ಡಾ ಶಿವಾನಂದ ಕುಬಸದ ’ನೆನಪಿನ ಸಂಚಿಯಿಂದ’ : ಅಪ್ಪ ಎಂಬ ‘ಹೊರೆ’ ಇಳಿಸಿಕೊಂಡವರು


ಆತ ಏದುಸಿರು ಬಿಡುತ್ತಿದ್ದ. ತೀವ್ರ ಎದೆನೋವಿನಿಂದ ಸಂಕಟ ಪಡುತ್ತಿದ್ದ. ಆವಳು ಅವನ ಎದೆಯ ಮೇಲೆ ಕೈಯಾಡಿಸುತ್ತ ಸಾಂತ್ವನ ಹೇಳುತ್ತಿದ್ದಳು. ಮೈಯೆಲ್ಲಾ ಬೆವೆತು ತಣ್ಣಗಾಗಿದೆ. ನಿಶ್ಚೇಷ್ಟಿತನಾಗಿದ್ದಾನೆ. ಅವಳು ತನ್ನ ಸೆರಗಿನಿಂದ ಅವನ ಮುಖದ ಮೇಲಿನ ಬೆವರು ಒರೆಸುತ್ತ ಗಾಳಿ ಹಾಕುತ್ತಿದ್ದಾಳೆ…..
ಮೂವತ್ತು ವರ್ಷಗಳ ಸುಖೀ ಸಂಸಾರ ಅವರದು. ಅವಳು ಅವನನ್ನು ಮದುವೆಯಾಗಿ ಈ ಮನೆಗೆ ಬಂದಾಗ ಅವನು ಅದೇ ತಾನೇ ನೌಕರಿಗೆ ಸೇರಿದ್ದ. ಮೂಲ ಬಡತನದಿಂದ ಬಂದ ಅವನ ಮನೆಯಲ್ಲಿ ಶ್ರೀಮಂತಿಕೆ ಇರದಿದ್ದರೂ ಪ್ರೀತಿಗೇನೂ ಕೊರತೆಯಿರಲಿಲ್ಲ. ಇದ್ದುದರಲ್ಲಿಯೇ ಹಂಚಿಕೊಂಡು ಉಂಡು ತಿಂದು ತೃಪ್ತರಾಗಿದ್ದರು. ಒಬ್ಬರಾದ ಮೇಲೆ ಒಬ್ಬರಂತೆ ಮೂರು ಮಕ್ಕಳು. ಎರಡು ಗಂಡು ಕೊನೆಯವಳು ಹೆಣ್ಣು. ತುಂಬ ಮುತುವರ್ಜಿಯಿಂದ, ಪ್ರೀತಿಯಿಂದ ಮಕ್ಕಳನ್ನು ಬೆಳೆಸಿದರು. ಇವರ ಸುದೈವವೋ ಏನೋ ಎರಡೂ ಗಂಡು ಮಕ್ಕಳು ಶಾಲೆಯಲ್ಲಿ ತುಂಬ ಜಾಣರು. ಮಕ್ಕಳು ಪಾಸಾದಾಗಲೆಲ್ಲ, ಹೆಚ್ಚಿನದನ್ನು ಕಲಿತು ಒಳ್ಳೆಯ ಫಲಿತಾಂಶ ಬಂದಾಗಲೆಲ್ಲ, ಊರಿಗೇ ಸಿಹಿ ಹಂಚಿ ಸಂತಸಪಡುತ್ತಿದ್ದ. ತನ್ನ ಮಕ್ಕಳ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದ. ಆದರೂ ಅವರ ಶಿಕ್ಷಣದ ಜವಾಬ್ದಾರಿಯೆಲ್ಲ ಅವಳದೇ. ಯಾಕೆಂದರೆ ಹೆಚ್ಚು ಹೆಚ್ಚು ದುಡ್ಡು ಕೂಡಿಸಲು ಅವನು ತನ್ನ ಸರಕಾರೀ ನೌಕರಿಯ ಸಮಯ ಮುಗಿದ ಮೇಲೂ ಖಾಸಗಿ ಕೆಲಸಗಳನ್ನು ಮಾಡುತ್ತಿದ್ದ, ತನ್ನಂತೆ ತನ್ನ ಮಕ್ಕಳು ಬಡತನದ ಕಷ್ಟವನ್ನು ಉಣ್ಣಬಾರದೆಂದು… ಅವನೆಂದೂ ರಜೆ ಪಡೆದವನಲ್ಲ, ತನ್ನ ಕೆಲಸದ ಸ್ಥಳ ಬಿಟ್ಟು ಬೇರೆ ಊರಿಗೆ ಹೋದದ್ದು ಕಡಿಮೆ. ಊರು ಬಿಟ್ಟರೆ ಒಂದು ದಿನದ ಆದಾಯ ಕಡಿಮೆಯಾಗುತ್ತದೆ ಎಂಬ ಚಿಂತೆ. ಅವಳೂ ತವರಿಗೆ ಹೋದವಳಲ್ಲ
ದಿನಗಳು ಉರುಳಿದವು. ಜೀವನದಲ್ಲಿ ನೆಮ್ಮದಿ ಇದ್ದಾಗ ದಿನಗಳು ಬೇಗ ಸಾಗುತ್ತವೆ. ನೋಡ ನೋಡುತ್ತಲೇ ಮಕ್ಕಳು ಬೆಳೆದು ದೊಡ್ಡವರಾದರು. ತನ್ನ ದುಡಿಮೆಯಲ್ಲಿ ಸಂಪೂರ್ಣ ಮಗ್ನನಾದ ಇವನಿಗೆ ಸಮಯದ ಪರಿವೆಯೇ ಇಲ್ಲ. ಹೀಗೆಯೇ ಜೀವನ ಪೂರ್ತಿ ದುಡಿದು ಸೊನ್ನೆಯಿಂದ ಕೋಟಿ ತಲುಪಿದ್ದ. ಹೆಂಡತಿಗೂ ಮಕ್ಕಳಿಗೂ ಯಾವುದೇ ಕೊರತೆಯಾಗದಂತೆ ತನ್ನನ್ನೇ ತಾನು ದಂಡಿಸಿಕೊಂಡು ಬದುಕು ಸವೆಸಿದ. ಅರಮನೆಯಂಥ ಮನೆ ಕಟ್ಟಿಸಿ ಮನೆಯ ಎಲ್ಲರಿಗೂ ಐಶಾರಾಮಿ ಸೌಲಭ್ಯಗಳನ್ನು ಒದಗಿಸಿದ. ಮಕ್ಕಳಿಗೆ ಒಳ್ಳೊಳ್ಳೆಯ ನೌಕರಿ ಕೂಡ ಸಿಕ್ಕುಬಿಟ್ಟವು. ಇವನ ಆಸ್ತಿ, ಸಂಪತ್ತು, ಅವನ ಮಕ್ಕಳ ಸಂಬಳ ನೋಡಿ ಕನ್ಯಾಪಿತೃಗಳು ಬೆಂಬತ್ತಿದರು. ಮಗಳಿಗೂ ಒಳ್ಳೆಯ ಮನೆತನ ಗೊತ್ತುಮಾಡಿದರು. ಯಾವ ಕಷ್ಟವೂ ಇಲ್ಲದೆ ಮೂವರ ಮದುವೆ ಮುಗಿದುಬಿಟ್ಟವು. ಎಲ್ಲೆಲ್ಲೂ ಸಂತೋಷವೇ…! ಆಗ ಮನೆ ತುಂಬ ನಗುವನ್ನು ಬಿಟ್ಟು ಬೇರೇನೂ ಇಲ್ಲ. ಇಬ್ಬರ ಮುಖದ ಮೇಲೂ ಸಂತೃಪ್ತಿಯ ಭಾವ. ಅಂದುಕೊಂಡಿದ್ದನ್ನು ಸಾಧಿಸಿದ ಸಂತಸ. ಮಕ್ಕಳಿಗೆ ಬಡತನದ ನೆರಳೂ ಕೂಡ ಸೋಕದ ಹಾಗೆ ಬೆಳೆಸುವ ಅವರ ಗುರಿ ತಲುಪಿಯಾಗಿತ್ತು. ಜೀವನ ಅದೆಷ್ಟು ಚೆಂದ…!!

ಆದರೆ ಇಲ್ಲೊಂದು ಕಷ್ಟ. ಇಬ್ಬರೂ ಮಕ್ಕಳಿಗೆ ದೂರದ ಪೇಟೆಯಲ್ಲಿ ಕೆಲಸವಾದ್ದರಿಂದ ಇವರನ್ನು ಬಿಟ್ಟು ದೂರ ಸಾಗಬೇಕಾಯಿತು. ಅವರ ಊರಿನಿಂದ ಆ ಪೇಟೆ ತಲುಪಲು ಅರ್ಧ ದಿನವೇ ಬೇಕು, ಅಷ್ಟು ದೂರ . ಆದರೆ ಇವರಿಗೇನೂ ತೊಂದರೆಯೆನಿಸಲೇ ಇಲ್ಲ. ಯಾಕೆಂದರೆ ಅವರ ಬದುಕಿನ ಮೂಲ ಉದ್ದೇಶವೇ ಮಕ್ಕಳ ಸುಖ ಮಾತ್ರವಾಗಿತ್ತು. ಅಲ್ಲದೆ ಇವನಿಗೆ ಇನ್ನೂ ದುಡಿಯುವ ಹುಮ್ಮಸ್ಸು , ತಾಕತ್ತು, ಮನಸ್ಸು ಎಲ್ಲ ಇದ್ದುವಲ್ಲ…! ಮತ್ತದೇ ಗಾಣದೆತ್ತಿನ ಬದುಕು. ಆದರೆ ಇವಳಿಗೆ ಭಣ ಭಣ, ಮಕ್ಕಳಿಲ್ಲದ ಮನೆ. ಅದಕ್ಕೇ ‘ಎರಡಂತಸ್ತಿನ ಮನೆಯನ್ನಿಟ್ಟುಕೊಂಡು ಏನು ಮಾಡುವುದು’ ಎಂದು ವಿಚಾರಿಸಿ, ಮೇಲಿನದನ್ನು ತಾವಿಟ್ಟುಕೊಂಡು ಕೆಳಗಿನದನ್ನು ಬಾಡಿಗೆಗೆ ಕೊಟ್ಟರು. ಈಗ ಅದರದ್ದೂ ಒಂದು ಸಂಪಾದನೆ ಜೊತೆಯಾಯಿತು.
ಹೀಗಾಗಿ ‘ಇಷ್ಟು ವರ್ಷಗಳ ನಂತರ ಒಬ್ಬರಿನ್ನೊಬ್ಬರಿಗೆ ಬದುಕುವ ನಿಜವಾದ ದಾಂಪತ್ಯ ಈಗ ತಾನೇ ಪ್ರಾರಂಭವಾಗಿತ್ತು.’
ಇಂದು ಒಮ್ಮಿಂದೊಮ್ಮೆಲೆ ಎದೆ ನೋವು ಎಂದ. ಹಾಗೆ ನೋಡಿದರೆ ಅವನು ಆರೋಗ್ಯವಂತನೆ. ಆದ್ದರಿಂದ ಒಮ್ಮೆಯೂ ಅರೋಗ್ಯ ಪರೀಕ್ಷೆಗಳನ್ನು ಮಾಡಿಸಿರಲಿಲ್ಲ. ಮನೆಯಲ್ಲಿ ಇವಳೊಬ್ಬಳೆ. ಕೆಳಗಿನ ಮನೆಯಲ್ಲಿ ಬಾಡಿಗೆಗಿದ್ದ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಿದ್ದಾರೆ. ಹೇಗೋ ಸಾವರಿಸಿಕೊಂಡು ತನ್ನ ಹೆಗಲ ಮೇಲೆ ಅವನ ಕೈ ಹಾಕಿಕೊಂಡು ಕಷ್ಟಪಟ್ಟು ಪಾವಟಿಗೆಗಳನ್ನು ಇಳಿದು ಕೆಳಗೆ ಬಂದು ತಲುಪುವುದರಲ್ಲಿ ಅವನ ನೋವು ಹೆಚ್ಚಾಗಿ, ತಲೆ ತಿರುಗಿ ನೆಲಕ್ಕೆ ಕುಸಿದೇ ಬಿಟ್ಟಿದ್ದ. ಹಾದಿಗುಂಟ ಹೊರಟಿದ್ದ ಜನರನ್ನು ಕರೆದು ಒಂದು ರಿಕ್ಷಾ ಪಡೆದಳು. ಮಕ್ಕಳಿಗೆ ಫೋನ್ ಮಾಡಿ ಬೇಗ ಬರುವಂತೆ ತಿಳಿಸಿ ಹೊರಟಳು. ಅವನ ತಲೆ ಇವಳ ತೊಡೆಯ ಮೇಲೆ. ಅವನು ಮಲಗಿದಲ್ಲಿಂದಲೇ ಇವಳೆಡೆಗೆ ನೋಡುತ್ತಿದ್ದ. ಆದರೆ ಅವಳು ಕಂಗಾಲಾಗಿ ಶೂನ್ಯ ದಿಟ್ಟಿಸುತ್ತಿದ್ದಳು. ಕಣ್ಣ ತುಂಬ ನೀರು. ಅವ್ಯಕ್ತ ನೋವು. ಎಂದೂ ಈ ರೀತಿ ಮಲಗಿದವನಲ್ಲ. ಅವನು ಮಲಗಿದಲ್ಲಿಂದಲೇ, ‘ಬದುಕು ಪೂರ್ತಿ ಇವಳಿಗಾಗಿ ನಾನು ವ್ಯಯಿಸಿದ ಸಮಯವೆಷ್ಟಿರಬಹುದು’ ಎಂದು ವಿಚಾರಿಸತೊಡಗಿದ.. ಜೀವನವೆಲ್ಲ ಮಕ್ಕಳಿಗೇ ಆಯಿತೆ. ಹೌದು, ಇವಳೆಡೆಗೆ ಒಂದಿಷ್ಟು ನೋಡಬೇಕಿತ್ತೇನೋ. ಅವಳೆಂದೂ ಇವನನ್ನು ಏನೂ ಬೇಡಿದವಳಲ್ಲ. ತಾನಾಯಿತು ತನ್ನ ಕೆಲಸವಾಯಿತು, ಎನ್ನುವಂತಹ ಯಾಂತ್ರಿಕ ಜೀವನ. ಆಸ್ಪತ್ರೆಯಿಂದ ಗುಣವಾಗಿ ಬಂದೊಡನೆ ಮೊದಲು ಅವಳೆಡೆಗೆ ಲಕ್ಷ ವಹಿಸುವ ದೃಢ ನಿರ್ಧಾರ ಮಾಡಿ, ಅವಳೆಡೆಗೆ ತೃಪ್ತಿಯ ನೋಟ ಬೀರಿ ‘ಕಣ್ಣು ಮುಚ್ಚಿದ’. ಇನ್ನು ಜೀವನ ಪೂರ್ತಿ ಹೆಂಡತಿಯ ಬೇಕುಬೇಡಗಳೆಡೆಗೆ ಗಮನ ಕೊಡುವುದೆಂದು ಮನದಲ್ಲೇ ಅಂದುಕೊಂಡ.
ಆದರೆ, ಅಂದುಕೊಂಡಂತೆ ಆದರೆ ಅದಕ್ಕೆ ಜೀವನ ಯಾಕನ್ನಬೇಕು… ಆಸ್ಪತ್ರೆ ತಲುಪುವುದರಲ್ಲಿ ಇವನ ಆರೋಗ್ಯ ಪೂರ್ತಿ ಬಿಗಡಾಯಿಸಿಬಿಟ್ಟಿತ್ತು.
“……ಆತ ಏದುಸಿರು ಬಿಡುತ್ತಿದ್ದ. ತೀವ್ರ ಎದೆನೋವಿನಿಂದ ಸಂಕಟ ಪಡುತ್ತಿದ್ದ. ಆವಳು ಅವನ ಎದೆಯ ಮೇಲೆ ಕೈಯಾಡಿಸುತ್ತ ಸಾಂತ್ವನ ಹೇಳುತ್ತಿದ್ದಳು. ಮೈಯೆಲ್ಲಾ ಬೆವೆತು ತಣ್ಣಗಾಗಿದೆ. ನಿಶ್ಚೇಷ್ಟಿತನಾಗಿದ್ದಾನೆ. ಅವಳು ತನ್ನ ಸೆರಗಿನಿಂದ ಅವನ ಮುಖದ ಮೇಲಿನ ಬೆವರು ಒರೆಸುತ್ತ ಗಾಳಿ ಹಾಕುತ್ತಿದ್ದಾಳೆ…..”
ಆಸ್ಪತ್ರೆಯವರೇನೋ ಇವನನ್ನು ಸ್ಟ್ರೆಚರ್ ಮೇಲೆ ಹಾಕಿಕೊಂಡು ಎಮರ್ಜೆನ್ಸಿ ವಾರ್ಡಿಗೆ ಮುಟ್ಟಿಸಿದರು. ವೈದ್ಯರು ಕೂಡ ಓಡುತ್ತ ಬಂದರು. ಆದರೆ ಅವರು ಬಂದು ಪರೀಕ್ಷಿಸುವುದರೊಳಗೆ ಎಲ್ಲ ಮುಗಿದೇ ಹೋಗಿತ್ತು. ಬರೀ ಅರ್ಧ ಗಂಟೆಯ ಹಿಂದೆ ಉತ್ಸಾಹದಿಂದ, ಹುಮ್ಮಸ್ಸಿನಿಂದ ಓಡುತ್ತ, ಧಡ ಧಡನೆ ಅಟ್ಟ ಏರಿದ್ದ ಗಂಡ ಈಗ ಹೆಣವಾಗಿಬಿಟ್ಟಿದ್ದ…
ಇವಳಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು. ಸಾವು ಇಷ್ಟೊಂದು ನಿರ್ದಯಿಯೇ.? ಸಾವರಿಸಿಕೊಂಡು ಎದ್ದಳು. ಒಬ್ಬಳೇ ಕಷ್ಟಪಟ್ಟು ಹೊರಬಂದು ಒಂದು ರಿಕ್ಷಾ ಬಾಡಿಗೆ ಪಡೆಯಲು ಹೆಣಗಾಡಿದಳು. ಬರುವಾಗ ಬಂದ ಅದೇ ರೀಕ್ಷಾದವ ಈಗ ಬರಲಾರೆನೆಂದು ಸತಾಯಿಸತೊಡಗಿದ್ದ. ಜನರನ್ನು ಕರೆದೊಯ್ಯುವ ವಾಹನದಲ್ಲಿ ‘ಹೆಣ’ ಸಾಗಿಸುವುದೇ? ಎಂದ. ಅವನನ್ನು ಅಂಗಲಾಚಿ ಬೇಡುತ್ತಾ ನಾಲ್ಕು ಪಟ್ಟು ದುಡ್ಡು ಕೊಡುತ್ತೇನೆಂದಾಗ ಒಪ್ಪಿದ.
ಹೆಣ ಮನೆ ತಲುಪುವುದರೊಳಗೆ ಮಕ್ಕಳು ಬಂದಿದ್ದರು.
ಈಗ ಮುಖ್ಯ ಸಮಸ್ಯೆ ಎಂದರೆ ಹೆಣ ಎಲ್ಲಿ ಕುಳ್ಳಿರಿಸುವುದು…? ಮಹಡಿಯ ಮೇಲೆ ಹೆಣ ಸಾಗಿಸುವುದು ಹೇಗೆ..?
ಜೀವನ ಪೂರ್ತಿ ಮಕ್ಕಳನ್ನು ಏನೂ ಬೇಡದವಳು, ಏನಾದರೂ ಮಾಡಿ ತನ್ನ ಗಂಡನನ್ನು ಮೇಲೆ ಸಾಗಿಸಲು ಕೇಳಿಕೊಂಡಳು. ಅವರು ಸುಮ್ಮನಾದರು.
ಬಾಡಿಗೆಗೆ ಕೂಟ್ಟ ಕೆಳಗಿನ ಮನೆಯವರನ್ನು ಇವಳೇ ಬೇಡಿಕೊಂಡಳು, ತನ್ನ ಗಂಡನನ್ನು ಒಂದೆರಡು ಘಂಟೆ ಕುಳ್ಳಿರಿಸಲು ಒಂದಿಷ್ಟು ಜಾಗೆ ನೀಡಿರೆಂದು. ಮನೆಯೊಳಗಂತೂ ಬೇಡ ಹೊರಗೆ ಪಡಸಾಲೆಯಲ್ಲಿ ಕುಳ್ಳಿರಿಸಲೂ ಅವರು ಸುತಾರಾಂ ಒಪ್ಪಲಿಲ್ಲ. ತಮಗೆ ‘ಸಂಬಂಧವಿರದ’ ವ್ಯಕ್ತಿಯ ಹೆಣ ತಮ್ಮ ಮನೆಯಲ್ಲಿಯೇ..? ಖಂಡಿತ ಸಾಧ್ಯವಿಲ್ಲ.
 
ಇವಳಿಗೆ ಹೇಗಾದರೂ ಮಾಡಿ ತನ್ನ ಗಂಡನನ್ನು ಮೇಲೆ ಸಾಗಿಸಿ “ಚೆಂದ” ಮಾಡಬೇಕೆನ್ನುವ ಬಯಕೆ. ಜೀವನ ಪೂರ್ತಿ ತಮಗಾಗಿ ದುಡಿದ ಅವನನ್ನು ಒಂದಿಷ್ಟು ಸಮಯ, ಅವನೇ ಕಟ್ಟಿಸಿ, ಬಾಳಿ ಬದುಕಿದ ಮನೆಯಲ್ಲಿಟ್ಟು, ಅವನ ಗುಣಗಾನ ಮಾಡಿ, ದುಃಖವನ್ನೆಲ್ಲಾ ಹೊರಹಾಕಿ. ‘ಬೀಳ್ಕೊಡುವ’ ಬಯಕೆ. ಜೊತೆಗೆ ಬಾಳ ಸಂಗಾತಿಯನ್ನು ಕಳೆದುಕೊಂಡ ಸಂಕಟ..
 
ಆದರೆ ಮಕ್ಕಳಿಗೆ ಅದಾವುದೂ ಅನಿಸುತ್ತಿಲ್ಲ. ಅವರಿಗೆ ಇದೊಂದು ಸಣ್ಣ “ಪ್ರಾಕ್ಟಿಕಲ್ ಪ್ರಾಬ್ಲಮ್” ..ಅಷ್ಟೇ..! ಜೀವವಿಲ್ಲದ ದೇಹ ಎಲ್ಲಿ ಕುಳ್ಳಿರಿಸಿದರೇನು, ಏನು ಶೃಂಗಾರ ಮಾಡಿದರೇನು. “ಹೆಣ ಶೃಂಗಾರವರಿಯದು..” ಎಂಬ ಗಾದೆ ನೆನಪಿಸಿದರು, ಅವ್ವನಿಗೆ. ಎಷ್ಟಾದರೂ ‘ಕಲಿತವರಲ್ಲವೆ’..? ಶಾಲೆಯಲ್ಲಿ ದಡ್ಡನಾದ, ತಮ್ಮೊಂದಿಗೇ ಉಳಿಯುವಂಥ ಒಬ್ಬ ಮಗನನ್ನು ಹೆರಬೇಕಿತ್ತೇನೋ..?
 
ಸಮಯಕ್ಕೆ ಸರಿಯಾಗಿ ನೆರೆ‘ಹೊರೆ’ಯವರು ಬಂದರು…ಅವರಂತೂ ಒಂದು ಹೆಜ್ಜೆ ಮುಂದೆ ಸಾಗಿ ”ಪಂಚಕದಲ್ಲಿ ಸತ್ತಿದ್ದಾನೆ, ಮನೆಯೊಳಗೆ ಒಯ್ಯುವುದು ಅನಿಷ್ಟ..” ಎಂದುಬಿಟ್ಟರು… ಅವಳ ಒಂದಿಷ್ಟೇ ಆಸೆಯೂ ಕಮರಿಹೋಯಿತು.
ಕೊನೆಗೆ ಎಲ್ಲ “ಸಾಧಕ-ಬಾಧಕ”ಗಳನ್ನೂ ಲೆಕ್ಕ ಹಾಕಿ, ಮಕ್ಕಳೊಡನೆ ‘ಸಮಾಲೋಚಿಸಿ’ ಒಂದು ನಿರ್ಣಯಕ್ಕೆ ಬಂದರು.
“ಹೆಣವನ್ನು ಮೇಲೆ ಒಯ್ಯುವುದು ಬಹಳ ಕಷ್ಟದ ಕೆಲಸ, ಕೆಳಗಡೆ ಒಂದು ಸ್ಥಳ ಮಾಡೋಣ..”, ಎನ್ನುತ್ತ ಆಚೀಚೆ ನೋಡಿದರೆ ಅಂಗಳದಲ್ಲೊಂದು ದೊಡ್ಡ ಆಲದ ಮರ. ಹೌದು. ಅವನೇ ತನ್ನ ಮಕ್ಕಳಿಗೆ ಜೋಕಾಲಿ ಕಟ್ಟಿ ಆಡಿಸಲು ತನ್ನ ಕೈಯಾರೆ ನೀರುಣಿಸಿ ಬೆಳೆಸಿದ ಮರ. ಮತ್ತೆ ಮರದ ಸುತ್ತಲೂ ಚೌಕಾದ ಕಟ್ಟೆ, ಮಕ್ಕಳು ಆಡಿಕೊಳ್ಳಲೆಂದು ಕಟ್ಟಿಸಿದ್ದು. ಎಲ್ಲರೂ ಒಕ್ಕೊರಲಿನಿಂದ ಹೇಳಿದ್ದು..
“ಹೆಣವನ್ನು ಮನೆಯ ಮುಂದಿರುವ ಗಿಡದ ಕೆಳಗಿನ ಕಟ್ಟೆಯ ಮೇಲೆ ಕುಳ್ಳಿರಿಸುವುದು…”
ಹೆಂಡತಿ ಗಂಡನ ಹೆಣದ ಮುಂದೆ ಕುಳಿತು ಬೋರಾಡಿ ಅಳುತ್ತಿದಾಳೆ, ಅಸಯಾಕಳಾಗಿ.
ದೊಡ್ಡ ಸಮಸ್ಯೆ ಬಗೆಹರಿಯಿತೆಂದು, ಅಪ್ಪನ ‘ಹೊರೆ’ ಸುಲಭವಾಗಿ ಇಳಿಯಿತೆಂದು ಮಕ್ಕಳು ಸಮಾಧಾನದ ನಿಟ್ಟುಸಿರು ಬಿಟ್ಟರು …
ಕೂಡಿದ ಜನ ಹೆಣವನ್ನು ಚೆಂದಗೆ ಗಿಡಕ್ಕೆ ಆನಿಸಿ ಕುಳ್ಳಿರಿಸಿ, ತಲೆ ಆಚೀಚೆ ಬೀಳದಿರಲೆಂದು ಕುತ್ತಿಗೆಗೆ ಒಂದು ಅರಿವೆ ಬಿಗಿದು ತೃಪ್ತಿಯ ನಿಟ್ಟುಸಿರು ಬಿಟ್ಟರು, ದೊಡ್ಡದೊಂದು ಭಾರ ಕಳೆಯಿತೆಂದು.
 
ಇತ್ತ,
ಅವನು ಬೆಳೆಸಿದ ಆಲದಮರ ಮಾತ್ರ ಅವನ ಕೊನೆಯ ಪ್ರಯಾಣಕ್ಕೆ ನೆರಳು ಒದಗಿಸಿ, ಕರ್ತವ್ಯ ನಿಭಾಯಿಸಿದೆನೆಂದು ಧನ್ಯತೆಯ ಉಸಿರು ಹಾಕಿದ್ದು , ಟೊಂಗೆಯ ಮೇಲೆ ಕುಳಿತ ಪಕ್ಷಿಯೊಂದು ಗದ್ದಲಕ್ಕೆ ಹೆದರಿ ಹಾರಿಹೋಗಿದ್ದು, ‘ಹೆಣ ವಿಸರ್ಜನೆ’ ಮಾಡಲು ಕೂಡಿದ್ದ ಜನರ ಗಮನಕ್ಕೆ ಬರಲೇ ಇಲ್ಲ…..
 
 

‍ಲೇಖಕರು G

December 25, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

12 ಪ್ರತಿಕ್ರಿಯೆಗಳು

  1. ಆಸು ಹೆಗ್ಡೆ

    ನಮ್ಮ ಸುತ್ತಲಿನ ಆಗುಹೋಗುಗಳಿಗೆ ಸದಾ ಕಣ್ಣು-ಕಿವಿಗಳಾಗಿದ್ದು, ಅನುಭವಿಸಿ, ಆ ಅನುಭವಗಳಿಗೆ ಭಾವ ತುಂಬಿ ಪದಗಳ ರೂಪಕೊಟ್ಟು ಓದುಗರಿಗೆ ಉಣಬಡಿಸುವ ಕಲೆ ಕರಗತವಾಗಿದೆ.

    ಪ್ರತಿಕ್ರಿಯೆ
  2. Dr. S.R . Kulkarni.

    Dear Saheb, the truth of life has come so clearly in one scenario. If a small revision is made we are all working only on emotional ground forgetting the true re
    alities. Are you not able to judge how emotional our children are, trustworthy& greaful. May be we have only given education & not taught them moral values or we have failed to recognise the values we have taught are not imbibed by them. With respect to neighbours it is rightly said by our ancestors ‘nerehore’.We cannot change them but definitely we can be selective. Ultimately it is life. & at the end we exclaim ‘It’s once luck’.

    ಪ್ರತಿಕ್ರಿಯೆ
  3. Prabhakar M. Nimbargi

    Really nice way of depiction! Many times our children don’t understand the efforts put forth by parents in bringing them up. Every parent becomes a burden on them, for they are thinking of themselves. I remember your other narration of a medico son caring for his mother. What a contrast!

    ಪ್ರತಿಕ್ರಿಯೆ
  4. ಡಾ.ಸುನೀಲಚಂದ್ರ ಅವರಾದಿ

    ನಿಮ್ಮ ಲೇಖನ ಮನಮುಟ್ಟುವಂತೆ ಬಡತನದ ಬೇಗೆಯ ವಾಸ್ತವ ಚಿತ್ರಣವಾಗಿದೆ.ಸಾವು ತರುವ ಜಟಿಲ ಭಾವನಾತ್ಮಕ ಸಮಸ್ಯೆಗಳ ನ್ನು ತುಂಬ ಚೆನ್ನಾಗಿ ನಿರೂಪಿಸಿದ್ದೀರಿ.ಕಟು ವಾಸ್ತವ ದಶ೯ನ ಮಾಡಿಸಿದ ನಿಮ್ಮ ಬರವಣಿಗೆ ಅಮೋಘವಾಗಿದೆ. ಧನ್ಯವಾದಗಳು

    ಪ್ರತಿಕ್ರಿಯೆ
  5. sudha Manjunath

    we have to live for ourself n should have time for each other. thats what the msg of this tale superbly told. very nice doctof

    ಪ್ರತಿಕ್ರಿಯೆ
  6. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ಮರ ಮನುಷ್ಯನಿಗಾದರೂ, ಮನುಷ್ಯ ಮನುಷ್ಯನಿಗಾಗಲಾರ.. ಪ್ರಕೃತಿಯೊಂದಿಗಿನ ಸಂಬಂಧೊಡನೆ ಮಾನವ ಸಮಾಜದ ಸಂಭಂದಗಳ ಬಗ್ಗೆ ತುಂಬಾ ಮನಮುಟ್ಟುವಂತೆ ಬಿಂಬಿಸಿದ್ದಿರಿ ಸರ್. ಸತ್ತವರ ಗೋರಿಯಮೇಲೆ ಮರ ನೆಡುವ ಹಿಂದಿನ ಕಾಲದ ಜನ ಮರವನ್ನು ನಂಬಿದ್ದರೂ ಅನ್ಸತ್ತೆ. ಸೂಪರ್.

    ಪ್ರತಿಕ್ರಿಯೆ
  7. Basavaraj

    ತುಂಬಾ ಚನ್ನಾಗಿದೆ ಸರ್ ಮಕ್ಕಳಿರ್ಲ್ಲೆವ್ವಾ ಮನೆ ತುಂಬಾ ಅನ್ನೊ ಬದಲು ಮರವಿರಲೆಣ್ಣಾ ಮನೆಯ ದೊಂದು…….ಅನ್ಸತಾಯಿದೆ….

    ಪ್ರತಿಕ್ರಿಯೆ
  8. Ravi Jammihal

    Very good narration as expected. this is a stark reality of globalisation. we parents want our kids to excell in studies, get fantastic pay packages and go westwards in search of Life. Once in those environments it becomes difficult to be rooted to our homes.(they continue to be mentally attached but not physically and emotionally). We have to accept this and prepare for something like what is being discussed in our Whatsapp group since evening.

    ಪ್ರತಿಕ್ರಿಯೆ
  9. mmshaik

    enthaha chendada niruupaNe sir..samaajamukhiyada tamma barahagaLu nijakkuu moullyayutavaagive..

    ಪ್ರತಿಕ್ರಿಯೆ
  10. Sunil Gurannavar

    ನಮ್ಮ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಇಷ್ಟು ಕೆಳಮಟ್ಟಕ್ಕೆ ಇಳಿದಿರುವುದು ಈಗ ವಾಸ್ತವ ಮತ್ತು ದುರಂತ. ಸ್ವಾರ್ಥ ಹೆಚ್ಚಾಗಿ ನಾನು, ನನ್ನದು, ನನ್ನ ಸುಖ ಮುಖ್ಯ ಎನ್ನುವ ಮನೋಭಾವ ಬೆಳೆಸಿಕೊಳ್ಳುತ್ತಿರುವ ನಮ್ಮ ಓರಗೆಯವರು ಕಡೆಗೆ ಕರುಳ ಬಳ್ಳಿಯನ್ನೂ ಕಡಿದುಕೊಳ್ಳುತ್ತಿರುವುದು ಘೋರ.

    ಪ್ರತಿಕ್ರಿಯೆ
  11. ಭೀಮಣ್ಣ ಹುಣಸೀಕಟ್ಟಿ

    ಮಾನವೀಯತೆಯೇ ಸತ್ತಲ್ಲಿ ,ಮನುಷ್ಯತ್ವದ ಮಾತೆಲ್ಲಿ ? ನಶಿಸುತ್ತಿರುವ ಮಾನವೀಯ ಮೌಲ್ಯಗಳನ್ನು “ಚಂದ”ವಾಗಿ ನಿರೂಪಿಸಿದ್ದೀರಿ !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: