ತಪ್ಪು

ಅಂಜನಾ ಗಾಂವ್ಕರ್

ಸುತ್ತ ಹಸುರಿನ ಹುಲ್ಲು ಹಾಸು. ಸಂಜೆಯ ವಾಕಿಂಗ್ ಮುಗಿಸಿ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ಮನದಲ್ಲಿ ಮಾತ್ರ ಆ ಹಸುರು, ಹಕ್ಕಿಗಳ ಕಲರವ ಯಾವುದೂ ಹಿತವೆನಿಸುತ್ತಿಲ್ಲ. ಸಂಜೆ ನಾಲ್ಕಕ್ಕೆ ಬಂದು ಇಲ್ಲಿ ಕುಳಿತರೆ ಐದುವರೆಯ ತನಕ  ಕುಳಿತರೂ  ಮನಕ್ಕೆ ಸಮಾಧಾನವಿಲ್ಲ.

ನನ್ನದೇ  ವಯಸ್ಸಿನ ಹೆಂಗಸರು ಮತ್ತು ಗಂಡಸರು ಸೇರಿ ಒಂದಿಷ್ಟು ವ್ಯಾಯಾಮ ಮಾಡಿ ನಂತರ ಒಂದಿಷ್ಟು ಆಟ ಬರದ ನಗು ನಗುವುದ ನೋಡಿ ನಾನೂ ಸೇರಿಕೊಂಡೆ. ಎಷ್ಟೇ ನಗಲು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ಎಲ್ಲವೂ ಕೃತಕ ಎನ್ನಿಸುತ್ತಿತ್ತು. ಅದೆಲ್ಲಾ ಬಿಟ್ಟು ಒಬ್ಬಳೇ ನನ್ನ ಪಾಡಿಗೆ ನಡೆಯೋದೆ ಉಚಿತವೆನ್ನಿಸಿತ್ತು.

ಸುಮಾರು ಒಂದು ತಿಂಗಳಾಗಿರಬಹುದೇನೋ ಇಲ್ಲಿ ಬರುತ್ತಿದ್ದು, ಸಣ್ಣಗಾಗಲು ಒಂದಿಷ್ಟು ಜನ ಕಿವಿಯಲ್ಲಿ ಇಯರ್ ಫೋನ್ ಸಿಕ್ಕಿಸಿಕೊಂಡು ಓಡುತ್ತಿದ್ದರೆ ಇನ್ನೂ ಕೆಲವು ಮಂದಿ ಮಕ್ಕಳ ಜೊತೆ ಆಟವಾಡಲು ಬರುತ್ತಾರೆ. ಅದೇ ಒಂದಿಷ್ಟು ಅಜ್ಜಂದಿರು ಶಾಂತವಾಗಿ ವೃತ್ತಪತ್ರಿಕೆ ಓದಲು ಇಲ್ಲಾ ಮೂಲೆಯೊಂದರ ಬೆಂಚ್ ಹುಡುಕಿ ನಿದ್ದೆ ಮಾಡಲು ಬರುತ್ತಾರೆ. ಯಾಕೋ ಇವರೆಲ್ಲರ ನಡುವೆ ನಾನೂ ಒಂದಿಷ್ಟು ಏಕಾಂತ ಬಯಸಿ ಬರುತ್ತಿದ್ದೆ.

ಹತ್ತಿರದಲ್ಲೇ ಇದ್ದ ಗಣಪತಿಯ ದೇವಸ್ಥಾನ ಹೊಕ್ಕು ಕಣ್ಮುಚ್ಚಿ ಕುಳಿತರೆ ಸಮಾಧಾನ. ಮನೆಗೆ ವಾಪಸ್ ಬರುವಷ್ಟರಲ್ಲಿ ಆರೂವರೆ. ಸಂಜೆಯ ಅಡುಗೆಯ ಕೆಲಸ ಮುಗಿಸುವಷ್ಟರಲ್ಲಿ ರಾತ್ರಿ. ಮತ್ತದೇ ಹೊತ್ತು ಕಳೆಯಲು ದಿನಚರಿ. ಮೊದಮೊದಲು ಇದೆ ಅಲ್ಲವೇ ನಾ ಬಯಸಿದ್ದು? ಆದರೆ ಈಗ್ಯಾಕೆ  ಇಷ್ಟವಾಗುತ್ತಿಲ್ಲ ಈ  ಕೆಲಸಗಳು? ‘ಮಮ್ಮಿ ಇವತ್ತೊಂದಿನ ನಮ್ಮ ಜೊತೆಗೆ ಇರಬಾರದಾ? ಸಂಡೇನು ಅದ್ಯಾವ ಸ್ಕೂಲ್ ಓಪನ್ ಇರತ್ತೆ’ ಎನ್ನುತ್ತಿದ್ದ  ಮೀರಾಗೆ  ‘ಸಾರಿ ಪುಟ್ಟಾ. ಇವತ್ತು ಅದ್ಯಾವುದೋ ಎಕ್ಸಾಮ್ ಡ್ಯೂಟಿ.  ಒಂದು ಗಂಟೆಗೆಲ್ಲ ಬಂದುಬಿಡುತ್ತೇನೆ’ ಎಂದು ಹೇಳುವಾಗ ಅದೇನೊ ಹೆಮ್ಮೆ.

ಈಗ ದಿನ ಮನೆಯಲ್ಲಿದ್ದರೂ ಕೇಳುವವರೇ ಇಲ್ಲ. ಯೋಚನೆಯ ಮೂಲ ಹುಡುಕುತ್ತಲೇ  ಕಲ್ಲುಬೆಂಚಿಗೆ ಬಿಟ್ಟ ಬೇರು ಕೇಳುತ್ತ ಎದ್ದಿದ್ದೆ. ‘ಹೇಗಿದ್ದೀರಾ ಮಿಸ್ ನಾನು ಮೀನು’ ಎನ್ನುತ್ತಿದ್ದ ಹುಡುಗಿಗೆ ನಕ್ಕು ಫೈನ್ ಎಂದು ಉತ್ತರಿಸಿ ಬೇಗ ಜಾಗ ಖಾಲಿ ಮಾಡಿದೆ. ‘ಅದೇನೇ ಮೀರಾ? ಚಿಕ್ಕ ಮಕ್ಕಳ ಥರಾ ಚಾಕ್ಲೆಟ್ ಕವರ್ ಎಸೆದಿದ್ದಿಯಾ? ಬಟ್ಟೆ ನೋಡು ಹೇಗೆ ಬಿದ್ದಿದೆ?’ ಎಂದಿದ್ದೆ ‘ಇವಾಗ ನೀನೇನು ಪ್ರಿನ್ಸಿಪಾಲ್ ಅಲ್ಲ. ನಿನ್ನ ರೂಲ್ಸ್ ಕಾಲ ಮುಗೀತು’ ಎಂದು ನಕ್ಕಿದ್ದ ಮಗಳಿಗೆ ಬಹುಶಃ ನನ್ನೊಳಗಣ ಅಲ್ಲೋಲಕಲ್ಲೋಲಗಳ ಪರಿಚಯವಾಗಿರಲಾರದು.

ದಾರಿಯಲ್ಲಿ ಯಾಕೋ ದೇವಸ್ಥಾನಕ್ಕೆ ಹೋಗುವ ಮನಸ್ಸಾಗದೆ ಮನೆ ದಾರಿ ಹಿಡಿದೆ. ‘ಅಹಲ್ಯೆ   ಏನಿವತ್ತು ಬೇಗ ಬಂದುಬಿಟ್ಟೆ?  ಮಂಗಳವಾರ ಅಲ್ವಾ? ಪುಳಿಯೋಗರೆ ಪ್ರಸಾದ ಎಲ್ಲಿ?’ ಎಂದು  ನಗುತ್ತಿದ್ದ ಇವರ  ಪ್ರಶ್ನೆಗೆ ಉತ್ತರಿಸುವ ಮನಸ್ಸಾಗದೆ ಅಡುಗೆಯ ಮೆನು ಯೋಚಿಸುತ್ತ ಕಿಚನ್ ಕಡೆ ಹೊರಟೆ.

ಆರು ವರ್ಷದವಳಾಗಿದ್ದಾಗ ಅಣ್ಣಂದಿರಿಗಿಂತ ಮುನ್ನಡೆಯಲು ಪ್ರಯತ್ನ ಪಟ್ಟೆ. ಸಾಧ್ಯವಿಲ್ಲದಿದ್ದಾಗ ಹಠ ಮಾಡಿದೆ. ಕೊನೆಗೆ  ಅದೆಂತಹ ದೊಡ್ಡ ಹುದ್ದೆ ಪಡೆದು ಅದೆಷ್ಟು ಆಸ್ಥೆಯಿಂದ ನಿಭಾಯಿಸುತ್ತಿದ್ದೆ? ಪುಟ್ಟ ಮಗಳು  ಜ್ವರದ ತಾಪದಿಂದ ರಾತ್ರಿಯಿಡೀ ಬಳಲಿದಾಗ ನಿದ್ದೆಗೆಟ್ಟ ಕಂಗಳಿಂದಲೇ ಶಾಲೆಗೆ ಹೋಗುತ್ತಿದ್ದೆ. ಕಾರಣ ಇವಳಂತಹದ್ದೇ ಪುಟ್ಟ ಪುಟ್ಟ ಮಕ್ಕಳ ಜವಾಬ್ದಾರಿ ಇತ್ತು ನನಗೆ.

‘ಇಷ್ಟೆಲ್ಲಾ ಕಷ್ಟ ಪಟ್ ಯಾಕೆ ಒದ್ದಾಡುತ್ತಿಯಾ ಅಹಲ್ಯೆ? ಎಷ್ಟ್ ಬರತ್ತೆ ಸಂಬಳ? ಒಂದು ರಜೆ ಕೊಡದೆ ದುಡಿಸಿಕೊಳ್ಳುತ್ತಾರೆ. ನಾನು ದುಡಿದದ್ದೇ ಸಾಕು ಬಿಡು ಈ ಸಂಸಾರ ನಡೆಸಲು’ ಎನ್ನುತ್ತಿದ್ದ ಗಂಡನ ಮಾತಿಗೆ ಜಾಸ್ತಿ ಎದುರಾಡುತ್ತಿರಲಿಲ್ಲ. ಕಾರಣ ಮಾತು ಬೆಳೆದರೆ ಕೆಲಸ ಬಿಡಬೇಕಾಗಿದ್ದು ನಾನೇ.

ಕಾಲ ಬದಲಾಗಲೇ ಬೇಕು. ಇಂದು ನಾವು ಕುಳಿತು ತಿರುಗಿಸುವ ಕುರ್ಚಿ ನಾಳೆ ಇನ್ಯಾರದೋ ಆಸನವಾಗಬಹುದು. ಅಧಿಕಾರದ ಚುಕ್ಕಾಣಿ ಹಿಡಿದಿದ್ದಾಗ ಮಾತ್ರ ಅದೇ ಗೌರವ, ಆದರ, ನಿಷ್ಠೆ ಎಲ್ಲವೂ ಇತರರಿಂದ ಲಭ್ಯವಾಗುವುದು. ಅದೇ ನಮ್ಮ ಪಾತ್ರ ಮುಗಿದು ತೆರೆಮರೆಗೆ ಸರಿದಾಗ ಒಂದಿಷ್ಟು ಹೋಲಿಕೆಗಳು ಶುರುವಾಗುವುದು.

ಹಿಂದಿನ ಹಾಗೂ ಈಗಿನ ಆಡಳಿತದ ವೈಖರಿಯ ಕುರಿತು ಒಂದಷ್ಟು ಚರ್ಚೆ ಆಗುವುದು. ನಾನೂ ಅಷ್ಟೇ ಅಲ್ಲವೇ..! ಟಿ ಸಿ ಹೆಚ್ ಮುಗಿಸಿ ಆ ಶಾಲೆಗೆ ಸೇರಿದಾಗ ಬಾಡಿಗೆ ಕಟ್ಟಡ  ಹೊಂದಿದ್ದ ಶಾಲೆ ಅದು. ನನ್ನ ಜೊತೆಗೆ ಸೇರಿದವರಲ್ಲಿ ಒಂದಿಷ್ಟು ಜನ ಸಂಸಾರದ ಭಾರ ಹೊರಲು ಕೆಲಸಕ್ಕೆ ಸೇರಿದ್ದರೆ ಇನ್ನೂ ಕೆಲವರು ಸಮಯ ಕಳೆಯಲು.

ಅಲ್ಲಿನ ಮುಖ್ಯ ಶಿಕ್ಷಕಿ ತಾನೇ ಸರ್ವಾಧಿಕಾರಿ ಎಂಬಂತೆ ಎಲ್ಲರ ಮೇಲೂ ಹಕ್ಕು ಚಲಾಯಿಸುವಾಗ, ಅವರಿವರ ಸುದ್ದಿಯ ಕೇಳಿ ಅವೆಲ್ಲಾ ಗಾಳಿಸುದ್ದಿಯಾಗಿ ಹರಡುವಾಗ ನಾನು ಮಾತ್ರ ನನ್ನದೇ ಲೋಕದಲ್ಲಿದ್ದೆ. ಮಕ್ಕಳ ಜೊತೆಗೆ ಮಗುವಾದೆ. ಸಹ ಶಿಕ್ಷಕಿಯರ ಜೊತೆ ಒಳ್ಳೆಯ ಗೆಳತಿಯಾದೆ. ನನ್ನ ಬಳಿ ಯಾವುದೇ ವಿಷಯ ಹಂಚಿಕೊಂಡರೂ ಗಾಳಿಸುದ್ದಿ ಹರಡದು ಎಂಬಷ್ಟರ ಮಟ್ಟಿಗೆ.

ಮುಂದಿದ್ದ ಗುರಿಯೊಂದೇ, ಹೇಗಾದರೂ ಒಂದು ದಿನ ಆ ಕುರ್ಚಿಯ ಮೇಲೆ ಕುಳಿತು ಕಾಲ ಮೇಲೆ ಕಾಲು ಹಾಕಿ ಕೂರಬೇಕು. ಅದಕ್ಕೆಂದೇ ಮುಂದಿನ ಓದನ್ನೂ ಮುಗಿಸಿದೆ. ಅತ್ತೆ ಇನ್ನೊಂದು ಗಂಡಾಗಲಿ ಅಹಲ್ಯಾ ಎಂಬ ಮಾತಿಗೆ ಮರು ಉತ್ತರಿಸಲಿಲ್ಲ. ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಅಥವಾ ಯಾವುದೇ ಕಾರ್ಯಕ್ರಮ ಇದ್ದರೂ ಆಡಳಿತ ಮಂಡಳಿಯ ಮುಂದೆ ಕಾಣುವಂತೆ  ಇರುತ್ತಿದ್ದೆ.  ಅಂತೂ ನನ್ನ ಕನಸಲ್ಲಿ ಬರುತ್ತಿದ್ದ ಈಸಿ ಚೇರ್ ಏರಿದೆ. ಹಿಂದಿನ ಮುಖ್ಯೋಪಾಧ್ಯಾಯಿನಿಯಂತೆ ಕಿರುಕುಳ ಕೊಡದೇ ಉತ್ತಮ ಆಡಳಿತ ನೀಡಬಯಸಿದ್ದೆ.

‘ಮಮ್ಮಿ ನ್ಯೂಸ್ ನೋಡು. ನಿಂದೇ ವಿಷಯ ಬರ್ತಾ ಇದೆ. ಇನ್ನು  ನಮ್ಮನೆ ಮುಂದೆ ಬಂದರೂ ಬರಬಹುದು ಇವರೆಲ್ಲ,’ ಎಂದ ಮೀರಾಳ ಕೂಗಿಗೆ ಹಾಲತ್ತ ಬಂದೆ. ‘ನಾವು ಮನೆ ಬದಲಾಯಿಸಿದ್ದೆ ಒಳ್ಳೆಯದಾಯಿತು. ಇಲ್ಲಾಂದ್ರೆ ಇಷ್ಟೊತ್ತಿಗೆ ಅಡ್ರೆಸ್ ಹುಡುಕಿ ಬಂದೆ ಬಿಟ್ಟಿರೋರು. ಈ ಮೀಡಿಯಾದವರು. ಇನ್ನು ಮೇಲೆ ನೀ ಮತ್ತೆ ಕೆಲಸಕ್ಕೆ ಹೋಗಬಹುದು. ನಿನ್ನ ಮೇಲಿದ್ದ ಆರೋಪ ಅದೆಷ್ಟು ಬೇಗ  ಸುಳ್ಳಾಯಿತು ನೋಡು. ನೀ ದಿನವೂ ಅದೇನೋ ಯೋಚನೆ ಮಾಡ್ತಾ ಇರೋದು ನೋಡೋಕೆ ಆಗ್ತಾ ಇರಲಿಲ್ಲ,’  ಎಂದು ಇವರು ನಕ್ಕರೂ ನನ್ನ ಮುಖದಲ್ಲಿ ಸಮಾಧಾನದ ಎಳೆ ಹುಡುಕಿರಬೇಕು.

ಅಡಿಕೆ ಕದ್ದ ಮಾನ ಆನೆ ಕೊಟ್ಟರೂ ಬಾರದು ಎಂಬ ನಾಣ್ಣುಡಿ ಪ್ರಾಥಮಿಕ ಶಾಲೆ ಗೋಡೆಯ ಮೇಲೆ ಓದಿದ್ದು. ಈಗ ನಿಜವೆನ್ನಿಸುತ್ತಿತ್ತು. ಮಕ್ಕಳು ತಪ್ಪು ಮಾಡಿದರೆ ಹಿಂದೆಲ್ಲಾ ಬಾಸುಂಡೆ ಬರುವಂತೆ ಹೊಡೆಯುತ್ತಿದ್ದರು. ಅದೇ ಈಗ ಮಕ್ಕಳ ಮುಂದೆಯೇ ಸಹಾಯವಾಣಿ ಸಂಖ್ಯೆ ಬರೆದ ಪಟ ಇರುತ್ತದೆ.

ಕಲಿಕಾಕ್ರಮದಲ್ಲಿ ಒಂದಿಷ್ಟು ಹೊಸತನ, ಕಟ್ಟುನಿಟ್ಟಿನ ಕ್ರಮ ಎಂದೆಲ್ಲಾ ದಿನ ದಿನ ಹೊಸ ನಿಯಮ ಜಾರಿಯಾಗುತ್ತಿದ್ದಂತೆ ಶಾಲಾ ದಾಖಲಾತಿ ಹೆಚ್ಚಾಯಿತು. ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಿಸಿಕೊಂಡಾಗಿತ್ತು. ನಗರದ ಬೇರೆ ಬೇರೆ ಕಡೆಗೆ ನಮ್ಮ ಶಾಲೆಯ ಬ್ರಾಂಚ್ ತೆರೆಯಲ್ಪಟ್ಟಿತು. ಆಡಳಿತ ಮಂಡಳಿಯ ಹೊಗಳಿಕೆಗೆ ನಾ ಉಬ್ಬಿದ್ದು ಸುಳ್ಳಲ್ಲ.

ತೀರಾ ಕೆಲಸದ ಅವಶ್ಯಕತೆ ಇರುವವರನ್ನು ಮಾತ್ರ  ಸಂದರ್ಶಿಸಿ ತೆಗೆದುಕೊಳ್ಳುತ್ತಿದ್ದೆ. ಅವರು ಸ್ವಲ್ಪ ಹೆದರಿ ಪಾಠ ಮಾಡುತ್ತಾರೆ ಮತ್ತು ಹೇಳಿದಂತೆ ಶ್ರಮ ವಹಿಸುತ್ತಾರೆ ಎಂಬ ಭರವಸೆ. ‘ನೀ ಶಾಲೆಗೆ ವಹಿಸುವ ಆಸ್ಥೆ ನೋಡಿದರೆ ಇಷ್ಟು ದಿನದಲ್ಲಿ ದುಪ್ಪಟ್ಟು ಸಂಬಳ ನೀಡಬೇಕಿತ್ತು. ಅದೇನು ಭಾನುವಾರವೂ ಬಿಡದೆ ಕೆಲಸ  ಮಾಡುತ್ತಿಯಾ’ ಎನ್ನುತ್ತಿದ್ದ ರಮೇಶನ ಕಟುನುಡಿಯನ್ನೂ ಎದುರಿಸಿ ಯಾವುದನ್ನೂ ಲೆಕ್ಕಿಸದೇ ದುಡಿದೆ.

‘ಎಲ್ಲರೂ ಹೀಗೆ ಯೋಚಿಸಿದ್ದರಿಂದ್ಲೇ ಬರೀ ಅಧ್ಯಾಪಕರಾಗಿರೋದು. ಆದರೆ ನನ್ನ ಹೆಸರಿನ ಮುಂದೆ ‘ಸಹ’ದಿಂದ ‘ಮುಖ್ಯ’ ಎಂದು ಸೇರಿದೆ ನೋಡಿ. ಸರ್ಕಾರಿ ಆಗಿದ್ದರೆ ಸೀನಿಯರ್ ಆಗುವವರೆಗೂ ಕಾಯಬೇಕು. ಆದರೆ ಈ ಖಾಸಗಿ ಶಾಲೆಗೆ ನಮ್ಮ ಶ್ರಮದ ಜೊತೆಗೆ ತೋರಿಕೆಯೂ ಮುಖ್ಯ’ ಎಂದು ನಕ್ಕಿದ್ದೆ.

ಬರೀ ಸಂಬಳಕ್ಕಾಗಿ ದುಡಿದು ರಜೆಯ ದಿನಗಳ  ಬಿಡುವಿನಲ್ಲಿ ಜೀವನದ ಅದೆಷ್ಟೋ ಆಸೆಗಳನ್ನು ಈಡೇರಿಸಿಕೊಳ್ಳಬೇಕಿತ್ತು. ಹೆಸರಿಗೆ ಮಾತ್ರ ಸಿಕ್ಕ ಹುದ್ದೆಯಿಂದ ದುಡಿದದ್ದಾದರೂ ಎಷ್ಟು? ಸಹಶಿಕ್ಷಕರಿಗಿಂತ ಒಂದೈದಾರು ಸಾವಿರ ಹೆಚ್ಚಿರಬಹುದು. ಸುಮಾರು ಈ ಇಪ್ಪತ್ತು ವರ್ಷಗಳಲ್ಲಿ  ಇಲ್ಲಿ ವ್ಯಯಿಸಿದ ಶ್ರಮ ಅವತ್ತು ಅದೆಷ್ಟು ವ್ಯರ್ಥ ಎನಿಸಿಬಿಟ್ಟಿತ್ತು?

ಆ ದಿನ ಬೆಳಗ್ಗೆ ಇಡೀ ಶಾಲೆ ಯಾಕೋ ಮೌನವಾಗಿತ್ತು. ನನ್ನ ಆಗಮನದಿಂದ ಅಲ್ಲಲ್ಲಿ ಗುಸುಗುಸು ಶುರುವಾಗಿತ್ತು. ಮ್ಯಾನೇಜ್ಮೆಂಟ್ ಅಧಿಕಾರಿಗಳೆಲ್ಲ ಅದಾಗಲೇ ಮೀಟಿಂಗ್ ಹಾಲ್ನಲ್ಲಿ ಸೇರಿದ್ದರು. ಹೊನ್ನಮ್ಮ ಬಂದು ‘ನೀವು ಬರಬೇಕೆಂತೆ ಅಲ್ಲಿ’ ಎಂದಾಗ ಪ್ರೇಯರ್ ಮುಗಿಸಿ ಬರುತ್ತೇನೆ ಎಂದರೂ ತುಂಬಾ ತುರ್ತಾಗಿ ಕರೀತಿದ್ದಾರೆ ಎಂದಿದ್ದಳು.

ಯಾಕೋ ಮೇಡಂ ಎನ್ನುವ ಪದ ಬಳಸಿರಲಿಲ್ಲ ಅವಳು. ‘ಸೀ ಮಿಸೆಸ್ ಅಹಲ್ಯಾ, ಪ್ಲೀಸ್ ಸೈನ್ ದೀಸ್ ರೆಸಿಗ್ನೇಷನ್ ಲೆಟ್ಟರ್’ ಎಂದಾಗ ಏನೊಂದು ಅರ್ಥವಾಗದೇ ಪಿಕಿಪಿಕಿ ಕಣ್ಣ ಬಿಟ್ಟೆ. ‘ಯು ನೋ ಯೆಸ್ಟರ್ಡೆ ವಾಟ್ ಹೆಪ್ಪನ್ಡ್’ ಎಂದಾಗ ಏನೊಂದು ಗೊತ್ತಾಗದೇ ಹೊರಬಂದಾಗ ನನ್ನ ಮುಂದಿದ್ದ ಪೊಲೀಸಮ್ಮ ನನ್ನನ್ನೂ ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಳು.

ಅವಳಿಗೆ ಬೇಕಾದಷ್ಟು ಕ್ವಾಲಿಫಿಕೇಶನ್ ಇರಲಿಲ್ಲ.  ದಿನವೂ ಬಂದು ಪ್ಲೀಸ್ ಮ್ಯಾಮ್ ಎಂದು ದುಂಬಾಲು ಬೀಳುತ್ತಿದ್ದಳು. ಮುಖ್ಯ ಹುದ್ದೆಯಲ್ಲಿರುವವರಿಗೆ ಅತಿಯಾದ ಕರುಣೆ, ಪ್ರೀತಿ, ವೈಯಕ್ತಿಕ ಕಾಳಜಿ ಹೆಚ್ಚಿರಬಾರದು. ಆದರೂ ಅವಳ ಸೇರಿಸಿಕೊಂಡೆ. ಮನೆಯಲ್ಲಿ ಏನೋ ಸಮಸ್ಯೆ ಹೊಟ್ಟೆಪಾಡು ಎನ್ನುತ್ತಿದ್ದಳು ಹುಡುಗಿ. ಹೆಸರು ಕಮಲ. ಬೇಕೆಂದೇ ಎಲ್ಲರ ಬಳಿ ನಾನು ಅವಳ ರಿಲೇಶನ್. ಅದಕ್ಕೆ ಕೆಲಸ ಕೊಟ್ಟಿದ್ದಾರೆ ಎಂದೆಲ್ಲ ಸುಳ್ಳು ಮಾಹಿತಿ ನೀಡುತ್ತಿದ್ದಳು.

ವಿಷಯ ನನ್ನ ಕಿವಿ ತಲುಪಿದರೂ ಸಿಲ್ಲಿ ಎಂದು ಸುಮ್ಮನಾದೆ.  ಶಾಲಾ ಅವಧಿಯ ಸಮಯದಲ್ಲಿ ತೀರ ಮೊಬೈಲ್ ಕರೆ ಬರುವುದು. ಜೋರು ಜೋರಾಗಿ ಮಾತನಾಡುವುದು ಹೆಚ್ಚಾಗಿತ್ತು. ಈಗಿನ ಮಕ್ಕಳು ತುಂಬಾ ಜಾಣರು. ಪೋಷಕರ ತನಕ ವಿಷಯ ತಲುಪಿತ್ತು. ಪೋಷಕರ ಸಭೆಯಲ್ಲಿ  ಕಮಲ ಮಿಸ್ ತುಂಬಾ ಹೊಡೀತಾರೆ ನಮ್ಮ ಮಕ್ಕಳಿಗೆ, ಎಷ್ಟೊತ್ತಿಗೂ ಮೊಬೈಲ್ ಹಿಡಿದು ಜೋರಾಗಿ ಮಾತನಾಡುತ್ತಾರಂತೆ ಎನ್ನುತ್ತಿದ್ದರು.

ಅವತ್ತು ಇನ್ನೇನು ಐದಾಗುತ್ತಲೇ ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಮಗುವಿನ ಜೊತೆಗೆ ಅಮ್ಮ ಬಂದಿದ್ದಳು. ಆ ಪುಟ್ಟ ಮಗುವಿನ  ಹಣೆಗೆ ಗಾಯವಾಗಿ ಬ್ಯಾಂಡೇಜ್ ಮಾಡಲಾಗಿತ್ತು. ಕೆನ್ನೆಯೂ ಕೆಂಪಾಗಿತ್ತು. ‘ನೋಡಿ ಮೇಡಂ ಮಗೂನಾ. ನಿಮ್ಮ ಮಕ್ಕಳಿಗೆ ಹೀಗಾಗಿದ್ದರೆ ಏನ್ ಮಾಡ್ತಾ ಇದ್ರಿ?’ ಎಂಬ ಪ್ರಶ್ನೆಗೆ ನಾಳೆಯಿಂದ ಹೀಗಾಗದು ಎಂದು ಸಮಜಾಯಿಷಿ ನೀಡಿ ಕಳುಹಿಸಿದ್ದೆ.

ಸಂಜೆ ಕ್ಲರ್ಕ್ ಜೊತೆಗೆ ಕುಳಿತು ಕ್ಲಾಸಿನ ಸಿಸಿಟಿವಿ ಚೆಕ್ ಮಾಡಿದಾಗ ಮಗು ಕಿಟಕಿಯ ಹೊರಗೆ ನೋಡಿ ಬರೆಯದಿದ್ದ ಕಾರಣಕ್ಕೆ ಚೆನ್ನಾಗಿ ಥಳಿಸಿದ್ದಳು ಆ ಶಿಕ್ಷಕಿ. ನಾಳೆ ಮೀಟಿಂಗ್ ಮಾಡಲಾ ಇಲ್ಲ ವೈಯಕ್ತಿಕವಾಗಿ ವಾರ್ನಿಂಗ್ ನೀಡಲಾ ಎಂದು ಯೋಚಿಸುತ್ತಲೇ ಮನೆಗೆ ನಡೆದೆ. ಮರುದಿನ ಸಂಜೆ ಮನೆಗೆ ಹೋಗುವ ಸಮಯದಲ್ಲಿ ‘ನೋಡಿ ಕಮಲ, ನೀವು ಈ ವರ್ಷ ಮುಗಿಸಿ ಕೆಲಸ ಬಿಟ್ಟು ಬಿಡಿ. ನಿಮ್ಮ ಮೇಲೆ ತುಂಬಾ ಕಂಪ್ಲೇಂಟ್ ಬರ್ತಿದೆ. ನಿನ್ನೆ ಯಾಕೆ ಆ ಹುಡುಗಿಗೆ ಹೊಡೆದ್ರಿ? ಪೊಲೀಸ್ ಠಾಣೆಗೆ ದೂರು ನೀಡಿದರೆ ಏನಾಗುತ್ತಿತ್ತು ಗೊತ್ತಾ? ಮೀಡಿಯಾ ಮನೆಗೆ ಬರೋ ಕಾಲ ಇದು. ಸ್ಕೂಲ್ ರೆಪ್ಯೂಟೆಶನ್ ಏನಾಗಬೇಡ? ಎನ್ನುವಷ್ಟರಲ್ಲಿ ಅವಳೂ ಜೋರಾಗಿಯೇ ಕಿರುಚಿದ್ದಳು.

ಏನ್ ಮಾಡ್ತೀರಾ? ಮಾಡಿ ನೀವು? ಏನ್ ನನಗೆ ಗದರೋದು? ಎಂದೆಲ್ಲ ಅವಾಚ್ಯವಾಗಿ ಬೈದಿದ್ದಳು. ಮರುದಿನ ಶಾಲೆಗೆ ಬಂದಿರಲಿಲ್ಲ. ನಾನೂ ಸಹ ಶಾಲಾ ವಾರ್ಷಿಕೋತ್ಸವ ಹತ್ತಿರವಿದ್ದ ಕಾರಣ ಸ್ವಲ್ಪ ವ್ಯಸ್ಥವಾಗಿದ್ದೆ. ಮರುದಿನ ಬೆಳಗ್ಗೆ ಶಾಲೆಗೆ ಬಂದಾಗ ಊಹಿಸಿರದ ಘಟನೆ ನಡೆದಿತ್ತು. ಒಂದು ದಿನ ಜೈಲಿನಲ್ಲಿ ಕಳೆದಿದ್ದೆ. ನಂತರ ಬೇಲ್ ಸಿಕ್ಕು ಹೊರಬಂದೆ.

ನಿನ್ನೆ ಪ್ರಸಾರವಾದ ಬ್ರೇಕಿಂಗ್ ನ್ಯೂಸ್ ಪ್ರಕಾರ ಕಮಲ ಪ್ರೇಮ ವಿವಾಹವಾಗಿ ಈ ಊರಿಗೆ ಓಡಿ ಬಂದಿದ್ದಳು.  ಮದುವೆ ಆಗಿ ಜೀವನ ನಿರ್ವಹಣೆಗೆ  ಈ ಕೆಲಸಕ್ಕೆ ಸೇರಿದ್ದಳು. ಮನೆಯಲ್ಲಿ ನಿತ್ಯವೂ ಜಗಳ. ಗಂಡನ ದುಡಿಮೆ ಇಲ್ಲದ ಕಾರಣ ಇವಳದೇ ಸಂಬಳದಲ್ಲಿ ಮನೆಯ ನಿರ್ವಹಣೆ. ಮೊದಲೇ ಸಿಡುಕಿನ ಸ್ವಭಾವ, ಎಲ್ಲ ಕಡೆ ಜಗಳ. ನನ್ನ ಬುದ್ಧಿಮಾತೂ ಹಿತವೆನಿಸದೆ ಬೈದಂತೆ ಅನ್ನಿಸಿತ್ತು.  ಅವತ್ತು ಕೆಲಸ ಬಿಡುವೆನೆಂದು ಪಟ್ಟು ಹಿಡಿದಾಗ ಮನೆಯಲ್ಲಿ ಜಗಳವಾಗಿತ್ತು. ಗಂಡ ಹೆಂಡಿರ ಜಗಳ ಅತಿಯಾಗಿ ನೇಣಿಗೆ ಶರಣಾಗಿದ್ದಳು.

ನನ್ನ ಒಂದು ತಪ್ಪಿನ ನಿರ್ಧಾರ ನನ್ನ ಘನತೆಗೆ ಧಕ್ಕೆ ತಂದಿತ್ತು. ಸರಿಯಾಗಿ ತನಿಖೆ ನಡೆದು ನಾ ನಿರ್ದೋಷಿಯಾದೆ. ಬಹುಶಃ ಅವತ್ತು ಆಡಳಿತ ಮಂಡಳಿಯವರು ಇಷ್ಟು ವರ್ಷ ದುಡಿದ ನನ್ನ ಮೇಲೆ ಒಮ್ಮೆ ವಿಶ್ವಾಸವಿರಿಸಿದ್ದರೆ ಆಗಿತ್ತು. ಇಷ್ಟು ವರ್ಷದ ಹಿಂದಿನ ನನ್ನ ಶ್ರಮಕ್ಕೆ ತೃಪ್ತಿ ಇರುತ್ತಿತ್ತು.

ಸ್ವಂತ ಮನೆಯ ಮಾರಿ ಹೀಗೆ ಅಜ್ಞಾತವಾಗಿ ಗುರುತಿರದ ಬಡಾವಣೆಗೆ ಬಂದು ಬಾಡಿಗೆ ಮನೆಯಲ್ಲಿ ಇರಬೇಕಾಗುತ್ತಿರಲಿಲ್ಲ. ಮೀರಾ ಇವರು ಅದೆಷ್ಟು ಮುಜುಗರ ಅನುಭವಿಸಲಿಲ್ಲ. ಅದೇ ನನ್ನ ಹಣಿಯಲು ಕಾಯುತ್ತಿದ್ದ ನನ್ನ ಸಹೋದ್ಯೋಗಿ ನಾ ಕುಳಿತಿದ್ದ ಕುರ್ಚಿಯಲ್ಲಿ  ಕೂರಲು ಆವತ್ತು ಬೇಕೆಂದೇ ಹಿಂದಿನ ದಿನ ನಡೆದ ವಾಗ್ಯುದ್ಧದ ವರದಿ ಆಡಳಿತ ಮಂಡಳಿಗೆ ನೀಡಿದ್ದಳು.

ಇಂದು ಅವರೆಲ್ಲ ಮನೆಗೆ ಬಂದು ‘ಪ್ಲೀಸ್ ಮೇಡಂ, ಕಮ್  ಬ್ಯಾಕ್ ಟು ಯುವರ್ ಸ್ಕೂಲ್’ ಎಂದರೂ ಆ ಘಟನೆ ಮರೆಯಲಾಗುತ್ತಿಲ್ಲ. ತುಂಬಾ ಇಷ್ಟ ಪಟ್ಟು ಹೋದ  ಪ್ರವಾಸ  ಮುಗಿಸಿ ಮನೆಗೆ ಮರಳಿದಾಗ ಉಂಟಾಗುವ ನೀರಸ, ಬೇಸರ, ಖಿನ್ನತೆ ಕಾಡಿತ್ತು. ಆದರೆ ಅದೇ ಜೀವನವಲ್ಲ. ಪಯಣ ಮುಗಿದ ನಂತರ ಒಂದಿಷ್ಟು ವಿಶ್ರಾಂತಿ ಪಡೆದು ಸಹಜ ಜೀವನ ಸಾಗಿಸಲೇ ಬೇಕು. ನಿತ್ಯಕರ್ಮಕ್ಕೆ ಹೊಂದಿಕೊಳ್ಳಲೇಬೇಕು.

ಚಿಕ್ಕವಳಿದ್ದಾಗ ರಾತ್ರಿಯಾದರೂ ಮನೆಗೆ ಬಾರದೆ ಹಠ ಹಿಡಿಯುತ್ತಿದ್ದೆ. ಈ ಸಮುದ್ರದ ಅಲೆಗಳ ನೋಡುತ್ತಲೇ ಇರಬೇಕೆಂದು. ಅಪ್ಪ ಅದೇನೇನೊ ಹೇಳಿ ರಮಿಸಿ ಮನೆಗೆ ಕರೆತರುತ್ತಿದ್ದರು. ಹುಣ್ಣಿಮೆಗೆ ಉಕ್ಕುವ ಅಲೆಗಳೂ ಮರುದಿನ ಯಥಾಸ್ಥಿತಿಗೆ ಮರಳಲೇ ಬೇಕು.

‘ರಮೇಶ್, ಊರಿಗೆ ಹೋಗದೆ ತುಂಬಾ ದಿನಗಳಾಗಿದೆ. ಒಂದು ತಿಂಗಳ ರಜಾ ಹಾಕಿ,  ಹೇಗೂ ಮೀರಾಗೆ ಸ್ಟಡಿ ಹಾಲಿಡೆ ಶುರುವಾಗಿದೆ,’ ಎಂದೆ.

ಎಷ್ಟೋ ದಿನಗಳಿಂದ ತಲೆಯ ಮೇಲಿದ್ದ ಭಾರದ ಜೊತೆಗೆ ಕಳಂಕವೂ ಕಳೆದು ನೆಮ್ಮದಿಯ ಪಯಣಕ್ಕೆ ಸಜ್ಜಾದೆ. ‘ಅತ್ತೆ ನಾಳೆ ಬೆಳಗ್ಗೆ ಭಾವನಿಗೆ ಬಸ್ ನಿಲ್ದಾಣದಲ್ಲಿ ಇರಲು ಹೇಳಿ. ಊರಿಗೆ ಬರ್ತಾ ಇದ್ದೀವಿ. ಇನ್ನು ನಾನಂತೂ ಅಪ್ಪಟ ಗೃಹಿಣಿ ಬಿಡಿ. ಕೆಲಸ ಬಿಟ್ಟು ಬಿಟ್ಟೆ ಎಂದೆ. ‘ಹೋ ಇನ್ನೇನು ಮತ್ತೊಂದು ಹೆತ್ತು ಬಿಡು. ನಾನು ಬಾಣಂತನ ಮಾಡುವಷ್ಟು ಗಟ್ಟಿಯಾಗಿದ್ದೇನೆ’ ಎಂದ ಅತ್ತೆಯ ಮಾತಿಗೆ ‘ ನೋಡೋಣ’  ಎನ್ನುತ್ತಾ ನಕ್ಕಿದ್ದೆವು.

ಬೆಳಗ್ಗೆಯೇ ಪ್ಯಾಕಿಂಗ್ ಮುಗಿಸಿ ಸಂಜೆ ನಾಲ್ಕಕ್ಕೆ ಮನೆಬಿಟ್ಟು ಮತ್ತೆ ಪಾರ್ಕ್ ಸೇರಿದೆ. ಇವತ್ಯಾಕೋ ಈ ವಯಸ್ಸಾದವರ ಗುಂಪಿಗೆ ಸೇರಿ ಮನಃಪೂರ್ವಕವಾಗಿ ನಕ್ಕಿದ್ದೆ. ಕಲ್ಲುಬೆಂಚಿನ ಮೇಲೆ ನಿದ್ರಿಸಿದ್ದ ತಾತನ ಗೋಳಿನ ಕಾರಣ ಮೊಮ್ಮಕ್ಕಳ ಗಲಾಟೆ. ‘ನೀವ್ಯಾಕೆ ಅವರ ಜೊತೆ ಸೇರಿ ಗಲಾಟೆ ಮಾಡಬಾರದು?’ ಎಂದಿದ್ದೆ.

ಮತ್ತದೇ ಭಕ್ತಿಯಿಲ್ಲದಿದ್ದರೂ ವಿನಾಯಕನ ದೇವಸ್ಥಾನ ಹೊಕ್ಕು ಹತ್ತು ನಿಮಿಷ ಮೌನವಾಗಿ ಕಣ್ಮುಚ್ಚಿ ಕುಳಿತೆ. ‘ಒಂದು ಜವಾಬ್ದಾರಿ ತೊರೆದರೇನು? ಇನ್ನೂ ಅದೆಷ್ಟೊ ಅವಕಾಶಗಳು ನನಗಾಗಿ ಕಾಯುತ್ತಿವೆ. ಊರಿಂದ ಹಿಂದಿರುಗಿದ ಮೇಲೆ ಅದೇ ಮನೆಗೆ ಹತ್ತಿರದಲ್ಲೇ ಹೊಸದಾಗಿ ಶುರುವಾದ ಶಾಲೆಗೆ ಒಬ್ಬ ಶಿಕ್ಷಕಿಯ ಅವಶ್ಯಕತೆ ಇದೆಯಂತೆ.

ಬೆಳೆದು ದೊಡ್ಡವರಾದ ಮೇಲೆ ಮಕ್ಕಳು ಸಹಜವಾಗಿ ತಮ್ಮ ಬದುಕ ಕಟ್ಟಿಕೊಳ್ಳಲು ದೂರ ಹಾರುತ್ತಾರೆ. ಅಂತೆಯೇ ಮತ್ತೊಮ್ಮೆ ಪುಟ್ಟ ಮಗುವ ತಿದ್ದಿ ತೀಡಿ ಅದಕ್ಕೂ ಮುಂದೆ ಬರಲು ಅನುವು ಮಾಡಿಕೊಡಬೇಕು,’  ಹೀಗೆ ಕುಳಿತರೆ ಈ ಮನ ಲಂಗುಲಗಾಮಿಲ್ಲದ ಯೋಚನೆಗೆ ಬೀಳುವುದೆಂದು . ಅದೇನೋ ಸಂತೃಪ್ತಿ ಭಾವದಿ ಮನೆಯ ದಾರಿ ಹಿಡಿದೆ.    

‍ಲೇಖಕರು Avadhi

October 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: