ಜೇನಿಗೆ ಉಸಿರು ಕಟ್ಟುತ್ತಿದೆ..

ಪುಟ್ಟಾರಾಧ್ಯ ಸಿದ್ಧರಾಜ್

ಹೀಗೊಮ್ಮೆ ಹತ್ತು ವರ್ಷದ ಹಿಂದೆ ಕುಶಾಲನಗರದ ಸುತ್ತಮುತ್ತ ಇರುವ ಜೇನು ಕುರುಬರ ಹಾಡಿಗಳಲ್ಲಿ ಕೆಲಸ ಮಾಡುವಾಗ ಒಂದಿನ ಕೆಲಸದ ನಿಮಿತ್ತ ಸಂಜೆ ನಾಲ್ಕಾದರೂ ಹಾಡಿಯಲ್ಲೇ ಉಳಿದಿದ್ದೆ. ಹೊಟ್ಟೆ ಹಸಿದು ಕೆಟ್ಟು ಹೋಗಿತ್ತು ಆದರೂ ಅವರನ್ನು ಊಟ ಕೇಳುವ ಪರಿಸ್ಥಿತಿ ಇರಲಿಲ್ಲವಾದ್ದರಿಂದ ಸುಮ್ಮನೆ ಕೆಲಸದಲ್ಲಿ ಮಗ್ನಾನಾಗಿದ್ದೆ. ಅಲ್ಲಿನ ಮುಖಂಡ ಅರ್ಥ ಮಾಡಿಕೊಂಡವರಂತೆ ಒಂದು ಸಣ್ಣ ಬಾಳೆಗೊನೆ, ಒಂದು ತಟ್ಟೆಯಲ್ಲಿ ಜೇನು, ಕಾಡು ಗೆಣಸು ಬೇಯಿಸಿದ್ದು ತಂದು ಮುಂದೆ ಇರಿಸಿದ್ದು ಅದರ ರುಚಿ ಇಂದಿಗೂ ನೆನಪಿದೆ.

ಇದೊಂದು ವಿಷಯಕ್ಕೆ ಅವರನ್ನು ನೆನೆದೆ ಎಂದಲ್ಲ ಆ ಬದುಕಿನಿಂದ ಹೊರ ಬಂದು ಹತ್ತು ವರ್ಷಗಳೇ ಕಳೆದಿದ್ದರೂ ಜೇನು ಎಂದಾಕ್ಷಣ ಜೇನು ಕುರುಬರನ್ನು ನಾನು ನೆನೆಯದೆ ಇರುವುದಿಲ್ಲ. ಇವರ ಆದಾಯ ಇವರು ಕೂಡಿಡುವ ಜೇನಿನ ಮೇಲೆಯೇ ನಿಂತಿದ್ದು ಇತ್ತೀಚೆಗೆ ಬೇರೆ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಇತ್ತೀಚಿಗೆ World Bee Day ಮುಗಿದಿದೆ. ಆದ್ದರಿಂದ ಅವರನ್ನ ಮತ್ತೊಮ್ಮೆ ನೆನೆದು ಮುಂದುವರಿಸುವೆ.

ಅಂದರೆ ಬೆಳಗಿನಿಂದ ಹಲವರು ಇದರ ಮೆಸೇಜುಗಳು ಕಳಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಲ್ಲಿ ಪೋಸ್ಟ್ ಮಾಡಿ ಆಚರಿಸಿತ್ತಿದ್ದುದು ಕಂಡೆ ಆದರೆ ಅವೆಲ್ಲವುಗಳಿಗಿಂತ ಇಂದು ಹೆಚ್ಚು ಗಮನ ಹೋದದ್ದು ಭಾರತ ಸರ್ಕಾರ 27 ಕೀಟ ನಾಶಕಗಳನ್ನು ನಿಷೇಧ ಮಾಡಲು ಹೊರಟಿರುವ ಸುದ್ದಿ. ನಾನಿನ್ನು ಜೇನು ಎಷ್ಟು ಅವಶ್ಯಕತೆ ಇದೆ, ಜೇನೆಂದರೆ ಜೀವ ಎಂದೆಲ್ಲ ಕೊರೆಯುವುದು ಬೇಡವೇ ಬೇಡ, ಕಾರಣ ಇದನ್ನು ಓದುವ ಅಷ್ಟೂ ಜನರಿಗೆ ಜೇನು ಜಗತ್ತಿನ ಅತ್ಯಂತ ಪ್ರಮುಖ ಪರಾಗಸ್ಪರ್ಶಕ ಎಂಬುದು ತಿಳಿದಿದೆ. ಜೇನಿನ ಜೊತೆ ಹಲವು ಪರಾಗಸ್ಪರ್ಶಕಗಳು ಇದ್ದರೂ ಜೇನು ಹುಳುಗಳು ಮಾತ್ರ ಅತ್ಯಂತ ಪ್ರಮುಖ ಎಂಬುದು ನೆನಪಿರಲಿ. ಭಾರತೀಯ ತುಡುವೆ ಜೇನು ಪರ್ಫೆಕ್ಟ್ ಪಾಲಿನೇಟರ್ ಎಂದು ನಿನ್ನೆಯಷ್ಟೇ ಅನುಭವೀ ಜೇನು ಕೃಷಿಕ ಮತ್ತು ತಜ್ಞರಾದ ನಾಗೇಂದ್ರ ಸಾಗರ್ ತಿಳಿಸಿದ್ದರು.


ಮನೆಯ ಪಕ್ಕದಲ್ಲಿರುವ ಹೊಂಗೆ ಮರದಲ್ಲಿ ಮಕರಂದ ಹೀರುವಾಗ ಕ್ಲಿಕ್ಕಿಸಿದ್ದು.

ಈಗ ಸರ್ಕಾರ ನಿಷೇಧ ಮಾಡಲು ಹೊರಟಿರುವ ಕೀಟ ನಾಶಕಗಳು ಇಂತಿವೆ. Acephate, Chlorpyriphos , Mancozeb, Pendimithalin, Ziram, Monocrotophos, Deltamethrin, 2,4,D, Dichlorvos, Phorate, Thiodicarb, Atrazine, Captan, Dimethoate, Oxyfluorfen, Sulphosulphuran, Malathion, Quinlphous, Butachlor, Carbendazim ಇನ್ನೂ ಒಂದೈದಾರು ಇವೆ. ಸರ್ಕಾರ ಜುಲೈ ಕೊನೆಯಲ್ಲಿ ಅಂತಿಮ ತೀರ್ಪು ನೀಡಲಿದೆ ಸದ್ಯಕ್ಕೆ objections ನೀಡಲು ಸಮಯ ನೀಡಿದೆ. ಹಲವು ಕಂಪನಿಗಳು ಈಗಾಗಲೇ ಸಾವಿರಾರು ಕೋಟಿಯ ನಷ್ಟವಾಗಲಿದೆ ಎಂದು ಹೇಳುತ್ತಿದ್ದಾರೆ ಜೊತೆಗೆ ರೈತರಿಗೂ ತೊಂದರೆಯಾಗುತ್ತದೆ ಎಂದು ಬೆಣ್ಣೆ ಸವರಿ ಅವರನ್ನು ಇವರ ಬೆಂಬಲಕ್ಕೆ ನಿಲ್ಲಿಸಿಕೊಳ್ಳುತ್ತಿದ್ದಾರೆ. ಇದೆಲ್ಲ ನಮ್ಮಗಳ ಅರಿವಿನಲ್ಲಿ ಇದ್ದರೆ ಒಳ್ಳೆಯದೇ.

(https://www.google.com/amp/s/www.cnbctv18.com/agriculture/proposed-govt-ban-on-27-pesticides-could-impact-one-fifth-of-industry-revenues-5964021.htm/amp)

ಇದೆಲ್ಲವೂ ಒಂದು ಕಡೆಯಾದರೆ ಇತ್ತ ಜೀವ ಕುಲವೇ ನಾಶವಾಗುತ್ತಿರುವ ಹೊತ್ತಿನಲ್ಲಿ ಯಾವುದು ಮುಖ್ಯ ಎಂಬುದನ್ನು ಎಲ್ಲರೂ ನೆನಪಿನಲ್ಲಿಡಬೇಕು. ಮೇಲೆ ಹೆಸರಿಸಿರುವ ಕೆಲವು ಕೀಟನಾಶಕಗಳು ಈ ಜೇನು ಹುಳುಗಳಿಗೆ ಬಲು ದೊಡ್ಡ ಮಾರಕಗಳು ಎಂದರೆ ಆಶ್ಚರ್ಯವಾದರೆ, ಸಿಗರೇಟು ಸೇದದೆ ಕ್ಯಾನ್ಸರ್ ಹೇಗೆ ಬಂತು ಎಂಬ ಅನುಮಾನ ಇದ್ದರೆ, ಕೆರೆಗಳು ವಿಷ ತುಂಬಿ ಮೀನುಗಳು ಏಕೆ ಸತ್ತವು ಎಂಬ ಕುತೂಹಲ ಇದ್ದರೆ, ಪುರುಷರ ವೀರ್ಯಾಣುಗಳು ಕೆಲಸಕ್ಕೆ ಬಾರದಾಗಿದ್ದು ಹೇಗೆ ಎಂಬುದು ತಿಳಿಯಬೇಕಾದರೆ, ಎದೆ ಹಾಲಿನಲ್ಲಿ ವಿಷ ಬಂದಿದೆ ಎಂಬುದನ್ನು ತಿಳಿಯಬೇಕಾದರೆ, DNA ಮಟ್ಟದಲ್ಲಿ ಬದಲಾವಣೆ ಕಂಡು ಬಂದಿದ್ದು ಹೇಗೆ ಎಂಬುದು ಗೊತ್ತಾಗಬೇಕಾದರೆ, air quality ಹೇಗೆಲ್ಲಾ ಹಾಳಾಗುತ್ತಿದೆ ಎಂಬುವುದು ತಿಳಿಯಬೇಕಿದ್ದರೆ, ಮೇಲೆ ನಿಷೇಧಗೊಳ್ಳಲಿರುವ ಒಂದೊಂದು ಕೀಟ ನಾಶಕಗಳನ್ನು ಗೂಗಲ್ ಮಾಡಿ ಅವುಗಳು ಮಾಡುತ್ತಿರುವ ಪರಿಣಾಮವನ್ನು ತಿಳಿದುಕೊಳ್ಳಬೇಕಾಗಿದೆ.

ಮುಂದುವರೆದು ಜೇನು ಹುಳುಗಳು ಈ ಕೆಳಗಿನ ಚಿತ್ರದಲ್ಲಿ ಹೂವನ್ನು ಅಪ್ಪಿ ಹಿಡಿದಿರುವಂತೆ ಇಡೀ ಜೀವಕುಲವನ್ನೆ ಅಪ್ಪಿ ಹಿಡಿದಿವೆ ಎಂದರೆ ತಪ್ಪಾಗಲಾರದು. ಪರಾಗಸ್ಪರ್ಶಕಗಳ (pollinators) ಪ್ರಾಮುಖ್ಯತೆ, ಅವುಗಳಿಗೆ ಇರುವ ತೊಂದರೆಗಳನ್ನು, ಸುಸ್ಥಿರ ಅಭಿವೃದ್ದಿಗೆ ಅವುಗಳ ಅವಶ್ಯಕತೆಯನ್ನು ಎತ್ತಿ ಹಿಡಿಯಲು ಪ್ರತೀ ವರ್ಷ ಮೇ 20 ರಂದು World Bee Day ಆಚರಿಸಲಾಗುತ್ತದೆ.

‍ಲೇಖಕರು nalike

May 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಸಿಹಿಜೇನಿನ ಕಹಿಕತೆಯೇ… ಜೇನು ಕುಲ ಉಳಿಯಲಿ. ಕೀಟನಾಶಕಗಳು ಅಳಿಯಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: