ತೊಟ್ಟುಕೊಳ್ಳದ ಮದುವೆ ಕೋಟು!

ಇದು 28ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಗೆಳೆಯ ಚಂದ್ರಕಾಂತ ವಡ್ಡು ಮದುವೆಯ ಕತೆ,
ನೆನಪಿನ ಸಂದೂಕದಿಂದ ಹೊರಬಂತು
 ಸಂಜೀವ್ ಪ್ರಸಾದ್
ಒಂದು ಮುಂಜಾನೆ ಹುಬ್ಬಳ್ಳಿಯಲ್ಲಿದ್ದ ಗೆಳೆಯನೊಬ್ಬ ತುರುವನೂರು ಮೂಲದ ಚಂದ್ರಮೌಳಿ ಜೊತೆಗೆ ಹೀರೊ ಹೊಂಡಾ ಷೋ ರೂಮ್ ಮೇಲೆ ಇದ್ದ ನನ್ನ ಕಚೇರಿಗೆ ಬಂದ. ಮೌಳಿ ಎಂದರೆ ಮಾತು, ಹರಟೆ, ತಮಾಷೆ; ಬರುಬರುತ್ತಲೇ ತನ್ನ ಡೈಲಾಗುಗಳ ಮೂಲಕ ನನ್ನ ಕಚೇರಿಯ ಗಂಭೀರ ವಾತಾವರಣಕ್ಕೆ ನಗು ಬೆರೆಸಿದ. ಮೌಳಿಯ ನಗೆಚಟಾಕಿಗೆ ಜೊತೆಗಿದ್ದ ಗೆಳೆಯನ ಕುಮ್ಮಕ್ಕು. ಅವರು ಬಂದ ಕಾರಣ ಪ್ರಸ್ತಾಪಿಸುವಷ್ಟರಲ್ಲಿ ನಮ್ಮ ಕಚೇರಿಯ ಹುಡುಗ ಮೂರು ಬಾರಿ ಬಿಸಿಬಿಸಿ ಚಹಾ ಸರಬರಾಜು ಮಾಡಬೇಕಾಯಿತು. ಧಗಧಗ ಬೇಸಿಗೆಯಲ್ಲೂ ಘಮಘಮ ಚಹಾ ಸುರಿದುಕೊಳ್ಳುವುದು ಬಳ್ಳಾರಿ ಜನರ ಜಾಯಮಾನ.
ಕೊನೆಗೆ ಕಾರ್ಡೊಂದನ್ನು ಕೈಗಿತ್ತ ಗೆಳೆಯ ಏನೂ ಮಾತನಾಡದೆ ನನ್ನ ಮುಖ ಗಮನಿಸತೊಡಗಿದ. ಅದು ನೋಡಲು ಹೊಸವರ್ಷದ ಮುದ್ರಿತ ಗ್ರೀಟಿಂಗ್ ಕಾರ್ಡಿನಂತಿತ್ತು. ಓದಿದಾಗ ಗೊತ್ತಾಯ್ತು ಅದು ಅವನ ಮದುವೆ ಆಹ್ವಾನ ಪತ್ರಿಕೆ ಎಂದು. ಆ ಆಹ್ವಾನ ಪತ್ರಿಕೆ ನೋಡಿ ನಾನು ಪುಳಕಿತಗೊಂಡಿದ್ದೆ. ಅದು ಅಂಚೆ ಕಾರ್ಡು ಸೈಜಿನ ಫೋಟೊ. ಮದುವೆಯಾಗಲಿರುವ ಸಂಗಾತಿಗಳು ಸುಂದರ ಹಸಿರುವನದಲ್ಲಿ ಕಣ್ಣಲ್ಲೇ ಮಾತನಾಡುತ್ತಾ ಕುಳಿತಿದ್ದಾರೆ. ಆ ದೃಶ್ಯದ ಹಿನ್ನೆಲೆಯಲ್ಲಿ ಅವರಿಬ್ಬರು ನಮ್ಮನ್ನು ಮದುವೆ ಸಂದರ್ಭಕ್ಕೆ ಸಾಕ್ಷಿಯಾಗಲು ಆಹ್ವಾನಿಸುವ ಸರಳ ಬರಹ.
ಅದು ಆಪ್ತ ಗೆಳೆಯನ ವಿಶಿಷ್ಟ ಮದುವೆ. ಹೇಗೆಂದರೆ ಹಾಗೆ ಕೈಬೀಸಿಕೊಂಡು ಹೋದರೆ ಆದೀತೇ! ಸರಿ, ನಾನು ಮದುವೆ ತಯಾರಿ ಶುರು ಮಾಡಿಕೊಂಡೆ. ಒಂದು ಒಳ್ಳೆಯ ಜೊತೆ ಬಟ್ಟೆಯನ್ನು ಕೊಳ್ಳಲು ಯೋಚನೆ ಬಂದು, ಅದು ಒಂದು ಕೋಟು ಕೊಳ್ಳುವವರೆಗೆ ತಲುಪಿತು. ಹಳೆ ಕಚೇರಿ ಓಣಿಯಲ್ಲಿ ಕೋಟು ಬಟ್ಟೆಯನ್ನು ತೂಕದ ಲೆಕ್ಕದಲ್ಲಿ ಮಾರುತ್ತಾರೆಂಬ ಮಾಹಿತಿ ಕಲೆ ಹಾಕಿದೆ. ಮೂರು ಪೀಸ್ ಕೋಟು ಬಟ್ಟೆ ನನ್ನ ನಿರೀಕ್ಷೆಗಿಂತ ಕಡಿಮೆ ದರದಲ್ಲೇ ಸಿಕ್ಕಿತು. ಈಗ ಕೋಟು ಹೊಲೆಯುವ ಒಳ್ಳೆಯ ಟೈಲರ್ ಹುಡುಕುವ ಸರದಿ. ನಾಲ್ಕಾರು ಟೈಲರ್ ಅಂಗಡಿಗಳನ್ನು ತಿರುಗಾಡಿ ಒಬ್ಬನನ್ನು ಆಯ್ಕೆ ಮಾಡಿದೆ.
ಕೋಟು ಹೊಲೆಸುವ ಯೋಜನೆ ಕಾರ್ಯಗತಗೊಳಿಸಲು ನನ್ನ ಸಕಲ ಸಂಪರ್ಕ, ಚಾಕಚಕ್ಯತೆ, ಸಾಮಾನ್ಯ ಜ್ಞಾನ ಬಳಸಬೇಕಾಯಿತು. ನನ್ನ ಎಂಜಿನಿಯರಿಂಗ್ ವೃತ್ತಿಯ ಲಕ್ಷಾಂತರ ರೂಪಾಯಿ ಯೋಜನೆಗಳೂ ಇಷ್ಟೊಂದು ಮುತುವರ್ಜಿ, ಲಕ್ಷ್ಯ, ಸಮಯ ಅಪೇಕ್ಷಿಸಿರಲಿಲ್ಲ! ಮೂರು ಬಾರಿ ಟೈಲರ್ ಅಂಗಡಿಗೆ ತಿರುಗಿ, ಟ್ರೈಯಲ್ ಕೊಟ್ಟು ಬಂದೆ. ಆ ಟೈಲರ್ ವರ್ತನೆ ಕೂಡ ಇದೇ ಮೊದಲ ಬಾರಿಗೆ ಕೋಟು ಹೊಲೆಯುತ್ತಿದ್ದಾನೇನೋ ಎಂಬ ಅನುಮಾನ ಹುಟ್ಟಿಸುವಂತಿತ್ತು. ನಾನೇನೋ ಮೊದಲ ಬಾರಿಗೆ ಕೋಟು ಹೊಲೆಸುವ ಉಮೇದಿಗೆ ಬಿದ್ದಿದ್ದೇನೆ. ಆತನದೂ ಮೊದಲ ಅನುಭವವಾಗಿ ಕೆಡೆಸಿಟ್ಟರೆ ಗತಿಯೇನು?
ಅಂತೂ ಕೊನೆಗೂ ನನ್ನ ಯೋಜನೆ ಯಶಸ್ವಿಯಾಗಿ ಕೋಟು ಮನೆಗೆ ಬಂತು. ಹುಬ್ಬಳ್ಳಿಗೆ ಹೊರಡುವ ಮುನ್ನ ಬೆಂಗಳೂರು ಡ್ರೈ ಕ್ಲೀನರ್ಸ್ ಅಂಗಡಿಯಲ್ಲಿ ಮತ್ತೊಮ್ಮೆ ಇಸ್ತ್ರಿ ಮಾಡಿಸಿದೆ. ಆ ಡ್ರೈ ಕ್ಲೀನ್ ಅಂಗಡಿಯಲ್ಲಿದ್ದ ಸುಂದರಿಯ ಮುಖ ಗಮನಿಸದಷ್ಟು ನಾನು ನನ್ನ ಹೊಸ ಕೋಟಿನ ಮೇಲೆ ಕಣ್ಣು ಕೇಂದ್ರೀಕರಿಸಿದ್ದೆ. ಆಕೆ ಕೋಟು ಪ್ಯಾಕ್ ಮಾಡುವಾಗ ಹೌದೋ ಅಲ್ಲೋ ಅನ್ನುವಷ್ಟು ಆಕೆಯ ತುಟಿಯ ಲಿಪ್‍ಸ್ಟಿಕ್ ಬಣ್ಣ ಗೋಚರಿಸಿತಷ್ಟೇ. ಮತ್ತೆ ಮನೆಯಲ್ಲಿ ಹುಬ್ಬಳ್ಳಿಗೆ ಹೊರಡುವ ತಾಲೀಮು.
ಕೋಟು ತೊಟ್ಟ ಮೇಲೆ ಕುತ್ತಿಗೆಗೆ ಟೈ ಕಟ್ಟಬೇಕಲ್ಲ! ಅದನ್ನೂ ರಿಹರ್ಸಲ್ ಮಾಡಿದೆ. ಆಗ ರೆಡಿ ಟೈ ಇರಲಿಲ್ಲ. ಹಾಗಾಗಿ ಮದುವೆ ಸಂದರ್ಭದಲ್ಲಿ ಟೈ ಕಟ್ಟುವವರಿಗೆ ಬಹಳ ಬೇಡಿಕೆ. ಟೈ ಕಟ್ಟುವ ತಂತ್ರ ಬಲ್ಲವರನ್ನು ಹುಡುಕಿ ಕರೆತರುತ್ತಿದ್ದರು. ಅಂತೆಯೇ ಮದುಮಗನಿಗೂ ಟೈ ಕಟ್ಟುವಷ್ಟು ಅಭ್ಯಾಸ ಮಾಡಿಕೊಂಡೆ. ಮದುವೆಯ ದಿನ ಬೆಳಗ್ಗೆಯೇ ಹುಬ್ಬಳ್ಳಿ ಸೇರಿದೆ. ಅದು ಮೊಬೈಲುಪೂರ್ವ ಯುಗ. ಗೆಳೆಯನ ಮನೆಗೆ ಲ್ಯಾಂಡ್ ಲೈನೂ ಇರಲಿಲ್ಲ. ಸುಮಾರು 11 ಗಂಟೆಗೆ ಹಾಗೇ ಅಡ್ಡಾಡುತ್ತಾ ಕೊಪ್ಪಿಕರ್ ರಸ್ತೆಯಲ್ಲಿ ಗೆಳೆಯ ಕೆಲಸ ಮಾಡುತ್ತಿದ್ದ ಸಂಯುಕ್ತ ಕರ್ನಾಟಕ ಕಚೇರಿ ತಲುಪಿದೆ. ಅಲ್ಲಿ ಯಾರನ್ನಾದರೂ ನಮ್ಮ ಮದ್ಲಿಂಗನ ಬಗ್ಗೆ ವಿಚಾರಿಸಲು ಕಚೇರಿಯ ಗೇಟಿನ ಬಳಿ ನಿಂತಿದ್ದೆ. ಬಳ್ಳಾರಿಯವರೇ ಆದ ರವಿ ಬೆಳಗೆರೆ ಸಿಗಬೇಕೇ?
ಗೇಟಿನಿಂದ ಹೊರಗೆ ಬಂದ ಅವರು ನನ್ನನ್ನು ನೋಡಿದೊಡನೆಯೇ ಮಾತನಾಡಿಸಿ, ನನ್ನ ತಂದೆತಾಯಿಯವರನ್ನು ವಿಚಾರಿಸಿದರು. ಅದೇ ಹಳೇ ಶೈಲಿಯಲ್ಲಿ ಗಡ್ಡ ಕೆರೆದುಕೊಳ್ಳುತ್ತಾ ಬಳ್ಳಾರಿಯ ಸಮಾಚಾರ ತಿಳಿದುಕೊಂಡಂರು. ‘ಓಹ್ ಇವತ್ತು ನಿಮ್ಮ ಗೆಳೆಯನ ಮದುವೆಯಲ್ಲ..!’ ಎಂದು ನಗುತ್ತಾ ಮುಂದೆ ಹೋದರು. ನಂತರ ಇನ್ನೂ ಕುರುಚುಲು ಗಡ್ಡ ಬೋಳಿಸದ, ಸಹಜ ದಿನನಿತ್ಯದ ಬಟ್ಟೆ ಧರಿಸಿದ, ರೆನಾಲ್ಡ್ ಪೆನ್ನನ್ನು ಕೈಯಲ್ಲಿ ಹಿಡಿದುಕೊಂಡ ನಮ್ಮ ಮದ್ಲಿಂಗ ತನ್ನದೇ ಆದ ಗಾಂಭೀರ್ಯದೊಂದಿಗೆ ಪ್ರತ್ಯಕ್ಷನಾದ. “ಏನು ಮದುವೆಗೆ ಇನ್ನೂ ತಯಾರಾಗಿಲ್ಲ?’’ ಎಂದೆ. ಅದಕ್ಕೆ ಆತ, ‘‘ಮದುವೆ ಇರುವುದು ಸಂಜೆಗೆ’’ ಎನ್ನಬೇಕೇ? ಅವನ ದನಿಯಲ್ಲಿ, ‘ನೀನು ಇಷ್ಟೊತ್ತಿಗೇ ಏಕೆ ಬಂದೆ’ ಎಂಬ ಆಕ್ಷೇಪಣೆ ಇದ್ದಂತಿತ್ತು. ನಾನು ಸುಸ್ತು. “ಈಗ ಮುಖ್ಯವಾದ ಲೇಖನ ಬರೆದು ಮುಗಿಸಬೇಕು. 3 ಗಂಟೆಗೆ ನಾನು ಬಿಡುವಾಗುತ್ತೇನೆ, ನಂತರ ಸಿಗೋಣ’’ ಎಂದು ಮರೆಯಾದ.
ಮದುವೆ ಹಾಲ್‍ನಲ್ಲಿ ಸಡಗರದಿಂದ ಓಡಾಡಬೇಕಾಗುತ್ತದೆ, ಏನಾದರೂ ನೆರವಾಗಬೇಕಾಗುತ್ತದೆ ಎಂದು ಭಾವಿಸಿದವನು ನಾನು. ಇಲ್ಲಿ ಪಾರ್ಟಿ ಉಲ್ಟಾ ಹೊಡೆದ. ಸರಿ ಎಂದು ಸಂಜೆ ಹೋಟೆಲ್ ಆವರಣ ತಲುಪಿದೆ. ಅದೇ ತಾನೇ ಬರೆದು ಮುಗಿಸಿ ತನ್ನ ರೆನಾಲ್ಡ್ ಪೆನ್‍ನ್ನು ಜೇಬಿನಲ್ಲಿ ಸಿಕ್ಕಿಸಿಕೊಳ್ಳುತ್ತಾ ಹಾಲಿಗೆ ಎಂಟ್ರಿ ಕೊಟ್ಟ ಮದುಮಗ. ನೆರೆದವರನ್ನು ಸ್ವಲ್ಪ ಮಾತನಾಡಿಸಿ ಹಾಗೆಯೇ ಅದೇ ಟಿಪಿಕಲ್ ಮಾಸಲು ಕಾಡ್ರಾಯ್ ಪ್ಯಾಂಟು, ಪೂರ್ಣ ತೋಳಿನ ನೀಲಿ ಅಂಗಿಯಲ್ಲಿಯೇ ವೇದಿಕೆ ಏರಿ, ಭಾವಿ ಪತ್ನಿಯ ಪಕ್ಕದಲ್ಲಿ ಕುಳಿತುಕೊಂಡ. ಆದರೆ ಗಡ್ಡ ತೆಗೆದು, ಗರಿಗರಿಯಾದ ಬಟ್ಟೆ ಹಾಕಿಕೊಂಡಿದ್ದ ನಮ್ಮ ಹ್ಯಾಂಡ್ಸಮ್ ರವಿ ಮೈಕ್ ಹಿಡಿದು ಕಾರ್ಯಕ್ರಮದ ನಿರೂಪಣೆಗೆ ನಿಂತರು. ಮುಖ್ಯ ಅತಿಥಿಗಳಾದ ಚೆನ್ನವೀರ ಕಣವಿ, ಶಾಂತಾದೇವಿ ಕಣವಿ ಅವರು ವೇದಿಕೆಯಲ್ಲಿದ್ದರು.
ನಾನು ಗೆಳೆಯನ ತಾಯಿಯ ಪಕ್ಕದಲ್ಲೇ ಕುಳಿತಿದ್ದೆ. ಆ ತಾಯಿಯ ಮುಖದಲ್ಲಿ ಸಂತಸ. ಮದುಮಗ ತಾಳಿ ಸರವನ್ನು ಹೂವಿನ ಹಾರದ ರೀತಿಯಲ್ಲಿ ವಧುವಿಗೆ ಹಾಕಿದ. ಅಷ್ಟಕ್ಕೇ ಮದುವೆಯ ಸಂಪ್ರದಾಯ ಮುಗಿಯಿತು. ಎಲ್ಲರಿಗೂ ಉಪ್ಪಿಟ್ಟು ಕೇಸರಿಬಾತ್, ಚಹಾ ಬಂತು. ಮದುವೆಗೆ ತುಸು ಹೊತ್ತು ಮುಂಚೆ ಹಾಕಿಕೊಳ್ಳಬೇಕೆಂದು ಒಂದು ಕವರಿನಲ್ಲಿ ಬಹು ಜಾಗರೂಕತೆಯಿಂದ ಕೋಟನ್ನು ತಂದಿದ್ದೆ. ಆದರೆ ಮದುವೆ ನೋಡುನೋಡುತ್ತಿದ್ದಂತೆ ಅಂತಿಮ ಘಟ್ಟ ತಲುಪಿ ಬಿಟ್ಟಿತು. ಎಲ್ಲವನ್ನೂ ಗಮನಿಸುತ್ತಾ ಸರಳತೆ ಎದುರು ಮುಜುಗರದಿಂದ ತಲೆತಗ್ಗಿಸಿ, ಮುದುಡಿ ಕುಳಿತಿತ್ತು ನನ್ನ ಅದ್ದೂರಿ ಕೋಟು.
ನನ್ನ ಕೋಟಿನಂತೆಯೇ ಕೆಲವರ ಪ್ರೆಸೆಂಟೇಷನ್‍ಗಳು ಹಾಗೆಯೇ ಬಂದವರ ಕೈಯಲ್ಲೇ ಉಳಿದವು. ಹಣ ಮಡಿಚಿಟ್ಟಿದ್ದ ಕವರುಗಳು ಅವರವರ ಕಿಸೆಯಲ್ಲಿಯೇ ಒರಗಿಕೊಂಡವು. ಉಡುಗೊರೆ ಇಲ್ಲದ, ವಿಶ್ ಮಾಡುವವರ ಮೈಲುದ್ದ ಸಾಲಿಲ್ಲದ, ಊಟಕ್ಕೆ ಕುಳಿತವರ ಹಿಂದೆ ಸರದಿಗಾಗಿ ಮುಗಿಬೀಳದ, ಓಲಗದ ಸದ್ದಿಲ್ಲದ, ಅಕ್ಷತೆಯೂ ಇರದ… ಇದೂ ಒಂದು ಮದುವೆಯೇ ಎಂದು ನನ್ನ ಕೋಟು ತನ್ನೊಳಗೆ ವ್ಯಥೆಪಟ್ಟಿದ್ದು ದಿಟ.
ನನಗೆ ಮತ್ತದೇ ಚಿಂತೆ; ಕಷ್ಟಪಟ್ಟು, ಇಷ್ಟಪಟ್ಟು, ಅಷ್ಟು ದೂರದಿಂದ ಕೋಟನ್ನು ಯಾವಾಗ ಧರಿಸಲಿ? ಹೇಗಾದರೂ ಒಂದು ಸಂದರ್ಭ ಸಾಧಿಸಿ ಚೀಲದೊಳಗಿನ ಕೋಟನ್ನು ಧರಿಸಿಯೇ ತೀರಬೇಕೆಂಬ ಒಳಗಿನ ಪ್ರಚೋದನೆಯನ್ನು ಹಿಮ್ಮೆಟ್ಟಿಸುವುದು ಅಷ್ಟು ಸುಲಭವಾಗಿರಲಿಲ್ಲ. I should not be Odd ಎಂಬ ಸಂಯಮ ಸುಮ್ಮನಿರಿಸುತ್ತಿತ್ತು. ಅದ್ಹೇಗೋ ನನ್ನ ಚಡಪಡಿಕೆಯ ವಾಸನೆ ಹಿಡಿದ ಮೌಳಿ, “ಹಾಕ್ರಿ ಸಾರ್ ಏನಾಯಿತು?’’ ಎಂದ. ನಾನು ನಕ್ಕು ಸುಮ್ಮನಾದೆ.
ದಂಪತಿ ವೇದಿಕೆಯಿಂದ ಕೆಳಗೆ ಬಂದು ಎಲ್ಲರನ್ನೂ ವಿಚಾರಿಸುತ್ತಾ, ಪರಿಚಯ ಮಾಡಿಕೊಳ್ಳುತ್ತಾ ಹೋದರು. ವರನ ತಾಯಿ, “ಆತನಿಗೆ ಹೇಗೆ ಇಷ್ಟನೋ ಹಂಗೇ ಮದುವೆ ಆಯ್ತಪ್ಪಾ…’’ ಎನ್ನುತ್ತಾ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಘಟನೆ ಇನ್ನೂ ನೆನಪಿದೆ. ಗೆಳೆಯ ಯೋಜಿಸಿದ್ದ ಆಡಂಬರವಿಲ್ಲದ, ಆದರ್ಶದ ಮದುವೆ ಅಲ್ಲಿ ನೆರೆದಿದ್ದ ಬಹುಪಾಲು ಜನರಿಗೆ ಹೊಸ ಅನುಭವ. ಇಂತಹ ಅಪರೂಪದ ಅನುಭವಕ್ಕೆ ಮತ್ತು ಬೆರೆಸಲು ನಮ್ಮ ಗೆಳೆಯರ ದಂಡು ತುದಿಗಾಲಲ್ಲಿ ನಿಂತಿತ್ತು! ಕೋಟು ತೆಗೆಯುವುದು ಯಾವಾಗ ಎಂಬುದು ನನ್ನ ಚಿಂತೆಯಾದರೆ, ಪಾರ್ಟಿ ಎಲ್ಲಿ ಎಂಬ ತವಕ ಉಳಿದವರದು.
ಚೇಷ್ಟೆ ಸ್ವಭಾವದ ಮೌಳಿ ನನ್ನತ್ತ ತೋರಿಸುತ್ತಾ, ‘ಅದೆಲ್ಲಾ ಸಂಜೀವ್‍ಗೆ ಒಪ್ಪಿಸಿದ್ದಾರೆ’ ಎಂದು ಘೋಷಿಸಿಬಿಟ್ಟ. ಅಂದು ನಾನು ಪಾರ್ಟಿ ಬಿಲ್ಲು ಕೊಟ್ಟ ಖುಷಿ ಇಂದಿನವರೆಗೂ ನಾನು ಕೊಟ್ಟ ಯಾವ ಪಾರ್ಟಿಗಳಿಂದಲೂ ಸಿಕ್ಕಿಲ್ಲ. ಅಂತೆಯೇ ನನ್ನ ಕೋಟನ್ನು ಸಂತೈಸಲಾಗದ ಅಸಹಾಯಕತೆ ಕಾಡುತ್ತದೆ.

‍ಲೇಖಕರು nalike

May 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: