–ಸುರೇಶ ತಂಗೋಡ
ತಮ್ಮದೇ ಓಣಿಯೊಳಗ ಹಾದು ಹೋಗುವಾಗ ತಂಗೇಶನಿಗೆ ಎಲಿ ಅಡಕಿ ಹಾಕ್ಕೊಂಡು ಕುಂತಿದ್ದ ತಿಮ್ಮಮ್ಮ ಅದೇನೋ ಉದ್ದದ, ಪೋನು ಅಲ್ಲದ ಲ್ಯಾಪ್ಟಾಪೂ ಅಲ್ಲದ ಯಾವುದೋ ಯಂತ್ರ ಹಿಡಿದಿದ್ದು ಕಂಡು “ಯಮ್ಮ ನಿನ್ನ ಕೈಯಾಗ ಇರೋದು ಏನ್ ಬೆ ಅದು?”ಎಂದಾಗ ಬಾಯಿಯೊಳಗಿನ ಎಲೆ ಅಡಕಿ ಪಿಚಕ್ ಅಂತಾ ಉಗುಳಿ “ಲೋ ತಮ್ಮ ಇದು ದೊಡ್ಡ ಮೊಬೈಲ್. ಅದೇನೋ ಟ್ಯಾಬೊ ಗೀಬೊ ಅಂದಾ ನಮ್ಮ ಹುಡ್ಗ ಎಂದಳು.ನನ್ನ ಮಗ ನೌಕರಿ ಮಾಡ್ತಾನಲ್ಲ ಅವ ನಿನ್ನೆ ನನಗ ಇದ್ನ ಕೊಡಿಸ್ಯನ “ಎಂದಳು ಹೆಮ್ಮೆಯಿಂದ.ತಂಗೇಶ “ಬಾರಿ ಬಿಡುವ ತಿಮ್ಮಮ್ಮ”ಎಂದು ತಂಗೇಶ ತನ್ನ ಪಾಠಿ ಚೀಲ ಹಿಡಿದು ಶಾಲೆ ಕಡೆ ಹೊರಟ. ಹೀಗೆ ದಿನ ಕಳೆದಂತೆ ತಿಮ್ಮಮ್ಮ ಸದಾ ಆ ಟ್ಯಾಬ್ ನೊಳಗ ಇರ್ತಿದ್ಲು. ಇತ್ತಾಗ ತಂಗೇಶನಿಗೆ ದಿನದಿಂದ ದಿನಕ್ಕೆ ತಿಮ್ಮಮ್ಮ ನ ಬಗ್ಗೆ ಅಸೂಯೆ ಪ್ರಾರಂಭವಾಯಿತು.ಅದಕ್ಕೆ ಕಾರಣ ಅವಳ ಮಗ ಕೊಡಿಸಿದ ಟ್ಯಾಬ್.ಹೌದು ತಂಗೇಶ ತಿಮ್ಮಮ್ಮ ನ ಮನೆಯ ಪಕ್ಕದ ಹುಡುಗನಾದರೂ ಈ ಟ್ಯಾಬ್ ಬರುವುದಕ್ಕಿಂತ ಮೊದಲು ಅವಳೇ ಇವನಿಗೆ ಊಟ, ಸ್ನಾನ ಮಾಡಿಸಿ ದಿನವೂ ಕಥೆ ಹೇಳುತ್ತಿದ್ದಳು.ಹುಣ್ಣಿಮೆಯ ದಿನ ಚಂದ್ರನನ್ನು ತೋರಿಸಿ ಅವಳು ಹೇಳುತಿದ್ದ ರಾಮಾಯಣ,ಮಹಾಭಾರತದ ಕಥೆಗಳು,ಅದರೊಟ್ಟಿಗೆ ಹೇಳುತಿದ್ದ ಜಾನಪದ ಕಥೆಗಳು ಒಂದಕ್ಕಿಂತ ಒಂದು ಸೊಗಸಾಗಿ ಇದ್ದು ತಂಗೇಶ ತಾನೆಲ್ಲೊ ಬೇರೆ ಲೋಕದಲ್ಲಿ ಇರುವ ಭಾವ ಮೂಡುತಿತ್ತು. ಅದರಲ್ಲೂ ತಿಮ್ಮಮ್ಮ ಮಾಡುತಿದ್ದ ಹುಂಚಿ ಚಿಗಳಿ, ಹಕ್ಕರಕಿ ಪಲ್ಲೆ, ಚುಡಾ, ಶುಂಟಿ ಚಾ ಇವೆಲ್ಲ ಈ ಟ್ಯಾಬ್ ಬಂದ ಮ್ಯಾಲ ಬಂಧ ಆಗಿತ್ತು. ಅದಕ್ಕಾಗೇ ಟ್ಯಾಬ್ ಮೇಲೆ ಮತ್ತು ತಿಮ್ಮಮ್ಮನ ಮೇಲೆ ತಂಗೇಶನಿಗೆ ಎಲ್ಲಿಲ್ಲದ ಸಿಟ್ಟು !
ಹೀಗೆ ದಿನ ಸಾಗುತ್ತಿರುವಾಗ ಒಂದು ದಿನ ರಾತ್ರಿ ಮಳೆ ಜೋರಾಗಿ ಸುರಿಯಲಾರಂಭಿಸಿತು. ಮನೆ ಸೋರಲು ಸುರುವಾಯಿತು. ಅದಕ್ಕಾಗಿ ತಿಮ್ಮಮ್ಮ ಪಕ್ಕದ ಮನೆ ಹುಡುಗನಾದ ತಂಗೇಶನನ್ನು ಮ್ಯಾಳಿಗೆ ಕಿಂಡಿ ಮುಚ್ಚಿ ಬರಲು ಹೇಳಿದಳು. ಮನೆಯಲ್ಲಿ ಒಬ್ಬಳೇ ಇದ್ದ ತಿಮ್ಮಮ್ಮ ಇರುವುದನ್ನ ಮನಗಂಡಿದ್ದ ತಂಗೇಶ ತಿಮ್ಮಮ್ಮನ ಹತ್ತಿರ ಒಂದು ಷರತ್ತು ಹಾಕಿದ.ಅದೇನು ಕಂದ ಎಂದಳು ? ಅಜ್ಜಿ . ಅದಕ್ಕೆ ತಂಗೇಶ ಇಂದಿನಿಂದ ನೀನು ಟ್ಯಾಬ್ ಮುಟ್ಟುವ ಹಾಗಿಲ್ಲ. ನನ್ನ ಮೇಲೆ ಆಣೆ ಎಂದನು ಮತ್ತು ದಿನವೂ ತನಗೆ ಒಳ್ಳೆಯ ಕಥೆ ಮತ್ತು ಲಾಲಿ ಹಾಡು ಹಾಡಬೇಕೆಂದು ಕೇಳಿಕೊಂಡನು.ಒಂದು ಕ್ಷಣ ಯೋಚಿಸಿದ ತಿಮ್ಮಮ್ಮ ತನ್ನ ವಯಸ್ಸಿಗೆ ಇರಬೇಕಾದ ಬುದ್ಧಿ ಆ ಹುಡುಗನಿಗೆ ಇದೆ ಎಂದು ಪಶ್ಚಾತಾಪ ಪಟ್ಟು ಹುಡುಗನಿಗೆ ಕಣ್ಣೀರು ಒರೆಸಿಕೊಂಡು “ಮಗ ನಾನು ನಿನಗೆ ಟ್ಯಾಬ್ ತಿಮ್ಮಮ್ಮ ಆಗಿರದೆ ಹಳೆಯ ಕಥೆ ಹೇಳುತ್ತಿದ್ದ,ನಿನ್ನ ಮುದ್ದು ಮಾಡುತ್ತಿದ್ದ, ಹಳೆಯ ತಿಮ್ಮಮ್ಮ ಆಗಿಯೇ ಇರುತ್ತೇನೆ “, ಎಂದಳು ತಂಗೇಶ ಮ್ಯಾಳಿಗೆ ಮುಚ್ಚಿ ಬರುವ ಹೊತ್ತಿಗೆ ಮಳೆ ನಿಂತಿತ್ತು. ತಿಮ್ಮಮ್ಮ ಮುದ್ದಿ ಸಾರು ಮಾಡಿ ತಂಗೇಶನನ್ನು ಎದುರಿಗೆ ಕುಳಿತಿಸಿಕೊಂಡು ಕೈತುತ್ತು ನೀಡುತ್ತಾ ಮಲಗಿಸಿದಳು.
ನೀತಿ:ಆಧುನಿಕತೆಯ ಅಲೆಗೆ ಸಿಲುಕದೆ ಸಾಂಪ್ರದಾಯಕ ಜೀವನ ಶೈಲಿಯಲ್ಲಿ ಎಲ್ಲರೂ ಬದುಕಬೇಕು.






0 Comments