ಡಾ ಶಿವಾನಂದ ಕುಬಸದ ’ನೆನಪಿನ ಪೆಟ್ಟಿಗೆಯಿಂದ’ : ಪೆಟ್ಟಿಗೆ ಮುಚ್ಚುವ ಮುನ್ನ….


ಈ ಹಿಂದಿನ ಹದಿನಾರು ಲೇಖನಗಳಲ್ಲಿ, ನನ್ನ ವೈದ್ಯಕೀಯ ಜೀವನದಲ್ಲಿ ಘಟಿಸಿದ, ಎಂದೂ ಮರೆಯಲಾಗದಂತಹ ಘಟನೆಗಳನ್ನು ತಮ್ಮೊಡನೆ ಹಂಚಿಕೊಂಡಿದ್ದೇನೆ. ಅವೆಲ್ಲವೂ ನನ್ನ ವೈದ್ಯಕೀಯ ಜೀವನದಲ್ಲಿ ಜರುಗಿದ ನೈಜ ಘಟನೆಗಳನ್ನೇ ಆಧರಿಸಿದವುಗಳು. ಅವುಗಳಿಗೆ ಒಂದಿಷ್ಟು ಕಥಾರೂಪ ನೀಡಿದ್ದೇನೆ, ಅಷ್ಟೇ. ಅವುಗಳಲ್ಲದೆ ಇನ್ನೂ ಹಲವಾರು ಘಟನೆಗಳು ಈ ಪೆಟ್ಟಿಗೆಯಲ್ಲಿಯೇ ಉಳಿದುಕೊಂಡುಬಿಟ್ಟವು. ಕಾರಣಗಳು ಎರಡು. ಒಂದೋ ಅವು ಒಂದು ಲೇಖನವಾಗುವಷ್ಟು ‘ದೊಡ್ಡ’ ಘಟನೆಗಳಲ್ಲ, ಇಲ್ಲವೇ ಅವು ಎಲ್ಲರೊಂದಿಗೂ ಹಂಚಿಕೊಳ್ಳುವಂಥವುಗಳಲ್ಲ. ನನ್ನ ಅನುಭವಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಟ್ಟ “ಅವಧಿ” ಬಳಗಕ್ಕೆ ನಾನು ಕೃತಜ್ಞನಾಗಿದ್ದೇನೆ. ವಾರವಾರವೂ ಓದಿದ ಎಲ್ಲರಿಗೂ, ಓದಿ ಅಭಿಪ್ರಾಯ ತಿಳಿಸಿದವರಿಗೂ ನಾನು ಋಣಿಯಾಗಿದ್ದೇನೆ. ತಮ್ಮೊಡನೆ ಹಂಚಿಕೊಳ್ಳಬಹುದಾದ ಘಟನೆಗಳು ಮುಂದೆ ಯಾವಾಗಲಾದರೂ ಜರುಗಿದರೆ ಮತ್ತೆ ಈ ವೇದಿಕೆಗೆ ಬರಲು ಪ್ರಯತ್ನಿಸುವೆ.
ಮುಂದಿನ ಗುರುವಾರ ನನ್ನ ಲೇಖನವಿರುವುದಿಲ್ಲ. ನನಗೆ ಭಣ ಭಣ..!!
ವೈದ್ಯಕೀಯದಲ್ಲಿ ಜರುಗುವಷ್ಟು ವೈವಿಧ್ಯಮಯವಾದ. ಮನಸ್ಸಿಗೆ ತಾಗುವ ಘಟನೆಗಳು ಜೀವನದ ಬೇರೆ ಯಾವ ರಂಗದಲ್ಲಿಯೂ ಜರುಗಲು ಸಾಧ್ಯವಿಲ್ಲ. ನನ್ನ ದೀರ್ಘಕಾಲದ ವೈದ್ಯಕೀಯದಲ್ಲಿ ಏನೆಲ್ಲವನ್ನೂ ನೋಡಿದ್ದೇನೆ. ‘ಇದೇನು ಅಂತಹ ರೋಗವಲ್ಲ ಖಂಡಿತ ಗುಣವಾಗುತ್ತಾರೆ’ ಎಂದುಕೊಂಡವರ ಮರಣವನ್ನೂ, ‘ಇನ್ನೇನು ಉಳಿಯಲಿಕ್ಕಿಲ್ಲ ಅವರನ್ನು ಬೀಳ್ಕೊಡಲು ಸಿದ್ಧರಾಗಿದ್ದುಬಿಡಿ’ ಅಂದುಕೊಂಡಾಗ ಪವಾಡದಂತೆ ಗುಣಮುಖರಾಗಿ ಹಾಸಿಗೆಯಿಂದ ಎದ್ದು ನಡೆಯುತ್ತ ಹೋದವರನ್ನೂ ನೋಡಿದ್ದೇನೆ. ಇಂಥವನ್ನೆಲ್ಲ ನೋಡಿದಾಗ ವೈದ್ಯರಾಗಿ ನಾವು ಕಲಿತದ್ದು ಸಾಕಾಗಲಿಲ್ಲವೇನೋ ಅನಿಸಿದ್ದಿದೆ. ದಿನಂಪ್ರತಿ ದಾಪುಗಾಲಿಕ್ಕಿ ಬೆಳೆಯುತ್ತಿರುವ ವೈದ್ಯಕೀಯ ವಿಜ್ಞಾನ ಕೂಡ ಕೆಲವೊಮ್ಮೆ ನಿರುತ್ತರ, ಹಲವು ಬಾರಿ ಅಸಯಾಹಕನಂತಾಗಿ ಗಲಿಬಿಲಿಗೊಂಡು ನಿಂತಂತೆನಿಸಿಬಿಡುತ್ತದೆ.
ಆದರೂ ವೈದ್ಯಕೀಯ ವಿಜ್ಞಾನ ಅಗಾಧವಾಗಿ ಬೆಳೆಯುತ್ತಿದೆಯೆನ್ನುವುದು ಸಮಾಧಾನಕರ ಅಂಶ. ಮೈಲಿಬೇನೆಯಂತಹ ರೋಗವನ್ನು ನಿರ್ಮೂಲನೆ ಮಾಡಲಾಗಿದೆ. ಪೋಲಿಯೊ ರೋಗ ಇಂಡಿಯಾದಿಂದ ಮತ್ತು ಅನೇಕ ದೇಶಗಳಿಂದ ಕಾಣೆಯಾಗಿದೆ, ಧನುರ್ವಾಯು ಮತ್ತು ಇನ್ನೂ ಅನೇಕ ರೋಗಗಳಿಗೆ ಪ್ರಬಲ ಲಸಿಕೆ ಕಂಡುಹಿಡಿಯಲಾಗಿದೆ, ಅನೇಕ ಕ್ಯಾನ್ಸರಗಳನ್ನು ಗುಣಪಡಿಸಬಹುದಾಗಿದೆ, ಬಂಜೆತನವನ್ನು ಬಹುಪಾಲು ನಿವಾರಿಸಲಾಗಿದೆ. ಪ್ರಸವವನ್ನು ಸುರಕ್ಷಿತಗೊಳಿಸಲಾಗಿದೆ. ಅಂಗಕಸಿ ಈಗ ದಿನನಿತ್ಯದ ಸುದ್ದಿಯಾಗಿದೆ. ರೋಗನಿದಾನಕ್ಕಾಗಿ ಅದ್ಭುತವೆನಿಸುವ ಪರಿಕರಗಳನ್ನು ಕಂಡುಹಿಡಿಯಲಾಗಿದೆ. ಒಂದೆರಡು ಮಿಲಿಮೀಟರ್ ನ ಗಡ್ಡೆಯನ್ನೂ ಕರಾರುವಾಕ್ಕಾಗಿ ಗುರುತಿಸುವ ಯಂತ್ರಗಳಿವೆ. ದೂರದಿಂದಲೇ ಕಿಡ್ನಿಯಲ್ಲಿನ ಹರಳುಗಳನ್ನು ಪುಡಿ ಮಾಡುವ ಯಂತ್ರಗಳಿವೆ. ಯಾವುದೋ ಊರಲ್ಲಿ ಕುಳಿತು ಇನ್ನಾವುದೋ ಊರಲ್ಲಿರುವ ರೋಗಿಯ ಮೇಲೆ ಶಸ್ತ್ರಚಿಕಿತ್ಸೆ ಮಾಡುವುದನ್ನು ಸಾಧ್ಯವಾಗಿಸಿದ ರೋಬೋಟ್ ಕಂಡುಹಿಡಿಯಲಾಗಿದೆ. ಬರೀ ಒಂದು ಕ್ಯಾಪ್ಸೂಲ್ ನಲ್ಲಿ ಕ್ಯಾಮರಾ ಕುಳ್ಳಿರಿಸಿ ಜೀರ್ಣಾಂಗ ವ್ಯೂಹದ ಒಳಗನ್ನು ನೋಡಬಹುದಾಗಿದೆ. ಲೆಪ್ರೋಸ್ಕೊಪಿ , ಎಂಡೋಸ್ಕೊಪಿಗಳಂತೂ ಸಾಮಾನ್ಯವಾಗಿಬಿಟ್ಟಿವೆ. ಹೀಗೆ ವೈದ್ಯಕೀಯದ ಆವಿಷ್ಕಾರಗಳು ಕಟ್ಟು ಕಥೆಯಷ್ಟೇ ರೋಮಾಂಚಕಾರಿಯಾಗಿವೆ. ಅವು ಆಧುನಿಕ ವೈದ್ಯರ, ತನ್ಮೂಲಕ ರೋಗಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿವೆ.

ಇವುಗಳ ಜೊತೆಗೇ ಇತ್ತೀಚಿಗೆ ಪ್ರಾರಂಭವಾದ ವೈದ್ಯ/ಆಸ್ಪತ್ರೆ ಮತ್ತು ರೋಗಿ/ಸಂಬಂಧಿಕರ ನಡುವಿನ ಸ್ವಾಗತಾರ್ಹವಲ್ಲದ ಬೆಳವಣಿಗೆಗಳು ಮನಸಲ್ಲಿ ಬೇಸರ ಮೂಡಿಸುತ್ತವೆ. ಪ್ರತಿಯೊಬ್ಬ ವೈದ್ಯ ತನ್ನ ರೋಗಿಗಳು ಗುಣವಾಗಬೇಕೆಂದೇ ಬಯಸಿದರೂ ಅನೇಕ ಬಾರಿ ಅನಿರೀಕ್ಷಿತ ಪರಿಣಾಮಗಳು ಗೋಚರಿಸಿಬಿಡುತ್ತವೆ. ಎಂಥಾ ಕರ್ತವ್ಯನಿಷ್ಠ, ಜಾಣ ವೈದ್ಯನಾದರೂ ಕೆಲವೊಮ್ಮೆ ವ್ಯತಿರಿಕ್ತ ಫಲಿತಾಂಶಗಳು ಅನಿವಾರ್ಯ. ಯಾಕೆಂದರೆ ರೋಗಿ ಎಂದರೆ ಒಂದು ಯಂತ್ರವಲ್ಲ, ಯಂತ್ರವೆಂದಾದರೆ ನಿಷ್ಪ್ರಯೋಜಕ ಭಾಗವನ್ನು ಕರಾರುವಾಕ್ಕಾಗಿ ಕಂಡುಹಿಡಿದು ಅದನ್ನು ತೆಗೆದು ಬಿಸಾಡಿ ಹೊಸದನ್ನು ಜೋಡಿಸಬಹುದು. ಆದರೆ ಪ್ರತಿಯೊಂದು ರೋಗದಲ್ಲಿಯೂ, ರೋಗಿ, ರೋಗಗಕಾರಕ ಜೀವಿ, ರೋಗ ಹೋಗಲಾಡಿಸಲು ಬಳಸಲ್ಪಡುವ ಔಷಧಿಗಳು, ಇಂಥದೇ ಔಷಧಿಯನ್ನು ಬಳಸಬೇಕೆಂಬ ವೈದ್ಯಕೀಯ ಜ್ಞಾನ ಇವು ನಾಲ್ಕೂ ಮುಖ್ಯವಾಗುತ್ತವೆ. ವೈದ್ಯಕೀಯ ಜ್ಞಾನ, ಬಳಸಲ್ಪಡುವ ಔಷಧಿ ಸರಿಯಾಗಿದ್ದರೂ ರೋಗಿಯ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ ಅಥವಾ ರೋಗಕಾರಕ ಜೀವಿ ಬಲಯುತವಾಗಿದ್ದರೆ ನಿರೀಕ್ಷಿತ ಫಲಿತಾಂಶ ದುರ್ಲಭವಾಗುತ್ತದೆ. ಇದನ್ನೆಲ್ಲಾ ವೈದ್ಯರು ಹೇಗೋ ಹಾಗೆ ರೋಗಿಗಳು ಕೂಡ ಅರಿಯುವುದು ಅವಶ್ಯವಾಗುತ್ತದೆ. ಇಲ್ಲಿ ಎರಡು ಮತ್ತು ಎರಡನ್ನು ಕೂಡಿಸಿದರೆ ನಾಲ್ಕೇ ಆಗುತ್ತದೆಂಬ ಭರವಸೆ ಇರುವುದು ಅಸಾಧ್ಯ. ಕೆಲವೊಮ್ಮೆ ವೈದ್ಯರ ಅಚಾತುರ್ಯದಿಂದ ಅಥವಾ ಅಲಕ್ಷದಿಂದ ವ್ಯತಿರಿಕ್ತ ಪರಿಣಾಮಗಳೂ ಜರುಗುತ್ತವೆ. ಕಷ್ಟವೆಂದರೆ ಯಾವುದು ಅನಿರೀಕ್ಷಿತ ಮತ್ತು ಯಾವುದು ಅಲಕ್ಷ ಅಥವಾ ಅಚಾತುರ್ಯದಿಂದ ಘಟಿಸಿದ್ದು ಎನ್ನುವುದನ್ನು ನಿರ್ಧರಿಸುವುದು. ಅದನ್ನು ನಿರ್ಧರಿಸಲು ಹಲವು ಮಾರ್ಗಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಿಷಯಗಳಿಗೂ ವೈದ್ಯರ ಮೇಲೆ ಹಲ್ಲೆ ಮಾಡುವ, ಅವಮಾನ ಮಾಡುವ ಘಟನೆಗಳು ಸಾಮಾನ್ಯವಾಗಿಬಿಟ್ಟಿವೆ. ಹೀಗಾಗಿ ಹಲವು ವೈದ್ಯರು ತಮ್ಮಲ್ಲಿ ಗುಣವಾಗುವಂತಹ ರೋಗವಿದ್ದರೂ ಮುಂದಿನ ಆಸ್ಪತ್ರೆಗಳಿಗೆ ಕಳಿಸಿ ಕೈತೊಳೆದುಕೊಂಡರಾಯ್ತೆಂದು ವಿಚಾರಿಸತೊಡಗಿದ್ದಾರೆ. ಆಗ ಅನಾನುಕೂಲವಾಗುವುದು ಮತ್ತೆ ರೋಗಿಗೇನೆ.
ಒಂದು ಕಾಲದಲ್ಲಿ ವೈದ್ಯಕೀಯ ವೃತ್ತಿಯೆಂದರೆ ಜನಸೇವೆ ಮಾಡುವುದು ಮಾತ್ರ ಆಗಿತ್ತು. ಆದರೆ ಈ ದಿನಗಳಲ್ಲಿ ಅದು ಕನಸಿನ ಮಾತೆ ಸರಿ. ನನ್ನ ಲೇಖನಗಳನ್ನು ಓದಿದ ಒಬ್ಬರು ತಮ್ಮ ಅಭಿಪ್ರಾಯ ತಿಳಿಸುವಾಗ ಬರೆದ ಮಾತು ಉಲ್ಲೇಖನೀಯ. “ ಯಾವ ದಿನ ಮೊದಲ ವೈದ್ಯಕೀಯ ಸೀಟು ಖಾಸಗಿಯಾಗಿ ಮಾರಾಟಗೊಂಡಿತೋ ಅಂದೇ ವೈದ್ಯಕೀಯ ವೃತ್ತಿ ವಾಣಿಜ್ಯೀಕರಣಗೊಂಡಿತು..” ಎಂಬುದು. ಅದು ಭಾಗಶಃ ನಿಜ. ಇನ್ನೂ ನಿಜವಾದದ್ದೆಂದರೆ ಯಾವಾಗ ಆಸ್ಪತ್ರೆಯನ್ನು ಕಟ್ಟಿಸುವುದು, ಅವಶ್ಯಕವಾದ ಉಪಕರಣಗಳನ್ನು, ಪರಿಕರಗಳನ್ನು, ಸಿಬ್ಬಂದಿಯನ್ನು ಹೊಂದುವುದು ಮತ್ತು ನಿಭಾಯಿಸುವುದು ವೆಚ್ಚದಾಯಕವಾಯಿತೋ, ಯಾವಾಗ ವೈದ್ಯಕೀಯವೂ ಕೂಡ ಗ್ರಾಹಕ ರಕ್ಷಣಾ ಕಾನೂನಿನ ಅಡಿಯಲ್ಲಿ ಪರಿಗಣಿತವಾಯಿತೋ ಆಗಲೇ ವೈದ್ಯಕೀಯವೂ ವ್ಯಾಪಾರವಾಗಿಬಿಟ್ಟಿತು. ‘ಆಸ್ಪತ್ರೆ ಅಂಗಡಿಯಾಯಿತು, ರೋಗಿ ಗಿರಾಕಿಯಾಗಿಬಿಟ್ಟ’ ದುರದೃಷ್ಟಕರ ಅಷ್ಟೇ. ‘ಕೋಟಿಗಳ ಲೆಕ್ಕದಲ್ಲಿ ಖರ್ಚುಮಾಡಿ ಪಡೆದ ವೈದ್ಯಕೀಯ ಪದವಿ , ಇನ್ನಷ್ಟು ಕೋಟಿಗಳನ್ನು ವೆಚ್ಚಮಾಡಿ ಕಟ್ಟಿಸಿದ ಆಸ್ಪತ್ರೆ ಮತ್ತು ದಿನ ದಿನವೂ ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ, ಇವೆಲ್ಲವನ್ನೂ ಇಟ್ಟುಕೊಂಡು ಉಚಿತ ಅಥವಾ ರಿಯಾಯತಿಯ ಸೇವೆ ಬಯಸುವುದು ಅಂತಹ ಜಾಣತನವಲ್ಲ’,ಎಂಬ ಸ್ಥಿತಿ ತಲುಪಿದ್ದಾಯ್ತು. ಆಸ್ಪತ್ರೆಗಳು ‘ಆರೋಗ್ಯ ಮಾರುವ ಕೇಂದ್ರ’ಗಳಾಗಿಬಿಟ್ಟವು. ‘ಇಲ್ಲದ ರೋಗಗಳಿಗೆ ಇರುವ ಎಲ್ಲಾ ಪರೀಕ್ಷೆಗಳನ್ನೂ’ ಮಾಡಿ ಅಂತಸ್ತಿನ ಮೇಲೆ ಅಂತಸ್ತು ಪೇರಿಸಿಬಿಟ್ಟವು. ಯಾವ ವೃತ್ತಿಯನ್ನು ‘ವ್ಯಾಪಾರ’ ಎಂದು ಪರಿಗಣಿಸಬಾರದಿತ್ತೋ ಅದು ‘ಸೇವೆಯ ಪರಿಪೂರ್ಣತೆ’ಯ ಹೆಸರಲ್ಲಿ ‘ಉದ್ಯಮ’ವಾಗುತ್ತಿದೆ.
ಇವತ್ತಿಗೂ ಕೂಡ ಪ್ರತಿಶತ ೯೦-೯೫ ರೋಗಗಳನ್ನು ಗುಣಪಡಿಸಲು ಸಾಮಾನ್ಯ ಪರೀಕ್ಷೆಗಳು, ಪ್ರಾಮಾಣಿಕ, ಮಾನವೀಯ, ರೋಗಿಯ ಮಾನಸಿಕ ವ್ಯಥೆಯನ್ನು ತಗ್ಗಿಸಬಲ್ಲ, ಸಾಂತ್ವನ ನೀಡಬಲ್ಲ ಒಬ್ಬ “ಕುಟುಂಬ ವೈದ್ಯ” ಸಾಕು. ಇನ್ನುಳಿದ ೫-೧0 ಪ್ರತಿಶತ ರೋಗಗಳನ್ನು ಇಂದಿನ ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ಕಂಡು ಹಿಡಿಯಬಹುದಾದರೂ ಆ ರೋಗಗಳ ಚಿಕಿತ್ಸಾವೆಚ್ಚ ಅತೀ ಹೆಚ್ಚು ಹಾಗೂ ಗುಣವಾಗುವ ಪ್ರಮಾಣವೂ ಕಡಿಮೆ. ವಿಪರ್ಯಾಸವೆಂದರೆ ಆಧುನಿಕ ಜೀವನದಲ್ಲಿ ‘ಕುಟುಂಬ ವೈದ್ಯ’ ಎಂಬ ಕಲ್ಪನೆಯೇ ಮರೆಯಾಗುತ್ತಿದೆ. ಮೊದಲಿನ ದಿನಗಳಲ್ಲಿ ‘ಕುಟುಂಬ ವೈದ್ಯ’ನೆಂದರೆ ಕುಟುಂಬದ ಸದಸ್ಯನಂತೆಯೇ ಇರುತ್ತಿದ್ದ. ಏನೇ ರೋಗ ಬಂದರೂ ಮೊದಲು ಅವನೆಡೆಗೆ ಹೋಗಿ ಅವನಿಂದ ಗುಣವಾಗುವ ಸಾಧ್ಯತೆ ಇಲ್ಲದಾಗ ಮಾತ್ರ ಅವನೇ ತಿಳಿಸಿದ ದೊಡ್ಡ ಆಸ್ಪತ್ರೆ ಅಥವಾ ‘ಸ್ಪೆಷಲಿಸ್ಟ್’ ಕಡೆ ಹೋಗಿ ಉಪಚಾರ ಪಡೆಯುವುದಾಗಿತ್ತು. ಈಗ ಕುಟುಂಬ ವೈದ್ಯ ಎಂಬ ಬಿರುದಿಗೆ ಪಾತ್ರರಾಗಲು ಇಷ್ಟ ಪಡುವ ವೈದ್ಯರೂ ಇಲ್ಲ, ಅಂತಹ ವೈದ್ಯರನ್ನು ಬಯಸುವ ರೋಗಿಗಳೂ ಇಲ್ಲ. ಹೀಗಾಗಿ ಈಗ ಆಸ್ಪತ್ರೆಗೆ ಹೋಗುವುದೆಂದರೆ ಹೋಟೆಲ್ ಗೆ ಹೋದ ಹಾಗೆ, ಅಥವಾ ಮಾಲ್ ಗಳಿಗೆ ಹೋದ ಹಾಗೆ.. ತಮ್ಮಲ್ಲಿ ಇರುವ ದುಡ್ಡು, ಅಂತಸ್ತು, ‘ಇನ್ಶುರನ್ಸ್ ಪ್ಯಾಕೇಜ್’ಗಳಿಗೆ ಅನುಗುಣವಾಗಿ ಆಸ್ಪತ್ರೆಗಳನ್ನು ಆಯ್ದುಕೊಳ್ಳುವುದು ‘ಫ್ಯಾಶನ್’ ಆಗಿದೆ. ಕೆಲವು ಆಸ್ಪತ್ರೆಗಳೂ ಕೂಡ ಅದೇ ಮಾನದಂಡಗಳನ್ನು ಬಳಸಿ ರೋಗಿಗಳನ್ನು ವಿಂಗಡಣೆ ಮಾಡುವ ಕೆಟ್ಟ ಪರಿಪಾಠ ಪ್ರಾರಂಭ ಮಾಡಿಬಿಟ್ಟಿವೆ. ಜನ ‘ಆಸ್ಪತ್ರೆಗೆ’ ಹೋಗುತ್ತಿದ್ದಾರೆ. ‘ವೈದ್ಯರೆಡೆಗೆ’ ಅಲ್ಲ. ‘ವೈದ್ಯ ಯಾರಿದ್ದರೂ ಆದೀತು, ಆಸ್ಪತ್ರೆ ಮುಖ್ಯ’ ಆಗುತ್ತಿದೆ. ಹೀಗಾಗಿ ನಮ್ಮ ವೈದ್ಯಕೀಯದ ಬೆಳವಣಿಗೆ ಬಹುಜನಾಭಿಮುಖವಾಗುತ್ತಿಲ್ಲ. ಸೇವಾಭಿಮುಖವಾಗುತ್ತಿಲ್ಲ. ಅದಕ್ಕಾಗಿಯೇ ಊರ್ಧ್ವ ಮುಖವಾಗಿ ರಾಕೆಟ್ ವೇಗದಲ್ಲಿ ಸಾಗಿದ ಈ ವೈದ್ಯಕೀಯದಲ್ಲಿ ಒಂದಿಷ್ಟು ಸಮಯ ನಿಂತು ವಿಚಾರಿಸಬೇಕಾಗಿದೆ, ಸಾಮಾನ್ಯ ಪ್ರಜೆಗೆ “ಅವಶ್ಯವಿರುವ ಆಸ್ಪತ್ರೆ” ಯಾವುದು, ಎಂದು. ಎಲ್ಲ ಊರುಗಳಲ್ಲಿ ತಲೆ ಎತ್ತುತ್ತಿರುವ “ಹೈಟೆಕ್” ಆಸ್ಪತ್ರೆಗಳು ಎಷ್ಟು ಜನರ ಕಷ್ಟಗಳನ್ನು ನಿವಾರಿಸುತ್ತಿವೆ, ಎನ್ನುವುದನ್ನು ಮರುಚಿಂತನೆ ಮಾಡಬೇಕಿದೆ. ‘ಹೆಚ್ಚು ಖರ್ಚು ಮಾಡಿ ಕಡಿಮೆ ಜನರನ್ನು ಗುಣಪಡಿಸುವುದಕ್ಕಿಂತ ಕಡಿಮೆ ಖರ್ಚುಮಾಡಿ ಹೆಚ್ಚು ಜನರನ್ನು ಗುಣಪಡಿಸುವತ್ತ’ ನಮ್ಮ ದೃಷ್ಟಿ ನೆಡಬೇಕಿದೆ. ಜನರೂ ಕೂಡ ಆ ನಿಟ್ಟಿನಲ್ಲಿ ಚಿಂತಿಸಬೇಕಿದೆ. ಅವಶ್ಯವೋ ಅನಾವಶ್ಯವೋ ತಮ್ಮ ಇಡೀ ಶರೀರವನ್ನು ಒಂದು ಬಾರಿ ಸಿ.ಟಿ.ಸ್ಕ್ಯಾನಿನ ಒಳಗೆ ತೂರಿಸಿಬಿಟ್ಟು ನೋಡಬೇಕೆನ್ನುವ ಆಸೆಯನ್ನು ಅದುಮಿಟ್ಟು ಅವರೂ ವೈದ್ಯರ ಉಪದೇಶಗಳನ್ನು ಆಲಿಸಬೇಕಿದೆ.
ತಮ್ಮ ಒಳ್ಳೆಯದಕ್ಕಾಗಿ ರೋಗಿಗಳೂ ಕೂಡ ಸ್ವಲ್ಪ ಬದ್ಧತೆಯನ್ನು, ಬಾಧ್ಯತೆಯನ್ನೂ ಹೊಂದಿದ್ದರೆ ಒಳ್ಳೆಯದು. ಅದಕ್ಕಾಗಿ ಒಂದಿಷ್ಟು ‘ಟಿಪ್ಸ್’
-ನಿಮಗೆ ಒಳ್ಳೆಯವನೆನಿಸಿದ ಒಬ್ಬ ವೈದ್ಯನನ್ನು ಆಯ್ದುಕೊಂಡು ಅವನ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸಿ. ವೈದ್ಯಕೀಯ ಉದ್ಯಮವಾಗುತ್ತಿರುವ ಈ ದಿನಗಳಲ್ಲೂ ಕೂಡ ಬಹುತೇಕ ವೈದ್ಯರು ಒಳ್ಳೆಯವರೇ. ಯಾಕೆಂದರೆ ತಮ್ಮನ್ನು ನಂಬಿ ಬಂದ ರೋಗಿಗೆ ಗುಣವಾಗಲಿ ಎಂದೇ ಎಲ್ಲ ವೈದ್ಯರೂ ಹಾರೈಸುವುದು. ಅದರಲ್ಲೂ ನೀವು ಅವರ ಖಾಯಂ ರೋಗಿ ಎಂದಾದರೆ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ. ಬಹುಪಾಲು ವೈದ್ಯರು ವೈದ್ಯಕೀಯ ವಿದ್ಯಾಲಯ ಸೇರುವಾಗ, ಜನಸೇವೆ ಮಾಡುವ ಗುರಿ ಹೊಂದಿಯೇ ಸೇರಿರುತ್ತಾರೆ. ಆದರೆ ಹೊರಬಂದೊಡನೆ ಸುತ್ತಲಿನ ಪರಿಸರ, ಸಾಮಾಜಿಕ ಅಭದ್ರತೆ, ನೂರೆಂಟು ವೆಚ್ಚಗಳು ಅವರನ್ನು ಅಧೀರನನ್ನಾಗಿಸುತ್ತವೆ. ನಿಮ್ಮ ಬೆಂಬಲ ಅವರನ್ನು ಸಮಾಜಮುಖಿಗಳನ್ನಾಗಿಸಬಹುದು.
-ಕಾಲ ಕಾಲಕ್ಕೆ, ನಿಮ್ಮ ವಯಸ್ಸಿಗನುಗುಣವಾಗಿ ನಿಮ್ಮ ವೈದ್ಯರು ತಿಳಿಸಿದ ತಪಾಸಣೆಗಳನ್ನು ಮಾಡಿಸಿಕೊಳ್ಳಿ. ಅಂತಹ ಪರೀಕ್ಷೆಗಳಿಂದ ಅನೇಕ ಅವಘಡಗಳನ್ನು, ನಿಮ್ಮ ಕುಟುಂಬಕ್ಕೆ ಅನಿರೀಕ್ಷಿತ ಆಘಾತವನ್ನೂ ತಪ್ಪಿಸಬಹುದು.
-ನಿಮ್ಮದಷ್ಟೇ ಅಲ್ಲ, ನಿಮ್ಮ ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ಪರೀಕ್ಷೆಗಳೂ ಮುಖ್ಯ. ಯಾವುದೂ ‘ಸರಪ್ರೈಜ್’ ಆಗಿಯ ಬಂದಿರಬಾರದು.
-ನಿಮಗೆ ಸಂಶಯ ಕಂಡಾಗಲೆಲ್ಲ ಇನ್ನೊಬ್ಬ ‘ಪರಿಣಿತ’ ವೈದ್ಯರ ಅಭಿಪ್ರಾಯ ಪಡೆಯುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅದೇ ಒಂದು ಚಟವಾಗಬಾರದು.
-ಸಾಧ್ಯವಾದಷ್ಟೂ ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಆರೋಗ್ಯ ವಿಮೆ ಮಾಡಿಸಿ. ಮಾಡಿಸುವಾಗ ಬಹಳ ವೆಚ್ಚದ್ದು ಅನಿಸಿದರೂ ದೊಡ್ಡ ಖರ್ಚುಗಳು ಬಂದಾಗ ಉಪಯೋಗವಾಗುತ್ತದೆ.
-ನಿಮ್ಮ ನೆರೆಯವರೊಂದಿಗೆ ಕೂಡಿ ಒಂದು ಸಣ್ಣ “ಆರೋಗ್ಯ ಗುಂಪು” ಮಾಡಿಕೊಳ್ಳಿ. ಒಬ್ಬರು ಇನ್ನೊಬ್ಬರ ಆರೋಗ್ಯದ ಬಗ್ಗೆ ವಿಚಾರಿಸಿ. ಹಾಳುಹರಟೆಗಳನ್ನು ಕಡಿಮೆ ಮಾಡಿ ಆರೋಗ್ಯದ ಬಗ್ಗೆ ಮಾತಾಡಿ. ಅವಶ್ಯವಿದ್ದಾಗಲೆಲ್ಲ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ. ಆರೋಗ್ಯದ ವಿಷಯದ ಬಗ್ಗೆ ಚರ್ಚಿಸಲು ಯಾವ ವೈದ್ಯರೂ ನಿರಾಕರಿಸಲಾರರು.
-ವೈದ್ಯರನ್ನು ನಿಮ್ಮ ಗುಂಪಿನ ಸದಸ್ಯರನ್ನಾಗಿಸಿಕೊಳ್ಳಿ. ಅವರೂ ನಿಮ್ಮ ಜೊತೆ ಬೆರೆಯಲು ಇಷ್ಟ ಉಳ್ಳವರಾಗಿರುತ್ತಾರೆ.
ಕೊನೆಯದಾಗಿ ಒಂದು ಮಾತು. ನಿಜವಾಗಿಯೂ ಭಾರತದ ಇಂದಿನ ಪರಿಸ್ಥಿತಿಯಲ್ಲಿ ಅತ್ಯವಶ್ಯವಾಗಿ ಬೇಕಾದುದು, ರೋಗಿ ಹಾಗೂ ವೈದ್ಯರ ನಡುವಿನ ನಂಬಿಕೆ ಹಾಗೂ ಸಾಮರಸ್ಯ, ಇದ್ದ ಪರಿಕರಗಳನ್ನು ಸರಿಯಾಗಿ, ಕರಾರುವಾಕ್ಕಾಗಿ ಉಪಯೋಗಿಸುವ ವೈದ್ಯರು, ರೋಗಿಗೆ ಸಾಂತ್ವನ ನೀಡುವ ದಾದಿಯರು, ವೈದ್ಯ ರೋಗಿಯ ಮಧ್ಯೆ ಪ್ರವಹಿಸುವ ಮಾನವೀಯ ಅನುಕಂಪದ ಅಲೆ ಮತ್ತು ಅಪ್ಯಾಯಮಾನವೆನಿಸುವ ಆರೈಕೆ ಮಾತ್ರ. ವೈದ್ಯರನ್ನು ನಂಬದೆ ಅವರ ಮೇಲೆ ವೃಥಾ ಆರೋಪ ಹೊರಿಸುವುದೂ, ಅವರ ಮೇಲೆ ಹಲ್ಲೆ ಮಾಡುವುದೂ ಅಲ್ಲ, ಅಥವಾ ಹತ್ತು ರೂಪಾಯಿಗೆ ಆರಾಮವಾಗುವ ರೋಗಕ್ಕೆ ಸಾವಿರ ರೂಪಾಯಿಯ ತಪಾಸಣೆ ಮಾಡಿ ಹತ್ತು ಸಾವಿರದ ಶುಲ್ಕ ವಿಧಿಸುವುದೂ ಅಲ್ಲ….!
ಅವರು ಇವರನ್ನು ನಂಬಬೇಕು, ಇವರಿಗೆ ‘ದಯವೇ ಧರ್ಮದ ಮೂಲ’ವಾಗಬೇಕು ಅಷ್ಟೇ…!!

‍ಲೇಖಕರು G

January 29, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

15 ಪ್ರತಿಕ್ರಿಯೆಗಳು

  1. Prabhakar M. Nimbargi

    We will be missing your articles, for a long period of time I presume.They were indeed giving an insight into the depth of medical profession, the relations that ought to exist between the patient, his/her relatives/friends, and the doctor, and what not. Your today’s article is a brief write-up on the present day medical profession. Just as teaching, medical profession has been commercialized. It is, however, rare but not frequent to find a good TEACHER as well as a DOCTOR. It is high time that the concept of family doctors re-emerges again. Thanks a lot for your thought provoking and wonderful articles. May your tribe increase.Thanks once again.

    ಪ್ರತಿಕ್ರಿಯೆ
  2. Dr.Ratna Kulkarni

    ಬಹಳ ಸೂಕ್ತ ಹಾಗು ಉಪಯುಕ್ತ ಲೇಖನ.
    ಮತ್ತೊಮ್ಮೆ ಸರಣಿ ಆರಂಭವಾಗಲಿ.

    ಪ್ರತಿಕ್ರಿಯೆ
  3. Dr. S.R . Kulkarni.

    Saheb, What so urgent? Is it Avadhi or you to say ‘Last’? For me it is a shock. All your articles were not just highly educative, deep concern was always the theme.
    It is very nice of you that you are giving much needed tips to Drs&people who come to take their help.
    Another appreciable thing is you have talked about family doctor.
    Lastly any profession can be equally interesting provided same interest and concerns are taken. Thanks a lot for sharing your experiences & educating me and society.

    ಪ್ರತಿಕ್ರಿಯೆ
  4. ಕೆ ಎಸ್ ನವೀನ್

    ಮಾನ್ಯರೆ,
    ನಿಮ್ಮ ಅಂಕಣ ಮುಗಿದಿದ್ದು ಒಂದು ಅಘಾತ! ನಿಮ್ಮ ಬರೆಹಗಳು ನಮ್ಮನ್ನು ಬೇರೆಯದೇ ಬೆಳಕಿನಲ್ಲಿ ನೋಡಿಕೊಳ್ಳಲು ಸಾಧ್ಯವಾಗಿಸುತ್ತಿದ್ದವು. ಅವುಗಳಲ್ಲಿ ಎರಡು ನನಗೆ ವೈಯಕ್ತಿಕವಾಗಿ ಬಹು ಮುಖ್ಯವಾಗಿತ್ತು. ಆ ಕುರಿತು ನಿಮಗೆ ಬರೆಯುತ್ತೇನೆ. ಬೆಳಕು ಎಲ್ಲ ದಿಕ್ಕುಗಳಿಂದಲೂ ಬರಲಿ ಎಂದು ಒಂದು ಉಪನಿಷತ್‍ ಹೇಳುತ್ತದೆ. ತಾವು ಅಂತಹ ಒಂದು ದಿಕ್ಕು.
    ಗೌರವಾದರಗಳೊಂದಿಗೆ,
    ವಿಶ್ವಾಸದ
    ಕೆ ಎಸ್ ನವೀನ್

    ಪ್ರತಿಕ್ರಿಯೆ
  5. sudha Manjunath

    Dr. namaskara. how true it is The day medical seat was given for payment seat it became commercial. All the episods were too good. its sad that u r not writing from next week. Thank you for the tips

    ಪ್ರತಿಕ್ರಿಯೆ
  6. ಅಕ್ಕಿಮಂಗಲ ಮಂಜುನಾಥ

    ಸರಣಿ ಮುಗಿದೇಹೋಯಿತೇ ? ಮಾನವೀಯತೆಯ ಮಾತಾಡುತ್ತಿದ್ದ ವೈದ್ಯರು ಇಷ್ಟು ಬೇಗ ನಮ್ಮಿಂದ ದೂರವಾಗುತ್ತಿದ್ದಾರೆಯೇ? ಮತ್ತೊಮ್ಮೆ ಬರಲಿಕ್ಕೆ ಸಾಧ್ಯವಿಲ್ಲವೇ ?

    ಪ್ರತಿಕ್ರಿಯೆ
  7. ಶೈಲಜ ಮೈಸೂರು

    ಸರ್ ! ಮನೆಯ ಹಿರಿಯಣ್ಣನಂತೆ ಅನೇಕ ಸಲಹೆಗಳನ್ನಿತ್ತಿದ್ದೀರಿ .ನಿಮಗೊಂದು ಗೌರವಪೂರ್ಣ ನಮನ.ನಿಮ್ಮೆಲ್ಲ ಬರಹಗಳು ನಮ್ಮ ಮನಮುಟ್ಟಿವೆ .ನಮ್ಮನ್ನು ಯೋಚನೆಗೆ ಹಚ್ಚಿವೆ .ಧನ್ಯವಾದಗಳು .ಮತ್ತೊಂದು ಸರಣಿ ಲೇಖನಕ್ಕಾಗಿ ಕಾದಿದ್ದೇವೆ .
    ಶೈಲಜಾ ಮೈಸೂರು

    ಪ್ರತಿಕ್ರಿಯೆ
  8. Parvati Naik

    Thanks a lot sir for giving us good articles to read. Every Thursday I used to for your article. Like you we also feel that BHANA, BHANA.

    ಪ್ರತಿಕ್ರಿಯೆ
  9. Gopaala Wajapeyi

    ಮುಂದಿನ ಗುರುವಾರ ಈ ಲೇಖನಗಳಿರುವುದಿಲ್ಲ…??!! ‘ಅವಧಿ’ ಭಣ ಭಣ..!! 🙁

    ಪ್ರತಿಕ್ರಿಯೆ
  10. Ravi Jammihal

    Dear Kubsad, Very apt analysis and lucid narration of the changing/changed system and values in Health care.
    it is crass commercialisation of Health care system in the guise of providing state of the art facilities/investigations and latest innovations to very few needy people(affording) by the greedy providers. Media and 5 star Ho(tel/spital)s are responsible for the rot to certain extent. Costally education, still costally instruments/machines, high cost of land and urge to make money at the earliest are few other things responsible. We doctors are also part of the racket in the name of CPA.
    Coming Family Doctor who is already dead long back because we donot want to be ordinary GP earning pittance and the half knowledged patients who want to to be seen by the superspecialist for their cold and get a CT done and take newest costly antibiotics. Ultimately we have to accept Change is the only constant

    ಪ್ರತಿಕ್ರಿಯೆ
  11. pundalik Huginavar

    ಸರ್ ನಮಸ್ತೇ, ಅವಧಿಯಿಂದ ತಮ್ಮ ನಿರ್ಗಮನ ತಾತ್ಕಾಲಿಕ ವಾಗಿರಲಿ. ಆದಷ್ಟು ಬೇಗ ಅವಧಿ ನಿಮ್ಮ ಲೇಖನದಿಂದ ಕಂಗೊಳಿಸಲಿ. ಸರ್ರಿಇಇಇಇಇ ದೌಡನ ಹೊಳ್ಳಿ ಬರ್ಲಾ…ನಿಮ್ಮ ಬರವಣಿಗೆಗಾಗಿ ನಾವು ಕಾಯಾಕ ಹತ್ತಿವ್ರಿಯಪ್ಪಾ ಸಾಹೇಬ್ರ….

    ಪ್ರತಿಕ್ರಿಯೆ
  12. arathi ghatikar

    Nimma vaidyakeeya rangada anubhavagalu oduva ondu avakaasha inilla embudu swalpa bejaaru ,.adare nimma nenpugalu illi melaku haakuvaagalella eshtu anubhavagalu namannu chikitha golisive , kannanchinalli neeradisive ..nijakku obba vaidhyana kaalaji , seva manobhaava , entha sanniveshadalluu samaya pragnye yannu mereyuvantha nimmantha hrudatavantha vaidyarige nanna ondu salaam .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: