ನಂದಿನಿ ಹೆದ್ದುರ್ಗ ಓದಿದ ‘ಪ್ರೀತಿಯ ರೀತಿ’

ಬಿ ಆರ್ ಲಕ್ಷ್ಮಣರಾವ್

**

‘ನನ್ನ ಪ್ರೇಮ

ಊಟವಾದೊಡನೆ ಎಲೆಗೋಮ

ಸೀಸೆಗಟ್ಟಲೆ ಶಾಯಿಯನ್ನು

ಸೊರ್ರೆಂದು ಹೀರಬಲ್ಲ

ಶೇಷ ಶಾಯಿ ಬ್ಲಾಟಿಂಗ್ ಪೇಪರ್

ನನ್ನ ಕಾಮ

ಬಂಡೆಯಂತೆ ಒಂದೆಡೆ ಬಿಮ್ಮಂತ ಬಿದ್ದಿರದೆ

ಒದ್ದಕಡೆಗೆ ಪುಟಿಯುವ ಪುಟಿದೆದ್ದು ಓಡುವ

ನನ್ನ ಫುಟ್ ಬಾಲ್ – ಮನಸ್ಸಿಗೆ

ಮರ್ಕಟವೇ ಅನ್ವರ್ಥ ನಾಮ’

ಇದು ಕನ್ನಡದ ಹಿರಿಯ ಕವಿ ,ನನ್ನ ಗುರು ಬಿಆರ್ ಲಕ್ಷ್ಮಣರಾವ್ ಅವರ ಆಯ್ದ ಕವಿತೆಗಳ ಹೊಸ ಸಂಕಲನ ‘ಪ್ರೀತಿಯ ರೀತಿ’ ಯಿಂದ ಪ್ರೇಮ ಗೀಮ ಎನ್ನುವ ಕವಿತೆಯ ನಡುವಿನ ಸಾಲುಗಳು.

ಬಿಆರ್ ಎಲ್ ಅವರ ಕವಿತೆಗಳೇ ಹೀಗೆ ಒಂದಿಷ್ಟು ಪ್ರೇಮ ತುಸು ಹೆಚ್ಚೇ ಪೋಲಿ ಅಂತ ಅಂದುಕೊಂಡು ಓದುವ ಪ್ರತಿಯೊಬ್ಬ ಕಾವ್ಯಪ್ರೇಮಿಗೂ‌ ಗೊತ್ತಿದೆ.

ಈ ಕವಿತೆ ತನ್ನಲ್ಲಿ ಹೇಳುತ್ತಿರುವುದನ್ನಷ್ಟೇ ನಿಜದಲ್ಲಿ ಹೇಳುತ್ತಿರುವುದಿಲ್ಲ. ಕಾವ್ಯದ ವಿಸ್ತಾರ ಮತ್ತು ಮನಸ್ಸಿಗೇರುವ ವಿವಿಧ ಸ್ತರ  ಈ ಕವಿತೆಗಳ ಶಕ್ತಿ.

ಆ ಕವಿತೆಗಳು ಕೊನೆಗೊಳ್ಳುವಾಗ ಪ್ರೇಮ ಕಾಮಗಳನ್ನು ದಾಟಿ ವಿಷಾದದ್ದೊ ವಿಯೋಗದ್ದೊ ವಿವೇಕದ್ದೊ ದಿವ್ಯ ಎತ್ತರಕ್ಕೆ ಏರಿದಾಗ ಕವಿತೆ ಹೇಳಿದ್ದು ಇಷ್ಟೇ ಅಲ್ಲ ‌ಎನ್ನುವ ಜ್ಞಾನೋದಯವಾಗುತ್ತದೆ ಓದುಗನಿಗೆ.

ಹಾಗಂತ ಈ ಬಗೆಯ ವಿವರಣೆಯೂ ಇಲ್ಲಿನ ಕವಿತೆಗಳಿಗೆ ಒಪ್ಪುವುದಿಲ್ಲ.

‘ಪ್ರೀತಿಯ ರೀತಿ’ ಯಲ್ಲಿನ ಪ್ರತಿ ಕವಿತೆಗಳೂ ಲೌಕಿಕವನ್ನೇ ಹೇಳುತ್ತವೆ. ಪರಿಧಿಯಾಚೆಗಿನ‌ ಪ್ರೇಮವನ್ನು ಕಾಮವನ್ನು ಮನಸೊ ಇಚ್ಛೆ ಆಸ್ವಾಧಿಸುತ್ತವೆ. 

ಆದರೆ , ಅದರಾಚೆಗೆ ಜೀವಜೀವಗಳ ನಡುವೆ ಅಕಸ್ಮಾತ್ತಾಗಿ ಏರ್ಪಡುವ ಈ‌ ಬಂಧ ಮತ್ತು ಅದು ಜೀವಕ್ಕೆ ಕೊಡುವ ಮೋಧ ಈ ಬದುಕನ್ನು ತಾಜಾವಾಗಿಡಲು ,ಮನುಷ್ಯ ನಿಜದಲ್ಲಿ ಮನುಷ್ಯನಾಗೇ ಉಳಿಯಲು ಎಷ್ಟು ಅನಿವಾರ್ಯ ಎನ್ನುವ ಹೊಸತಾದ ರೂಪಕ ಸೃಷ್ಟಿಸಿ ಎದೆಯೊಳಗೊಂದು  ಹುಸಿಯಾದ ಹಸನಾದ ಖುಷಿ ತುಂಬಿಸುತ್ತವೆ. 

ಮಡಿ ಕಳಚಿಟ್ಟ ಮನಸ್ಸಿಗೆ  

ಮಾತ್ರ

ಈ ಕವಿತೆಗಳ ಮಡಿಲು 

ತಾಕುತ್ತದೆ.

‘ಆದ್ದರಿಂದ ಪ್ರೇಮ ಗೀಮ ಮದುವೆ ಗಿದುವೆ ನಮಗ್ಯಾತಕ್ಕೆ?

ಅರ್ಥಶಾಸ್ತ್ರದ ಪ್ರಕಾರ ಅವೂ ಸೊರಗುವ ಚಂದ್ರಾಮನಂತೆ;

ನಾವೂ ಆಗಬೇಕೇನು ಒಳಗೇ ಕುದಿಯುವ ನಿಟ್ಟುಸಿರಿಡುವ ಅದೆಷ್ಟೋ

ಸೀತೆರಾಮರಂತೆ?

ಬಾ ,ಸ್ವಚ್ಛಂದವಾಗಿ‌ ಹಾರಾಡಿ ಬಿಡೋಣ ಬಲವಾಗಿರುವ‌ ತನಕ ರೆಕ್ಕೆ!’

ಈ ಸಾಲುಗಳನ್ನು ಇಷ್ಟೇ ಓದಿಕೊಂಡರೆ‌ ಯಾವುದೇ‌ ಸಹಜ ಮನಸ್ಸಿಗೂ ಇದೆಂತಹ ಅಸಹಜ‌ಭಾವ ಅನಿಸಿದ್ರೂ‌ ಈ ಕವಿತೆ ಕೊಡುವ  ಖುಷಿ ದೊಡ್ಡದು. 

ಮತ್ತು ಇದು ಇನ್ನೇನೋ ಹಸಿಬಿಸಿ ಹೇಳಿರಬಹುದು ಎನ್ನುವ ಕುತೂಹಲ ದಿಂದ ಕವಿತೆ ಓದಿದರೆ ಕೊನೆಯ ವಿದ್ಯುತ್ ನೇರ ಎದೆಗೇ ತಾಗುತ್ತದೆ.

ಈಗ ನಾಲ್ಕು ದಿನದ ಹಿಂದೆ ಕೈಸೇರಿದ ಸಂಕಲನದ ಎಲ್ಲ ಕವಿತೆಗಳನ್ನು ಈ ಹಿಂದೆ ಓದಿದ್ದೆನಾದರೂ ಈ ಸಂಕಲನದಲ್ಲಿ ದಿ ಬೆಸ್ಟ್ ಎನ್ನುವ ಕವಿತೆಗಳನ್ನು  ಮಾತ್ರ ಓದುವ ಖುಷಿ.

ಸಂಕಲನದ ಆರಂಭದ ಕವಿತೆಯಿಂದಲೇ ಮೆದುವಾದ ಮುಗುಳು ನಗುವೊಂದು ತುಟಿಯಲ್ಲಿ ಮೂಡಿ ಎದೆಯೊಳಗೆ ಛೀ ಅಂತದ್ದು‌ಕೊಂಡು(ಅದೂ ಕವಿತೆಯ ಗೆಲುವು) ಛೀ ತನವೂ ಮುಗಿದು ಉಕ್ಕಿಸುವ

ಹಗೂರ ಭಾವ ಮತ್ತು ಅದು ಕೊಡುವ ಮುದ ಅಪರೂಪದ್ದು.

ಚಿಟ್ಟೆ ರೆಕ್ಕೆ ಮುಟ್ಟಿ ಅಂಟಿಕೊಂಡ ಬಣ್ಣದಂತೆ ಒರೆಸಲಾಗದೆ ಒರೆಸದೆ ಇರಲಾಗದೆ ಒದ್ದಾಡಿಸುವ ಕವಿತೆಗಳು ಇವು.

‘ನಾನೊಂದು ಚೇಳನ್ನು ಪ್ರೀತಿಸುತ್ತಿದ್ದೇನೆ

ಎಷ್ಟು ಸುಂದರವಾದ ಚೇಳೂಂತೀರಿ!

ಇದರ ಒಂದೊಂದು ಸಂಧಿಪಾದಕ್ಕೂ

ನೂರು ವಂಧಿ ಮಾಗಧರು ಬೇಕು.

ಇದು ನನ್ನ ಹೆಗಲಿನೆತ್ತರ;

ನಿಮ್ಮ ಸೌಂದರ್ಯ ಮೀಮಾಂಸೆಗೆ ಉತ್ತರ.

….

ಇದರ ಕೊಂಡಿ‌ ಒಂದು ಮಂತ್ರ ದಂಡ

ತಾನಾಡಿದಂತೆ ನನ್ನನ್ನೂ ಆಡಿಸುತ್ತೆ

ಹೊಡೆದಾಗ ಛಡಿ ,ಅಬ್ಬಾ!

ಮನಸ್ಸಿನ ‌ತುಂಬ ಕಾವ್ಯ ಮೂಡಿಸುತ್ತೆ’

ಒಂದು ಅರಾಕ್ನಿಡದ ಪರಾಕು ಎನ್ನುವ ಸುದೀರ್ಘ ಪದ್ಯದ ಸಾಲುಗಳಿವು.

ಹೀಗೇ ರೂಪಕ ರೂಪಿ ಚೇಳಿನ‌ ಸಕಲ  ಗುಣವನ್ನೂ ಬಣ್ಣಿಸುತ್ತ ಕವಿ ಕೊನೆಯಲ್ಲಿ

‘ಕುಟುಕೇ ನನ್ನ ಚೇಳೇ ಇನ್ನೊಮ್ಮೆ ಕುಟುಕು,

ಕುಡಿಸು ನನಗೆ ನಿನ್ನ ವಿಷದ ಮತ್ತೊಂದು ಗುಟುಕು’

ಎನ್ನುವಾಗ ಅಲ್ಲಿ ಏರ್ಪಟ್ಟಿರಬಹುದಾದ ಆಕರ್ಷಣೆಯ ತೀವ್ರತೆ  ಛಳುಕು ಹುಟ್ಟಿಸಿದರೆ ಅದನ್ನು ಹೇಳುವ ಆ ಶೈಲಿ ಅಬ್ಬಾ ಅನಿಸುತ್ತದೆ.

 ಈ ಕವಿತೆಯ ಅಂದಚಂದಕ್ಕೆ ಅದರ ಮಾಸದ ತಾರುಣ್ಯಕ್ಕೆ ತಾಜಾತನಕ್ಕೆ,ಅದು ಒದಗಿಸಿದ ಓದಿನ ಸುಖಕ್ಕೆ ಜೀವ ಹಗುರಾಗಿ ‘ಯಾವಾಗ ಬರೆದಿದ್ದು ಇದು?’ ಅಂತ ಗುರುಗಳನ್ನು ಕೇಳಿದ್ರೆ ಅವರು ಕೊಟ್ಟ ಉತ್ತರ ನನ್ನನ್ನು ಇನ್ನಷ್ಟು ದಿಗ್ಭ್ರಮೆಗೊಳಿಸಿತು.

1974 ಅಂದರು. ಐವತ್ತು ವರ್ಷಗಳ ಹಿಂದೆ ಎಷ್ಟು ಆಧುನಿಕವಾಗಿ ಯೋಚಿಸಿದ್ದಾರೆ ಅಂದರೆ

ನಾವಿನ್ನೂ ಈಗಲೂ ಸೂರ್ಯ ಚಂದ್ರ ಹೂವು‌ ಮುಗಿಲು ಅಂತ ಹಳಸಲು ರೂಪಕಗಳನ್ನೇ ಮತ್ತೆಮತ್ತೆ ತಿರುವಿ‌ಹಾಕಿ ನಮ್ಮ ಬೆನ್ನು ನಾವೇ ಚಪ್ಪರಿಸಿಕೊಳ್ತಿದ್ದೀವಾ ಅಂತೊಂದು ಅನುಮಾನ ಬಂತು.

ಲಕ್ಷ್ಮಣರಾಯರ ಕವಿತೆಗಳು ಹೊಮ್ಮಿಸುವ ಪ್ರೀತಿಯ ವಿವಿಧತೆ ಮತ್ತು ಅದರ ಸಮರ್ಥ ಅಭಿವ್ಯಕ್ತಿಯಂತೂ ಇನ್ನೂ ವಿಶಿಷ್ಟ. 

ಬಹುತೇಕ ಕಥನ ಕವಿತೆಗಳಂತೇ ಇರುವ ಇಲ್ಲಿನ ಎಲ್ಲಾ ಕವಿತೆಗಳೂ ಎಲ್ಲೂ ಪುನರುಕ್ತಿಯಾಗಿಲ್ಲ.ಜೀವನ್ಮುಖಿ ಭಾವ ಮತ್ತು ಆಶಾವಾದಿತನ‌ ಎಲ್ಲಾ ಕವಿತೆಗಳ ಸ್ಥಾಯಿ ಭಾವ.

ಇದೆಲ್ಲಕ್ಕಿಂತಲೂ ಇಲ್ಲಿ ಬಳಸಿರುವ ಎಂದೂ ಮುಕ್ಕಾಗದ ಉಪಮೆಗಳು ಇನ್ನೂ ಹತ್ತಾರು ದಶಕಗಳವರೆಗೂ ಓದುಗರನ್ನು ಬೆವರಿಸುತ್ತವೆ, ಬೆರಗಾಗಿಸುತ್ತವೆ.

ನಮ್ಮದೇ ಹಳೆಯ ಕವಿತೆಗಳನ್ನು ಓದುವಾಗ ಒಂದಿಷ್ಟು ಮುಜುಗರವಾಗುವ ಈ ಕಾಲದ ಕವಿತೆಗಳು ಮತ್ತು ದಶಕಗಳ ಹಿಂದೆ ಬರೆದ ಈ ಸಂಕಲನದ ಕವಿತೆಗಳನ್ನು ಓದುವಾಗ , ಸದ್ಯದ ‌ಕವಿಗಳನ್ನು ಸದ್ಯೋಜಾತರು ಎನ್ನುವ ಅವರ ಮಾತು ನಿಜಕ್ಕೂ ವಾಸ್ತವಕ್ಕೆ ಹತ್ತಿರವಿದೆ . 

ಈಗ ಬರೆಯುತ್ತಿರುವ ಕವಿಗಳೆಲ್ಲರೂ ಕಾವ್ಯದಲ್ಲಿ ಆಧುನಿಕತೆಗಾಗಿ ‌ಭಿನ್ನ ಶೈಲಿಗಾಗಿ ಅತ್ಯುತ್ತಮ ಆಕೃತಿಗಾಗಿ ,ಅಪರೂಪದ ಆಶಯಕ್ಕಾಗಿ ಈ ಕೃತಿಯನ್ನು  ಓದಲೇಬೇಕು. 

ಲಕ್ಷ್ಮಣ್ ರಾವ್ ಅವರು ಈಗಿನ

ಕವಿಗಳ ಕುರಿತಾಗಿ ಮಾತಾನಾಡುವಾಗ ತೋರುವ ಸಣ್ಣ ಅಸಮಾಧಾನ ಇಷ್ಟು ಅಪರೂಪದ ಕವಿತೆಗಳನ್ನು ಬರೆದ ಹಿರಿಯ ಕವಿಗೆ ಇರಲೇಬೇಕಾದ ಅತೃಪ್ತಿ. 

ಹಿರಿಯ ಕಾದಂಬರಿಕಾರರಾದ ದತ್ರಾತ್ರಿಯವರು ಮುನ್ನುಡಿಯಲ್ಲಿ ಹೇಳಿರುವಂತೆ ವ್ಯಕ್ತ ಮತ್ತು ಅವ್ಯಕ್ತಗಳ ನಡುವಿನ ಕಂದರವನ್ನು ತುಂಬಿದಷ್ಟೂ ಕವಿ ಪ್ರಾಮಾಣಿಕನಾಗುತ್ತಾನೆ.ಆ ಗುಣವೇ ಓದುಗರನ್ನು ಆ ಕವಿಯ ಕವಿತೆಗಳೆಡೆಗೆ ಸೆಳೆಯುತ್ತದೆ ಎನ್ನುವ ಮಾತು ಈ ಕವಿತೆಗಳಲ್ಲಿರುವ  ಪ್ರಾಮಾಣಿಕತೆಗೆ ಸಾಕ್ಷಿ.

ಕವಿತೆಯಲ್ಲಿ ಕಾವ್ಯ ಶಿಲ್ಪವೇ ಪ್ರಧಾನವಾಗಿ , ಹೇಳುವ ಸಂಗತಿಯನ್ನು ಹೊಸತಾಗಿ ಹೇಗೆ ಹೇಳಬಹುದು ಎನ್ನುವ ಕಡೆಗೆ ಪೂರ್ಣ ಗಮನವಿದ್ದಾಗ ಕವಿತೆ ಹೇಗೆ ಕಾಲಾತೀತವಾಗಿ ತನ್ನ ಮೌಲ್ಯ ಉಳಿಸಿಕೊಳ್ಳುತ್ತದೆ ಎನ್ನುವುದನ್ನು ಈ‌ ಕೃತಿಯನ್ನು ಓದಿಯೇ ತಿಳಿಯಬೇಕು.

ಹೊಸತಾಗಿ ಕವಿತೆ ಬರೆಯುವವರು ಕಾವ್ಯದಲ್ಲಿ ಆಸಕ್ತಿ ಇರುವವರು,ಕವಿತೆ ಓದುವುದು ಮಹಾ ಬೋರು ಎನ್ನುವವರು ,ಕವಿತೆಯೇ ಬೆಸ್ಟು ಎನ್ನುವವರು,ಯಾಕಾದರೂ ಈ ಕವಿಗಳು ಕವಿತೆ ಬರಿತಾರೋ ಎನ್ನುವವರು, ಕವಿತೆ ಎಂದರೆ ದೇವರು ಎನ್ನುವ ನನ್ನಂತವರು ಖಂಡಿತವಾಗಿ ಓದಲೇಬೇಕಾದ ಮತ್ತು ಮತ್ತೆಮತ್ತೆ ಅಧ್ಯಯನ ಮಾಡಬಹುದಾದಂಥ ಕೃತಿ ಈ ಪ್ರೀತಿಯ ರೀತಿ.

ಸಪ್ನಾ ಪ್ರಕಾಶನ ಪ್ರಕಟಿಸಿರುವ ಈ ಕೃತಿಯ ಬೆಲೆ ನೂರು ರೂ ಇದ್ದು 9845693614 ನಲ್ಲಿ ಪಡೆಯಬಹುದು.

ನನಗಿಷ್ಟದ ಈ ಸಾಲುಗಳೊಂದಿಗೆ

ಮುಗಿಸುತ್ತಿದ್ದೇನೆ.

ದೇವರಿಗೆ ನಮಸ್ಕಾರ

ತಾಯಿಗೆ 

ಹಾಲು ತುಂಬಿದ ಮೊಲೆ ಕೊಟ್ಟಿದ್ದಕ್ಕೆ,

ನನಗೆ ಹಸಿದ ಬಾಯಿ.

ಜೊತೆಗೆ ಇಂದಿಗೂ 

ತುಂಬು ಮೊಲೆಗಳ ಬಗ್ಗೆ ವ್ಯಾಮೋಹ

ಉಳಿಸಿದ್ದಕ್ಕೆ,

….

‍ಲೇಖಕರು avadhi

January 2, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: