ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ’ಮುಹೂರ್ತ ವ್ಯಾಧಿ’ಗೆ ಬಲಿಯಾದವರು..


“ಮೂಲಾ ಮುಗ್ಯೂತನಕ ಮುಟ್ಟಬ್ಯಾಡ್ರೀ……!!”
ಇದು ಸುಮಾರು ಎರಡು ವರ್ಷಗಳ ಹಿಂದೆ ಒಬ್ಬ ‘ಸುಶಿಕ್ಷಿತ’ ವ್ಯಕ್ತಿ ತನ್ನ ಹೆಂಡತಿಯ ಸಿಜೇರಿಯನ್ ಕ್ಕಿಂತ ಮೊದಲು ನನಗೆ ‘ಗದರುವಂತೆ’ ಹೇಳಿದ ಮಾತುಗಳು. ಅವಳು ಬಹಳ ವರ್ಷಗಳ ನಂತರ ಗರ್ಭಿಣಿ. ಮೊದಲನೆಯದು ಸಿಜೇರಿಯನ್ ಹೆರಿಗೆ. ಏಳು ವರ್ಷಗಳ ಹಿಂದೆ ಆಗಿತ್ತು . ಈ ಬಾರಿ ಬೇಗ ಗರ್ಭ ನಿಲ್ಲದ್ದರಿಂದ ನೂರೆಂಟು ಕಡೆ ಔಷಧೋಪಚಾರ, ಹಲವಾರು ಗುಡಿ ಗುಂಡಾರಗಳ ಪ್ರದಕ್ಷಿಣೆ, ಪೂಜೆ, ವ್ರತ ಮುಂತಾದವುಗಳನ್ನು ಪೂರೈಸಿದ ಮೇಲೆ ನಿಂತಿದ್ದು. ಈಗ ‘ದಿನಗಳು ಮುಗಿದು’ ಅದಾಗಲೇ ಒಂದು ವಾರವಾಗಿತ್ತು. ಸಹಜ ಹೆರಿಗೆ ಸಾಧ್ಯವಿಲ್ಲದ ಸ್ಥಿತಿ. ಸ್ಕ್ಯಾನಿಂಗ್ ಮಾಡಿ ನೋಡಿದರೆ ಮಗುವಿನ ಎದೆಬಡಿತದಲ್ಲಿ ಏರಿಳಿತ ಇತ್ತು. ಮಗುವಿಗೆ ಪ್ರಾಣಾಪಾಯವಾಗುವ ಸಂಭವವಿತ್ತು. ‘ಬೇಗ ಸಿಜೇರಿಯನ್ ಮಾಡಿದರೆ ಮಗು ಸುಸ್ಥಿತಿಯಲ್ಲಿರುತ್ತದೆ. ಇಲ್ಲವಾದರೆ ಮಗು ಸಾಯುತ್ತದೆ ಅಥವಾ ಬುದ್ಧಿವಿಹೀನವಾಗುವ ಸಾಧ್ಯತೆಗಳಿವೆ…. ’ಇತ್ಯಾದಿ ವಿವರಣೆಗಳೆಲ್ಲ ಯಾವುದೇ ಪರಿಣಾಮ ಬೀರಲಿಲ್ಲ.
ಅಲ್ಲಿ ಇದ್ದವರು ಮೂರೇ ಜನ ಗಂಡ, ಹೆಂಡತಿ ಮತ್ತು ಹೆಂಡತಿಯ ತಾಯಿ. ನಾನು ಅನೇಕ ಸಲ ಗಮನಿಸಿದ್ದೇನೆಂದರೆ, ಇಂಥ ಸಂದರ್ಭಗಳಲ್ಲಿ ಹೆಂಡತಿಯ ತಾಯಿಯೇ ಜೊತೆಗಿರುತ್ತಾಳೆ. ಗಂಡನ ತಾಯಿ ಆರಾಮಾಗಿ ಮನೆಯಲ್ಲಿದ್ದು, ‘ಎಲ್ಲ’ ಮುಗಿದ ಮೇಲೆ ಅಧಿಕಾರ ಸ್ಥಾಪಿಸಲು ಮಾತ್ರ ಪ್ರತ್ಯಕ್ಷ್ಯರಾಗುತ್ತಾರೆ. ಅಥವಾ ಇವರು ತೆಗೆದುಕೊಂಡ ನಿರ್ಣಯಗಳನ್ನು ಟೀಕಿಸಲು ಹಾಜರಾಗುತ್ತಾರೆ. ಈ ಮೂರೂ ಜನರದು ಒಕ್ಕೊರಲಿನ ನಿರ್ಣಯ…
”ಈಗ ಸಧ್ಯ ಮೂಲಾ ನಕ್ಷತ್ರ. ಅದೂ ಎರಡನೆಯ ಚರಣದಲ್ಲಿದೆ. ಅದು ಸರಿದುಹೋಗುವವರೆಗೆ ‘ಏನಾದರಾಗಲಿ’ ಆಪರೇಷನ್ ಬೇಡ…!!”
ನನ್ನದು ವಿಚಿತ್ರ ಸ್ಥಿತಿ….. ಮಗುವಿನ ಸಂಕಟ ನನಗೆ ತಿಳಿಯುತ್ತಿದೆ. ಮಗುವಿಗೆ ಹೊಟ್ಟೆಯಲ್ಲಿ ಆಗುತ್ತಿರಬಹುದಾದ ಕಸಿವಿಸಿ, ಪ್ರಾಣಕ್ಕಾಗಿ ಅದು ಚಡಪಡಿಸುತ್ತಿರುವ ಸ್ಥಿತಿ ಎಲ್ಲವೂ ವೇದ್ಯವಾಗುತ್ತಿದೆ. ಸರಿಯಾದ ವೇಳೆಗೆ ಸಹಜ ಹೆರಿಗೆಯಾಗದಿದ್ದರೆ ಹೊಕ್ಕುಳ ಹುರಿಯ ಮುಖಾಂತರ ಮಗುವಿಗೆ ಹರಿಯುವ ಪ್ರಮಾಣ ಕಡಿಮೆಯಾಗಿ ಮಗುವಿನ ಮೆದುಳಿಗೆ ಗ್ಲುಕೋಸ್ ಹಾಗೂ ಆಮ್ಲಜನಕ ದೊರೆಯುವುದಿಲ್ಲ. ಹೀಗಾಗಿ ಮೊದಲು ಪರಿಣಾಮವಾಗುವುದು ಮೆದುಳಿನ ಮೇಲೆಯೇ. ಆದರೆ ನನಗೆ ಏನೂ ಮಾಡಲು ಸಾಧ್ಯವಿರಲಿಲ್ಲ. ಅವರ ‘ಅಪ್ಪಣೆ’ಯಿಲ್ಲದೆ ನಾನೇನು ಮಾಡಲು ಸಾಧ್ಯ?
ಯಾರೋ ಒಬ್ಬ ಜ್ಯೋತಿಷಿ, ‘ಮೂಲಾ ನಕ್ಷತ್ರದಲ್ಲಿ ಮಗು ಹುಟ್ಟಿದರೆ ತಂದೆಗೆ ಪ್ರಾಣಾಪಾಯವಾಗುತ್ತದೆ’ ಎಂದು ಅವರನ್ನು ನಂಬಿಸಿಬಿಟ್ಟಿದ್ದ. ಅವರು ಅದನ್ನು ಎಷ್ಟು ನಂಬಿದ್ದರಂದರೆ, ನಾನು ‘ಆಪರೇಷನ್ ಮಾಡಲೇಬೇಕು’ ಎಂದಾಗಲೆಲ್ಲ ಅವರು ಗಾಬರಿಪಟ್ಟುಕೊಂಡು, ಒಬ್ಬರನ್ನೊಬ್ಬರು ನೋಡುತ್ತಾ ‘ತಮ್ಮ’ ನಾಡಿ ತಾವೇ ಹಿಡಿದು ನೋಡಿಕೊಳ್ಳುವ ಸ್ಥಿತಿಯಲ್ಲಿದ್ದರು…!!
ಈ ರೀತಿಯ ಜನರನ್ನು ಅನೇಕ ಬಾರಿ ನೋಡಿದ್ದೇನೆ. ಮುಹೂರ್ತಕ್ಕೆ ಸರಿಯಾಗಿ ಮಕ್ಕಳನ್ನು ಹಡೆಯಲು ಸಿಜೇರಿಯನ್ ಎಂಬ ಸುಲಭಸಾಧನ ದೊರೆತ ಮೇಲಂತೂ ಒಳ್ಳೆಯ ಮುಹೂರ್ತಗಳನ್ನು, ಫ್ಯಾಶನೆಬಲ್ ದಿನಾಂಕಗಳನ್ನು ನೋಡಿಕೊಂಡು ಹೆರಿಗೆ ಮಾಡಿಸಿಕೊಳ್ಳುವವರ ಸಂಖ್ಯೆ ತುಂಬ ಹೆಚ್ಚಾಗಿದೆ. ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲದಂತಿದ್ದರೆ ಮತ್ತು ಸಿಜೇರಿಯನ್ ಅವಶ್ಯಕವಿದ್ದರೆ ನಾವೂ ಕೂಡ ಅವರ ವಿನಂತಿಯನ್ನು ಮಾನ್ಯ ಮಾಡುತ್ತೇವೆ. ಆದರೆ ಕೆಲವೊಮ್ಮೆ ಅತಿರೇಕಗಳೂ ಆಗಿದ್ದಿದೆ. ಒಂದು ಬಾರಿ ಒಬ್ಬರು ರಾತ್ರಿ ಎರಡು ಗಂಟೆಗೆ ಮುಹೂರ್ತ ತೆಗೆಸಿಕೊಂಡು ಬಂದಿದ್ದರು. ‘ರಾತ್ರಿ ನಿಮ್ಮ ಮುಹೂರ್ತದ ಸಲುವಾಗಿ ನಿದ್ದೆಗೆಡಲು ನಾನು ನಮ್ಮ ಸಿಬ್ಬಂದಿ ಸಾಧ್ಯವಿಲ್ಲ, ತುರ್ತು ಪರಿಸ್ಥಿತಿಯಲ್ಲಿ ಮಾತ್ರ ನಾವು ಹಾಗೆ ಮಾಡಲು ಸಾಧ್ಯ’, ಎಂದರೆ “ಏನ್ರೀ ಸರ್, ನಾವು ನಿಮ್ಮ ಖಾಯಂ ಪೇಶಂಟ್ ಅದ್ಯಾವು. ನಮ್ಮ ಮನ್ಯಾಗ ಎಷ್ಟ ಆಪರೇಶನ್ ಆದರೂ ಎಲ್ಲಾ ನಿಮ್ಮ ಕಡೇನ ಮಾಡ್ಸೀವಿ. ಇವತ್ತೊಂದ ರಾತ್ರಿ ನಮ್ಮ ಸಲುವಾಗಿ ನಿದ್ದಿಗೆಡೂದು ಆಗೂದಿಲ್ಲೆನ್ರೀ?” ಅಂದಿದ್ದ. ಅವರ ವಿಚಿತ್ರ ತರ್ಕಗಳಿಗೆ ನಮ್ಮಲ್ಲಿ ಉತ್ತರಗಳಿರುವುದಿಲ್ಲ. ಅಪ್ಪಟ ನಾಸ್ತಿಕನೂ, ವೈಜ್ಞಾನಿಕವಾಗಿ ಚಿಂತಿಸುವವನೂ, ಸಾಮಾಜಿಕ ನಿಲುವುಗಳಿಗೆ ಬದ್ಧನಾದವನೂ, ಮಾನವೀಯತೆಯೇ ವೈದ್ಯಕೀಯದ ಜೀವಾಳ ಎಂದು ಬಲವಾಗಿ ನಂಬಿದವನೂ ಆದ ನನಗೆ, ಅವರ ಇವೆಲ್ಲ ವಿಚಾರಗಳು ಅಸಂಬದ್ಧವೂ, ತರ್ಕವಿಹೀನವೂ ಎನಿಸುತ್ತವೆ. ಹಾಗೇನಾದರೂ ಮುಹೂರ್ತಗಳಿಂದಲೇ ಒಳ್ಳೆಯ ಮಕ್ಕಳು ಜನಿಸುವಂತಿದ್ದರೆ ಅದೆಷ್ಟೋ ಒಳ್ಳೆಯದಿತ್ತು, ಅನಿಸುತ್ತದೆ. ಆಗ ಬರೀ ಮಹಾತ್ಮರನ್ನು, ದೇಶಪ್ರೇಮಿಗಳನ್ನು, ಮಹಾಮಾನವ(ಮಾತೆಯ)ರನ್ನು ಪಡೆಯಲು ಸಾಧ್ಯವಾಗುತ್ತಿತ್ತೇನೋ ….. ಆ ಮಾತು ಬೇರೆ.

ಮುಹೂರ್ತ ನೋಡಿ ಮಕ್ಕಳನ್ನು ಪಡೆಯುವವರದು ಒಂದು ವರ್ಗವಾದರೆ ‘ಒಳ್ಳೆಯ’ ಮುಹೂರ್ತದಲ್ಲಿ ತಮ್ಮ ಹಿರಿಯರ ಪ್ರಾಣ ಹೋಗುವಂತೆ ಮಾಡಿರಿ, ಎನ್ನುವವರದು ಇನ್ನೊಂದು ವಿಚಿತ್ರ ವರ್ಗ . ಮಾರಣಾಂತಿಕ ಸ್ಥಿತಿಯಲ್ಲಿದ್ದು, ಕೃತಕ ಉಸಿರಾಟದ ಯಂತ್ರದಿಂದ ಜೀವ ಹಿಡಿದ ಹಿರಿಯರನ್ನು ಇಂಥದ್ದೇ ಗಳಿಗೆಯಲ್ಲಿ ಯಂತ್ರದಿಂದ ಬಿಡಿಸಿ ಪ್ರಾಣ ಹೋಗಲು ‘ಸಹಕರಿಸುವಂತೆ’ ವಿನಂತಿ ಮಾಡುವ ಜನರೂ ಇದ್ದಾರೆ. ‘ಅದು ಕೊಲೆಗೆ ಸಮನಾಗುತ್ತದೆ, ಅಲ್ಲದೆ ವೈದ್ಯಕೀಯದ ಮುಖ್ಯ ಉದ್ದೇಶ ಪ್ರಾಣ ರಕ್ಷಣೆ. ಹೀಗಾಗಿ ನಮಗದು ಸಾಧ್ಯವಿಲ್ಲ’ ಎಂದರೆ, “ವೈದ್ಯೋಪದೇಶಕ್ಕೆ ವಿರುದ್ಧವಾಗಿ” ಮನೆಗೆ ತೆಗೆದುಕೊಂಡು ಹೋಗಿ, ಮುಹೂರ್ತಕ್ಕೆ ಸರಿಯಾಗಿ ಅವರನ್ನು ‘ಬೀಳ್ಕೊಡುತ್ತಾರೆ’. ಹಾಗೆ ಮಾಡಿ, ಅವರನ್ನು ಸೀದಾ ಸ್ವರ್ಗಕ್ಕೆ ಕಳಿಸಿದೆವು, ಎಂದು ಖುಶಿಪಡುತ್ತಾರೆ. ಅಲ್ಲದೆ ಇಂತಿಂಥ ದಿನ ಸತ್ತರೆ, ಜೀವಂತ ಇದ್ದ ಅವರ ಮನೆಯವರಿಗೆ, ನೆರೆಹೊರೆಯವರಿಗೆ ಇಂತಿಂಥ ಕಷ್ಟಗಳು ಬರುತ್ತವೆ, ಎಂಬ ಒಂದು ‘ಅತೆಂಟಿಕ್ ಲಿಸ್ಟ’ನ್ನೇ ಇಟ್ಟುಕೊಂಡಿರುತ್ತಾರೆ.
ಒಂದು ದಿನ ಒಬ್ಬ …
“ಸಾಹೇಬ್ರ, ನಿಮ್ಮ ಕೂಡ ಒಂದ್ ಸ್ವಲ್ಪ ಪ್ರೈವೇಟ್ ಮಾತಾಡೂದೈತ್ರಿ” ಅಂದ.
ನಾನು ನಮ್ಮ ಸಿಬ್ಬಂದಿಯನ್ನೆಲ್ಲ ಹೊರಗೆ ಕಳಿಸಿ, ‘ಏನು’ ಎನ್ನುವಂತೆ ನೋಡಿದೆ..ನನ್ನೆಡೆಗೆ ಸ್ವಲ್ಪವೇ ಬಾಗಿ ನನ್ನ ಕಿವಿಯಲ್ಲಿ ಹೇಳುವಂತೆ, ಪಿಸುದನಿಯಲ್ಲಿ ಹೇಳಿದ.
“ಸರ್. ನಮ್ಮಪ್ಪಗ ಲಕ್ವಾ ಹೊಡದ ಭಾಳ ವರ್ಷ ಆಯ್ತ್ರಿ, ನಮಗೂ ಜ್ವಾಪಾನ ಮಾಡಿ ಸಾಕಾಗೈತಿ. ಅಂವ ಅಂತೂ ಆರಾಮ ಆಗೂದಿಲ್ಲಂತ ನಮಗ ಗೊತ್ತಾಗೈತಿ. ನಾಳಿ ದಿನ ಭಾಳ ಛಲೋ ಐತೆಂತ. ನೀವು ಸ್ವಲ್ಪ ನಮ್ಮ ಮನೀಗೆ ಬಂದು, ಅಂವಗ ನಿದ್ದಿ ಇಂಜೆಕ್ಷನ್ ದ ಹೆಚ್ಚ ಡೋಜ್ ಕೊಟ್ಟ ಬಿಡ್ತೀರೆನ್ರಿ….?”
ನನಗೆ ಸಿಟ್ಟು ನೆತ್ತಿಗೇರಿತು. ಅಲ್ಲದೆ ಅವನ ಮನಸ್ಥಿತಿಯ ಬಗ್ಗೆ ರೇಜಿಗೆಯಾಯಿತು. ಆತನನ್ನು ಗದರಿದೆ. ಅಲ್ಲದೆ, ‘ಬರೀ ಒಂದು ಎದೆಬಡಿತ, ಸ್ವಲ್ಪವೇ ಉಸಿರು ಇದ್ದರೂ ಬದುಕಿಸಲು ಪ್ರಯತ್ನಿಸುವ’ ನಮ್ಮ ವೃತ್ತಿಯ ಬಗ್ಗೆ ತಿಳಿಹೇಳಿದೆ. ಅವನಿಗದು ಪಥ್ಯವಾಗಲಿಲ್ಲ. ಅವರಪ್ಪನನ್ನು ಒಳ್ಳೆಯ ಮುಹೂರ್ತದ ದಿನ ‘ಮೇಲೆ’ ಕಳಿಸುವ ಬಗ್ಗೆ ಗಾಢವಾಗಿ ಚಿಂತಿಸುತ್ತ ಹೊರಟೇ ಬಿಟ್ಟ.
ಈ ರೀತಿಯ ‘ಮುಹೂರ್ತ ವ್ಯಾಧಿ’ ಅಂಟಿಸಿಕೊಂಡವರೊಡನೆ ವ್ಯವಹರಿಸುವುದು ಕಷ್ಟವಾಗುತ್ತದೆ. ಕೊನೆಯ ಪ್ರಯತ್ನವಾಗಿ ನಾನೂ ಮೂಲಾ ನಕ್ಷತ್ರದ ಬಗ್ಗೆ ಆಗಲೇ ಒಂದಿಷ್ಟು ಓದಿಕೊಂಡೆ. ನನ್ನ ಪರಿಚಯದ ಜ್ಯೋತಿಷಿಯೊಬ್ಬರಿಗೆ ಫೋನ್ ಮಾಡಿ ಹಲವು ವಿಷಯ ತಿಳಿದುಕೊಂಡು ಅದರಲ್ಲಿರುವ ಧನಾತ್ಮಕ ವಿಷಯಗಳನ್ನು ಅವರೆದುರು ಹೇಳಿ, ಅವನ ಮನಸ್ಥಿತಿಯ ಮಟ್ಟಕ್ಕೆ ನನ್ನನ್ನೂ ಇಳಿಸಿಕೊಂಡು (ಏರಿಸಿಕೊಂಡು?) ಒಪ್ಪಿಸಲು ಪ್ರಯತ್ನಿಸಿದೆ. ಮೂಲಾದಲ್ಲೇ ಹುಟ್ಟಿದ ಎಷ್ಟೋ ಜನ ಏನೇನು ಸಾಧಿಸಿದ್ದಾರೆ. ಹಾಗೂ ಹೆಣ್ಣು ಹುಟ್ಟಿದರೆ “ಮಾವ”ನಿಲ್ಲದ ಮನೆ ಹುಡುಕಿದರಾಯ್ತು, ಗಂಡು ಹುಟ್ಟಿದರೆ ಅವನು ಅತೀ ಜಾಣನಾಗುತ್ತಾನೆ, ಇತ್ಯಾದಿಗಳನ್ನೆಲ್ಲ ತಿಳಿಹೇಳಲು ಪ್ರಯತ್ನಿಸಿದೆ. ಊಹ್ಞೂ..!! ಅವರು ತಮ್ಮ ‘ದೃಢ ನಿರ್ಧಾರ’ದಿಂದ ಸರಿದಾಡಲೇ ಇಲ್ಲ. ಸುಮ್ಮನೆ ನನ್ನ ಮುಖ ನೋಡುತ್ತಾ ಕುಳಿತುಬಿಟ್ಟರು. ಕೊನೆಗೂ ಅವರು ಸಿಜೇರಿಯನ್ ಗೆ ಒಪ್ಪಿಗೆ ಕೊಡಲೇ ಇಲ್ಲ. ಅವರ ಹಟ ಗೆದ್ದಿತು. ನಾನು ಸೋಲನ್ನೊಪ್ಪಿಕೊಂಡೆ. (ಮೂಢ)ನಂಬಿಕೆಗಳು ಎಷ್ಟು ಆಳವಾಗಿ ನಮ್ಮ ಜನಮಾನಸದಲ್ಲಿ ಬೇರೂರಿವೆಯಲ್ಲ, ಎನಿಸತೊಡಗಿತು
ಕೊನೆಗೆ ನಾನೇ ಕೇಳಿದೆ.
‘ಯಾವಾಗ ಮುಗಿಯುತ್ತದೆ, ಮೂಲಾ’ ಎಂದು.
‘ರಾತ್ರಿ ಎರಡೂವರೆಗೆ’, ಅವನು ಶಾಂತವಾಗಿ ಹೇಳಿದ.
ಹೊಟ್ಟೆಯೊಳಗೆ ಚಡಪಡಿಸುತ್ತಿದ್ದ ಮಗು, ಇನ್ನೂ ಎಂಟು ಗಂಟೆಗಳ ಕಾಲ ಕಾಯಬೇಕಲ್ಲ, ಎಂದು ಮತ್ತಷ್ಟು ಒದ್ದಾಡುತ್ತಿರುವಂತೆನಿಸಿತು. ರಾತ್ರಿಯೇ ಸಿಜೇರಿಯನ್ ಮಾಡುವುದೆಂದು ನಿಶ್ಚಯ ಮಾಡಿದೆ. ಯಾಕೆಂದರೆ ಏನಾದರೂ ಮಾಡಿ ಆ ಮಗುವನ್ನು ಬದುಕಿಸುವ ಪ್ರಯತ್ನ ಮಾಡಬೇಕಿತ್ತು. ಸಾಧ್ಯವಾದಷ್ಟು ಬೇಗ ಮಗುವನ್ನು ಹೊರತರಬೇಕಿತ್ತು. ನಮ್ಮ ಅರಿವಿಳಿಕೆ ತಜ್ಞರನ್ನು ವಿನಂತಿಸಿ ರಾತ್ರಿಯೇ ಆಪರೇಶನ್ ಮಾಡಿದೆ. ಎರಡೂವರೆ ಕೆ.ಜಿ. ತೂಗುವ ಮುದ್ದಾದ ಹೆಣ್ಣು ಮಗು. ಆದರೆ ಕೈಕಾಲುಗಳನ್ನು ಆಡಿಸುತ್ತಿಲ್ಲ, ನಿಶ್ಯಕ್ತವಾಗಿದೆ. ತಾಯಗರ್ಭದಲ್ಲಿಯೇ ಮಲವಿಸರ್ಜನೆ ಮಾಡಿದೆ, ಅಳುತ್ತಿಲ್ಲ. ಉಸಿರಾಡುತ್ತಿಲ್ಲ. ಎದೆಬಡಿತ ಕ್ಷೀಣವಾಗಿದೆ. ತುರ್ತು ಇಂಜೆಕ್ಷನ್ ಗಳನ್ನು ಕೊಟ್ಟು, ಶ್ವಾಸನಾಳದಲ್ಲಿ ಕೊಳವೆ ಹಾಕಿ ಪ್ರಾಣವಾಯುವನ್ನು ನೀಡುತ್ತ, ಕೃತಕ ಉಸಿರಾಟ ಕೊಡುತ್ತ ಮಕ್ಕಳ ವೈದ್ಯರೆಡೆಗೆ ಸಾಗಿಸಿದೆವು. ನಾವು ಶಸ್ತ್ರಚಿಕಿತ್ಸೆ ಮುಗಿಸಿ ಹೊರಬಂದಾಗ ಬೆಳಗಿನ ನಾಲ್ಕು ಗಂಟೆ. ನನಗೆ ಅವರ ಮುಖ ನೋಡುವ ಮನಸಾಗಲಿಲ್ಲ. ಹಾಗೆಯೇ ಮನೆಗೆ ಬಂದೆ.
ಬೆಳಿಗ್ಗೆ ರೌಂಡ್ಸ್ ಗೆ ಹೋದಾಗ ನೋಡಿದರೆ, ನನಗೆ ಆಶ್ಚರ್ಯ…. ಅವರು ಸಂತೋಷವಾಗಿದ್ದಾರೆ…..ತಮ್ಮ ಜೀವ ಉಳಿಯಿತೆಂದು..! ಅದೂ ಅಲ್ಲದೆ, ಮಗು ‘ಜೀವಂತ’ ಉಳಿದಿದೆಯಲ್ಲ..!! ಆದರೆ ಮಗುವಿನ ಬುದ್ಧಿಶಕ್ತಿ ಕಡಿಮೆ ಆಗಬಹುದೇನೋ ಎಂಬ ಆತಂಕ ನನ್ನಲ್ಲಿ ಉಳಿದುಕೊಂಡುಬಿಟ್ಟಿತು. ಅಲ್ಲಿಂದ ಮುಂದೆ ಎರಡು ವಾರ ಬೇಕಾಯಿತು, ಮಗು ಮಕ್ಕಳವೈದ್ಯರ ಐ. ಸಿ. ಯು. ದಿಂದ ಹೊರಬರಬೇಕಾದರೆ.
…..ಈಗ ಕೆಲವು ದಿನಗಳ ಹಿಂದೆ ಬೇರೆ ಯಾವುದೋ ರೋಗಕ್ಕೆ ಚಿಕಿತ್ಸೆ ಪಡೆಯಲು ಅವರು ನಮ್ಮ ಆಸ್ಪತ್ರೆಗೆ ಬಂದಿದ್ದರು. ನೋಡಿದರೆ, ಅವಳ ಮಡಿಲಲ್ಲಿ ಅದೇ ಮಗು. ನೋಡಲು ತುಂಬ ಚೆಂದ. ಆದರೆ ಸುಮ್ಮನೆ ಮಲಗಿಕೊಂಡಿದೆ. ಶೂನ್ಯದತ್ತ ದೃಷ್ಟಿ ನೆಟ್ಟು. ಧ್ವನಿ ಮಾಡಿದರೆ, ಕರೆದರೆ ನಮ್ಮತ್ತ ನೋಡುತ್ತಿಲ್ಲ. ತಾಯಿಯೇನೋ ಮಗುವಿನ ಅಂದಚೆಂದ ನೋಡಿ ಆನಂದ ಪಡುತ್ತಿದ್ದಳು.
ಆದರೆ ನನಗೆ ಮಾತ್ರ, ಮುಂದೊಂದು ದಿನ ತನ್ನ ಕಾರ್ಯವನ್ನು ತಾನೇ ಮಾಡಿಕೊಳ್ಳದ, ತನ್ನ ‘ಬಟ್ಟೆ’ಗಳನ್ನು ತಾನೇ ತೊಡದ, ತನ್ನ ತಲೆ ತಾನೇ ಬಾಚಿಕೊಳ್ಳದ, ಜಗತ್ತಿನ ಪರಿವೆಯಿಲ್ಲದೆ ಎತ್ತಲೋ ನೋಡಿ ನಗುವ, ಎಲ್ಲೆಂದರಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವ, ಕುಟುಂಬಕ್ಕೂ ಸಮಾಜಕ್ಕೂ ಹೊರೆಯಾಗಿ, ಪ್ರಾಣಿಯಂತೆ ಬದುಕುವ ‘ಬುದ್ಧಿಮಾಂದ್ಯ ಹುಡುಗಿ’ಯೊಬ್ಬಳ ಚಿತ್ರ ಕಣ್ಮುಂದೆ ಬಂದು ಮನಸ್ಸು ಮ್ಲಾನವಾಯಿತು. ನಮ್ಮ ಪ್ರೊಫೆಸರ್ ಒಬ್ಬರು ಹೇಳುತ್ತಿದ್ದ ಮಾತು ನೆನಪಾಯಿತು. “ಇಂಥ ಮಕ್ಕಳು ಹುಟ್ಟಿದಾಗ, ‘ಏನೇ ಆಗಲಿ ಈ ಮಗುವನ್ನು ಬದುಕಿಸಿಕೊಡಿ’ ಎಂದು ಅಂಗಲಾಚುತ್ತಾರೆ. ಬೆಳೆದು ದೊಡ್ಡವರಾಗಿ, ಬುದ್ಧಿಮಾಂದ್ಯರಾಗಿ ಕುಟುಂಬಕ್ಕೆ ಹೊರೆಯಾದಾಗ, ‘ಏನಾದರಾಗಲಿ ಇದನ್ನು ಮುಗಿಸಿಬಿಡಿ’ ಎನ್ನುತ್ತಾರೆ….”
….ಆ ಹುಡುಗಿಗೆ ಅವರ ತಂದೆ ತಾಯಿಯರು ‘ಮೂಲ’ ಆದರೋ, ಅವರಿಗೆ ಇವಳು ‘ಮೂಲ’ ಆದಳೋ ಅರ್ಥವಾಗಲಿಲ್ಲ.
ಮುಂದಿನ ಪೇಶಂಟ್ ನ್ನು ಒಳಗೆ ಬರಲು ತಿಳಿಸಿದೆ…..!!

‍ಲೇಖಕರು G

January 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

19 ಪ್ರತಿಕ್ರಿಯೆಗಳು

  1. KrishnaR

    I felt so sorry for the baby. These parents are murderers. Very nice article Sir !

    ಪ್ರತಿಕ್ರಿಯೆ
  2. Dr. S.R . Kulkarni.

    Very rightly observed&written bbeautiful y .One thing is sure I can very well say the elderly lady accompanying the younger one is whether she is mother or main law . But there are instances where I was wrong. At that I have always said ‘see how nice your m.inlaw is’ Unfortunately I have also observed that d.inlaw is very wicked. I think on many occasions&many things Dr. Is also equally helpless& can’t find any curative measures.

    ಪ್ರತಿಕ್ರಿಯೆ
  3. Shantayya

    Reality bites
    Kubsad your article is a an expert cricket commentary by a senior commentator with ball by ball analysis
    I had faced many times these situations but luckily we delivered many of them before they went into labour
    These muhurat deliveries are becoming a bane to the society
    For our badluck though panchang is an ancient science nothing evidence based has come out of it .
    I think we must have a counter in our nursing homes with an expert jyotishi to give a counseling to them
    Once again your article top stuff Congrats

    ಪ್ರತಿಕ್ರಿಯೆ
  4. Narendra

    Dear Dr. You writings are good with lot of village experiences. Please don’t stop writing. We look forward to see your articles.

    ಪ್ರತಿಕ್ರಿಯೆ
  5. Sachin Kalyanashetti

    Very worth article ri. It Must be published and circulated to all “Intelligent” couples in society.Who really wants to take care future of their kids . I don’t know ,, why people think in magical way,,,even though getting real advice from doctor… My question is like “Why these people thinking about astrology in this kind of die hard situations” . In this Doctor only the bears all pain inside who knows real and myths of current situation. .. .. Finally end line sits in my mind saying ” ಆ ಹುಡುಗಿಗೆ ಅವರ ತಂದೆ ತಾಯಿಯರು ‘ಮೂಲ’ ಆದರೋ, ಅವರಿಗೆ ಇವಳು ‘ಮೂಲ’ ಆದಳೋ ಅರ್ಥವಾಗಲಿಲ್ಲ. ” ….  Regards,
    Sachin Kalyanashetti

    ಪ್ರತಿಕ್ರಿಯೆ
  6. sugunamahesh

    ಅಬ್ಬಾ ಎಂಥಾ ಜನ… ಮಗುವಿನ ಆರೋಗ್ಯಕ್ಕಿಂತ ತನ್ನ ಜೀವ ಮುಖ್ಯವಾಗಿ ಹೋಯ್ತು… ಮೂಢನಂಬಿಕೆಗಳ ಹಿಂದೆ ಹೋಗಿ ಜೀವನ ಪೂರ್ತಿ ಸಾಯುವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ನಮ್ಮ ಜನ.

    ಪ್ರತಿಕ್ರಿಯೆ
  7. Dr.D.T.Krishnamurthy.

    ಈ ತಮ್ಮ ಅದ್ಭುತ ಲೇಖನ ಕೆಲವರ ಕಣ್ಣುತೆರೆಸಿ ಮುಂದೆ ಬರುವ ಜೀವಗಳು ನೆಮ್ಮದಿಯಿಂದ ಉಸಿರಾಡುವಂತಾಗಲಿ ಎಂದು ಹಾರೈಸುತ್ತೇನೆ ಸರ್ _/\_

    ಪ್ರತಿಕ್ರಿಯೆ
  8. nayana

    ಛೆ, ಮೂಢನ೦ಬಿಕೆಗಳಿಗೆ ಕೊನೆ ಎ೦ದೋ..ನನ್ನದು ಮೂಲಾ ನ೦ತರದ ಪೂರ್ವಾಷಾಢಾ ನಕ್ಷತ್ರ..ವರಾನ್ವೇಶಣೆಯ ಸಮಯದಲ್ಲಿ ಜಾತಕ ನೋಡಿ ” ಜಾತಕಕ್ಕೆ ಮೂಲಾನಕ್ಷತ್ರದ ಛಾಯೆ ಇದೆಯಾ?” ಎ೦ದು ನನ್ನ ಅಪ್ಪನನ್ನು ಕೇಳಿದ್ದೂ ಇದೆ.!! ಮೂಲಾ ನಕ್ಷತ್ರಕ್ಕೆ ಶಾ೦ತಿ ಹೋಮ ಮಾಡಿಸುವುದು ಅವರವರ ನ೦ಬಿಕೆಗೆ ಬಿಟ್ಟದ್ದು..ಆದರೆ ಸಣ್ಣ ಮಗುವನ್ನು ದನದ ಹೊಟ್ಟೆ ಕೆಳಗಡೆ ಸುತ್ತು ಬರಿಸುವುದೆಲ್ಲಾ ಅಪಾಯಕಾರಿಯೇ ಸರಿ.. ಕಣ್ಣು ತೆರೆಸುವ೦ತಹ ಲೇಖನ.

    ಪ್ರತಿಕ್ರಿಯೆ
  9. ಗಣಪತಿ.ಎಂ.ಎಂ

    ಮಾನ್ಯರೇ, ನಿಮ್ಮ ಲೆಖನ ಸರಣಿ, ಓದುಗನಾದ ನನ್ನನ್ನು ನಮ್ಮತ್ತ ನೋಡಿಕೊಳ್ಳುವಂತೆ ಮಾಡುತ್ತದೆ.ಅದಕ್ಕೆ ಧನ್ಯವಾದಗಳು. ೧೪ ವರ್ಷಗಳ ಹಿಂದೆ, ನನ್ನ ಹೆಂಡತಿ ಗರ್ಬಿಣಿ ಇದ್ದಾಗ ಕಾಲು ಊದಿಕೊಂಡಿದ್ದಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಎಂದು ಹೇಳಿದ ಡಾ. ಶ್ರೀ ದೇವಿ ಬಗ್ಗೆ ಇಂದು ನಮಗೆ ಬಹಳ ಗೌರವ ಇದ್ದರೂ ಸಹ ಅಂದು ಅದನ್ನು ಪಾಲಿಸಲು ಕೆಲ ಕಾಲ ಆಲೋಚಿಸಬೇಕಾಯಿತು. ಇದು ನಮಗೆ ಕೌಟುಂಬಿಕವಾಗಿ ಗೊತ್ತಿದ್ದರೂ ಸಹ ಈಗ ಔಷಧಿಯೇ ಬೇಕು ಎನ್ನುವ ಮಟ್ಟಿಗೆ ನಾವು ಸಹ ನಂಬಲು ಕೆಲ ಕಾಲ ಬೇಕು. ಇಂತಹ ಸರಳವಾದ ವಿಚಾರಗಳನ್ನು ತಿಳಿಪಡಿಸುವುದಕ್ಕೆ ಕೆಲ ವೈದ್ಯರು ರೋಗಗಳನ್ನು ನೋಡದೆ ವ್ಯಕ್ತಿಯನ್ನು ನೋಡುವುದರಿಂದ ನಮಗೆ ಅವರು ಆಪ್ತರಾಗುತ್ತಾರೆ

    ಪ್ರತಿಕ್ರಿಯೆ
  10. G B SALAKKI

    Gud information rather Education to the dependant generation.Shivanand, Why this world blind belief is existing in India? I have remembered so many novels and cinemas echibitig this in particular cinema by Puttanna Kanagal. New society has to wake up in this regard. CONGTS FOR ANOTHER STORY IN AWADHI

    ಪ್ರತಿಕ್ರಿಯೆ
  11. Sunil Gurannavar

    ಇಂಥಾ ಕಾಲದಲ್ಲೂ ಎಂಥಾ ಮೂಢರು ಸರ್. ಅಸಹ್ಯ ಆಗುತ್ತದೆ.

    ಪ್ರತಿಕ್ರಿಯೆ
  12. Ravi Jammihal

    Many a times we become part of such irrational behavior and/or acts due to societal compulsions. Need of the hour is educating people from school days about such behaviour. Very good narration as usual

    ಪ್ರತಿಕ್ರಿಯೆ
  13. Parvati Naik

    I too have undergone twice caeserian section. But to have safe delivery. Sir very beautiful article. This article should be published in a news paper or tv where a common man can have a look at it.

    ಪ್ರತಿಕ್ರಿಯೆ
  14. ಡಾ.ಶಿವಾನಂದ ಕುಬಸದ

    ಅಭಿಪ್ರಾಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು..

    ಪ್ರತಿಕ್ರಿಯೆ
  15. K.HEMCHANDRA ,RAICHUR

    Congrats’ AVADHI’for publishing/sharing a series of thoughtful & humane experiences of Dr.Kubusad Sir.

    ಪ್ರತಿಕ್ರಿಯೆ
  16. ಲಕ್ಷ್ಮೀಕಾಂತ ಇಟ್ನಾಳ

    ಮೂಢ ನಂಬಿಕೆಗಳು ನಮ್ಮ ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆಸೆದುಬಿಟ್ಟಿವೆ. ವೈಜ್ಞಾನಿಕ ಅನಕ್ಷರತೆ, ಚಿಂತನೆಯಿಲ್ಲದ, ಮಾನಸಿಕ ಅತಿಯಾದ ದುರ್ಬಲರಲ್ಲಿ ಈ ನಡುವಳಿಕೆಗಳು ಹೆಚ್ಚು. ಕಣ್ನುತೆರೆಸುವ ಅನುಭವ ಕಥನ.

    ಪ್ರತಿಕ್ರಿಯೆ
  17. ramesh ganachari

    ಸರ್ ನಮಸ್ತೇ ತುಂಬಾ ಸೊಗಸಾಗಿ ರೋಗಿಗಳ ಅಂತರಂಗವನ್ನು ಬಹಿರಂಗ ಗೊಳಿಸಿದ್ದೀರಿ,

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: