ಅಗಲಿಕೆಯ ನೋವು ಹಾಗೂ ಹೊಸತರದ ಆಗಮನ

 ಕಿರಣ ಕಾಟವಾ

ಅಗಲಿಕೆಯ ನೋವು ಎಲ್ಲರನ್ನು ಕಾಡುತ್ತದೆ. ಎಷ್ಟೋ ಸಿನಿಮಾಗಳು ಓಡುವುದು ಈ ಅಗಲಿಕೆಯ ನೋವಿನ ಮೇಲೇನೆ. ಈ ಅಗಲಿಕೆ ವ್ಯಕ್ತಿ ಅಥವಾ ವಸ್ತು, ಅಂದರೆ ಜೀವಂತ ಅಥವಾ ನಿರ್ಜೀವ ವಸ್ತುವಿನ ಜೊತೆಗೆ ಆಗಬಹುದು. ಮೂಲತಃ ಆ ವ್ಯಕ್ತಿ ಅಥವಾ ವಸ್ತುವಿನ ಜೊತೆಗೆ ಅಲ್ಲಿಯತನಕ ಭಾವನಾತ್ಮಕ ಸಂಬಂಧ ಬೆಳೆದಿರಬೇಕು.

ನನ್ನ ಈ ಬರಹದಲ್ಲಿ, ಈ ರೀತಿ ಅಗಲಿಕೆಯಾದಾಗ ಒಬ್ಬ ವ್ಯಕ್ತಿ ಆಂತರಿಕವಾಗಿ ಏನನ್ನು ಅನುಭವಿಸುತ್ತಾನೆ ಹಾಗೂ ಇದರಿಂದ ಹೇಗೆ ಹೊರಗೆ ಬರಬಹುದು ಅನ್ನುವುದನ್ನು ವಿವರಿಸಲು ಯತ್ನಿಸಿದ್ದೇನೆ. ಪ್ರತಿಸಲವೂ, ಒಬ್ಬ ವ್ಯಕ್ತಿ ಅಗಲಿಕೆಯನ್ನು ಐದು ಹಂತಗಳಲ್ಲಿ  ಪಯಣಿಸುತ್ತಾನೆ. ಇವುಗಳನ್ನು ಹಂತ-ಹಂತವಾಗಿ ಅನುಭವಿಸಿದರು, ಹಿಂದೆ-ಮುಂದೆ ಚಲನೆಯಾಗುತ್ತಿರುತ್ತದೆ. ಆ ವ್ಯಕ್ತಿಗೆ ಈ ಹಂತಗಳ ಬಗ್ಗೆ ಅರಿವಿರಲಿ, ಇರದೇ ಇರಲಿ, ಈ ಹಂತಗಳ ಮೂಲಕ ನೋವನ್ನು ವಿವಿಧ ರೀತಿಯಲ್ಲಿ ಅನುಭವಿಸೆಯೇ ತೀರುತ್ತಾನೆ. ಈ ಎಲ್ಲ ಹಂತಗಳು ಮುಗಿದಾಗ, ಕಳಚಿದ ಸಂಬಂಧ ಅಥವಾ ವಸ್ತುವಿನಿಂದ ಹೊರಬಂದು ಹೊಸ ಸಂಬಂಧ, ಹೊಸ ವಸ್ತುಗಳಿಗೆ ಮಾನಸಿಕವಾಗಿ ಜಾಗವನ್ನು ಸೃಷ್ಟಿಸಿ, ಅವನ್ನು ತನ್ನ ಜೀವನದಲ್ಲಿ ಪೂರ್ಣವಾಗಿ ಬರಮಾಡಿಕೊಳ್ಳುತ್ತಾನೆ. ಈ ಅಗಲಿಕೆಯ ಘಟನೆಗಳು ಯಾವಾಗಲು ಕೆಟ್ಟವೇ ಆಗಿರಬೇಕೆಂದಿಲ್ಲ, ಅವು  ಒಳ್ಳೆಯವು ಆಗಿರಬಹುದು.

ಈ ವಿಷಯದ ಬಗ್ಗೆ ೧೯೬೯ ರಲ್ಲಿ ಅಮೆರಿಕಾದ ಮನಶಾಸ್ತ್ರಜ್ಞೆ ಎಲಿಜೆಬೆತ್ ಕುಬ್ಲೇರ್-ರೋಸ್ ತನ್ನ “On Death and Dying” ಎನ್ನುವ ಪುಸ್ತಕದಲ್ಲಿ ಬರೆದಳು.

ಮೊದಲ ಹಂತ: ತಿರಸ್ಕರಿಸುವಿಕೆ (Denial): ನನಗಿದು ಆಗಿಲ್ಲಾ, ನನಗೆ ಆಗದಿರಬಹುದು, ನಾನು ಗಟ್ಟಿಯಾಗಿಯೇ ಇದೀನಿ ಅನ್ನುವ ಭಾವನೆ.

ಎರಡನೇ ಹಂತ: ಸಿಟ್ಟು (Anger): ನನಗೆ ಯಾಕೆ ಹೀಗೆ ಆಗೋದು?, ಅಗಲಿದವರ ಮೇಲೆ ಅಥವಾ ಬೇರೆಯವರ ಮೇಲೆ ವಿನಾಕಾರಣ ಸಿಟ್ಟಾಗುವುದು,  ಈ ರೀತಿಯ ವರ್ತನೆ.

ಮೂರನೇ ಹಂತ: ಚೌಕಾಶಿ (Bargaining): ಒಂದೇ ಒಂದು ಸಲ ಅವಕಾಶ ಕೊಡಿ, ದೇವ್ರೇ ಹೆಂಗಾದ್ರೂ ಮಾಡಿ ಇದರಿಂದ ಪಾರು ಮಾಡಪ್ಪ ನಿನಗೆ ಪೂಜೆ ಸಲ್ಲಿಸ್ತೀನಿ, ಸ್ವಲ್ಪ ಬೇಗನೆ ಡಾಕ್ಟರ್ ಹತ್ರ ಕರ್ಕೊಂಡು ಹೋಗಿದ್ರೆ… ಹೀಗೆ ಆಗ್ತಿರಲಿಲ್ಲ. ಈ ರೀತಿಯ ಯೋಚನೆಗಳು.

ನಾಲ್ಕನೆಯ ಹಂತ: ಖಿನ್ನತೆ (Depression): ಬೇರೆ ಕೆಲಸಗಳಲ್ಲಿ ಆಸಕ್ತಿ ಕಳೆದು ಕೊಳ್ಳುವುದು – ಹವ್ಯಾಸ, ಸಂಬಂಧ, ಹಣಕಾಸು ವಿಷಯಗಳು, ಯಾವುದರಲ್ಲೂ ಆಸಕ್ತಿ ಇಲ್ಲವಾಗುವಿಕೆ.

ಐದನೇ ಹಂತ: ಒಪ್ಪಿಕೊಳ್ಳುವಿಕೆ (Acceptance): ಜೀವ ಹಾಗೂ ಜೀವನ ಸದಾ ಬದಲಾವಣೆ ಆಗುತ್ತಿರುವ ವಾಸ್ತವ ಅನ್ನುವ ಅರಿವನ್ನು ಒಪ್ಪಿಕೊಳ್ಳುವುದು, ಸ್ವತಃ ಅಂಗೀಕರಿಸುವುದು.

ಇಲ್ಲಿ ಕೆಲವೊಂದು ಉದಾಹರಣೆಗಳನ್ನು ನೋಡೋಣ. ಇವು ಬೇರೆ-ಬೇರೆಯ ಹಂತಗಳಲ್ಲಿ ಆಗುವ ಪ್ರತಿಕ್ರಿಯೆಗಳ ಬಗ್ಗೆ ತಿಳಿಸುತ್ತವೆ.

ಮಗು ಮೊದಲನೆಯದಾಗಿ ಶಾಲೆಗೆ ಹೋಗುವಾಗ: (ಮನೆಯಿಂದ ಅಗಲಿಕೆ): 
ಪ್ರತಿ ತಂದೆ-ತಾಯಿಯ ಜೀವನದಲ್ಲಿ ಇಂದೊಂದು ಪ್ರಮುಖ ಘಟನೆ. ಅಲ್ಲಿಯ ತನಕ ಮಗುವಿಗೆ ಮನೆ, ಅಪ್ಪ, ಅಮ್ಮ, ಅಜ್ಜ, ಅಜ್ಜಿ, ಮನೆಯ ಅಂಗಳ, ತನ್ನ ಆಟದ ಸಾಮಾನು ಇವೆ ಪ್ರಪಂಚ. ಇವುಗಳ ಸುರ್ಪದಿಯಲ್ಲೇ ಅದು ಬೆಳೆದಿರುತ್ತದೆ. ಇದು ಅದರ ಸುಭದ್ರ ಕೋಟೆ. ಶಾಲೆಯಲ್ಲಿ ಎಲ್ಲವು ಹೊಸತು, ಎಲ್ಲರು ಹೊಸಬರು – ಅಲ್ಲಿಯ ಗೋಡೆ, ಎಲ್ಲರೊಂದಿಗೆ ಹಂಚಿಕೊಳ್ಳಬಹುದಾದ ಆಟದ ಸಾಮಾನುಗಳು, ಟೀಚರ್, ಬೇರೆ ಮಕ್ಕಳು. ಶಾಲೆಗೆ ಹೋಗಬೇಕಾದರೆ ಅದು ತನ್ನ ಹಳೆಯ ಸಂಬಂಧವನ್ನು ಕಳಚಿಕೊಳ್ಳಲೇ ಬೇಕು. ಮೊದಮೊದಲು ಅದು ತಿರಸ್ಕರಿಸುತ್ತದೆ. ಅದರ ಶಾಲೆ-ಬೇಡ ಅನ್ನುವ ಹಠವೇ ಅಧಿಕ. ಪ್ರತಿದಿನ ಶಾಲೆಗೆ ಹೋಗಿ ಬಂದ ಮೇಲೆ, ಇದೆ ಕೊನೆ ಏನೋ ಮಟ್ಟಿಗೆ ಅದು ಖುಷಿಯಾಗಿರುತ್ತೆ.

ಈ ಶಾಲೆಗೇ ಹೋಗುವ ಕ್ರಿಯೆ ಹೀಗೆ ದಿನವೂ ನಡೆದಾಗ, ಅದು ಸಿಟ್ಟು ತೋರಿಸಲು ಶುರು ಮಾಡುತ್ತದೆ – ಕಿರುಚುವುದು, ಕಚ್ಚುವುದು, ಸಾಮಾನುಗಳನ್ನು ಬಿಸಾಡುವುದು. ಇದು ಮುಂದುವರಿದಂತೆ, ಶಾಲೆಗೆ ಹೋಗಿ ಬಂದ ಮೇಲೆ ಚಾಕ್ಲೆಟ್, ಐಸ್ ಕ್ರೀಮ್, ಹೊಸ ಆಟದ ಸಾಮಾನು ಪಡೆಯುತ್ತ ಅಥವಾ ಅವು ಸಿಗುತ್ತವ ಅನ್ನುವ ಆಸೆಯಲ್ಲಿ ಹೋಗಿ ಬರುತ್ತಿರುತ್ತದೆ. ಕೆಲವೊಮ್ಮೆ ಶಾಲೆಯ ವಾತಾವರಣಕ್ಕೆ ಹೊಂದಾಣಿಕೆಯಾಗದ ಮಕ್ಕಳು ಮಂಕು ಬಡಿದ  ಹಾಗೆ ಮೌನಿಗಳಾಗಿ ಬಿಡುತ್ತವೆ, ಬಿಟ್ಟು-ಬಿಟ್ಟು ಜ್ವರ ಬರುವುದು ಆಗುತ್ತಿರುತ್ತದೆ. ಆದರೆ ಬಹಳಷ್ಟು ಮಕ್ಕಳು ಈ ಹಂತದಲ್ಲಿ ಬಹಳ ಹೊತ್ತು ಇರುವುದಿಲ್ಲ. ಅಂತಿಮವಾಗಿ ಅದು ಸಂಪೂರ್ಣವಾಗಿ ಶಾಲೆಗೇ ಹೊಂದಿಕೊಂಡು ಬಿಡುತ್ತದೆ. ಇದು ಅದರ ಸಾಮಾಜಿಕ ಜೀವನಕ್ಕೆ ನಾಂದಿಯಾಗುತ್ತದೆ. ಈ ಹಂತಗಳನ್ನು ಸಾಗಿ ಹೋಗುವಾಗ, ಹಂತ-ಹಂತವಾಗಿ  ಹೊಸ ಟೀಚರ್, ಹೊಸ ಗೆಳೆಯ-ಗೆಳತಿಯರು, ಹೊಸ ವಾತಾವರಣ, ಹೊಸ ಅಕ್ಷರಗಳು, ಹೊಸ ಹಾಡುಗಳು, ಹೊಸ ಡಾನ್ಸ್ ಎಲ್ಲವು ಅದರ ಜೀವನದ ಅಂಗವಾಗಿಬಿಡುತ್ತವೆ.

ಸಂಬಂಧವನ್ನು ಕಳೆದುಕೊಂಡಾಗ:
ಇಲ್ಲಿ ಯಾವುದೇ ಸಂಬಂಧದ ಅಗಲಿಕೆ ಆಗಿರಬಹುದು, ಸಾವು, ಡೈವೋರ್ಸ್, ಜಗಳ ಹಾಗೂ ವಿಮನಸ್ಸಿನಿಂದ ಅಗಲುವಿಕೆ ಹೀಗೆ ಹಲವಾರು. ಕೆಲವು ಪ್ರಮುಖ ಸಂಬಂಧಗಳ ಸುತ್ತ-ಮುತ್ತವೆ ನಮ್ಮ ಜೀವನ ಹೆಣೆದು ಕೊಂಡಿರುತ್ತದೆ. ಗಂಡನ ಸಾವಿನ ಉದಾಹರಣೆಯನ್ನು ಪರಿಗಣಿಸೋಣ: ಮೊದಮೊದಲು ಅವರು ತೀರಿಕೊಂಡಿದ್ದಾರಾ ಅನ್ನೋದನ್ನೇ ೪-೫ ಸಲ ಪರೀಕ್ಷಿಸುತ್ತೇವೆ. ಇನ್ನೊಮ್ಮೆ ನೋಡಿ ಅನ್ನುವ ಭರವಸೆ. ಕೆಲವೊಮ್ಮೆ ಸುದ್ದಿ ಕೇಳಿದಾಗ – ನಿಜವಾಗ್ಲೂ?,  ಸುಮ್ನೆ ತಮಾಷೆ ಮಾಡಬೇಡಿ ಅಥವಾ ದಂಗು ಬಡಿದವರ ಹಾಗೆ ಸುಮ್ಮನಾಗಿ ಬಿಡುವುದು. ನಂತರ, ಯಾಕೆ ಹೀಗೆ ನನ್ನ ಬಿಟ್ಟು ಹೋದರೆಂದು ಸಿಟ್ಟು, ಎಷ್ಟೋ ಕೆಲಸಗಳು (ಮನೆಯ ಆಸ್ತಿ, ಮಕ್ಕಳ ಮದುವೆ) ಅರ್ಧಕ್ಕೆ ಉಳಿದವು ಅನ್ನುವ ಸಿಟ್ಟು, ಅಸಹಾಯಕತೆ ಕಾಣಿಸುತ್ತದೆ.


ನಂತರದಲ್ಲಿ, ಸ್ವಲ್ಪ ಸಿಹಿ ತಿನ್ನೋದು ಕಡಿಮೆ ಮಾಡಿದ್ದರೆ, ಸ್ವಲ್ಪ ಬೇಗನೆ ಡಾಕ್ಟರ್ ಹತ್ರ ಕರ್ಕೊಂಡು ಹೋಗಿದ್ದರೆ, ಒಂದೇ ಒಂದು ಸಲ ಅವರನ್ನು ನಗುತಾ ಮಾತಾಡಿರಬೇಕಿತ್ತು, ಒಮ್ಮೆ ನನಗೆ ಕನಸಲ್ಲಿ ಬಂದು ಮಾತಾಡಿದರೆ ಹೀಗೆ ಹಲವಾರು ಯೋಚನೆಗಳು. ನಂತರ, ಛೇ! ಅವರಿಲ್ಲದ ಈ ಜೀವನಕ್ಕೆ ಅರ್ಥ ಆದರೂ ಏನು? ಏನ್ ಮಾಡಿದ್ರೆ ಏನು, ಬಿಟ್ರೆ ಏನು? ಊಟ, ನಿದ್ರೆ, ಹವ್ಯಾಸ, ಸಂಬಂಧಿಕರಲ್ಲಿ ಸಂಪರ್ಕ ಯಾವುದರಲ್ಲೂ ಆಸಕ್ತಿಯ ಕಳೆದುಕೊಳ್ಳುವುದು. ಕೊನೆಗೆ, ಇದು ಜೀವನದ ಪಯಣದ ಒಂದು ಭಾಗ, ಋಣ ಇಲ್ಲಿಯ ತನಕವಿತ್ತು ಎನ್ನುವುದನ್ನು ಒಪ್ಪಿಕೊಂಡು ಮಗ, ಮಗಳು, ಅಳಿಯ, ಸೊಸೆ, ಮೊಮ್ಮಕ್ಕಳು, ಸಂಬಂಧಿಕರಗಳ ಜೊತೆ ಹೆಚ್ಚು ಹೆಚ್ಚು ಬೆರೆಯುತ್ತಾ, ಅವರ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುತ್ತ ಅವರುಗಳಲ್ಲಿ ಹೆಚ್ಚು-ಹೆಚ್ಚು ಒಂದಾಗುತ್ತೇವೆ.

ವಸ್ತುವಿನ ಅಗಲಿಕೆ:
ಈ ಅಗಲಿಕೆ ನಿರ್ಜೀವ ವಸ್ತುವಿನ ಜೊತೆಗೂ ಆಗಬಹುದು. ಬೆಲೆಬಾಳುವ ವಸ್ತುವನ್ನು ಕಳೆದು ಕೊಂಡಾಗ, ಭಾವನಾತ್ಮಕವಾಗಿ ಬೆಸೆದುಕೊಂಡಿರುವ ವಸ್ತುಗಳನ್ನು ಬಿಡಬೇಕಾದಾಗ, ಒಂದು ಪ್ರದೇಶವನ್ನು ಬಿಟ್ಟು ಹೋಗುವಾಗ, ಬೇರೆ ಮನೆಗೆ ಹೋಗುವಾಗ, ಹಾಗೆಯೇ ಇಟ್ಟ – ನಮ್ಮ ಮಕ್ಕಳು ಶಿಶುಗಳಾಗಿರುವಾಗಿನ ಬಟ್ಟೆ, ಅಜ್ಜಿಯ ಸೀರೆ, ಹಳೆಯ ಪುಸ್ತಕ ಹೀಗೇ ಹಲವಾರು.

ಹಣವಿರುವ ಪರ್ಸ್, ವ್ಯಾನಿಟಿ ಬ್ಯಾಗ್ ಅಥವಾ ಮೊಬೈಲ್ ಕಳೆದು ಕೊಂಡಾಗ, ಮೊದಮೊದಲು ಅದನ್ನು ಬಹಳಷ್ಟು ಹುಡುಕುತ್ತೇವೆ. ಹೊರಗೆ ಕಳೆದು ಕೊಂಡಿದ್ದರು, ಮನೆಯಲ್ಲೇ ಬಿಟ್ಟಿವೆನೋ, ಆಫೀಸಲ್ಲಿ ಬಿಟ್ಟಿವೆನೋ ಅಂತ ಮತ್ತೊಮ್ಮೆ ಹೋಗಿ ನೋಡುತ್ತೇವೆ. ನಾನು ಕಳೆದು ಕೊಂಡಿರಲು ಚಾನ್ಸ್ ಇಲ್ಲಾ ಅನ್ನೋ ಬಲವಾದ ನಂಬಿಕೆಯಲ್ಲಿಯೇ ಇರುತ್ತೇವೆ. ನಂತರ ನಮ್ಮ ಮೇಲೆ ನಮಗೆ ಸಿಟ್ಟು, ಯಾರೋ ಅವಸರ ಮಾಡಿದಕ್ಕೆ ಅವರ ಮೇಲೆ ಸಿಟ್ಟು, ಅದೇ ಸಮಯದಲ್ಲಿ ಯಾರಾದರೂ ಏನಾದರು ಕೇಳಿದರೆ ಅವರ ಮೇಲೆ ಸಿಟ್ಟು, ಜನರು ಯಾಕೆ ಕಳ್ಳತನ (ಕಳುವಾದಲ್ಲಿ) ಮಾಡುತ್ತಾರೆ, ಅವರಿಗೆ ಮನಸಾಕ್ಷಿ ಇರೋಲ್ವಾ? ಅನ್ನುವ ಸಿಟ್ಟು. ನಂತರ, ಅಯ್ಯೋ ದೇವರೇ ಹೇಗಾದರೂ ಮಾಡಿ ಇದು ಸಿಗುವ ಹಾಗೆ ಮಾಡಪ್ಪ ಅಂತ ಕೇಳಿಕೊಳ್ಳುತ್ತೇವೆ, ಅಥವಾ ಯಾರಾದರೂ ಇದನ್ನು ತಿರುಗಿಸಿ ಕೊಟ್ಟರೆ ಅವರಿಗೆ ಬಹುಮಾನ ಕೊಡುವ ಯೋಚನೆ. ಕೆಲವೊಮ್ಮೆ, ನಾನು ಹಿಂದೆ ಮಾಡಿದ  ತಪ್ಪಿಗೆ ಇದು ಶಿಕ್ಷೆ ಆಗಿದೆ ಅನ್ನುವ ಯೋಚನೆ. ಯಾರ ಸಹಾಯವು ದೊರಕದಿದ್ದಾಗ, ಕಳೆದುಕೊಂಡಿದ್ದರ ಬಗ್ಗೆ ಖಿನ್ನತೆ, ಬೇಜಾರು, ಊಟ ಮಾಡಲು, ನಿದ್ದೆ ಮಾಡಲು ಆಗದಿರುವುದು. ಕೊನೆಗೆ – ಇದು ಇನ್ನು ಕಳೆದು ಹೋಗಿದೆ ಅಂತ, ಒಪ್ಪಿಕೊಂಡು ಕಳೆದು ಹೋದ ಹಣವನ್ನು ಮತ್ತೆ ಗಳಿಸುವ ರೀತಿ, ಹೊಸ ಪರ್ಸ್ ಅಥವಾ ಮೊಬೈಲ್ ಅನ್ನು ಕೊಂಡುಕೊಳ್ಳಲು ನಿರ್ಧರಿಸುತ್ತೇವೆ.

ಸದ್ಯದ ಕೊರೊನ ವೈರಸ್ ಗೆ ನಾವು ಪ್ರತಿಕ್ರಿಯಿಸುತ್ತಿರುವ ರೀತಿ (ಆರೋಗ್ಯ ಹಾಗೂ ಶಾಂತತೆಯಿಂದ ಅಗಲಿಕೆ):
ಬಹಳಷ್ಟು ಜನ ತಮಗೆ ಇದು ಬರುವುದಿಲ್ಲ, ಬಂದಿಲ್ಲ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅದಕ್ಕೆ ಸರ್ಕಾರ ಎಷ್ಟೇ ಹೇಳಿದರು ಜನ ಗುಂಪುಗಳಲ್ಲಿ ಬರುವುದು, ಹೊರಗಡೆ ತಿರುಗುವುದು ಮಾಡುತ್ತಲೇ ಇದ್ದಾರೆ. ಇವರ ಮೂಲ ನಂಬಿಕೆ – ಎಲ್ಲರಿಗೂ ಆಗಬಹುದು, ನನಗೆ ಆಗುವುದಿಲ್ಲ ಅನ್ನುವುದೇ. ಇನ್ನು ಕೆಲವರು – ಈ ಚೀನಾದವರು ತಿನ್ನೋದು ಇರಲಿ ನಾವೆಲ್ಲಾ ಅನುಭವಿಸಬೇಕು, ಏರ್ಪೋರ್ಟ್ ನಲ್ಲಿ ವಿಮಾನಗಳನ್ನು ನಿಲ್ಲಿಸೋ ಬದಲು, ನಮಗಿಲ್ಲಿ ಹೊರಗೇ ಹೋಗಬೇಡಿ ಅನ್ನೋದು ಏನು ನ್ಯಾಯ? ಅನ್ನೋ ಸಿಟ್ಟಲಿ ಇದ್ದಾರೆ. ಮೋದಿ, ಸ್ವಲ್ಪ ಮೊದಲೇ ಈ ಹೋಂ ಕ್ವಾರಂಟೈನ್ ತರಬೇಕಿತ್ತು, ಸ್ವಲ್ಪ ಮೊದಲೇ ಈ ವಿದೇಶದಿಂದ ಬರುವವರನ್ನು ನಿಲ್ಲಿಸಬೇಕಿತ್ತು, ಬರಿ ಹೋಂ ಕ್ವಾರಂಟೈನ್ ನಿಂದ ಏನಾಗುತ್ತೆ, ಆಸ್ಪತ್ರೆ ಹಾಗೂ ಸೌಕರ್ಯ ಕೊಡಬೇಕು ಎನ್ನುವ ಯೋಚನೆ ಗಳಲ್ಲಿ ಕೆಲವರು ಇದ್ದಾರೆ. ಇನ್ನು ಇಟಲಿಯಲ್ಲಿ ಅಲ್ಲಿನ ಕೆಲವು ನಾಗರಿಕರು ಕೈ ಚೆಲ್ಲಿ, ಅಸಹಾಯಕರಾಗಿ ಕುಳಿತಿದ್ದಾರೆ, ಜನರನ್ನು ಸಾಯಲು ಬಿಡುತ್ತಿದ್ದಾರೆ. ಇದರ ಕೊನೆಯ ಹಂತದಲ್ಲಿ ಜಗತ್ತು ಹೇಗೆ ಇದನ್ನು ಸ್ವೀಕರಿಸುತ್ತೆ ಅನ್ನುವುದನ್ನು ನಾವು ನೋಡಬೇಕು.

ಕೆಲವೊಂದು ಅಗಲಿಕೆಗಳು ಪೂರ್ವಸಿದ್ಧತೆಯಾಗಿರುತ್ತವೆ. ಉದಾಹರಣೆಗೆ, ಮನೆಯಲ್ಲಿ ವಯಸ್ಸಾದವರು ಅಗಲಿದಾಗ ಇದು ಅಷ್ಟೊಂದು ತೀವ್ರವಾಗದಿರಬಹುದು, ಏಕೆಂದರೆ, ಈ ಸೃಷ್ಟಿಯ ನಿಯಮಕ್ಕೆ ಎಲ್ಲರೂ ಸಿದ್ಧರಾಗಿರುತ್ತಾರೆ. ಈ ಅಗಲಿಕೆಯ ಅನುಭವ ದೈನಂದಿಕ ಜೀವನದಲ್ಲೂ ಆಗಬಹುದು. ಉದಾಹರಣೆಗೆ, ಆಫೀಸಿನಿಂದ ಮನೆಗೆ ಬಂದ ಮೇಲೆ, ಆಫೀಸಿನ ವಿಚಾರಗಳಿಂದ ಇನ್ನು ಅಗಲಿಕೆ ಆಗಿರುವುದಿಲ್ಲ, ಅಲ್ಲಿಯ ಸಿಟ್ಟು, ಭಯ, ಏನ್ ಮಾಡಿದರೆ-ಏನ್ ಆಗಬಹುದು ಅನ್ನುವ ಯೋಚನೆ, ಹೀಗೆ ಅದರ ಗುಂಗಿನಲ್ಲೇ ಇರುತ್ತಾನೆ. ಎಲ್ಲಿಯತನಕ ಆಫೀಸಿನಿಂದ ಅಗಲಿಕೆ ಆಗುವುದಿಲ್ಲವೋ ಅಲ್ಲಿಯ ತನಕ ಊಟ, ಮನೆಯವರೊಂದಿಗೆ, ಮಕ್ಕಳೊಂದಿಗೆ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು ಕಷ್ಟ.  ಈ ರೀತಿ ಕೆಲವೊಂದು ಅಗಲಿಕೆಗಳು ಬೆಳವಣಿಗೆಗೆ ಪೂರಕವಾಗಿವೆ.

ಹೀಗೆ, ಪ್ರತಿ ಅಗಲುವಿಕೆಯಲ್ಲಿ ವಿವಿಧ ಹಂತಗಳ ಮೂಲಕ ಪ್ರತಿ ವ್ಯಕ್ತಿಯೂ ಚಲಿಸುತ್ತಾನೆ. ಹೊಸ ಸಂಬಂಧಗಳ ಆಗಮನ, ಕೊನೆಯ ಹಂತದಲ್ಲಿ ಆಗಿರಬೇಕಂತಿಲ್ಲ. ಪ್ರತಿ ಹಂತಗಳಲ್ಲಿ ಮುಂದುವರಿಯುತ್ತಿದ್ದಂತೆ, ಹೊಸ ಸಂಬಂಧ ಹುಟ್ಟಿಕೊಳ್ಳುತ್ತಾ-ಕಟ್ಟಿಕೊಳ್ಳುತ್ತಾ ಹೋಗುತ್ತದೆ. ಕೆಲವೊಮ್ಮೆ ಇವೆಲ್ಲ ಹಂತಗಳನ್ನೂ ಕೆಲವೇ ದಿವಸಗಳಲ್ಲಿ ಕಳೆದು ಬಿಟ್ಟರೆ, ಕೆಲವೊಮ್ಮೆ ವರ್ಷಗಳೇ ತಗಲಬಹುದು. ಇದು ಆ ಅಗಲಿಕೆಯ ತೀವ್ರತೆಯ ಮೇಲೆ, ಇದನ್ನು ಅನುಭವಿಸುತ್ತಿರುವ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ನಿರ್ಭರಿಸಿರುತ್ತದೆ. ಈ ಹಂತಗಳ ಅರಿವಿದ್ದಲ್ಲಿ, ಅಗಲಿಕೆಯ ನೋವನ್ನು ಅನುಭವಿಸುತ್ತಿರುವ ವ್ಯಕ್ತಿ ವೃಥಾ – “ನಾನೇಕೆ ಹೀಗೆ?” ಅಂತ ಟೀಕಿಸಿಕೊಳ್ಳುವುದರ ಬದಲು, ತನ್ನ ಮೇಲೆ ಅನುಭೂತಿ ಬೆಳೆಸಿಕೊಳ್ಳುತ್ತಾನೆ. ಹಾಗೆಯೇ ಸಾಕಷ್ಟು ಸಮಯ ಒಂದೇ ಹಂತದಲ್ಲಿ ನಿಂತುಕೊಂಡಲ್ಲಿ, ಮನೋವೈದ್ಯರ ಸಲಹೆ ಪಡೆಯುವಲ್ಲಿ ದಿಕ್ಸೂಚಿಯಾಗುತ್ತದೆ. ಹಾಗೂ, ಇದೆ ರೀತಿ ಬೇರೆಯವರು ಅಗಲಿಕೆಯ ನೋವನ್ನು ಅನುಭವಿಸುತ್ತಿದ್ದಾಗ ಅವರಿಗೆ ಸಹಕರಿಸಲು, ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಸುಖಾ ಸುಮ್ಮನೆ – “ಎಷ್ಟು ದಿನ ಅಂತ ಹೀಗೆ ಇರ್ತೀಯ?” ಅನ್ನುವ ಮಾತುಗಳನ್ನು ಎಚ್ಚರಿಕೆಯಿಂದ ಆಡುವ ಹಾಗೆ ಮಾಡುತ್ತದೆ.

ನಿಮ್ಮ ಜೀವನದ ಯಾವುದೇ ಅಗಲಿಕೆಯ ಘಟನೆಗಳಿದ್ದರೆ ಮೇಲಿನ ಯಾವ ಹಂತದಲ್ಲಿದಿರಿ ಅನ್ನುವುದನ್ನು ನೋಡಿಕೊಳ್ಳಿ.  ನಿಮಗೆ ಬೇಕಾದಷ್ಟು ಸಮಯ ಕೊಟ್ಟುಕೊಳ್ಳಿ. ಆದರೆ ಒಂದೇ ಹಂತದಲ್ಲಿ ಸಾಕಷ್ಟು ಸಮಯ ಕಳೆದಿದ್ದರೆ (ಅಂತ ನಿಮಗೆ ಅನಿಸಿದರೆ) ಮನೋವೈದರ ನೆರವು ಪಡೆಯಿರಿ. ಕೇವಲ ಈ ಹಂತಗಳ ಬಗ್ಗೆ ಅರಿವಿದ್ದಲ್ಲಿ, ಅದು ಎಷ್ಟೋ ನೆರವಾಗುತ್ತದೆ.

‍ಲೇಖಕರು nalike

May 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Pavanesh

    ತುಂಬಾ ಚೆನ್ನಾಗಿ ವಿವರಿಸಿದ್ದಿರಾ ಕಿರಣ ಅವರೆ 

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: