ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಹಟಕ್ಕೆ ಬಿದ್ದು ದಾನಕೊಟ್ಟವಳು…


ಅದೊಂದು ಪುಟ್ಟ ಸಂಸಾರ. ತಂದೆ, ತಾಯಿ, ಮಗಳು, ಮಗ ನಾಲ್ಕೇ ಜನ. ಬಡವರಲ್ಲ. ಶ್ರೀಮಂತರೂ ಅಲ್ಲ. ವಿಜಯಪುರ ಜಿಲ್ಲೆಯ ಬಹುತೇಕ ಜನರಂತೆ ಇವರದೂ ಕೆಳ ಮಧ್ಯಮ ವರ್ಗ. ಹೆಸರಿಗೆ ಒಂದಿಷ್ಟು ಭೂಮಿ, ನಮ್ಮೂರಿನವರು. ವಿಜಯಪುರ ಜಿಲ್ಲೆಯಲ್ಲಿ ಬೀಳುವ ಒಂದಷ್ಟು ಸೆ.ಮೀ. ಮಳೆಯಿಂದಾಗಿ ಬೆಳೆಯುವುದು ಅತೀ ಸ್ವಲ್ಪ. ಒಣ ಜಮೀನಿನಲ್ಲಿ ಬರುವ ಉತ್ಪನ್ನವೂ ಅಷ್ಟಕ್ಕಷ್ಟೇ. ಬಂದ ವರಮಾನ ಸಾಲದಾದಾಗ ತಂದೆ ತಾಯಿ ಇಬ್ಬರೂ ಬೇರೆಯವರ ಹೊಲಗಳಿಗೆ ಕೆಲಸಕ್ಕೆ ಹೋಗಿ, ಹೇಗೋ ಸಾಗಿಸಿದ ತೃಪ್ತ ಕುಟುಂಬ. ಮಗಳು ದೊಡ್ಡವಳು. ಇಬ್ಬರಿಗೂ ಒಂದಿಷ್ಟು ಶಿಕ್ಷಣ ಕೊಡಿಸಿದರು . ಅಕ್ಕ ಒಂದು ಖಾಸಗಿ ಶಾಲೆಯಲ್ಲಿ ಶಿಕ್ಷಕಿ. ಮನೆಯ ಜವಾಬ್ದಾರಿಯ ಜೊತೆಗೆ ಒಂದಿಷ್ಟು ವರಮಾನಕ್ಕಾಗಿ ಆ ಕೆಲಸ. ಮಗ ಬೆಂಗಳೂರಲ್ಲಿ ಕೆಲಸ ಹುಡುಕಿದ. ಬಯಸಿ ಬಂದವರಿಗೆಲ್ಲ ಬದುಕುವ ದಾರಿ ತೋರಿಸುವ ಬೆಂಗಳೂರು ಇವನನ್ನು ಕೈಬಿಡಲಿಲ್ಲ. ಅಂತಹ ದೊಡ್ಡ ಮೊತ್ತದ ಆದಾಯ ತರುವ ಕೆಲಸವಲ್ಲವಾದರೂ ತಕ್ಕಮಟ್ಟಿಗೆ ಖುಷಿ ಕೊಡುವಂಥ ಕೆಲಸ. ಇವನೊಂದಿಗೆ ಕೆಲಸ ಮಾಡುವ ಗೆಳೆಯನೊಬ್ಬನ ರೂಮಲ್ಲಿ ವಾಸ. ತನ್ನ ಖರ್ಚಿಗಷ್ಟು, ಮನೆಗೆ ಕಳಿಸಲು ಒಂದಿಷ್ಟು. ಬದುಕು ಸುಂದರ.
ಆದರೆ ಅದೊಂದು ದಿನ ರಾತ್ರಿ ಈತನಿಗೆ ಒಮ್ಮಿಂದೊಮ್ಮೆಲೆ ತಲೆನೋವು, ವಾಂತಿ ಪ್ರಾರಂಭವಾಯಿತು. ವಾಂತಿಯಲ್ಲಿ ರಕ್ತ. ಇವನ ಜೊತೆಗೆ ಇದ್ದ ಗೆಳೆಯನಿಗೆ ಗಾಬರಿ. ಅವನೇ ಇವನನ್ನು ಅಲ್ಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದ. ವೈದ್ಯರು ಇವನನ್ನು ಪರೀಕ್ಷಿಸಿ ರಕ್ತದೊತ್ತಡ ತುಂಬಾ ಹೆಚ್ಚಿದೆಯೆಂದೂ ಇಂಥ ರೋಗಿಗಳಿಗೆ ನಮ್ಮಲ್ಲಿ ಆರೈಕೆ ಸಾಧ್ಯವಿಲ್ಲವೆಂದೂ, ಹೇಳಿ ‘ದೊಡ್ದಾಸ್ಪತ್ರೆ’ಗೆ ಹೋಗಲು ತಿಳಿಸಿದರು. ಅಂಥ ಪರಿಸ್ಥಿತಿಯಲ್ಲೇ ಅವನ ಗೆಳೆಯ ಅವನನ್ನು ದೊಡ್ದಾಸ್ಪತ್ರೆಗೆ ಕರೆದುಕೊಂಡು ಹೋದ. ಆಲ್ಲಿ ಹೊಸ ಸಮಸ್ಯೆ. ‘ಅವನ ಆರೋಗ್ಯ ಸ್ಥಿತಿ ತುಂಬಾ ಕ್ರಿಟಿಕಲ್ ಇದೆ, ಅವನನ್ನು ಐ.ಸಿ.ಯು.ದಲ್ಲಿ ಇಡಬೇಕಾಗುತ್ತದೆ. ಇಪ್ಪತ್ತು ಸಾವಿರ ಕಟ್ಟಿದರೆ ಮಾತ್ರ ಅಡ್ಮಿಟ್ ಮಾಡುತ್ತೇವೆ, ಇಲ್ಲವಾದರೆ ಇಲ್ಲ’ ಎಂಬ ಉತ್ತರ. ಅಡ್ಮಿಟ್ ಮಾಡಿಕೊಳ್ಳುವ ಮನುಷ್ಯನ ಕೈಯಲ್ಲಿ ಏನೂ ಇಲ್ಲ. ಆಸ್ಪತ್ರೆಯವನು ನಿಷ್ಕರುಣಿ ಎಂದು ಹೇಳಲೂ ಸಾಧ್ಯವಿಲ್ಲ. ಅವನ ಮಾಲೀಕ ಹೇಳಿದ ಹಾಗೆ ಕೇಳುವವ. ಇಲ್ಲವಾದರೆ ಇವನ ಸಂಬಳ ಇಲ್ಲ. ಹೀಗಾಗಿ ಕಷ್ಟಪಡುವವರು ರೋಗಿಗಳು. ಇವರಲ್ಲಿ ಅಷ್ಟು ದುಡ್ಡು ಇಲ್ಲ, ಅವರು ಅಷ್ಟಿಲ್ಲದೆ ಅಡ್ಮಿಟ್ ಮಾಡುವುದಿಲ್ಲ. ಅಡಕೊತ್ತಿನ ಅಡಿಕೆ. ಮತ್ತೆ ಪಯಣ. ಅಂತಹ ರಾತ್ರಿಯಲ್ಲಿ, ಸಿಕ್ಕ ಆಟೋದವನನ್ನೇ ವಿನಂತಿಸಿ ಜಯದೇವ ಆಸ್ಪತ್ರೆಗೆ ಹೊರಟರು. ಈತನಿಗೋ ಅಸಾಧ್ಯ ಸಂಕಟ, ತಲೆಸಿಡಿಯುವಂಥ ನೋವು. ಅಲ್ಲಿನ ವೈದ್ಯರು ರಕ್ತ ತಪಾಸಣೆ, ಇತ್ಯಾದಿ ಮಾಡಿ ಈತನ ಎರಡೂ ಕಿಡ್ನಿಗಳು ಕೆಲಸ ಮಾಡುತ್ತಿಲ್ಲವೆಂದೂ ಪರಿಸ್ಥಿತಿ ಗಂಭೀರವಾಗಿದೆಯೆಂದೂ ತಿಳಿಸಿದರು, ಪುಣ್ಯಕ್ಕೆ ಅಡ್ಮಿಟ್ ಮಾಡಿ ಉಪಚಾರ ಪ್ರಾರಂಭಿಸಿದರು. ಮುಂದೆ ಇವನ ಗೋಳು ಹೇಳತೀರದು. ಕಿಡ್ನಿಗಳು ಕೆಲಸ ನಿಲ್ಲಿಸಿದ್ದು ಇವನ ಗಮನಕ್ಕೆ ಬಂದಿರಲೇ ಇಲ್ಲ. ಯಾವಾಗಾದರೊಮ್ಮೆ ಬರುವ ತಲೆನೋವು, ಸಂಕಟಗಳನ್ನು ಈತ ಅಲಕ್ಷ ಮಾಡಿದ್ದ, ತನ್ನ ಕೆಲಸದ ಭರದಲ್ಲಿ. ಅವನ ಅಕ್ಕ ಊರಿಂದ ಓಡಿ ಬಂದಳು. ಇವನ ಸ್ಥಿತಿ ನೋಡಿ ಮಮ್ಮಲ ಮರುಗಿದಳು. ಅವಳಿಗೆ ದಿಕ್ಕೇ ತೋಚದಾಯ್ತು.

ಅಲ್ಲಿಂದ ಪ್ರಾರಂಭವಾದವು ಕಷ್ಟಗಳ ಸರಣಿ. ವಿಕ್ಟೋರಿಯಾದಲ್ಲಿ ಅದೇ ತಾನೇ ಪ್ರಾರಂಭಿಸಿದ ನೆಫ್ರೋಯುರಾಲಜಿ ವಿಭಾಗಕ್ಕೆ ಹೋದರೆ ಇನ್ನೂ ಪೂರ್ಣ ಪ್ರಮಾಣದ ಉಪಚಾರಗಳು ಲಭ್ಯವಿಲ್ಲವೆಂಬ ಉತ್ತರ ಕೇಳಿ, ತಮ್ಮೂರೆಡೆಗೆ ವಾಪಸಾದ, ಇದ್ದ ನೌಕರಿ ಬಿಟ್ಟು. ಮುಂದೆ ಮೂರ್ನಾಲ್ಕು ವರ್ಷ ಹೀಗೆಯೇ ಕಳೆದು ಹೋದವು. ಆ ದಿನಗಳಲ್ಲಿ ಭೆಟ್ಟಿಯಾದ ವೈದ್ಯರುಗಳೆಷ್ಟೋ, ಸುತ್ತಿದ ಆಸ್ಪತ್ರೆಗಳೆಷ್ಟೋ. ಗಿಡ,ಮೂಲಿಕೆ, ಆಯುರ್ವೇದ, ಹೋಮಿಯೋಪತಿ ಎಲ್ಲ ಮುಗಿದರೂ ಇವನ ಕಷ್ಟ ಮುಗಿಯಲಿಲ್ಲ. ಈ ಘಟ್ಟದಲ್ಲಿ ಅಂದರೆ ಈಗ ಸುಮಾರು ನಾಲ್ಕು ವರ್ಷಗಳ ಹಿಂದೆ, ನಮ್ಮ ಆಸ್ಪತ್ರೆಯಲ್ಲಿಯ ಹುಡುಗನೊಬ್ಬ ಈತನ ಕಥೆ ನನ್ನೆದುರಿಗೆ ಹೇಳಿದ. ನಾನು ತಕ್ಷಣದಿಂದ ಅವನಿಗೆ ಯಾವ ಕೆಲಸ ಮಾಡಲು ಬರುತ್ತದೋ ಅದನ್ನು, ಎಷ್ಟು ನೀಗುತ್ತದೋ ಅಷ್ಟನ್ನು ನಮ್ಮಲ್ಲಿ ಮಾಡಲಿ, ಎಂದು ತಿಳಿಸಿ, ಅವನನ್ನು ನಮ್ಮ ಆಸ್ಪತ್ರೆಗೆ ಬರಹೇಳಿದೆ. ಯಾಕೆಂದರೆ ಮೂರ್ನಾಲ್ಕು ವರ್ಷದ ಔಷಧೋಪಚಾರಕ್ಕಾಗಿ ಇದ್ದದ್ದನ್ನೆಲ್ಲ ಅದಾಗಲೇ ಕಳೆದುಕೊಂಡಿದ್ದರು. ನಮ್ಮ ರಿಸೆಪ್ಶನ್ ನಲ್ಲಿ ಅವನಿಗೊಂದು ಕೆಲಸ ಕೊಟ್ಟೆ, ಅದರಿಂದ ಅವನ ಮಾನಸಿಕ, ಆರ್ಥಿಕ ಸ್ಥಿತಿ ಸುಧಾರಣೆ ಕಾಣಲಿ, ಎಂದು. ಆಗವನು ನಿಯಮಿತವಾದ ಡಯಾಲಿಸಿಸ್ ನಲ್ಲಿದ್ದ. ಜೀವ ಮತ್ತು ಜೀವನ ಎರಡೂ ಕುಂಟುತ್ತ ಸಾಗಿದ್ದವು. ಇವನದು ಜಾಮೀನಿನ ಮೇಲೆ ಬಿಟ್ಟ ಕೈದಿಯ ಸ್ಥಿತಿ. ಯಾವಾಗ ಮತ್ತೆ ಪರಿಸ್ಥಿತಿ ಹದಗೆಟ್ಟು ಏನಾಗುತ್ತದೋ ಎಂಬ ಭಯ. ಆಗ ಮನಸ್ಸಿಗೆ ಹೊಳೆದದ್ದೇ ಮೂತ್ರಪಿಂಡ ಕಸಿ…!!
ಅವನ ಅಕ್ಕನೆದುರಿಗೆ ಈ ವಿಷಯ ತಿಳಿಸಿದರೆ ಅವಳ ಸಂತೋಷ ಹೇಳತೀರದ್ದು. ಆದರೆ ಅದಕ್ಕೆ ಎರಡು ಅಡೆತಡೆಗಳು. ಅವಶ್ಯವಿಸುವ ದುಡ್ಡು ಕೂಡಿಸುವುದು ಒಂದಾದರೆ, ಮೂತ್ರಪಿಂಡ ಕೊಡುವವರಾರು ಎನ್ನುವುದು ಎರಡನೆಯದು ಮತ್ತು ಮಹತ್ವದ್ದು. ದುಡ್ಡು ಕೂಡಿಸುವುದನ್ನು ಯಾರು ಬೇಕಾದರೂ ಮಾಡಿಯಾರು. ಆದರೆ ಮೂತ್ರಪಿಂಡ ನೀಡುವುದು? ಏನಾದರಾಗಲಿ ಮೊದಲು ಪರೀಕ್ಷೆ ಮಾಡಿಸಿದರಾಯ್ತು ಎಂದು ವಿಕ್ಟೋರಿಯಾದ ನೆಫ್ರೋಯುರಾಲಜಿ ವಿಭಾಗಕ್ಕೆ ಕಳಿಸಿದೆವು, ಕೈಯಲ್ಲೊಂದಿಷ್ಟು ಹಣವನ್ನಿತ್ತು. ಅಲ್ಲಿ ಪರೀಕ್ಷೆ ಮಾಡಿ ನೋಡಿದರೆ ಅಕ್ಕ ಮತ್ತು ಅವ್ವ ಇಬ್ಬರ ರಕ್ತದ ಗುಂಪು ಇವನದಕ್ಕೆ ಹೊಂದುತ್ತಿದ್ದವು, ಒಂದಿಷ್ಟು ನಿರಾಳ. ಮನೆಯವರದೇ ಹೊಂದಾಣಿಕೆಯಾದರೆ ಕಾನೂನಿನ ಕಷ್ಟವಂತೂ ತಪ್ಪಿತು. ಆದರೆ, ಅಲ್ಲಿ ಶುರುವಾದದ್ದೇ ಭಾವನಾತ್ಮಕ ತಾಕಲಾಟ. ಅಕ್ಕನದು ಒಂದೇ ಹಠ ತಾನೇ ಕೊಡುವುದೆಂದು. ಅಲ್ಲಿಯ ವೈದ್ಯರು, ನಾನು, ಹಾಗೂ ಅವಳ ತಮ್ಮ ಎಲ್ಲರೂ ತಿಳಿಹೇಳಿದ್ದು, ‘ಅವರ ತಾಯಿಗೆ ಹೇಗೂ ವಯಸ್ಸಾಗಿದೆ, ಜೀವನವನ್ನು ಕಂಡು ಉಂಡವಳು, ಅಲ್ಲದೆ ಅವಳು ಇನ್ನು ಮುಂದೆ ಏನೂ ಕೆಲಸ ಮಾಡಬೇಕಾಗಿಲ್ಲ. ನಿನ್ನದಾದರೋ ಸಣ್ಣ ವಯಸ್ಸು, ಬಾಳಿ ಬದುಕಬೇಕಾದವಳು, ಕೆಲಸ ಮಾಡಿ ಆದಾಯ ತರಬಲ್ಲವಳು, ಅದಕ್ಕೆ ಅವಳದೆ ಇರಲಿ’ ಎಂದು. ಆದರೆ ಇವಳು ಒಪ್ಪಲು ತಯಾರಿಲ್ಲ. ಏನಾದರಾಗಲಿ ಎಂದು ವಿಚಾರಿಸಿ ಇಬ್ಬರ ಇನ್ನಷ್ಟು ಹೆಚ್ಚಿನ ಪರೀಕ್ಷೆಗಳನ್ನು ಮಾಡಿದರೆ ತಾಯಿಯ ಮೂತ್ರಪಿಂಡದ ರಕ್ತನಾಳಗಳ ಗಾತ್ರಕ್ಕೂ ಅವನದಕ್ಕೂ ಸಂಪೂರ್ಣ ಹೊಂದಾಣಿಕೆ. ಅಕ್ಕಳದನ್ನು ಪಡೆದರೆ ಜೋಡಿಸುವುದು ಕಷ್ಟದ ಕೆಲಸ. ಅದೇ ವಿಷಯವನ್ನಿಟ್ಟುಕೊಂಡು ಮತ್ತೊಂದು ಸುತ್ತು ಅವಳೊಡನೆ ಸಮಜಾಯಿಸಿಯ ಮಾತು. ಆದರೂ ಅವಳದು ಒಂದೇ ಹಠ. ತನಗೆ ಕಷ್ಟವಾದರೂ ಸರಿ. ತನ್ನ ತಾಯಿ, ತನ್ನ ತಮ್ಮ ಸುಖದಿಂದಿರಲಿ, ತನ್ನ ತಾಯಿ ಕಿಡ್ನಿ ದಾನ ಮಾಡಲು ಆಪರೇಶನ್ ಮಾಡಿಸಿಕೊಂಡು ನರಳುವುದನ್ನು ತಾನು ನೋಡಲು ಸಾಧ್ಯವಿಲ್ಲವೆಂಬ ಮಾತು. ಮತ್ತೆ ಅವಳೇ ಖುದ್ದಾಗಿ ಮೂತ್ರಪಿಂಡ ಕಸಿ ಮಾಡುವ ವೈದ್ಯರನ್ನು ಕಂಡು, ಆಪರೇಶನ್ ಮಾಡುವುದು ಒಂದಿಷ್ಟು ಕಷ್ಟವಾದರೂ ಸರಿ, ತನ್ನದನ್ನೇ ಪಡೆಯುವಂತೆ ವಿನಂತಿ ಮಾಡಿ ಬಂದಳು, ನಮಗೆ ಗೊತ್ತಿಲ್ಲದಂತೆ.
ಅವಳ ದೃಢ ನಿರ್ಧಾರದೆದುರು ನಾವೆಲ್ಲಾ ಸೋತು ಹೋದೆವು. ಅವಳ ಇಚ್ಚೆಯಂತೆಯೆ ಅವಳ ಕಿಡ್ನಿ ಅವಳ ತಮ್ಮನ ಉದರ ಸೇರಿಕೊಂಡಿತು. ಗಾತ್ರದಲ್ಲಿ ಹೊಂದಾಣಿಕೆಯಾಗದ ರಕ್ತನಾಳಗಳನ್ನು ಜೋಡಿಸಲು ವೈದ್ಯರು ಹರಸಾಹಸ ಪಡಬೇಕಾಯಿತು. ಆಪರೇಶನ್ ಆದ ದಿನ ಎಚ್ಚರ ಬಂದೊಡನೆ ಅವಳು ಮೊದಲು ವಿಚಾರಿಸಿದ್ದು ತನ್ನ ಬಗೆಗಲ್ಲ. ತನ್ನ ತಮ್ಮನ ಶರೀರದಲ್ಲಿ ತಾನು ನೀಡಿದ ಅಂಗ ಸರಿಯಾಗಿ ಹೊಂದಿದ ಬಗ್ಗೆ. ಮರುದಿನ ತಮ್ಮನ ಮೂತ್ರದ ಪ್ರಮಾಣ ಕಡಿಮೆ ಇದ್ದದ್ದನ್ನು, ಮೂತ್ರದಲ್ಲಿ ಒಂದಿಷ್ಟು ರಕ್ತ ಬರುತ್ತಿದ್ದುದನ್ನು ಕಂಡವಳೇ ಎದ್ದು ನನಗೆ ಫೋನ್ ಮಾಡಿದಳು. ಅಲ್ಲಿಯೇ ಇದ್ದ ನನ್ನ ವೈದ್ಯ ಮಿತ್ರನನ್ನು ಅವಳ ಸಾಂತ್ವನಕ್ಕೆ ಕಳಿಸಿದರೆ, ಅವಳು ಅದನ್ನು ಒಪ್ಪದೇ ತನ್ನ ಹಾಸಿಗೆಯಿಂದ ಎದ್ದವಳೇ ಸೀದಾ ನೆಫ್ರೋಯುರಾಲಜಿ ವಿಭಾಗದ ಮುಖ್ಯಸ್ಥರ ಬಾಗಿಲು ತಟ್ಟಿದ್ದಳು. ಅವರೇ ಸ್ವತಃ ಬಂದು ಪರೀಕ್ಷಿಸಿ ಧೈರ್ಯ ತುಂಬುವವರೆಗೆ ನೀರು ಸೇವಿಸಲಿಲ್ಲ. ಮುಂದಿನ ಹದಿನೈದು ದಿನಗಳು ಅವಳ ಜೀವನದ ಮಹತ್ವದ ತಪಸ್ಸಿನ ದಿನಗಳಂತೆ ಕಳೆದವು. ಹಗಲು ರಾತ್ರಿಯೆನ್ನದೆ ಅವನ ಆರೈಕೆ. ತನಗಾದ ಶಸ್ತ್ರಚಿಕಿತ್ಸೆಯ ಗಾಯವನ್ನೂ ಲೆಕ್ಕಿಸದೆ ತಮ್ಮನನ್ನು ಉಪಚರಿಸಿ ಅವನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು, ನಮ್ಮ ಆಸ್ಪತ್ರೆಯವರೆಗೆ ತಂದುಬಿಟ್ಟಾಗಲೇ ಅವಳು ಸಮಾಧಾನಿಸಿದ್ದು.
ಅವಳು ಯುದ್ಧ ಗೆದ್ದುಬಿಟ್ಟಿದ್ದಳು. ಬೇರೆಯವರಾಗಿದ್ದರೆ ಹೇಗೂ ತನ್ನ ಮೂತ್ರಪಿಂಡದ ರಕ್ತನಾಳಗಳ ಗಾತ್ರ ಹೊಂದಾಣಿಕೆಯಾಗಿಲ್ಲ ಎಂಬ ನೆಪದೊಡನೆ ನೇಪಥ್ಯಕ್ಕೆ ಸರಿಯುತ್ತಿದ್ದರೇನೋ? ಆದರೆ ಅವಳು ಅನೇಕರಿಗೆ ಮಾದರಿಯಾದಳು. ಎಲ್ಲ ಸುಖಾಂತ. ಅವನೀಗ ಸಂಪೂರ್ಣ ಆರೋಗ್ಯವಂತ. ತಾನೇ ನಿಂತು ತಮ್ಮನಿಗೆ ಮದುವೆ ಮಾಡಿದ್ದಾಳೆ. ಅವನು ನಮ್ಮ ಆಸ್ಪತ್ರೆಯಲ್ಲಿ ಕೋಆರ್ಡಿನೇಟರ್. ತಾನೂ ಖಾಸಗಿ ಶಾಲೆಯೊಂದರಲ್ಲಿ ದುಡಿದು ತನ್ನ ಹೊಟ್ಟೆ ಬಟ್ಟೆಗೆ ನೋಡಿಕೊಳ್ಳುವುದರ ಜೊತೆಗೆ ತಮ್ಮನ ನಿರಂತರ ವೈದ್ಯಕೀಯ ಖರ್ಚಿನಲ್ಲಿ ಭಾಗಿಯಾಗುತ್ತಾಳೆ. ಈಗ ತಮ್ಮನ ಹೆಂಡತಿ ಗರ್ಭಿಣಿ. ಅವನ ಮಕ್ಕಳನ್ನು ಆಡಿಸುವ ಕನಸು ಕಾಣುತ್ತಿದ್ದಾಳೆ.
ಅವಳಿಗಾದ ಆನಂದ, ಆತ್ಮತೃಪ್ತಿಯೆದುರು, ಅವಳ ಹೊಟ್ಟೆಯ ಮೇಲಿನ ಗಾಯ ಮಸಕಾಗುತ್ತಿದೆ…..

‍ಲೇಖಕರು G

January 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

13 ಪ್ರತಿಕ್ರಿಯೆಗಳು

  1. ಶೈಲಜ ಮೈಸೂರು

    ಅಬ್ಬಾ ! ಅದೃಷ್ಟವಂತ ತಮ್ಮ .
    ಕಣ್ಣು ತುಂಬಿ ಬಂತು ಸರ್ !

    ಪ್ರತಿಕ್ರಿಯೆ
  2. Dr.Ratna Kulkarni

    ಆ ಅಕ್ಕನಂಥ ಹ್ರದಯವಂತರಿಗೂ ನಿಮ್ಮಂಥ ವೈದ್ಯರಿಗೂ ಸಲಾಂ.

    ಪ್ರತಿಕ್ರಿಯೆ
  3. Shantayya

    Kubsad
    I don’t have words to appreciate the ‘tyaga’ a sister has done
    Truly goddess
    The world runs smoothly probably because such good people exist
    Your narration is very very heart touching
    I felt you have gone in speed to finish the event In less words
    Because the stage of agony one sufferes while in the disease process doesnot move as fast as on written articles
    Plz bring a collection to read them in a book form
    Good day
    Best wishes for next article

    ಪ್ರತಿಕ್ರಿಯೆ
  4. Dr. S.R . Kulkarni.

    Saheb,Yours is a story of happy end.in 1977 I purchased my BP apparatus. Young man who had headache I wanted to check his BP. Strong well built farmer capable of easily carrying 100 kg bag & swimming in the river Kumdhwa ti for kms which flows just adjacent to his village. A rare breed of Bramin a very hard worker.
    Yes, as I thought he had very high BP. But he was not ready to believe me. Stopped coming. I sent words for him. Sorry he had lost faith on me. Your classmate Dr. Ratna came for 1st time to Shikaripur he was in my hospital. Final stage of renal failure. That was 1982.just
    few days after he died. My BP apparatus is still with me & whenever I see at it I remember him, his name was Pandurng a from village Kotta.

    ಪ್ರತಿಕ್ರಿಯೆ
  5. Dr.D.T.Krishnamurthy.

    STUNNING SIR !!!!!ಇಗೋ ಮಹಾ ತಾಯಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.ಆ ತಾಯಿಯ ತ್ಯಾಗಕ್ಕೆ ನನ್ನ ಕಣ್ಣಲ್ಲಿ ನೀರು !!!! ಮನಸ್ಸು ಮೂಕವಾಗಿದೆ.ಆ ತಾಯಿ ತಣ್ಣಗಿರಲಿ.ಆ ತಾಯಿಯ ಪಾದಕ್ಕೆ ಮತ್ತೊಮ್ಮೆ ನಮನಗಳು. _/\_

    ಪ್ರತಿಕ್ರಿಯೆ
  6. ಕೆ ಎಸ್ ನವೀನ್

    ನಮಸ್ಕಾರ,
    ಸೊಗಸಾಗಿದೆ. ಆ ಹುಡಗಿಗೆ ಮದುವೆಯಾಯಿತೆ?
    ಗೌರವಾದರಗಳೊಂದಿಗೆ,
    ಕೆ ಎಸ್ ನವೀನ್

    ಪ್ರತಿಕ್ರಿಯೆ
  7. ಭೀಮಣ್ಣ ಹುಣಸೀಕಟ್ಟಿ

    ಅಪರೂಪದ ಅಕ್ಕ!ಅದ್ರಷ್ಠವಂತ ತಮ್ಮ !! ಪುನರ್ಜನ್ಮದ ರೀತಿಯ ಘಟನೆ ಮನಮಿಡಿಯಿತು

    ಪ್ರತಿಕ್ರಿಯೆ
  8. kusumabaale

    ಆಕೆಗೂ ನಿಮಗೂ ದೀರ್ಘದಂಡ ನಮಸ್ಕಾರಗಳು.:-)

    ಪ್ರತಿಕ್ರಿಯೆ
  9. ಬಸವರಾಜ ಜೋ ಜಗತಾಪ

    ಅಕ್ಕ ತಾಯಿಯಾದರೆ ಅಮ್ಮ ಮಗಳ ಮಡಿಲಿನ ಕೂಸಾದಳು.

    ಪ್ರತಿಕ್ರಿಯೆ
  10. Ravi Jammihal

    Nice article. Sister’s concern and love for brother has come out nicely. But practically yhinking it would have better to get kidney from mother as you have said.
    Second very important issue is how many of our people from middle class, lower class, from remote villages are in a position to get right affordale treatment for their health problems in time. We boast of medical advances upto cellular, sub cellular level, molecular level etc. Bt how much of that really percolates down to the needy and what cost.
    We need an affordable really meaningful health care

    ಪ್ರತಿಕ್ರಿಯೆ
  11. Ganapathi Magalu

    ಮಾನ್ಯರೇ ನಿಮ್ಮ ಅನುಭವ ನನ್ನ ಪಾಲಿಗೆ ಬಹಳ ಸೂಕ್ತ ಸಮಯಕ್ಕೆ ಬಂದಿದೆ. ಈ ಕೆಲ ದಿನಗಳ ಹಿಂದೆ ಕಸ್ತೂರಿ ನಿವಾಸ ಸಿನೇಮಾ ಬಣ್ಣದಲ್ಲಿ ಬಂದಾಗ ಅದನ್ನು ನೋಡಿದ ಒಬ್ಬರು ಬರೆದ ಘಟನೆ ನನ್ನನ್ನು ಬಹಳವಾಗಿ ಕಾಡಿತ್ತು. ಆ ಶೋಗೆ ಬಂದ ತಾಯಿ ಕಸ್ತೂರಿ ನಿವಾಸ ನೋಡಿ ಅಳುತ್ತಿದ್ದರೆ ಅವರ ಹದಿಹರೆಯದ ಮಗ/ಮಗಳು “ಈ ಅಂಕಲ್ ಯಾಕೆ ಇಷ್ಟು ತ್ಯಾಗ (ಸ್ಯಾಕ್ರಿಪೈಸ್) ಮಾಡಿ ಕಷ್ಟಕ್ಕೆ ಸಿಕ್ಕಿಕೊಳ್ಳಬೇಕಿತ್ತು?” ಎಂದು ಕೇಳಿದ್ದರಂತೆ. ನಮ್ಮ ತ್ಯಾಗಕ್ಕೆ ಅದರಿಂದ ಸಿಗುವ ಆತ್ಮ ಸಂತೋಷಕ್ಕೆ ಈಗಲೂ ಅವಕಾಶವಿದೆ. ಅದನ್ನು ಪಡೆದು ಸಂಭ್ರಮಿಸುವ ಮನಸುಗಳು ಇವೆ ಎಂಬುದನ್ನು ತಾವು ತಿಳಿಸಿದ್ದೀರಿ. ಇಂಥಹ ಉದಾರಹಣೆಗೆಗಳು ಇಂದಿನ ತುರ್ತು ಅಗತ್ಯ ಎಂಬುದು ನನ್ನ ನಂಬಿಕೆ.

    ಪ್ರತಿಕ್ರಿಯೆ
  12. ಅಕ್ಕಿಮಂಗಲ ಮಂಜುನಾಥ

    ನೀವು ಹೇಳುವ ಕತೆಗಳು- ಅಲ್ಲ ಬದುಕುಗಳು ಒಂದಕ್ಕೊಂದು ಭಿನ್ನ ಮತ್ತು ರೋಚಕ.ಎಷ್ಟೊಂದು ಹೃದಯಗಳ ಮಿಡಿತಳನ್ನು ತಮ್ಮ ಮನಸಾರ ಆಲಿಸಿದ್ದೀರಿ ಮತ್ತು ಮಿಡಿದಿದ್ದೀರಿ !
    ನೀವು ವೈದ್ಯರೋ ಅಥವ ದೇವರೋ ಎಂದು ನಿರ್ದರಿಸಬೇಕಾದುದು ನಿಮ್ಮಿಂದ ಉಪಚಾರ ಪಡೆದ ರೋಗಿಗಳ ಕರ್ತವ್ಯ. ಎಲ್ಲಾ ವೈದ್ಯರೂ ಇಷ್ಟೇ ವೈಶಾಲ್ಯ ಹೃದಯವಂತರಾದರೆ ಸಮಾಜ ಅದೆಷ್ಟು ಆರೋಗ್ಯಪೂರ್ಣವಾಗಿರುತ್ತಿತ್ತು ? ನಿಮಗೊಂದು ಸಲಾಂ ಸಾರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: