊತ್ತಿದ್ದರೂ, ಸರಿಯಾದ ಭಾಷೆಯಲ್ಲಿ ಬರೆಯಲು ಎಡವಟ್ಟಾಗಿ ಕಡಿಮೆ ಅಂಕ ಬರುತಿತ್ತು.”

ಕಾಲೇಜಿಗೆ ಸೇರಿದ ಆದಿವಾಸಿ ಹುಡುಗಿಯೊಬ್ಬಳು ಹೇಳಿದ ಮಾತು: “ಕಾಡಿನ ಪ್ರತಿ ಮರ, ಪ್ರತಿ ಸೊಪ್ಪು ಗುರುತಿಸಬಲ್ಲೆ. ಆದರೆ ಬಾಟನಿ ಸಬ್ಜೆಕ್ಟ್ ಅಲ್ಲಿ ನಾನು ಫೇಲ್ ಆಗುತ್ತೇನೆ.” ಶಾಲೆಯನ್ನು ಅರ್ಧದಲ್ಲೇ ಬಿಟ್ಟುಬಿಟ್ಟ ಮತ್ತೊಬ್ಬ ಆದಿವಾಸಿ ಹುಡುಗ ಹೇಳಿದ್ದು: “ಎ ಫಾರ್ ಆಪಲ್ ಅಂತ ಕಲಿಸುತ್ತಿದ್ದರು. ನಾವು ಆದಿವಾಸಿ ಮಂದಿ. ನಮಗೆ ಆಪಲ್ ತಿಂದೂ ಗೊತ್ತಿಲ್ಲ, ಕಂಡೂ ಗೊತ್ತಿಲ್ಲ. ಅದು ನಮಗೆ ಡೊಂಬರ ಹಣ್ಣಿನ ಹಾಗೆ ಕಾಣಿಸುತಿತ್ತು. ಆದರೆ ಅದು ಡೊಂಬರ ಅಲ್ಲ ಎಂದು ಹೇಳುತ್ತಿದ್ದರು. ಆದಿವಾಸಿಯೇತರ ಮಕ್ಕಳಲ್ಲಿ ಕೆಲವರು ಆಪಲ್ ತಿಂದಿದ್ದರು. ಅವರಿಗೆ ಡೊಂಬರ ಪರಿಚಯ ಅಷ್ಟೇನೂ ಇರಲಿಲ್ಲ. ಆದರೆ ಅವರಿಗೆ ಗೊತ್ತಿಲ್ಲದೇ ಇದ್ದದ್ದು ಸಮಸ್ಯೆ ಆಗಲಿಲ್ಲ. ನಮಗೆ ಗೊತ್ತಿಲ್ಲದೇ ಇದ್ದದ್ದು ಸಮಸ್ಯೆ ಆಗುತಿತ್ತು.”

ಶಾಲೆ ಮುಗಿಸಿ ಆದಿವಾಸಿ ಜನರ ಅಭಿವೃದ್ಧಿಗೆ ದುಡಿಯುತ್ತಿದ್ದ ಎನ್.ಜಿ.ಓ. ಒಂದರಲ್ಲಿ ಕೆಲಸಕ್ಕಿದ್ದ ಒಬ್ಬ ಆದಿವಾಸಿ ವ್ಯಕ್ತಿ ಹೇಳಿದ್ದು:  “ನಾವು ಶಾಲೆಯ ಗಾಂಧೀ, ನೆಹರು, ಅಂಬೇಡ್ಕರ್, ಶಿವಾಜಿ  ಬಗ್ಗೆ ಓದಿದ್ದೇವೆಯೇ ಹೊರತು, ಬಿರ್ಸಾ ಮುಂಡಾನ ಕುರಿತಾಗಿ ಓದಲಿಲ್ಲ. ಅವನ ವೀರಗಾಥೆ ಮನೆಯಲ್ಲಿ ಕೇಳಿ ತಿಳಿದುಕೊಂಡಿದ್ದೆವು. ಆದರೆ ಅವನ ಕುರಿತು ಶಾಲೆಯ, ಪಠ್ಯದಲ್ಲಿ ಒಂದಕ್ಷರವೂ ಇಲ್ಲದೆ ಹೋದಾಗ, ನಾವು, ನಮ್ಮ ಲೋಕ, ನಮ್ಮ ಬದುಕು ಇವೆಲ್ಲ ಗೌರವಾರ್ಹವಲ್ಲ ಎಂದೇ ನಂಬಿ ಬೆಳೆದೆವು. ಶಿಕ್ಷಣ ನಾಗರೀಕತೆಯ ಪ್ರತೀಕ ಎಂದೇ ನಂಬಿಸಲಾಗುತಿತ್ತು. ಆ ಕನ್ನಡಿಯಲ್ಲಿ ನಮ್ಮ ಮುಖ ಕಾಣಿಸಿಕೊಳ್ಳದೆ ಇದ್ದ ಕಾರಣ ನಾವು ನಾಗರೀಕರಲ್ಲ ಎಂದೇ ನಾಮಗನ್ನಿಸಿತು. ನಾಗರೀಕರಾಗುವ ಒತ್ತಡ ನಮ್ಮ ಮೇಲೆ ಬಿತ್ತು. ನಾಗರೀಕರಾಗುವುದು ಎಂದರೆ ನಮ್ಮ ಆದಿವಾಸಿತನವನ್ನು ಕಳಚಿಕೊಳ್ಳುವುದು ಎಂದೇ ನಾವು ಅರ್ಥೈಸಿಕೊಂಡೆವು.”

ಆಗಷ್ಟೇ ಶಾಲೆ ಮುಗಿಸಿ ಕಾಲೇಜಿಗೆ ಹೋಗಲು ಸಿದ್ಧಳಾಗಿದ್ದ ಆದಿವಾಸಿ ಹುಡುಗಿಯ ಮಾತು: “ನಾವು ಮೊದಮೊದಲು ಶಾಲೆಗೆ ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದೆವು. ಊಟದ ಸಮಯ ನಮ್ಮ ಆಹಾರ ನೋಡಿ ಆದಿವಾಸಿಯೇತರ ಮಕ್ಕಳು ತಮಾಷೆ ಮಾಡುತ್ತಿದ್ದರು. ಹಾಗಾಗಿ ನಾವು ಬುತ್ತಿ ತೆಗೆದುಕೊಂಡು ಹೋಗುವುದನ್ನೇ ನಿಲ್ಲಿಸಿದೆವು. ಬೆಳಗ್ಗೆ ತಿಂಡಿ ತಿಂದು ಹೋದರೆ, ಆಮೇಲೆ ಸಂಜೆಯೇ ಊಟ. ಶಾಲೆಯ ಹತ್ತಿರ ಇದ್ದ ಮರಗಳಿಂದ ಕೆಲವೊಮ್ಮೆ ಹಣ್ಣು ಕಿತ್ತು ತಿನ್ನುತ್ತಿದೆವು.” ಆದಿವಾಸಿ ಮಕ್ಕಳು ತಮ್ಮ ಆದಿವಾಸಿ ಹಳ್ಳಿಯಿಂದ ದೂರದಲ್ಲಿರುವ ಹಳ್ಳಿಯಲ್ಲಿ ಶಾಲೆಗೆ ಹೋಗಬೇಕಾಗುತ್ತಿತ್ತು. ಅದೆಷ್ಟೋ ದೂರ ನಡೆಯಬೇಕು. ಚಳಿಗಾಲದಲ್ಲಿ ಕೈಯಲಿ ಬೆಂಕಿ ಪಟ್ಟಣ ಇಟ್ಟುಕೊಂಡು ಹೋಗುತ್ತಿದ್ದರು. ದಾರಿಯಲ್ಲೆಲ್ಲಾದರೂ ಒಂದಿಷ್ಟು ಒಣ ಎಲೆಗಳನ್ನು ಸೇರಿಸಿ ಅದಕ್ಕೆ ಬೆಂಕಿ ಹಚ್ಚಿ, ಒಂದಿಷ್ಟು ಹೊತ್ತು ಮೈ ಕಾಸಿಕೊಂಡು ಮುಂದೆ ಸಾಗುತ್ತಿದ್ದರು. ಮಳೆಗಾಲದಲ್ಲಿ ಬ್ಯಾಗಿನಲ್ಲಿ ಒಂದು ಜೋಡಿ ಬಟ್ಟೆ ಹಿಡಿದುಕೊಂಡು ಹೋಗುತ್ತಿದ್ದರು. ಮೈತುಂಬಿ ಹರಿಯುತ್ತಿದ್ದ ನದಿಯನ್ನು ದಾಟುವಾಗ ಹಾಕಿಕೊಂಡ ಬಟ್ಟೆ ಒದ್ದೆಯಾಗುತ್ತಿತ್ತು. ಇಷ್ಟೆಲ್ಲಾ ಕಷ್ಟಗಳ ನಡುವೆ ಹಸಿದ ಹೊಟ್ಟೆಯಲ್ಲೇ ಇರುವುದು ಹೆಚ್ಚು ಕಷ್ಟ ಆಗುತಿತ್ತೋ, ಇಲ್ಲ ಕಷ್ಟವೇ ಅನ್ನಿಸುತ್ತಿರಲಿಲ್ಲವೋ, ಗೊತ್ತಿಲ್ಲ!

***

ಇಂಥಾ ದೈನಂದಿನ ಚಿಕಪುಟ್ಟ ವಿಷಯಗಳಲ್ಲಿರುವ ಕಣ್ಣಿಗೆ ಕಾಣಿಸದ ಆದರೆ ಕಾಲ್ಕತ್ತರಿಸುವ ಹಿಂಸೆಯ ಟಿಪ್ಪಣಿಗಳು ನನ್ನ ನೋಟ್ ಪುಸ್ತಕವನ್ನು ತುಂಬುತ್ತಾ ಹೋದವು. ಹಾಗೆ ಆಗುವ ಸಮಯ ನನಗೆ ಬೌದ್ಧಿಕ ಮಟ್ಟದಲ್ಲಿ ಅರ್ಥವಾಗಿದ್ದ ಮಾತೊಂದು ಅನುಭವದ ಮಟ್ಟದಲ್ಲಿ ಅರ್ಥವಾಯಿತು.

ನಾನು ಝಾರ್ಖಂಡಿಗೆ ಹೋಗಲು ಕಾರಣ: ಮೂರು ದಶಕಗಳ ಕಾಲ ಝಾರ್ಖಂಡಿನ ಆದಿವಾಸಿ ಜನರ ಬದುಕು ಮತ್ತು ಹೋರಾಟದ ಸ್ನೇಹಿತರಾಗಿರುವ ಸಾಕ್ಷ್ಯಚಿತ್ರ ನಿರ್ದೇಶಕ ಶ್ರೀಪ್ರಕಾಶ್ ತಮ್ಮ ಹೊಸ ಚಲನಚಿತ್ರವೊಂದಕ್ಕೆ ಚಿತ್ರಕತೆ ಬರೆಯಲು ಕೇಳಿಕೊಂಡರು. ತನ್ನ ಮನಸ್ಸಿನಲ್ಲಿದ್ದ ಕತೆಯ ಬೀಜರೂಪವನ್ನು ಶ್ರೀಪ್ರಕಾಶ್ ನನ್ನ ಬಳಿ ಹೇಳಿದಾಗ ಎಕ್ಸೈಟ್ ಆದೆ. ಓರ್ವ ಆದಿವಾಸಿ ಹುಡುಗಿ ಶಿಕ್ಷಣಕ್ಕಾಗಿ ಪೇಟೆಗೆ ಬಂದು ಅಲ್ಲಿನ ಬದುಕಿಗೆ ಹೊಂದಿಕೊಳ್ಳಬೇಕಾದ ಒತ್ತಡವನ್ನು ನಿಭಾಯಿಸುವ ಕತೆ ಅದು. ನಾನು ತತಕ್ಷಣವೇ ಚಿತ್ರಕತೆ ಬರೆಯಲು ಒಪ್ಪಿಕೊಂಡಿದೆ. ನಾನು “ಡನ್” ಎಂದ ಬೆನ್ನಿಗೆ ಶ್ರೀಪ್ರಕಾಶ್ ಒಂದು ಕಂಡೀಶನ್ ಹಾಕಿದರು. “ಓದಿನ ಮೂಲಕ ಮೂಡಿದ ಅರಿವು, ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಲು, ಹೋರಾಟ-ಚಳುವಳಿಗಳಿಗೆ ಇಂಫಾರ್ಮ್ಡ್ ಸಪೋರ್ಟ್ ಕೊಡಲು, ಚರ್ಚೆ ಮಾಡಲು ಉಪಯುಕ್ತವಾಗಬಹುದಲ್ಲದೆ ಕಲಾಸೃಷ್ಟಿಗೆ, ಕತೆ ಬರೆಯಲು ಅಲ್ಲ. ಅದಕ್ಕಾಗಿ ನೀನು ಝಾರ್ಖಂಡಿಗೆ ಬಂದು, ಆದಿವಾಸಿಗಳ ಜೊತೆಗಿದ್ದು, ಅವರ ಬದುಕನ್ನು ಸಮೀಪದಿಂದ ಅರಿತು ಕತೆ ಹೆಣೆಯಬೇಕು.” ನನಗೂ ಆ ಮಾತು ಸರಿ ಅನ್ನಿಸಿತು. ಝಾರ್ಖಂಡಿಗೆ ಹೋಗಿ, ಮೇಲೆ ಉದಾಹರಿಸಿದ ಸಣ್ಣ ಸಣ್ಣ ಆದರೆ ಸಂಕೀರ್ಣ ಸಂಗತಿಗಳನ್ನು ಆ ಬದುಕನ್ನು ಬದುಕಿದ ಜನರ ದನಿಯಲ್ಲೇ ಕೇಳಿದಾಗ ಶ್ರೀಪ್ರಕಾಶ್ ಮಾತು ಸರಿ ಅನ್ನಿಸುವುದಕ್ಕಿಂತ ಹೆಚ್ಚಾಗಿ ಸರಿ ತೋರಿತು. ಸರಿ ಅಂತ ಅನ್ನಿಸುವುದಕ್ಕೂ, ಸರಿದೋರುವುದಕ್ಕೂ ಇರುವ ವ್ಯತ್ಯಾಸ ಏನು ಎಂದೂ ಅರಿವಾಯಿತು.

ರಾಂಚಿಯಿಂದ ಒಂದು ಎಪ್ಪತ್ತೈದು ಕಿಲೋಮೀಟರು ಆ ಕಡೆಗೆ ಕಾಡಿನ ಮಧ್ಯೆ ಇರುವ ಒಂದು ಆದಿವಾಸಿ ಹಳ್ಳಿ ಗರುಡಪೀಡಿ. ಝಾರ್ಖಂಡ್ ಪ್ರದೇಶಕ್ಕೆ ಮೊದಲ ಬಾರಿಗೆ ಹೋಗಿದ್ದ ನಾನು, ಏನೇನೂ ಅಡಚಣೆ ಇಲ್ಲದೆ ಆ ಆದಿವಾಸಿ ಹಳ್ಳಿಗೆ ಹೋಗಿ ಇದ್ದು ಬಂದಿದ್ದೆ. ಅಲ್ಲಿನ ಜನರ ಕತೆಗಳನ್ನು ಕೇಳಿ, ಅವರ ಮತ್ತು ಆದಿವಾಸಿಯೇತರ ಬದುಕಿನ ನಡುವೆ, ಅವರ ಹಳ್ಳಿ ಮತ್ತು ಪಟ್ಟಣದ ನಡುವೆ ಇರುವ ಟೆನ್ಶನ್ ಅನ್ನು ಹತ್ತಿರದಿಂದ ಗಮನಿಸಿ, ಅವರ ಬದುಕಿನ ಕತೆಗಳ ಮೂಲಕ ತಿಳಿದುಕೊಂಡ ನಾನು ಗರುಡಪೀಡಿಯಿಂದ ಹಿಂದುರುಗಿದ ನಾನು, ರಾಂಚಿಗೆ ಬಂದಾಗ ಶ್ರೀಪ್ರಕಾಶ್ ಬಳಿ ಹೇಳಿದೆ, “ರಾಂಚಿಯಿಂದ ಗರುಡಪೀಡಿಗೆ ಹೋಗಲು ಎಷ್ಟು ದೂರವೋ, ಗರುಡಪೀಡಿಯಿಂದ ರಾಂಚಿಗೆ ಬರಲು ಅದರ ಹತ್ತರಷ್ಟು ದೂರವಿದೆ.”

ನಾನು ಒಬ್ಬ ಆದಿವಾಸೆಯೇತರ ತುಂಬಾ ಸುಲಭದಲ್ಲಿ ಆದಿವಾಸಿ ಪ್ರದೇಶವನ್ನು ಪ್ರವೇಶಿಸಿ, ಅವರ ಬದುಕಿನ ಭಾಗವೇ ಅನ್ನುವಂತೆ ಅವರಿಂದ ‘ಅಕ್ಸೆಪ್ಟೆಡ್’ ಆಗಲು ಸಾಧ್ಯ. ಅದೇ ಆದಿವಾಸಿ ಜನರಿಗೆ ಆದಿವಾಸಿಯೇತರ ಜನರ ಪಟ್ಟಣವನ್ನು ಅಷ್ಟೇ ಸುಲಭದಲ್ಲಿ ಪ್ರವೇಶಿಸಲು, ಅಲ್ಲಿ ‘ಅಕ್ಸೆಪ್ಟೆಡ್’ ಅಂತ ಅನ್ನಿಸಲು ಸಾಧ್ಯವೇ ಇಲ್ಲ. ಈ ಮಾತು ನನ್ನ ಬಾಯಿಯಿಂದ ಹೊರಟಾಗ ಶ್ರೀಪ್ರಕಾಶ್ ಮುಗುಳ್ನಕ್ಕು, “ಈಗ ಬಹುಶಃ ಚಿತ್ರಕತೆ ಬರೆಯಲು ಶುರು ಮಾಡಬಹುದು,” ಅಂತಂದರು. ನನಗೂ, ಆಗ ಶ್ರೀಪ್ರಕಾಶ್ ಮೊದಲಿಗೆ ಹಾಕಿದ ಕಂಡೀಷನ್ ಯಾಕೆ ಎಂದು ಸರಿಯಾಗಿ ಅರ್ಥವಾಯಿತು.

***

ಇದಾದ ಬೆನ್ನಿಗೆ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಶ್ರೀಪ್ರಕಾಶ್, ತಮಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಮೊನಾಲಿಸಾ ಕಿಸ್ಕುವನ್ನು ಫೋನ್ ಮೂಲಕ ಸಂದರ್ಶನ ಮಾಡುವಂತೆ ಹೇಳಿದರು. ನಾನು ಒಪ್ಪಿದೆ. ಮೊನಾಲಿಸಾ ಕಿಸ್ಕುವಿಗೆ ಸಂದೇಶ ರವಾನಿಸಿ, ಅವಳ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗದ ಒಂದು ಸಮಯ ನಿಗಧಿಪಡಿಸಿ ಫೋನ್ ಮಾಡಿದೆ. ಫೋನ್ ಮಾಡಿದ ತಕ್ಷಣ ಆಕೆ ನಾನು ಯಾವ ಊರಿನವನು ಎಂದು ಕೇಳಿದಳು. ನಾವು ‘ಮಣಿಪಾಲ’ ಅನ್ನುತ್ತಿದ್ದಂತೆ ಆಕೆ ಯಾವುದೋ ಹಳೆ ಮಿತ್ರ ಸಿಕ್ಕಂತೆ ಖುಷಿ ಪಟ್ಟು, “ನಾನು ಕಲಿತದ್ದು ಸುರತ್ಕಲ್ಲಿನ ಇಂಜಿನೀಯರಿಂಗ್ ಕಾಲೇಜಿನಲ್ಲಿ. ಮಣಿಪಾಲಕ್ಕೆ ಆಗಾಗ ಬರುತ್ತಿದ್ದೆವು” ಎಂದು, ಮಣಿಪಾಲದ ಕೆಲವು ಹೋಟೆಲ್, ಅಲ್ಲಿನ ಅಡುಗೆ ಕುರಿತು ವಿಚಾರಿಸಿ ಅವೆಲ್ಲ ಇನ್ನೂ ಹಾಗೆ ಇವೆಯಾ ಎಂದು ಕೇಳಿದಳು. ನಾನೂ ಉತ್ತರಿಸಿದೆ. ಇದು ನಮ್ಮಿಬ್ಬರ ನಡುವೆ ಒಂದು ‘ಈಸ್’ ತಂದಿತು. ಅದರಿಂದಾಗಿ ಸಂದರ್ಶನ ಆರಂಭಿಸಿದಾಗ ನನಗೆ ಪ್ರಶ್ನೆ ಕೇಳಲೂ ಸುಲಭವಾಗಿ, ಅದಕ್ಕುತ್ತರಿಸಲು ಮೊನಾಲಿಸಲಿಗೂ ಸುಲಭವಾಗಿ ಸಂದರ್ಶನಕ್ಕೊಂದು ಹೊಸ ಆಳ ದಕ್ಕುತ್ತಾ ಹೋಯಿತು.

ಪ್ರಶ್ನೆಗಳ ಪಟ್ಟಿ ಮಾಡಿಟ್ಟುಕೊಂಡಿದ್ದ ನನಗೆ ದಕ್ಕುತ್ತಿದ್ದ ಉತ್ತರಗಳು ಹೊಸ ಪ್ರಶ್ನೆಗಳಿಗೆ ಜನ್ಮ ನೀಡಿ ಸಂಧರ್ಶನ ದೀರ್ಘವಾಗುತ್ತಾ ಹೋಯಿತು. ಮೊನಾಲಿಸಾ ಎಲ್ಲೂ ತಾಳ್ಮೆಗೆಡದೆ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಹೋದಳು. ಒಂದು ಹಂತದಲ್ಲಿ, ನಾನು ಕೇಳಿದ ಪ್ರಶ್ನೆಗೆ ಉತ್ತರಿಸುವುದು ಬಿಟ್ಟು ಮೊನಾಲಿಸಾ, “ಈಗ ನಿನಗೆ ಕೇಳಲು ನನ್ನ ಬಳಿ ಕೆಲವು ಪ್ರಶ್ನೆ ಇದೆ,” ಎಂದಳು. ನಾನು ಆ ತನಕದ ಮಾತುಕತೆಯಲ್ಲಿ ಏರ್ಪಟ್ಟಿದೆ ಸ್ನೇಹದ ಸಲುಗೆಯಲ್ಲಿ, “ನೀನು ನನ್ನ ಸಂದರ್ಶನ ಆಮೇಲೆ ಮಾಡುವಿಯಂತೆ, ಮೊದಲಿಗೆ ನಾನು ನನ್ನ ಪ್ರಶ್ನೆಗಳನ್ನೆಲ್ಲ ಕೇಳಿ ಮುಗಿಸುತ್ತೇನೆ” ಎಂದೆ. ಮೊನಾಲಿಸಾ, “ಇಲ್ಲ, ನೀನು ಮೊದಲು ನನ್ನ ಪ್ರಶ್ನೆಗೆ ಉತ್ತರಿಸು” ಎಂದಳು. ನಾನು, “ಸಂದರ್ಶನದ ನಡುವಿನಲ್ಲಿ ಇದೆಂತಾ ಅಡ್ಡ ಸಂದರ್ಶನ?” ಎಂದು ತಮಾಷೆ ಮಾಡಿ ನಗಾಡಿದೆ. ಮೊನಾಲಿಸಾ ನಾಗಲಿಲ್ಲ. “ಐ ಆಮ್ ಸೀರಿಯಸ್” ಅಂದಳು. ಆ ಸೀರಿಯಸ್ನೆಸ್ ಅವಳ ದನಿಯಲ್ಲಿ ಸ್ಪಷ್ಟವಿತ್ತು.

ನಾನು ತಮಾಷೆ ಬದಿಗಿಟ್ಟೆ. ಪ್ರಶ್ನೆಗಳ ಪಟ್ಟಿಯನ್ನೂ ಬದಿಗಿಟ್ಟೆ. ಶರಣಾಗಿ, “ಸರಿ, ಕೇಳು…” ಎಂದೆ.  “ಈ ಸಿನೆಮಾಗೆ ನೀನು ಯಾಕೆ ಕತೆ ಬರೆಯುತ್ತಿರುವುದು?” ನಾನು ಸೀರಿಯಸ್ ಆಗಿದ್ದ ಹವೆಯನ್ನು ಸ್ವಲ್ಪ ತಿಳಿಗೊಳಿಸುವ ಆಲೋಚನೆ ಇಟ್ಟುಕೊಂಡು, “ಯಾಕೆಂದರೆ, ಶ್ರೀಪ್ರಕಾಶ್ ನನ್ನ ಬಳಿ ಬರೆಯಲು ಹೇಳಿದ್ದಾರೆ,” ಎಂದು ತುಸು ನಕ್ಕೆ. ಮೊನಾಲಿಸಾ ಮೊದಲಿನಷ್ಟೇ ಸೀರಿಯಸ್ ಆಗಿ, “ಶ್ರೀಪ್ರಕಾಶ್ ನಿನ್ನನ್ನೇ ಯಾಕೆ ಕೇಳಿಕೊಂಡರು?” ಎಂಬ ಪ್ರಶ್ನೆ ಇಟ್ಟಳು. “ಅದನ್ನು ಅವರನ್ನೇ ಕೇಳಬೇಕು,” ಎಂದೆ ಮತ್ತೆ ಆ ಸೀರಿಯಸ್ನೆಸ್ ಅನ್ನು ತಿಳಿಗೊಳಿಸುವ ಪ್ರಯತ್ನದಲ್ಲಿ. ಮೊನಾಲಿಸಾ, “ನಿನ್ನ ಹೆಸರಿಗೆ ಫಿಲಂ ಇನ್ಸ್ಟಿಟ್ಯೂಟಿನ ಟ್ಯಾಗ್ ಇದೆ ಎಂಬ ಕಾರಣಕ್ಕೆ ಅಲ್ವಾ? ಇಲ್ಲದೆ ಇದ್ದರೆ, ನಮ್ಮ ಕತೆ ಹೇಳಲು ನಮಗೆ ಬರುವುದಿಲ್ಲವೇನು?” ಎಂದು ಕೇಳಿದಳು. ಆ ಪ್ರಶ್ನೆ ನನ್ನ ಮತ್ತು ಶ್ರೀಪ್ರಕಾಶ್ ಅವರ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಿತ್ತು. ನಾನು ದಂಗಾದೆ. ನಾನು ಸ್ವಲ್ಪ ಡಿಫೆನ್ಸಿವ್ ಆಗಿ, “ಸ್ಟ್ಯಾಂಪ್ ಇರುವ ಪ್ರಶ್ನೆಯಲ್ಲ, ನಾನು ಟ್ರೈನ್ಡ್ ಆಗಿರುವ ಕಾರಣಕ್ಕೆ ನನ್ನನ್ನು ಕೇಳಿಕೊಂಡಿದ್ದಾರೆ,” ಅಂತಂದೆ. “ಹೌದಾ? ಈ ಚಿತ್ರಕತೆ ಬರೆದು ಮುಗಿದ ಮೇಲೆ ಏನು ಮಾಡುತ್ತೀ?” ಅಂತ ಕೇಳಿದಳು. “ಮುಂದೆ ಯಾವ ಸಿನಿಮಾದ ಕೆಲಸಕ್ಕೆ ಆಹ್ವಾನಿಸಲಾಗುತ್ತದೋ, ಆ ಸಿನೆಮಾಗೆ ಚಿತ್ರಕತೆ ಬರೆಯುತ್ತೇನೆ,” ಎಂದೆ. ತುಸು ವ್ಯಂಗ್ಯದ ದನಿಯಲ್ಲಿ ಮೊನಾಲಿಸಾ, “ನಮ್ಮ ಕತೆಯ ಬಗ್ಗೆ ಇಷ್ಟೆಯಾ ನಿನಗೆ ಇರುವ ಕಮಿಟ್ಮೆಂಟ್? ಇದೊಂದು ಪ್ರಾಜೆಕ್ಟ್ ಮಾತ್ರವಾ ನಿನಗೆ?” ಎಂದು ಕೇಳಿದಾಗ ನೆಲ ಜಾರಿದಂತಾಯಿತು. ನನಗೆ ಯಾಕೋ ಸ್ವಲ್ಪ ಪಾಪ ಪ್ರಜ್ಞೆ ಕಾಡಲು ಶುರುವಾಯಿತು. “ಅಲ್ಲ, ಇದೊಂದು ಪ್ರಾಜೆಕ್ಟ್ ಮಾತ್ರ ಅಲ್ಲ. ಅಷ್ಟೇ ಆಗಿದ್ದರೆ ನಾನು ಇಲ್ಲಿ ತನಕ ಬಂದು ಕೆಲಸ ಮಾಡಬೇಕಾಗಿರಲಿಲ್ಲ,” ಎಂದೆ. “ನಿನಗೆ ಶ್ರೀಪ್ರಕಾಶ್ ಹೇಗೆ ಪರಿಚಯ?” ಎಂದು ಕೇಳಿದಳು. ಉತ್ತರಿಸಿದೆ. “ಅವರೊಂದಿಗೆ ಎಷ್ಟು ವರ್ಷದ ಒನಾಟ?” ಎಂದು ಕೇಳಿದಳು. ಉತ್ತರಿಸಿದೆ. “ನಿನ್ನ ಹಿನ್ನಲೆ ಏನು?” ಎಂದು ಕೇಳಿದಳು. ಉತ್ತರಿಸಿದೆ. “ನಿನಗೆ ಆದಿವಾಸಿ ಬದುಕು ಆದಿವಾಸಿ ಜಗತ್ತಿನ ಬಗ್ಗೆ ಇರುವ ಆಸಕ್ತಿಗೆ ಕಾರಣ ಏನು?”. ಉತ್ತರಿಸಿದೆ. “ನಿನಗೆ ಆದಿವಾಸಿ ಸ್ನೇಹಿತರು ಇದ್ದಾರಾ?”. ಉತ್ತರಿಸಿದೆ. “ನೀನು ಇಲ್ಲಿ ತನಕ ಮಾತನಾಡಿಸಿದ ಆದಿವಾಸಿಗಳಿಂದ ಏನು ಕಲಿತೆ?”. ಉತ್ತರಿಸಿದೆ. “ನಿನ್ನ ಬದುಕಿನ ಯಾವ ಅಂಶ ನಿನಗೆ ಆದಿವಾಸಿಗಳ ಕಷ್ಟ ಹೋರಾಟಗಳೊಂದಿಗೆ ಗುರುತಿಸಿಕೊಳ್ಳಲು ಮಾರ್ಗವಾಗುತ್ತದೆ, ಪೂರಕವಾಗುತ್ತದೆ?”. ಉತ್ತರಿಸಿದೆ. ಸಿನಿಮಾದಲ್ಲಿ ಪೊಲೀಸರು ನಡೆಸುವ ಇಂಟೆರ್ರೋಗೇಷನ್ ನೋಡಿದ್ದೆ. ಅದಕ್ಕೆ ಹತ್ತಿರವಾದ ಅನುಭವ ಇದಾಗಿತ್ತು.

ನನಗೆ ಆ ಚಿತ್ರಕತೆ ಬರೆಯಲು ನಾನು ಸರಿಯಾದ ವ್ಯಕ್ತಿ ಹೌದೋ ಅಲ್ಲವೋ ಎಂಬ ಸಂಶಯ ಹುಟ್ಟಿಕೊಂಡಿತು. ಹೌದು, ನಾನೊಬ್ಬ ಹೊರಗಿನವ. ಈ ಕತೆಯನ್ನು ನಾನು ಹೇಳುವುದಕ್ಕಿಂತ ಬಹುಶಃ ಮೊನಾಲಿಸಾ ಹೇಳಿದರೆ ಸರಿ. ಇಲ್ಲ, ಯಾವುದೋ ಆದಿವಾಸಿ ಹೇಳಿದರೆ ಸರಿ ಅಂತ ಅನ್ನಿಸಲು ಶುರುವಾಯಿತು. ನನಗಿರುವ ಕಮಿಟ್ಮೆಂಟ್ ಏನು? ನನಗಿರುವ ಸ್ಟೇಕ್ ಆದರೂ ಏನು? ಎಂದು ನನ್ನನ್ನೇ ನಾನು ಕೇಳಿಕೊಳ್ಳತೊಡಗಿದೆ. ಆಗ, “ಸರಿ, ಈಗ ನಿನ್ನ ಸಂದರ್ಶನ ಮುಂದುವರಿಸು” ಎಂಬ ದನಿ ಫೋನಿನ ಆ ಕಡೆಯಿಂದ ಕೇಳಿಬಂತು. “ಬೇಡ. ಇದನ್ನು ಇಲ್ಲಿಗೆ ನಿಲ್ಲಿಸುವ,” ಎಂದೆ. “ಯಾಕೆ ಏನಾಯಿತು?” ಎಂದು ಮೊನಾಲಿಸಾ ಅಚ್ಚರಿಯಿಂದ ಕೇಳಿದಳು. “ಇಲ್ಲ, ನಾನು ಈ ಕೆಲಸ ಮಾಡುತ್ತಿರುವುದು ಸರಿಯಲ್ಲವೇನೋ…” ಎನ್ನುತ್ತಿರುವಾಗ ಮೊನಾಲಿಸಾ ನನ್ನನ್ನು ತಡೆದು, “ನೀನೇನು ತಪ್ಪು ಮಾಡುತ್ತಿಲ್ಲ,” ಎಂದಳು. ನಾನು ತುಸು ತಡವರಿಸುತ್ತಾ, “ನಾನೆಷ್ಟಿದ್ದರೂ, ಆದಿವಾಸಿಯಲ್ಲ…” ಎಂದು ಹೇಳಿಕೊಳ್ಳಲು ಶುರುಮಾಡುತ್ತಿರುವಾಗಲೇ ನಾನು ಏನು ಹೇಳಲು ಹೊರಟಿದ್ದೇನೆ ಎಂಬುದರ ಅರಿವಾಗಿ ನನ್ನ ಮಾತಿಗೆ ತಡೆ ಒಡ್ಡಿದಳು. “ನೀನು ಮೊದಮೊದಲಿಗೆ ಕೇಳಿದ ಪ್ರಶ್ನೆಗಳು ತೀರಾ ಸರಳವಾದ ಪ್ರಶ್ನೆಗಳು. ಅದಕ್ಕಿರುವ ಉತ್ತರ ಎಲ್ಲರಿಗೂ ತಿಳಿದಿರಬೇಕಾದ್ದದ್ದೇ. ಅದಕ್ಕೆ ನಾನು ಹೇಚ್ಛೆನೂ ತಲೆಕೆಡಿಸಿಕೊಳ್ಳದೆ ಉತ್ತರ ಕೊಟ್ಟೆ. ನೀನು ಆಮೇಲೆ ಕೇಳಲು ಶುರು ಮಾಡಿದ ಪ್ರಶ್ನೆಗಳು ಸ್ವಲ್ಪ ಸೂಕ್ಷ್ಮವಾಗುತ್ತ ಹೋಯಿತು. ಇತಿಹಾಸದುದ್ದಕ್ಕೂ, ನಮ್ಮ ಕುರಿತಾಗಿ ಮಾಹಿತಿ ಸಂಗ್ರಹಿಸಿ, ನಮ್ಮ ಬದುಕನ್ನು ಅಧ್ಯಯನ ಮಾಡಿ ಅದರಿಂದ ಪಡೆದುಕೊಂಡ ಜ್ಙಾವನು ನಮ್ಮನ್ನು ನಿಯಂತ್ರಿಸಲು, ನಮ್ಮ ಮೇಲೆ ಯಜಮಾನ್ಯ ಸಾಧಿಸಲು, ನಮ್ಮನ್ನು ಲೂಟಿ ಮಾಡಲು ಉಪಯೋಗಿಸಿಕೊಳ್ಳಲಾಯಿತು. ಹಾಗಾಗಿ ನೀನು ಸಂದರ್ಶನದ ಗೇರ್ ಶಿಫ್ಟ್ ಮಾಡಿದಾಗ ನೀನು ಆ ಪ್ರಶ್ನೆಗಳಿಗಿರುವ ಉತ್ತರ ತಿಳಿದುಕೊಳ್ಳಲು ನಂಬಿಗಸ್ಥನೋ ಅಲ್ಲವೋ ಎಂದು ನನಗೆ ತಿಳಿದುಕೊಳ್ಳಬೇಕಿತ್ತು. ಅದಕ್ಕೆ ನಿನ್ನನ್ನು ತಡೆದು, ನಿನಗೆ ಪ್ರಶ್ನೆಗಳನ್ನು ಕೇಳಿದೆ. ನೀನು, ನಿನ್ನ ಹಿನ್ನಲೆ, ನಿನ್ನ ಆಲೋಚನೆ- ಇವುಗಳ ಬಗ್ಗೆ ಒಂದು ಸ್ಪಷ್ಟತೆ ಸಿಕ್ಕ ಮೇಲೆ ನೀನು ನಂಬಿಗಸ್ಥ, ನೀನು ಹೊರಗಿನವನಾದರೂ ನಿನ್ನ ಪ್ರಾಮಾಣಿಕತೆಯಲ್ಲಿ ಸುಳ್ಳಿಲ್ಲ, ನೀನು ಶ್ರೀಪ್ರಕಾಶ್ ತರಹವೇ ನಮ್ಮ ಆದಿವಾಸಿಗಳ ಸಂಗಾತಿ ಅಂತ ಗೊತ್ತಾಗುತ್ತಿದೆ. ಅದಕ್ಕೆ ಸಂದರ್ಶನ ಮುಂದುವರಿಸಲು ಹೇಳಿದೆ. ನಮ್ಮ ಬದುಕಿನ, ನಮ್ಮ ಸಮುದಾಯದ ಒಳ ಸಂಗತಿಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಲು ನನಗೇನೂ ಅಭ್ಯಂತರ ಇಲ್ಲ. ನೀನದನ್ನು ದುರಪಯೋಗಪಡಿಸಿಕೊಳ್ಳುವುದಿಲ್ಲ ಎಂಬ ನಂಬಿಕೆ ಈಗ ನಿನ್ನ ಮೇಲಿದೆ,” ಎಂದಳು. ಅವಳು ನನ್ನ ಮೇಲಿಟ್ಟ ನಂಬಿಕೆಗೆ ಕರಗಿದೆ. ಆ ನಂಬಿಕೆ ಒಂದು ಜವಾಬ್ದಾರಿ ಎಂದು ನನಗೆ ನಾನೇ ಹೇಳಿಕೊಂಡೆ.

ಅಂದು ನನಗೆ ನಾನೇ ಒಂದು ಮಾತು ಕೊಟ್ಟುಕೊಂಡೆ. ಇದು ಸಿನೆಮಾದೊಂದಿಗೆ ಕೊನೆಗೊಳ್ಳುವ ನಂಟಲ್ಲ. ಯಾವ ಆದಿವಾಸಿ ಸಮುದಾಯದೊಂದಿಗೆ ಕೆಲಸ ಮಾಡಿದ್ದೇನೋ, ಜೀವನದುದ್ದಕ್ಕೂ ಅವರೊದಿಗೆ ಸ್ನೇಹ ಕಾಪಾಡಿಕೊಂಡು ಅವರ ಸಂಗಾತಿಯಾಗಿರುತ್ತೇನೆ.

ಇದಾಗಿ ಸುಮಾರು ಒಂಬತ್ತು ವರ್ಷಗಳ ನಂತರ ಈ ಪುಸ್ತಕ ಪ್ರಕಟ ಆಗುತ್ತಿದೆ.

***

ಮೊನಾಲಿಸಾ ಜತೆ ಸಂದರ್ಶನ ಮುಗಿಸಿದ ಕೆಲವೇ ದಿನಗಳಲ್ಲಿ ಶ್ರೀಪ್ರಕಾಶ್, “ಜಸಿಂತಾ ಊರಿಗೆ ಮರಳಿ ಬಂದಿದ್ದಾಳೆ, ಅವಳನ್ನು ಹೋಗಿ ಭೇಟಿ ಮಾಡೋಣ” ಎಂದರು. “ಯಾರು ಆಕೆ?” ಎಂದು ಕೇಳಿದೆ. “ಜರ್ನಲಿಸ್ಟ್,” ಎಂದ ಶ್ರೀಪ್ರಕಾಶ್ ಅರೆಗಳಿಗೆ ಸುಮ್ಮನಿದ್ದು, “ಅದು ಅವಳ ವೃತ್ತಿ” ಎಂದು ಆಮೇಲೆ, “ಅವಳೊಬ್ಬ ಕವಿ” ಎಂದಿದ್ದರು. ಆಗಿನ್ನೂ ಪತ್ರಕರ್ತಳಾಗಿ ದುಡಿಯುತ್ತಿದ್ದಳು. ಆಕೆಯ ಕಾವ್ಯ ಕೌಶಲ್ಯದ ಬಗ್ಗೆ ಆಕೆಯ ಒಡನಾಟದಲ್ಲಿದ್ದ ಕೆಲವು ಆಪ್ತರಿಗೆ ಮಾತ್ರ ತಿಳಿದಿತ್ತು. ಅದರಲ್ಲಿ ಶ್ರೀಪ್ರಕಾಶ್ ಒಬ್ಬರು. ಅಂದು ಸಂಜೆ ಜಸಿಂತಾಳ ಮನೆಗೆ ಭೇಟಿ ನೀಡಿದೆವು. ಅಂದು ಅಲ್ಲಿ ಮಾತುಕತೆಗಳ ಜೊತೆಗೆ ಕವನ ವಾಚನವೂ ನಡೆಯಿತು.

ಮುಂದಿನ ಕೆಲವು ವಾರಗಳಲ್ಲಿ ಜಸಿಂತಾ ಮತ್ತು ನಾನು ಕೆಲವೊಂದಿಷ್ಟು ಆದಿವಾಸಿ ಮಕ್ಕಳ ಸಂದರ್ಶನಗಳನ್ನು ಜತೆಯಾಗಿ ಮಾಡಿದೆವು. ಒಂದು ದಿನ ಒಂದು ಸಂದರ್ಶನ ಮುಗಿಸಿ ಇನ್ನೂ ಎರಡು ಸಂದರ್ಶನ ಮಾಡುವುದು ಬಾಕಿ ಇರಬೇಕು ಎನ್ನುವಾಗಲೇ ಜಸಿಂತಾ “ಇಂದು ನನ್ನ ಜನ್ಮದಿನ” ಎಂದು ತಾನು ಮನೆಗೆ ಸ್ವಲ್ಪ ಬೇಗನೆ ಹೋಗುವುದಾಗಿ ಹೇಳಿದಳು. ನಾನು ಅವಳಿಗೆ ಬರ್ತ್ಡೇ ಗಿಫ್ಟ್ ಕೊಡುವ ಬಗೆಯಲ್ಲಿ ಆ ಕ್ಷಣ, “ನಿನ್ನ ಕವಿತೆಗಳನ್ನು ಅನುವಾದ ಮಾಡಬೇಕು ಅಂತಂದುಕೊಂಡಿದ್ದೇನೆ,” ಎಂದೆ. ಸಂತೋಷಗೊಂಡರೂ ಜಸಿಂತಾ ನನ್ನ ಅನುವಾದದ ಪ್ರಪೋಸಲ್ ಬಗ್ಗೆ ಅಂತಾ ಉತ್ಸಾಹ ಏನೂ ತೋರಲಿಲ್ಲ. ಮೊದಲಿಗೆ ಮೊನಾಲಿಸಾಗೆ ಆದಂತೆ ಜಾಸಿಂತಾಗೂ ನನ್ನ ಮೇಲೆ ನಂಬಿಕೆ ಮೂಡುತ್ತಿಲ್ಲವೇನೋ ಅಂದುಕೊಂಡು ಸುಮ್ಮನಾದೆ.

ನಾನು ಝಾರ್ಖಂಡ್ ಕೆಲಸ ಮುಗಿಸಿ ಬಂದ ಮೇಲೆ ಜಸಿಂತಾ ಜೊತೆ ನಿರಂತರ ಸಂಪರ್ಕದಲ್ಲೇನೂ ಇರಲಿಲ್ಲ. ಆಗೊಮ್ಮೆ ಈಗೊಮ್ಮೆ ಒಬ್ಬರಿಗೊಬ್ಬರು ಸಂದೇಶ ರವಾನಿಸುತ್ತಿದ್ದೆವು. ಆಕೆ ತನ್ನ ಕೆಲಸದ ನಡುವೆ ಬ್ಯುಸಿ ಆದಳು. ನಾನು ಸಹ ನನ್ನದೇ ತಾಪತ್ರಯಗಳ ನಡುವೆ ಮುಳುಗಿ ಹೋದೆ. ನಾವು ಭೇಟಿ ಆಗಿ ಕೆಲವು ವರ್ಷಗಳ ನಂತರ ಒಂದು ದಿನ ಆಕೆಯ ಒಂದು ಸಂದೇಶ ಬಂತು: “ನನ್ನ ಕವನ ಸಂಕಲನ ಪ್ರಕಟವಾಗುತ್ತಿದೆ”. ಅಂದು ಅದೆಷ್ಟೋ ಸಮಯದ ನಂತರ ಫೋನಿನಲಿ ಮಾತನಾಡಿದೆವು. “ಏನು ಸಂಕಲನದ ಹೆಸರು?” ಎಂದು ಕೇಳಿದಾಗ, “ಅಂಗೋರ್” ಅಂತ ಹೇಳಿದಳು. ನಾನು “ಕೆಂಡ” ಅಂತಂದೆ. ಕನ್ನಡ ಅರ್ಥ ಆಗದ ಅವಳು, ನಾನು ಹೇಳಿದ್ದೇನು ಎಂದು ಕೇಳಿದಳು. ನಾನು ಕನ್ನಡದಲ್ಲಿ ಅಂಗೋರ್ ಗೆ ಕೆಂಡ ಅನ್ನುತ್ತಾರೆ ಅಂತಂದೆ. ನಾನು ಈಗ ಮತ್ತೆ ಅನುವಾದದ ಪ್ರಸ್ತಾಪ ಮಾಡಲೇ ಅಂತ ಅನುಡಿಕೊಳ್ಳುವಾಗಲೇ ಅವಳು, “ಈ ಪುಸ್ತಕದಲ್ಲಿ ನನ್ನ ಹಿಂದಿ ಕವಿತೆಗಳು ಮತ್ತು ಅವುಗಳ ಇಂಗ್ಲಿಷ್ ಅನುವಾದ ಒಟ್ಟಿಗೆ ಇರುತ್ತವೆ,” ಅಂತಂದಳು.  ನಾನು “ಸೂಪರ್” ಅಂತಂದು ಸುಮ್ಮನಾದೆ.

ಅಂಗೋರ್ ಪುಸ್ತಕವನ್ನು ತರಿಸಿಕೊಂಡು ಓದಿದೆ. ಅದನ್ನು ಅನುವಾದ ಮಾಡಲೇ ಬೇಕು ಅಂತ ಅನ್ನಿಸಿತು. ಆದರೆ ಅವಳ ಮೊದಲ ಸಂಕಲನ ಪ್ರಕಟಗೊಂಡು ನಾನು ಅದನ್ನೋದಿ ಎಷ್ಟೋ ವರ್ಷಗಳ ತನಕವದು ಸಾಧ್ಯ ಆಗಲೇ ಇಲ್ಲ.

ಕಳೆದ ವರ್ಷ- ಅಂದರೆ ೨೦೨೨- ಮಳೆಗಾಲದಲ್ಲಿ ಚಾರ್ಲ್ಸ್ ವಾಲ್ಲೆಸ್ ಇಂಡಿಯಾ ಟ್ರಸ್ಟ್ ಫೆಲೋಶಿಪ್ ಅವರು 2022-23ನೆ ವರ್ಷದ ಅಪ್ಲಿಕೇಶನ್ ಕಾಲ್ ಫಾರ್ ಮಾಡಿ ಅದಕ್ಕೆ ನಾನು ರೋಹಿಣಿ ನಾಗತ್ ಎಂಬ ಸ್ನೇಹಿತೆಯ ಒತ್ತಾಯಕ್ಕೆ ಮಣಿದು ಪ್ರಪೋಸಲ್ ತಯಾರಿಸಬೇಕು ಎಂದಾಗ, ನನ್ನ ಮುಂದೆ “ಏನನ್ನು ಅನುವಾದ ಮಾಡಲಿ?” ಎಂಬ ಪ್ರಶ್ನೆ ಇರಲೇ ಇಲ್ಲ. ನನಗೆ ಗೊತ್ತಿತ್ತು. ಜಸಿಂತಾ ಕೆರ್ಕೆಟ್ಟ ಅವಳ ಕವಿತೆಗಳನ್ನು ಅನುವಾದ ಮಾಡಬೇಕು. ಅದಕ್ಕೆ ಕಾರಣ ಏನು ಎಂದು ಸಹ ನನಗೆ ಗೊತ್ತಿತ್ತು. ಪ್ರಪೋಸಲ್ ಬರೆದು ಅಪ್ಲೈ ಮಾಡಿದೆ. ಚಾರ್ಲ್ಸ್ ವಾಲ್ಲೆಸ್ ಇಂಡಿಯಾ ಟ್ರಸ್ಟಿನ ಅನುವಾದ ಫೆಲೋಶಿಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಆಂಗ್ಲಅನುವಾದ ಅಲ್ಲದೆ ಬೇರೆ ಭಾಷೆಯ ಅನುವಾದಕ್ಕೆ ಫೆಲೋಶಿಪ್ ನೀಡಲಾಯಿತು. 2023ರ ಏಪ್ರಿಲ್ ಇಂದ ಜೂಲೈ ತನಕದ ಕಾಲ ವೆಲ್ಸ್ ದೇಶದ ಒಂದು ಪುಟ್ಟ ಊರಾದ ಅಬೆರೆಸ್ಟ್ವಿಥ್ ನಲ್ಲಿ ಕಳೆದೆ. ಅಲ್ಲಿ ಈ ಪುಸ್ತಕದ ಅನುವಾದ ಅರಳಿದ್ದು.

***

ಅಂಗೋರ್ ಕವನ ಸಂಕಲನ ಓದಿದಾಗ ಅದನ್ನು ಕನ್ನಡಕ್ಕೆ ಅನುವಾದ ಮಾಡಬೇಕು ಅಂತ ಅನ್ನಿಸಲು, ಮತ್ತು ಅದನ್ನು ತಕ್ಷಣ ಮಾಡಲು ಆಗದೆ ಹೋದಾಗಲೂ ವರ್ಷಗಟ್ಟಲೆ ಆ ಆಸೆ ನನ್ನನ್ನು ಬಿಡದೆ ಇರಲು ಆ ಕವಿತೆಗಳ ಸ್ವಾದ ಮತ್ತು ಸ್ವಭಾವ ಮಾತ್ರ ಕಾರಣವಾಗಿರಲಿಲ್ಲ. ಅದಕ್ಕೆ ಇನ್ನೂ ಎರಡು ಮುಖ್ಯವಾದ ಕಾರಣಗಳಿದ್ದವು. ಒಂದು, ಮೊನಾಲಿಸಾ ಕಿಸ್ಕು ನನ್ನನ್ನು ಗ್ರಿಲ್ ಮಾಡಿದ ಬಳಿಕ ನನಗೆ ನಾನೇ ಕೊಟ್ಟುಕೊಂಡಿದ್ದ ಮಾತು. ಇನ್ನೊಂದು, ಜಸಿಂತಾ ಮತ್ತು ನಾನು ಜೊತೆಗೂಡಿ ಮಾಡಬೇಕಿದ್ದ ಇನ್ನೂ ಎರಡು ಸಂದರ್ಶನಗಳನ್ನು ಆಕೆ ತನ್ನ ಜನ್ಮದಿನದಂದು ಬೇಗ ಮನೆಗೆ ಹೋಗಬೇಕಾಗಿದ್ದ ಕಾರಣ ತಪ್ಪಿಸಿಕೊಂಡಾಗ ಆದ ಒಂದು ಅನುಭವ.

ಜಸಿಂತಾ ತನ್ನ ಜನ್ಮದಿನವನ್ನು ಆಚರಿಸಲು ಮನೆಗೆ ಹೋದ ಮೇಲೆ ನಾನು ಎರಡು ಶಾಲಾ ಬಾಲಕಿಯರನ್ನು ಸಂದರ್ಶಿಸಿದೆ. ಇಬ್ಬರೂ ಹನ್ನೆರಡನೇ ತರಗತಿಯ ವಿದ್ಯಾರ್ಥಿನಿಯರು. ಮೊದಲ ಸಂದರ್ಶನ ಮುಗಿದಿತ್ತು. ಎರಡನೇ ವಿದ್ಯಾರ್ಥಿನಿ ಬಹಳ ಸಂತೋಷದಿಂದ ಬಂದು ಕುಳಿತುಕೊಂಡಳು. “ಹೆಸರೇನು?” ಎಂದು ಕೇಳಿದೆ, “ಆಶಾ ಮುರ್ಮು” ಎಂದಳು. ಸುಮಾರು ಒಂದೂವರೆ ಘಂಟೆ ನಡೆದ ಸಂದರ್ಶನ ಮುಗಿಸಿ ನನ್ನ ನೋಟ್ ಪುಸ್ತಕವನ್ನು ಮುಚ್ಚುತ್ತಿರುವಾಗ ಆಶಾ ಮುರ್ಮು, “ನಾನು ನಿಮ್ಮನ್ನೊಂದು ಪ್ರಶ್ನೆ ಕೇಳಲೇ?” ಎಂದು ವಿನಂತಿಸಿಕೊಂಡಳು. “ಹಾ, ಕೇಳು” ಎಂದೆ. “ಸಿನೆಮಾ ಹೇಗೆ ತಯಾರಿಸುತ್ತಾರೆ?” ಎಂದು ಕೇಳಿದಳು. ಕೇಳುವ ಮುನ್ನ ಮತ್ತು ಕೇಳಿದ ನಂತರ ಮುಖದ ತುಂಬಾ ನಗು. ನಾನು ಆದಷ್ಟು ಸಂಕ್ಷಿಪ್ತವಾಗಿ ವಿವರಿಸಿದೆ. ನಾನು ವಿವರಿಸುವಾಗ ಅವಳ ಕಣ್ಣಿನಲ್ಲಿ ಮಿನುಗು. ಆ ನಗು, ಆ ಕಣ್ಣಿನ ಹೊಳಪು ಏನನ್ನೋ ಸೂಚಿಸುತಿತ್ತು. ಕೇಳಿದೆ: “ನೀನು ದೊಡ್ಡವಳಾಗಿ ಏನಾಗಬೇಕು ಅಂತಿದ್ದೀ?” ತಡೆದುಕೊಳ್ಳಲಾಗದ ಖುಷಿಯಲ್ಲಿ, “ಇದನ್ನು ನಾನು ಯಾರೊಂದಿಗೂ ಹಂಚಿಕೊಂಡಿಲ್ಲ. ಆದರೆ ನಿಮ್ಮ ಬಳಿ ಹೇಳಿಕೊಳ್ಳುತ್ತೇನೆ,” ಎಂದಳು. ನಾನು ನಗು ಬೀರುತ್ತಾ, “ಹೇಳು” ಎಂದೆ.

“ನಾನು ಟೀವಿ ನೋಡುವಾಗಲೆಲ್ಲ, ನಾನು ಸಹ ಹೀರೋಯಿನ್ ಆಗಬೇಕು ಅಂತ ಮನಸ್ಸಾಗುತ್ತದೆ.” ಹಾಗೆ ಹೇಳುತ್ತಿರುವಾಗಲೇ ಯಾಕೋ ಆ ಮುಖದ ನಗು ಕರಗಿತು. “ಆದರೆ, ನಮ್ಮಂಥವರು ಹೀರೋಯಿನ್ ಆಗಲು ಹೇಗೆ ಸಾಧ್ಯ?” ಎಂದು ಕೇಳಿದಳು, ತಗ್ಗಿದ ದನಿಯಲ್ಲಿ. ಆ ತನಕ ಸಾಕಷ್ಟು ಆದಿವಾಸಿ ವಿದ್ಯಾರ್ಥಿನಿಯರನ್ನು ಮಾತನಾಡಿಸಿದ್ದ ಕಾರಣ ಆಶಾ ಮುರ್ಮುಗೆ ಈ ರೀತಿ ಅನ್ನಿಸಲು ಏನು ಕಾರಣ ಇರಬಹುದು ಎಂದು ಊಹಿಸುವುದು ಕಷ್ಟ ಆಗಲಿಲ್ಲ. ಆದಿವಾಸಿ ಹಳ್ಳಿಯಿಂದ ಪೇಟೆಗೆ ಬಂದ ಹೆಣ್ಣುಮಕ್ಕಳಲ್ಲಿ ಕೀಳರಿಮೆ ಮೂಡಿಸುವ ದೊಡ್ಡ ಸಂಗತಿ ಎಂದರೆ ಅವರ ಮೈಬಣ್ಣ. ಚಿತ್ರಕಥೆಗೆ ಅಗತ್ಯದ ಸಂಶೋಧನೆ ನಡೆಸುವಾಗ ರಾಂಚಿಯಲ್ಲಿ ಒಂದು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಓರ್ವ ಆದಿವಾಸಿ ಹೆಂಗಸನ್ನು ಸಂದರ್ಶಿಸಿದ್ದಾಗ ಅವರು ಹೇಳಿದ್ದರು, “ಪೇಟೆಗೆ ಬಂದ ಆದಿವಾಸಿ ಹುಡುಗಿಯರು ಇಲ್ಲಿ ನನ್ನ ಬಳಿ ಬಂದು, ‘ಅಕ್ಕ ಹೇಗಾದರೂ ಮಾಡಿ ನಮ್ಮನ್ನು ಬಿಳಿ ಮಾಡು’ ಎಂದು ಕೇಳುತ್ತಾರೆ.” ಆಶಾ ಮುರ್ಮುವಿಗೆ ಹೇಳಿದೆ, “ಯಾಕೆ ಸಾಧ್ಯ ಇಲ್ಲ? ಸ್ಮಿತಾ ಪಾಟೀಲ್, ಕೊಂಕಣ ಸೆನ್ ಶರ್ಮ ಇವರೆಲ್ಲಾ ಬಿಳಿ ಮೈಬಣ್ಣದವರಲ್ಲ ಆದರೆ ಒಳ್ಳೆಯ ನಟಿಯರು.” ಹೀಗೆ ಹೇಳುತ್ತಿದ್ದಂತೆ ಆಶಾ ಮುರ್ಮುವಿನ ಮುಖ ಮುಖ ಅರಳಿತು. ಆತುರಾತುರವಾಗಿ, “ಹೌದಾ? ಹೌದಾ?” ಎನ್ನುತ್ತಾ, “ಹೇಗೆ, ಹೀರೋಯಿನ್ ಆಗುವುದು ಹೇಗೆ?” ಎಂದು ಕೇಳಿದಳು. ನಾನು, “ಅದಕ್ಕೆ ತರಬೇತಿ ನೀಡುವ ಸಂಸ್ಥೆಗಳಿದ್ದಾವೆ. ದೆಹಲಿಯ ನೇಷನಲ್ ಸ್ಕೂಲ್ ಆಫ್ ಡ್ರಾಮಾ, ಕಲ್ಕತ್ತೆಯ ಸತ್ಯಜಿತ್ ರೇ ಸಿನೆಮಾ ಸಂಸ್ಥೆ, ಪುಣೆಯ ಭಾರತೀಯ ಚಲನಚಿತ್ರ ಸಂಸ್ಥೆ, ” ಎಂದೆ. ಮುಖ ಮುಖ ಬಾಡಿತು. “ಆ ಸಂಸ್ಥೆಗಳಲ್ಲಿ ನಮ್ಮಂಥವರು ಕೇಳಿಯುತ್ತಾರಾ?” ಎಂದು ಕೇಳಿದಳು.

ಆಕೆ ಮತ್ತೆ ಮತ್ತೆ “ನಮ್ಮಂಥವರು” ಎಂದು ಹೇಳಿವುದನ್ನು ಗಮನಿಸದೆ ಇರಲು ಸಾಧ್ಯವಿರಲಿಲ್ಲ. ಅದನ್ನು ಮನಸ್ಸಿನಲ್ಲೇ ನೋಟ್ ಮಾಡಿಕೊಂಡು, ಮಾತು ಮುಂದುವರಿಸಿದೆ. “ಹೌದು. ಕಲಿಯುತ್ತಾರೆ. ಕಲ್ಕತ್ತೆಯ ಸಂಸ್ಥೆಯಲ್ಲಿ ನನ್ನ ಗೆಳೆಯ ನಿರಂಜನ್ ಕುಜೂರ್ ಕಲಿತಾ ಇದ್ದಾನೆ,” ಎನ್ನುವಾಗ ನನ್ನ ಮಾತಿನ ಹರಿವಿಗೆ ಅಡ್ಡ ಹಾಕಿ, “ಅವರ ಬಗ್ಗೆ ಪೇಪರಿನಲ್ಲಿ ಓದಿದ್ದೇನೆ” ಎಂದಳು. ನಿರಂಜನನ ಸ್ಟೂಡೆಂಟ್ ಫಿಲಂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಸುದ್ದಿ ಮಾಡಿತ್ತು. ಅದನ್ನೆಲ್ಲ ಆಶಾ ಮುರ್ಮು ಗಮನಿಸುತ್ತಿದ್ದಳು ಎಂಬುದು ಆಕೆಯ ಕನಸು ಸುಮ್ಮನೆ ಶೋಕಿಯದ್ದಲ್ಲ ಎಂದು ಹೇಳುತಿತ್ತು. “ಹೌದು, ಅವನು ಆದಿವಾಸಿ ಹುಡುಗನೇ. ಅವನು ಕಲ್ಕತ್ತೆಯಲ್ಲಿ ಕಲಿಯುತ್ತಿದ್ದಾನೆ,” ಎಂದು ಮಾತು ಮುಂದುವರಿಸಿದ ನಾನು ಹೇಳಿದೆ, “ನಾನು ಕಲಿತ ಪುಣೆ ಸಂಸ್ಥೆಯಲ್ಲಿ ನಮ್ಮೊಂದಿಗೆ ಸಂಜಯ್ ಟುಡು ಇದ್ದ, ಆಮೇಲೆ ಈಗ ಅಲ್ಲಿ ಸೆರಾಲ್ ಮುರ್ಮು ಎಂಬವನಿದ್ದಾನೆ” ಎನ್ನುತ್ತಿದ್ದಂತೆ ಆಶಾ ಕುಳಿತಲ್ಲೇ ಮುಂಬಾಗಿ, “ಮುರ್ಮು?” ಎಂದು ತಕ್ಷಣ ಎದೆಯುಬ್ಬಿಸಿ, “ನಾನು ಸಹ ಮುರ್ಮು” ಎಂದಳು, ಉಸಿರಿಗೂ ಪುರುಸೊತ್ತಿಲ್ಲದೆ ಎದೆ ತಟ್ಟಿಕೊಳ್ಳುತ್ತಾ, “ಆಶಾ ಮುರ್ಮು, ನಾನು ಸಹ ಮುರ್ಮು, ಆಶಾ ಮುರ್ಮು,” ಎಂದಳು.

ಪ್ರಾತಿನಿಧ್ಯ ಮುಖ್ಯ ಎಂದು ಒಣ ಮಾತುಗಳಲ್ಲಿ ಹೇಳುತ್ತಿದ್ದ ನನಗೆ, ಒಂದು ಆದಿವಾಸಿಯ ಪ್ರಾತಿನಿಧ್ಯ ಇನ್ನೊಂದು ಆದಿವಾಸಿಯಲ್ಲಿ ಎಂಥಾ ಉತ್ಸಾಹ, ಎಂತಾ ಹುರುಪು, ಎಂಥಾ ಆಶಾಭಾವನೆ, ಎಂಥಾ ಘನತೆ ಹುಟ್ಟಿಸಬಲ್ಲದು ಎಂಬುದನ್ನು ಕಣ್ಣಾರೆ ಕಂಡೆ! ಸ್ಟಾಟಿಸ್ಟಿಕ್ಸ್ ನಲ್ಲಿ ಹಿಡಿಡಿಯಲಾಗದ ಪ್ರಾತಿನಿಧ್ಯದ ಪ್ರಾಮುಖ್ಯತೆ ನನ್ನ ಕಣ್ಣೆದುರಿಗೆ ಘಟಿಸಿತ್ತು. ನಾನು ಕರಗಿಹೋಗಿದ್ದೆ. ಪ್ರಾತಿನಿಧ್ಯ ಯಾಕೆ ಮುಖ್ಯ ಎಂಬುದಕ್ಕೆ ಹೋರಾಟದ, ರಾಜಕೀಯದ ಶಬ್ದಕೋಶಕ್ಕೆ ಸಿಗದ ಏನೋ ನನ್ನೆದೆಯೊಳಕ್ಕೆ ಅಂದು ಇಳಿಯಿತು.

ಜಸಿಂತಾಳ ಕವಿತೆಗಳನ್ನು ಅನುವಾದ ಮಾಡಲಿಕ್ಕೆ ಅವಳ ಕವಿತೆಗಳ ಉಜ್ವಲತೆ ಎಷ್ಟು ಕಾರಣವೋ ಅಷ್ಟೇ ಕಾರಣ ಒಬ್ಬ ಜಸಿಂತಾ ಎಲ್ಲೋ ಒಂದು ಕಡೆ ಎದ್ದು ನಿಂತಾಗ ಎಲ್ಲೆಲ್ಲೋ ಮೂಲೆಯಲ್ಲಿ ಅಗೋಚರವಾಗಿರುವ ಅಸಂಖ್ಯ ಆಶಾ ಮುರ್ಮುಗಳಿಗೆ ಅದು ಕೊಡಬಹುದಾದ ಕಾಂಫಿಡೆನ್ಸ್. 

ಅಂಥಾ ಒಂದು ಆಶಾ ಮುರ್ಮುವನ್ನಾದರೂ ಈ ಸಂಕಲನ ತಲುಪಲಿ, ಮತ್ತು ಇಲ್ಲಿ ಹಂಚಿಕೊಂಡ ಅನುಭವಗಳು ನನ್ನನು ವಿನೀತಗೊಳಿಸಿದಂತೆ ಈ ಕವನಗಳ ಅನುವಾದ ಕೆಲವು ಆದಿವಾಸಿಯೇತರ ಜನರನ್ನು ವಿನೀತಗೊಳಿಸಿ, ಅರಿವನ್ನು ವಿಸ್ತರಿಸಲಿ ಎಂಬುದು ನನ್ನಾಸೆ. ಹಾಗೇನಾದರು ಆದರೆ ಅದೇ ಈ ಪುಸ್ತಕದ ಸಾರ್ಥಕತೆ.

ಜೋಹಾರ್!

~ ಸಂವರ್ತ ‘ಸಾಹಿಲ್’

‍ಲೇಖಕರು avadhi

January 3, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: