ಆನಂದ ಬೋವಿಯವರ ‘ಮಾತಂಗಿ’

ವೈ.ಎಂ.ಯಾಕೊಳ್ಳಿ

ನಮ್ಮ ನಡುವಿನ ಸಶಕ್ತ ಕವಿ, ಕಥೆಗಾರ ಆನಂದ ಭೋವಿಯವರು ‘ಮಾತಂಗಿ’ ಎಂಬ ಹೆಸರಿನ ಕಾದಂಬರಿಯ ಮೂಲಕ ಕನ್ನಡ ಕಾದಂಬರಿ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ. ಅವರು ಏಳುಕೊಳ್ಳದ ಯಲ್ಲಮ್ಮ ನೆಲೆಸಿರುವ ಯಲ್ಲಮ್ಮನ ಗುಡ್ಡದ ಪೂಜಾರಿಗಳ ಊರಾದ ಉಗರಗೋಳದವರು ಅವರಿಗೆ ಯಲ್ಲಮ್ಮನ ಕಥೆಯ ಪುರಾಣ ಮತ್ತು ಪಾವಿತ್ರತೆ ಎರಡೂ ಸರಳಕ್ಕೆ ದಕ್ಕಿವೆ.

ಹೀಗಾಗಿ ಈ ಕಾದಂಬರಿಯ ಎರಡನೆಯ ಅದ್ಯಾಯದಲ್ಲಿ ಮಾತಂಗಿಯ ಪವಿತ್ರವಾದ ಕಥೆಯನ್ನು ಸುಮಾನಿಗೆ ಕೇಳಿಸುತ್ತಾರೆ. ಪುರಾಣ ಮತ್ತು ವಾಸ್ತವ ಇವೆರಡನ್ನೂ ಕಾದಂಬರಿಕಾರ ಮುಖಾಮುಖಿ ಮಾಡಿಸುವ ರೀತಿ ವಿನೂತನವಾದದ್ದು . ಮಾತಂಗಿ ಕಾದಂಬರಿಯ ಕಥಾನಾಯಕಿ ಸುಮಾ ಮಾತಂಗಿಯ ತ್ಯಾಗದ ಬದುಕಿನ ಕಥೆಯನ್ನು ಕೇಳಿ ಅವಳ ವ್ಯಕ್ತಿತ್ವದಲ್ಲಿ ಮಗ್ನಳಾಗುತ್ತಾಳೆ.

ಏಳುಕೊಳ್ಳದ ಯಲ್ಲಮ್ಮನ ಕಥೆಯ ಹಿಂದೇ ಅನೇಕ ಜೋಗಿತಿಯರ ಬದುಕಿನ ನೋವುಗಳಿವೆ. ದೇವರ ಹೆಸರಿನಲ್ಲಿ ಹೆಣ್ಣನ್ನು ಭೋಗದ ವಸ್ತುವನ್ನಾಗಿ ಪರಿವರ್ತಿಸುವ ಯಜಮಾನ ಸಂಸ್ಕೃತಿಯ ಹುನ್ನಾರಗಳಿರು ವದನ್ನು ಕಾದಂಬರಿಕಾರ ತುಂಬ ವಿವರವಾಗಿಯೇ ಚಿತ್ರಿಸಿದ್ದಾರೆ.

ಸುಮಾ ಆಧುನಿಕ ಕಾಲದವಳು. ಸ್ತ್ರೀ ಈಗಲೂ ಪುರುಷನ ಅಡಿಯಾಳಾಗಿ ಅವನಿಗೆ ದೇಹ ಅರ್ಪಿಸುತ್ತ ಅದರಲ್ಲಿಯೆ ತೃಪ್ತಿ ಕಾಣಬೇಕೆ? ಅಥವಾ ತನ್ನ ವಿಮೋಚನೆ ಪಡೆಯಬೇಕೇ? ಎಂಬ ಚಿಂತನೆಯಲ್ಲಿದ್ದಾಳೆ. ಆಧುನಿಕಳೆನ್ನುವ ಭರದಲ್ಲಿ ತುಂಬ ಮುಕ್ತವಾಗಿಯೆ ಬದುಕಿದ್ದಾಳೆ. ಆದರೆ ನಾಯಕ ವೆಂಕಟೇಶ ಇದಾವ ಬಂಧನವನ್ನೂ ಹೊಂದಬಾರದೆನ್ನುವ ಆಧುನಿಕ ಯುವಕರ ಪ್ರತಿನಿಧಿ. ಅವನಿಗೆ ಯೌವನದ ದೇಹಗಳೂ ಪರಸ್ಪರ ಬಯಸುವದು ಒಂದು ಹಸಿವಿನ ತೃಪ್ತಿಯಷ್ಟೇ. ಅಷ್ಟಕ್ಕಾಗಿ ಮದುವೆ, ಬಂಧನ ಇವೆಲ್ಲ ಅಗತ್ಯವಿಲ್ಲ ಎನ್ನುವ ಮನೋಭಾವದವನು.

ಅದನ್ನು ಸುಮಾನಿಗೂ ಹೇಳಿಯೆ ಇದ್ದಾನೆ. ವಿಚಿತ್ರವೆಂದರೆ ಅವನ ಮಾತು ವಿರೋಧಿಸುತ್ತಲೆ ಸುಮಾ ತನ್ನ ದೇಹ ಅವನಿಗೆ ಅರ್ಪಿಸುತ್ತಲೇ ಬಂದಿದ್ದಾಳೆ. ಅದರಲ್ಲಿ ಆಕೆಗೆ ಮುಜುಗರವೇನೂ ಇದ್ದಂತಿಲ್ಲ. ತೀರ ಮುಂದುವರಿದ ಪಟ್ಟಣ ಸಂಸ್ಕೃತಿಯ ಇಂದಿನ ಯುವ ಜನಾಂಗದ ಮನೋಭಾವ ಸುಮಾ ವೆಂಕಟೇಶ ಇವರಲ್ಲಿ ಕಾಣಿಸುತ್ತದೆ. ದೇಹ ಹಂಚಿಕೊಳ್ಳುವದರ ಹಿಂದೆ ಅವರಿಗೆ ನೈತಿಕತೆಯ ಪ್ರಶ್ನೆ ಏನೂ ಕಾಡಿಸುವದಿಲ್ಲ.

ಈ ನಡುವೆ ಅವರ ಹುಡುಕಾಟದಲ್ಲಿ ಅತ್ತ ಹೆಣ್ಣೂ ಅಲ್ಲದ ಗಂಡೂ ಅಲ್ಲದ ಕುತುಬುದ್ದೀನನ ಚಿತ್ರವೂ ಬಿಚ್ಚಿಕೊಳ್ಳುತ್ತದೆ. ತೃತೀಯ ಲಿಂಗಿಗಳ ಬದುಕಿನ ಅತಂತ್ರ ಸ್ಥಿತಿಯನ್ನು ಕುತುಬುದ್ದೀನನ ಬಾಯಿಂದಲೇ ಹೇಳಿಸುವದು ಕಾದಂಬರಿಗೊಂದು ನೈಜತೆಯನ್ನು ತಂದುಕೊಟ್ಟಿದೆ. ಕಾದಂಬರಿಕಾರರು ಅವರವರ ಪಾತ್ರಗಳಿಗೆ ತಕ್ಕಂತೆ ಬಳಸುವ ಭಾಷೆ ಕೂಡ ಅಷ್ಟೇ ನೈಜತೆಯಿಂದ ಕೂಡಿರುವದು ಕಾದಂಬರಿಯ ಧನಾತ್ಮಕ ಅಂಶಗಳಲ್ಲಿ ಒಂದು.

ಈ ನಡುವೆ ಸುಮಾನ ಹುಟ್ಟಿನ ಹಿಂದೆಯೂ ಒಂದು ವಿಚಿತ್ರ ಕಥೆ ಇದ್ದು ಅದನ್ನೂ ಅವಳ ತಂದೆಯೇ ಹೇಳುತ್ತಾನೆ. ಸುಮಾ ಕೂಡಾ ಬಾಡಿಗೆ ತಾಯಿಯಿಂದ ಜನಿಸಿದ ಮಗಳು ಎನ್ನುವ ಸತ್ಯ ಹೊರಬರುತ್ತದೆ. ಸುಮಾಳ ತಂದೆ ಮಕ್ಕಳಿಲ್ಲದ ಕಾರಣ ಕೊರಗುತ್ತಿದ್ದ ಹೆಂಡತಿಯ ಆಸೆ ಈಡೇರಿಸಲು ಮಾತಂಗಿ ಎಂಬ ಹೆಣ್ಣುಮಗಳೊಬ್ಬಳಿಂದ ಬಾಡಿಗೆ ತಾಯಿ ರೂಪದಲ್ಲಿ ಮಗುವನ್ನು ಪಡೆದಿರುತ್ತಾನೆ.

ಅದರೆ ಆಕೆಗೆ ಸರಿಯಾಗಿ ಸಹಾಯಮಾಡಲಿಕ್ಕಾಗದೇ ಕೊರಗುತ್ತಿರುತ್ತಾನೆ. ಬದುಕಿನುದ್ದ ಅವಳನ್ನು ಹುಡುಕುತ್ತಿರುತ್ತಾನೆ. ಮಗಳ ಪ್ರೊಜೆಕ್ಟ ಮುಗಿಯುವ ಮೊದಲೆ ಆತನಿಗೆ ಆದೇವತೆಯಂಥ ಹೆಣ್ಣು ಸಿಗುತ್ತಾಳೆ. ಮಗಳಿಗೆ ನಿಜ ಹೇಳಿ ಆಕೆಯನ್ನು ತಾಯಿಯೆಂದು ಒಪ್ಪಿಸುವ ಯೋಜನೆ ಹಾಕುತ್ತಾನೆ. ಪ್ರಜ್ಞಾವಂತಳೂ ವಿದ್ಯಾವಂತಳೂ ಆದ ಸುಮಾ ಅದನ್ನು ಧೈರ್ಯದಿಂದಲೆ ಒಪ್ಪಿಕೊಳ್ಳುತ್ತಾಳೆ.

ಕಾದಂಬರಿಯಲ್ಲಿ ನಿಜವಾಗಿಯೂ ಮನಸೆಳೆಯುವ ಪಾತ್ರ ಮಾತಂಗಿಯದು, ಬಾಡಿಗೆ ತಾಯಿಯಾದ ಆಕೆ ಸ್ವಂತ ನಾಲ್ಕು ಮಕ್ಕಳಿದ್ದರೂ ತಾನು ಹಡೆದು ಅದರ ಮುಖವನ್ನೂ ಸರಿಯಾಗಿ ನೋಡದೆ ಕೊಟ್ಟುಬಿಟ್ಟಿದ್ದ ಮಗಳನ್ನು ಆಕೆ ತಾನು ಸಾಯುವದರೊಳಗೆ ಒಮ್ಮೆಯಾದರೂ ಮಗಳನ್ನು ನೋಡಬೇಕೆಂದು ಹಂಬಲಿಸುವ ತಾಯಿ. ಅದೂ ಈಡೇರುತ್ತದೆ.

ಅವಳನ್ನು ಹುಡುಕಿ ಮಗಳೊಂದಿಗೆ ಭೇಟಿ ಮಾಡಿಸಿದ ಸುಮಾನ ತಂದೆ ಹಣ ಕೊಡಲು ಹೋದಾಗ ಸುಮಾಳ ಅಪ್ಪನಿಗೆ ‘ಋಣಾನ ರೊಕ್ಕದಾಗ ಅಳಿಬ್ಯಾಡ್ರಿ’ ಎನ್ನುವ ಅವಳ ಮಾತು ಹೃದಯ ದ್ರವಿಸುವಂತೆ ಮಾಡುತ್ತದೆ. ಮಾತಂಗಿ ಮತ್ತು ಅವಳ ಪರಿಸರದ ಚಿತ್ರ ಬಿಡಿಸುವಾಗ ಕಾದಂಬರಿಕಾರರ ಭಾಷಿಕ ಶಕ್ತಿ ಅನಾವರಣವಾಗುತ್ತದೆ.

ಕಥೆಯ ನಾಯಕಿ ಸುಮಾಳ ಕಥೆಯೂ ತನ್ನ ಚಾರಿತ್ರ್ಯ ಕಳೆದುಕೊಂಡ ಜೋಗಿತಿಗಿಂತಲೇನೂ ಭಿನ್ನವಾಗಿಲ್ಲ. ಆಕೆ ಕಲಿತ ಜೋಗಿತಿಯಂತಾಗಿದ್ದಾಳೆ ಅಷ್ಟೇ. ವೆಂಕಟೇಶನನ್ನು ಸೋಲಿಸುವ ಭರದಲ್ಲಿ ತನ್ನ ದೇಹದ ಸಕಲವನ್ನೂ ಅವನಿಗೆ ಬಿಟ್ಟು ಬಿಡುತ್ತಾಳೆ. ಗಂಡು ಮಾಡುವ ಕ್ರೂರ ಶೋಷಣೆ ಇಲ್ಲಿ ಪಾತ್ರ ಬದಲಿಸುತ್ತದೆ. ಮನಸಾರೆ ಪ್ರೀತಿಸುತ್ತಲೆ ನಾಯಕ ಆಕೆ ಕೀಳುಜಾತಿಯ ತಾಯಿಯಂದ ಹುಟ್ಟಿದವಳು ಎನ್ನುವ ನೆವ ಒಡ್ಡಿ ಅವಳನ್ನು ಬಿಟ್ಟು ಹೋಗುವ ದಾರಿ ಹುಡುಕಿದಾಗ ನಾಯಕಿ ಸೋಲುವದಿಲ್ಲ, ಅವನನ್ನು ಓಲೈಸುವದಿಲ್ಲ. ಧೈರ್ಯದಿಂದಲೇ ಬದುಕುವ ನಿರ್ಧಾರಕ್ಕೆ ಬರುತ್ತಾಳೆ.

ಆದರೆ ಆತ ಕೊಟ್ಟ ಕಾರಣ ಅವಳ ಮನ ನೋಯಿಸುತ್ತದೆ. ತನು ಕೀಳು ಕುಲದ ತಾಯಿಯಿಂದ ಹುಟ್ಟಿದವಳು ಎಂಬ ಕಾರಣ ಒಡ್ಡಿದ್ದು ಅವಳ ಮನ ನೋಯಿಸುತ್ತದೆ. ಹೆಣ್ಣಿನ ಶೋಷಣೆಗೆ ಮತ್ತೊಂದು ಮುಖದ ರೂಪವಾಗಿ ನಾಯಕ ಕಾಣಿಸುತ್ತಾನೆ. ಆದರೆ ಸುಮಾ ಮಾತಂಗಿಯ ಮಗಳು. ಸ್ವತ: ದೇವತೆ ಯಲ್ಲಮ್ಮನನ್ನು ಉಳಿಸಲು ತನ್ನ ರುಂಡ ಬಲಿತೆತ್ತ ಪುರಾಣ ಕಾಲದ ಮಾತಂಗಿ, ಮಕ್ಕಳಿಲ್ಲದ ಕಾರಣಕ್ಕೆ ಸುಮಾನ ತಂದೆಯ ಜೀವಕಣಗಳಿಗೆ ತನ್ನ ಉದರವನ್ನೇ ಆಸರೆಯಾಗಿಸಿ ಮಗಳನ್ನು ಹಡೆದುಕೊಟ್ಟು ಆ ಮಗುವನ್ನು ತ್ಯಾಗ ಮಾಡಿಕೊಟ್ಟು ಬಂದಿದ್ದ ಮಾತಂಗಿಯ ಹಾಗೆ ಸುಮಾ ಕೂಡ ತನ್ನ ಪ್ರೀತಿಯನ್ನು ತ್ಯಾಗ ಮಾಡಬೇಕಾಗಿ ಬರುತ್ತದೆ.

ನಾವು ಎಷ್ಟೇ ಆಧುನಿಕರಾದರೂ ಸ್ತ್ರೀ ಶೋಷಣೆ ನಿಂತಿಲ್ಲ, ಮುಖ ಬದಲಾಯಿಸಿಕೊಂಡಿದೆ ಅಷ್ಟೇ, ಎನ್ನುವದನ್ನು ಕಾದಂಬರಿ ಸಾರುತ್ತದೆ. ಆಕೆಯನ್ನು ತ್ಯಜಿಸಲು ನಾಯಕ ಕೊಡುವ ‘ಶ್ರೇಷ್ಠ ಜಾತಿಯಲ್ಲಿ ಹುಟ್ಟಿದ್ದೇನೆ. ನನ್ನ ಮೈತುಂಬ ಶ್ರೇಷ್ಠ ಜಾತಿಯ ರಕ್ತ ಹರಿಯುತ್ತಿದೆ. ನಿನ್ನ ಹೆತ್ತ ತಾಯಿ ಕೀಳು ಜಾತಿಯವಳು. ನಿನ್ನ ರಕ್ತದಲ್ಲಿ ಶ್ರೇಷ್ಠತೆಯಿಲ್ಲ, ನನ್ನ ಆಯ್ಕೆ ತಪ್ಪಾಗಿದೆ. ನನ್ನ ಮರೆತುಬಿಡು’ ಈ ಕಾರಣ ಆಕೆಯ ಮನ ನೋಯಿಸುತ್ತದೆ.

ಯಲ್ಲಮ್ಮದೇವಿಯ ಮೇಲೊಂದು ಡಾಕುಮೆಂಟರಿ ಮಾಡಲು ಬಂದ ಮೂವರ ತಂಡ ಅದು. ವೆಂಕಟೇಶ, ಸುಮಾ, ಮತ್ತು ಮಲಿಕ್. ಅವರು ಗುಡ್ಡದಲ್ಲಿ ನಡೆಯುವ ಸ್ತ್ರೀ ದುರಂತದ ಕಥೆಯನ್ನು ಜೋಗಿತಿಯರ ಬಾಯಿಯಿಂದಲೇ ಕೇಳಿ ಅದನ್ನು ಚಿತ್ರಿಕರಿಸಲು ಗುಡ್ಡಕ್ಕೆ ಬಂದಿದ್ದಾರೆ. ಇಲ್ಲಿಗೆ ಬರುವಾಗ ಸುಮಾನಿಗೆ ಆಧುನಿಕ ಆಲೋಚನೆಯ ಅವಳಪ್ಪ ಅವಳಿಗೆ ಮುಕ್ತ ಸ್ವಾತಂತ್ರ್ಯ ನೀಡಿ ಕಳಿಸಿದ್ದಾನೆ.

ಅಲ್ಲದೇ ‘ಮಾತಂಗಿಯೆಂಬ ಮಾಯಕಾರತಿಯೊಬ್ಬಳನ್ನು ಹುಡುಕಿ ತಾ ಅವಳು ನಮಗೆ ಮಾಡಿದ ಉಪಕಾರ ದೊಡ್ಡದು’ ಎಂದು ಹೇಳಿ ಕಳಿಸಿದ್ದಾನೆ. ಡಾಕುಮೆಂಟರಿ ಕಾರಣಕ್ಕೆ ಆಯ್ದುಕೊಂಡ ದೇವದಾಸಿಯೊಬ್ಬಳು ಹೇಳುವ ಮಾತುಗಳಲ್ಲಿ ಸ್ತ್ರೀ ಶೋಷಣೆಯ ಮುಖ ಗೋಚರಿಸುತ್ತದೆ. ತನ್ನ ಕಥೆ ಹೇಳಿದ ಆಕೆ ಡಾಕ್ಯುಮೆಂಟರಿ ಮಾಡುವ ಇವರಿಗೆ -“ಹಾಂ ಮತ್ತ ಇದನ್ನು ಕೇಳಿ ನೀವ ಹಳೆಕಾಲದ ಸಿನಮಾ ಅಂತೇಳಿ ಮರೆಯುವದಲ್ಲ, ಇದು ಈ ಕಾಲದಾಗೂ ಐತಿ, ನಮಗಿಂತ ಕೆಟ್ಟ ಐತಿ ಆದರ ಅಲ್ಲಿ ಈ ದೇವರು ದಿಂಡರು ಯಾರೂ ಇಲ್ಲ. ಈ ಹಸಿದ ಹೊಟ್ಟಿಮ್ಯಾಗ ನೆದರ ಬಿಡುವ ಹಸಿದ ಕಣ್ಣು ಅದಾವು.’’

“ ಆಗ ಏನೇನೋ ದೇವರ ಹೆಸರ ಹೇಳಿ ನಮ್ಮಂತ ಜಾತಿಯವರನ್ನ ತುಳಿತಿದ್ದರು. ಹೆಸರ ಹೇಳಿ ಸೂಳಿ, ಬಸವಿಯಂತ ಊರ ತುಂಬ ಕುಣಿಸತಿದ್ದರು. ಆದ್ರ ಈಗ.. ಬಾಳ ನಾಜೂಕ ಆಗೈತಿ. ರೊಕ್ಕದ ಮೋಹಕ್ಕ ಚರ್ಮದ ದಂಧೆ ಮಾಡ್ತಾರು. ಈಗ ಇದು ಒಂದ ಜಾತಿಯ ರೋಗವಾಗಿ ಉಳಿದಿಲ್ಲ. ಹರೆಯದ ಕಾವು, ಬಡತನ, ಮೋಜು, ಪ್ರೀತಿ ಪ್ರೇಮ ಅಂತೆಲ್ಲಾ ಹೆಣ್ಣ ಮಕ್ಕಳನ್ನ ಈ ಪಾಪದ ಕೂಟಕ್ಕ ನೂಕುವ ಲಪಂಗರ ತುಂಬ್ಯಾರ. ಅಲ್ಲಿ ಅವರ ಬದುಕು ನರಕಕ್ಕಿಂತ ಘೋರ ಐತಿ. ನಾನು ಗೋವಾ ಬಾಂಬೇ ಎಲ್ಲಾ ಅಡ್ಡಾಡಿ ಬಂದೇನಿ ಅವರಿಗಿಂತ ನಾವ ಎಷ್ಟೋ ವಾಸಿ’ ಹೀಗೆ ಆಕೆ ಎದೆಯೊಳಗೆ ತುಂಬಿಕೊಂಡಿದ್ದ ಕಫವನ್ನೆಲ್ಲಾ ಕ್ಯಾಕರಿಸಿ ಉಗಿಯುವ ವಿವರಣೆ ಈ ನರಕದ ಚಿತ್ರ ಬಿಡಿಸುತ್ತದೆ.

ನಾಯಕ ತನ್ನನ್ನು ಕೀಳು ಜಾತಿಯ ಕಾರಣವೊಡ್ಡಿ ಬಿಟ್ಟು ಹೋದಾಗ ನಾಯಕಿ ಸುಮಾ ಕೇಳುವ ಈ ಪ್ರಶ್ನೆಗಳಿಗೆ ಉತ್ತರವೇ ಇಲ್ಲವೆ ಎನಿಸುತ್ತದೆ. “ಅವನ ದೈಹಿಕ ಬಯಕೆಗಳನ್ನು ಈಡೇರಿಸಿದ ಆ ರಾತ್ರಿಗಳ ಖಾತ್ರಿಗಳಿಗಾಗಿ ಛಾಪಿಸಿದ ಬಾಂಡಪೇಪರ್. ಮಾನಸಿಕ ಯುದ್ಧದಲ್ಲಿ ಸೋತು ಸೆರೆಯಾಳಾಗಿ ತಾನು ಆತನ ಸುಖಕ್ಕೆ ಶರಣಾದ ದಾಸಿ ಎನಿಸಿ ಬಿಡುತ್ತದೆ .

ಅವರಿಸಿಕೊಂಡು ಬರಸೆಳೆದು ಬಿಗಿದಪ್ಪಿದ ಅವನ ಬಾಹುವಿನ ಬಿಸಿಯಪ್ಪುಗೆಯಲ್ಲಿ ನನ್ನ ಅರ್ಪಿಸಿಕೊಂಡ ಅಡಿಯಾಳು, ಉಸಿರು ನುಂಗಿ ಬೆವರು ಹರಿಸಲು ಒಪ್ಪಿಕೊಂಡ ಆಳು. ಇನ್ನು ಯಾವ ಕನಸುಗಳನ್ನು ಕಾಪಿಟ್ಟುಕೊಳ್ಳಲಿ? “ ಹೀಗೆಲ್ಲ ತಪಿಸುವ ಸುಮಾ ಶೋಷನೆಯ ಮುಂದುವರಿದ ಭಾಗವಾಗಿ ಕಾಣಿಸುತ್ತಾಳೆ. ಸುಮಾ ಕೇಳುವ ಪ್ರಶ್ನೆಗಳಲ್ಲಿ ವಾಸ್ತವವಿದೆ.

ಸತ್ಯವತಿಯನ್ನು ವಂಚಿಸಿದ ಪರಾಶರನಂತೆ ಸುಮಾ ವೆಂಕಟೇಶನಿಂದ ವಂಚಿಸಲ್ಪಟ್ಟವಳು. ವೆಂಕಟೇಶನೊಡನೆ ಹಂಚಿಕೊಂಡ ತಪ್ಪು ಈಗ ಪಿಂಡವಾಗಿ ಹೊಟ್ಟೆಯಲ್ಲಿ ಬೆಳೆಯುತ್ತದೆ.

ರೇಣುಕಾ ದೇವಿಯ ಮನಸ್ಸು ಚಂಚಲವಾದುದನ್ನು ಜಮದಗ್ನಿಯೂ ಸಹನೆಯಿಂದ ಪರಾಂಬರಿಸಲಿಲ್ಲ. ಸತ್ಯವತಿಯನ್ನು ನಾಜೂಕಾಗಿ ಪರಾಶರ ವಂಚಿಸಿದ. ಹಾಗೆಯೇ ವೆಂಕಟೇಶನೂ ಸುಮಾಳನ್ನು ಯಾಮಾರಿಸಿದ. ಹೀಗೆ ಈ ವಂಚನೆ ತಲೆಮಾರಿನಿಂದ ಹೊಸರೂಪ ಪಡೆದು ನಿರಂತರವಾಗಿ ನಡೆದಿದೆ ಎನ್ನುವದನ್ನು ಸಾರುವದು ಕಾದಂಬರಿಯ ಮುಖ್ಯ ಗುರಿಯಾಗಿದೆ.

ಕಾದಂಬರಿಯ ಕೊನೆಯಲ್ಲಿ ಸುಮಾ ತಗೆದುಕೊಳ್ಳುವ ತೀರ್ಮಾಣ ಆವಳ ಮೇಲಿನ ಗೌರವವನ್ನು ಇನ್ನೂ ಹೆಚ್ಚುವಂತೆ ಮಾಡಿದೆ. ತಾನು ತಾಯಿಯೆಂಬ ಸುಮಾ ಮರೆಯುವದಿಲ್ಲ. ಅಪ್ಪನ ಬಲದಿಂದ ಬೆಂಗಳೂರಿನಂತಹ ದೊಡ್ಡ ಊರಲ್ಲಿ ಮಗು ಭಾರ್ಗವನನ್ನು ಪಡೆದುಕೊಳ್ಳುತ್ತಾಳೆ . ಅಮೇರಿಕದಲ್ಲಿನ ಹುಡುಗನೊಬ್ಬ ಇವಳ ಪೂರ್ವ ದ ಕಥೆಕೇಳಿಯೂ ಮದುವೆಯಾಗಲು ಒಪ್ಪಿಕೊಂಡ ಸುದ್ದಿ ಅಪ್ಪ ಹೇಳಿದಾಗ ಸುಮಾ ಅದನ್ನು ತಿರಸ್ಕರಿಸಿ ತಾಯಿಯ ಕರೆಯಂತೆ ಮತ್ತೆ ಗುಡ್ಡಕ್ಕೆ ಬರುತ್ತಾಳೆ .ಗುಡ್ಡದಲ್ಲಿ ನಿರ್ಗತಿಕರ ಸೇವೆ ಮಡುತ್ತ ಜೀವ ಸವೆಸುವ ತಿರ್ಮಾನದೊಂದಿಗೆ ಕಾದಂಬರಿ ಮುಗಿಯುತ್ತದೆ.

ಇಡೀ ಕಾದಂಬರಿಯ ತುಂಬ ಆನಂದರು ಹಿನ್ನೆಲೆಯಾಗಿ ಇರಿಸಿಕೊಂಡಿರುವ ರೇಣುಕಾ ಯಲ್ಲಮ್ಮನ ಕಥೆ ಕಾದಂಬರಿಗೊಂದು ವಿಶಾಲ ಬಿತ್ತಿ ಒದಗಿಸಿದೆ. ಪುರಾಣ ಮತ್ತು ಇತಿಹಾಸ , ಸಮಕಾಲೀನ ವಾಸ್ತವಗಳನ್ನು ಪರಸ್ಪರ ಬೆರೆಸಿ ಹೆಣೆದಿರುವ ಅವರ ಕಲ್ಪಕ ಶಕ್ತಿ ನಮ್ಮ ಗಮನ ಸೆಳೆಯುತ್ತದೆ. ಕಥೆಯನ್ನು ನಿರೂಪಿಸುವಾಗ ಸ್ಥಳಪುರಾಣ ಕಟ್ಟಿಕೊಡುವ ಜಾನಪದ ಪದ್ಯಗಳನ್ನೂ ಬಳಸಿಕೊಂಡಿರುವದು ಕಾದಂಬರಿಗೆ ಒಂದು ವಿಶೇಷ ಶಕ್ತಿ ನೀಡಿದೆ.

ಆದರೆೆ ಕಾದಂಬರಿಕಾರ ಕೊನೆಯ ಭಾಗದಲ್ಲಿ ಸುಮಾಳ ಅಂತರಂಗದ ತುಮುಲಗಳನ್ನು ಬಿಚ್ಚಿಡುವ ಭರದಲ್ಲಿ ಭಾಷಣಕಾರನಂತೆ ಉಪನ್ಯಾಸಕ್ಕಿಳಿದು ಬಿಡುವದು ಕಾದಂಬರಿಯ ಬಂಧಕ್ಕೊಂದಿಷ್ಟು ಜಾಳುತನದ ಲೇಪನವನ್ನು ಅಂಟಿಸಿದೆ ಎನ್ನಿಸುತ್ತದೆ.
ಅದೇನೆ ಇರಲಿ, ಕಾದಂಬರಿಕಾರ ಆನಂದರ ಕಣಜದಲ್ಲಿ ಇನ್ನೂ ಇಂತಹ ಎಷ್ಟು ಕಥೆಗಳು ತುಂಬಿವೆಯೋ ಗೊತ್ತಿಲ್ಲ. ಇಂತಹ ಅನೇಕ ಕಾದಂಬರಿಗಳು ಅವರ ಲೇಖನಿಯಿಂದ ಮೂಡಲಿ ಎಂದು ಮನದುಂಬಿ ಹಾರೈಸುತ್ತೇನೆ. ಮೊದಲ ಪ್ರಯತ್ನದಲ್ಲಿಯೇ ನೆಲದ ನುಡಿಗಟ್ಟು ಮತ್ತು ಸ್ಥಳೀಯ ಹಿನ್ನೆಲೆಯ ಕಥಾಬಿತ್ತಿಯನ್ನು ಇರಿಸಿಕೊಂಡು ಒಂದು ಸಶಕ್ತ ಕಾದಂಬರಿಯನ್ನು ನೀಡಿದ ಆನಂದ ಬೋವಿಯವರಿಗೆ ಅಭಿನಂದನೆಗಳು.

‍ಲೇಖಕರು Avadhi

October 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: