ಕಥೆ: ಹೀಗಾಯ್ತು..

 ರವಿಶಂಕರ್ ಪಾಟೀಲ್

ಅಂಥದೊಂದು ಸಂದೇಶವನ್ನು ರಾಮಚಂದ್ರ ಖಂಡಿತಾ ನಿರೀಕ್ಷಿಸಿರಲಿಲ್ಲ.

‘ಈಗ ಸಮಯ ಏಳೋ ಎಂಟೋ ಆಗಿರಬಹುದು. ಇನ್ನೇನು ಅವರು ಅಲ್ಲಿಂದ ಹೊರಟು ಬರಬಹುದು. ಇಲ್ಲಿಗೆ ಬಂದು ತಲುಪುವಷ್ಟರಲ್ಲಿ ಒಂಭತ್ತೋ ಹತ್ತೋ ಆಗಬಹುದು. ಮನೆಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಯಾಗಿದೆ. ಒಂದು ಒಳ್ಳೆಯ ಡ್ರಿಂಕ್, ಒಂದು ರುಚಿಕಟ್ಟಾದ ಡಿನ್ನರ್, ಇನ್ನೊಂದಿಷ್ಟು ಹರಟೆ ಇವೇ ಅವರ ತಲೆಯಲ್ಲಿ ಹರಿದಾಡುತ್ತಿರುವ ಹುಳುಗಳಾಗಿರಬಹುದಲ್ಲವೇ?’ ರಾಮಚಂದ್ರ ತನ್ನಷ್ಟಕ್ಕೆ ತಾನೇ ಲೆಕ್ಕಾಚಾರ ಹಾಕಿಕೊಳ್ಳತೊಡಗಿದ್ದ. ಹೇಳಿದಂತೆ ರಾಮಚಂದ್ರನೂ ಮನೆಯಲ್ಲಿ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದ; ಹೆಚ್ಚಾಗಿ ಅವನ ಹೆಂಡತಿಯೇ ಅನ್ನಬೇಕು.

ರಾಮಚಂದ್ರನ ಹೆಂಡತಿ ಕಲ್ಪನಾ ಕಲ್ಪಿಸುವುದು ಮಾಡುವುದೂ ಎಲ್ಲಾ ಒಂದೇ ಆಗಿರುತ್ತಿದ್ದವು. ಸಂಜೆಯ ಡಿನ್ನರಿಗೆ ನಾನ್‍ವೆಜ್, ಅನ್ನ, ತಿಳಿಸಾರು ಮತ್ತೆಲ್ಲವನ್ನು ತಯಾರು ಮಾಡಿಟ್ಟುಕೊಂಡು ಅವರಿಗಾಗಿ ಕಾಯುತ್ತಾ ಕೂತಿದ್ದಳು. ಪತಿರಾಯ ರಾಮಚಂದ್ರನ ಮುದ್ದು ಮುದ್ದಾದ ಸಖಿ. ಮಾತಿಗೆ ಮಾತು, ಕೆಲಸಕ್ಕೆ ಕೆಲಸ; ರಾಮಚಂದ್ರನ ಮಾತು ಮೀರುವುದುಂಟೇ… ಅವನ ಕಿನ್ನರಿ? “ಲೇ ಕಲ್ಪೀ, ನಾಳೆ ಡಿನ್ನರಿಗೆ ನನ್ನ ಬಾಲ್ಯದ ಗೆಳೆಯ ಮತ್ತವನ ಹೆಂಡತಿ ಬರುತ್ತಿದ್ದಾರೆ. ಯಾವುದಕ್ಕೂ ಕೊರತೆಯುಂಟಾಗಬಾರದು. ಒಳ್ಳೆಯ ಅಡಿಗೆಯನ್ನು ಮಾಡಿ ಗೌರವದಿಂದ ನೋಡಿಕೊಳ್ಳಬೇಕು” –ರಾಮಚಂದ್ರ ಹೆಂಡತಿಗೆ ಮೊದಲೇ ಹೇಳಿದ್ದ.

ನೆನ್ನೆಯಷ್ಟೇ ಕರ್ನಾಟಕ ಲೋಕಸೇವಾ ಆಯೋಗದ ಕಚೇರಿಯಿಂದ ಬಂದಿದ್ದ ಮೆಸೇಜು ರಾಮಚಂದ್ರನ ಇನ್‍ಬಾಕ್ಸಿನಲ್ಲಿ ಇನ್ನೂ ಕುಲು ಕುಲು ನಗುತ್ತಿತ್ತು. ‘ಜಾಡಿಸಿ ಒದ್ದು ಬಿಡಬೇಕು ಆ ಮೆಸೇಜಿನ ನಗುವನ್ನು. ತನ್ನನ್ನು ಈ ಪರಿ ಘಾಸಿಗೊಳಿಸಿ ಹಂಗಿಸುತ್ತಿರುವ ಆ ಕುಹಕ ನಗುವನ್ನು; ತನ್ನ ಗ್ರಹಚಾರ ಮತ್ತು ಇಲಾಖೆಯ ಇಬ್ಬಂದಿತನ -ಹಾಗೇ ಎಲ್ಲವನ್ನು ಜಾಡಿಸಿ ಒದ್ದು ಬಿಡಬೇಕು. ಸರ್ಕಾರ, ಅದರ ಸ್ವಾರ್ಥ, ಮತ್ತದರ ಭ್ರಷ್ಟತೆ -ಎಲ್ಲವೂ ಬರೀ ಡೋಂಗಿತನ; ತನ್ನದು ಪ್ರಾಮಾಣಿಕತೆ, ಸರ್ಕಾರದ್ದು ಭ್ರಷ್ಟತೆ, ಸ್ವಾರ್ಥ -ದೇಶದ್ದಂತೂ ದರಿದ್ರ ರೋಗ’ -ಎಲ್ಲವೂ… ಎಲ್ಲವೂ ರಾಮಚಂದ್ರನ ಇನ್‍ಬಾಕ್ಸಿನಲ್ಲಿ ಕುಹಕ ನಗುತ್ತಿದ್ದವು.


‘ಹೆಡಕು ಮುರಿದು ಬಿಡಬೇಕು ಸರ್ಕಾರದ್ದು; ವ್ಯವಸ್ಥೆಯದ್ದು’ ದೇಶದ ಕರ್ರಪ್ಶನ್ ಮೇಲೆ ರಾಮಚಂದ್ರನಿಗೆ ವಾಕರಿಕೆ. ಕಳೆದಿರುಳಿನಿಂದ ರಾಮಚಂದ್ರ ಕಂಗಾಲಾಗಿ ಕೂತಿದ್ದ. ಇಂಥದೊಂದು ಸಂದೇಶವನ್ನು ಇಲಾಖೆಯಿಂದ ಆತ ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ. “ಕರ್ನಾಟಕ ಲೋಕಸೇವಾ ಆಯೋಗವು ಈ ಬಾರಿಯ ಗೆಜೆಟೆಡ್ ಪ್ರೋಬೇಶನರಿ ಆಫೀಸರ್ ಹುದ್ದೆಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳ ನೇಮಕಾತಿ ಆದೇಶಗಳನ್ನು ಕಾರಣಾಂತರಗಳಿಂದ ರದ್ದುಪಡಿಸಿರುತ್ತದೆ” ಇದಕಿಂತಲೂ ದೊಡ್ಡ ಆಘಾತವೊಂದು ರಾಮಚಂದ್ರನಿಗೆ ಕಳೆದ ಎರಡು ಮೂರು ದಿನಗಳ ಹಿಂದೆಯಷ್ಟೇ ಸ್ವತಃ ತನ್ನ ಗೆಳೆಯನಾದ ನೀಲಕಂಠನಿಂದಲೇ ಬಂದಿತ್ತು.

“ಲೋ ರಾಮ್ಯಾ, ಹ್ಯಾಗಿದ್ದೀಯೋ? ಕಳೆದ ಮೂರ್ನಾಲ್ಕು ವರ್ಷಗಳಿಂದ ನೀನು ಬೆಂಗಳೂರಿನಲ್ಲೇ ನೆಲೆಸಿದ್ದೀಯಂತೆ? ಮನೋಜ್ ನಿನ್ನ ನಂಬರ್ ಕೊಟ್ಟ. ಅದೇನೋ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸಾಗಿಬಿಟ್ಟಿದ್ದೀಯಂತೆ? ಎಷ್ಟು ವರ್ಷಗಳಾಯ್ತೋ ನಿನ್ನ ನೋಡಿ? ಹಾಂ… ಇನ್ನೊಂದು ವಿಷಯ -ನೀನು ಕಾಲೇಜಿನಲ್ಲಿ ಪ್ರೀತಿಸುತ್ತಿದ್ದೆಯಲ್ಲ, ನಿರ್ಮಲಾ… ಅವಳೇ ಕಣಯ್ಯಾ ನನ್ನ ಹೆಂಡತಿ? ನಿನ್ನ ಮದಿರೆ ಈಗ ನನ್ನ ಪತ್ನಿ. ನಾನೀಗ ಖಾಸಗೀ ಕಂಪನಿಯೊಂದರಲ್ಲಿ Marketing Executive ತಿಂಗಳಿಗೆ ಅರವತ್ತು ಸಾವಿರ ಸಂಬಳ. ಸುಖವಾಗಿದೆ ನಮ್ಮ ಬದುಕು. ಕಾರು, ಬಂಗ್ಲೆ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲಾ. ಎಲ್ಲಾ ಇದೆ ನಮಗೆ. ದೇವರ ಶಾಪ; ಮಕ್ಕಳು ಮಾತ್ರ ಆಗಲಿಲ್ಲ. ಹೋಗ್ಲಿ ಬಿಡು. ನೀನು ಹೇಗಿದ್ದೀಯಾ? ಏನ್ ಸಮಾಚಾರ? ಮದುವೆ ಆಯ್ತೋ ಹೇಗೊ?” ನೀಲಕಂಠನ ಗೆಳೆತನ ಇನ್ನೂ ಹಾಗೇ ಅನ್ನಿಸಿತು ರಾಮಚಂದ್ರನಿಗೆ. ಇಬ್ಬರೂ ಒಂದೇ ರೂಮಿನಲ್ಲಿ ಓದುತ್ತಿದ್ದರು; ಪ್ರಾಣಕ್ಕೆ ಪ್ರಾಣ ಕೊಡುವ ನಿಷ್ಠೆ ಅವರ ಗೆಳೆತನದಲ್ಲಿ. ‘ಒಂದು ಚೂರೂ ಬದಲಾಗಿಲ್ಲ ಈ ನೀಲ್ಯಾ?” ರಾಮಚಂದ್ರನಿಗನ್ನಿಸಿತ್ತು.

“ಚನ್ನಾಗಿದ್ದೀನಿ ಕಣೋ? ಹೆಂಡತಿ ನಾನು ಇಲ್ಲೇ ಇದ್ದೀವಿ. ಅವಳು ಬ್ಯಾಂಕೊಂದರಲ್ಲಿ ಕ್ಲರ್ಕಾಗಿ ದುಡೀತಿದ್ದಾಳೆ; ನಾನು ಮೊನ್ನೆಯಷ್ಟೇ ಕೆಎಎಸ್ ಪರೀಕ್ಷೆ ಪಾಸು ಮಾಡಿ ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾದೆ. ಇನ್ನೇನು ಎರಡು ಮೂರು ತಿಂಗಳಲ್ಲಿ ತರಬೇತಿಗೆ ಹೋಗಬೇಕು. ದೇವರ ಇಚ್ಛೆ, ಹೇಗೋ ಓದಿ ಓದಿ ಕೊನೆಗೂ ಆಯ್ಕೆಯಾದೆ. ಇಲ್ಲದಿದ್ದರೆ ಹೆಂಡತಿಯ ದುಡಿಮೆಯಲ್ಲಿಯೇ ಬದುಕ ಬೇಕಾಗುತ್ತಿತ್ತು” ರಾಮಚಂದ್ರ ಪ್ರತಿಯಾಗಿ ಉತ್ತರಿಸಿದ್ದ. ಗೊತ್ತಾಯ್ತು; ಪಾರ್ಟಿ ಯಾವಾಗ ಕೊಡಿಸುತ್ತೀಯಾ? ನಿನ್ನ ಮದಿರೆಯನ್ನು ಕರೆದುಕೊಂಡು ಬರುತ್ತೇನೆ. ಅದೇ ನನ್ನ ಹೆಂಡ್ತಿ ಕಣಪ್ಪ” ನೀಲಕಂಠನ ಮಾತಿಗೆ ರಾಮಚಂದ್ರ ತಬ್ಬಿಬ್ಬಾಗಿದ್ದ. ‘ಏನೋ? ಈ ನೀಲ್ಯಾ ಒಂಚೂರೂ ಬದಲಾಗಿಲ್ಲ; ಅದೇ ತಲೆಹರಟೆ’ ಅಂದುಕೊಂಡು ಸುಮ್ಮನಾಗಿದ್ದ ರಾಮಚಂದ್ರ. “ಆಯ್ತು ಬನ್ನಿ; ಹ್ಯಾಗಿದ್ರೂ ಕೆಲಸ ಸಿಕ್ಕಿದೆಯಲ್ಲ; ಅದೇ ಖುಷಿಯಲ್ಲಿ ಪಾರ್ಟಿ” ಫೋನಿಟ್ಟಿದ್ದ ರಾಮಚಂದ್ರ.


ರಾಮಚಂದ್ರನ ತಲೆಯಲ್ಲಿ ಗೊಂದಲಗಳ ಮಹಾಪೂರ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಹಗಲಿರುಳೆನ್ನದೇ ನಿದ್ದೆಗೆಟ್ಟು ಓದಿದ್ದು ವ್ಯರ್ಥ ಪರಿಶ್ರಮವೆನ್ನಿಸಿತು ಆತನಿಗೆ. ತಹಶೀಲ್ದಾರ್ ಪೋಸ್ಟ್ ಗಿಟ್ಟಿಸಲು ಕೈಯಲ್ಲಿ ಲಕ್ಷ ಲಕ್ಷ ರೂಪಾಯಿಗಳ ಕಟ್ಟುಗಳನ್ನು ಹಿಡಿದುಕೊಂಡು ಅಲೆದದ್ದು ಮರುಜನ್ಮವನ್ನೇ ತೋರಿಸಿಬಿಟ್ಟಿತ್ತು. ಟಾಪ್‍ ಟೆನ್ನಲ್ಲಿ ರ್ಯಾಂಕ್ ಪಡೆದಿದ್ದರೂ ಲಂಚ ಕೊಡಬೇಕೆಂದರೆ ಎಂಥ ದರಿದ್ರ ವ್ಯವಸ್ಥೆ. ಮೂಟೆಗಟ್ಟಲೇ ದುಡ್ಡು ಹಿಡಿದುಕೊಂಡು ರಾಜಕಾರಣಿಗಳ ಹಿಂದೆ ಅಲೆದದ್ದು ಶುದ್ಧ ಮೂರ್ಖತನವೆನ್ನಿಸಿದ್ರೂ ಪಟ್ಟುಹಿಡಿದು ಕೆಲಸ ಗಿಟ್ಟಿಸಿದ್ದ. ಇದೀಗ ಆ ಕೆಲಸವೂ ಕೈ ಜಾರಿ ಹೋಗುತ್ತಿರುವುದು. ಸಾಲಸೋಲ ಮಾಡಿ ದುಡ್ಡು ಕೂಡಿಹಾಕಿ ಪೋಸ್ಟ್ ಗಿಟ್ಟಿಸಿದ್ದು. ಕೊಟ್ಟ ಹಣವೂ ಮರಳಿ ಬರುವುದೋ ಇಲ್ಲವೋ ಎಂಬ ಆತಂಕ ರಾಮಚಂದ್ರನನ್ನು ಸುತ್ತುವರೆದಿತ್ತು. ದುರ್ಬಲ ಮನಸ್ಸು ಎಂಥ ಆಲೋಚನೆಗಳನ್ನು ಮಾಡಲೂ ಹೇಸುವುದಿಲ್ಲ.

ರಾಮಚಂದ್ರನ ತಲೆಯೀಗ ನಿರ್ಮಲಾಳನ್ನು ನೋಡುವ ಅವಳೊಟ್ಟಿಗೆ ಮಾತನಾಡುವ ಅವಳೊಟ್ಟಿಗೆ ಸೇರುವ ಹುಚ್ಚು ಹಚ್ಚಿಸಿಕೊಂಡಂತೆ ಆಲೋಚಿಸುತ್ತಿತ್ತು. ಒಮ್ಮೆ ಅವಳನ್ನು ದೀರ್ಘವಾಗಿ ಆಲಂಗಿಸಿ ತನ್ನ ಹಳೆಯ ಪ್ರೇಮವನ್ನೆಲ್ಲ ಮತ್ತೆ ಹೊಸದಾಗಿ ಶುರು ಮಾಡಿ ಬಿಡಬೇಕೆ ಎನ್ನಿಸಿತು ಆತನಿಗೆ. ‘ಈ ದರಿದ್ರ ಚಂದ್ರ ಏತಕ್ಕಾದರೂ ಬೆಳಗುವನೋ?’ ರಾಮಚಂದ್ರ ಕಿಟಕಿಯಿಂದ ಇಣುಕುತ್ತಿದ್ದ ಬೆಳದಿಂಗಳ ಚೂರುಗಳನ್ನು ಶಪಿಸತೊಡಗಿದ್ದ. ಇನ್ನೇನು ಅವರು ಬಂದು ಬಿಡಬಹುದು. ಸದ್ಯಕ್ಕೆ ಹೆಂಡತಿಯಿಂದಲೂ ಮುಚ್ಚಿಟ್ಟಿದ್ದ ವಿಚಾರವನ್ನು ಅವರಿಂದಲೂ ಮುಚ್ಚಿಡಬೇಕು; ನೇಮಕಾತಿ ಆದೇಶ ರದ್ದಾಗಿರುವ ಆ ದರಿದ್ರ ಗುಟ್ಟನ್ನು, ಹೀಗೆ ತನ್ನಷ್ಟಕ್ಕೇ ತಾನೇ ಅಂದುಕೊಳ್ಳುತ್ತ ರಾಮಚಂದ್ರ ಕಣ್ಮುಚ್ಚಿಕೊಂಡು ಸೋಫಾದ ಮೇಲೆ ಮಲಗಿಕೊಂಡ. ಡಿನ್ನರಿಗಾಗಿ ಎಲ್ಲ ತಯಾರಿಗಳನ್ನು ಮಾಡಿಕೊಂಡ ಮೇಲೆ ಕಲ್ಪನಾ ನಿಧಾನಕ್ಕೆ ತನ್ನ ಗಂಡನ ಬಳಿಗೆ ಬಂದು ಕುಳಿತುಕೊಂಡಳು. ದೊಡ್ಡ ಆಘಾತವಾಯಿತೇನೋ ಎಂಬಂತೆ ರಾಮಚಂದ್ರ ಮರುಕ್ಷಣ ಎದ್ದು ಕುಳಿತ.

“ಲೇ ಹುಚ್ಚೀ ಇದೇನೇ ನಿನ್ ತುಂಟಾಟ” “ತುಂಟಾಟಾನೂ ಇಲ್ಲ ಎಂಥದ್ದೂ ಇಲ್ಲ… ಎದ್ದೇಳಿ; ಅವರು ಬರೋ ಹೊತ್ತಾಯ್ತು?” “ಹೌದಲ್ಲ? ಟೈಮೆಷ್ಟೀಗ? ಎಲ್ಲಾ ರೆಡಿ ಆಯ್ತಾ?” “ಹೂಂ… ಎಲ್ಲಾ ರೆಡಿ ಆಯ್ತು, ಇನ್ನೇನು ಅವರು ಬರಬೇಕು?” ಹಾಗೇ ಮಾತನಾಡುತ್ತ ರಾಮಚಂದ್ರ ಕಲ್ಪನಾಳ ತೊಡೆಯ ಮೇಲೆ ಒರಗಿದ.

ಬಾಗಿಲು ತಳ್ಳಿ ಒಳಬಂದ ನೀಲಕಂಠ ಮತ್ತವನ ಪತ್ನಿ ನಿರ್ಮಲಾಳನ್ನು ನೋಡಿದ ರಾಮಚಂದ್ರ ಒಂದು ಕ್ಷಣ ದಂಗುಬಡಿದವನಂತೆ ಕಂಡ; ನಿಧಾನಕ್ಕೆ ತನ್ನ ಹೆಂಡತಿಯ ತೊಡೆಯ ಮೇಲಿಂದ ಎದ್ದು ತನ್ನ ತಲೆಯನ್ನೊಮ್ಮೆ ಕೊಡವಿಕೊಂಡು ನಿರ್ಮಲಳತ್ತ ಹೆಜ್ಜೆ ಹಾಕತೊಡಗಿದ. ನಿರ್ಮಲ ತುಂಬು ಮೈಯಲ್ಲಿ; ಅಂದವಾದ ಸೀರೆಯಲ್ಲಿ ನಿಂತುಕೊಂಡಿದ್ದಳು. ರಾಮಚಂದ್ರ ಜಂತುವಿನಂತೆ ಅವಳ ದೇಹವನ್ನೆಲ್ಲಾ ಒಮ್ಮೆ ದಿಟ್ಟಿಸಿ ನೋಡಿದ. ಅವಳ ಕೆನ್ನೆ, ಮುಖ, ಕಿವಿ, ಸೊಂಟ, ಕಾಲು ಕೈ ಎಲ್ಲವನ್ನು ಮೂಸಿ ಮೂಸಿ ನೋಡತೊಡಗಿದ. ಆತ ಹಾಗೆ ಮೂಸಲಾರಂಭಿಸಿದಂತೆ ನಿರ್ಮಲಾಳೂ ಬಿರಿದುಕೊಂಡು ಸಹಕರಿಸತೊಡಗಿದ್ದಳು. ಮೈಗೆ ಮೈ, ತುಟಿಗೆ ತುಟಿ ಕೊಟ್ಟು ರಾಮಚಂದ್ರನೊಟ್ಟಿಗೆ ಸುಖಿಸತೊಡಗಿದ್ದಳು.

ಉತ್ಪ್ರೇಕ್ಷೆ; ನಿರ್ಮಲಾಳ ದಾಹ ರಾಮಚಂದ್ರನ ದಾಹಕ್ಕೂ ದೊಡ್ಡದಾಗಿತ್ತು. ಇದೇನು ಅಶ್ಲೀಲ ಎಂಬಂತೆ ನೀಲಕಂಠ ರಾಮಚಂದ್ರನನ್ನು ಎಳೆದವನೇ ಅವನಿಗೊಂದು ಜೋರಾದ ಗುದ್ದನ್ನು ಕೊಟ್ಟ. ಆದರೆ ನೀಲಕಂಠನನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ರಾಮಚಂದ್ರ ಅವನನ್ನು ಜೋರಾಗಿ ತಳ್ಳಿ ನಿರ್ಮಲಾಳ ಕೈಯನ್ನು ಬಿಗಿಯಾಗಿ ಹಿಡಿದು ಅಲ್ಲಿಂದ ಫಸ್ಟ್ ಪ್ಲೋರಿನಲ್ಲಿದ್ದ ಡಿನ್ನರ್ ಟೇಬಲನ್ನೂ ದಾಟಿ ಬೆಡ್‍ರೂಮಿನತ್ತ ಓಡತೊಡಗಿದ. ನಿರ್ಮಲಾ ಅವನಿಗಿಂತ ಜೋರಾಗಿ ಓಡುತ್ತಾ ಬೆಡ್‍ರೂಮಿನ ಬೋಲ್ಟನ್ನು ಹಾಕಿ ರಾಮಚಂದ್ರನ ಬಟ್ಟೆಗಳನ್ನು ಕಳಚಿ ಅವನನ್ನು ಬರಸೆಳೆದುಕೊಳ್ಳತೊಡಗಿದಳು. ಸೋಜಿಗವೆಂದರೆ ಅವಳ ದಾಹವೇ ಅವನಿಗಿಂತ ಹರಿತವಾಗಿತ್ತು. ರಾಮಚಂದ್ರ ಅವಳ ವಸ್ತ್ರಗಳನ್ನೆಲ್ಲಾ ಹರಿದುಹಾಕಿ ಅವಳ ಮೈಮೇಲೆ ದಾಳಿಮಾಡತೊಡಗಿದ. ಈ ಮಧ್ಯೆ ಬಹಳ ಸಮಯದಿಂದ ಅವಳಿಗೆ ಏನನ್ನೋ ಹೇಳಲೆಂದು ತಡಕಾಡುತ್ತಿದ್ದ ರಾಮಚಂದ್ರ ಇದೀಗ ಅವಳ ಕಿವಿಯಲ್ಲಿ ತನ್ನ ನೇಮಕಾತಿ ಅದೇಶ ರದ್ದಾದ ವಿಷಯವನ್ನು ಹೇಳಿ ಗಳಗಳನೆ ಅಳುತ್ತಾ ಅವಳನ್ನು ಇನ್ನಷ್ಟು ಜೋರಾಗಿ ಬಿಗಿದಪ್ಪಿಕೊಂಡ.

“ರೀ ಇದೇನ್ರಿ ಮಗೂ ಥರಾ… ಎದ್ದೇಳಿ ಅವರು ಬರೋ ಹೊತ್ತಾಯ್ತು” ಕಲ್ಪನಾ ರಾಮಚಂದ್ರನನ್ನು ನಿಧಾನಕ್ಕೆ ಅಲ್ಲಾಡಿಸಿದಳು.
ರಾಮಚಂದ್ರ ಹೆದರಿಕೊಂಡವನಂತೆ ಎದ್ದು ಕುಳಿತುಕೊಂಡ. ಎಲ್ಲಾ ಹಾಗೇ ಇತ್ತು. ಕನಸುಗಳು ವಾಸ್ತವಕ್ಕೆ ಯಾವತ್ತೂ ವಿರುದ್ಧವಾಗೇ ಬೀಳುತ್ತವೆಂಬ ಸಂಗತಿ ರಾಮಚಂದ್ರನಿಗೆ ಇಂದು ನಿಜವೆನ್ನಿಸಿತ್ತು. ಯಾರಿಗೆ ಗೊತ್ತು? ವಾಸ್ತವದ ಒಳತೋಟಿಯೇ ಕನಸಾಗಲಿಕ್ಕೂ ಸಾಧ್ಯವೆಂಬ ಸಂಶಯ ಇಂದು ಹೊಸದಾಗಿ ಅವನಲ್ಲಿ ಮೂಡಿತ್ತು. ಎರಡೂ ವಿಚಾರಗಳನ್ನು ತಳ್ಳಿಹಾಕಿ ಇದು ಶುದ್ಧ ಭ್ರಮೆಯಷ್ಟೇ; ಬರೀ ಸುಳ್ಳಷ್ಟೇ ಎಂದುಕೊಂಡು ತನ್ನಂತರಂಗವನ್ನು ಗಟ್ಟಿಗೊಳಿಸಿಕೊಂಡ. ಮರುಘಳಿಗೆಯಲ್ಲೇ ಅದೇಕೋ ಏನೋ ‘ವಿಧಾನಸೌಧವೇ ಧಗಧಗನೆಂದು ಹೊತ್ತಿ ಉರಿದರೆ ಹೇಗೆ?’ ಎಂದು ತನ್ನೊಳಗೇ ಅಂದುಕೊಂಡ.

‘ಕಳೆದ ವಾರ ಬೀಳುತ್ತಿದ್ದ ಕನಸುಗಳಿಗೂ ಈಚೆಗೆರಡು ದಿನಗಳಿಂದ ಬೀಳುತ್ತಿರುವ ಕನಸುಗಳಿಗೂ ದೇವರು ಅದೆಂತಹ ನಂಟು ಹೊಸೆದಿರಬೇಕು?’ “ಕಾರ್ಯಕ್ರಮವೊಂದಕ್ಕೆ ಸರ್ಕಾರಿ ಕಾರಿನಲ್ಲಿ ಹೊರಟು, ತುಂಬಿದ ಜನರ ಮಧ್ಯೆ ಪಟ್ಟಣಕ್ಕೆ ಬೇಕಾಗುವ ಮೂಲಸೌಕರ್ಯಗಳ ಕುರಿತು ದೀರ್ಘವಾಗಿ ಮಾತನಾಡಿದ್ದ ಆ ಕನಸಿಗೂ ಈಗ ಬೀಳುತ್ತಿರುವ ಈ ದರಿದ್ರ ಕನಸಿಗೂ ಏನಿರಬೇಕು ನಂಟು? ಅದಾವ ಬಂಧ? ಅದಾವ ಜಿದ್ದು?”ಥೂ ಎಂದೆನ್ನಿಸಿತು ರಾಮಚಂದ್ರನಿಗೆ. “ಹಾಂ ಎದ್ದೆ” ಎಂದವನೇ ಮುಖತೊಳೆಯಲೆಂದು ಬಾತ್‍ರೂಮಿನತ್ತ ಹೊರಟ. ಕಲ್ಪನಾ ಮುಖವನ್ನು ಒರೆಸಿಕೊಳ್ಳಲೆಂದು ಅವನಿಗೆ ಟವಲ್ಲನ್ನು ಕೊಟ್ಟಳು.

ಈ ಮಧ್ಯೆ ಗೆಳೆಯ ನೀಲಕಂಠನಿಗೆ ಫೋನುಮಾಡಿ ‘ನೀನೊಬ್ಬನೇ ಬಂದು ಬಿಡಯ್ಯಾ? ಇಬ್ಬರೂ ಸೇರಿ ಯಾವುದಾದರೂ ಒಂದು ರೆಸ್ಟೋರೆಂಟಿಗೆ ಹೋಗಿ ಕುಡಿದುಕೊಂಡು ಬರೋಣ’ ಎಂದು ಹೇಳಿಬಿಡುವ ಯೋಚನೆ ಬೇರೆ ಮೂಡಿತ್ತು. ಮಧ್ಯೆ ಮತ್ತೊಮ್ಮೆ ಥತ್ತೆರಿಕ್ಕೇ ಎಂದು ತನ್ನನ್ನು ತಾನೇ ಶಪಿಸಿಕೊಂಡ. ಅಷ್ಟರಲ್ಲಿ ಹೊರಗಡೆಗೆ ಕಾರಿನ ಶಬ್ದ ಕೇಳಿಸಿತು. ಅಂದುಕೊಂಡಂತೆ ನೀಲಕಂಠ ಮತ್ತವನ ಪತ್ನಿ ನಿರ್ಮಲ ಬಂದಿದ್ದರು. “ಹ್ಯಾಗಿದೀಯಪ್ಪಾ ಮಹಾನುಭಾವ?” “ನೋಡಯ್ಯಾ ಹೀಗಿದೀನಿ?” “ಹ್ಯಾಗಿದಿಯೋ ರಾಮು?” “ಚನ್ನಾಗಿದೀನಿ ನಿರ್ಮಲಾ, ನೀನು?” ರಾಮಚಂದ್ರ ತನ್ನ ಹೆಂಡತಿಯನ್ನು ಅವರಿಬ್ಬರಿಗೂ ಪರಿಚಯ ಮಾಡಿಕೊಟ್ಟು ನೇರ ಡಿನ್ನರ್‍ಹಾಲಿಗೆ ಅವರನ್ನು ಕರೆದುಕೊಂಡು ಹೊರಟ.

“ನನ್ನ ಹೆಂಡತಿಗೆ ಕುಡಿಯುವ ಅಭ್ಯಾಸವಿದೆ, ಆಗಾಗ ನನ್ನ ಜೊತೆ ಕಂಪನಿ ಕೊಡುತ್ತಿರುತ್ತಾಳೆ” “ಇವಳಿಗೂ ಅಭ್ಯಾಸವಿರಲಿಲ್ಲ; ನಾನೇ ಕಲಿಸಿದೆ” “ಓ ಒಳ್ಳೆಯದಾಯ್ತು, ಅವರಿಬ್ಬರು ಒಂದಷ್ಟು ತೆಗೆದುಕೊಳ್ಳಲಿ; ನಾವು ನಿಧಾನಕ್ಕೆ ಕುಡಿಯೋಣ” ಅಂದುಕೊಂಡಂತೆ ಕಲ್ಪನಾ ಮತ್ತು ನಿರ್ಮಲ ಎರಡೆರಡೇ ಪೆಗ್ಗುಗಳನ್ನು ಕುಡಿದು ತಮ್ಮ ತಮ್ಮ ಸಾಂಸಾರಿಕ ವಿಚಾರಗಳನ್ನು ಹರಟುತ್ತಾ ಕುಳಿತುಕೊಂಡರು. ಕಲ್ಪನಾ ನಿರ್ಮಲಾಳಿಗೆ ಮನೆಯನ್ನು ತೋರಿಸುವುದಾಗಿ ಅಟ್ಟದಿಂದ ಕೆಳಕೋಣೆಗೆ ಕರೆದುಕೊಂಡು ಹೋದಳು. ಬಹಳ ದಿನಗಳ ಮೇಲೆ ಭೆಟ್ಟಿಯಾಗಿದ್ದ ಗೆಳೆಯರಿಬ್ಬರು ಚನ್ನಾಗಿಯೇ ಕುಡಿಯತೊಡಗಿದರು; ಮಧ್ಯದಲ್ಲಿ ಇಬ್ಬರೂ ಬಿದ್ದು ಬಿದ್ದು ನಗುತ್ತಿದ್ದರು. ನೀಲಕಂಠ ಒಂದು ಉಸಿರಿಗೆ ಒಂದೇ ಸಿಗರೇಟು ಸೇದಿದರೆ ರಾಮಚಂದ್ರ ಒಂದೇ ಉಸಿರಿಗೆ ಒಂದಾದ ಮೇಲೊಂದರಂತೆ ಸಿಗರೇಟುಗಳನ್ನು ಸೇದುತ್ತಿದ್ದ. ವಿಚಿತ್ರವೆಂದರೆ ಒಂದು ಸಿಗರೇಟು ಮುಗಿಯುತ್ತಿದ್ದಂತೆಯೇ ಮತ್ತೊಂದು ಸಿಗರೇಟನ್ನು ಅಂಟಿಸುತ್ತಿದ್ದ.

ಬಾಲ್ಯ, ಪ್ರೌಢಶಾಲೆ, ಕಾಲೇಜು, ಓದು, ಸುತ್ತಾಟ, ಹರಟೆ, ಲವ್ವು, ಗಿವ್ವು –ಈ ಎಲ್ಲ ವಿಷಯಗಳೂ ಅವರ ಚರ್ಚೆಗಳಲ್ಲಿ ಬಂದುಹೋದವು. ಅದರಲ್ಲೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಮಚಂದ್ರ ಉತ್ತರವನ್ನು ಬರೆದಿದ್ದ ರೀತಿಯನ್ನು ನೆನೆದುಕೊಂಡು ಇಬ್ಬರೂ ಬಿದ್ದು ಬಿದ್ದು ನಕ್ಕರು. ‘ಕೆಳಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಐದು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಎಂದಿದ್ದ ಪ್ರಶ್ನೆಗೆ ರಾಮಚಂದ್ರ ಅಲ್ಲಿದ್ದ ಏಳೂ ಪ್ರಶ್ನೆಗಳಿಗೆ ಉತ್ತರ ಬರೆದು ಪ್ರತಿಯಾಗಿ ಮೇಲಿರುವ ಏಳು ಉತ್ತರಗಳಲ್ಲಿ ಯಾವುದಾದರೂ ಐದು ಉತ್ತರಗಳಿಗೆ ಮಾತ್ರ ಮೌಲ್ಯಮಾಪನ ಮಾಡಿ’ ಎಂದು ಬರೆದಿದ್ದ. ಈ ನಗುವು ಸಾಗಿದ್ದ ಮಧ್ಯದಲ್ಲೇ ರಾಮಚಂದ್ರನಿಗೆ ಏನೋ ನೆನಪು ಬಂದಂತಾಯಿತು. ಒಂದು ಕ್ಷಣ ಆತಂಕಭರಿತನಾಗಿ ನೀಲಕಂಠನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದ. ಆತಂಕದ ನೋಟವಲ್ಲದೆ ಇನ್ನೇನಿರಲಿಕ್ಕೆ ಸಾಧ್ಯ? ‘ನೇಮಕಾತಿ ಆದೇಶ ರದ್ದಾದ ವಿಷಯವನ್ನು ನೀಲಕಂಠನಿಗೆ ಹೇಳಿಬಿಡಲೇ? ಅಥವಾ ಬೇಡವೇ?’ ರಾಮಚಂದ್ರನಿಗೆ ಆತಂಕದ ಮೇಲೊಂದು ಆತಂಕಗಳು. ರಾಮಚಂದ್ರ ಬಿಟ್ಟೂಬಿಡದೇ ಮತ್ತೆರಡು ಸಿಗರೇಟುಗಳನ್ನು ಸೇದಿದ.

“ಯಾಕೋ? ಏನಾಯ್ತು? ಡಲ್ಲಿದ್ದೀ?” “ಯಾಕೂ ಇಲ್ಲ ಕಣೋ” “ಯಾಕೆ? ನಿರ್ಮಲಾ ನಿನ್ನನ್ನ ಚನ್ನಾಗಿ ಮಾತನಾಡಿಸಲಿಲ್ಲ ಅಂತಾ ಬೇಜಾರಾಯ್ತಾ? ನಿನ್ ಲವ್ವರ್ ಜೊತೆ ಪ್ರಾಯ್‍ವೇಟಾಗಿ ಮಾತಾಡ್ಬೇಕೋ ಹೇಗೊ?” ಹಿಹಿಹಿ ಎಂದು ನಗತೊಡಗಿದ ನೀಲಕಂಠ. “ನಿನಗೆ ಬರೀ ತಮಾಷೆ” ರಾಮಚಂದ್ರ ಆತಂಕದಲ್ಲಿ ಅಂದ. “ಅಯ್ಯೋ ಹೋಗಪ್ಪಾ ಕೆಳಗಿದಾಳೆ; ಏನಾದ್ರೂ ಎರಡ್ ಮಾತ್ ಮಾತಾಡ್ಸು… ಹೋಗು” ನೀಲಕಂಠ ರಾಮಚಂದ್ರನ ಕೈ ಹಿಡಿದು ತಿವಿದ. ಗೆಳೆಯನ ಒತ್ತಾಯಕ್ಕೆ ಮಣಿದ ರಾಮಚಂದ್ರ ಅಟ್ಟದಿಂದ ಕೆಳಗಿಳಿದು ಹೋದ. ನಿರ್ಮಲಾ ತನ್ನ ಹೆಂಡತಿಯೊಟ್ಟಿಗೆ ಕೊಕೊಕ್ಕೋ ಎಂದು ನಗುತ್ತಾ ಮಾತನಾಡುತ್ತಿರುವುದನ್ನು ನೋಡಿದ ರಾಮಚಂದ್ರನಿಗೆ ಕಳವಳವಾಯಿತು; ನಾಚಿದ.
“ಮತೇ ಹ್ಯಾಗಿದೀರಿ?” ಪೆಕರನಂತೆ ಪ್ರಶ್ನಿಸಿದ.

ಅವರಿಬ್ಬರೂ ಹಾಗೇ ನಗುತ್ತಲೇ ಇದ್ದರು; ಹರಟುತ್ತಿದ್ದರು. ಅವರ ಗಮನವೇ ಇವನ ಕಡೆಗೆ ಇದ್ದಂತಿರಲಿಲ್ಲ. ಮುಜುಗರದಲ್ಲೇ “ಮತೇ… ಹ್ಯಾಗಿದೀರಿ?” ಎಂದು ಮತ್ತೆ ಪ್ರಶ್ನಿಸಿದ. ಅಗಲೂ ಅವರು ಹಾಗೇ ಮಾತನಾಡುತ್ತಲೇ ಇದ್ದರು, ನಗುತ್ತಿದ್ದರು; ಇವನತ್ತ ಕಿವಿಗೊಟ್ಟಿರಲಿಲ್ಲ.  “ಲೇ ಕಲ್ಪೀ… ನೀಲಕಂಠನಿಗೆ ಮಿನರಲ್ ವಾಟರ್ ಬೇಕಂತೆ. ಚೂರು ಹೋಗಿ ಅವನಿಗೆ ಮಿನರಲ್ ವಾಟರ್ ಕೊಟ್ಟುಬಾ” ಎಂದು ಜೋರುದನಿಯಲ್ಲೇ ರಾಮಚಂದ್ರ ತನ್ನ ಹೆಂಡತಿಗೆ ಬೇಕೆಂತಲೇ ಅಂದ. “ಆಯ್ತುರೀ” ಎಂದ ಕಲ್ಪನಾ ಅಟ್ಟದ ಕಡೆಗೆ ಓಡಿದಳು. ಈಗ ಮತ್ತೆ ಚೂರು ಧೈರ್ಯ ತಂದುಕೊಂಡ ರಾಮಚಂದ್ರ “ಮತೇ… ಹ್ಯಾಗಿದೀರಿ?” ಎನ್ನುತ್ತಾ ನಿರ್ಮಲಾಳ ಬಳಿ ಸರಿದು ಕೂತ. ನಿರ್ಮಲಾ ಕೊಕೊಕ್ಕೋ ಎಂದು ನಗುತ್ತಲೇ, “ಚನ್ನಾಗಿದೀನಿ ರಾಮು” ಎಂದಳು. ಮತ್ತೆ ಮಾತು ಮುಂದುವರಿಸಿ “ಯಾಕೆ ಗಾಬರಿಯಾಗಿದ್ದೀರಿ?” ಅಂದಳು.

“ಹಾಗೇನಿಲ್ವಲ್ಲ” ಅಂದ. ಇವರು ಬರುವ ಮೊದಲು ತನಗೆ ಬಿದ್ದಿದ್ದ ಆ ಕನಸನ್ನೋ ಯಾ ಭ್ರಾಂತಿಯನ್ನೋ ನೆನಸಿಕೊಂಡ ರಾಮಚಂದ್ರ ಒಂದುಕ್ಷಣ ವಿಲಕ್ಷಣವಾಗಿ ಬೆಚ್ಚಿದ; ತಬ್ಬಿಬ್ಬಾದ. “ಮತ್ತೇನು ವಿಶೇಷ” -ಪ್ರಶ್ನಿಸಿದಳು ನಿರ್ಮಲಾ; ಕೊಕೊಕ್ಕೋ ಎಂದು ನಗುತ್ತಲೇ! “ಏನಿಲ್ಲ” ತಡವರಿಸಿದ ರಾಮಚಂದ್ರ. ರಾಮಚಂದ್ರನಿಗೆ ಮಾತೇ ಹೊರಡಲಿಲ್ಲ. ಮೂಲಕ್ಕೆ ಅವಳೊಟ್ಟಿಗೆ ಏನು ಮಾತನಾಡಬೇಕು ಎಂಬುದೇ ಅವನಿಗೆ ತೋಚಲಿಲ್ಲ. ಏನು ಮಾತನಾಡಿದರೂ ಅದು ಬರೀ ಸುಳ್ಳಾಗಬಹುದೆನ್ನಿಸತೊಡಗಿತ್ತು ಅವನಿಗೆ. ಏನು ಮಾತನಾಡುವುದು ಎಂಬುದೇ ಒಂದು ದೊಡ್ಡ ಸುಳ್ಳಿನಂತೆನಿಸತೊಡಗಿತು ಅವನಿಗೆ. ನಿರ್ಮಲಾ ನಾಚಿಕೆಯಿಲ್ಲದ ಹೆಣ್ಣಿನಂತೆ ಹಾಗೇ ನಗುತ್ತಲೇ ಇದ್ದಳು.

ಮಿನರಲ್ ವಾಟರನ್ನು ನೀಲಕಂಠನ ಮುಂದಿಟ್ಟ ಕಲ್ಪನಾ ತಾನು ತೀರಾ ಆಧುನಿಕಳೆಂಬುದನ್ನು ತೋರಿಸಿಕೊಳ್ಳುವ ಅಳುಕಿನಲ್ಲಿ ಇನ್ನೊಂದಿಷ್ಟು ವಿಸ್ಕಿಯನ್ನು ತನ್ನ ಗ್ಲಾಸಿಗೆ ಹಾಕಿಕೊಂಡು ಗುಟುಕಿಸತೊಡಗಿದಳು. ನೀಲಕಂಠ ಕಂಠಪೂರ್ತಿ ಕುಡಿದಿದ್ದನಾದ್ದರಿಂದ ಪ್ರಜ್ಞೆಯನ್ನು ಕಳೆದುಕೊಂಡಿದ್ದ. ಕಲ್ಪನಾಳ ಕಣ್ಣುಗಳೂ ತೂಗಾಡುತ್ತಿದ್ದವು. ‘ಈ ಮನುಷ್ಯ ತುಂಬಾ ಕುಡಿದಿರಬೇಕು’ -ಎಂದುಕೊಂಡಳಷ್ಟೇ; ಕಣ್ಣು ತಿರುಗಿದ್ದೇ ದೊಪ್ಪನೇ ನೆಲಕ್ಕೆ ಬಿದ್ದುಬಿಟ್ಟಳು. ಮರುಕ್ಷಣ ನೀಲಕಂಠನ ಕಣ್ಣುಗಳು ಅವಳ ದೇಹದ ಮೇಲಿನ ಉಬ್ಬುತಗ್ಗುಗಳ ಮೇಲೆ ಹರಿದಾಡತೊಡಗಿದವು. ನಿಧನಿಧಾನವಾಗಿ ನೀಲಕಂಠ ಅವಳನ್ನು ಬರಸೆಳೆದು ಅಪ್ಪಿ ಅವಳ ತುಟಿಗಳಿಗೆ ತನ್ನ ತುಟಿಗಳನ್ನು ಒತ್ತಿ ಕಣ್ಣು ಮಿಟುಕಿಸಲಾರಂಭಿಸಿದ. ಮತ್ತೆ ಮರುಕ್ಷಣ ನೆಲಕ್ಕೆ ದೊಪ್ಪನೆ ಬಿದ್ದುಬಿಟ್ಟ. ಕುಡಿದ ಅಮನಲ್ಲಿದ್ದ ಕಲ್ಪನಾ ಪ್ರತಿರೋಧಿಸುವ ಶಕ್ತಿಯನ್ನೂ ಹೊಂದಿರಲಿಲ್ಲ. “ಅದೇ ರೀ… ನನ್ ಅಪಾಂಟ್‍ಮೆಂಟ್ ಆರ್ಡರನ್ನು ಗೋರ್ಮೆಂಟು ರದ್ದು ಮಾಡಿಬಿಟ್ತು” ಅಂದ ರಾಮಚಂದ್ರ. “ಅಷ್ಟೇನಾ” ಎಂದ ನಿರ್ಮಲಾ ಯಥಾವತ್ತಾಗಿ ಕೊಕೊಕ್ಕೋ ಎಂದು ನಗುತ್ತಲೇ ಇದ್ದಳು.

‍ಲೇಖಕರು nalike

May 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: